ವಿಸ್ಮಯಾಳ ಅಮ್ಮ ಕೆಲವೊಮ್ಮೆ, ರಾತ್ರಿ ನಿದ್ದೆ ಮಾಡಲು ಬಿಡಲಿಲ್ಲ ಬರೀ ಹಟ ಮಾಡುತ್ತಿದ್ದಳೆಂದು ಗೊಣಗುವಾಗ , ನನಗೆ ನನ್ನ ತಾಯ್ತನದ ಮೊದಲ ದಿನಗಳು ನೆನಪಾಗಿ ನಗು ಬರುತ್ತದೆ. ನಾನೂ ಕೂಡ ಹೀಗೆಯೇ ಗೊಣಗುತ್ತಿದ್ದೆನಲ್ಲವೆ?.
ರಾತ್ರಿಯೆಲ್ಲ ಮಲಗದೇ ಮಗಳು ಹಟಹಿಡಿದು ಅಳುವಾಗ ನಿದ್ರೆ ತೂಗುತ್ತಿದ್ದರೂ ಮಾಡಲಾಗದ ಸಂಕಟಕ್ಕೆ, ಸಿಟ್ಟು ಬರುತ್ತಿದ್ದರೂ ಏನೂ ಮಾಡಲಾರದ ಅಸಹಾಯಕತೆಗೆ ಕಣ್ಣೀರುಕ್ಕಿ ಹರಿದ ಹನಿಗಳು ಅಳುವ ಮಗುವಿನ ಕೆನ್ನೆಯಮೇಲೆ ಬಿದ್ದು ಅವಳ ಕಣ್ಣೀರೊಂದಿಗೆ ಕರಗಿದಾಗ, ಹಗಲಾದರೂ ಮಲಗ ಬಹುದು, ಆಗಲಾದರೂ ಚೂರು ನಿದ್ರೆ ಮಾಡುತ್ತೇನೆ ಅಂದುಕೊಂಡಿದ್ದು ಸುಳ್ಳಾದಾಗ , , ’ ಥೂ, ಯಾಕಾದರೂ ಬೇಕಿತ್ತು ಈ ತಾಯ್ತನದ ಕಷ್ಟ ! ಸಾಕಾಗಿಹೋಯ್ತು ಜೀವನ ’ ಎಂದು ಅತ್ತುಕೊಂಡಿದ್ದುಸುಳ್ಳಲ್ಲ ! ಆದರೆ ಬೆಳಿಗ್ಗೆ, ಎಣ್ಣೆ ಹಚ್ಚಿಸಿಕೊಂಡು, ಬಿಸಿ ಬಿಸಿ ನೀರಲ್ಲಿ ಮೀಯಿಸಿಕೊಂಡು ಕೆಂಪಾದ ಮೈಗೆ ಸ್ವಚ್ಚ ಬಿಳಿಬಟ್ಟೆ ಸುತ್ತಿಕೊಂಡು, ಹಣೆಗೊಂದು ಕಪ್ಪು ಬೊಟ್ಟಿಟ್ಟು ತೊಟ್ಟಿಲಲ್ಲಿ ಮುದ್ದಾಗಿ ಮಲಗಿದವಳು, ನಿದ್ದೆಯಲ್ಲಿ ನಕ್ಕಾಗ ಪ್ರೀತಿಯುಕ್ಕಿ ಹರಿದಿದ್ದೂ, ಮಡಿಲಲ್ಲಿ ಮಲಗಿಸಿಕೊಂಡು ಹಾಲೂಡುತ್ತಿರುವಾಗ, ನಡುವೆಯೇ ಹಾಲು ಕುಡಿಯುವುದನ್ನು ನಿಲ್ಲಿಸಿ, ತನ್ನ ಪುಟ್ಟ ಕೈಯಿಂದ ಅಮ್ಮನೆದೆಗೆ ಬಡಿಯುತ್ತಾ, ಮುಖನೋಡಿ ನಕ್ಕ ಮಗಳನ್ನು ನೋಡುವಾಗ ," ಈ ಕ್ಷಣ ಹೀಗೆಯೇ ಇರಬಾರದೇ ಎನಿಸಿ,ನನ್ನ ಜೀವನವೇ ಸಾರ್ಥಕವಾಯಿತೆಂದೆನಿಸಿದ್ದೂ ಸುಳ್ಳಲ್ಲ ! ಈ ತಾಯ್ತನವೇ ಹೀಗೆ !!
ನಾನು ಇಲ್ಲಿಗೆ ಬಂದಾಗ ವಿಸ್ಮಯಾ ಬರೀ ಒಂದು ತಿಂಗಳ ಶಿಶು . ಕೇವಲ , ಹಾಲುಕುಡಿದು ಮಲಗುವುದಷ್ಟೇ ಅವಳಿಗೆ ಗೊತ್ತಿದ್ದಿದ್ದು. ಈಗ ಎರಡು ತಿಂಗಳು ಪೂರೈಸುವಾಗ, ಚಟುವಟಿಕೆಗಳ ಗೂಡು ಅವಳು ! ಮುಖ ನೋಡಿ ನಗುವುದನ್ನೂ, ’ ಹಾ ’ , ’ ಹೂ’ ಎಂದು ಸುದ್ದಿ ಹೇಳುವುದನ್ನೂ, ಕೈ ಕಾಲು ಬಡಿಯುತ್ತಾ, ಆಟವಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುವ ಜಾಣತನ ಕಲಿತಿದ್ದಾಳೆ. ತನ್ನಿಷ್ಟದಂತೆ ಎಲ್ಲರನ್ನೂ ಬಾಗಿಸಲು ತಿಳಿದಿದ್ದಾಳೆ.
ಎದುರಿನಲ್ಲಿ ಕ್ಯಾಮೆರಾ ಕಂಡ ಕೂಡಲೇ ಪೋಸ್ ಕೊಡುವುದನ್ನೂ ಕಲಿತುಬಿಟ್ಟಿದ್ದಾಳೆ ! ಇನ್ನು ಅವಳ ಅಪ್ಪ ಅಮ್ಮನೋ,ಕ್ಯಾಮೆರಾ ಪ್ರಿಯರು ! ಮಗಳ ಬೆಳವಣಿಗೆಯ ಪ್ರತಿಕ್ಷಣವನ್ನೂ ಕಾಯ್ದಿಟ್ಟುಕೊಳ್ಳುವ ಬಯಕೆ ಅವರಿಗೆ ! ಸದಾ ಒಬ್ಬರು ಡಿಜಿಟಲ್ ಕ್ಯಾಮೆರಾವನ್ನೂ ,ಇನ್ನೊಬ್ಬರು ವಿಡಿಯೋಕ್ಯಾಮೆರಾವನ್ನೂ ಕಣ್ಣಿಗೆ ಅಂಟಿಸಿಕೊಂಡೇ ಇರುತ್ತಾರೆ! ನಾನಂತೂ ಆನಂದನಿಗೆ ಎಷ್ಟೋ ಸಲ ತಮಾಶೆ ಮಾಡಿದ್ದೇನೆ, ’ ಮಾರಾಯಾ , ನಡು ನಡುವೆ ಕ್ಯಾಮೆರಾ ಬದಿಗಿಟ್ಟೂ ನಿನ್ನ ಮುಖ ತೋರಿಸ್ತ ಇರು ಅವಳಿಗೆ. ಇಲ್ಲಾಂದ್ರೆ , ಅವಳಿಗೆ ಅಪ್ಪನ ಗುರುತೇ ಇರೊಲ್ಲ ನೋಡು ’ ಅಂತ .
ಕೆಲವೇ ದಿನಗಳು , ಮತ್ತೆ ಊರಿಗೆ ಹೋಗುವ ದಿನ ಹತ್ತಿರವಾದಂತೆ ನನ್ನ ಮನಸ್ಸಿನಲ್ಲೇನೋ ಕಸಿವಿಸಿ. ಈ ಮುದ್ದು ಗೊಂಬೆಯನ್ನು ಬಿಟ್ಟು ಹೋಗಬೇಕಲ್ಲ ಎಂಬ ಸಂಕಟ. ಇನ್ನವಳು , ಭಾರತಕ್ಕೆ ಬರುವಷ್ಟರಲ್ಲಿ ಸುಮಾರು ದೊಡ್ಡವಳಾಗಿರುತ್ತಾಳೆ, ಗುರುತು ನೋಡಿ,ಅಪ್ಪ- ಅಮ್ಮನ ಮಡಿಲಲ್ಲೇಅಡಗಿಕೊಳ್ಳುವುದನ್ನು ಕಲಿತಿರುತ್ತಾಳೆ, ಒಂದೂವರೆ ತಿಂಗಳು ಎತ್ತಿ ಆಡಿಸಿದ ಈ ಅತ್ತೆಯನ್ನೂ ಮರೆತಿರುತ್ತಾಳೆ ಎಂಬ ಯೋಚನೆಯೇ ಕಣ್ಣಲ್ಲಿ ನೀರು ತರುತ್ತದೆ. ಫೋನ್ ಮಾಡಿದಾಗೆಲ್ಲ ’ ಅಮ್ಮಾ ಪ್ಲೀಸ್ ವಿಸ್ಮಯಾ ನ ಕರ್ಕೊಂಡು ಬಾರೇ’ ಎನ್ನುವ ಸಿರಿ , ’ ಚಿತ್ರಕ್ಕಾ, ಅಣ್ಣಂಗೆ, ಅತ್ತಿಗೇಗೆ ಪೂಸಿ ಹೊಡೆದು ಅವಳನ್ನ ನಿನ್ಜೊತೆ ಕರಕೊಂಡೇ ಬಾರೇ.. ’ ಎಂದ ಆಶಾಳ ಬೇಡಿಕೆಗಳು ನನ್ನದೇ ಒಳದನಿಯಂತೆನಿಸಿಬಿಡುತ್ತವೆ. ಆದರೆ , ಅದಕ್ಕೇನೂ ಮಾಡಲು ಸಾಧ್ಯವಿಲ್ಲ ಅಲ್ಲವೆ?
ಇಷ್ಟು ದಿನ ,ನನ್ನ ಬ್ಲಾಗ್ ಮರಿಯನ್ನೂ ಮಾತನಾಡಿಸಿರಲಿಲ್ಲ. ಹೇಗೂ ಒಂದು ವರ್ಷವಾಗಿದೆ, ಓರಗೆಯವರೊಡನೆ ಆಟವಾಡಿಕೊಂಡಿರುತ್ತಾಳೆಂಬ ಭರವಸೆಯಿಂದ ನಿಮ್ಮೊಡನೆ ಬಿಟ್ಟಿದ್ದೆ. ಮನೆಗೆ ಮರಳಿದ ಮೇಲೆ ಅವಳನ್ನೆತ್ತಿಕೊಳ್ಳಬೇಕು.
ಹಂ.. ಅಂತೂ ಈ ವಿಸ್ಮಯ ಲೋಕದಿಂದ ನನ್ನ ಗೂಡಿಗೆ ಮರಳುತ್ತೇನೆ ಸದ್ಯದಲ್ಲೇ.
( ಚಂದದ ಫೋಟೋಕ್ಕಾಗಿ ಆನಂದ ಮತ್ತು ವಿಸ್ಮಯಾರಿಗೆ ಧನ್ಯವಾದಗಳು )
12 comments:
ಚಿತ್ರಕ್ಕಾ...
ಆಗಲೇ ಹೋಪ ದಿನನೂ ಬಂದೋತಾ?
ನಿಮ್ಮೆಲ್ಲರ ಮುದ್ದಿನ ‘ವಿಸ್ಮಯ’ಪುಟ್ಟಿಯ ಬಗ್ಗೆ ಚೆಂದದ ಬರಹ. ಅಮ್ಮನಾದ ಹೊತ್ತನ್ನು ನೆನಪಿಸುವ ಬರಹಕ್ಕೆ ವಂದನೆ.
ಚಿತ್ರಾ,
ಬಹಳ ದಿನಗಳ ನ೦ತರ ನನ್ನ ಬ್ಲಾಗಿಗೆ ಬ೦ದಿದ್ದೀರಿ. ಸ೦ತೋಷ. ಮುದ್ದು ಮಗುವಿನ ಫೋಟೋ ದೊ೦ದಿಗೆ ಒ೦ದು ಆಪ್ತವೆನಿಸುವ ಬರಹವಿತ್ತು, ಮಕ್ಕಳ ಮುಗ್ಧ ಮನಸಿನ ಚಿತ್ರಣದ ಜೊತೆಜೊತೆಗೆ ನಿಮ್ಮ ತಾಯ್ತನದ ದಿನಗಳ ಅನುಭವವನ್ನೂ ಹ೦ಚಿಕೊ೦ಡಿದ್ದೀರಿ. ನಮ್ಮನ್ನು ಭಾವಲೋಕಕ್ಕೆ ಒಯ್ಯುವ ಈ ಪುಟ್ಟಮಕ್ಕಳೇ ಒ೦ದು ವಿಸ್ಮಯ ಅಲ್ಲವೇ ?
ವಿಸ್ಮಯ ಪುಟ್ಟಿ ತುಂಬಾ ಕ್ಯೂಟ್ ಇದಾಳೆ!. ಅಲ್ಲಿಂದ ವಾಪಸ್ ಬರೋಕೆ ಮುಂಚೆ ನನ್ನದೊಂದು ಪುಟ್ಟ ಹಾಯ್ ಹೇಳಿಬಿಡಿ :)
ಶಾಂತಲಾ,
ಹೌದೇ, ದಿನ ಕಳೆದಿದ್ದೇ ಗೊತಾಯ್ದಿಲ್ಲೆ !ಈ ಪುಟ್ಟಿ ಜೊತೆಗೆ ಇದ್ದೂ ಇದ್ದೂ,ತಾರೀಖು, ದಿನ, ಎಲ್ಲ ಮರೆತಾಂಗೆ ಅಗೋಗಿತ್ತು. ಈಗ ಮತ್ತೆ ನೆನಪು ಮಾಡ್ಕ್ಯತ್ತ ಇದ್ದಿ.ಹೊರಡ ಮೊದಲು ಮಾತಾಡ್ತಿ ಒಂದ್ಸಲ.
ಮತ್ತೆ,ಬರಹ ಮೆಚ್ಚಿದ್ದಕ್ಕೆ ಥ್ಯಾಂಕ್ಸ್
ಪರಾಂಜಪೆಯವರೇ,
ಮೆಚ್ಚಿದ್ದಕ್ಕೆ, ಪ್ರೋತ್ಸಾಹಕ್ಕೆ ಧನ್ಯವಾದಗಳು.ಈ ತಾಯ್ತನದ ಅನುಭವಗಳು ಹಂಚಿಕೊಂಡಷ್ಟೂ ಮುಗಿಯದೆ, ನೆನಪಿಸಿಕೊಳ್ಳುವುದೇ ಮುದವೆನಿಸಿಬಿಡುತ್ತವೆ ನೋಡಿ !
ಉಮಿ,
ನಿಮ್ಮ ಪುಟ್ಟ ಹಾಯ್ ಅನ್ನು ವಿಸ್ಮಯಾ ಗೆ ಹೇಳಿದ್ದೇನೆ. ’ ಕ್ಯೂಟ್’ ಎಂದು ಹೊಗಳಿದ್ದಕ್ಕೆ ಅವಳು ನಿಮಗೆ ಮುದ್ದಾದ ಥ್ಯಾಂಕ್ಸ್ ಹೇಳಿದ್ದಾಳೆ !
ಚಿತ್ರಾ,
ಪುಟ್ಟ ಮಕ್ಕಳಿಂದ ಸಿಗುವ ಸುಖ ಬೇರೆಲ್ಲೂ ದೊರೆಯದು, ಅಲ್ಲವೆ?
ಚಿತ್ರಾ ಅವರೇ...ತು೦ಬಾ ದಿನಗಳಿ೦ದ ಬ್ಲಾಗಿನಲ್ಲಿ ಬರೆಯದಿದ್ದುದನ್ನು ಕ೦ಡು ಬಿಡುವಿರಲಿಲ್ಲವೇನೋ ಅ೦ದುಕೊ೦ಡಿದ್ದೆ. ’ವಿಸ್ಮಯ’ ಲೋಕದಲ್ಲಿ ಇದ್ದೀರೆ೦ದು ತಿಳಿದು ಸ೦ತೋಷವಾಯಿತು....
ಕ್ಯೂಟ್ ಆಗಿದ್ದಾಳೆ ಪುಟ್ಟಿ.....
ನಿಮ್ಮ ತಾಯ್ತನದ ಅನುಭವಗಳನ್ನು ತು೦ಬಾ ಚೆನ್ನಾಗಿ ಹೇಳಿದ್ದೀರಿ ನಮಗೆ.... ಓದಿ ವಿಸ್ಮಯವಾಯಿತು....
ಚಿತ್ರಾ ಮೇಡಮ್,
ಆಹಾ...ಕೊನೆಗೂ ಬಂದಿರಲ್ಲಾ...ಎಲ್ಲೋಹೋಗಿಬಿಟ್ಟಿರಲ್ಲ ಅಂದುಕೊಂಡಿದ್ದೆ. ನೀವೂ ನೋಡಿದರೆ ವಿಸ್ಮಯಳ ವಿಸ್ಮಯಗಳನ್ನು ನೋಡಲು ಹೋಗಿದ್ದೀರಿ...
ತಾಯ್ತನ ಅನುಭವ ಎಷ್ಟು ಹಂಚಿಕೊಂಡರೂ ಮುಗಿಯದು ಅಲ್ಲವೇ....
ಫೋಟೋದಲ್ಲಿನ ವಿಸ್ಮಯಳ ಕಣ್ಣುಗಳು ಕಾಣದ ವಿಸ್ಮಯವನ್ನೇ ಸೂಚಿಸುತ್ತಿರುವಂತಿದೆಯೆಲ್ಲಾ....
ಧನ್ಯವಾದಗಳು...
hi chitra ji...ur writing style have something diffrent from others when i reading ur article its feels like u r talking with us...its so nice..& give my big hug to our sweet VISMAYA..THANX..
ವಿಸ್ಮಯ ಪುಟ್ಟಿಯ ಕುರಿತಾಗಿ,ಅಮ್ಮನ ಅನನ್ಯ ಅನುಭೂತಿ ಕುರಿತಾಗಿ ಸುಂದರ ಬರಹ. ಬಹಳ ಹಿಡಿಸಿತು..
-ಧರಿತ್ರಿ
ಚಿತ್ರಾ
ನಿಮ್ಮ ಮರಳಿ ಗೂಡಿಗೆ ನೋಡುವಾಗ ಈ ವಿಸ್ಮಯ ಲೋಕವನ್ನು ಓದದೇ ಬಿಟ್ಟಿದ್ದು ಗೊತ್ತಾಗಿ, ಮೊದಲು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ.
ನಿಮ್ಮ ವಿಸ್ಮಯಳ ವಿವರ ಓದಿ ಆಸ್ಟ್ರೇಲಿಯಾದಲ್ಲಿರುವ ನನ್ನ ಪುಟ್ಟ ಮೊಮ್ಮಗ ನೆನಪಾಯಿತು.ಮಕ್ಕಳ ಬಾಲ್ಯವನ್ನು enjoy ಮಾಡೋದಕ್ಕೂ ಒಂದು ಮನಸ್ಥಿತಿ ಬೇಕಲ್ಲವೇ ?ತಾಳ್ಮೆ, ಸಂಯಮ, ಸ್ವಾರ್ಥತ್ಯಾಗ ಇಲ್ಲದಿದ್ದರೆ ಆ ಸಂತಸವನ್ನು ಸವಿಯಲಾಗದು.ಸುಂದರ ಬರಹ.
ಸುನಾಥ್ ಕಾಕಾ, ಸುಧೇಶ್,ಧರಿತ್ರಿ, ಚಂದ್ರಕ್ಕ, ಶಿವೂ, ನಾಝ್ ,
ನಿಮ್ಮೆಲ್ಲರ ಪ್ರೀತಿ-ವಿಶ್ವಾಸಗಳಿಗೆ ನಾನು ಆಭಾರಿಯಾಗಿದ್ದೇನೆ.
Post a Comment