February 18, 2020

ರೋಗ !


    ಇಂದೇಕೋ ಅವಳಿಗೆ ಹಳೆಯದೆಲ್ಲ ತುಂಬಾ ನೆನಪಾಗುತ್ತಿತ್ತು . ಸರಿಯಾಗಿ ಎಂಟು ವರ್ಷಗಳ ಹಿಂದೆ ಇದೇ ದಿನವಲ್ಲವೇ ಅವಳ ಪ್ರಪಂಚ ಮೇಲೆಕೆಳಗಾಗಿದ್ದು ? ಅಂದು ಆ ಘಟನೆಯ ನಂತರ ಪೂರ್ತಿ ಭೂಮಿಗಿಳಿದಿದ್ದ ತಮ್ಮ ಕುಟುಂಬ ಊರು ಬಿಟ್ಟು ಬೇರೆ ಕಡೆ ಹೋಗಬೇಕಾಯ್ತು!! ಆ ದಿನಗಳು ಅಜ್ಞಾತವಾಸಕ್ಕೆ ಕಮ್ಮಿ ಇರಲಿಲ್ಲ !
ಏನು ಮಾಡಲೂ ತಿಳಿಯದೆ ಕಂಗಾಲಾಗಿ , ಅಳುತ್ತಾ ಕುಳಿತವಳಿಗೆ ಧೈರ್ಯ ತುಂಬಿ , ಈ ಊರಿಗೆ ಕರೆದುಕೊಂಡು ಬಂದು ಕೆಲಸ ಕೊಟ್ಟು ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಲ್ಲುವಂತೆ ಮಾಡಿದ ಮೂರ್ತಿ ಮಾಮಾ ಇಲ್ಲದಿದ್ದರೆ ಇವತ್ತು ಏನಾಗುತ್ತಿದ್ದೆ ಅಂತ ಅದೆಷ್ಟೋ ಸಲ ಯೋಚಿಸುತ್ತಾಳೆ ಅವಳು .
ಅಪ್ಪನ ಜೀವದ ಗೆಳೆಯ , ಅವಳನ್ನು ಎತ್ತಿ ಆಡಿಸಿದ ಮೂರ್ತಿ ಮಾಮಾ ಅವಳಿಗೆ ಮರು ಜೀವ ಕೊಟ್ಟು ಒಂಥರಾ ಅಪ್ಪನೇ ಆಗಿಬಿಟ್ಟರು. ಅವಳ ಹೋರಾಟಕ್ಕೆ ಅವರ ಬೆಂಬಲ ಕಮ್ಮಿ ಇರಲಿಲ್ಲ .
ಮೊದಲ ಬಾರಿಗೆ ಈ ಪಟ್ಟಣಕ್ಕೆ ಬಂದಾಗ ಹೆದರಿದ್ದಳು. ಇಷ್ಟು ದೊಡ್ಡ ಊರಲ್ಲಿ ತಾನು ಕಳೆದು ಹೋಗುವೆನೆ ಅಂತ . ಆಗಲೂ ಮಾಮಾ ಹೇಳಿದ್ದರು "ಪುಟ್ಟೀ , ನಿನ್ನ ಹೊಸ ಜೀವನದ ಆರಂಭ ಇದು . ಹಳೆಯದು ಇಲ್ಲಿ ಕಾಡುವುದಿಲ್ಲ. ಎಲ್ಲವೂ ಒಳ್ಳೆಯದೇ ಆಗತ್ತೆ . ಹೆದರ ಬೇಡ" ಅಂತ.
ಅವರು ಅವಳನ್ನು ಈ ಊರಿಗೆ ಕರೆದುಕೊಂಡು ಬಂದಾಗ ಆಕೆ ತುಂಬು ಗರ್ಭಿಣಿ . ತಮ್ಮ ಮನೆಯಲ್ಲೇ ಇಟ್ಟುಕೊಂಡು , ಆರೈಕೆ ಮಾಡಿ , ಹೆರಿಗೆ ಆದಮೇಲೂ ೩-೪ ತಿಂಗಳು ಅವರ ಮನೆಯಲ್ಲೇ ಇಟ್ಟುಕೊಂಡು ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದರು. ಸುಕನ್ಯಾ ಅತ್ತೆ ಅಂತೂ ನಮಗೆ ಹೆಣ್ಣು ಮಕ್ಕಳಿಲ್ಲ ಇರೋ ಮಗನು ವಿದೇಶದಲ್ಲಿ. ನೀನು ಇಲ್ಲೇ ಇದ್ದುಬಿಡು ಎಂದು ಎಷ್ಟು ಸಲ ಹೇಳಿರಲಿಲ್ಲ ? ಆದರೆ ನಯವಾಗೇ ನಿರಾಕರಿಸಿದವಳು, ಕೊನೆಗೆ ಅವರ ಮನೆಗೆ ಹತ್ತಿರದಲ್ಲೇ ಒಂದು ಚಿಕ್ಕ ಮನೆ ಬಾಡಿಗೆ ಹಿಡಿದಿದ್ದಳು.
ಪುಟ್ಟ ಮಗಳನ್ನು ಕಟ್ಟಿಕೊಂಡು ಒಬ್ಬಳೇ ಇರುವುದು ಅಷ್ಟು ಸುಲಭವಾಗಿರಲಿಲ್ಲ.
ಹೊಸದಾಗಿ ಆ ಮನೆಗೆ ಬಂದಾಗ ಆಚೀಚಿನವರ ಹತ್ತಾರು ಪ್ರಶ್ನೆಗಳಿದ್ದವು. ಮಗುವಿನ ಅಪ್ಪನ ಬಗ್ಗೆ . " ಅಪ್ಪ ಇಲ್ಲ" ಎಂದು ಕ್ಲುಪ್ತವಾಗಿ ಉತ್ತರಿಸಿದಾಗ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು.
"ಇದೆಲ್ಲ ಸ್ವಾಭಾವಿಕ , ನೀನು ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ " ಎಂದು ಮಾಮಾ ಹೇಳಿದ್ದು ಅವಳಿಗೆ ವೇದವಾಕ್ಯವಾಗಿತ್ತು! ಕಂಪನಿಯಲ್ಲಿ ಬೇಬಿ ಸಿಟಿಂಗ್ ನ ವ್ಯವಸ್ಥೆ ಇತ್ತು . ಹಾಗಾಗಿ ಮಗುವನ್ನು ದಿನವಿಡೀ ನೋಡಿಕೊಳ್ಳುವ ಬಗ್ಗೆ ಯೋಚನೆ ಇರಲಿಲ್ಲ .
ಮಗಳನ್ನು ಸ್ಕೂಲ್ ಗೆ ಸೇರಿಸುವಾಗ ಮೂರ್ತಿ ಮಾಮಾನೇ ಮಾತಾಡಿ , ಸಿಂಗಲ್ ಪೇರೆಂಟ್ ಎಂದು ಅಡ್ಮಿಷನ್ ಮಾಡಿಸಿದ್ದರು.
ಹಳೆಯದೆಲ್ಲವನ್ನೂ ಮೂಲೆಗೊತ್ತಿ ಇಂದು ಸ್ವಾಭಿಮಾನದಿಂದ ಗಟ್ಟಿಯಾಗಿ ನಿಂತು ಜೀವನ ನೆಮ್ಮದಿಯಲ್ಲಿ ಸಾಗುತ್ತಿದುದಕ್ಕೆ ಅವಳಿಗೆ ಖುಷಿಯಿದೆ.
ಈಗ ಮೂರನೇ ಕ್ಲಾಸ್ ನಲ್ಲಿರುವ ಮಗಳು ಬುದ್ಧಿವಂತೆ. ಸ್ಕೂಲ್ ನಲ್ಲಿ ಅವಳ ಟೀಚರ್ಸ್ ಅವಳ ಗುಣ ಗಾನ ಮಾಡಿದಾಗೆಲ್ಲಾ ಇವಳ ಹೆಮ್ಮೆ ಹೆಚ್ಚುತ್ತದೆ . ಅಂದು ಮನೆಗೆ ಬೇಗ ಬಂದವಳು ಮಗಳಿಗಿಷ್ಟದ ತಿಂಡಿ ಮಾಡಿಟ್ಟು ಕಾಯುತ್ತಿದ್ದಳು. ಕೈಕಾಲು ತೊಳೆದು ಬಟ್ಟೆ ಬದಲಿಸಿ , ತಿಂಡಿ ತಿನ್ನುತ್ತಾ ಕುಳಿತ ಮಗಳು " ಅಮ್ಮಾ, "ರೇಪ್ " ಅಂದ್ರೇನಮ್ಮ? " ಎಂದು ಕೇಳಬೇಕೆ? ಇವಳೊಮ್ಮೆ ನಡುಗಿದಳು !
ಇನ್ನೂ 8 ರ ಬಾಲೆ ಗೆ ರೇಪ್ ಬಗ್ಗೆ ಅರ್ಥವಾಗುವಂತೆ ಹೇಳುವುದು ಹೇಗೆ?
ಮಗಳು ತಿಂಡಿ ತಿನ್ನುತ್ತಾ ಹೇಳುತ್ತಿದ್ದಳು. " ನಮ್ಮ ಟೀಚರ್ಸ್ ಇವತ್ತು ಮಾತಾಡ್ತಾ ಇದ್ರೂ , ಇತ್ತೀಚೆ ರೇಪ್ ಕೇಸ್ ಜಾಸ್ತಿ ಆಗ್ತಿವೆ. ಹೆಣ್ಣು ಮಕ್ಕಳ ಅಪ್ಪ ಅಮ್ಮಂದ್ರಿಗೆ ತುಂಬಾ ಚಿಂತೆ ಆಗ್ತಿದೆ. ಎಷ್ಟು ಜೋಪಾನವಾಗಿದ್ರೂ ಒಂಥರಾ ಯೋಚನೇನೆ ಅಂತ . ಏನಮ್ಮ ಹಂಗಂದ್ರೆ ? ಯಾವ್ದಾದ್ರೂ ಹೊಸ ರೋಗ ನ ? "
ಇವಳ ಎದೆಯಲ್ಲಿ ಒಮ್ಮೆ ಛಳಕ್ ಎಂದಿತು . ಅವ್ಯಕ್ತವಾದ ನೋವು ಹಿಂಡ ತೊಡಗಿತು
" ಹೂ ಪುಟ್ಟಾ, ಅದೊಂತರ ತುಂಬಾ ಕೆಟ್ಟ ರೋಗ ಜೀವನ ಇಡೀ ಕಾಡತ್ತೆ."
" ಹೆಣ್ಣು ಮಕ್ಕಳಿಗೆ ಮಾತ್ರ ಬರತ್ತೇನಮ್ಮ ? ಅದಕ್ಕೆ ಏನೂ ಔಷಧಿ ಇಲ್ವಾ? "
"ಇದೆ ಮರೀ, ಆದರೆ ಆ ಔಷಧೀನ ಯಾರಿಂದ ಆ ರೋಗ ಬಂತೋ ಅವರಿಗೆ ಕೊಡಬೇಕು. ಆ ಬಗ್ಗೆ ಯಾರೂ ವಿಚಾರ ಮಾಡ್ತಿಲ್ಲ ಪುಟ್ಟಾ ! "
" ಅಮ್ಮಾ, ಈ ರೋಗ ನಂಗೂ... " ಥಟ್ ಎಂದು ಮಗಳ ಬಾಯಿ ಮೇಲೆ ಕೈಯಿಟ್ಟು ಅವಳನ್ನು ಗಟ್ಟಿಯಾಗಿ ಎದೆಗವಚಿಕೊಂಡಳು .
ಅವಳಿಗೆ ದುಃಖ ಒತ್ತರಿಸಿಕೊಂಡು ಬರುತ್ತಿತ್ತು .
ತಾನೂ ಆ ರೋಗಕ್ಕೆ ಬಲಿಪಶುವಾಗಿದ್ದೆ , ಅದರ ಫಲವೇ ನೀನು ಎಂದು ಮಗಳಿಗೆ ಹೇಗೆ ಹೇಳಿಯಾಳು ? ತನ್ನದಲ್ಲದ ತಪ್ಪಿಗೆ ತಾನು ಅನುಭವಿಸಿದ ಯಾತನೆ , ಅಪಮಾನ , ಅಸಹಾಯಕತೆಯ ಬಗ್ಗೆ ಪುಟ್ಟ ಮಗಳಿಗೆ ಅರ್ಥವಾಗುವಂತೆ ಹೇಳಬಲ್ಲಳೇ?

2 comments:

sunaath said...

ಮಗಳು ಹೀಗೆ ಕೇಳಿದಾಗ, ತಾಯಿಗೆ ಎಂತಹ ದುಃಖವಾಗಿರಬೇಕು ; ಜೊತೆಗೇ ಅವಮಾನದ ನೆನಪು ಬೇರೆ. ಇಂತಹ ಯಾತನೆಯನ್ನು ಕಥೆಯ ಮೂಲಕ ಸರಿಯಾಗಿ ಚಿತ್ರಿಸಿದ್ದೀರಿ.

ಚಿತ್ರಾ said...

ಸುನಾಥ್ ಕಾಕಾ,

ಧನ್ಯವಾದಗಳು !
ನನ್ನ ಬರಹಗಳಿಗೆ ನಿಮ್ಮ ಅಭಿಪ್ರಾಯ/ ವಿಮರ್ಶೆಗಳು ನನಗೆ ಸ್ಪೂರ್ತಿ ಕೊಡುತ್ತವೆ. ಹೀಗಾಗಿ ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ.
ಅದೇಕೋ ,ಬಹುದಿನಗಳಿಂದ ಬ್ಲಾಗ್ನಲ್ಲಿ ಬಂದ ಕಾಮೆಂಟ್ ಗಳ ಬಗ್ಗೆ ನೋಟಿಫಿಕೇಶನ್ ಬರ್ತಾನೆ ಇರಲಿಲ್ಲ. ಹಾಗಾಗಿ ಇಷ್ಟು ದಿನ ಯಾವ ಕಾಮೆಂಟ್ ಗಳೂ ನನಗೆ ಸಿಕ್ಕಿರಲಿಲ್ಲ . ಇವತ್ತು ಬ್ಲಾಗ್ ನ್ನು ಪರೇಶೀಲಿಸಿದಾಗ ಈ ವಿಚಾರ ತಿಳಿಯಿತು .

ನನ್ನ ತಡವಾದ ಉತ್ತರಕ್ಕೆ ಕ್ಷಮೆಯಿರಲಿ !