" ಅಯ್ಯೋ ಪಾರ್ವತಿ ಗಂಡ ಅವಳನ್ನ ಬಿಟ್ಟು ಬೇರೆಯವಳ ಜೊತೆ ಸುತ್ತುತಾ ಇದಾನಲ್ರೀ ಜಯಮ್ಮ ! "
" ಥೂ ನೋಡ್ರೀ ಗೀತಾ , ಅವನಿಗೇನು ಬಂತು ಕೇಡು ಅಂತೀನಿ. ಇಂಥಾ ಬಂಗಾರದಂಥಾ ಹೆಂಡತೀ ನ ಬಿಟ್ಟು ಆ ಮಾಟಗಾತಿ ಹಿಂದೆ ಹೋಗಿದಾನಲ್ಲ ! ಪಾಪ ಕಣ್ರೀ ಪಾರ್ವತಿ . ಅವಳ ದುಃಖ ನೋಡೋಕಾಗಲ್ಲ ನನ್ನ ಹತ್ರ ! ಮುಂದೆ ಅವಳ ಗತಿ ಏನಾಗತ್ತೋ "" ಆ ಸಾಧನಾ ನೋಡಿದ್ರಾ , ಅಕ್ಕ ಅಕ್ಕ ಅಂತ ಅಷ್ಟು ಒದ್ದಾಡ್ತಾಳೆ ಪಾಪ ! ಅವಳ ಅಕ್ಕ ನೋಡಿದ್ರೆ ಅವಳಿಗೆ ಮನೆ ಬಿಟ್ಟು ಹೋಗು ಅನ್ತಾಳಲ್ರೀ ? "" ಹೌದುರೀ , ಇನ್ನು ಆ ಅಕ್ಷರಾ ದಂತೂ ಇನ್ನೂ ವಿಚಿತ್ರ ! ಮತ್ತೆ ಮತ್ತೆ ತಪ್ಪು ಮಾಡಿ ಅತ್ತೆ ಹತ್ರ , ಮನೆಜನರ ಹತ್ರ ಯಾಕೆ ಬೈಸಿಕೊ ಬೇಕು ಹೇಳಿ ? "
ಯಾವ ಪಾರ್ವತಿ ಗಂಡ ಅಂತ , ಯಾರ ಮನೆ ಸಾಧನಾ , ಈ ಅಕ್ಷರಾ ಯಾರು ಅಂತೆಲ್ಲ ಕಿವಿ ಉದ್ದ ಮಾಡಿಕೊಂಡು ಕುತೂಹಲದಿಂದ ಕೇಳ ಹೋಗುವ ಅಗತ್ಯವಿಲ್ಲ ! ಇದು ಯಾವುದೋ ಧಾರಾವಾಹಿಯ ಪಾತ್ರಗಳ ಬಗ್ಗೆ ಮೂಡಿದ ಅನುಕಂಪ ಅಷ್ಟೇ ! ಇಂಥ ಚರ್ಚೆಗಳಂತೂ ನಾಲ್ಕು ಹೆಂಗಸರು ಕೂಡಿದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ . ಟಿವಿ ಅನ್ನೋದು ಈಗ ಒಂಥರಾ ಮನೆಯಲ್ಲಿ ಅನಿವಾರ್ಯ ವಸ್ತುವಾಗಿಬಿಟ್ಟಿದೆ. ಮನೆಯಲ್ಲಿ ನೋಡುವ ಜನರಿರಲಿ ಬಿಡಲಿ , ಅಡುಗೆ ಮನೆಯಲ್ಲಿ ಅಕ್ಕಿ ಇರಲಿ ಬಿಡಲಿ , ಮನೆಗೆ ಕರೆಂಟ್ ಕನೆಕ್ಷನ್ ಇರಲಿ ಬಿಡಲಿ,
ಟೀ ವಿ ಅಂತು ಬೇಕೇ ಬೇಕು ! ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ತರ , ಕುಳಿತುಕೊಳ್ಳಲು ಕುರ್ಚಿ ಇಡಲು ಜಾಗವಿಲ್ಲದಿದ್ದರೂ ಪರವಾಗಿಲ್ಲ , ದೊಡ್ಡದೊಂದು ಬಣ್ಣದ ಟಿವಿ ಇರಲೇ ಬೇಕು ಅನ್ನೋ ಪರಿಸ್ಥಿತಿ .
ನಿಮ್ಮನೇಲಿ ಯಾವ ಟಿವಿ ಇದೆ ಅನ್ನೋದು ನಿಮ್ಮ ಅಂತಸ್ತನ್ನು ತೋರಿಸುತ್ತೆ. ಇತ್ತೀಚೆಗಂತೂ , ಹಾಲ್ ನ ಗೋಡೆಯ ಮೇಲೆ ಫ್ಲಾಟ್ LCD ಟಿವಿ ಇದ್ದರೆ ಮನೆಗೆ ಶೋಭೆ ಎಂಬ ಭಾವನೆ ಇದೆ .
ಊಟ ತಿಂಡಿ ಬದಿಗಿಟ್ಟು ಟೀ ವಿ ಧಾರಾವಾಹಿಗಳಲ್ಲಿ ಮುಳುಗುವವರಿಗೆ ಬರಗಾಲವೇ ಇಲ್ಲ ! ಸಂಜೆ ಹೊತ್ತಿಗೆ ಮನೆಗೆ ಯಾರಾದರೂ ಬಂದರೆ " ಈಗ್ಯಾಕೆ ಬಂದರಪ್ಪ ಇವರು .. ಒಳ್ಳೆ ಧಾರಾವಾಹಿ ತಪ್ಪಿಸಿಬಿಡ್ತಾರೆ ಇನ್ನು " ಎಂದು ಮನದಲ್ಲೇ ಶಾಪ ಹಾಕುವವರು ಕಮ್ಮಿಯೇನಿಲ್ಲ ! ಕುಟುಂಬದವರೇ ಯಾರೋ ಮೃತ ಪಟ್ಟರೂ ಅಷ್ಟಾಗಿ ಹಚ್ಚಿಕೊಳ್ಳದ ಇವರು ಧಾರಾವಾಹಿಯ ಪಾತ್ರಗಳ ಕಷ್ಟಕ್ಕೆ ಮರುಗಿ ಕಣ್ಣೀರು ಸುರಿಸುತ್ತಾರೆ .
ಮಕ್ಕಳಿಗೆ ಕಾರ್ಟೂನ್ ಚಾನಲ್ , ಮ್ಯೂಸಿಕ್ ಚಾನಲ್ ಗಳಾದರೆ, ಗಂಡಸರಿಗಂತೂ ೨೪ ಗಂಟೆ ' Breaking News " " Business News " ಅಥವಾ ಕ್ರಿಕೆಟ್ ನ ಮನರಂಜನೆ ಈ ಟಿವಿಯಿಂದಾಗಿ.
ಮುಂಚೆ ದೂರದರ್ಶನದ ನಿಗದಿತ ಕಾಲಾವಧಿಯ ಕಾರ್ಯಕ್ರಮಗಳಿಂದಲೇ ಪುಳಕಗೊಳ್ಳುತ್ತಿದ್ದ ಜನರು ಈಗ Satelite ಯುಗದಲ್ಲಿ ನೂರೆಂಟು ಚಾನಲ್ ಗಳು ದಿನವಿಡೀ ಪ್ರಸಾರ ಮಾಡುವ ಕಾರ್ಯಕ್ರಮಗಳಿಂದಾಗಿ ಹುಚ್ಚಾಗಿ ಹೋಗಿದ್ದಾರೆ.
ನಾನು ಮೊದಲ ಬಾರಿಗೆ ಟಿವಿನೋಡಿದ್ದು ನಾನು ೮ನೇ ತರಗತಿಯಲ್ಲಿದ್ದಾಗ . ಪ್ರಧಾನಿ ಇಂದಿರಾಗಾಂಧಿಯವರ ಅಂತಿಮ ಕ್ರಿಯೆಯ ನೇರ ಪ್ರಸಾರ ಟಿವಿಯಲ್ಲಿ ತೋರಿಸುತ್ತಾರೆ ಎಂದು ಕೇಳಿ ನನ್ನ ಅಪ್ಪಾಜಿ ನನ್ನನ್ನು ಶಿವಮೊಗ್ಗದ ನನ್ನ ಸೋದರಮಾವನ ಮನೆಗೆ ಕರೆದುಕೊಂಡು ಹೋಗಿದ್ದರು . ಅವರ ಮನೆಯಲ್ಲಿ ಹೊಸದಾಗಿ ಬಂದಿದ್ದ ಕಪ್ಪು ಬಿಳುಪು ಟಿವಿಯ Antenna ಸರಿಯಿಲ್ಲದೆ , ಜೋರಾಗಿ ಮಳೆ ಬೀಳುತ್ತಿರುವಂತೆ ಕಾಣುತ್ತಿದ್ದ ಪರದೆಯನ್ನೇ ಕಣ್ಣು ಕೀಲಿಸಿಕೊಂಡು ನೋಡಿದೆವು . . ನಂತರ ಅವರ ಸ್ನೇಹಿತರ ಮನೆಯಲ್ಲಿ ಬಣ್ಣದ ಟಿವಿ ಇದೆ ಎಂದು, ಅದರಲ್ಲಿ ನೋಡಲು ಚೆನಾಗಿರುತ್ತದೆ ಎಂದು ಅಲ್ಲಿಗೆ ಹೋದೆವು. ಅವರ ಮನೆಯ ಹಾಲ್ ಆಗಲೇ ಮುಕ್ಕಾಲು ಭಾಗ ತುಂಬಿ ಹೋಗಿತ್ತು. ಮನೆಯೊಡತಿಗೆ , ಆ ಸಂದರ್ಭದಲ್ಲೂ ಬಂದವರಿಗೆಲ್ಲ ಚಹಾ ಮಾಡಿ ಕೊಡುವ ಸಂಭ್ರಮ ! ಶಿವಮೊಗ್ಗದಿಂದ ಮರಳಿದ ಮೇಲೆ ನನಗೆ ಒಂಥರಾ ಹೆಮ್ಮೆ ! ಸಂದರ್ಭ ಏನೇ ಇರಲಿ ಶಾಲೆಯಲ್ಲಿ ಬಣ್ಣದ ಟಿವಿ ನೋಡಿ ಬಂದ ಮೊದಲಿಗಳಲ್ಲವೇ ನಾನು?
ಕೆಲ ವರ್ಷಗಳಲ್ಲಿ ಪುಟ್ಟದೊಂದು ಕಪ್ಪು ಬಿಳುಪು ಟಿವಿ ನನ್ನ ಅಜ್ಜನ ಮನೆಯಲ್ಲೂ ಬಂತು ! ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮೊದಲ ಟಿವಿ ಅದು ! ಸಂಜೆಯ ಹೊತ್ತಿಗೆ ಜಗುಲಿ ಎನ್ನುವುದು ಒಂಥರಾ ಸಿನೆಮಾ ಟಾಕೀಸಿನಂತೆ ತುಂಬಿ ತುಳುಕುತ್ತಿತ್ತು. ಕೆಲ ದಿನಗಳು ಮುಂದುವರೆದ ಸಂಭ್ರಮ ಕ್ರಮೇಣ ಕಮ್ಮಿ ಆಯ್ತು ಅನ್ನಿ. ಆದರೆ ನನ್ನ ಅಜ್ಜಿ ಮಾತ್ರ ಭಕ್ತಿಯಿಂದ ಕುಳಿತು ' ವಾರ್ತೆಗಳನ್ನು ' ನೋಡುತ್ತಿದ್ದರು. ಕನ್ನಡ ಬಿಟ್ಟರೆ ಬೇರೆ ಭಾಷೆಯ ಗಂಧ ಗಾಳಿಯೂ ಇಲ್ಲದ ಅಜ್ಜಿ ಅಷ್ಟು ಆಸಕ್ತಿಯಿಂದ ಕುಳಿತು ನೋಡುವ ಪರಿಗೆ ನಾವು ಕುತೂಹಲಪಡುತ್ತಿದ್ದೆವು. ಅದನ್ನು ಕೇಳಿದಾಗ ಅಬ್ಬೆ ಹೇಳಿದ್ದು
" ನಂಗೆ ಒಂದುಸಲ ಆದರೂ ರಾಜೀವ್ ಗಾಂಧೀ ಮುಖ ನೋಡದ್ದೆ ಇದ್ರೆ ಸಮಾಧಾನ ಇಲ್ಲೆ ನೋಡು. ವಾರ್ತೆಲಿ ಹೆಂಗೂ ಒಂದ್ಸಲ ಮುಖ ಕಂಡೇ ಕಾಣ್ತು ಹಾಂಗಾಗಿ ತಪ್ಪದ್ದೆ ನೋಡದು "
" ಅದೆಂತಕೆ ರಾಜೀವ್ ಗಾಂಧೀ ಮೇಲೆ ಅಷ್ಟು ಪ್ರೀತಿ ಅಬ್ಬೆ? "
" ಅಲ್ಲಾ , ಅದೆಂತದೋ ವಿಮಾನ ಹಾರಿಸಿಕ್ಯಂಡು ಇದ್ದಿದ್ದ , ತಾಯಿ ಸತ್ತಾಗ ಬೇಜಾರು ಮಾಡ್ಕ್ಯಂಡು ಬದೀಗೆ ಕೂತ್ಗಳದ್ದೆ ಈ ಎಳೇ ವಯಸ್ಸಲ್ಲೇ ಹ್ಯಾಂಗೆ ಮುಂದೆ ಬಂದು ಧೈರ್ಯದಿಂದ ದೇಶ ನಡೆಸಿಕ್ಯಂದು ಹೋಗ್ತಿದ್ದ ನೋಡು . ಅದಕ್ಕೆ ಒಂಥರಾ ಅಭಿಮಾನ "
ಅಬ್ಬೆಯ ಮಾತಿಗೆ ಅವಳ ಲೋಕಜ್ಞಾನಕ್ಕೆ ನಾವು ಒಮ್ಮೆ ಬೆರಗಾದೆವು ! ಹಾಗೇ ರಾಜೀವ್ ಗಾಂಧಿಯ ಧೈರ್ಯವನ್ನೂ ಮೆಚ್ಚಿದೆವು !!! ( ಈಗ , ಅಬ್ಬೆಯ ಸಹಾನುಭೂತಿ , ಅವಳ ಮಾತಿನಲ್ಲೇ ಹೇಳುವುದಾದರೆ , ' ಪರದೇಶದಿಂದ ಬಂದು , ಅತ್ತೆ ಹಾಗೂ ಗಂಡನನ್ನು ಕಳೆದುಕೊಂಡರೂ , ಎದೆಗುಂದದೆ, ತವರಿಗೆ ವಾಪಸಾಗದೆ , ಮಕ್ಕಳಿಬ್ಬರನ್ನೂ ಬೆಳೆಸಿ ಈಗ ದೇಶವನ್ನು ನಡೆಸುತ್ತಿರುವ ದೇಶದ ಸೊಸೆ ' ಸೋನಿಯಾ ಗಾಂಧಿಯ ಕಡೆಗಿದೆ ! )
ಅಬ್ಬೆಗೂ ಟಿವಿಗೂ ಒಂಥರಾ ಬಾಂಧವ್ಯ ! ಭಾಷೆ ಬಾರದಿದ್ದರೂ ಭಕ್ತಿಯಿಂದ ಕುಳಿತು ಕಾರ್ಯಕ್ರಮಗಳನ್ನು ನೋಡುತ್ತಾಳೆ. ಆಗ ಹಿಂದಿ ವಾರ್ತೆ ಓದಲು ಬರುವ "ಸರಳಾ ಮಹೇಶ್ವರಿ" ಅಬ್ಬೆಯ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಳು.
" ಎಷ್ಟು ಪಟ್ಟಾಗಿ ಎಣ್ಣೆ ಹಚ್ಚಿ ಮಂಡೆ ( ಕೂದಲು) ಬಾಚಿ ಗಂಟು ಹಾಕ್ಯಂಡು , ಹಣೆ ಮೇಲೆ ದೊಡ್ಡ ಕುಂಕುಮ ಇಟ್ಗಂಡು , ಲಕ್ಷಣವಾಗಿ ಸೀರೆ ಉಟ್ಗಂಡು ಬರದು ನೋಡಿದ್ರೆ , ಯಾರೋ ನಮ್ಮ ಬದಿ ಹೆಂಗಸೇ ಆಗಿಕ್ಕು ಅಲ್ದಾ ತಂಗಿ ? " ಎಂದು ನನ್ನನ್ನು ಕೇಳಿದ ಅಬ್ಬೆಗೆ ಪಕ್ಕದ ಮನೆಯ ಶಿವಣ್ಣಯ್ಯ ,
" ಹೌದು ಚಿಕ್ಕೀ, ಕಡ್ಲೆ ಬೈಲಿನ ಸುಬ್ರಾಯ ಬಾವನ ಹೆಂಡ್ತಿ ಸಂಬಂಧ ಇವಳಿಗೆ " ಎನ್ನಬೇಕೇ? ಅಬ್ಬೆ ಅದನ್ನು ನಂಬಿಯೂ ಆಗಿತ್ತು . ಅಷ್ಟರಲ್ಲಿ ನಾವೆಲ್ಲ ಕಿಸಕ್ಕೆಂದು ನಕ್ಕಿದ್ದು ಕಂಡು ಅವಳಿಗೆ ತನ್ನನ್ನು ರೇಗಿಸಿದ್ದು ತಿಳಿಯಿತು.
" ಥೋ , ಎಂತದ್ರ ನಿಂಗ ಎಲ್ಲ ಹೀಂಗೆ ಸುಳ್ಳು ಹೇಳ್ತಿ." ಎಂದು ತಾನು ನಕ್ಕವಳು ನಂತರ ಗಂಭೀರವಾಗಿ " ಅಲ್ಲಾ ನಾವೆಲ್ಲಾ ಟಿವಿ ಮುಂದೆ ಕೂತ್ಗಂಡು ಹೀಂಗೆ ಮಾತಾಡದು ಕೇಳಿ ಅವಳು ಮನೆಗೆ ಹೋಗಿ ನಮ್ಮ ಬಗ್ಗೆ ಹೇಳಿಕ್ಯಂಡು ಎಷ್ಟು ನೆಗ್ಯಾಡ್ತೆನ ! " ಎಂದು ಹೇಳಿದಾಗ ಜಗುಲಿಯಲ್ಲಿ ಮತ್ತೊಮ್ಮೆ ನಗುವಿನ ಅಲೆ !
ನನ್ನತ್ತೆಗೂ ಹಾಗೇ, ಸಂಜೆಯಾಗುತ್ತಿದ್ದಂತೆ ಟಿವಿ ಹಚ್ಚುವುದು ಎಷ್ಟು ಅಭ್ಯಾಸವಾಗಿ ಹೋಗಿತ್ತು ಎಂದರೆ ಒಮ್ಮೆ ಸಂಜೆ ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದವರು .. ಜಗುಲಿಯಲ್ಲಿ ಟಿವಿ ಹಚ್ಚಿರದ್ದನ್ನು ಕಂಡು ಮಾವನವರಿಗೆ ಜೋರು ಮಾಡಿದ್ದರು . " ಸಂಜೆಯಾತು , ಒಂದು ಟಿವಿ ನೂ ಹಚ್ಚಿದ್ರಿಲ್ಲೇ ನೀವು ! ಲೈಟ್ ಹಾಕಕಾದ್ರೆ ಅಲ್ಲೇ ಟಿವಿ ಸ್ವಿಚ್ಚೂ ಹಾಕಿದ್ರೆ ಆಗ್ತಿತ್ತಿಲ್ಯಾ? " ಎಂದು. ಅವರ ಮಟ್ಟಿಗೆ , ಟಿವಿ ಹಾಕುವುದು ಸಂಜೆ ಮನೆಯ ದೀಪ ಬೆಳಗುವಷ್ಟೇ ಸಹಜವಾಗಿತ್ತು !
ಈ ಟಿವಿ ಎಂಬ ಮಾಯಾಂಗನೆ ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದ್ದಾಳೆ . ನೂರೆಂಟು ಚಾನಲ್ ಗಳು , ತಮ್ಮ ಜನಪ್ರಿಯತೆಗಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾ ಪ್ರತಿಯೊಂದನ್ನೂ "Breaking News " ಆಗಿಯೇ ಪ್ರಕಟಿಸುತ್ತಾ ಜನರ ಶಾಂತಿ ಕದಡುವಲ್ಲಿ ಯಶಸ್ವಿಯಾಗಿವೆ . ಇವರ ಪಾಲಿಗೆ ಯಾರದೋ ಮನೆಯಲ್ಲಿ ಗಂಡ -ಹೆಂಡತಿಯ ನಡುವಿನ ಚಿಕ್ಕ ಸಂಘರ್ಷವೂ Breaking News ಆಗಿಬಿಡುತ್ತದೆ ! ಸಮಾಜದ ಬಗೆಗಿನ ತಮ್ಮ ಜವಾಬ್ದಾರಿಯನ್ನು ಇವು ಮರೆತೇ ಬಿಟ್ಟಿವೆ.
ಒಂದು ಕಾಲದಲ್ಲಿ ಸದಭಿರುಚಿಯ , ನವಿರು ಹಾಸ್ಯದ ಚಿಕ್ಕ ಚಿಕ್ಕ ಮಾಲಿಕೆಗಳು ದೂರದರ್ಶನದಲ್ಲಿ ಜನರನ್ನು ರಂಜಿಸುತ್ತಿದ್ದವು .ಆದರೆ ಇಂದು ?
ಪ್ರತಿ ಚಾನಲ್ ನಲ್ಲೂ ರಿಯಾಲಿಟಿ ಷೋ ಗಳಲ್ಲಿ ನಡೆಯುವ ನಾಟಕ , ಗಂಭೀರ ವಿಷಯವೇ ಇಲ್ಲದ ಬಿಸಿ ಚರ್ಚೆಗಳು , ಕೇಳುಗರ ಕಿವಿ ಕಿವುಡಾಗುವಂತೆ , ಬೆದರಿಸುತ್ತಾ ಕಿರುಚಾಡುವ ರಿಪೋರ್ಟರ್ ಗಳು ... ಇಂದು ಅತ್ಯಂತ ಪ್ರಭಾವೀ ಮಾಧ್ಯಮವಾದ ಟಿವಿ ಯ ದುರವಸ್ಥೆಯನ್ನು ತೋರಿಸುತ್ತವೆ !
ಇನ್ನು ಧಾರಾವಾಹಿಗಳಂತೂ ಕೇಳುವುದೇ ಬೇಡ ! ವರ್ಷಗಟ್ಟಲೆ ಮುಂದುವರಿಯುವ ಇವುಗಳಲ್ಲಿ , ಯಾರು ಎಷ್ಟು ಸಲ ಮದುವೆಯಾಗುತ್ತಾರೋ , ಯಾರ ಹೆಂಡತಿ ಯಾರು , ಆಕೆ ಮುಂದೆ ಇನ್ಯಾರನ್ನು ಮದುವೆಯಾದಳು ಎಂಬುದು ನಿರ್ದೇಶಕನಿಗೂ ಕಗ್ಗಂಟಾಗಿ ಉಳಿಯುತ್ತದೆ! ಶುರುವಿನಲ್ಲಿ , ಮಧ್ಯಮ ವರ್ಗದ ಕುಟುಂಬದಿಂದ ಬಂದ ನಾಯಕಿ ಅತ್ಯಂತ ಪ್ರಾಮಾಣಿಕಳೂ, ಅತಿ ಧೈರ್ಯಸ್ಥೆಯೂ , ಸತ್ಯಕ್ಕಾಗಿ ಏನು ಮಾಡಲೂ ಸಿದ್ಧವಿರುವವಳೂ , ಮಾನವ ಸಂಬಂಧಗಳನ್ನು ತುಂಬಾ ಗೌರವಿಸುವವಳೂ ಆಗಿರುತ್ತಾಳೆ . ಒಮ್ಮೆ ಆಗರ್ಭ ಶ್ರೀಮಂತ ನಾಯಕನನ್ನು ಮದುವೆಯಾಗಿದ್ದೇ ಅವಳ ಗೋಳಾಟ ಆರಂಭವಾಗುತ್ತದೆ ! ಆಕೆಯ ಗಂಡನಮನೆಯಲ್ಲಿರುವ ಹೆಂಗಸರೆಲ್ಲರಿಗೂ ಒಬ್ಬರಿಗೊಬ್ಬರ ವಿರುದ್ಧ ಪ್ಲಾನ್ ಮಾಡಿಯೇ ಮುಗಿಯದು . ಇದರ ನಡುವೆ ನಮ್ಮ ನಾಯಕಿ , ಕುಟುಂಬದ ಪ್ರತಿಷ್ಠೆ ಉಳಿಸಲು ತ್ಯಾಗ ಮಾಡುತ್ತಾ ಕಣ್ಣೇರು ಹರಿಸುತ್ತಾ ಇರುತ್ತಾಳೆ ! ಆಕೆಯನ್ನು ನೋಡುತ್ತಾ ನಮ್ಮ ಪ್ರೇಕ್ಷಕ ಮಹಿಳೆಯರೂ ದುಃಖಿಸುತ್ತಾರೆ ! ಆಕೆ ತಮ್ಮದೇ ಕುಟುಂಬದ ಮಗಳೇನೋ ಎಂಬಂತೆ ! ಇವೆಲ್ಲವೂ ಎಂದಿಗೆ ಕೊನೆಯೂ ಗೊತ್ತಿಲ್ಲ !
ಆದರೆ, ಈ ಋಣಾತ್ಮಕ ಅಂಶಗಳ ಹೊರತಾಗಿಯೂ ಇಂದು ಟಿವಿ ಒಂದು ದೊಡ್ಡ ಉದ್ಯಮವಾಗಿ ಬೆಳೆದಿರುವುದೂ ಅಷ್ಟೇ ನಿಜ ! ಇದರಲ್ಲೀಗ ಹಣದ ಹೊಳೆ ಹರಿಯುತ್ತಿದೆ ! ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ, ಅದೆಷ್ಟೋ ಜನರು ಕಲಾವಿದರಾಗಿ, ನಿರ್ದೇಶಕರಾಗಿ ಯಶಸ್ಸಿನ ರುಚಿ ಸವಿದಿದ್ದಾರೆ . ಕೆಲದಿನಗಳ ಹಿಂದೆ , ಅನಾಮಿಕರಾಗಿದ್ದವರು ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಮುಖ ತೋರಿಸಿದ್ದೇ , ಜನಪ್ರಿಯರಾಗಿದ್ದಾರೆ . ಯುವಪೀಳಿಗೆ ಇಂದು ಟಿವಿ ಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದೂ ಇದೇ ಕಾರಣಕ್ಕಾಗಿ ! ಕೆಲ ಜನಪ್ರಿಯ ಹಿಂದಿ ಧಾರಾವಾಹಿಗಳ ಮುಖ್ಯ ಕಲಾವಿದರು ದಿನವೊಂದಕ್ಕೆ ೧ ಲಕ್ಷ ರೂ. ಸಂಭಾವನೆ ಪಡೆದಿದ್ದೂ ಇದೆ. ವರ್ಷಗಟ್ಟಲೆ ಮುಂದುವರಿಯುವ ಇಂತಹ ಧಾರಾವಾಹಿಗಳಲ್ಲಿ ಅವರು ಎಷ್ಟು ಹಣ ಗಳಿಸಿರಬಹುದೋ ಯೋಚಿಸಿ !
ಕೆಲ ವರ್ಷಗಳ ಹಿಂದೆ ಕಿರುತೆರೆಯ ಸಾಮ್ರಾಜ್ಞಿ ಎಂದೇ ಪ್ರಖ್ಯಾತಳಾದ " ಏಕತಾ ಕಪೂರ್" ಒಡೆತನದ ಬಾಲಾಜಿ ಪ್ರೊಡಕ್ಷನ್ಸ್ , ವಿವಿಧ ಭಾಷೆಗಳಲ್ಲಿ ಪ್ರತಿದಿನ ೩೫ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿತ್ತು ಎಂದರೆ ಕಿರುತೆರೆಯ ಹಿರಿಮೆ ಸ್ವಲ್ಪ ಮಟ್ಟಿಗೆ ಅರ್ಥವಾಗಬಹುದು !
ಕೇವಲ ಜನಪ್ರಿಯತೆಯನ್ನೇ ಗುರಿಯಾಗಿಸಿಕೊಳ್ಳದೆ ತಮ್ಮ ಜವಾಬ್ದಾರಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಆ ಪ್ರಕಾರ ಜನರಲ್ಲಿ ಸಾಮಾಜಿಕ ಅರಿವನ್ನೂ ನೀಡುವ ಕೆಲಸವನ್ನು ಕಿರುತೆರೆ ಮಾಡಬೇಕಿದೆ !
ಬ್ರೆಕಿಂಗ್ ನ್ಯೂಸ್ ನ ಹೆಸರಿನಲ್ಲಿ ಘಟನೆಯ , ಹಿಂದೂ ಮುಂದು , ಸತ್ಯಾಸತ್ಯತೆಯನ್ನೂ ಅರಿತುಕೊಳ್ಳದೆ ಏನೆಲ್ಲಾ ಪ್ರಸಾರ ಮಾಡುವ ರಿಪೋರ್ಟರ್ ಗಳನ್ನು ನೋಡುವಾಗ , ಕೆಲ ವರ್ಷಗಳ ಹಿಂದೆ ಟಿವಿಯಲ್ಲೇ ನೋಡಿದ ಒಂದು ದೃಶ್ಯ ನೆನಪಾಗುತ್ತದೆ .
ಶೇಖರ್ ಸುಮನ್ ತಮ್ಮ ಷೋ ಒಂದರಲ್ಲಿ ಇಂದಿನ ರಿಪೋರ್ಟರ್ ಗಳನ್ನು ಕುರಿತು ಹೀಗೆ ಹಾಸ್ಯ ಮಾಡಿದ್ದರು
" ಇಂದಿನ ಅತ್ಯಂತ ಮಹತ್ವದ ಘಟನೆ ಎಂದರೆ ಎ ಬಿ ಸಿ ರಸ್ತೆಯ ಈ ಗಲ್ಲಿಯಲ್ಲಿ ಸತ್ತು ಬಿದ್ದಿರುವ ಈ ನಾಯಿಯನ್ನು ನೋಡಿ , ಇದು ಸಾಧಾರಣ ಸಾವಲ್ಲ , ಕೊಲೆ ! ನಿಷ್ಕರುಣಿ ಚಾಲಕನ ದುರ್ಲಕ್ಷ್ಯದಿಂದಾಗಿ ಈ ನಾಯಿ ಇಂದು ಸತ್ತು ಬಿದ್ದಿದೆ. ಇದರ ನಿರ್ಜೀವ ಬಾಲವನ್ನ ಒಮ್ಮೆ ನೋಡಿ , ಹೇಗೆ ಮುರುಟಿಕೊಂಡಿದೆ , ಅತ್ತಿತ್ತ ರಕ್ತ ಚೆಲ್ಲಾಡಿದೆ ... ಅದರ ಹೊರ ಚಾಚಿರುವ ನಾಲಿಗೆ ನೋಡಿ ... ಈ ದುರ್ಘಟನೆಯನ್ನು ನಿಮ್ಮೆದುರು ಬೇರೆಲ್ಲರಿಗಿಂತ ಮೊದಲೇ ತೆರೆದಿಡಲು ನಮ್ಮ ವರದಿಗಾರರು ಆ ಸ್ಥಳದಲ್ಲಿ ದುರ್ಘಟನೆಯ ನಡೆಯುವುದಕ್ಕೂ ಬಹುಮುಂಚಿತವಾಗಿ ಕಾದಿದ್ದರು ! "
ಬ್ರೆಕಿಂಗ್ ನ್ಯೂಸ್ ಗಳನ್ನು ನೋಡುವಾಗ ಇಂದಿಗೂ ಈ ಪ್ರಸಂಗ ನೆನಪಾಗಿ ನಗುಬಂದುಬಿಡುತ್ತದೆ !