October 25, 2009

ಸಾಧನೆಯ ಹಾದಿಯಲ್ಲಿ....

ಜೀವನದಲ್ಲಿ ಏನನ್ನಾದರೂ ಸಾಧಿಸುವ ಕನಸನ್ನು ನಾವೆಲ್ಲರೂ ಕಾಣುತ್ತೇವೆ ಆದರೆ ಅದನ್ನು ನಿಜವಾಗಿಸುವ ಛಲ ಹೊತ್ತವರು ಮಾತ್ರ ಕಮ್ಮಿಯೇ. ಅಂಥ ಹಾದಿಯಲ್ಲಿ ನಡೆಯುತ್ತಿರುವ ಕೆಲವೇ ಕೆಲವರಲ್ಲೊಬ್ಬಳು ' ಆಶಾ' . ನನ್ನ ಪುಟ್ಟ ತಂಗಿ ಅಂದರೆ ಚಿಕ್ಕಮ್ಮನ ಮಗಳು ಆಶಾ ನಮ್ಮ ಕುಟುಂಬದ ಎಲ್ಲರ ಕಣ್ಮಣಿ ! ನನ್ನ ಮಗಳಿಗಿಂತ ಕೇವಲ ಮೂರೇ ವರ್ಷ ದೊಡ್ಡವಳಾದ ಆಶಾ ನನಗೆ ತಂಗಿಗಿಂತ ಹೆಚ್ಚಾಗಿ ಮಗಳಾಗಿಯೇ ಬೆಳೆದಿದ್ದಾಳೆ. ಈ ಪುಟ್ಟ ಹುಡುಗಿಯ ದೊಡ್ಡ ಸಾಧನೆಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಬಯಕೆ ನನಗೆ .

ಭದ್ರಾವತಿಯಂಥ ಚಿಕ್ಕ ಪಟ್ಟಣದ ಹುಡುಗಿಗೆ ಕನಸು ಮಾತ್ರ ತುಂಬಾ ದೊಡ್ಡದು. ಭಾರತೀಯ ವಾಯುಸೇನೆಯ ಯುದ್ಧ ವಿಮಾನವನ್ನು ಹಾರಾಡಿಸುವ ಬಯಕೆ ಚಿಕ್ಕದಲ್ಲ ! ೫ ನೇ ತರಗತಿಯಿಂದ ಯುದ್ಧ ವಿಮಾನಗಳ ಹುಚ್ಚು ಹತ್ತಿಸಿಕೊಂಡವಳು. ಪ್ರಪಂಚದ ಎಲ್ಲಾ ಪ್ರಸಿದ್ಧ ಯುದ್ಧ ವಿಮಾನಗಳ ವಿವರ ಅವಳ ನಾಲಿಗೆ ತುದಿಯಲ್ಲಿ ! ಅವುಗಳ ಬಗ್ಗೆ ಕನಸಿನಲ್ಲಿಯೂ ಗಂಟೆಗಟ್ಟಲೆ ಮಾತನಾಡುವಷ್ಟು ಸಾಮರ್ಥ್ಯ ! ಮೊದ ಮೊದಲು ಎಲ್ಲ ಮಕ್ಕಳಂತೆ ಇವಳದ್ದೂ ಒಂದು ಕನಸು ..ಕೆಲ ದಿನಗಳಲ್ಲಿ ಕರಗಿಹೋಗುವಂಥಾದ್ದು ಎಂದು ಕೊಂಡ ಅಪ್ಪ ಅಮ್ಮಂದಿರಿಗೆ ಅವಳದ್ದು ಬರೀ ಕನಸಲ್ಲ ಗಟ್ಟಿ ನಿರ್ಧಾರ ಎಂದು ಅರಿವಾಗಿದ್ದು ಅವಳು ಸೈನಿಕ ಶಾಲೆಯನ್ನು ಸೇರುವ ಬಯಕೆ ವ್ಯಕ್ತ ಪಡಿಸಿದಾಗ ! ಮುದ್ದು ಮಗಳ ಸೈನ್ಯ ಸೇರುವ ಕನಸು ಹೆತ್ತವರಿಗೆ ಕಳವಳ ತರುತ್ತಿತ್ತು. ಅವಳನ್ನು ಹೇಗೋ ಸಮಾಧಾನಿಸಿ ೧೦ನೇ ತರಗತಿಯವರೆಗೂ ಭದ್ರಾವತಿಯಲ್ಲಿಯೇ ಮುಂದುವರೆಸುವಂತೆ ಮನವೊಲಿಸಿದರು. ಓದಿನಲ್ಲೂ ಅಷ್ಟೇ ಮುಂದಿರುವ ಹುಡುಗಿ ತನ್ನೆಲ್ಲ ಇತರ ಚಟುವಟಿಕೆಗಳ ನಡುವೆಯೂ ೧೦ನೇ ತರಗತಿಯಲ್ಲಿ ಗಳಿಸಿದ್ದು ೯೩ % ! ಪಿಯುಸಿ ಗೆ ಮೂಡಬಿದರೆಯ ಪ್ರಸಿದ್ಧ ಕಾಲೇಜಿನಲ್ಲಿ ಸೇರಿಕೊಂಡ ಹುಡುಗಿ ಎನ್ ಸಿ ಸಿ ಗೂ ಸೇರಿದಳು. ಅತ್ಯಂತ ಕಠಿಣ ತರಬೇತಿ , ಸತತ ಪರಿಶ್ರಮದಿಂದ, ಸೇರಿದ ಕೇವಲ ೫ ತಿಂಗಳ ಅವಧಿಯಲ್ಲಿ ೨೦೦೯ ರ ದೆಹಲಿಯ ಗಣರಾಜ್ಯೋತ್ಸವದ ಪರೇಡ್ ಗಾಗಿ ಆಯ್ಕೆಯಾಗಿ ಕರ್ನಾಟಕ ಟೀಮಿನ ಮುಖ್ಯ ಸದಸ್ಯೆಯಾದಳು. ಅಷ್ಟೇ ಅಲ್ಲ , ಪ್ರತಿಷ್ಟಿತ " Prime minister Rally " ತಂಡಕ್ಕೆ ಆಯ್ಕೆಯಾದಳು . ರಾಷ್ಟ್ರ ಮಟ್ಟದಲ್ಲಿ " ೧೦ ಮಂದಿ ಅತ್ಯುತ್ತಮ ಕೆಡೆಟ್" ಗಳಲ್ಲಿ ಒಬ್ಬಳಾಗಿ ನಮಗೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ತಂದಳು .

ಪ್ರಶಸ್ತಿಗಳ ಸುರಿಮಳೆ ಯಾಯಿತು.! ದೆಹಲಿಯಲ್ಲಿ ಮುಖ್ಯಮಂತ್ರಿ, ರಕ್ಷಣಾ ಮಂತ್ರಿ ಮೊದಲಾದ ಗಣ್ಯಾತಿಗಣ್ಯರ ಜೊತೆ , ಅಷ್ಟೇ ಏಕೆ ಸ್ವತಃ ನಮ್ಮ ರಾಷ್ಟ್ರಪತಿಯವರು ತಮ್ಮ ಭವನದಲ್ಲಿ ಏರ್ಪಡಿಸಿದ್ದ ಭೋಜನಕೂಟಗಳಲ್ಲಿ ಭಾಗವಹಿಸಿದ್ದಾಯಿತು ! ಎನ್ ಸಿ ಸಿ ಯ International youth exchange program ಗೆ ಆಯ್ಕೆಯಾದಳು. ದೇಶದಾದ್ಯಂತ ಸುಮಾರು ೨.೫ ಲಕ್ಷ ಕೆಡೆಟ್ ಗಳಲ್ಲಿ ಆಯ್ಕೆಯಾದ ೫ ಬಾಲಕಿಯರ ತಂಡದ ಸದಸ್ಯೆಯಾಗಿ , ಭಾರತದ ಪ್ರತಿನಿಧಿಯಾಗಿ ಇದೀಗ ಶ್ರೀಲಂಕಾಕ್ಕೆ ಹೋಗಿದ್ದ ಆಶಾ ಅಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದಳು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ಜಯಗಳಿಸುತ್ತಾ ಈಗ " Best All rounder " ಟ್ರೋಫೀ ಹಾಗೂ ಚಿನ್ನದ ಪದಕವನ್ನು ಗೆದ್ದಿರುವ ಹುಡುಗಿ ನನ್ನ ತಂಗಿ ಎಂದು ಹೆಮ್ಮೆ ಪಡುವ ಸರದಿ ನನ್ನದು ! ಈಗಿನ್ನೂ ದ್ವಿತೀಯ ಪಿ ಯು ಸಿ ಯಲ್ಲಿರುವ ಹುಡುಗಿ " Aeronauticle Engineering " ಮಾಡಿ ವಾಯುಸೇನೆ ಸೇರುವ ಕನಸು ಕಾಣುತ್ತಿದ್ದಾಳೆ . ಅವಳ ಕನಸು ನನಸಾಗಲಿ , ಈ ಗೆಲುವು ಅವಳ ಕನಸಿನ ಹಾದಿಯಲ್ಲಿಯ ಒಂದು ಮಹತ್ತರವಾದ ಮೆಟ್ಟಿಲು. ಹೀಗೆಯೇ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರಲಿ ಎಂಬ ಹೃತ್ಪೂರ್ವಕ ಹಾರೈಕೆ ನನ್ನದು !

ಚಿಕ್ಕವಳಿದ್ದಾಗ ಅವಳ ಅಮ್ಮನ ಜೊತೆ ಒಮ್ಮೆ ವಾದಿಸುತ್ತಾ ಆಶಾ ಹೇಳಿದ್ದಳು " ಅಮ್ಮಾ, ನಾನು ಎಲ್ಲಾ ಮಕ್ಕಳಂತೆ ಅಲ್ಲ. ನಾನು ಸ್ಪೆಷಲ್ . ನನ್ನನ್ನು ನೀನು ಯಾವುದೇ ಫೀಲ್ಡ್ ನಲ್ಲಿ ಹಾಕು , ಅದರಲ್ಲಿ top ಮಾಡಿ ತೋರಿಸ್ತೀನಿ ಬೇಕಾದ್ರೆ ! " . ಇದೇ ಆತ್ಮ ವಿಶ್ವಾಸ ಅವಳನ್ನು ಈಗ ಗೆಲುವಿನ ಹಾದಿಯಲ್ಲಿ ನಿಲ್ಲಿಸಿದೆ . ಇದೇ ಅವಳನ್ನು ಭವಿಷ್ಯದಲ್ಲಿ ಭಾರತೀಯ ವಾಯುಸೇನೆಯ ಹೆಮ್ಮೆಯ ಪೈಲೆಟ್ ಆಗಿ ಮಾಡುತ್ತದೆ ಎನ್ನುವುದು ನನ್ನ ಧೃಡ ವಿಶ್ವಾಸ .

20 comments:

sunaath said...

ಚಿತ್ರಾ,
ಆಶಾಳ ಬಗೆಗೆ ಓದುತ್ತ ಹೋದಂತೆ, ಅಗಾಧವೆನಿಸಿತು. ಇವಳು ನಿಜವಾಗಿಯೂ ಅದ್ಭುತ ಹುಡುಗಿ. ಇವಳ ಬಗೆಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ.
ಆಶಾಳ ಸಾಧನೆಗಾಗಿ ಅವಳಿಗೆ ನನ್ನ ಅಭಿನಂದನೆಗಳನ್ನು ತಿಳಿಸು.
ಅವಳ ಕನಸು ನನಸಾಗಲಿ ಎಂದು ಹಾರೈಸುತ್ತೇನೆ. ಆಶಾ ಖಂಡಿತವಾಗಿಯೂ ಅದನ್ನು ಸಾಧಿಸುತ್ತಾಳೆ.

Me, Myself & I said...

ಅಬ್ಬ !
ಓದಿ ನಿಜಕ್ಕೂ ಉಬ್ಬೆರಿಸಿದೆ. ನಿಮ್ಮ ತಂಗಿ ಇತರರಿಗೆ ಮಾದರಿಯಾಗಿರುವುದು ನಿಜಕ್ಕೂ ಹೆಮ್ಮೆ ಪಡ ಬೇಕಾದ ಸಂಗತಿ.
ಈಗ ನಂಗು ಕೂಡ ನಿಮ್ಮ ತಂಗಿ ಒಂದು ರೀತಿಲಿ ಮಾದರಿ. ನೀವು ಅವ್ರ ಬಗ್ಗೆ ಬರೆದು ಓದುಗರೆಲ್ಲರಿಗೂ ಒಂದು ಸ್ಫೂರ್ತಿ ತುಂಬಿದ್ದೀರಿ.

ಅಭಿನಂದನೆಗಳು.

ವನಿತಾ / Vanitha said...

ಆಶಾಳಿಗೆ ನಮ್ಮಿಂದಲೂ ಶುಭ ಹಾರೈಕೆಗಳು ಮತ್ತು ಅವಳ ಕನಸು ನನಸಾಗಲಿ ..

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಭಾರತಕ್ಕೆ ಒಂದು ಉತ್ತಮ ನಿಷ್ಠಾವಂತ ವಾಯುಸೇನಾಧಿಕಾರಿ ಬಹು ಬೇಗ ಸಿಗುವಂತಾಗಲೆಂದು ಹಾರೈಸುವೆ. ಆಶಾಳಂತಹ ಯುವಕ/ಯುವತಿಯರ ಉತ್ತಮ ಆಶಯದಲ್ಲೇ ಈ ದೇಶದ ಭದ್ರ ಬುನಾದಿಯೂ ನಿಂತಿದೆ. ಇಂದು ನಮಗೆ ಇಂತಹ ಸಮರ್ಥ, ದೃಢ ನಿಲುವಿನ ಯುವಜನಾಗಂದ ಅವಶ್ಯಕತೆ ತುಂಬಾ ಇದೆ.
"ALL THE BEST ASHA"

Ittigecement said...

ಚಿತ್ರಾ ...

ತುಂಬಾ ಖುಷಿಯಾಯ್ತು...
ಅವಳ ಬಗೆಗೆ ಹೆಮ್ಮೆಯೂ ಆಯ್ತು....

ಅವಳ ಬದುಕಿನಲ್ಲಿಯ ಬರವಸೆ.. ನಂಬಿಕೆ ಹೀಗೆಯೇ ಯಾವಾಗಲೂ ಇರಲಿ...

ಇನ್ನಷ್ಟು ಸಾಧನೆ ಮಾಡಲಿ...
ಯಶಸ್ಸಿನ ಉತ್ತುಂಗಕ್ಕೇರಲಿ...

ಆಶಾಳ ಆಶಯ ಈಡೇರಲಿ...

ನಮ್ಮೆಲ್ಲ ಶುಭ ಹಾರೈಕೆಗಳು...

ಸವಿಗನಸು said...

ಚಿತ್ರಾ,
ಆಶಾ ಎಲ್ಲರಿಗೂ ಮಾದರಿಯಾಗಿರುವುದು ನಾವೆಲ್ಲಾ ಹೆಮ್ಮೆ ಪಡಬೇಕಾದ ವಿಷಯ...
ಇದರಿಂದ ಎಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ.....
ಆಶಾಳಿಗೆ ಶುಭವಾಗಲಿ....

ಸಾಗರದಾಚೆಯ ಇಂಚರ said...

ಚಿತ್ರಾ,
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು
ಎನ್ನುವಂತೆ ಚಿಕ್ಕವರಿದ್ದಾಗಿನ ಭಾವನೆಗೆ ನೀರೆರೆದರೆ ಅವರು ಏನಾದರೂ ಮಾಡಿ
ತೋರಿಸುತ್ತಾರೆ ಎನ್ನುವುದಕ್ಕೆ ಆಶಾ ಸಾಕ್ಷಿ.
ಅವಳ ಸಾಧನೆಗೆ ಅಭಿನಂದನೆಗಳು

shivu.k said...

ಆಶಾಳ ಪ್ರತಿಭೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿರುವ ನಿಮ್ಮ ತಂಗಿ ಮತ್ತಷ್ಟು ಸಾಧಿಸಲಿ. ಆವಳ ಕನಸು ಮತ್ತು ಆಕಾಂಕ್ಷೆಗಳು ಈಡೇರಲಿ ಅಂತ ಹಾರೈಸುತ್ತೇನೆ...

ಚಿತ್ರಾ said...

ಕಾಕಾ,
ನಿಜಕ್ಕೂ ಅವಳು ಒಬ್ಬ ಅದ್ಭುತ ಹುಡುಗಿ ! ಅಷ್ಟೇ ಸರಳ ಹಾಗೂ ಆತ್ಮೀಯ ಮನೋಭಾವ ಕೂಡ. ನಿಮ್ಮ ಅಭಿನಂದನೆಗಳನ್ನು ಅವಳಿಗೆ ಖಂಡಿತಾ ತಿಳಿಸುತ್ತೇನೆ.

ಚಿತ್ರಾ said...

ಲೋದ್ಯಾಶಿಯವರೇ,
ಧನ್ಯವಾದಗಳು.

ವನಿತಾ,
ಧನ್ಯವಾದಗಳು. ಅವಳಿಗೆ ನಿಮ್ಮ ಶುಭಾಶಯಗಳನ್ನು ತಿಳಿಸುತ್ತೇ

ಚಿತ್ರಾ said...

ತೇಜೂ,
ಆಶಾಳ ಪರವಾಗಿ ನಿಂಗೆ ಧನ್ಯವಾದಗಳು. ಅವಳ ವಾಯುಸೇನಾಧಿಕಾರಿಯಾಗುವ ಬಯಕೆ ಈಡೇರಲಿ , ಇನ್ನಷ್ಟು ಯುವಕ-ಯುವತಿಯರಿಗೆ ಅವಳು ಸ್ಫೂರ್ತಿಯಾಗಲಿ ಎನ್ನುವುದು ನಮ್ಮೆಲ್ಲರ ಇಚ್ಛೆ ಕೂಡ.

ಚಿತ್ರಾ said...

ಪ್ರಕಾಶಣ್ಣ,
ಥ್ಯಾಂಕ್ಸು. ನಿಮ್ಮ ಶುಭ ಹಾರೈಕೆಗಳನ್ನು ಅವಳಿಗೆ ತಲುಪಿಸುತ್ತೇನೆ.

ಚಿತ್ರಾ said...

ಸವಿಗನಸು ,
ಧನ್ಯವಾದಗಳು.


ಶಿವೂ,
ನಿಮ್ಮ ಹಾರೈಕೆಗೆ ಧನ್ಯವಾದಗಳು.

ಚಿತ್ರಾ said...

ಗುರು,
ಬೆಳೆಯುವ ಮೊಳಕೆಗೆ ನೀರೆರೆದು ಪೋಷಿಸಿದ ಅವಳ ತಂದೆ ತಾಯಿಯರಿಗೂ ಕೀರ್ತಿ ಸಲ್ಲ ಬೇಕು ಅಲ್ಲವೇ?
ಆಶಾಳ ಪರವಾಗಿ ನಿಮಗೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ಆಶಾ ಅವರಿಗೆ ಬೆಸ್ಟ್ ಆಫ್ ಲಕ್.... :)

ಜಲನಯನ said...

ಚಿತ್ರಾ ಮೇಡಂ ಕೆಲವರ ಆತ್ಮ ಸ್ಥೈರ್ಯ ದಿಟ್ಟ ನಿಲುವು ಮತ್ತು ಛಲ ಎಷ್ಟು ಅಚಲವಾಗಿರುತ್ತದೆಂದರೆ ...ನಿಜವಾಗಿಯೂ ..ಇದೊಂದು ರಾಮಬಾಣ ಬಿಲ್ಲಿನಿಂದ ಹೊರಟರೆ ಗುರಿತಲುಪಿಯೇ ತೀರುತ್ತದೆ ಎಂದು ನಮಗೆ ಮೊದಲೇ ತಿಳಿದುಬಿಡುತ್ತದೆ...ಅಂಥವರ ಯಾವುದೇ ಮಾತು ಅತಿಶಯೋಕ್ತಿ ಎನಿಸುವುದಿಲ್ಲ...ನನ್ನ ಅನುಭವದ ಮಟ್ಟಿಗೆ ಇಂತಹ ದೃಢನಿಲುವು ಹೆಣ್ಣುಮಕ್ಕಳ ತೆಗೆದುಕೊಂಡರೆ ಅದರ ಸಫಲತೆ ಶತ ಸಿದ್ಧ ಎನ್ನುವುದು. ನನ್ನ ತಂಗಿ ಮಗಳು ೫ನೇ ತರಗತಿಯಲ್ಲಿ (ಆಗ ನಾನು ಪಿ.ಎಚ್.ಡಿ ಮಾದ್ತಿದ್ದೆ) ಯಾರೋ ಕೇಳಿದ್ದಕ್ಕೆ ಮಾಮನತರಹ ಡಾಕ್ಟರ್ ಆಗ್ತೇನೆ ಅಂದಳಂತೆ..ಅವಳ ಇಂಗಿತ ಡಾಕ್ಟರ್ ಅಂದರೆ ವೈದ್ಯ...ನಾನೂ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದೇನೆ ಎಂದೇ ಭಾವಿಸಿದ್ದಳು...ಅವಳ ಛಲ ಎಷ್ಟು ಧೃಢವಾಗಿತ್ತೆಂದರೆ...ಅವಳು ಆಂಧ್ರದ ೧೨ರ ರ್ಯಾಂಕಿಗೆ ನಲ್ಲಿ ಮೊದಲ ಸ್ಥಾನ ಪಡೆದ ಹುಡುಗಿಯಾದಳು...ಈಗ ವೈದ್ಯಕೀಯದಲ್ಲಿ ಪಿ.ಜಿ. ಮಾಡ್ತಿದ್ದಾಳೆ...ಆಶಾ ನಿಜಕ್ಕೂ ಮಹತ್ತರ ಸಾಧನೆಮಾಡಿ..ನಿಮ್ಮೆಲ್ಲರ, ನಾಡಿನ ಮತ್ತು ದೇಶದ ಹೆಮ್ಮೆಯ ಪುತ್ರಿಯಾಗುವುದರಲ್ಲಿ ಸಂಶಯವೇ ಇಲ್ಲ...ಅದು ಅವಳ ದಿಟ್ಟತನ ಮತ್ತು ಮನೋಸ್ಥೈರ್ಯದ ಮೂಲ್ಕ ಸರ್ವವಿದಿತವಾಗುತ್ತಿದೆ...
ಆಶಾ..ನಿನ್ನೆಲ್ಲ ಕನಸುಗಳು ನನಸಾಗಲಿ ತಂದೆ ತಾಯಿ, ಮಗಳಂತೆ ನಿನ್ನನ್ನು ಮುದ್ದಿಸಿರುವ ನಿನ್ನಕ್ಕನಿಗೆ ಹೆಮ್ಮೆಯ ತಂಗಿಯಾಗಿ ವಿಜಯೀಯಾಗು ಎಂದೇ ನಮ್ಮ ಹಾರೈಕೆ...

ವಿ.ರಾ.ಹೆ. said...

ITS REALLY GREAT. ALL THE BEST :-)

Raghu said...

Good luck... :)
Raaghu

ಚಿತ್ರಾ said...

ಸುಧೇಶ್, ವಿಕಾಸ್, ರಾಘು,
ಆಶಾಳ ಪರವಾಗಿ ಧನ್ಯವಾದಗಳು .

ಚಿತ್ರಾ said...

ಆಝಾದ,
ನಿಮ್ಮ ತಂಗಿಯ ಮಗಳೂ ಕೂಡ ಅತ್ಯಂತ ಪ್ರತಿಭಾವಂತೆ ಎಂದಾಯಿತು. ಅವಳಿಗೆ ನನ್ನ ಅಭಿನಂದನೆಗಳು. ಹೀಗೆ, ಆತ್ಮವಿಶ್ವಾಸ ಹಾಗೂ ಅಚಲ ನಿರ್ಧಾರ ಕೂಡಿಕೊಂಡಿರುವವರು ಬಹಳ ಕಮ್ಮಿ ಜನ.
ಆಶಾಳ ಪರವಾಗಿ ನಿಮಗೆ ನನ್ನ ಧನ್ಯವಾದಗಳು.