ಇದು ಬ್ಲಾಗ್ ಅಂಗಳದಲ್ಲಿ ನನ್ನ ಮೊದಲ ಹೆಜ್ಜೆ. ಬಾಗಿಲಲ್ಲಿ ನಿಂತು ಅದರಾಚೆ ಏನಿರಬಹುದು ಅನ್ನೋ ಕುತೂಹಲದಿಂದ ಇಣುಕಿ, ಒಳಹೊಕ್ಕು ನೋಡುವ ತವಕದಿಂದ ಕಾಲಿಡುತ್ತಿದ್ದೇನೆ. ಏನಾದರೂ ಬರೆದುಬಿಡುವ ಹುಮ್ಮಸ್ಸು, ನನ್ನ ಕೊರೆತಗಳನ್ನು ಓದುವವರು, ಓದಿಯೂ ಸಹಿಸ ಬಲ್ಲವರು , ಪ್ರೋತ್ಸಾಹ ನೀಡುವವರು ಸಿಗಬಹುದೆ ಎಂಬ ಅಳುಕು, ಇತ್ಯಾದಿ ಏನೇನೋ ಭಾವಗಳು ಮನದಲ್ಲಿ .
ಏನಾದರೂ ಆಗಲಿ , ಬಿಡುವು ಸಿಕ್ಕಾಗೆಲ್ಲ ಇಲ್ಲಿ ಬರಬೇಕು ಅಂದುಕೊಂಡಿದ್ದೇನೆ. ಮನಸಲ್ಲೇ ಕಟ್ಟಿಟ್ಟ ಭಾವನೆಗಳ ಹುಚ್ಚು ಹೊಳೆಯನ್ನು ಮುಕ್ತವಾಗಿ ಹರಿಯಬಿಡಬೇಕೆಂದುಕೊಂಡಿದ್ದೇನೆ.
ಪ್ರತಿನಿತ್ಯದ " ಮನೆ - ಆಫೀಸ್ -ಮನೆ ಆಟ", ಆಗೊಮ್ಮೆ -ಈಗೊಮ್ಮೆ ಸ್ನೇಹಿತರು , ಸಿನೆಮಾ, ಶಾಪಿಂಗ್ ಗಳ ನಡುವೆ ಜೀವನ ಓಡುತ್ತಿದೆ. ಎಷ್ಟೋ ಸಲ ಯಾವ ಚಿಂತೆಯೂ ಇಲ್ಲದೆ ( ಅದೆಲ್ಲವನ್ನೂ ಅಪ್ಪ-ಅಮ್ಮಂದಿರಿಗೇ ಬಿಟ್ಟು ) ಆರಾಮವಾಗಿ ಕಳೆದ ಬಾಲ್ಯದ ನೆನಪುಗಳು ಕಾಡುತ್ತವೆ. ಆಗೆಲ್ಲ ಹಂಚಿಕೊಳ್ಳಲು ನನ್ನಂತವರೇ ಯಾರನ್ನಾದರೂ ಹುಡುಕುತ್ತೇನೆ. ಎಷ್ಟೋ ಸಲ, ನನ್ನ ಮಗಳೇ ಶ್ರೋತೃವಾಗುತ್ತಾಳೆ. ಬಾಲ್ಯದ ನೆನಪಲ್ಲೇ ಕಳೆದು ಹೋಗಿ ನಾನು ಮಾತಾಡುತ್ತಿದ್ದರೆ, ಗಲ್ಲಕ್ಕೆ ಕೈ ಕೊಟ್ಟು ಕೇಳುತ್ತಾಳೆ.
ನಾವು ಬೇಸಿಗೆ ರಜೆ ಬಂತೆಂದರೆ , ಅಜ್ಜನ ಮನೆಗೆ ಓಡುತ್ತಿದ್ದಿದ್ದು, ಗುಡ್ಡ- ಬೆಟ್ಟ, ಕಾಡು ಅಲೀತಿದ್ದಿದ್ದು, ಮನೆಯವರು ಯಾರಾದ್ರೂ ಕೋಲು ತೊಗೊಂಡು ಬರೋವರೆಗೂ ಎಮ್ಮೆಗಳ ಥರಾ ಹೊಳೆಲೋ -ಕೆರೇಲೋ ಬಿದ್ಕೊಂಡಿರ್ತಿದ್ದಿದ್ದು , ಅಂಗಳದ ಸೌತೆ ಬಳ್ಳೀಲಿ ಕಾಯಿ ಬೆಳೀದೇ ಇರೋ ಹಾಗೆ ಎಚ್ಚರ ವಹಿಸ್ತಿದ್ದಿದ್ದು , ಮಾವಿನ ಮರ, ಪೇರಲೆ ಮರದ ಹೀಚು ಕಾಯಿಗಳೆಲ್ಲ ನಮಗೆ ರಜೆ ಬಂತೂಂದ್ರೆ ಹೆದ್ರಿ ನಡುಗುತ್ತಿದ್ದಿದ್ದು ಎಲ್ಲ ಕೇಳಿದಮೇಲೆ " ಅಮ್ಮಾ , ನಿಜಕ್ಕೂ ನೀವೆಲ್ಲ ಇಷ್ಟೆಲ್ಲ ಮಜಾ ಮಾಡ್ತಿದ್ರಾ? ಹೋಮ್ ವರ್ಕ್ ,ಪ್ರೊಜೆಕ್ಟ್ , ಅಸೈನ್ ಮೆಂಟ್ ಎಲ್ಲ ಏನೂ ಇರ್ತಿರಲಿಲ್ವ? " ಅಂತ ಆಶ್ಚರ್ಯ ಪಡ್ತಾಳೆ. ನಿಜ, ಈಗೆಲ್ಲ ಮಕ್ಕಳಿಗೆ , ಅದೂ ಪೇಟೆ ಮಕ್ಕಳಿಗೆ ನಮ್ಮಂಥಾ ಬಾಲ್ಯ ಕನಸೇ ಸರಿ ! ನನ್ನ ಮಗಳು ಅಂಥಾ ಕ್ಷಣಗಳಿಂದ ವಂಚಿತಳಾದ ಬಗ್ಗೆ ಬೇಸರವಾಗುತ್ತದೆ . ಅದನ್ನೆಲ್ಲ ತುಂಬಿ ಕೊಡುವೆನೋ ಅನ್ನುವಂತೆ ಬೇಸಿಗೆ ರಜೆಯಲ್ಲಿ ಎಲ್ಲೆಲ್ಲಿಗೋ ಕರೆದುಕೊಂಡು ಹೋಗುವ ಪ್ರಾಮಿಸ್ ಮಾಡುತ್ತೇನೆ. ಊರಿಗೆ ಹೋದಾಗ ಮರ ಹತ್ತು, ಹೊಳೆಲಿ ಈಜು , ಮಣ್ಣಲ್ಲಿ ಆಡು ಎಂದೆಲ್ಲ ಅವಳನ್ನು "ಚಿಯರ್ ಅಪ್ " ಮಾಡುತ್ತೇನೆ. ನನಗೂ ಗೊತ್ತು, ಕೆಲವೇ ದಿನಗಳಲ್ಲಿ ಅವಳಿಗೆ ಅದೆಲ್ಲ ಬೇಜಾರು ಬಂದು , ಕಂಪ್ಯೂಟರ್ ಗೇಮ್ / ವಿಡಿಯೋ ಗೇಮ್ ಇತ್ಯಾದಿಗಳನ್ನು ಹುಡುಕತೊಡಗುತ್ತಾಳೆ ಅಂತ. ಆದರೂ ಅದೇನೋ ಉತ್ಸಾಹ, ಮಗಳ ಮೂಲಕ ನನ್ನದೇ ಬಾಲ್ಯದ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಬಯಕೆ.
ಏನೋ ಹೇಳಲು ಶುರು ಮಾಡಿ ಎಲ್ಲೆಲ್ಲೋ ಅಲೀತಾ ಇದೀನಿ.
ಹೀಗೇ , ಅನಿಸಿದ್ದನ್ನೆಲ್ಲ ಹುಚ್ಚು ಹೊಳೆಯಾಗಿ ಹರಿಯ ಬಿಡ್ತೀನಿ . ನೀವೂ ಅದರ ಅಲೆಗಳನ್ನ ಮುಟ್ತೀರಾ ಅಂತ ಅಂದ್ಕೊಳ್ಲಾ?
ಮತ್ತೆ ಸಿಕ್ತೀನಿ .ಬರ್ಲಾ?
6 comments:
ಚಿತ್ರಾ ಅವರೆ...
ಬ್ಲಾಗ್ ಪ್ರಪಂಚಕ್ಕೆ ಸ್ವಾಗತ.
ನೀವು ಹೇಳಿದಂತೆ ನವು ಕಳೆದ ಬಾಲ್ಯಕ್ಕೂ, ನಮ್ಮ ಚಿಣ್ಣಾರಿಗಳ ಬಾಲ್ಯಕ್ಕೂ ಅಜಗಜಾಂತರವಿದೆ.
ಹೀಗೆಯೇ ಮಲೆನಾಡ ಕಂಪಿನ ಭಾವಗಳನ್ನು ಕರಾವಳಿಯ ತೆರೆಗಳಾಗಿಸಿ ಕಳಿಸಿ. ಅಲ್ಲಿ ತೇಲುವ ಭಾಗ್ಯ ನಮ್ಮದಾಗಲಿ.
ಪ್ರಿಯ ಶಾಂತಲಾ,
ಧನ್ಯವಾದಗಳು . ನನ್ನ ಮೊದಲನೇ ಬ್ಲಾಗಿನ ಮೊದಲನೇ ಅನಿಸಿಕೆ ಕಳಿಸಿದವರು ನೀವು.ನಿಜ ಹೇಳಬೇಕೆಂದರೆ , ಮೊದಲ ಹೆಜ್ಜೆಗೆ ಪ್ರೇರೇಪಣೆ ನಿಮ್ಮ ಬ್ಲಾಗ್. ನೆನಪುಗಳನ್ನು ತೆರೆಯಾಗಿಸುವ ಪ್ರಯತ್ನಕ್ಕೆ ಸ್ವಾಗತವಿರಲಿ .
chitra avare
Your entry in to kannada blog is really nice thought. Go ahead..
I hope your mind river flows with new ideas.. fills the gap mind, rembers the goldern days. I wish every bay your river croses thru, will bring lush,green thick thoughts/ideas .. will boost others instinct, ignite their's inner mind.
neeviruvaga yella okay.
vijay
ವಿಜಯ್ ಅವರೇ,
ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಹರಿದು ಬರುತ್ತಿದ್ದರೆ , ಮತ್ತಷ್ಟು ನೆನಪಿನಲೆಗಳು ತೇಲಬಹುದು
ಚಿತ್ರಾ,
ಬ್ಲಾಗ್ ಪ್ರಪಂಚಕ್ಕೆ ಸ್ವಾಗತ.. ನೆನಪುಗಳೇ ಹಾಗೆ.. ಬಚ್ಚಿಟ್ಟಷ್ಟು ಬಿಚ್ಚಿಕೊಳ್ಳುತ್ತವೆ.. ಬಾಲ್ಯದ ಸವಿ ನೆನೆಪು ಸದಾ ಹಸಿರಾಗಿರಲಿ.. ಜಗಜಿತ್ ಸಿಂಗ್ ರ್ ಗಝಲ್ ಒಂದು ನನಗೆ ತುಂಬಾ ಇಷ್ಟ.. ಅದರ ಸಾಲೊಂದೇ ಸಾಕು ನಮ್ಮನ್ನೆಲ್ಲಾ ಬಾಲ್ಯಕ್ಕೆಳೆಯಲು..." वो कागज कि कश्ति वो बारिश का पानी...."
ಪ್ರಿಯ ತೇಜಸ್ವಿನಿ,
ಧನ್ಯವಾದಗಳು.
ನಿಜ, ಬಾಲ್ಯ ಕಳೆದು ಹೋಗಿದ್ದರೂ , ಬಾಲ್ಯದ ಸವಿ ನೆನಪುಗಳು ಕಳೆಯದಂತೆ ಜೋಪಾನ ಮಾಡುವ ಬಯಕೆ ನಮ್ಮೆಲ್ಲರಲ್ಲೂ .ಅಲ್ಲವೆ?ನೆನಪಿನ ಡಬ್ಬಿ ಒಂಥರಾ ಮ್ಯಾಜಿಕ್ ಬಾಕ್ಸ್ ನಂತೆ.ಮುಚ್ಚಳ ತೆಗೆದರೆ ಮುಗಿಯದಷ್ಟು ನೆನಪುಗಳು .ಆದಷ್ಟನ್ನು ಹಂಚುವ ಪ್ರಯತ್ನ ಮಾಡುತ್ತೇನೆ.
ಬರುತ್ತಿರಿ.
Post a Comment