ಭಾಷೆ ಒಂದೇ ಆದರೂ ಆಡುಭಾಷೆ ಊರಿಂದ ಊರಿಗೆ ಬದಲಾಗುತ್ತದೆ ಅಲ್ಲವೆ? ಅದರಲ್ಲೂ ಉತ್ತರ ಕರ್ನಾಟಕ ಮತ್ತು ಮೈಸೂರು ಸೀಮೆಯ ಕನ್ನಡಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ ! ಇದು ಬಹಳಷ್ಟು ತಮಾಶೆಯ ಸಂದರ್ಭಗಳನ್ನು, ಗಲಿಬಿಲಿಯನ್ನು ಸೃಷ್ಟಿಸುತ್ತದೆ.
ಉದಾಹರಣೆಗೆ, ಬೆಂಗಳೂರಿನವರೊಬ್ಬರು ಧಾರವಾಡದ ತಮ್ಮ ಗೆಳೆಯನೊಬ್ಬನ ಮನೆಗೆ ಹೋಗಿದ್ದರಂತೆ. ಬಾಗಿಲು ತೆಗೆದ ಗೆಳೆಯನ ಹೆಂಡತಿ "ಅವರಿಲ್ರೀ ಹೊರಗೆ ಹೊಗ್ಯಾರ. ನೀವು ಹಿಂದಾಗಡೀಂದ ಬರ್ರೀ " ಎಂದು ಬಾಗಿಲು ಮುಚ್ಚಿದಳಂತೆ. ಗೆಳೆಯನಿಲ್ಲದಿದ್ದಾಗ ಈಕೆ ’ ಹಿಂದುಗಡೆ’ ಯಿಂದ ಬಾ ಅನ್ನುತ್ತಾಳಲ್ಲ ಎಂದು ಆತ ಗಲಿಬಿಲಿಗೊಂಡರಂತೆ. " ಆಮೇಲೆ " ಬನ್ನಿ ಎನ್ನಲು ಆಕೆ "ಹಿಂದಾಗಡೀಂದ " ಬರ್ರಿ ಎಂದಿದ್ದು ಅವರಿಗೆ ತಿಳಿದಾಗ ಎಷ್ಟು ನಕ್ಕರೋ !
ಅದೇ ರೀತಿ , ಉತ್ತರ ಕರ್ನಾಟಕದವರೂ ಮೈಸೂರು ಕಡೆಯ ಒಬ್ಬರೂ ಮಾತನಾಡುವಾಗ ಒಬ್ಬರನ್ನೊಬ್ಬರು ಭಾಷೆಯ ವಿಷಯವಾಗಿ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ ! ಮೈಸೂರಿನವರು ಉತ್ತರಕರ್ನಾಟಕದವರಿಗೆ " ಏನ್ರೀ? ನೀವು ಬೀಡಿ ಸಿಗರೇಟು ಸೇದೋದು ಹ್ಯಾಗೆ? ಅದೇನು ನೀರೆ? ಬಾವಿಯಿಂದ ಸೇದೋ ತರ ಸೇದೋಕೆ ? " ಎಂದು ಕೇಳಿದರೆ , " ಅಲ್ರೀ , ಮತ್ತ , ನೀವು ಬೀಡಿ ಸಿಗರೇಟು ಕುಡ್ಯೋದು ಅಂತೀರೀ ,ಗಂಟಲಾ ಸುಡೋದಿಲ್ಲೇನ್ರಿ ? ಅದು ಹ್ಯಾಂಗ್ರೀ ಮತ್ತ? ಎಂದು ಇವರು ಪ್ರಶ್ನೆ ಎಸೆದರಂತೆ.
" ಬಸ್ಸು 'ಹತ್ತಿ ' ಸಾಯೋದು ಹೇಗೆ ಎಂದು ಮೈಸೂರಿನವರು ತಮಾಷೆ ಮಾಡಿದರೆ ,, " ನಿಮ್ಮ ಕಡೆ ಲಾರಿ "ಹರಿದು" ಸಾಯೋದು ಹ್ಯಾಂಗ ನೀವೇ ಹೇಳ್ರೀ " ಎಂದು ಧಾರವಾಡದವರು ಕೇಳಿದರಂತೆ !
ಇಂತಹಾ ಬೇಕಷ್ಟು ಘಟನೆಗಳು ಇವೆ ಅಲ್ಲವೆ?
ನಾನು ಹಾಸ್ಟೆಲ್ ನಲ್ಲಿದ್ದಾಗ ನನ್ನ ರೂಮ್ ಮೇಟ್ ಒಬ್ಬಳು ಉತ್ತರ ಕರ್ನಾಟಕದವಳಿದ್ದಳು. ಕುಷ್ಟಗಿ ಅವಳ ಊರು. ಒಮ್ಮೆ ರಜೆಯಿಂದ ಮರಳಿ ಹಾಸ್ಟೆಲ್ ಗೆ ಬಂದವಳು ನನಗೆ " ಏಯ್ ಚಿತ್ರಾ, ಭಾಳ ತಿಂಡಿ ಆಗ್ಲಿಕ್ಕೆ ಹತ್ತೇದೆ ! ಹೇನು ಗೀನು ಆಗ್ಯಾವೊ ಏನೋ ತಿಳೀವಲ್ದು ನೋಡು ! ಎನ್ನುತ್ತಾ ತಲೆ ಕೆರೆದುಕೊಳ್ಳ ತೊಡಗಿದಳು . ತಿಂಡಿಗೂ ಹೇನಿಗೂ ಸಂಬಂಧ ತಿಳಿಯದೇ ನಾನು ಕಕ್ಕಾಬಿಕ್ಕಿಯಾದೆ ! ಮುಖದಲ್ಲಿ ಗೊಂದಲವನ್ನು ನೋಡಿ ನಾನು ಆ ಭಾಷೆಗೆ ಹೊಸಬಳೆಂದು ಅರ್ಥ ಮಾಡಿಕೊಂಡ ಅವಳು .. " ತಿಂಡಿ ಅಂದ್ರೆ ತುರೀಕೆ ನೇ! " ಎಂದು ನನಗೆ ತಿಳಿಸಿ ಹೇಳಿದಾಗ ನನಗೆ ನಗುವೋ ನಗು !! ಆಮೇಲಿಂದ ಎಷ್ಟೋ ದಿನಗಳವರೆಗೂ ನನಗೆ ಯಾರಾದರೂ ತಿಂಡಿಗೆ ಬಾರೆ ಎಂದು ಕರೆದಾಗೆಲ್ಲ ನಗು ಬಂದು ಬಿಡುತ್ತಿತ್ತು .
ಬಹಳ ಹಿಂದೆ ನಮ್ಮ ಪರಿಚಯದವರೊಬ್ಬರು ಇಂತಹ ಕೆಲ ತಮಾಶೆಗಳನ್ನು ಹೇಳುತ್ತಿದ್ದರು. ಒಂದುಸಲ ಅವರು ಅಂಕೋಲ ಹತ್ತಿರದ ಹಳ್ಳಿಯಲ್ಲಿ ಅವರ ಸಂಬಂಧಿಕರ ಮನೆಗೆ ಹೋಗಿದ್ದರಂತೆ.ಆ ಮನೆಗೆ ಕೆಲಸಕ್ಕೆ ಬರುವ ಹಾಲಕ್ಕಿ ಹೆಂಗಸು ತನ್ನ ಸಣ್ಣ ಮಗುವನ್ನೂ ಕರೆ ತರುತ್ತಿದ್ದಳಂತೆ. ಒಂದು ದಿನ ಬೆಳಿಗ್ಗೆ ಆಕೆ ಅಂಗಳ ಗುಡಿಸುತ್ತಿದ್ದಾಗ ಅವಳ ಮಗ ಅಲ್ಲಿಯೇ ಶೌಚಕ್ಕೆ ಕುಳಿತ.ಅದನ್ನು ನೋಡಿ ಗಾಬರಿಯಾದ ಹೆಂಗಸು ’ ಯೇ ಮಗ್ವೇ, ಯೋಳು ಯೋಳು ! ಇಲ್ಲಿ ಅಂಗಳದಾಗೆಲ್ಲ ಹೇಲುಕಾಗ ! ಒಡೇದೀರು ಕಂಡ್ರೆ ಬಾಯ್ ಹಾಕ್ತ್ರು ! ಮುಂಚೆ ಯೋಳು ನೀ ಅಲ್ಲಿಂದ , ಒಡೆದೀರು ಬಾಯ್ ಹಾಕೂದ್ರೊಳ್ಗೆ" ಎಂದು ಗದರಿಸುವಾಗ ಅಲ್ಲೆ ಜಗುಲಿಯಲ್ಲಿ ಕುಳಿತಿದ್ದ ಇವರಿಗೆ ಕಸಿವಿಸಿಯಾಗತೊಡಗಿತಂತೆ. ಆ ಬದಿಯ ಒಕ್ಕಲು ಮಕ್ಕಳ ಭಾಷೆಯಲ್ಲಿ ’ ಬಾಯ್ ಹಾಕೂದು " ಎಂದರೆ ಬಯ್ಯುವುದು ಎಂದರ್ಥ ! ಆದರೆ , ಹೊಸಬರಾದ ಇವರಿಗೆ ಏನಾಗಿರಬೇಡ !
ಹೀಗೆ " ನಮ್ ಕನ್ನಡ ಬಾಸೆಯ " ಬಗ್ಗೆ ಬರೆಯುತ್ತಾ ಹೋದರೆ ಇನ್ನೂ ಬಹಳಷ್ಟು ಸಂದರ್ಭಗಳು ಇವೆ .. ಇನ್ನೊಂದು ಕಂತಿನಲ್ಲಿ ಬರೆಯುತ್ತೇನೆ .
22 comments:
ಚಿತ್ರಕ್ಕ,
ನಕ್ಕೂ ನಕ್ಕೂ ಸಾಕಾತು ನೋಡು :) ಅದ್ರಲ್ಲೂ ಕೋನೇ ಸಾಲುಗಳನ್ನು ನೋಡಿದಾಗಂತೂ ಹೊಟ್ಟೆ ಹುಣ್ಣು ಆಗೋಹಾಂಗೆ ನಕ್ಕೆ :) ಇಂಥದ್ದೇ ಒಂದು ಅನುಭವ ನಂಗೆ ದಟ್ಸ್ಕನ್ನಡದಲ್ಲಿ ಶಿರಸಿ ಭವನ ಕಾಲಂ ಬರೆಯುವಾಗಲೂ ಆಗಿತ್ತು. ನಾನು ನಮ್ಮ ಕಡೆಯ "ಶಿರಾ" (ಈ ಕಡೆಗೆ ಕೇಸರಿಬಾತ್ ಅಂತಾರೆ) ತಯಾರಿಕೆ ವಿವರಿಸಿದ್ದೆ. ನಮ್ಮ ಕಡೆ ಅನ್ನದಿಂದ ತಯಾರಿಸುವ ಸಿಹಿ ತಿಂಡಿಗೆ ಕೇಸರಿ ಬಾತ್ ಅಂದರೆ ಈ ಕಡೆ ಅದನ್ನು ಮಾಡೋದೇ ಇಲ್ಲಾ. ಇನ್ನು ಕೆಲವು ಕಡೆ ಶಿರಾ ಅಂದರೆ ತಲೆ ಎಂದರ್ಥ. ಇಂತಹ ಹಲವಾರ್ಥಗಳಿಂದ ನನ್ನ ಸಿಹಿತಿಂಡಿ ಮಾತ್ರ ಅಪಾರ್ಥವಾಗಿ ಹೋಗಿತ್ತು :)
ಚಿತ್ರಾ,
ಭಾಷೆಯ ಆಭಾಸ ಚೆನ್ನಾಗಿ ಮೂಡಿದೆ!
ನಿಜಲಿಂಗಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ, ಜತ್ತಿಯವರು ಒಮ್ಮೆ ಅವರನ್ನು ಕಾಣಲು ಹೋಗಿದ್ದರು. ಇಬ್ಬರೂ ಒಂದೇ ಸೋಫಾದಲ್ಲಿ ಬದಿಬದಿಗೆ ಕುಳಿತಿದ್ದಾರೆ. ಜತ್ತಿಯವರ ಮಾತಿಗೆ, ನಿಜಲಿಂಗಪ್ಪನವರು ಗೋಣು ಹಾಕುತ್ತ ‘ಸರಿ,ಸರಿ’ ಎನ್ನುತ್ತಿದ್ದಾರೆ. ಜತ್ತಿಯವರು ಸರಿದೂ, ಸರಿದೂ ಸೋಫಾದ ತುದಿಗೇ ಬಂದರು. "ಇನ್ನ ಸರಿಯಾಕ ಜಾಗ ಉಳದಿಲ್ರಿ" ಎಂದರಂತೆ!
ಚಿತ್ರ ಮೇಡಮ್,
ವಿವಿಧ ಪ್ರಾಂತ್ರ್ಯಗಳ ಕನ್ನಡ ಭಾಷೆಗಳು ನಿಜಕ್ಕೂ ನಗು ತರಿಸುತ್ತವೆ.
ನನ್ನ ಶ್ರೀಮತಿ[ಅರಸಿಕೆರೆಯವರು]ಬಟ್ಟೆ ಒಗೆಯುವುದು ಅನ್ನುವುದಕ್ಕೆ ಬಟ್ಟೆ ತೊಳೆಯುವುದು ಅನ್ನುತ್ತಾಳೆ. ನಾನು ಅದಕ್ಕೆ ಹಾಗಾದರೆ ಕೈಕಾಲುಗಳನ್ನು ಒಗೆಯೋದ ಅಂತ ಕಾಲೆಳೆಯುತ್ತಿರುತ್ತೇನೆ.
ಇವೆಲ್ಲಾ ಬಲು ಮಜವಿರುತ್ತೆ. ಅಲ್ವಾ...
ಚಿತ್ರಾ...
ಮರದ ಮೇಲೆ ಇದ್ದ ಒಬ್ಬನನ್ನು ನೋಡಿ ಇನ್ನೊಬ್ಬ...ಕೇಳಿದ್ನಂತೆ...
" ಏನ್ ಮಾಡಾಕ್ ಹತ್ತಿಯೆಲೆ..?...?"
" ಮರ ಇಳಿಯಾಕೆ... ಹತ್ತೇನ್ರೀ.."
ಅಂದನಂತೆ...
ಮರ ಇಳಿಯಲಿಕ್ಕೆ ಅಂತ ಹತ್ತಿದ್ದಾನಂತೆ...!
ನವೀರಾದ ಹಾಸ್ಯ...
ಸೊಗಸಾದ ನಿರೂಪಣೆ.... ಮಸ್ತ್ ಆಗಿದೆ...
ನಮಗೆಲ್ಲ ನಗಿಸಿದ್ದಕ್ಕೆ ಧನ್ಯವಾದಗಳು....
ಚಿತ್ರಕ್ಕಾ, ನಕ್ಕೂ ನಕ್ಕೂ ಸಾಕಾತು.. ಪ್ರತಿಯೊಂದು ಸಣ್ಣ ವಿಷಯವನ್ನೂ ಅದು ಹ್ಯಾಂಗೆ ಹಾಸ್ಯಮಯವಾಗಿ ಬರೀತ್ಯೇ ಮಾರಾಯ್ತಿ! ನಿನ್ನ ಹಾಸ್ಯಪ್ರಜ್ಞೆಗೆ ಸಲಾಂ!!
ಚಿತ್ರಕ್ಕಾ,
ಇಂತಹಾ ಹಲವಾರು ಘಟನೆಗಳು ನಿಮ್ಮ ಪೋಸ್ಟ್ ಒದುವಾಗ ನನಗೂ ನೆನಪಾಯಿತು.ಅದನ್ನೆಲ್ಲಾ ಬರೆಯಬೇಕೆನಿಸುತ್ತಿದೆ.
ಬರೆದರೆ "ಕಲ್ಪನೆಚೌರ್ಯದ" ಆಪಾದನೆ ಹೊರಿಸಬೇಡಿ.
ಚಿತ್ರಾ,
ನವೀರಾದ ಹಾಸ್ಯದೊಂದಿಗೆ ನಿಮ್ಮ ನಿರೂಪಣೆ ಚೆನ್ನಾಗಿತ್ತು....
ಕೊನೆ ಸಾಲುಗಳು ತುಂಬ ನಗು ತರಿಸಿದವು....
ಚಿತ್ರಾ ಮೇಡಂ,
ನಕ್ಕು ನಕ್ಕು ಸುಸ್ತಾಯ್ತು, ನಮ್ಮ ಭಾಷೇನೆ ಹಾಗೆ, ಹಲವಾರು ಅರ್ಥ ವೈವಿದ್ಯತೆ ಇದೆ.
ಹೀಗೆ ನಗಿಸ್ತ ಇರಿ
eshtu vaividyathe alva nam kannada bhaasheli... lekhana nagu tharisithu....
ಚಿತ್ರಾ ಮೇಡಮ್, ಹೌದು, ನಮ್ಮ ಕನ್ನಡದಲ್ಲಿಯೇ ಎಷ್ಟೊಂದು ವೈವಿಧ್ಯ. ಒಂದು ಪ್ರಾಂತ್ಯದವರು ಇನ್ನೊಂದಕ್ಕೆ ಹೋದಾಗ ಈ ಭಾಷಾ ವ್ಯತಾಸ ತುಂಬಾ ತಮಾಷೆ ಪ್ರಸಂಗಗಳನ್ನು ಸೃಷ್ಟಿಸುತ್ತದೆ.
ನಮ್ಮ (ಮಲೆನಾಡು, ಕರಾವಳಿ) ಕಡೆ ಊಟದ plateಗೆ 'ಬಟ್ಟಲು', ಲೋಟಕ್ಕೆ 'ತಟ್ಟೆ' ಎನ್ನುತ್ತೇವೆ. ಬೆಂಗಳೂರು ಮೈಸೂರು ಕಡೆ ಈ ಅರ್ಥಗಳು ಉಲ್ಟಾ ಆಗುತ್ತದೆ. ನಾನು ಮೊದಲು ಬೆಂಗಳೂರಿಗೆ ಬಂದಾಗ "ಒಂದು ತಾಸು" ಎಂದರೆ ಇಲ್ಲಿಯವರಿಗೆ ಅರ್ಥವೇ ಆಗುತ್ತಿರಲಿಲ್ಲ. "ಒಂದು ಗಂಟೆ" ಎಂದರೆ ಮಾತ್ರ ಅರ್ಥವಾಗುತ್ತಿತ್ತು. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ "ಅಡ್ಡಿಲ್ಲ" ಕೇಳಿ ನಗುತ್ತಿದ್ದರು. ಆಮೇಲೆ ಗೊತ್ತಾಯಿತು, "ಪರವಾಗಿಲ್ಲ" ಎನ್ನಬೇಕು ಇಲ್ಲಿ ಎಂದು.
ತೇಜೂ,
ಈ ಶಿರಾ ಮತ್ತೆ ಕೇಸರಿ ಭಾತ್ ಕತೆಯಿಂದ ನಂಗೂ ಸುಮಾರು ಸಲ ತಲೆ ಕೆಡುವಂತಾಗಿತ್ತು. ಹಾಗಾಗಿ, ಈಗ ಆಯಾ ಪ್ರಾಂತದವರ ಹತ್ತಿರ ಅವರ ರೀತಿಯಲ್ಲಿ ಹೇಳದು ಅಭ್ಯಾಸ ಮಾಡಿದ್ದಿ.
ಕಾಕಾ,
ನೀವು ಹೇಳಿದ ಪ್ರಸಂಗವೂ ತುಂಬಾ ಚೆನ್ನಾಗಿದೆ. ನಕ್ಕು ಸುಸ್ತಾಯ್ತು !
ಶಿವೂ,
ನಾವೂ ಕೂಡ ಬಟ್ಟೆ "ತೊಳೀತಿವಿ" ಕಣ್ರೀ ! ಒಗೆದುಬಿಟ್ರೆ ಮತ್ತೆ ಮತ್ತೆ ಹೊಸಾದು ತಂದು ಕೊಡೋಕಾಗಲ್ಲ ಅಂತ ನಮ್ ಯಜಮಾನ್ರು ಹೇಳಿದಾರೆ !!
ಪ್ರಕಾಶಣ್ಣ ,
ನೀ ಹೇಳಿದ ಪ್ರಸಂಗ , ಬ್ಲಾಗ್ ಪೋಸ್ಟ್ ಮಾಡಿದಾ ಮೇಲೆ ನೆನಪಾತು. ಮುಂದಿನ ಸಲ ಹಾಕನ ಅಂದ್ಕತಾ ಇದ್ದಿದ್ದಿ . ನೀ ಬರೆದೆ. ಒಳ್ಳೇದಾತು !
ನಕ್ಕಿದ್ದಕ್ಕೆ ಥ್ಯಾಂಕ್ಸು !
ಮೂರ್ತಿಯವರೇ,
ಮೊದಲು ನೀವು ಬರೆಯಿರಿ . ಓದಿದ ಮೇಲೆ " ಕಲ್ಪನಾ ಚೌರ್ಯ" ದ ಆಪಾದನೆ ಹಾಕುತ್ತೇನೆ ! ಮೊದಲೇ ಹೇಗೆ ಹೇಳುವುದು ಅಲ್ಲವೇ?
ಹರೀಶ,
ಭಾಳ ದಿನದ ಮೇಲೆ ಬಂದ್ಯಲಾ? ಬರಹ ಇಷ್ಟ ಆಗಿದ್ದು ನಂಗೂ ಖುಷಿಯಾತು. ಬರ್ತಾ ಇರು ಹೀಂಗೆಯಾ !
ಸಾಗರದಾಚೆಯವರೇ,
ತುಂಬಾ ಧನ್ಯವಾದಗಳು . ಬರುತ್ತಿರಿ ಹೀಗೆ.
ಸುಧೇಶ್,
ಮೆಚ್ಚಿದ್ದಕ್ಕೆ, ನಕ್ಕಿದ್ದಕ್ಕೆ , ಧನ್ಯವಾದಗಳು . ನಿಮ್ಮ ಕಾದಂಬರಿಯ ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ .ಬೇಗ ಹಾಕಿ !
ಸವಿಗನಸು ,
ಆಹಾ ! ಚಂದದ ಹೆಸರು ! ಮೆಚ್ಚಿದ್ದಕ್ಕೆ ಧನ್ಯವಾದಗಳು . ಬರುತ್ತಿರಿ
ದೀಪಸ್ಮಿತಾ,
ಹೆಸರು ತುಂಬಾ ಚೆನ್ನಾಗಿದೆ.
ಅಭಿಪ್ರಾಯಕ್ಕಾಗಿ ಧನ್ಯವಾದಗಳು. ನಿಮಗಾದ ' ಬಟ್ಟಲು , ತಟ್ಟೆ' ಗಳ ಅನುಭವ ನನಗೂ ಆಗಿದೇರಿ. ಕೆಲವೊಮ್ಮೆ ಈ ಭಾಷಾ ವ್ಯತ್ಯಾಸ ತಮಾಷೆಯ ಜೊತೆಗೆ , ಆಭಾಸವನ್ನೂ , ಮುಜುಗರವನ್ನೂ , ಇನ್ನೆಷ್ಟೂ ಸಲ ಮನಸ್ತಾಪವನ್ನೂ ಸೃಷ್ಟಿಸಿದ ಉದಾಹರಣೆಗಳಿವೆ.
ನಿಮ್ಮ ಲೇಖನದಲ್ಲಿ ಎಲ್ಲೂ ಬೋರ್ ಹೊಡದ್ದಿಲ್ಲೆ!! ಬೊ ಪಸಂದಾಗಿದೆ!!
ಹಾಗಾಗೆ ನಮ್ಮ ಕಡೆ ಹೇಳ್ತಾರೆ, ಕನ್ನಡದಲ್ಲಿ ೧ ಪದಕ್ಕೆ ೧೨ ಅರ್ಥ ಅಂತ !!!!
ಬರೀ ಮಾತಾಡೋ ರೀತಿಲೇ ಕಂಡುಹಿಡಿಬಹುದು ಯಾವ ಜಿಲ್ಲೆಯವರಿರಹಬಹುದೆಂದು..!!!
ಸಿರಿಗನ್ನಡಂ ಗೆಲ್ಗೆ !!!!
ಚಿತ್ರಾ, ನಾನು ಓದಿದ್ದು ಮಂಗಳೂರಲ್ಲಿ..ನನ್ನದು ಬೆಂಗಳೂರು...ನಮ್ಮ ಜೊತೆಯಲ್ಲಿ ಉತ್ತರ ಕರ್ನಾಟಕದವರು, ಮಂಡ್ಯ ಮೈಸೂರು, ಎಲ್ಲಾ ಇದ್ದರು. ನನ್ನ ಬೆಂಗಳೂರಿನ ಸ್ನೇಹಿತನೊಬ್ಬ ತನ್ನ ಗೆಳೆಯನನ್ನು ನೋಡೋಕೆ ಕುಂದಾಪುರದ ಕಡೆ ಹೋಗಿದ್ದ. ಗೆಳೆಯನ ತಂಗಿ ೪-೫ ವರ್ಷದ ಪುಟ್ಟಿ...ಅಪ್ಪ ಏನೋ ವಿಷಯಕ್ಕೆ ಗದರಿದ ಅಂತ ಅಳ್ತಾ ಇತ್ತಂತೆ...ನಂತರ ಪುಟ್ಟಿ ಅಮ್ಮ..‘ ಅಪ್ಪ ಹೋತ ನೀ ಆಡು ಮರಿ‘ ಅಂದ್ರಂತೆ...ಇವನಿಗೆ ಗಾಬರಿ..ಇದೇನಪ್ಪ ಹೀಗನ್ನುತ್ತಿದ್ದಾರೆ ಅಂತ..!!...ಅದಕ್ಕೆ ನಂತರ ಅವನ ಗೆಳೆಯ ವಿವರಿಸಿದ್ದನ್ನ ನಮ್ಗೆಲ್ಲಾ ಹೇಳಿ ನಕ್ಕಿದ್ದೇ ನಕ್ಕಿದ್ದು. ಅಪ್ಪ ಹೊರಗಡೆ ಹೋದರು ನೀನು ಆಟ ಆಡಿಕೋ ಮರಿ ಅಂತ ಪುಟ್ಟಿ ತಾಯಿ ಇಂಗಿತ....
ಇಂತಹ ಹಲವಾರು ಘಟನೆಗಳು ಮತ್ತು ಮನೋರಂಜಕ ಸಂದರ್ಭಗಳು ಇಲ್ಲದಿಲ್ಲ....ಒಳ್ಳೆಯ ಪೋಸ್ಟ್... ಮುಂದಿನ ಪೋಸ್ಟ್ ನೋಡೋಣ ಏನು ತರ್ತೀರೋ..
Post a Comment