Showing posts with label ಕವನ. Show all posts
Showing posts with label ಕವನ. Show all posts

April 22, 2023

ನಾವಿಲ್ಲ !


ಚಿಗುರು ಮೂಡುವ ಮೊದಲೇ
ಕೊಡಲಿಯಲಿ ಕಡಿಯುವೆವು
ನಮ್ಮ ಬಣ್ಣಗಳಲ್ಲಿ ಹಸುರಿಲ್ಲ !

ಭೂಮಿಯನು ಅಗೆದಗೆದು
ಬರಿದಾಗಿಸಿದೆವು ಜಲವ
ಬಾಯಾರಿದರೆ ಗುಟುಕು ನೀರಿಲ್ಲ !

ಬೋಳಾಗಿಸಿದೆವು ಮರವ
ಬರಡಾಗಿಸಿದೆವು ನೆಲವ
ಹಂಬಲಿಸಿದರು ಚೂರು ನೆರಳಿಲ್ಲ

ಈ ಭೂಮಿ ನಮದಲ್ಲ
ನಮ್ಮ ಮಕ್ಕಳ ಆಸ್ತಿ
ಈ ಸತ್ಯವನು ನಾವು ತಿಳಿದಿಲ್ಲ !

ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !

( ಫೋಟೋ ಕೃಪೆ : ಅಂತರ್ಜಾಲ )

September 14, 2020

ಹೊಸ ಪೀಳಿಗೆಯ ಜಾನಪದ ಗೀತೆ!



ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಲ್ಲಾ ಸುದ್ದಿಯ ಕೊಡುವಂಥಾs
ಎಲ್ಲ ಸುದ್ದಿಯ ಕೊಡುವಂಥಾ ಮೊಬೈಲ್ ನ
ಎದ್ದೊಂದು ಗಳಿಗೆ ಹಿಡದೇನss

ಟಿಕ್ ಟಾಕ್ ವಿಡಿಯೋ ಚಂದ ಮತ್ತೆ ಪಬ್ ಜಿ ಯು ಚಂದ 
ಮೊಬೈಲ್ ನಲಿ ಚಂದ ಯೂ  ಟ್ಯೂಬುs 
ಮೊಬೈಲ್ ನಲಿ ಚಂದ ಯೂ ಟ್ಯೂಬು  ಇದ್ದರೆ 
ಹೊಸ ಹೊಸ ಅಡುಗೆ  ಮಾಡೇನss 

ಮೊಬೈಲೇ  ಮಾತಾಯಿ ಹಾಕೇನ ಫೇಸ್ ಬುಕ್ಕು 
ಇನ್ಸ್ಟಾಗ್ರಾಮು ಮತ್ತೆ ವಾಟ್ಸಪ್ಪುs 
ಇನ್ಸ್ಟಾಗ್ರಾಮು ಮತ್ತೆ ವಾಟ್ಸಪ್ಪು ಇದ್ದರೆ 
ದಿನವೆಲ್ಲ ನೋಡುತ್ತಾ  ಕಳೆದೇನಾss 

August 26, 2020

ಪ್ರೀತಿಯೇ ಹಾಗೆ

 ಪ್ರೀತಿಯೇ ಹಾಗೆ 
ಸಿಗಬೇಕು  ಅಚಾನಕ್ ಆಗಿ
ಹಿಂದೆಂದೂ ನೋಡದಷ್ಟು 
ಮುಂದೆಂದೂ ಕಾಣದಷ್ಟು !

ಪ್ರೀತಿಯೇ ಹಾಗೆ 
ತುಂಬಿಕೊಳ್ಳ ಬೇಕು ಎದೆಯಲ್ಲಿ 
ಮೊಗೆದಷ್ಟೂ ಮುಗಿಯದಂತೆ 
ಕುಡಿದಷ್ಟೂ ತೀರದಂತೆ !

ಪ್ರೀತಿಯೇ ಹಾಗೆ 
ಆವರಿಸಬೇಕು ನಮ್ಮನ್ನು 
ನೋವೆಂದೂ ತಾಗದಂತೆ 
ಭರವಸೆಯ ನೀಡುವಂತೆ !

January 2, 2020

ಶಕುಂತಲೆ



ಕಪ್ಪು ಕೊಳದಾಳದಲಿ ಕಳೆದಿಹುದು  ಉಂಗುರವು 
ತಿಳಿಯುವಾ ಬಗೆಯುಂಟೇ ಹೇಳೇ ಗೆಳತೀ 

ಮರೆತು ಹೋಗಿಹನವನು ಪ್ರಿಯತಮೆಯ  ಮುಖವನ್ನು 
ಗುರುತಿಸುವ ದಾರಿಯನು ಹೇಳೇ ಗೆಳತೀ 

ಆಶ್ರಮದ ಸೀಮೆಯಲಿ ಆಡಿದಾ ಮಾತುಗಳ 
ನೆನಪಿಸಲಿ ಹೇಗೆ ನಾ ಎಲ್ಲರೆದುರು ?

ಹೂಗಿಡಗಳೆದುರಿನಲಿ ಕೊಟ್ಟಿರುವ ಭಾಷೆಗಳ 
ನಂಬಿ ಕೆಟ್ಟೆನೆ ನಾನು ಪ್ರೀತಿಯೆಂದು?

ಅರಿಯದೆಲೆ ನಡೆದಿರುವ ಚಿಕ್ಕ ತಪ್ಪಿಗೆ ಹೀಗೆ 
ಕೊಡಬಹುದೇ ಮುನಿಯು ಎನಗಿಂಥ ಶಾಪ?

ಕಾಡುಮೇಡಲಿ  ಅಲೆದು ತಪಗೈವ ಋಷಿಗಳಿಗೆ 
ತಿಳಿಯಬಹುದೇ ಎನ್ನ ಎದೆಯ ತಾಪ ?

ತಾಯಿಯಿಲ್ಲದ ಕುವರಿ ತಪ್ಪಿ ನಡೆದಿಹಳೆಂದು 
ಬೆಳೆಸಿದಾತನಿಗೊಂದು  ಹೆಸರು ಬಂತೆ?

ನಂಬಿ ಬಂದವಳಿಂದು ನೊಂದು ನಿಂತಿಹಳೆಂದು 
ಕುಳಿತ ಅರಸನಿಗಿಂದು ಚಿಂತೆಯುಂಟೆ?

ಧಿಕ್ಕಾರವಿರಲಿ ಈ ಬಗೆಯ ಮೋಸದ ಬಲೆಗೆ 
ಬೇಡವೆನಗಿವನ  ಆಸರೆಯ ಭಿಕ್ಷೆ 

ಹೊತ್ತ ಶಿಶುವನು ಸ್ವಾಭಿಮಾನದಲಿ ಸಾಕುವೆನು 
ಕಂದಗಿರುವುದು ಎನ್ನ ಪ್ರೇಮ ರಕ್ಷೆ 

December 17, 2019

ಕಾಣೆಯಾಗಿರುವಳೇ ಅವಳು ?


ಬೊಗಸೆಗಣ್ಣಿಗೆ ಅಮ್ಮ ಹಚ್ಚಿರುವ ಕಾಡಿಗೆ
ಬೆಣ್ಣೆಗಲ್ಲದ ಮೇಲೆ ಕರಿಯ ಬೊಟ್ಟು
ಕೆಂಪು ತುಟಿಗಳ ತುಂಬಾ ನಗೆಯ ಬೆಳದಿಂಗಳು
ಪ್ರೀತಿ ಉಕ್ಕಿಸುವ ಆ ಪುಟ್ಟ ಹುಡುಗಿ

ಕೈಬಳೆಯ ಕಿಂಕಿಣಿಸಿ , ಕಾಲ್ಗೆಜ್ಜೆ ಝಲ್ಲೆನಿಸಿ
ಕಿಲಕಿಲನೆ ನಗು ನಗುತ
ಮನೆತುಂಬ ಓಡುತ್ತಾ
ಹರುಷ ತುಂಬುವ ನಮ್ಮಮುದ್ದು ಹುಡುಗಿ

ಉದ್ದ ಲಂಗದ ನೆರಿಗೆ ಮೇಲೆಕೆತ್ತಿ
ಮುದ್ದು ಮೊಗದಲಿ ದೊಡ್ಡ ನಗುವ ಹರಡಿ
ಚೋಟುದ್ದ ಜಡೆಗೆ ಮಾರುದ್ದ ಹೂ ಮುಡಿದು
ಬಿಂಕದಲಿ ಕೊರಳ ಕೊಂಕಿಸುವ ಬೆಡಗಿ

ಕಳೆದು ಹೋಗಿಲ್ಲವಳು ಬೆಳೆದು ನಿಂತಿದ್ದಾಳೆ
ಜಾಣೆಯಾಗಿದ್ದಾಳೆ ಮುಗ್ಧ ಹುಡುಗಿ

May 28, 2019

ಮುತ್ತು


 

ಒಮ್ಮೆ ಬಾ ನೀ ಬಳಿಗೆ
ಬಿಡುವಾಗಿ ಅರೆಗಳಿಗೆ 
ಕೊಡಲೇ ಬೇಕಿದೆ ಒಂದು ಸಿಹಿಯ ಮುತ್ತು 

ಮರಳಿ ಬರುವುದೇ ಸಮಯ 
ಎಂಬ ಯೋಚನೆಯಲ್ಲೇ 
ಮುಗಿಯಬಾರದು ಈ ಉಳಿದ ಹೊತ್ತು 

ಕಡೆಯ ಸಲವೆಂಬಂತೆ
ಕೈಯಲ್ಲಿ  ಕೈಯಿಟ್ಟು 
ಕಳೆಯಬೇಕೆನಿಸುತಿದೆ ಕೊಂಚ ಸಮಯ 

ಕಣ್ಣು ತುಂಬಿದೆ ನೀರು
ಎದೆಯೊಳಗೆ ಕಸಿವಿಸಿಯು 
ನೋವಿಂದ  ಹಿಂಡುತಿದೆ  ಏಕೋ ಹೃದಯ 

ಬೇಕಿಲ್ಲ ಸಿಹಿ ಮಾತೂ 
ಸನಿಹ ಕುಳಿತಿರು ಸಾಕು 
ಕೊಡಲೇ ಬೇಕಿದೆ ಒಂದು ಕಡೆಯ ಮುತ್ತು 

May 15, 2019

ನಮ್ಮಲ್ಲಿ ಸಂಜೆಗಳು ಹೀಗಿರುವವು !



ಆಫೀಸಿನಿಂದ ಮನೆಗೆ ಮರಳುವ ಜನರು
ಶಾಲೆ ಕಾಲೇಜಿನ ಬ್ಯಾಗು ಹೊತ್ತವರು
ಮಂದಿರದ ಕುಂಕುಮ ಹಣೆಗಿಟ್ಟು ನಡೆವವರು 
ಒಟ್ಟಾಗಿ ಎಲ್ಲರೂ ರಸ್ತೆ ತುಂಬಿಹರು
ನಮ್ಮಲ್ಲಿ ಸಂಜೆಗಳು ಹೀಗಿರುವವು
ಸಿಗ್ನಲ್ ನಲಿ ನಿಂತ ವಾಹನಗಳು
ಕಿವಿಗೆ ಕರ್ಕಶವಾದ ಹಾರನ್ ಗಳು
ಕಾಲಿಡಲು ಸ್ಥಳವಿರದ ಫುಟ್ ಪಾತ್ ಗಳು
ನಡುವೆಯೇ ಚಾಚಿರುವ ಬಡ ಕೈಗಳು
ನಮ್ಮಲ್ಲಿ ಸಂಜೆಗಳು ಹೀಗಿರುವವು
ಬೇಕೆಂದರೂ ಸಿಗದು ಶಾಂತಿ ಇಲ್ಲಿ
ತಾಳ್ಮೆ ಸಹನೆಗಳಿಗೆ ಜಾಗವೆಲ್ಲಿ
ಸಿಡುಕಾಟ ಗೊಣಗಾಟ ನಿತ್ಯವಿಲ್ಲಿ
ಕಳೆಯುತಿದೆ ಜೀವನವು ರಸ್ತೆಯಲ್ಲಿ
ನಮ್ಮಲ್ಲಿ ಸಂಜೆಗಳು ಹೀಗಿರುವವು
ನಿಮ್ಮಲ್ಲಿ ಸಂಜೆಗಳು ಹೇಗಿರುವವು ?

March 28, 2019

ಆಭರಣ



ಒಲವ ಮಲ್ಲಿಗೆ ಮುಡಿದು 
ಬಳಿಗೆ ಬಂದಿಹ ಸತಿಯ 
ಕೇಳಿದನು ಪತಿಯು  ಬರಸೆಳೆದು ತೋಳಿನಲಿ 

ನಾಚಿಕೆಯ ಆಭರಣ 
ತೊಟ್ಟು ಬಂದಿಹೆಯೇಕೆ 
ತುಂಟತನ ಬೇಕಾದ ಸಮಯದಲ್ಲಿ 

ನಿಂತಲ್ಲೇ ನೀರಾಗಿ ಕರಗಿ 
ಹೇಳಿದಳವಳು ನೀವಿರುವಿರಲ್ಲ 
ನಾಚಿಕೆಯ ಕಳೆದಿಡಲು 

ಏನಾದರೂ ತೊಡುಗೆ 
ಬೇಕಿಲ್ಲವೇ ನಿಮಗೆ   
ಶೃಂಗಾರ ಸಮಯದಲ್ಲಿ ಸರಿಸಿ ಬದಿಗಿಡಲು !

June 16, 2018

ಬರೆಯಲಾಗದ ಹಾಡು !

ಬರೆಯಬೇಕೆನಿಸಿದರೂ ಬರೆಯಲಾಗದ ಹಾಡು 
ನೂರೆಂಟು ಉಳಿದಿಹುದು  ಮನಸಿನೊಳಗೆ 
ಬರೆಯುವುದೋ ಬೇಡವೋ ಎಂಬ ತೊಳಲಾಟದಲಿ
ಬೇಯುತಿಹೆ ನೋಯುತಿಹೆ  ಒಳಗಿಂದೊಳಗೆ 

ನನ್ನೊಡಲ ಭಾವಗಳ ನಿನ್ನೆದುರು ತೆರೆದಿಡಲೇ
ಓದಬಲ್ಲೆಯಾ ಗೆಳೆಯಾ ಪ್ರೀತಿಯಿಂದ?
ನಗುಮೊಗದ ಹಿಂದಿರುವ ನೂರೆಂಟು ನೋವುಗಳ 
ನೋಡಬಲ್ಲೆಯಾ ಗೆಳೆಯಾ ಸಹನೆಯಿಂದ?

ಬೇಸರಾಗಿದೆ ಮಾತು  ಮನವ ತುಂಬಿದೆ ಮೌನ 
ಎದೆಯಲ್ಲಿ ಸುಡುತಿರುವ  ಬೆಂಕಿಯಿಹುದು 
ಬಯಸಿದರೂ  ಸಿಗದಿರುವ  ಬಗೆ ಬಗೆಯ ಕನಸುಗಳು 
ಅಣಕವಾಡುತ  ನನ್ನ  ಕಾಡುತಿಹುದು 

March 11, 2018

ಪ್ರಯಾಣ





ಇಲ್ಲಿಯ ಲೋಕಲ್ ಟ್ರೈನ್  ನಲ್ಲಿ 
ಬಾಗಿಲೆದುರೆ ಇಟ್ಟ ಎರಡು ಬುಟ್ಟಿ
ಒಂದರಲ್ಲಿದೆ ಮೀನು  ಇನ್ನೊಂದರಲ್ಲಿ  ಹೂವು !
ಅದರತ್ತಿತ್ತ ಚೆಲ್ಲಿದ ಶೇಂಗಾ ಸಿಪ್ಪೆ 
ಕಾಲಿಟ್ಟರೆ ಅಡಿಗೆ ಸಿಕ್ಕಿದ ಪ್ಲಾಸ್ಟಿಕ್ ನ ಚರಪರ
ತೊಂದರೆ ಇಲ್ಲ ಬಿಡಿ , ಕಾಲಿಡಲಾದರೂ  ಜಾಗವೆಲ್ಲಿ ?

ತುಸುವೇ ಜಾಗ ಸಿಕ್ಕರೂ  ಅಲ್ಲೇ ಕುಳಿತು
ಕಾರ್ಡು  ಹಚ್ಚುವವರಿಗೂ ಕೊರತೆಯಿಲ್ಲ 
ನಿಂತೇ ಬೇಕಾದರೂ ಆಟಿನ್ ರಾಣಿ,  ಇಸ್ಫೀಟು ಎಕ್ಕಾ 
ಎನ್ನುತ್ತಾ ಸಂಭ್ರಮಿಸುತ್ತಾರೆ .

ಅಲ್ಲಿಯೇ ಎಲ್ಲೋ ಒತ್ತಿಕೊಂಡು 
ಒಳ ತೂರಿದ ಪುಟ್ಟ ಹುಡುಗ 
ಕೂದಲಿಲ್ಲದವರೆದುರಿಗೂ  ಬಾಚಣಿಕೆ ಹಿಡಿಯುತ್ತಾನೆ 
ಸುರಿಯುವ ಮೂಗನ್ನು
ಜೋಲುವ ಅಂಗಿಯ ತೋಳಿಗೆ 
 ಉಜ್ಜಿಕೊಳ್ಳುತ್ತಾನೆ

ಇನ್ನು ಲೇಡೀಸ್ ಬೋಗಿಯನ್ನೇನು ಕೇಳೋಣ 
ಮನೆಯಿಂದ ಹೊರಡುವಾಗ 
ಪೂಸಿಕೊಂಡ ಸೆಂಟು 
ಬೋಗಿ ಹತ್ತುವ ವರೆಗೂ ಜೊತೆಯಲ್ಲೇ ಇತ್ತು 
ಒಳಗೆ  ಹತ್ತೆಂಟು  ವಾಸನೆಗಳ ನಡುವೆ 
ಎಲ್ಲೋ ಸೇರಿ ಹೋಯ್ತು  
ಸೀಟು ಸಿಕ್ಕಿದರೆ  ಕುಳಿತು ಬಿಡಿಸ ಬಹುದು  ಬಟಾಣಿ 
ಮಾತಾಡುತ್ತಲೇ ತರಕಾರಿ ಹೆಚ್ಚಿದರೆ 
ಅಡುಗೆ ಸಲೀಸು 
ಪಕ್ಕದವಳ ಸೀರೆಯ ಬಗ್ಗೆ ವಿಚಾರಿಸುವಾಗಲೇ 
ಬರುತ್ತಾಳೆ ಕೆದರು ಮಂಡೆಯ ಪೋರಿ , 
ಸೀರೆ ಪಿನ್ನು ತೊಗೋ ಅಕ್ಕಾ ಎಂದು 
ಅವಳ ಹರಿದ ಲಂಗಕ್ಕೊಂದೆರಡು ಪಿನ್ನು ಬೇಕು 

ಮನೆಯಿಂದ  ಕೆಲಸಕ್ಕೆ , ಶಾಲೆ- ಕಾಲೇಜಿಗೆ 
ನಿತ್ಯ ಹೋಗಿ ಬರುವಾಗ  ಈ ಪ್ರಯಾಣದಲ್ಲೇ
ಹುಟ್ಟುತ್ತವೆ , ಬೆಳೆಯುತ್ತವೆ ,ಬಾಂಧವ್ಯಗಳು 
ಜಾತಿ, ಮತ , ವಯಸ್ಸಿನ ಭೇದವಿಲ್ಲದೆ 
ಮೇಲು ಕೀಳೆನ್ನದೆ ಎಲ್ಲರನ್ನೂ ಎಲ್ಲವನ್ನೂ 
ಹೊಟ್ಟೆಯಲ್ಲೇ ಹೊತ್ತು  ಮುಂದೋಡುವ 
ಲೋಕಲ್  ಟ್ರೈನಿನೆದುರು  
ಭಗವಂತನೂ ಬೆರಗಾಗಿದ್ದಾನೆ 






February 14, 2018

ನೀ ನಕ್ಕಾಗ !





ಅಂದು ನೀ ನಕ್ಕಾಗ ಸಂಜೆಯಲಿ ಕೆಂಪಿತ್ತು  
ತಿಂಗಳನ ಅಂಗಳದಿ ಬೆಳದಿಂಗಳರಳಿತ್ತು
ಮಲ್ಲಿಗೆಯ ಮಂಟಪದಿ  ಪರಿಮಳವು ಹರಡಿತ್ತು 
ಚೆಂಗುಲಾಬಿಯು ಮುಳ್ಳ ನಡುವೆಯೂ ಬಿರಿದಿತ್ತು 
ನಿನ್ನ ಕಣ್ಣೋಟದಲಿ ಮಾದಕತೆ ತುಳುಕಿತ್ತು
ಬಳಿಗೆ ಬಾ ಎನ್ನುತಲಿ ನನ್ನನ್ನು ಕರೆದಿತ್ತು 
ಕಾಲಗೆಜ್ಜೆಯ ನಾದ ಎದೆಯ ಝಲ್ಲೆನಿಸಿತ್ತು 
ನನ್ನುಸಿರೇ ನೀನಾಗಿ ಎದೆಯ ತುಂಬಿರುವಾಗ
ಭೂಮಿ-ಬಾನೆಲ್ಲವೂ ಒಂದಾಗಿ  ನಲಿದಿತ್ತು

November 18, 2017

ಹೇಳು ....



ಇರುಳ ನೆರಳಲಿ  ಎನ್ನ 
ಮರುಳು ಮಾಡುವುದೇಕೆ 
ಮುಂಗುರುಳ ಸರಿಸುತಲಿ
ಮುದ್ದುಗರೆಯುವೆಯೇಕೆ 

ನನ್ನೊಲವೆ ನೀನೆಂದು 
ಮೋಹಗೊಳಿಸುವುದೇಕೆ 
ಅಧರಗಳ ಮಧುವನ್ನು 
ಸವಿದು ನಗುತಿಹೆಯೇಕೆ 

ಹೃದಯದಲಿ ನೂರಾರು 
ಬಯಕೆ ತುಂಬುವುದೇಕೆ 
ಮತ್ತೀಗ ಮೌನದಲಿ  
ಮನವ ಕಲಕುವುದೇಕೆ

ಹಾಗೇಕೆ ಹೀಗೇಕೆ
ಹೇಳು ಇನಿಯಾ 
ಬರುವುದೋ ಬಿಡುವುದೋ 
ನಿನ್ನ ಸನಿಯ 

October 9, 2017

ಬಯಕೆ

ರವಿಯ ಹೊಂಗಿರಣವು  ಕಣ್ಣ ಸೋಕುವ ತನಕ 
ಮುದ್ದು ಮುಖದಲಿ  ಕೆಂಪು ಎದ್ದು ಕಾಣುವ ತನಕ 
ಎದೆ ಬಡಿತ  ಹೆಚ್ಚಾಗಿ  ಕಿವಿಗೆ ಕೇಳುವ ತನಕ 
ಬಂಧಿಸುವ  ಬಯಕೆಯಿದೆ  ನನ್ನ ಚೆಲುವೆ 

ಹಚ್ಚಿದಾ ತುಟಿ ಬಣ್ಣ ಒರೆಸಿ ಹೋಗುವ ತನಕ 
ಕಣ್ಣಿನಾ ಕಾಡಿಗೆಯು ತೀಡಿ ಹೋಗುವ ತನಕ 
ಕಟ್ಟಿದಾ ಹೆರಳದು  ಬಿಚ್ಚಿ ಹರಡುವ ತನಕ 
ಮುದ್ದಿಸುವ ಬಯಕೆಯಿದೆ ನನ್ನ  ಚೆಲುವೆ 

ನಾಚಿಕೆಯ ತೆಳು ಪರದೆ  ಕಳಚಿ ಬೀಳುವ ತನಕ 
ಬಯಕೆಗಳ  ಪೂರದಲಿ  ಕೊಚ್ಚಿ ಹೋಗುವ ತನಕ 
ಮೈಮನಗಳೊಂದಾಗಿ  ಕರಗಿ ಹೋಗುವ ತನಕ 
ಪ್ರೀತಿಸುವ ಬಯಕೆಯಿದೆ ನನ್ನ ಚೆಲುವೆ 

July 22, 2017

ಕಾಯುತಿಹೆ .....



ನಿನ್ನ ಕನಸುಗಳಲ್ಲಿ ನಾನಿಹೆನೋ ಇಲ್ಲವೋ 
ನನ್ನ ಕನವರಿಕೆಯಲಿ ನೀನಿರುವೆ ಗೆಳೆಯ 
ಬೆಳಗಿನಲಿ  ಸಂಜೆಯಲಿ , ಏಕಾಂತದಿರುಳಿನಲಿ 
ನನ್ನ ಮನ ಬಯಸಿಹುದು  ನಿನ್ನ ಸನಿಯ 

ತನುವ ಕಚಗುಳಿಯಿಡುತ ಕೇಳುತಿದೆ ತಂಗಾಳಿ 
ಎಂದು ಬರುವನು  ಹೇಳು ನಿನ್ನ  ಇನಿಯ ?
ಬಳಸುವನೆ ತೋಳಿನಲಿ  ಕೆಣಕುವನೆ ಮಾತಿನಲಿ ?
ಪಿಸುಮಾತು  ತುಂಬುವುದೇ  ನಿನ್ನ  ಕಿವಿಯ ?

ಮುಡಿದ ಮಲ್ಲಿಗೆ ಮಾಲೆ  ಜಡೆಯಲ್ಲೇ ಬಾಡುವುದೇ?
ಪರಿಮಳವು  ಪಸರುವುದೇ ಕೋಣೆಯಲ್ಲಿ?
ಬಳೆಯ ಕಿಂಕಿಣಿ  ನಾದ ಕೇಳುವುದೇ ನೀ  ಹೇಳು 
ಕುಂಕುಮವು  ಕರಗುವುದೇ  ಬೆವರಿನಲ್ಲಿ ? 

ಸಂಜೆ ಇಳಿದಿದೆ ನಲ್ಲ ,  ಒಳಗೆ ಬೆಳಗಿದೆ ದೀಪ  
ಸಜ್ಜೆಮನೆಯೊಳಗಿಹುದು  ಧೂಪದಾರತಿಯು   
ಕಾತರದಿ ಕಾಯುತಿಹೆ ಮನೆಯ ಮುಂಬಾಗಿಲಲಿ  
ಬಂದು ಬೇಗನೆ  ಮನಕೆ ಮುದವ ನೀಡು

June 28, 2017

ಮಲೆನಾಡ ಮಳೆಗಾಲ



ಧೋ ಎಂದು ಸುರಿವ ಮಳೆ
ರಸ್ತೆ ತುಂಬಿದ ನೀರು 
ತೇಲಿ ಬಿಟ್ಟಿಹ ದೋಣಿ 
ಕುಣಿದು ಸಾಗುವುದು 

ಬಚ್ಚಲಿನ ಒಲೆಯಲ್ಲಿ 
ಗೇರು ಬೀಜದ  ಘಮಲು 
ಅಡುಗೆ ಮನೆಯೊಳಗೆ
ಬಿಸಿ ಹಪ್ಪಳದ ಪರಿಮಳ 

ಅಂಗಳಕೆ ಕಾಲಿಡಲು 
ಇಂಬಳದ ಭಯವಿಹುದು  
ಕಂಬಳಿಯ ತೆಕ್ಕೆಯಲಿ 
ಮಲಗುವುದೇ ಬಲು  ಸುಖ 

ಕಿಟಕಿ ಬದಿಯಲಿ ಖುರ್ಚಿ 
ಕೈಯಲ್ಲಿ ಬಿಸಿ ಕಾಫಿ 
ಹೊರಗೆ ಸುರಿಯುವ ಮಳೆಯ 
ಜೋಗುಳದ ಹಾಡು 

ಮಲೆನಾಡ ಮಳೆಗಾಲ 
ಮನಸಲ್ಲಿ ಹಸುರಾಗಿ 
ಎಂದೆಂದೂ ಮರೆಯದಿಹ 
ಮಧುರ ನೆನಪು 

June 18, 2017

ಚಂದ್ರ ನಾಚಿದ ಸಮಯ !



ನೇಸರನು ಭೂಮಿಯನು
ಚುಂಬಿಸುವ ಸಮಯದಲಿ
ಕಣ್ಣ ಮಿಟುಕಿಸಿತೊಂದು ತುಂಟ ತಾರೆ
ಸಾಗರನು ಕೆಂಪಾಗೆ
ನಾಚಿ ನಿಂತನು ಚಂದ್ರ
ಪ್ರಿಯನ ತೋಳಲಿ ಅಡಗಿದಳು ನೀರೆ
ಕನಸು ತುಂಬಿದ ಕಣ್ಣು
ತುಸುವೇ ಬಿರಿದಿಹ ಅಧರ
ಬಿಸಿಯಾಗಿ ಕೆಂಪಾದ ಅವಳ ಕೆನ್ನೆ
ಬಳ್ಳಿ ನಡುವಿನ ತನುವು
ನವಿರಾಗಿ ನಡುಗಿರಲು
ಬಿಗಿಯಾಗಿ ಬಳಸಿದಳು ಇನಿಯನನ್ನೇ 

February 27, 2015

ಮೌನ ರಾಗ




ಆಡಲೇನೂ  ಇಲ್ಲ   ಆದರೂ 
ಏನಾದರೂ  ಹೇಳಬೇಕೆನಿಸುತ್ತದೆ  
ಹುಡುಕುತ್ತಿದ್ದೇನೆ ಶಬ್ದಗಳನ್ನು 

ವರುಷ ವರುಷಗಳಿಂದ 
ಎದೆಯಲ್ಲೇ ಉಳಿದ , 
ಬಚ್ಚಿಟ್ಟ ಮುಚ್ಚಿಟ್ಟ  ಮಾತುಗಳನ್ನು 

ಬೇಕಾದಾಗ ನೆನಪಾಗದ ,
ನೆನಪಾದರೂ ಹೇಳಲಾಗದ 
ನೂರಾರು ಭಾವಗಳನ್ನು

ಹಂಚಿಕೊಳ್ಳಲೇ ನಿನ್ನೊಡನೆ ? 
ಅಥವಾ  ಇದ್ದು ಬಿಡಲೇ  ಹೀಗೆ  
ಮೌನವಾಗಿಸಿ ನನ್ನ ಮಾತುಗಳನ್ನು ! 

February 14, 2015

ಗೆಜ್ಜೆ ಕಾಲಿನ ಹುಡುಗಿ




ಕಂಡೂ ಕಾಣದ ಸಂಜೆಯಲಿ 
ಅತ್ತಿತ್ತ ನೋಡುತ್ತಾ 
ಮೆತ್ತಗೆ ಮುತ್ತಿಟ್ಟು  ಕರಗಿದವಳೇ 

ಬಿಸಿಯೇರಿದಾ ಕೆನ್ನೆ 
ತಂಪಾಗುವ  ಮೊದಲು
ಕೆಂಪಾದ ಪರಿಯನ್ನು ನೋಡದವಳೇ 

ಕೈಯಲ್ಲಿ ಕೈಯಿಟ್ಟು 
ಬೆರಳಾಟವಾಡುತ್ತ
ತುಂಟನೋಟವ ಬೀರಿ ನಾಚಿದವಳೇ 

ಎದೆಬಡಿತ ಏರಿಸಿ 
ಕೆನ್ನೆ ಕೆಂಪಾಗಿಸಿ 
ಕೈಗೆ ಸಿಗದೆಲೆ ದೂರ ಓಡಿದವಳೆ ! 

ಕಾಯುತಿರುವೆನು ನಿನ್ನ
ಗೆಜ್ಜೆ ಕಾಲಿನ ಸದ್ದು 
ಮೆಲ್ಲಗೆ ಬಳಿಬಂದು ಅಪ್ಪಿಕೊಳ್ಳೆ

July 1, 2013

ಉತ್ತರ


ಇಲ್ಲಿನ ಸಂಗತಿಗಳನ್ನೇನು ಹೇಳಲಿ ?
ಮರುಭೂಮಿಯ ಏಕಾಂತವೂ 
ಸಂತೆಯಂತೆ ಗಿಜಿಗುಡುತ್ತಿದೆ 

 ಅಮ್ಮ ಚೇಳಿನ ಚಿಂತೆ ಬಿಟ್ಟು 
 ಹಾಯಾಗಿ ಮಲಗು 
 ಮರಿ  ಎಲ್ಲಿ ಹೋಯ್ತೆಂಬ ಜಾಡೂ ಇಲ್ಲ ಅದಕ್ಕೆ 

 ಮನದ ಕದವನ್ನು ಮುಚ್ಚಿರಬೇಕು ನೀನು 
 ಅದಕ್ಕೆ ಕೇಳುತ್ತಿಲ್ಲ ದನಿಗಳು 
 ಕೊಂಚವೇ ಸರಿಸಿ ನೋಡು 
 ಮುದಗೊಳಿಸುತ್ತವೆ ಶಬ್ದಗಳು 

 ಒಂಟಿಯಾಗಿದ್ದೀಯ ಅದಕೇ  ಸಂಕಟ 
 ಜೊತೆಯಾಗಿ ನೋಡು  ಜಗದೊಡನೆ ,
ಇಲ್ಲಿ ತುಂಬಿದ  ಪ್ರೀತಿ 
 ತಿಳಿಯುವುದು ನಿನಗೆ

(ಬ್ಲಾಗ್ ಗೆಳೆಯ ಸುಧೇಶ್, ಅಪರೂಪಕ್ಕೆ ಒಂದು ಕವನ ಬರೆದರು , ನವ್ಯ ಶೈಲಿಯಲ್ಲಿ ! ಅದನ್ನು ಓದಿದಾಗ  ಅದಕೊಂದು ಉತ್ತರ ಹೊಳೆಯಿತು . ಬಹುದಿನಗಳ ನಂತರ  ಮತ್ತೊಮ್ಮೆ ಶಬ್ದಗಳು ಸರಾಗವಾಗಿ ಹರಿದಾಡಿದವು. ಅದರ ಪರಿಣಾಮ  ಈ ಕವನ . ಸ್ಪೂರ್ತಿಗಾಗಿ ನನ್ನ ಬ್ಲಾಗ್ ಸುಧೇಶ್ ಗೆ ಥ್ಯಾಂಕ್ ಹೇಳ್ತಾ ಇದೆ ! ) 

ಸುಧೇಶ್ ರ ಪ್ರಶ್ನೆ ಇಲ್ಲಿದೆ ನೋಡಿ !

February 3, 2013

ಹನಿಗಳು ....

ಅದೆಷ್ಟೋ ತಿಂಗಳುಗಳೇ ಕಳೆದವು !  ನಾನು ಬರೆಯುತ್ತೇನೆ  ,ನನ್ನದೊಂದು ಬ್ಲಾಗ್ ಇದೆ ಎಂಬುದು  " ನಾನೂ ಬರೆಯುತ್ತಿದ್ದೆ, ಬ್ಲಾಗ್ ಇತ್ತು ,"   ಎಂಬ ಭೂತಕಾಲವಾಗಿ  ಬದಲಾಗುವ ಮೊದಲೇ , ಅದಕ್ಕೊಂದೆರಡು ಹನಿ ನೀರು ಹನಿಸಿ  ಜೀವಂತವಾಗಿಡುವ ಪ್ರಯತ್ನದಲ್ಲಿ .......

೧.


ಶೂನ್ಯ ತುಂಬಿದ ಕಣ್ಣು, ಕಳೆದು ಹೋಗಿದೇ ಕನಸು
ಭಾವನೆಗಳಿಲ್ಲದೆ ಬರಡಾಗಿದೆ ಮನಸು
ಬರಿದಾದರೂ ಖಾಲಿಯಲ್ಲದ ಪುಟಗಳಲಿ
ಗೀಚಿದ್ದನ್ನೆಲ್ಲ ಅಳಿಸಿ ಹಾಕಿದ ಗುರುತು
ಮತ್ತದೇ ಮೌನ , ಮತ್ತೆ ನೀರಸ ಬದುಕು !

----------------------------------------------

೨. 

ನಿನ್ನ ನೆನಪಾದಾಗೆಲ್ಲ 
 ಮನದ ಮೂಲೆಯಲ್ಲೆಲ್ಲೋ ಸಣ್ಣ ಛಳುಕು
ಜೊತೆಯಾಗಿ ಕಳೆದ  
ಕ್ಷಣಗಳ  ನೆನಪು . 
ಕಣ್ಣಲ್ಲಿ ತುಂಬಿತೆ  ಬೆಳಕು  ? 
ಯಾರೇನು ತಿಳಿವರೆಂಬ ಅಳುಕು