July 31, 2009

ಮರೆಯಲಾಗದ ದಿನ - ಭಾಗ 3

ಬೆಳಗಾಯಿತು, ಆಫೀಸಿನ ಹುಡುಗನೊಬ್ಬನಿಗೆ ಫೋನ್ ಮಾಡಿದ ಮಹೇಶ್ ನಮ್ಮ ಬಿಲ್ಡಿಂಗಿಗೆ ಕುಡಿಯುವ ನೀರನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಅಷ್ಟರಲ್ಲೆ , ಅಲ್ಲಿನ ನಮ್ಮ ಮೇಲಿನ ಮನೆಯ ಜಯಂತ್ ಫೋನ್ ಮಾಡಿ , ನೀರು ಬೆಳಗಿನ ಜಾವದಷ್ಟೊತ್ತಿಗೆ ಇಳಿಯಿತೆಂದೂ ಸದ್ಯಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಹೇಳಿದಾಗ ಸ್ವಲ್ಪ ನಿರಾಳವೆನಿಸಿತು. ಹತ್ತು ಗಂಟೆಯ ಹೊತ್ತಿಗೆ ಆ ಮನೆಗೆ ಹೋಗಿ ಪರಿಸ್ಥಿತಿಯನ್ನು ನೋಡಿಬರುವುದೆಂದು ನಿರ್ಧಾರ ಮಾಡಿದೆವು.

ಸಿರಿ ಹಾಗೂ ಜಯಾಳನ್ನು ಈ ಮನೆಯಲ್ಲೆ ಬಿಟ್ಟು ನಾವಿಬ್ಬರೂ ಅಲ್ಲಿಗೆ ಹೋದೆವು. ಆಗ ಅಲ್ಲಿ ಕಂಡ ದೃಶ್ಯ ಮಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ರಸ್ತೆಯಿಡೀ ಕೆಸರು , ಕಸಗಳಿಂದ ತುಂಬಿತ್ತು. ಪ್ರಕೃತಿಯ ಕರಾಳ ನರ್ತನದ ಪಳೆಯುಳಿಕೆಗಳು ಕಣ್ಣೆದುರು! ಆದರೆ, ಹಿಂದಿನ ದಿನವಷ್ಟೇ ರೌದ್ರ ರೂಪದಿಂದ ಭೋರ್ಗರೆಯುತ್ತಿದ್ದ ಪವನಾ, ಇಂದು ನೋಡಿದರೆ ಏನೂ ಆಗಲಿಲ್ಲವೆಂಬಂತೆ ಶಾಂತವಾಗಿ ಹರಿಯುತ್ತಿದ್ದಳು. ರಸ್ತೆಯಲ್ಲಿ , ಕಾಂಪೌಂಡಿನೊಳಗೆ ಹೆಜ್ಜೆಯಿಟ್ಟರೆ, ಅರ್ಧ ಅಡಿಗಳಷ್ಟು ಕೆಸರಿನಲ್ಲಿ ಕಾಲು ಹುಗಿಯುತ್ತಿತ್ತು. ಜಾರದಂತೆ ಪ್ರಯಾಸ ಪಟ್ಟು ಮನೆಯ ಬಾಗಿಲವರೆಗೆ ತಲುಪಿದೆವು. ಅಷ್ಟೊತ್ತಿಗೆ ಅಲ್ಲಿಗೆ ಬಿಲ್ಡಿಂಗ್ ನ ಉಳಿದ ಮನೆಗಳವರು ಬಂದರು.

" ವೈನಿ, ನಾವು ಒಮ್ಮೆ ಬಾಗಿಲು ತೆಗೆದು ಒಳಗೇನಾಗಿದೆ ಎಂದು ನೋಡುವ ವರೆಗೆ ನೀವಿಲ್ಲಿ ಬರಬೇಡಿ " ಎಂದು ನನ್ನನ್ನು ಆಚೆಯೇ ನಿಲ್ಲಿಸಿದ ಜಯಂತ್ ಹಾಗೂ ಸಂಜಯ್, ಮಹೇಶ್ ರೊಡನೆ ಮನೆಯ ಬೀಗ ತೆಗೆದರು. ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರೆದು ಕೊಳ್ಳುತ್ತಲೇ ಇಲ್ಲ. ಆಮೇಲೆ ಮೂವರೂ ಒಟ್ಟಾಗಿ ಜೋರಾಗಿ ಒದ್ದಾಗ ಅಂತೂ ತೆರೆಯಿತು. ನೋಡಿದರೆ, ಬಾಗಿಲಿಗೆ ಅಡ್ಡವಾಗಿ ಖುರ್ಚಿಯೊಂದು ಕುಳಿತಿತ್ತು. ಅರ್ಧ ಅಡಿ ಕೆಸರಿನಲ್ಲಿ ಹುಗಿದು ಹೋಗಿದ್ದರಿಂದ ಸುಲಭವಾಗಿ ಅಲುಗಾಡುವಂತಿರಲಿಲ್ಲ . ಒಳಗೆ ಕಂಡ ನೋಟವಂತೂ ನನ್ನ ಹೊಟ್ಟೆಯಲ್ಲಿ ಸಂಕಟ ತರುತ್ತಿತ್ತು. ನಾನು ಆಸಕ್ತಿಯಿಂದ ಜೋಡಿಸಿಟ್ಟ ಹೂದಾನಿಗಳು ಕೆಸರಿನಲ್ಲಿ ಹೊರಳುತ್ತಿದ್ದವು. ಗೋಡೆಯ ಪಕ್ಕದಲ್ಲಿದ್ದ ದಿವಾನ್ ಕಾಟ್, ಹಾಲ್ ನ ನಡುವೆ ಕುಳಿತಿತ್ತು. ಅಡಿಗೆ ಮನೆಯಲ್ಲಿ ಫ್ರಿಜ್ ನೆಲಕ್ಕೆ ಮಲಗಿತ್ತು. ಬಾಲ್ಕನಿಯಲ್ಲಿ ವಾಷಿಂಗ್ ಮಷಿನ್ ಸೊಟ್ಟಗೆ ನಿಂತಿತ್ತು , ಬೆಡ್ ರೂಮಿನಲ್ಲಿ ಮಂಚ , ಹಾಸಿಗೆಗಳು ಪೂರ್ಣವಾಗಿ ಕೆಸರಿನಿಂದ ಮುಚ್ಚಿಹೋಗಿದ್ದವು. ಸಾಧಾರಣವಾಗಿ ಅಲುಗಾಡಿಸಲಾಗದ , ಸ್ಟೋರೇಜ್ ಟೈಪ್ ನ ನಮ್ಮ ದೊಡ್ಡ ಮಂಚ ತೇಲಿ ಬಂದು ಕಪಾಟಿಗೆ ಅಡ್ಡವಾಗಿ ನಿಂತಿತ್ತು ಎಂದರೆ ರಾತ್ರಿ ಅಲ್ಲಿ ನೀರಿನ ಒತ್ತಡ ಎಷ್ಟಿರಬಹುದು ಎಂದು ಊಹಿಸಬಹುದು.

ಗಂಡಸರೆಲ್ಲ ಕೂಡಿಕೊಂಡು ಬಕೆಟ್ ಗಳಲ್ಲಿ ಕೆಸರು ತುಂಬಿ ಹೊರಗೆ ಚೆಲ್ಲ ತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ನಮ್ಮ ಕಂಪನಿಯಿಂದ ಬಂದ ೪ ಕೆಲಸಗಾರರೂ ಜೊತೆಗೆ ಸೇರಿಕೊಂಡರು . ಎಲ್ಲೆಡೆಯೂ ಕೆಸರು! ನೆಲದಲ್ಲಿ, ಕಪಾಟುಗಳಲ್ಲಿ, ಅಡಿಗೆ ಮನೆಯ ಪಾತ್ರೆಗಳು, ಫ್ರಿಜ್ , ಮಂಚಗಳು .. ಹೀಗೇ ಎಲ್ಲವೂ ಕೆಸರುಮಯ ! ಸದ್ಯಕ್ಕೆ , ನಾವು ಮನೆಯಿಂದಾಚೆ ಹೋಗುವ ಮೊದಲು ಎಲ್ಲ ಕಿಟಕಿ- ಬಾಗಿಲುಗಳನ್ನು ಭದ್ರ ಪಡಿಸಿದ್ದರಿಂದ ಕಸ ಕಡ್ಡಿಗಳು, ಹಾವು ಹರಣೆಗಳು ಮನೆಯೊಳಗೆ ಹೊಕ್ಕಿರಲಿಲ್ಲ . ಬರೀ ಕೆಸರು ಮಾತ್ರವಿತ್ತು.

ಒಂದು ಹಂತದ ಸ್ವಚ್ಛತಾ ಕಾರ್ಯಕ್ರಮ ಮುಗಿದಾಗ ಸುಮಾರು ೩ ಗಂಟೆಯಾಗಿತ್ತು. ಮೇಲಿನ ಮನೆಯಲ್ಲಿ ಊಟ ಕಾಯುತ್ತಿತ್ತು. ಅದಾದ ಮೇಲೆ , ಹಾಳಾದ ವಸ್ತುಗಳನ್ನು ಎಸೆಯುವ ಕೆಲಸ ! ೫-೬ ಹಾಸಿಗೆಗಳು , ಚಾಪೆ, ಅದೆಷ್ಟೋ ಬಟ್ಟೆಗಳು, ಬಯಸಿ ತಂದಿಟ್ಟುಕೊಂಡ ಇನ್ನಿತರ ವಸ್ತುಗಳು ಹೊರಗೆ ರಸ್ತೆಯ ತುದಿಯಲ್ಲಿದ್ದ ದೊಡ್ಡ ಕಸದ ತೊಟ್ಟಿ ಸೇರಿದವು. ಆ ಕಸದತೊಟ್ಟಿಯಂತೂ ಆಗಲೇ ತುಂಬಿ ಹೋಗಿತ್ತು. ಜನರು , ಮಳೆಗಾಲಕ್ಕೆಂದು ಶೇಖರಿಸಿಟ್ಟುಕೊಂಡಿದ್ದ ಚೀಲಗಟ್ಟಲೇ ಕಾಳು ಕಡಿಗಳು , ಅಕ್ಕಿ -ಗೋಧಿಗಳು ಕೆಸರು ನೀರಿನಲ್ಲಿ ನೆನೆದು ಯಾತಕ್ಕೂ ಬಾರದಂತಾಗಿ ಭಾರವಾದ ಮನಸ್ಸಿನಿಂದ ಕಸದ ತೊಟ್ಟಿಗೆ ಹಾಕುತ್ತಿದ್ದರು ! ಅದನ್ನು ನೋಡುವಾಗ ಅತೀವ ಸಂಕಟ ! ಅದಕ್ಕಾಗಿ ಎಷ್ಟು ಕಷ್ಟ ಪಟ್ಟಿರಬಹುದು , ಬೆವರು ಹರಿಸಿ ದುಡಿದ ಹಣ , ಹೀಗೆ ಚೆಲ್ಲುವಾಗ ಅವರಿಗೆಷ್ಟು ಹೊಟ್ಟೆ ಉರಿಯುತ್ತಿರಬಹುದು !

ಅಂತೂ ಇಂತೂ ಸಂಜೆಯಾಗುವಷ್ಟರಲ್ಲಿ ಮನೆ ಒಂದು ರೂಪಕ್ಕೆ ಬಂತು. ಆದರೆ ತಕ್ಷಣ ಅಲ್ಲಿ ಬಂದು ಉಳಿಯುವುದು ಮಾತ್ರ ಸಾಧ್ಯವಿರಲಿಲ್ಲ. ರಾತ್ರಿಯಿಡೀ ,ಮನೆಯೊಳಗೆ ಸುಮಾರು ಮೂರು ಅಡಿಗಳೆತ್ತರಕ್ಕೆ ನಿಂತ ನೀರಿನಿಂದಾಗಿ ಗೋಡೆಗಳು ನೆನೆದು ಹೋಗಿದ್ದವು. ಮನೆಯೊಳಗೆ ಒಂಥರಾ ವಾಸನೆ ಬರುತ್ತಿತ್ತು. ನನ್ನ ಮೂಗಿನಲ್ಲಿ ತುಂಬಿಕೊಂಡ ಆ ವಾಸನೆ ಮುಂದಿನ ಎಷ್ಟೋ ತಿಂಗಳುಗಳ ಕಾಲ ನನಗೆ ವಾಕರಿಕೆ ತರುತ್ತಿತ್ತು. ನಂತರದ ದಿನಗಳಲ್ಲಿ ನಮ್ಮ ವಸ್ತುಗಳನ್ನೆಲ್ಲ ಚಿಕ್ಕಪ್ಪನ ಮನೆಗೆ ಸಾಗಿಸಿ ಅಲ್ಲಿಯೆ ಇದ್ದೆವು. ಗೋಡೆಗಳು ಒಣಗಲು ಸುಮಾರು ೨ ತಿಂಗಳೇ ಹಿಡಿಯಿತು . ಪ್ರತಿ ದಿನ ಬೆಳಿಗ್ಗೆ ಮಹೇಶ್ ಅಲ್ಲಿ ಹೋಗಿ ಫ್ಯಾನ್ ಹಾಕಿ ಆಫೀಸಿಗೆ ಹೋಗುತ್ತಿದರು. ಸಂಜೆ ಮನೆಗೆ ಬರುವ ಮೊದಲು ಆಫ್ ಮಾಡಿ ಬರುತ್ತಿದ್ದರು. ಕೆಲ ದಿನಗಳ ನಂತರ ಆ ಜವಾಬ್ದಾರಿಯನ್ನು ನಮ್ಮ ಪಕ್ಕದ ಮನೆಯವರೇ ವಹಿಸಿಕೊಂಡರು ! ಗೋಡೆಗಳು ಒಣಗಿ, ಮನೆಯನ್ನು ಒಮ್ಮೆ ಕ್ರಿಮಿ ನಾಶಕಗಳಿಂದ ಶುದ್ಧಗೊಳಿಸಿ, ಪೇಯಿಂಟ್ ಮಾಡಿ , ಹಾಸಿಗೆ , ಮಂಚ , ಇತ್ಯಾದಿಗಳನ್ನು ಪುನಃ ಖರೀದಿಸಿ, ಮನೆಯನ್ನು ಸಜ್ಜುಗೊಳಿಸಿ , ನಾವು ಅಲ್ಲಿಗೆ ಉಳಿಯಲು ಹಿಂದುರಿಗಿದಾಗ ೬ ತಿಂಗಳುಗಳೇ ಕಳೆದಿದ್ದವು. ದಿನಗಳಲ್ಲಿ ನಮಗೆ ನಮ್ಮ ನೆರೆಹೊರೆಯವರು , ಬಂಧು - ಮಿತ್ರರು ಮಾಡಿದ ಸಹಾಯ ಎಂದಿಗೂ ಮರೆಯಲಾಗದ್ದು.

ಇವೆಲ್ಲ ಆದಮೇಲೆ , ನಮ್ಮ ಪರಿಚಯದ ಹಿರಿಯರೊಬ್ಬರು ಹೇಳಿದ್ದರು " ಆಗೋದೆಲ್ಲ ಒಳ್ಳೇದಕ್ಕೇ ಕಣಮ್ಮಾ. ನಿಮ್ಮ ಮನೆಗೆ ನುಗ್ಗಿದ ನೀರು ನಿಮ್ಮ ಕಷ್ಟಗಳನ್ನು , ಯಾವುದೇ ರೀತಿಯ ದುರಾದೃಷ್ಟವನ್ನೂ ಕೊಚ್ಚಿಕೊಂಡು ಹೋಯ್ತೂಂತ ತಿಳೀರಿ " ಎಂದು. ಅದೂ ಒಂಥರಾ ನಿಜವೇ ಎನಿಸಿದೆ. ಅದೇ ವರ್ಷದ ಡಿಸೆಂಬರ್ ನಲ್ಲಿ ನಾವು ಹೊಸಾ ಮನೆ ಬುಕ್ ಮಾಡಿ ೨೦೦೭ ನಲ್ಲಿ ಈಗಿರುವ ದೊಡ್ಡ ಮನೆಗೆ ಬಂದೆವು. ಮೊದಲು ಗ್ರೌಂಡ್ ಫ್ಲೋರ್ ನಲ್ಲಿದ್ದವರು ಈಗ ಟಾಪ್ ಫ್ಲೋರ್ ಗೆ ಬಂದಿದ್ದೇವೆ. ಮುಳುಗುವ ಸಾಧ್ಯತೆಯಂತೂ ಇಲ್ಲಎನ್ನುವುದೊಂದು ಸಮಾಧಾನ !

ಇವೆಲ್ಲ ನಡೆದು ೪ ವರ್ಷಗಳೇ ಕಳೆದವು. ಆದರೆ , ಪ್ರತಿ ಜುಲೈ ೨೬ ಕ್ಕೆ ನನ್ನ ಕಣ್ಣೆದುರು ಅಂದಿನ ಚಿತ್ರಗಳು ಹಾದುಹೋಗುತ್ತವೆ, ನನ್ನ ಕೈ ಕಾಲುಗಳು ತಣ್ಣಗಾಗಿ ಬಿಡುತ್ತವೆ. ಅಂದು ನನ್ನಲ್ಲಿ ತುಂಬಿದ್ದ ಹುಚ್ಚು ಧೈರ್ಯವನ್ನು ನೆನೆದಾಗ ಅದು ನಾನೇನಾ ಎಂಬ ಅನುಮಾನ ಬಂದುಬಿಡುತ್ತದೆ. ಈಗ ಟಿವಿ ಯಲ್ಲಿ ಪ್ರವಾಹದ ಚಿತ್ರಗಳನ್ನು ನೋಡುವಾಗ , ಮನಸ್ಸು ಮೊದಲಿಗಿಂತ ಹೆಚ್ಚು ಸ್ಪಂದಿಸುತ್ತದೆ! ಸಂತ್ರಸ್ತರ ನೋವು ನಮ್ಮದೇ ಎನಿಸಿಬಿಡುತ್ತದೆ !

ಪ್ರಕೃತಿಯ ಅಟ್ಟಹಾಸ ನಮ್ಮನ್ನು ಭಯಭೀತ ಗೊಳಿಸಿದಂತೆಯೇ, ನಮ್ಮ ಮುಂದೆ ಅನೇಕ ಮಾನವೀಯತೆಯ ಮುಖಗಳನ್ನೂ ತೆರೆದಿಟ್ಟಿತ್ತು ! ದಿನನಿತ್ಯದ ಜೀವನದಲ್ಲಿ , ಪರಿಚಯ ಇದ್ದರೂ ಇಲ್ಲದಂತೆ ಕೇವಲ ' ಹಾಯ್ , ಹಲೋ' ಗಳಿಗಷ್ಟೇ ಸೀಮಿತಗೊಳಿಸಿ ಕೊಂಡ ಜನರು , ಆ ಕರಾಳ ದಿನದಂದು ಗುರುತು ಪರಿಚಯವಿಲ್ಲದವರಿಗೂ ಸಹ , ತಮ್ಮ ಕೈಲಾದ ಸಹಾಯ ಮಾಡಿದರು. ಕೆಲವರು, ತೊಯ್ದು ತೊಪ್ಪೆಯಾದವರಿಗೆ , ಬಿಸಿ ಬಿಸಿ ಚಹಾ ಮಾಡಿಕೊಟ್ಟರೆ, ಇನ್ನೂ ಕೆಲವರು ತಮ್ಮ ಮನೆಯಲ್ಲಿ ರಾತ್ರಿ ಕಳೆಯಲು ಅನುವು ಮಾಡಿಕೊಟ್ಟರು .

ಏನಿದ್ದರೂ , ಎಷ್ಟೇ ಮುಂದುವರಿದರೂ, ಅದೆಷ್ಟೇ ಪ್ರಗತಿ ಸಾಧಿಸಿದರೂ, ಪ್ರಕೃತಿಯ ಮುಂದೆ ನಾವೆಷ್ಟು ಕ್ಷುದ್ರರು ಎಂಬ ನನ್ನ ನಂಬಿಕೆಯನ್ನು ಈ ಅನುಭವ ಇನ್ನಷ್ಟು ಗಟ್ಟಿಗೊಳಿಸಿದೆ.

17 comments:

ಸುಧೇಶ್ ಶೆಟ್ಟಿ said...

ಈ ಭಾಗದಲ್ಲಿ ಬ೦ದಿರುವುದು ತು೦ಬಾ ಭೀಕರವಾಗಿದೆ.... ನಮ್ಮ ಗೂಡು ಅ೦ತ ಸ್ಥಿತಿಗೆ ತಲುಪಿದರೆ ಯಾರಿಗಾದರೂ ತು೦ಬಾ ನೋವಾದೀತು... ಅದೆಷ್ಟು ಬಡವರು ಕಷ್ಟದಿ೦ದ ಪರಿತಪಿಸಿದರೋ....

ನಿಮ್ಮ ನೆರೆಹೊರೆಯವರ ಮಾನವೀಯತೆ ತು೦ಬಾ ಹಿಡಿಸಿತು ಚಿತ್ರಾ ಅವರೇ...

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಚಿತ್ರಕ್ಕಾ, ಎಂತಾ ಬರಿಯವ್ವು ಹೇಳೇ ಗೊತ್ತಾಗ್ತಾ ಇಲ್ಲೆ... ನಿಂಗ ಆ ಸಂದರ್ಭದಲ್ಲಿ ಎಷ್ಟು ತ್ರಾಸು ಅನುಭವಿಸಿಕ್ಕು ಹೇಳಿ ಕಲ್ಪನೆ ಮಾಡ್ಕ್ಯಳಲೂ ಆಗ್ತಾ ಇಲ್ಲೆ.. :(
ನೀನು ಈ ಬರಹಗಳಲ್ಲಿ ನಿನ್ನ ನೋವು, ಹತಾಶೆಗಳನ್ನ ಸ್ಪಷ್ಟವಾಗಿ ಬಿಂಬಿಸಿದ್ದು ಮಾತ್ರವಲ್ಲ - ಓದುಗರಿಗೆ ಒಳ್ಳೆಯ ಸಂದೇಶ ಕೂಡಾ ಕೊಟ್ಟಿದ್ದೆ.

shivu.k said...

ಚಿತ್ರಾ ಮೇಡಮ್,

ಪ್ರಕೃತಿಯ ವಿಕೋಪ ನಡೆಯುವಾಗ ಒಂದು ರೀತಿಯ ತಲ್ಲಣವಾದರೇ ನಂತರದ್ದು ಮತ್ತಷ್ಟು ಘೋರವೆನಿಸುತ್ತೆ ನಿಮ್ಮ ಅನುಭವವನ್ನು ಓದಿದಾಗ. ನೀವು ಹೇಳುತ್ತಿರುವ ಎಲ್ಲಾ ಚಿತ್ರಗಳು ಕಣ್ಣಿಗೆ ಕಟ್ಟಿದಂತಾಗಿ ದಿಗಿಲುಂಟಾಗುತ್ತದೆ.
ಹಿರಿಯರು ಹೇಳಿದಂತೇ ಆಗುವುದೆಲ್ಲಾ ಒಳ್ಳೆಯದಕ್ಕೆ ಅಂತ ನಾನಂತೂ ಹೇಳುವುದಿಲ್ಲ. ಏಕೆಂದರೇ ಆ ಸ್ಥಾನದಲ್ಲಿದ್ದು ಅನುಭವಿಸಿದರೆ ಯಾರಿಗೂ ಬೇಡವೆನಿಸುತ್ತದೆ. ನಿಮ್ಮ ನೆರೆಹೊರೆಯವರ ಸಹಕಾರ ದೊಡ್ಡದು.

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕಾ...
ಓದಿದ್ರೇನೇ ಕಷ್ಟಾಗ್ತು. ಭೀಕರ ಅನುಭವ. ಹೆಚ್ಚಿನ ಮಾತೇ ತೋಚುತ್ತಿಲ್ಲ. ನಿನ್ನ ಅನುಭವವೆಲ್ಲ ಸಿನೇಮಾ ದೃಶ್ಯಗಳಂತೆ ಮನದಲ್ಲಿ ಹಾದುಹೋಗಿ ಓದಿ ಮುಗಿವಾಗ ಅದು ನಿನ್ನದೇ ಅನುಭವವೆನ್ನುವ ವಾಸ್ತವದಡಿಯಲ್ಲಿ ಕಣ್ಣೊಳಗೆ ಜಿನುಗು.

ಜಲನಯನ said...

ಚಿತ್ರಾ, ನಿಮ್ಮ ಕಥೆ ಕೇಳಿ ನನಗೆ ೧೯೮೯ ರ ನಮ್ಮ ಮಣಿಪುರದ ಪ್ರವಾಹದ ಅನುಭವ ನೆನಪಾಯ್ತು...ಅದೂ...ವಾರ ಪೂರ್ತಿ ಜಿನುಗು ಜಿನುಗೆಂದು ಸುರಿಯುತ್ತಲೇ ಇದ್ದ ಮಳೆ..ದಪ್ಪ ದಪ್ಪ ಹನಿಗಳ ಬೀಸಲಾರಂಭಿಸಿದಾಗ, ಅದು ದಪ್ಪ ಹನಿ..ಸಧ್ಯ ಇನ್ನು ಮಳೆ ಒಂದೆರಡು ಘಂಟೆ ನಂತರ ನಿಲ್ಲುತ್ತೆ ಎಂದುಕೊಂಡದ್ದು ಸಂಜೆಯಾಗುತ್ತಾ ಬಂದರೂ ಅದೇ ಭರಾಟೆಯಿಂದ ಮುಂದುವರೆದಾಗ...ರಾತ್ರಿಯೂ ಮುಂದುವರೆದು..ನಿದ್ದೆ ಹತ್ತದಾದಾಗ...... ಇನ್ನು...ಪ್ರವಾಹ ಗ್ಯಾರಂಟಿ ಎನಿಸಿದಾಗ...ಹೊರಗಡೆ ನೀರು ಏರಲಾರಂಭಿಸಿದಾಗ...ಕೋಳಿ ನಿದ್ದೆ ಆಗಾಗ..ಮತ್ತೆ ಗುಡುಗು-ಸಿಡಿಲು ಬಡಿದೆಬ್ಬಿಸುತ್ತಿತ್ತು. ಅದು ಇಂಚಿಂಚು ಪ್ರವಾಹದ ಅನುಭವ...
ಇನ್ನು ನದಿ ಪಾತ್ರದಲ್ಲಿರುವವರ ಪ್ರತಿವರ್ಷದ ಗೋಳು ಹೇಗಿರಬೇಕು...ಅಥವಾ..ಅವರಿಗೆ experience ಆಗಿಬಿಟ್ಟಿರುತ್ತದೆಯೇ...???
ಚನ್ನಾಗಿದೆ ಲೇಖನ, ಬಣ್ಣನೆ....

Ittigecement said...

ಚಿತ್ರಾ....

ಕಷ್ಟಪಟ್ಟು ಬೆವರು ಹರಿಸಿ ತಂದ ದವಸ, ಧಾನ್ಯಗಳು ಕಸವಾಯಿತಲ್ಲ...
ಬಟ್ಟೆ ಬರೆ ಫರ್ನೀಚರ್ ಎಲ್ಲ ನೀರು ಮಯವಾಗಿ..
ಮನೆಯಲ್ಲಿ ಒಂಥರಾ ವಾಸನೆ...

ಗೋಡೆಯ ಡ್ಯಾಂಪ್‍ನೆಸ್....

ನಿಮ್ಮ ಪ್ಲಂಬಿಂಗ್ ಲೈನ್ ಸರಿ ಇದ್ದವಾ...?

ನಿಮ್ಮ ಬವಣೆಗಳನ್ನು ನಾವು ಅನುಭವಿಸಿದಂತಾಯಿತು....

ಆದರೆ ಎಲ್ಲಕಡೆ ನಿಮ್ಮ ನಿಮ್ಮ ಪಾಸಿಟಿವ್ ಅಪ್ರೋಚ್ ಇಷ್ಟಾವಾಯಿತು....
ಅದೊಂದೇ ನಮ್ಮ ಬದುಕನ್ನು ಬದುಕಿಸಬಲ್ಲದು....

ಸುಂದರವಾದ ಬರಹ...

ನನ್ನಾಕೆಯ, ನನ್ನ ಅಭಿನಂದನೆಗಳು...

PARAANJAPE K.N. said...

ಪ್ರಕೃತಿಯ ವಿಕಟ ಅಟ್ಟಹಾಸದೆದುರು ಹುಲುಮಾನವರು ಏನು ಅಲ್ಲ. ನೀವು ಹೇಳಿದ ಘಟನೆ ನಿಜವಾಗಿಯೂ ಭೀಕರ ವಾದುದು.

sunaath said...

ಚಿತ್ರಾ,
ಇಂತಹ ಭೀಕರ ಅನುಭವಗಳನ್ನು ನೆನೆಸಿಕೊಳ್ಳುವದೂ ಭೀಕರವೇ.
ನೆರೆಹೊರೆಯವರ ಮಾನವೀಯ ಅನುಕಂಪವೇ ಇಲ್ಲಿ ಸಮಾಧಾನದ ಸಂಗತಿ.

ಚಿತ್ರಾ said...

ಸುಧೇಶ್,
ನಿಜ. ಆ ಸ್ಥಿತಿ, ನೋವು ಯಾರಿಗೂ ಬೇಡ. ಆ ಸಮಯದಲ್ಲಿ , ನಮ್ಮ ನೆರೆಹೊರೆಯವರ ಸಹಾಯವಿಲ್ಲದಿದ್ದರೆ ಏನಾಗುತ್ತಿತ್ತೋ ! ಅವರ ಸಹಾಯವನ್ನು ನಾನು ಎಂದಿಗೂ ಮರೆಯಲಾರೆ !

ಚಿತ್ರಾ said...

ಪೂರ್ಣಿಮಾ,
ಈಗ ಅದನ್ನೆಲ್ಲಾ ನೆನಪು ಮಾಡ್ಕ್ಯಂದ್ರೆ , ಅಳುನೆ ಬಂದು ಬಿಡ್ತು. ಜೀವನ , ಇಂಥದ್ದೂ ಒಂದು ಅನುಭವ ಇರಲಿ ಹೇಳಿ ನಂಗೆ ಕೊಟ್ಟಿತ್ತೇನ ! ಬರುತ್ತಾ ಇರು.

ಚಿತ್ರಾ said...

ಶಿವೂ,
ನೀವಂದಿದ್ದು ನಿಜ. ನಾವು ಅನುಭವಿಸಿದ್ದು ಇನ್ಯಾರಿಗೂ ಬರುವುದು ಬೇಡ ಎಂದು ಹಾರೈಸುತ್ತೇನೆ. ಆ ಸಂಕಟ, ಗಾಬರಿ, ದುಃಖ ... ಯಾರಿಗೂ ಬೇಡ ! ಹಾಗೆಯೇ, ನಮ್ಮ ನೆರೆಕೆರೆಯವರಿಗೆ , ೬ ತಿಂಗಳುಗಳು ನೆಮ್ಮದಿಯಿಂದ ಉಳಿಯಲು ಅನುವು ಮಾಡಿಕೊಟ್ಟ ' ಚಿಕ್ಕಪ್ಪ" ನವರಿಗೆ, ನಾವು ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು.

ಚಿತ್ರಾ said...

ಶಾಂತಲಾ,
ಮತ್ತೆ ಸ್ವಾಗತ !
ಬರಹವನ್ನ ಮೆಚ್ಚಿದ್ದಕ್ಕೆ , ನನ್ನ ಅನುಭವವನ್ನು ನಿನ್ನದೆಂದುಕೊಂಡು ಸಂಕಟ ಪಟ್ಟಿದ್ದಕ್ಕೆ, ಥ್ಯಾಂಕ್ಸ್. ನೀನು ಈ ಕಡೆ ಬರ್ದೇ ಇದ್ದಾಗ ಇನ್ನೂ ಸುಮಾರು ಬರಹಗಳನ್ನ ಪೋಸ್ಟ್ ಮಾಡಿದ್ದಿ. ಓದು . ನಿನ್ನ ಅಭಿಪ್ರಾಯ ತಿಳಿಸು.

ಚಿತ್ರಾ said...
This comment has been removed by the author.
ಚಿತ್ರಾ said...

ಪ್ರಕಾಶಣ್ಣಾ,
ಮೆಚ್ಚಿದ್ದಕ್ಕೆ ಧನ್ಯವಾದಗಳು. ಪಾಸಿಟಿವ್ ಅಪ್ರೋಚ್ ಇದ್ದರೆ ಮಾತ್ರ ಬದುಕುವುದು ಸಾಧ್ಯ ಎನ್ನುವುದು ನನ್ನ ನಂಬಿಕೆ !
ಅಂದಿನ ಆ ಕೆಸರುಮಯ ನೋಟ ನನ್ನ ಕಣ್ಣಿಂದ ಮರೆಯಾಗುವುದೇ ಇಲ್ಲ ! ಪುಣ್ಯಕ್ಕೆ, plumbing ಲೈನ್ ಏನೂ ಆಗಲಿಲ್ಲ ! ಗೋಡೆಯ damp ness ಬಿಟ್ಟರೆ ಮನೆಯ ಕಟ್ಟೋಣಕ್ಕೆ ಯಾವ ತೊಂದರೆಯೂ ಬರಲಿಲ್ಲ . ಅದೇ ಸಮಾಧಾನ !

ಚಿತ್ರಾ said...

ಪರಾಂಜಪೆಯವರೇ
ಧನ್ಯವಾದಗಳು , ನಾವೇನೂ ಅಲ್ಲ ಎಂದು ಗೊತ್ತಿದ್ದೂ ' ನಮ್ಮಿಂದಲೇ ಎಲ್ಲ " ಎಂದು ಬೀಗುವ ಮಾನವರು ನಾವಲ್ಲವೇ?

ಚಿತ್ರಾ said...

ಆಜಾದ್,
ನಿಮಗೂ ಪ್ರವಾಹದ ಅನುಭವ ಇದೆಯೆಂದಾಯಿತು. ನೀವು ಹಂಚಿಕೊಂಡಿದ್ದು, ಪ್ರವಾಹದ ಮಾರನೆ ವರ್ಷ ನಾವು ಅನುಭವಿಸಿದ್ದು , ಒಂದೇ ರೀತಿಯಿದೆ ಸುಮಾರು. ಮರು ವರ್ಷ ಮಳೆಗಾಲದಲ್ಲಿ ನಮಗೆ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ ! ಮನದೊಳಗೆ ಭೀತಿ. ನಾನಂತೂ ಮಳೆ ಜೋರಾಗಿ ಸುರಿಯುತ್ತಿರುವ ದಿನಗಳಲ್ಲಿ ರಾತ್ರಿಯ ಬಹಳಷ್ಟು ವೇಳೆಯನ್ನು ಬಾಲ್ಕನಿಯಿಂದಾಚೆ ನದಿಯನ್ನು ನೋಡುತ್ತಲೇ ಕಳೆಯುತ್ತಿದ್ದೆ. ೨ ಸೂಟ್ ಕೇಸ್ ಅಂತೂ ರೆಡಿಯಾಗೆ ಇರುತ್ತಿತ್ತು !
ನೀವಂದಂತೆ , ನದೀ ಪಾತ್ರದಲ್ಲಿ ಮನೆ ಕಟ್ಟಿಕೊಂಡು ಇರುವವರಿಗೆ ಬಹುಶಃ ಅಭ್ಯಾಸ ವಾಗಿಬಿಟ್ಟಿರುತ್ತದೆಯೇನೊ !

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಒಂದು ಅಪರೂಪದ ರೋಮಾಂಚಕ ಸತ್ಯ ಘಟನೆಯನ್ನು ಕಣ್ಣೆದುರಿಗೇ ನೋಡಿದಂತೆನಿಸಿತು. ಭಾಗ-೨ ಹಾಗೂ ೩ ನ್ನು ಒಂದೇ ಉಸುರಿಗೆ ಓದಿದೆ. ಅಬ್ಬಾ! ನಾನಂತೂ ಖಂಡಿತ ನಿನ್ನಷ್ಟು ಧೈರ್ಯಶಾಲಿಯಲ್ಲಪ್ಪ!! ಪ್ರವಾಹ, ರಭಸದಿಂದ ಕೂಡಿರುವ ನೀರೆಂದರೆ ಎಲ್ಲಿದ ಭಯ ನನಗೆ. ನಿಜಕ್ಕೂ ನಿನ್ನ ಹಾಗೂ ನಿನ್ನ ಮನೆಯವರ ಧೈರ್ಯ, ಸಾಹಸ ಪ್ರಶಂಸನೀಯ.