December 4, 2011

ಟೇಪ್ ರೆಕಾರ್ಡರ್


ತುಂಬಾ ದಿನಗಳಾಯ್ತು ಬರೀದೆ . ಹಳೆಯದನ್ನೆಲ್ಲ ಒಮ್ಮೆ ಓದುವಾಗ  ಒಮ್ಮೆಲೇ ,  ರೇಡಿಯೋ , ಟಿವಿ ಬಗ್ಗೆ ಬರೆದಿದ್ದೆ . ಮತ್ತೆ ಟೇಪ್ ರೆಕಾರ್ಡರ್  ಬಿಟ್ಟೇ ಬಿಟ್ನಲ್ಲ   ಅಂತ ನೆನಪಾಯ್ತು . 
ರೇಡಿಯೋ  ಮತ್ತು ಟಿವಿ ಗಳ ನಡುವಿನ  ಕಾಲವನ್ನು ಆಳಿದ್ದು  ಈ ಟೇಪ್ ರೆಕಾರ್ಡರ್ ಎಂಬ  ವಸ್ತು ! ನಾವು ಮಾತಾಡಿದ್ದನ್ನು ಮತ್ತೆ ಅದರಿಂದ ಕೇಳಬಹುದು ಎಂಬ ಕಲ್ಪನೆಯೇ  ಒಂಥರಾ " ಥ್ರಿಲ್ಲಿಂಗ್ !!" 
ಮೊದಲ ಬಾರಿಗೆ  ನಾನೂ ಟೇಪ್ ರೆಕಾರ್ಡರ್  ನೋಡಿದ್ದು ಬಹುಶಃ ನಾನೂ  ೭ ನೆ ಕ್ಲಾಸ್ ನಲ್ಲಿದ್ದಾಗ . ಅಪ್ಪಾಜಿಯ ಸಹೋದ್ಯೋಗಿಯೊಬ್ಬರ ಮನೆಗೆ  ಹೊಸದಾಗಿ ಬಂದ  ಆಕರ್ಷಣೆ ಅದು .  " ನ್ಯಾಷನಲ್ "   ಎಂಬ ಬ್ರಾಂಡ್ ಎಂದು ನೆನಪು .  ಮಲಗಿಸಿ ಇಡಬೇಕಾಗುತ್ತಿದ್ದ ಮಾಡೆಲ್ .  
"ರಾಮಣ್ಣ ನ ಮನೇಲಿ ಎಂತದೋ  ಹೊಸ ನಮನಿ ರೇಡಿಯೋನಡ , ನಮಗೆ ಬೇಕಾದ ಹಾಡಷ್ಟೇ ಬೇಕಾದರೂ ಹಾಕಿ ಕೇಳಲೇ ಬತ್ತಡ "   ಎಂಬ ಸುದ್ದಿ ಎಲ್ಲಾ ಕಡೆಗೆ. 
ಚೌತಿ ಹಬ್ಬದ ಹೊತ್ತಿಗೆ ಅವರ ಮನೆಗೆ ಗಣಪತಿ ನೋಡಲು ಹೋದವರೆಲ್ಲ  ಗಣಪತಿಯ ಕಡೆ  ಲಕ್ಷ್ಯ ಕೊಡದೆ .. ಈ ಟೇಪ್ ರೆಕಾರ್ಡರ್ ಅನ್ನು ಅರಸುತ್ತಿದ್ದರು . ಅದು ನೋಡಲು ಹೇಗಿರುತ್ತದೆ ಎಂದು ಗೊತ್ತಿರದ ಮಕ್ಕಳಂತೂ   ಗೋಡೆಯ ಮೇಲೆ,  ಗಣಪತಿಯ ಪೀಠದಲ್ಲಿ  ಹೀಗೆ ತಮಗೆ  ತಿಳಿದಂತೆ ಅರಸುತ್ತಿದ್ದರು . 
ನಾವು ಅಪ್ಪಾಜಿಯ ಜೊತೆಗೆ ಹೋಗಿದ್ದರಿಂದ   ರಾಮಣ್ಣ   ನಮ್ಮನ್ನು ಒಳಗೆ ಕರೆದು ಪ್ರಸಾದ  ಕೊಟ್ಟರು. ಹಾಗೇ, ಹೊಸ ಟೇಪ್ ರೆಕಾರ್ಡರ್ ಅನ್ನು ತೋರಿಸಿದರು .  ಸುಮಾರು ೧೦ ಇಂಚು ಉದ್ದ, ೬ ಇಂಚು ಅಗಲದ ಬಾಕ್ಸ್ ಗೆ ೫-೬ ಚೌಕ ಬಟ್ಟನ್ ಗಳು . ಒತ್ತಿದರೆ ಹಾಡುವ , ಒತ್ತಿದರೆ ನಿಲ್ಲುವ , ಹಿಂದೊಡಿಸಿ , ಮುಂದೊಡಿಸಿ ಕೇಳಬಹುದಾದ ಕಲ್ಪನೆಯೇ ನಮಗೆ  ಪುಳಕ ತರುತ್ತಿತ್ತು . ಮರುದಿನ ಶಾಲೆಯಲ್ಲಿ  ಈ ಹೊಸ ವಸ್ತುವನ್ನು ನೋಡಿದ ಬಗ್ಗೆ ಹೆಮ್ಮೆಯಿಂದ  ಹೇಳಿಕೊಳ್ಳುತ್ತಿರುವಾಗ ,  ರೇಡಿಯೋದ ಬಗ್ಗೆ ತಕ್ಕ ಮಟ್ಟಿನ ಜ್ಞಾನವಿದ್ದವನೊಬ್ಬ   ಈ ಟೇಪ್ ರೆಕಾರ್ಡರ್ ನಲ್ಲಿ ಯಾವ ಯಾವ  ಸ್ಟೇಶನ್ ಬರುತ್ತದೆ ? ಸಿಲೋನ್ ಮತ್ತು ವಿವಿಧ ಭಾರತಿ ಸರಿಯಾಗಿ ಕೇಳುತ್ತದಾ? ಎಂದು ಪ್ರಶ್ನಿಸುವುದೇ?  ಜಂಭ ಕೊಚ್ಚಿಕೊಳ್ಳುತ್ತಿದ್ದ ನಾವು ತಬ್ಬಿಬ್ಬಾದೆವು. ನೋಡಿದ ಉತ್ಸಾಹದಲ್ಲಿ  ಇಂಥಾ ಮುಖ್ಯವಾದ ವಿಷಯವನ್ನು ಕೇಳಲು ಮರೆತೆವಲ್ಲ ಅಂದು ಹಳ ಹಳಿಸಿದೆವು ! ಹಾಗಿದ್ದರೂ , ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ  " ಅಯ್ಯೋ ಅದೆಲ್ಲ  ಕೇಳೋ ಹೊತ್ತಿಗೆ ಅವರ ಮನೆಗೆ ಯಾರೋ ಬಂದರು . ಇನ್ನೊಂದು ದಿನ  ಪುರಸೋತ್ತಲ್ಲಿ  ಹೋಗಿ  ಎಲ್ಲಾ ತಿಳಿದು ಬರುತ್ತೇವೆ  " ಎಂದು ಸಮಜ್ಹಾಯಿಸಿದ್ದೂ ಆಯಿತು .

ಆ ದಿನ ಮನೆಗೆ ಬಂದ ಮೇಲೆ , ಅಪ್ಪಾಜಿಯ ಮುಂದೆ ಈ ಪ್ರಶ್ನೆ ಇಟ್ಟೆವು . ಅವರು ನಕ್ಕು  ನಮಗೆ , ಟೇಪ್ ರೆಕಾರ್ಡರ್  ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿದರು.
ಏನು ಕೇಳ ಬೇಕಾಗಿದೆಯೋ ಅದನ್ನು ಮೊದಲು ' ಕ್ಯಾಸೆಟ್ 'ನಲ್ಲಿ ರೆಕಾರ್ಡ್ ಮಾಡಿ  ಇಟ್ಟಿರಬೇಕು .ಆ ಕ್ಯಾಸೆಟ್ ಹಾಕಿದಾಗ  ಅದರಲ್ಲೇನು ಟೇಪ್ ಮಾಡಲಾಗಿದೆಯೋ ಅದು ಮಾತ್ರ  ಕೇಳುತ್ತದೆ  ಎಂದು ಅರ್ಥವಾಯಿತು . ನಾವು ಮಾತಾಡಿದ್ದನ್ನು ಹಾಗೆ ರೆಕಾರ್ಡ್ ಮಾಡಿ ಕೇಳಬಹುದು ಎಂಬ ಕಲ್ಪನೆ ಪುಳಕ ತಂದರೆ , ಬರೀ ಅದಷ್ಟನ್ನೇ  ಕೇಳಬೇಕಲ್ಲ , ರೇಡಿಯೋದ ಹಾಗೆ ವೈವಿಧ್ಯವಿಲ್ಲ ಎಂಬ  ನಿರಾಸೆಯೂ ಆಗುತ್ತಿತ್ತು. 

ಹೀಗಿದ್ದರೂ , ಟೇಪ್ ರೆಕಾರ್ಡರ್  ತುಂಬಾ ಕುತೂಹಲದ ವಸ್ತುವಾಗಿತ್ತು. ಆ ವರ್ಷ ನಮ್ಮ  ಹೈಸ್ಕೂಲ್ ನ  ವಾರ್ಷಿಕೋತ್ಸವದಲ್ಲಿ , ಡ್ಯಾನ್ಸ್  ಮಾಡುವವರಿಗೆ  ಹಿನ್ನೆಲೆ ಗಾಯಕರು ಬೇಕಾಗಲಿಲ್ಲ. ರಾಮಣ್ಣ ನ ಹೊಸಾ ಟೇಪ್ ರೆಕಾರ್ಡರ್ ನಲ್ಲಿ ಮೊದಲೇ  ಹಾಡುಗಳನ್ನು  ಟೇಪಿಸಿಕೊಂಡು  ಆ ದಿನ  ಮೈಕ್ ಮುಂದೆ  ಟೇಪ್ ರೆಕಾರ್ಡರ್ ಆನ್ ಮಾಡಿದಾಗ  ಡ್ಯಾನ್ಸ್ ಮಾಡುವವರಿಗೂ ಏನೋ ಸಂಭ್ರಮ !!!! 

ಮರುವರ್ಷ ನಮ್ಮನೇಲೂ ಟೇಪ್ ರೆಕಾರ್ಡರ್ ಬಂದಾಗ ನಮ್ಮನ್ನು ಹಿಡಿಯುವವರೇ ಇರಲಿಲ್ಲ ! ಅಲ್ಲದೆ , ನಮ್ಮ ಮನೆಯಲ್ಲಿ ಇನ್ನೂ ಹೊಸಾ ಮಾಡೆಲ್ ಬಂದಿತ್ತು . ಟ್ರಾನ್ಸಿಸ್ಟರ್ ರೇಡಿಯೋದಂತೆಯೇ ಕಾಣುವ " ಪ್ಯಾನಸೋನಿಕ್ "   ಸುಂದರವಾಗಿ ಅಪ್ಪಾಜಿಯ ಟೇಬಲ್ ಮೇಲೆ ಕುಳಿತಿತ್ತು . ನಾವು ಮಕ್ಕಳಿಗೆ ಅದನ್ನು ಮುಟ್ಟುವ ಸ್ವಾತಂತ್ರ್ಯವಿರಲಿಲ್ಲ . ಮನೆಯಲ್ಲಿ ಇದ್ದಿದ್ದು  ೨-೩ ಕ್ಯಾಸೆಟ್  ಮಾತ್ರ. ಭಜನ್  ಮತ್ತು ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದ್ದು. ನಮಗೋ ನಮ್ಮ ಮೆಚ್ಚಿನ ಹಾಡುಗಳನ್ನು ಬೇಕು ಬೇಕಾದಾಗೆಲ್ಲ  ಕೇಳುವ  ಆಸೆಯಿತ್ತು ಆದರೆ ಅಪ್ಪಾಜಿಯ ಮುಂದೆ ಯಾರೂ ಬಾಯಿ ಬಿಡುತ್ತಿರಲಿಲ್ಲ. ಈಗಿನಂತೆ ಗೂಡಂಗಡಿಗಳಲ್ಲೂ   ಕ್ಯಾಸೆಟ್ , ಸಿಡಿ  ಸಿಗುವ ಕಾಲವಾಗಿರಲಿಲ್ಲ . ಸಾಗರ ಪೇಟೆಗೆಲ್ಲ   ಇದ್ದಿದ್ದು ೨-೩ ಕ್ಯಾಸೆಟ್ ಅಂಗಡಿಗಳು ಮಾತ್ರ. ಅವರಲ್ಲಿಯೂ  ರೆಡಿ ಕ್ಯಾಸೆಟ್ ಗಳು ಕಮ್ಮಿ. ನಾವು ಆರಿಸಿ ಕೊಟ್ಟ ಹಾಡುಗಳನ್ನು ಬರೆದುಕೊಂಡು , ನಂತರ ೧೦-೨೦ ದಿನಗಳ  ನಂತರ , ಅಷ್ಟೆ ಸಲ ನೆನಪು ಮಾಡಿದ ಮೇಲೆ ಅಂತೂ  ಒಂದು ಕ್ಯಾಸೆಟ್  ಸಿಗುತ್ತಿತ್ತು . ಸೋನಿ  ಕ್ಯಾಸೆಟ್ ಆದರೆ  ಸುಮಾರು ೪೦ -೪೫ ರೂಪಾಯಿ ಆಗುತ್ತಿತ್ತು .  ಅಂದಿನ ದಿನಗಳ ಮಟ್ಟಿಗೆ ಅದು ಸಾಕಷ್ಟು ದೊಡ್ಡ ಮೊತ್ತವೇ . ಅಂದರೂ ನಾವು ಏನೆಲ್ಲಾ ಸರ್ಕಸ್ ಮಾಡಿ ಅಪ್ಪಜಿಯಿಂದ ಒಂದು ಹಳೆಯ ಕ್ಯಾಸೆಟ್ ಅನ್ನು ನಮಗಾಗಿ ಪಡೆದೆವು. 

ಒಂದು ಸಲ  ಏನಾಯ್ತು ಅಂದ್ರೆ , ಅಪ್ಪಾಜಿ -ಅಮ್ಮ ಇಬ್ಬರೂ ಯಾವ್ದೋ  ಕಾರ್ಯಕ್ರಮಕ್ಕೆ ಹೋಗಿದ್ದರು . ರಾತ್ರಿ ಕೊನೆ ಬಸ್ಸಿಗೆ ಬರುವವರಿದ್ದರು. ಆ ದಿನ ನಾವು ಫುಲ್ ಖುಷ್ !  ಅವರು ಬರೋದ್ರೊಳಗೆ  ನಮ್ಮ ಕ್ಯಾಸೆಟ್ ನಲ್ಲಿ ಏನಾದರೂ ಟೇಪ್ ಮಾಡಲೇ ಬೇಕೂಂತ ನಿರ್ಧಾರ ಮಾಡಿದ್ವಿ.  ನಾನು ಮತ್ತು ಇಬ್ಬರು ತಮ್ಮಂದಿರು   ಜೊತೆಗೆ ಅಕ್ಕ ಪಕ್ಕದ ಇನ್ನಿಬ್ಬರು ಹುಡುಗರು ಸೇರಿಕೊಂಡೆವು . ಟೇಪ್ ರೆಕಾರ್ಡ್  ಆನ್ ಮಾಡಿ ,ಕ್ಯಾಸೆಟ್ ಒಳಗೆ ಹಾಕುವಾಗ ಎದೆಯೊಳಗೆ ಡವ ಡವ . ಕ್ಯಾಸೆಟ್  ಹೇಗೆ ಹಾಕುವುದೂ ಎಂದೂ ಸರಿಯಾಗಿ ಗೊತ್ತಿರಲಿಲ್ಲ ನಮಗೆ . ಒಂದೆರಡು ಬಾರಿ ಹಾಕಿ ತೆಗೆದು ಮಾಡಿ , ಅಂತೂ ಅದು ಸರಿಯಾಗಿ ಜಾಗದಲ್ಲಿ ಕುಳಿತು ಕೊಂಡಿತು. ಸರಿ , ಮುಂದೇನು ಎಂಬ ಪ್ರಶ್ನೆ .  ನಾವು ಹಾಡು ಕೇಳುವುದು ಯಾವಾಗಲೂ ಇದ್ದೇ ಇದೆ , ಹೀಗಾಗಿ , ಇವತ್ತು ರೆಕಾರ್ಡ್ ಮಾಡುವುದು ಎಂದಾಯ್ತು . ಅದೂ ಸರಿ , ಏನನ್ನು ರೆಕಾರ್ಡ್ ಮಾಡುವುದು? 
ಆಗ " ಬಂಧನ " ಸಿನೆಮಾ  ರಿಲೀಸ್  ಆದ ಹೊಸದು. ಅದರ ಹಾಡುಗಳು ಬಹಳ ಜನಪ್ರಿಯವಾಗಿದ್ದವು. ಸರಿ ಅದನ್ನೇ ಹಾಡುವುದು ಎಂದಾಯಿತು . ಆಮೇಲೇನು ? ೨ ಹಾಡುಗಳು ಮುಗಿಯುವಷ್ಟರಲ್ಲಿ  ಕ್ಯಾಸೆಟ್ಟೆ ಮುಗೀತು !  ಅದು ಹ್ಯಾಗೆ ಅಂತೀರಾ? ಒಬ್ಬರಾದ ಮೇಲೊಬ್ಬರೂ   ೫ ಜನ ಒಂದೇ ಹಾಡನ್ನೇ  ಹಾಡುತ್ತಾ ಹೋದರೆ  ಇನ್ನೇನಾಗತ್ತೆ  ? ಪರಿಣಾಮವಾಗಿ ಇಡೀ ಕ್ಯಾಸೆಟ್ ನಲ್ಲಿ  " ನೂರೊಂದು ನೆನಪು ...  , ಪ್ರೇಮದಾ ಕಾದಂಬರಿ .. " ಬಿಟ್ಟರೆ ಬೇರೇನೂ ಇರಲೇ ಇಲ್ಲ !!!  ೫ ವಿಭಿನ್ನ ಸ್ವರಗಳಲ್ಲಿ  !!  ಜೊತೆಗೆ ಟೇಬಲ್ ಕುಟ್ಟುವ ,  ಪ್ಲೇಟ್ ತಟ್ಟುವ ಮ್ಯೂಸಿಕ್  ಬೇರೆ ! 
ಅಂತೂ ರೆಕಾರ್ಡಿಂಗ್  ಮುಗಿದಾಗ  ನಮಗೆ ಏನೋ ಸಾಧಿಸಿದ ಹೆಮ್ಮೆ . ಪುನಃ  ಪುನಃ ಹಾಕಿ ಕೇಳಿದ್ದೆ ಕೇಳಿದ್ದು.  ಒಬ್ಬರಿಗೊಬ್ಬರು ಶಾಭಾಸ್  ಕೊಟ್ಟಿದ್ದೇನು , ಎಲ್ಲೆಲ್ಲಿ ತಿದ್ದಬೇಕಾಗಿತ್ತು ಅಂತ ಸಲಹೆಗಳೇನು .. ...
ಸಂಜೆ  ಸಾಗರದಿಂದ ಹಿಂತಿರುಗಿದ ಅಪ್ಪಾಜಿ , ನಮ್ಮ ಸಾಹಸ ನೋಡಿ  ( ಕೇಳಿ ? ) ದಂಗಾದರು .  ಅಷ್ಟು ದುಬಾರಿಯ ಕ್ಯಾಸೆಟ್ ಅನ್ನು ಈ ರೀತಿ  ಹಾಳು ಮಾಡಿದ್ದಕ್ಕಾಗಿ  ನಮ್ಮನ್ನು ತರಾಟೆಗೆ  ತೆಗೆದುಕೊಂಡರು ! ಅದಾದ ಕೆಲ ತಿಂಗಳುಗಳ ವರೆಗೆ ನಮಗೆ  ಟೇಪ್ ರೆಕಾರ್ಡರ್ ಬಳಿ  ಸುಳಿಯುವ ಹಾಗೂ  ಇರಲಿಲ್ಲ !    

ಕ್ರಮೇಣ  ಟೇಪ್ ರೆಕಾರ್ಡರ್  ತಂತ್ರ ಜ್ಞಾನ ದಲ್ಲೂ ಬಹಳಷ್ಟು  ಹೊಸ ಆವಿಷ್ಕಾರ ಗಳಾದವು. ಅದರಲ್ಲಿ ಒಂದು  " ವಾಕ್ ಮನ್   " . ಪುಟ್ಟದಾದ, ಕೈಯಲ್ಲಿ ಸುಲಭವಾಗಿ  ತೆಗೆದುಕೊಂಡು ತಿರುಗಬಹುದಾದ  ಇದು ತುಂಬಾ ಜನಪ್ರಿಯವಾಗಿತ್ತು ! ಜೊತೆಗೆ, ವಯರ್ ಕಿವಿಗೆ ಸಿಕ್ಕಿಸಿಕೊಂಡು  ನಾವೊಬ್ಬರೇ ಹಾಡು ಕೇಳಬಹುದಾದ  ಮಜಾ ಬೇರೆ  !! 

ವಾಕ್ ಮನ್  ಎಂದಾಗ ನನ್ನ ಸಹೋದ್ಯೋಗಿಯೊಬ್ಬರು ಹೇಳಿದ ಘಟನೆ ನೆನಪಾಗುತ್ತದೆ .

ಅವರು ಸಂಬಂಧಿಯೊಬ್ಬರ ಮನೆಗೆ ಹೋಗಿದ್ದರಂತೆ. ಜೊತೆಯಲ್ಲಿ ಇನ್ನೊಬ್ಬ ಸೋದರ ಸಂಬಂಧಿಯೂ ಇದ್ದರಂತೆ . ಆತ    ತನ್ನ ಹೊಸಾ      " ವಾಕ್ ಮನ್   " .  ಹಿಡಿದುಕೊಂಡು ಹೋಗಿದ್ದನಂತೆ . ಅಲ್ಲಿ ಇದ್ದ ಹಿರಿಯ ಹೆಂಗಸೋಬ್ಬರೊಡನೆ ಮಾತಾಡುತ್ತ  ಗೊತ್ತಿಲ್ಲದಂತೆ  ಇವರು ರೆಕಾರ್ಡ್ ಮಾಡ್ತಾ ಇದ್ದರಂತೆ . ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ತವರಿಗೆ ಬಂದು ಈಗ ತಮ್ಮನ ಮಗನ ಜೊತೆಯಲ್ಲಿ  ಇರುತ್ತಿದ್ದ ಆಕೆ , ಇವರೊಡನೆ ತನ್ನ ಸುಖ ದುಃಖ ತೋಡಿ ಕೊಳ್ತಾ ಇದ್ರಂತೆ .  " ನಮ್ಮ  ರಾಗೂ  ಚೋಲೋವ್ನೆಪಾ . ಅವನ ಹೆಂಡತಿ ನೇ ಸ್ವಲ್ಪ  ಒಂಥರಾ. ಎನ್ನುತ್ತಾ  ಬಹಳ ಹೊತ್ತು ಆಕೆಯ ಬಗ್ಗೆ  ತಮ್ಮ ಬೇಸರವನ್ನು ಹೇಳಿಕೊಂಡರಂತೆ  . ಅದನ್ನೆಲ್ಲಾ   ರೆಕಾರ್ಡ್ ಮಾಡಿಕೊಂಡಿದ್ದ ಇವರುಗಳು   ಸ್ವಲ್ಪ ಹೊತ್ತು ಬಿಟ್ಟು  ಅದನ್ನು ಪ್ಲೇ ಮಾಡಿದರಂತೆ . ತನ್ನದೇ ದನಿ ಕೇಳುತ್ತಲೇ , ಬೆಚ್ಚಿ ಬಿದ್ದ ಆಕೆ ,  "ಏನೋ ಇದು ? ಈ ಪೆಟ್ಗೆ ಲಿ ಯಾರಿದಾರೋ ? ನಾ ಹೇಳಿದನ ನಂದೇ ದನೀಲಿ ಯಾರೋ ಅಂತಾ ಇದಾರಲ್ಲೋ ? ಅಯ್ಯೋ , ನಂ ರಾಗೂ  ಕೇಳಿದ್ರೆ ಏನಂದ್ಕೊತಾನೋ ... ಏ , ಅವನಿಗೇ  ಕೇಳದೆ ಇರೋ ತರ   ಮಾಡೋ . .... ಎಂದೆಲ್ಲ ಅಲವತ್ತು ಕೊಂಡರಂತೆ .

ನನ್ನ ಅಪ್ಪಾಜಿ ಕೂಡ  ಕೆಲವು ಹಿರಿಯರ  ( ಅಪ್ಪಾಜಿಯ ತಾಯಿ , ಸೋದರ ಮಾವ , ಭಾವ , ಅಮ್ಮನ ಅಪ್ಪ-ಅಮ್ಮ  ಇತ್ಯಾದಿ) ದನಿಯನ್ನು   ಸಂದರ್ಶನ ರೂಪದಲ್ಲಿ ಧ್ವನಿಮುದ್ರಿಸಿ ಇಟ್ಟುಕೊಂಡಿದ್ದಾರೆ . ಆ ಹಿರಿಯರು ಬಹಳ ಮಂದಿ ಈಗ ನಮ್ಮೊಡನೆ ಇಲ್ಲದಿದ್ದರೂ ಅವರ ಧ್ವನಿಯನ್ನು ಕೇಳುವ ಅವಕಾಶ ನಮಗಿದೆ ! 

ಈಗ ವಾಕ್  ಮನ್ ಕೂಡ  ಕಾಣುವುದಿಲ್ಲ .. ಇನ್ನೂ ಪುಟ್ಟದಾದ , ಆದರೆ ಸಾವಿರ ಗಟ್ಟಲೆ  ಹಾಡುಗಳನ್ನು ತುಂಬಿಸಿಟ್ಟು ಕೊಳ್ಳಬಲ್ಲ  ಐ ಪಾಡ್  ಗಳು ಬಂದಿವೆ . ಕೆಲವೇ ಸೆಂಟಿ ಮೀಟರ್ ಗಾತ್ರದ  ಇವು ಗಳಲ್ಲಿ  ಬಹಳಷ್ಟು  ಹಾಡುಗಳನ್ನು  ತುಂಬಾ ಬಹುದಾದರೂ  ರೆಕಾರ್ಡ್ ಮಾಡುವುದು ಸಾಧ್ಯವಿಲ್ಲ . ತಂತ್ರಜ್ಞಾನ ಬೆಳೆದಂತೆ  ಗಾತ್ರದಲ್ಲಿ ಚಿಕ್ಕದಾಗುತ್ತಾ, ಆದರೆ  ಇನ್ನೂ ಸಾಕಷ್ಟು ಹೆಚ್ಚು ಹಾಡುಗಳನ್ನೂ ತುಂಬಿಸಿಟ್ಟುಕೊಳ್ಳುವ  ಮೆಮೊರಿ ಕಾರ್ಡ್ ಗಳು  ಬಂದಿವೆ. ಇವುಗಳನ್ನು ಹಾಕಿ ಮೊಬೈಲ್ ಅನ್ನೇ  ಹಾಡು ಕೇಳಲು ಬಳಸ ಬಹುದಾಗಿದೆ ! ಇವೆಲ್ಲ ಏನೇ  ಬಂದರೂ ,  ಮೊದಲ ಟೇಪ್ ರೆಕಾರ್ಡರ್ ತಂದ ಎಕ್ಸೈಟ್ ಮೆಂಟ್  ,ಕೌತುಕ, ಕುತೂಹಲ  ಇನ್ನೂ ಮರೆಯಲಾಗದು ! 

17 comments:

ಜಲನಯನ said...

ಒಳ್ಳೆ ನಾಸ್ಟಾಲ್ಜಿಕ್ ವಿಷಯ ಆರಿಸಿರಿಕೊಂಡೆ ತಂಗ್ಯಮ್ಮಾ...!! ನಾನು ಬರೀಬೇಕು ಅಂತಿದ್ದೆ ನಮ್ಮನೆ ಮೊದಲ ರೇಡಿಯೋ ಬಗ್ಗೆ...!!! ಆದ್ರೆ ಈಗ ನಿನ್ನ ಟೇಪ್ ಲೇಖನದ ಮುಂದೆ ರೇಡಿಯೋನ ಯಾರು ಕೇಳ್ತಾರೆ,,,???
ಹೌದು ನಮ್ಮ ಮಾತು ನಮ್ಮ ಅಸಂಬಧ್ಹ ಹಾಡು ಕದ್ದು ಕದ್ದು ರೆಕಾರ್ಡ್ ಮಾಡಿ ಅಳಿಸಿ ಹಾಕೋದು ಗೊತ್ತಿಲ್ದೆ ಅಣ್ನನಿಗೆ ಗೊತ್ತಾಗಿ ಬೈಸಿಕೊಂಡದ್ದು ನೆನ್ಪಾಯ್ತು ನಿನ್ನ ಲೇಖನ ನೋಡಿ...

sunaath said...

ಹೊಸ ತಂತ್ರಜ್ಞಾನ ಹಾಗು ಅದು ನಮ್ಮ ಬಾಳಿನಲ್ಲಿ ಆಪ್ತವಾದ ರೀತಿಯನ್ನು ಆಹ್ಲಾದಕರವಾಗಿ ನಿರೂಪಿಸಿದ್ದೀರಿ. ನನಗೂ ಹಳೆಯ ನೆನೆಪುಗಳು ಉಕ್ಕಿ ಬಂದವು.

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ಲೇಖನ ಓದುತ್ತ.. ಓದುತ್ತ ಎಲ್ಲೋ ಕಳೆದು ಹೋದೆ..

ನನಗೂ ಇಂಥಾದ್ದೇ ಅನುಭವಗಳು..!

ಆ ನೆನಪುಗಳ ಆತ್ಮೀಯತೆ..
ರೋಚಕತೆ ಎಲ್ಲವೂ ಇನ್ನೊಮ್ಮೆ ನೆನಪಿಸಿದ್ದಕ್ಕೆ ಖುಷಿಯಾಯ್ತು..

ನನ್ನ ಮದುವೆಯ ನಿಶ್ಚಿತಾರ್ಥವಾಗಿ ಮೂರು ವರ್ಷಗಳ ನಂತರ ಮದುವೆಯಾದದ್ದು..
( ಅದೇ ಆಗ್ರಾದ ಹುಡುಗಿಯೊಡನೆ)..

ನಮ್ಮ ಪ್ರೇಮದಲ್ಲಿ ಈ ಟೇಪ್ರಿಕಾರ್ಡರ್ ಪಾತ್ರ ಬಲು ದೊಡ್ಡದು...

ಆಗ ರೆಕಾರ್ಡ್ ಮಾಡಿದ ನಮ್ಮ ಸಂಭಾಷಣೆಗಳು ಇನ್ನೂ ಇವೆ...
(ಇನ್ನೂ ಆರು ಕ್ಯಾಸೆಟ್ಟುಗಳಿವೆ)

ಲೇಖನ ತುಂಬಾ ಆಪ್ತವಾಗಿದೆ...

ನಾವಿಬ್ಬರೂ ಸಕತ್ ಎಂಜಾಯ್ ಮಾಡಿದೆವು...

ತುಂಬಾ.. ತುಂಬಾ.. ರಾಶಿ ರಾಶಿ...
ಸಿಕ್ಕಾಪಟ್ಟೆ ಧನ್ಯವಾದಗಳು...

Sulatha Shetty said...

olle vishaya arisikondri..... odutta odutta hale kallakke hogbitte:)

vandana shigehalli said...

ನೈಸ್ ಚಿತ್ರಾ
ನನ್ನ ಇನ್ನೊಂದು ಅಸೆ ಇದೆ .... ಕಾಡಲ್ಲಿ ಒಂದಿನ
ಟೇಪ್ರಿಕಾರ್ಡರ್ ಹಚ್ಚಿಟ್ಟು ಬರ ಬೇಕು ಅಂತ.
ಇನ್ನು ಆಗಿಲ್ಲಾ ,
ಯಾರಾದರು ಏನಾಗಿದೆ ಇವಳಿಗೆ,
ಅಂತ ಮಠದ ಬಹುದು ಅಂತ ಸುಮ್ಮನಿದ್ದೇನೆ ..

ಮನಸು said...

chennagide lekhana.. bahaLa aaptavagide.. haLeya nenapugaLu marukaLiside..

Anonymous said...

ಆಹ್ಲಾದಕರ ಬರವಣಿಗೆ. ನೆನಪುಗಳ ಮೆರವಣಿಗೆ. ಖುಷಿಯಾಯ್ತು.
- ಗೊದ್ಲಬೀಳು ಪರಮೇಶ್ವರ,
ಬೆಂಗಳೂರು
05/12/2011
godlabeelu@gmail.com

prashasti said...

ತುಂಬಾ ಚೆನ್ನಾಗಿದೆ :-) ನಿಮ್ಮ ಲೇಖನ ಓದುತ್ತಾ ಓದುತಾ ಅದರಲ್ಲಿನ ಪಾತ್ರಗಳಲ್ಲೊಂದು ನಾನೇ ಆದಂತೆ ಅನಿಸುತ್ತಿತ್ತು :-) ಮನೆಯ ಹಳೆಯ ಟೇಪ್ ರೆಕಾರ್ಡರ್, ನೋಡಿದ ವಾಕ್ಮನ್ಗಳ ನೆನಪು ಬಂತು

ಚಿತ್ರಾ said...

ಆಜಾದ್ ಭಾಯಿ,

ಬಹುದಿನಗಳ ಹಿಂದೆ ಬರೆದಿಟ್ಟರೂ ಪೂರ್ತಿಗೊಳಿಸಲು ಮುಹೂರ್ತ ಬಂದಿರಲಿಲ್ಲ ! ಅಂತೂ ಬರೆದೆ. ಈಗಲೂ ನಮ್ಮ ಮನೆಯಲ್ಲಿರುವ 3 in 1 ನೋಡಿದಾಗೆಲ್ಲ ಆ ಹಳೆಯ ಟೇಪ್ ರೆಕಾರ್ಡರ್ ನೆನಪಾಗುತ್ತದೆ !

ನೀವು ನಿಮ್ಮ ಮೊದಲ ರೇಡಿಯೋ ಬಗ್ಗೆ ಬರೀರಿ . ಓದಲು ಕಾಯುತ್ತೇವೆ !

ಚಿತ್ರಾ said...

ಕಾಕಾ,
ತುಂಬಾ ದಿನಗಳ ಕಾಲ ನಾನು ಈ ಕಡೆ ತಲೆ ಹಾಕದಿದ್ದರೂ , ಬರಹವನ್ನ ತಕ್ಷಣ ಓದಿ , ಅಭಿಪ್ರಾಯ ಬರೆದಿದ್ದಕ್ಕೆ , ಕೃತಜ್ಞತೆಗಳು ! ನಿಮ್ಮ ಆಶೀರ್ವಾದ ಹೀಗೇ ಇರಲಿ !

ಚಿತ್ರಾ said...

ಪ್ರಕಾಶಣ್ಣ ,

ಮೆಚ್ಚಿದ್ದಕ್ಕೆ , ಖುಷಿ ಪಟ್ಟಿದ್ದಕ್ಕೆ ಥ್ಯಾಂಕ್ಸು !
ಮುಂದಿನ ಸಲ ನಿಮ್ಮನೆಗೆ ಬಂದಾಗ .... ಕದ್ದಾದರೂ ನಿಮ್ಮ ಕ್ಯಾಸೆಟ್ ಕೇಳುವ ಬಯಕೆ ಆಗುತ್ತಿದೆ ! ಹ ಹ ಹ ಹ

ಚಿತ್ರಾ said...

ಸುಲತಾ,

ನನ್ನ ಬ್ಲಾಗ್ ಗೆ ಸ್ವಾಗತ ! ಮೆಚ್ಚಿದ್ದಕ್ಕೆ ಥ್ಯಾಂಕ್ಸು !!!!

ಚಿತ್ರಾ said...

ವಂದನಾ,
ಸ್ವಾಗತ !
ನಿಮ್ಮ ಕನಸೇನೋ ಚಂದವಾಗಿ ಇದೆ . ಆದರೆ,ಪ್ರಾಣಿ, ಪಕ್ಷಿ, ಕ್ರಿಮಿ- ಕೀಟಗಳಿರುವ ಜೀವಂತ ಕಾಡು ಈಗ ಎಲ್ಲಿ ಸಿಗುತ್ತದೆ ನಿಮಗೆ? ಈಗೇನಿದ್ದರೂ ಅಕೇಷಿಯಾ, ನೀಲಗಿರಿ ಗಳ ಸಾಮ್ರಾಜ್ಯವಾಗಿದೆ !
ಆದರೂ , ನೀವೇನಾದ್ರೂ ಹಾಗೆ ಕಾಡಿನ ಸಂಗೀತವನ್ನು ಟೇಪಿಸಿಕೊಂಡರೆ , ನನಗೂ ಕೇಳಿಸಿ !

ಚಿತ್ರಾ said...

ಮನಸು , ಪರಮೇಶ್ವರ್ ,

ಧನ್ಯವಾದಗಳು !

ಚಿತ್ರಾ said...

ಪ್ರಶಸ್ತಿ,

ಥ್ಯಾಂಕ್ಸು !

ಸುಧೇಶ್ ಶೆಟ್ಟಿ said...

Ho.. tape recorder... prathiyobbardu ondondu kathe idde iruttade alva tape recorder jotege... nanna kathegaLu, aavantharagaLu kooda nenapaaytu :)

nostalgic lekhana barediddakke thanks :)

ಚುಕ್ಕಿ said...

http://chukkivana.blogspot.com/