January 14, 2009

" ಸ ರಿ ಗ ಮ ಪ ಲಿಟಲ್ ಚಾಂಪ್ "

ಎಲ್ಲರಿಗೂ ಸಂಕ್ರಮಣದ ಶುಭಾಶಯಗಳು !
ನಿನ್ನೆ ಮಂಗಳವಾರ , ಝೀ ಮರಾಠಿ ಚಾನಲ್ ನಲ್ಲಿ " ಸ ರಿ ಗ ಮ ಪ ಲಿಟಲ್ ಚಾಂಪ್ಸ್ ’ ನೋಡಿದಾಗ ಆ ಕಾರ್ಯಕ್ರಮದ ಬಗ್ಗೆ ಬರೆಯಬೇಕೆನ್ನಿಸಿತು.

ನಾನು ಟಿ ವಿ ಮುಂದೆ ಕುಳಿತುಕೊಳ್ಳುವುದು ಕೊಂಚ ಕಮ್ಮಿ . ಅದರಲ್ಲೂ ಪ್ರತಿ ಚಾನೆಲ್ ಗಳಲ್ಲೂ ಪೈಪೋಟಿಯಿಂದ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋಗಳನ್ನು ನೋಡುವುದಂತೂ ದೂರವೇ . ಅದರಲ್ಲಿನ , ನಾಟಕೀಯತೆ , ಕೊಂಕು , ತಕರಾರುಗಳಿಂದ ಬೇಸತ್ತಿದ್ದೇನೆ .

ಪುಣೆಯಲ್ಲಿಯೇ ಇದ್ದರೂ ಸಾಧಾರಣವಾಗಿ ಮರಾಠೀ ಚಾನೆಲ್ ನೋಡದ ನಾನು ( ಯಾರಿಗೂ ಹೇಳಬೇಡಿ , ರಾಜ್ ಠಾಕ್ರೆ ಪಕ್ಷದವರು ಓಡಿಸಿಬಿಟ್ಟಾರು ನನ್ನನ್ನು ) , ಆಫೀಸಿನಲ್ಲಿ ,ನೆರೆ ಹೊರೆಯಲ್ಲಿ ಈ ಕಾರ್ಯಕ್ರಮದ ಬಗೆಗಿನ , ಚರ್ಚೆಗಳು , ಕಾಮೆಂಟ್ ಗಳನ್ನು ಕೇಳಿ ಕೇಳಿ , ಅಂಥದ್ದೇನಿದೆ ಒಂದು ಸಲ ನೋಡಿಯೇ ಬಿಡುತ್ತೇನೆ ಎಂದು ಕುಳಿತವಳು ,ಈಗ ಅಂಟಿಕೊಂಡು ಬಿಟ್ಟಿದ್ದೇನೆ ! ನಾನು ತಿಂಗಳ ಹಿಂದೆ ಮೊದಲ ಬಾರಿಗೆ ನೋಡುವಾಗ ಆಗಲೇ , ಸ್ಪರ್ಧೆ ಸೆಮಿ ಫೈನಲ್ ತಲುಪಿತ್ತು.

ಇಂಥಾ ರಿಯಾಲಿಟಿ ಶೋ ಗಳಿಂದ ದೂರವುಳಿಯುವ ನನ್ನನ್ನು ಆಕರ್ಷಿಸಿದ್ದು ಈ ಕೆಲ ಅಂಶಗಳು !

೧. ಪುಟ್ಟ ಪುಟ್ಟ ಮಕ್ಕಳ ಅದ್ಭುತ ಪ್ರತಿಭೆ
೨. ಯಾವ ಹಿಂಜರಿಕೆ , ಭಯ ಇಲ್ಲದೇ ಮುಕ್ತ ವಾಗಿ ಹಾಡುವ ಮಕ್ಕಳು.
೩. ಶಾಸ್ತ್ರೀಯ ಸಂಗೀತ ಆಧಾರಿತ ಹಾಡುಗಳು ಹಾಗೂ ನಾಟ್ಯ ಸಂಗೀತ (ಸಾಧಾರಣವಾಗಿ ಹೆಚ್ಚಿನ ಮರಾಠೀ ಗೀತೆಗಳು ಶಾಸ್ತ್ರೀಯ ಸಂಗೀತಾಧಾರಿತವಾಗಿಯೆ ಇವೆ, ಹೊಸ ಹಾಡುಗಳು ಸಹ ! )
೪. ಕೊಂಕು ನುಡಿಯದ , ಚುಚ್ಚಿ ಮಾತನಾಡದ ,ಮಕ್ಕಳನ್ನು ಪ್ರೋತ್ಸಾಹಿಸಿ,ಪ್ರೀತಿಯಿಂದಲೇ ತಿದ್ದ್ದುವ ತೀರ್ಪುಗಾರರು. ( ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯರಂತೆ )

ಎಲ್ಲಕ್ಕಿಂತ ಮುಖ್ಯವಾಗಿ ಶೋದಲ್ಲಿನ ಆತ್ಮೀಯ ವಾತಾವರಣ ! ಇಲ್ಲಿ , ಕೆಲ ಹಿಂದಿ ಶೋಗಳಂತೆ , ಜಗಳ , ಸಿಟ್ಟು ನಾಟಕ ಇತ್ಯಾದಿ ಇಲ್ಲ । ಮಕ್ಕಳ ಮುಗ್ಧತೆಯನ್ನು ಕಾಪಾಡುವತ್ತ ಹೆಚ್ಚು ಲಕ್ಷ್ಯ ಕೊಡಲಾಗಿದೆ । ತುಂಬಾ ಚೆನ್ನಾಗಿ ಹಾಡಿದಾಗ ತಾವೂ ಜೊತೆಯಾಗುವ , ಪುಟ್ಟ ಸ್ಪರ್ಧಿಗಳ ಬೆನ್ನು ತಟ್ಟಿ ಪ್ರೋತ್ಸಾಹಿಸುವ ,ತಮಾಶೆ ಮಾಡುತ್ತಲೇ ತಪ್ಪನ್ನು ತಿದ್ದುವ , ಅದ್ಭುತ ವಾಗಿ ಹಾಡಿದಾಗ ಬೆರಗಾಗುವ, ತೀರ್ಪುಗಾರರಾದ ಅವಧೂತ್ ಗುಪ್ತೆ ಹಾಗೂ ವೈಶಾಲಿ ಸಾಮಂತ್ ಇಬ್ಬರೂ ಮರಾಠೀ ಯ ಜನಪ್ರಿಯ ಹಾಡುಗಾರರು. ಗುಪ್ತೆ , ಸಂಗೀತ ನಿರ್ದೇಶಕ ಕೂಡ. ತನ್ನ ಸುಂದರ ನಗುವಿನಿಂದ ಶೋ ದ ಚಮಕ್ ಅನ್ನು ಹೆಚ್ಚಿಸುವ ನಿರೂಪಕಿ ಪಲ್ಲವಿ ಜೋಶಿ ಒಬ್ಬ ಪ್ರತಿಭಾವಂತ ನಟಿ.

ಇದೀಗ ಮೆಗಾ ಫೈನಲ್ ತಲುಪುತ್ತಿರುವ ಶೋ ದಲ್ಲಿ ಒಬ್ಬರಿಗಿಂತ ಒಬ್ಬ ಸ್ಪರ್ಧಿಗಳು ಹೆಚ್ಚೆಂಬಂತಿದ್ದಾರೆ.

* ಯಾವುದೇ ಹಾಡನ್ನಾದರೂ ತನ್ನ ವಯಸ್ಸಿಗೆ ಹೊಂದಿಸಿಕೊಂಡು ಹಾಡಿ ಬೆರಗಾಗಿಸುವ ಎಂಟು ವರ್ಷದ ಪೋರಿ "ಮುಗ್ಧಾ ವೈಶಂಪಾಯನ ",
* ವಯಸ್ಸಿಗೆ ಮೀರಿದ ಸಂಗೀತ ಜ್ಞಾನ ಹಾಗೂ ಯಾವ ಅಂಜಿಕೆಯಿಲ್ಲದೇ ಬಿಂದಾಸ್ ಹಾಡುವ ರೀತಿಯಿಂದ , ಸ್ವತಃ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆಯಿಂದ ಪ್ರಶಂಸಿತಳಾದ ಒಂಭತ್ತು ವರ್ಷದ ಹುಡುಗಿ " ಕಾರ್ತೀಕಿ ಗಾಯಕವಾಡ್"
* ಯಾವ ರೀತಿಯ ಹಾಡಿಗೂ ತಾನು ರೆಡಿ ಎನ್ನುವ ಚೆಂದದ ಗೊಂಬೆ " ಆರ್ಯಾ ಅಂಬೇಕರ್ "
ಜೊತೆಗೆ ,
* ಅಪ್ಪಟ ಶಾಸ್ತ್ರೀಯ ಸಂಗೀತ ಪ್ರೇಮಿ " ಪ್ರಥಮೇಶ್ ಲಘಾಟೆ " ಹಾಗೂ
* ಹೊಸ ರೀತಿಯ ಹಾಡುಗಳ ಅನ್ವೇಷಣೆಯಲ್ಲಿರುವ " ರೋಹಿತ್ ರಾವುತ್ "

ಇವರು ಒಬ್ಬೊಬ್ಬರದ್ದೂ ಒಂದೊಂದು ಶೈಲಿ ಮನಸೆಳೆದು ಬಿಡುತ್ತದೆ ! ಪಂ। ದೀನಾನಾಥ್ ಮಂಗೇಶ್ಕರ್ , ಸವಾಯಿ ಗಂಧರ್ವ, ಕುಮಾರ್ ಗಂಧರ್ವ, ಮಾಣೀಕ್ ವರ್ಮಾ ರಂಥವರ , ಅತ್ಯಂತ ಹಳೆಯ ಹಾಡುಗಳನ್ನೂ ಹುಡುಕಿ ಅದ್ವಿತೀಯವಾಗಿ ಹಾಡುವ ಪರಿಗೆ ಬೆರಗಾಗಲೇ ಬೇಕು !
ಕನ್ನಡದ " ಎದೆ ತುಂಬಿ ಹಾಡುವೆನು " ಕಾರ್ಯಕ್ರಮದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ಮಕ್ಕಳನ್ನು ಪ್ರೋತ್ಸಾಹಿಸುವ ರೀತಿಯನ್ನು ಮೆಚ್ಚಿದ್ದ ನನಗೆ , ಮರಾಠಿಯ " ಸ ರಿ ಗ ಮ ಪ ಲಿಟಲ್ ಚಾಂಪ್ಸ್ " ಕೂಡ ಮನಸೆಳೆದಿದ್ದು ಇದೇ ಕಾರಣಕ್ಕಾಗಿ. ಇದರಲ್ಲಿ ವಾರಕ್ಕೊಮ್ಮೆ ವಿಶೇಷ ಅತಿಥಿಗಳಾಗಿ ಬರುವ ಸಂಗೀತ ದಿಗ್ಗಜರೂ ಕೂಡ ಮಕ್ಕಳ ಆತ್ಮ ವಿಶ್ವಾಸವನ್ನು ಹೆಚ್ಚಿಸುವಂತೆ ಮಾತನ್ನಡುತ್ತಾರೆಯೇ ಹೊರತು ಎಲ್ಲಿಯೂ ಕುಗ್ಗಿಸುವುದಿಲ್ಲ .
ಹಾಗಾಗಿ ಮಕ್ಕಳು ಯಾವ ರೀತಿಯ ಒತ್ತಡಕ್ಕೊಳಗಾಗದೇ , ನಿರ್ಭಯವಾಗಿ ಹಾಡನ್ನು ’ ಅನುಭವಿಸಿ’ ಭಾವಪೂರ್ವಕವಾಗಿ ಹಾಡಬಲ್ಲರು ! ಹೀಗೆ ವಿಶೇಷ ಅತಿಥಿಯಾಗಿ ಬಂದ ಶ್ರೀ ಹೃದಯನಾಥ ಮಂಗೇಶ್ಕರ್ ರಂಥ ಸಂಗೀತ ಕಾರರು , ಈ ಮಕ್ಕಳನ್ನು ತಮ್ಮ ಶಿಷ್ಯರನ್ನಾಗಿಸಿಕೊಳ್ಳುವ ಇಚ್ಚೆಯನ್ನು ವ್ಯಕ್ತ ಪಡಿಸಿದ್ದಾರೆಂದರೆ ಇವರ ಪ್ರತಿಭೆಯ ಆಳವನ್ನು ಅರಿಯಬಹುದು !

ಝೀ ಕನ್ನಡ ವಾಹಿನಿಯಲ್ಲಿಯೂ ಕೂಡ ’ ಸ ರಿ ಗ ಮ ಪ ’ ಪ್ರಸಾರವಾಗುತ್ತದೆಂದು ಕೇಳಿದ್ದೇನೆ . ಆದರೆ , ನಮ್ಮನೆಯಲ್ಲಿ ಈ ಚಾನಲ್ ಬಾರದ ಕಾರಣ ಹೆಚ್ಚಿನ ಮಾಹಿತಿಯಿಲ್ಲ .

ಎಲ್ಲಕ್ಕಿಂತ ಹೆಚ್ಚಾಗಿ ನಾನು ಮೆಚ್ಚಿದ್ದು , ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಸಂಪೂರ್ಣವಾಗಿ ಮಾತೃಭಾಷೆಯಾದ ಮರಾಠೀಯಲ್ಲಿಯೇ ಮಾತನಾಡುವುದು ! ನಿರೂಪಕಿ , ತೀರ್ಪುಗಾರರು , ಮಕ್ಕಳು ಎಲ್ಲರೂ ! ಮರಾಠೀ ಗೊತ್ತಿಲ್ಲದ ವಿಶೇಷ ತೀರ್ಪುಗಾರರು ಮಾತ್ರ ಹಿಂದಿಯಲ್ಲಿ ಮಾತನಾಡುತ್ತಾರೆ . ಇಂಗ್ಲಿಷ್ ಬಳಕೆ ಅತೀ ಕಮ್ಮಿ . ಹೀಗಾಗಿ , ಈ ಶೋ ನೋಡುವಾಗ ನಾನು ಕನ್ನಡವನ್ನು ಹುಡುಕ ಬೇಕಾದಂಥಾ ನಮ್ಮ ಕನ್ನಡ ಶೋ ಗಳನ್ನು ನೆನಪಿಸಿಕೊಂಡು ಬೇಸರ ಪಟ್ಟುಕೊಳ್ಳುತ್ತೇನೆ.

ಸಂಗೀತಕ್ಕೆ ಭಾಷೆಯ ಬೇಲಿಯಿಲ್ಲ ಅಲ್ಲವೆ ? ನೀವು ಸಂಗೀತ ಪ್ರೇಮಿಗಳಾಗಿದ್ದರೆ , ಒಮ್ಮೆ ಈ ಶೋ ನೋಡಿ ! ಇದು ಹಿಂದೀ ರಿಯಾಲಿಟಿ ಶೋ ಗಳಿಗಿಂತ ನಿಜಕ್ಕೂ ಭಿನ್ನವಾಗಿದೆ.

ಝೀ ಮರಾಠಿ ಯಲ್ಲಿ ಪ್ರತಿ ಸೋಮವಾರ ಹಾಗೂ ಮಂಗಳವಾರ ರಾತ್ರಿ ೯ .೩೦ ರಿಂದ ೧೧ ಗಂಟೆಯ ವರೆಗೆ . ಮರುಪ್ರಸಾರ ಬಹುಶಃ ರವಿವಾರ ಬೆಳಿಗ್ಗೆ ೧೦ ಹಾಗೂ ಸಂಜೆ ೬ ಕ್ಕೆ ಇದೆ ಎಂದುಕೊಂಡಿದ್ದೇನೆ। ಅಲ್ಲದೇ ಬುಧವಾರ ಮತ್ತು ಗುರುವಾರ ಮಧ್ಯಾಹ್ನ ೩ ಗಂಟೆಗೆ ಕೂಡ ಮರುಪ್ರಸಾರವಿದೆ ।

10 comments:

ತೇಜಸ್ವಿನಿ ಹೆಗಡೆ said...

ಚಿತ್ರಾ,

ಒಂದು ಕಾಲದಲ್ಲಿ ನಾನೂ ಝೀಯಲ್ಲಿ ಬರುತ್ತಿದ್ದ ಹಿಂದಿ ಸ, ರಿ, ಗ, ಮ, ಪ ಲಿಟ್ಲ್‌ಚಾಂಪ್ ಅಭಿಮಾನಿಯಾಗಿದ್ದೆ. ತುಂಬಾ ಚೆನ್ನಾಗಿಯೂ ಬರುತ್ತಿತ್ತು. ಆದರೆ ಈಗ ಮಾತ್ರ ಸಂಪೂರ್ಣವಾಗಿ ಬದಲಾಗಿದೆ. ಪಕ್ಕಾ ಕಮರ್ಶಿಯಲ್ ಆಗಿದೆ. ಪುಟ್ಟ ಪುಟ್ಟ ಮಕ್ಕಳ ಮುಗ್ಧತೆಯನ್ನು ಮರೆಸುವ ಯತ್ನದ ಜೊತೆ, ಡುಯೆಟ್ ಗಾನ ಹಾಡೂವಾಗ ಪರಸ್ಪರ ಕೈ ಕೈ ಹಿಡಿದು ಹಾವ ಭಾವ ಮಾಡುವಂತೆ ಪ್ರೇರೇಪಿಸುವುದು(ದೊಡ್ಡವರಂತೆ) ಇತ್ಯಾದಿ ಕೃತಕತೆಗಳಿಂದ ಸ ರಿ ಗ ಮ ಪ ಸೊರಗಿದೆ. ನಾನೂ ದೂರ ಸರಿದಿದ್ದೇನೆ!

ಚಿತ್ರದಲ್ಲಿರುವ ಮುದ್ದಮಕ್ಕಳ ಚಿತ್ರ ಮನೆಸೂರೆಗೊಂಡಿತು.

"ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು":)

ಸುಧೇಶ್ ಶೆಟ್ಟಿ said...

ನಾನು ಟಿ.ವಿ. ನೋಡುವುದಿಲ್ಲ. ಇನ್ನು ರಿಯಾಲಿಟಿ ಷೋಗಳ೦ತು ದೂರದ ಮಾತು. ಆದರೆ ಈ ಮಕ್ಕಳ ಪ್ರತಿಭೆ ಕ೦ಡು ತು೦ಬಾ ಸ೦ತೋಷ ಆಯಿತು. ಫೋಟೋ ನೋಡಿದರೆ ತಿಳಿಯುತ್ತದೆ ಮಕ್ಕಳ ತನ್ಮಯತೆ.

sunaath said...

ಚಿತ್ರಾ,
ಮರಾಠೀ 'ಸರಿಗಮಪ'ಇಷ್ಟು ಚೆನ್ನಾಗಿರುತ್ತದೆ ಎಂದು ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು.

Ittigecement said...

ಚಿತ್ರಾ....

ತಡವಾಗಿ ಬರುತ್ತಿದ್ದೇನೆ ಬೇಸರಿಸ ಬೇಡಿ....

ನಮ್ಮನೆಯಲ್ಲಿ ಶುಕ್ರವಾರದಿಂದ ರತ್ರಿ ನೋಡುವದು " ಸರೆಗಮಪ" ಮತ್ತು"ಸ್ಟಾರ್ ವೊಯ್ಸ್ ಒಫ್ ಇಂಡಿಯಾ"
ಕನ್ನಡವನ್ನು ನೋಡುವದು ಕಡಿಮೆ...

ಕನ್ನಡ ಝೀ ಯಲ್ಲಿ "ಸರೆಗಮಪ" ಬರ್ತಿದೆ...
ಆದರೆ ಅಲ್ಲಿ ನಡೆಯುವ ಪಕ್ಷಪಾತ ನೋಡಲಿಕ್ಕೆ ಆಗುವದಿಲ್ಲ...
ಎಳೆ ಮಕ್ಕಳು ಅದನ್ನು ಹೇಗೆ ಸಹಿಸುತ್ತಾರೋ..
ಅವರ ಮನಸ್ಸಿಗೆ ಎಂಥಹ ಪರಿಣಾಮ ಆಗುತ್ತೋ..

ಹಾಗಾಗಿ ನಾವು ನೋಡುವದನ್ನು ನಿಲ್ಲಿಸಿ ಬಿಟ್ಟಿದ್ದೇವೆ..
ನಮಗೆಲ್ಲ "ಸಹನಾ" ಮತ್ತು.. ಚೇತನಾ " ....
ಎಂಬ ಮಕ್ಕಳು ಹಾಡುವದು ಬಹಳ ಇಷ್ಟ...

ಮರಾಠಿ ನೋಡುವ ಸಾಧ್ಯತೇಯೆ ಇಲ್ಲ...

ಚಂದವಾದ ಲೇಖನ...
ಸಂಕ್ರಮಣದ ಶುಭಾಶಯಗಳು...

"ಮಲ ಮರಾಠಿ ಮಾಹಿತ್ ಆಹೆ"

ಚಿತ್ರಾ said...

ತೇಜೂ ,
ನಾನೂ ಸಹ ಹಿಂದಿಯಲ್ಲಿ ಬರುವ ವಿವಿಧ ರಿಯಾಲಿಟಿ(?) ಶೋ ಗಳನ್ನು ನೋಡಿ ,ಅವುಗಳ ಕೃತಕತೆಯಿಂದಾಗಿಯೇ ಬೇಸತ್ತು ದೂರವುಳಿದಿದ್ದೇನೆ .
ಆದರೆ, ಮರಾಠೀ ಲಿಟಲ್ ಚಾಂಪ್ಸ್ ಮಾತ್ರ ತನ್ನ ಪ್ರಾಮಾಣಿಕತೆಯಿಂದಾಗೆ ನನ್ನನ್ನು ನಿಜಕ್ಕೂ ಆಕರ್ಷಿಸಿತು.
ಶುಭಾಶಯಯಗಳಿಗಾಗಿ ಧನ್ಯವಾದ !

ಸುಧೇಶ್,
ಧನ್ಯವಾದಗಳು. ಬರುತ್ತಿರಿ.

ಸುನಾಥ್ ಕಾಕಾ,
ಮೊದಲು ನಾನೂ ಕೂಡ ಹಾಗೇ ತಿಳಿದಿದ್ದೆ .ಈಗ ಅಭಿಪ್ರಾಯವನ್ನು ಬದಲಾಯಿಸಿಕೊಂಡಿದ್ದೇನೆ.ಮೆಚ್ಚುಗೆಗೆ ಧನ್ಯವಾದಗಳು.

ಪ್ರಕಾಶ್,
ಬಾರದಿರುವುದಕ್ಕಿಂತ , ತಡವಾಗಿಯಾದರೂ ಬಂದಿದ್ದು ಖುಶಿಯ ವಿಷಯ.
ನಾನೂ ಸಹ ತೀರ್ಪುಗಾರರ ಕೊಂಕು, ಪಕ್ಷಪಾತಗಳನ್ನು ನೋಡಲಾಗದೇ ರಿಯಾಲಿಟಿ ಶೋಗಳಿಂದ ದೂರ ಸರಿದಿದ್ದೆ. ಇದೂ ಸಹ ಹಾಗೇ ಅಂದುಕೊಂಡಿದ್ದೆ. ಆದರೆ ,ಹಾಗಲ್ಲ ಎಂದು ನೋಡಿದ ನಂತರ ತಿಳಿಯಿತು.ಇದೇ ಕಾರಣಕ್ಕಾಗಿ ಈಗ ಈ ಕಾರ್ಯಕ್ರಮವನ್ನು ತಪ್ಪದೇ ನೋಡಿ ಖುಶಿಪಡುತ್ತೇನೆ.
" ತುಮ್ಹಾಲಾ ಮರಾಠೀ ಮಾಹಿತಿ ಆಹೆ ,ಹೇ ವಾಚೂನ್ ಮ್ಹಾಲಾ ಖೂಪ್ ಆನಂದ್ ಝಾಲಾ ! ಅಸಚ್ ಯೇತ್ ರಹಾ"
ಧನ್ಯವಾದಗಳು.

Rajesha said...

Sa Re Ga Ma Pa is gradually losing its popularity gradually. It has never been a talent show since last one and half year. The judges are really pathetic. They are always fighting each other. However some of the talent shows (like what u have mentioned) are still providing a very good platform for the new talents. I will suggest those peolple who are interested in these talent shows to watch "Star Singer" of Asianet Malayalam (language is not at all a barrier for any music). This is one of the best talent show at present.

Rajesh Devadiga
(Mangalore) Abu Dhabi, UAE.

Arun said...

ಒಳ್ಳೆಯ ವಿಶ್ಯಗಳನ್ ತುಂಬು ಹ್ರದಯದಿಂದ ಹೆಳುವವರೆಂದರೆ ನಮ್ಮ್ ಕನ್ನಡಿಗರು ಮಾತ್ರ, ಇದನ್ನ ತಿಳಕೂಂಡಬಿಡು ಚಿತ್ರಾ !!!
ನೀ ಹೆಳುವದು ಭಾಳ ಖರೆ ಅದss ನೊಡು !!ಇಡೀ Maharshtra ಹುಡುಕಿ ಈವೈದು ರತ್ನ ಕಂಡ ಹಿಡದಾರ!! ಎನಂತಿ ?

ಚಿತ್ರಾ said...

ರಾಜೇಶ್,
ಬ್ಲಾಗಿಗೆ ಸ್ವಾಗತ !

ನಾನು ಸಾಧಾರಣವಾಗಿ ಟ್ಯಾಲೆಂಟ್ ಶೋ / ರಿಯಾಲಿಟಿ ಶೋಗಳಿಂದ ಕೊಂಚ ದೂರವೇ .
ನಿಜ , ನೀವಂದಂತೆ ’ ಸ ರಿ ಗ ಮ ಪ " ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ . ಅದೂ ಕೇವಲ ನಾಟಕೀಯತೆ, ಜಗಳ ಇತ್ಯಾದಿ ಕೆಳ ಮಟ್ಟದ ಪಬ್ಲಿಸಿಟಿಯಿಂದಾಗಿ . ಆದರೆ ಈ " ಮರಾಠೀ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ’ ಅಂತಹದರಿಂದ ದೂರವುಳಿದಿದ್ದರಿಂದಾಗಿ ಆಕರ್ಷಿಸುತ್ತಿದೆ .
ಬರುತ್ತಿರಿ .

ದೇಶಪಾಂಡೆಯವರೇ ,

ಧನ್ಯವಾದಗಳು . ನೀವಂದಂತೆ , ಈ ಐದೂ ಮಂದಿ ಒಂದು ರೀತಿಯಲ್ಲಿ ರತ್ನಗಳೇ ಸರಿ !

Harisha - ಹರೀಶ said...

ಕೊನೆಯ ಎರಡು ವಾಕ್ಯಕ್ಕೆ ಫುಲ್ ಸ್ಟಾಪ್ ಬದಲು ಪೈಪ್ ಹಾಕಿದ್ಯಲ.. ಮರಾಠಿ ಪ್ರಭಾವನಾ?

ಚಿತ್ರಾ said...

ಹರೀಶ ,

ಅದಾ? ಎಡಿಟಿಂಗ್ ನಲ್ಲಿ ಹಿಂದಿ ಸೆಲೆಕ್ಟ್ ಆಗಿತ್ತು ಕಾಣ್ತು .
ಮತ್ತೆ , ಮರಾಠೀದಲ್ಲೂ ಫುಲ್ ಸ್ಟಾಪ್ ಇರ್ತು. ಹಿಂದಿ ಹಂಗೆ ’ ಪೈಪ್ ’ ಇರ್ತಿಲ್ಲೆ .