June 22, 2008

ಬದಲಾಗುತ್ತವೆ ಕನಸುಗಳು

ಬದಲಾಗುತ್ತವೆ ಕನಸುಗಳು
ಕಾಲದೊಡನೆ
ವಸಂತ ವರ್ಷವಾಗಿ, ಶಿಶಿರವಾದಂತೆ

ಚಿಗುರು ಮೊಗ್ಗಾಗಿ, ಹೂವಾಗಿ ಅರಳಿದಂತೆ,
ಕೊನೆಗೊಮ್ಮೆ ಬಾಡಿ ಉದುರಿಯೇ ಹೋಗುವಂತೆ
ಕನಸುಗಳೂ ಕೂಡ
ಸವಿಯಾಗಿ, ಕಹಿಯಾಗಿ , ಕಡೆಗೆ ಕರಗಿಯೇ ಬಿಡುತ್ತವೆ !

ಬಾಲೆ ತರುಣಿಯಾಗಿ ,ಚೆಲುವೆಯಾಗಿ,
ಮುದುಕಿಯಾಗಿ ಮುದುಡಿದಂತೆ
ಮಗುವಿನ ಮುಗ್ಧತೆ ಕಲಕಿ
ರಾಡಿಯಾಗಿ ಕ್ರೂರವಾದಂತೆ

ಕನಸುಗಳೂ ಕೂಡ ಕೊನರಿ, ಕೆಣಕಿ, ಕೊನೆಗೆ
ಕೆಡಿಸಿಯೇ ಬಿಡುತ್ತವೆ ಮನವನ್ನು !

( ೧೯೮೭ -೮೯ರ ಅವಧಿಯಲ್ಲೆಲ್ಲೋ ಬರೆದ ಹಾಕಿದ ಕವನಗಳ ರಾಶಿಯಿಂದ ಹೆಕ್ಕಿದ್ದು !)

6 comments:

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ ಅವರೆ...
"ಬದಲಾಗುತ್ತವೆ ಕನಸುಗಳು
ಕಾಲದೊಡನೆ
ವಸಂತ ವರ್ಷವಾಗಿ, ಶಿಶಿರವಾದಂತೆ"
ಈ ಸಾಲುಗಳಿಷ್ಟವಾದವು.

sunaath said...

ಸುಂದರವಾದ ಕವನ.

vijay said...

ಚಿತ್ರಾ,
ಜೀವನದೊಡನೆ ಕಾಲ ಉರಳಿದಂತೆ,
ಕನಸುಗಳೊಡನೆ ಜೀವನ ಕಳೆದಂತೆ,

ಕಾಲ ಚಕ್ರದ ಗರ್ಭದಲ್ಲಿ
ಚಿಗುರು-ಕೊನುರು, ಸಿಹಿ ಕಹಿ,
ಹುಟ್ಟು-ಸಾವು, ಜೀವನ -ಕನಸು,
ಎಲ್ಲವನ್ನೂ ಬರೆದಿಟ್ಟಹಾಗೆ,

ಉತ್ತಮವಾದ ಕವಿತೆ.. ಕನಸು ಕಾಣುವದೆ ಒಂದು ಸುಂದರ.
ಚುಟುಕುಗಳನ್ನು ಹೆಕ್ಕಿ.. ರಾಶಿಯ ಕೆಳಗೆ ಇರಬಹುದು
ವಿಜಯ

ಚಿತ್ರಾ said...

ಶಾಂತಲಾ ಹಾಗೂ ಸುನಾಥ್,
ಧನ್ಯವಾದಗಳು ! ಹೀಗೇ ಪ್ರೋತ್ಸಾಹಿಸುತ್ತಿರಿ !

ವಿಜಯ್ ,

ಚುಟುಕಗಳಿಗಾಗಿ ರಾಶಿ ಕೆದಕುತ್ತಿದ್ದೇನೆ.ಸಿಕ್ಕ ತಕ್ಷಣ
ಹೊಳೆಯಲ್ಲಿ ತೇಲಿ ಬಿಡುತ್ತೇನೆ.
ಬರುತ್ತಾ ಇರಿ.

ತೇಜಸ್ವಿನಿ ಹೆಗಡೆ said...

ಚಿತ್ರಾ,

ನಿಮ್ಮ ಕವನ ತುಂಬಾ ಆಪ್ತವೆನಿಸಿತು. ಈ ಕನಸುಗಳೇ ಹಾಗೆ.. ಇಂದು ಮಳೆಬಿಲ್ಲಾಗಿ ಕಾಣಿಸಿಕೊಂಡರೆ ನಾಳೆ ಅವೇ ಹಾವಾಗಿ ಹೆದರಿಸುತ್ತವೆ. ನನಸಾದರೂ ಕೂಡಾ ಕಾಲಮೀರಿ ಕೈಗೂಡುವಂತ... ಹಿಂದೆ ಬೇಕಿದ್ದು ಮುಂದೆ ಸಿಕ್ಕರೂ ಬೇಡವಾಗುವಂತೆ.. ಬರೀ ನೆನಪಾಗಿ ಉಳಿವ ಕನಸಗಳು ಕೆಲವೊಮ್ಮೆ ಕಾಸರ್ಕದ ಮುಳ್ಳುಗಳಂತೆ. ಮನಸೆಂಬ ಹುಚ್ಚು ಹೊಳೆಯಲ್ಲಿ ಕನಸಗಳೆಲ್ಲಾ ಕೊಚ್ಚಿಹೋಗುವುದೇ ಜಾಸ್ತಿ ಹೌದು ತಾನೆ? ರಾಶಿಯಿಂದ ಮತ್ತಷ್ಟು ಮುತ್ತುಗಳು ಬರಲಿ.

ಚಿತ್ರಾ said...

ತೇಜಸ್ವಿನಿ,

ಕೆಲವೊಮ್ಮೆ ಬದಲಾಗುವ ಕನಸಿನ ಹಿಂದೆ ಓಡುತ್ತಾ ವಾಸ್ತವವನ್ನೇ ಮರೆತು ಬಿಡುತ್ತೇವೆ ಅಲ್ಲವೆ? ಅರಿವಾದಾಗ ತಡವಾಗಿ ಬಿಟ್ಟಿರುತ್ತದೆ. ಕಹಿ ನೆನಪಾಗಿ ಉಳಿಯುತ್ತದಷ್ಟೆ ! ಹೀಗಿರುವಾಗ ಕೆಲವು ಕನಸುಗಳನ್ನು ಹೊಳೆಯಲ್ಲಿ ತೇಲಿ ಬಿಡುವುದೇ ಒಳ್ಳೆಯದೇನೋ!