August 8, 2008

ಮಳೆಗಾಲ ...



ಳೆಗಾಲ ಶುರುವಾಗಿ ಎಷ್ಟೋ ವಾರಗಳು ಕಳೆದವು ಲೆಕ್ಕಾಚಾರದಂತೆ. ಆದರೆ ಈ ಮಳೆಯಿನ್ನೂ ಫಸ್ಟ್ ಗೇರ್ ನಿಂದ ಮುಂದೆ ಹೋಗುತ್ತಲೇ ಇಲ್ಲ ! ಇಂದು ಸುರಿಯಬಹುದು ನಾಳೆ ಜೋರಾಗಬಹುದು ಎಂದು ಕಾದಿದ್ದಷ್ಟೇ ಬಂತು. ಒಮ್ಮೆ ಜೋರಾಗಿ ಮಳೆ ಹಿಡಿದರೆ, ಸಂಜೆ ಮನೆಗೆ ಹೋದ ಕೂಡಲೇ ಬಿಸಿ ಬಿಸಿ ಪಕೋಡಾ/ ಭಜಿ ಮಾಡಿಕೊಂಡು ಹೊಗೆಯಾಡುವ ಕಾಫಿ ಅಥವಾ ಟೀ ಕಪ್ ಹಿಡಿದುಕೊಂಡು ಕಿಟಕಿಯಿಂದಾಚೆ ಸುರಿಯುವ ಮಳೆಯನ್ನು ನೋಡುತ್ತ ಕುಳಿತುಬಿಡಬೇಕು ಎಂದು ಕಾಯುತ್ತಲೇ ಇದ್ದೇನೆ. ಆದರೆ ಈ ಮಳೆಯೇಕೋ ಈ ಸಲ ಕೈ ಕೊಡುವ ಲಕ್ಷಣ ತೋರುತ್ತಿದೆ. ನನ್ನ ಬಿಸಿ ಕಾಫಿ - ಈರುಳ್ಳಿ ಪಕೋಡಾದ ಕನಸು ಹಾಗೆಯೇ ಉಳಿದು ಬಿಡುವುದೇನೋ ಎಂದು ಯೋಚನೆಯಾಗುತ್ತಿದೆ.

ಎಷ್ಟೋ ವರ್ಷಗಳ ಹಿಂದೆ ಕಂಡ ಮಲೆನಾಡಿನ ಮಳೆಗಾಲದ ಮಜಾ ನೆನಪಾಗುತ್ತದೆ .

ಧಾರಾಕಾರವಾಗಿ ಮಳೆ ಸುರಿದು ಅಂಗಳ ,ಚರಂಡಿಗಳು ತುಂಬಿ ಹರಿಯುವಾಗ , ಅದರಲ್ಲಿ ಪೇಪರ್ ದೋಣಿಗಳನ್ನು ಮಾಡಿ ತೇಲಿಬಿಡುವುದು, ಯಾರ ದೋಣಿ ಮುಂದೆ ಹೋಗುತ್ತದೆ ಎಂದು ಕುತೂಹಲದಿಂದ ಕಾಯುವುದು....
ಮಧ್ಯಾಹ್ನ ಊಟದ ನಂತರ ಬೆಚ್ಚಗೆ ಕಂಬಳಿ ಹೊದ್ದು ಮಲಗುವ ಸುಖವೊಂದಾದರೆ , ಎದ್ದ ಮೇಲೆ ಬಿಸಿ ಬಿಸಿ ಯಾಗಿ ಚಾ ಅಥವಾ ಕಾಫಿ ಲೋಟ ಹಿಡಿದು , ಬಚ್ಚಲ ಒಲೆಯ ಮುಂದೆ ಕುಳಿತು ಬೆಂಕಿ ಕಾಸುವ ಮಜಾನೇ ಬೇರೆ ! ಒಲೆಯ ಮುಂದೆ ಸರಿಯಾದ ಜಾಗಕ್ಕಾಗಿ ನಮ್ಮ ಜಗಳಾಟ ( ಕೆಲವೊಮ್ಮೆ ಹೊಡೆದಾಟ) , ತಕರಾರು ನಡೆಯುತ್ತಿತ್ತು. , ಈ ಗಲಾಟೆ ಸುಧಾರಿಸಲು ಬಂದ ಅಜ್ಜನೋ ಮಾವನೋ ಯಾವುದಾದರೂ ಹಳೆಯ ಘಟನೆಗಳನ್ನೋ , ಕಥೆಯನ್ನೋ ರಸವತ್ತಾಗಿ ವರ್ಣಿಸುತ್ತಿದ್ದರೆ .. ನಾವು ಹಲಸಿನ ಬೇಳೆ , ಹುಣೆಸೇ ಬೀಜ ಅಥವಾ ಹಪ್ಪಳ ಮುಂತಾದವನ್ನು ಸುಟ್ಟು ತಿನ್ನುತ್ತಾ ಆ ಕಥೆಯಲ್ಲಿ ಮೈ ಮರೆಯ ಬೇಕು ....ಆಹಾಹಾ..ಆ ದಿನಗಳೇ ಬೇರೆ !


ಸ್ವಲ್ಪ ದೊಡ್ಡವರಾದ ಮೇಲೆ , ನಾವು ಹೆಣ್ಣುಮಕ್ಕಳಿಗೆ ಮಳೆಗಾಲದಲ್ಲಿ ವಿಧ ವಿಧವಾದ ಹೂವಿನ ಗಿಡಗಳನ್ನು ಒಟ್ಟು ಮಾಡುವ ಉತ್ಸಾಹ ! ಡೇರೆ ಹೂಗಳಿಗೆ ಮೊದಲ ಆದ್ಯತೆ ! ಅಂಗಳದಲ್ಲಿ ಸಾಲಾಗಿ ಬಣ್ಣ ಬಣ್ಣದ , ಬೇರೆ ಬೇರೆ ಸೈಜಿನ ಡೇರೆ ಹೂಗಳು ಅರಳಿ ನಿಂತರೆ ನಮ್ಮ ಸಂಭ್ರಮವೇ ಸಂಭ್ರಮ ! ಗಿಡದಲ್ಲಿ ಮೊಗ್ಗು ಮೂಡುವುದನ್ನೇ ಕಾಯುತ್ತಿದ್ದು , ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಗಿಡಗಳಿಗೆ ಭೇಟಿ ಕೊಡುವುದು, ಮೆಚ್ಚಿನ ಕೆಲಸಗಳು. ಶಾಲೆಯಲ್ಲೂ ಅಷ್ಟೆ, ಯಾರು ದೊಡ್ಡ ಹೂ ಮುಡಿದು ಬರುತ್ತಾರೆ ಎಂಬುದು ಪ್ರತಿಷ್ಟೆಯ ವಿಷಯವಾದರೆ , ಅವರ ಹಿಂದೆ ಕುಳಿತುಕೊಳ್ಳುವವರಿಗೆ , ಮುಂದಿನ ಬೋರ್ಡ್ ಕಾಣದೇ ಒದ್ದಾಟ.

ಮಳೆಗಾಲದಲ್ಲಿ ಅಜ್ಜನ ಮನೆಗೆ ಹೋದರೆ , ಮನೆಯಿಂದಾಚೆ ಕಾಲಿಡಲು ನಮಗೆ ಹೆದರಿಕೆ .ಸಾಗರದಲ್ಲಿ ಬೆಳೆದ ನಮ್ಮ ಮಟ್ಟಿಗೆ ಸಿರ್ಸಿಯ ಉಂಬಳಗಳು ದೊಡ್ಡ ಆತಂಕವಾದಿಗಳು . ಮಳೆ ಬಿದ್ದೊಡನೆ , ಎಚ್ಚರಗೊಂಡು ತಮ್ಮ ಮೂತಿಯನ್ನು ಉದ್ದವಾಗಿಸಿ ಗಾಳಿಯಲ್ಲಿ ಅಲ್ಲಾಡಿಸುತ್ತಾ ಬೇಟೆಗಾಗಿ ಕಾಯುವ ಉಂಬಳಗಳು ನಮ್ಮನ್ನು ಹೆದರಿಸುತ್ತಿದ್ದವು. ಅಪ್ಪಿ ತಪ್ಪಿ ನಮ್ಮ ಕಣ್ತಪ್ಪಿಸಿ ಹತ್ತಿ ಕೊಂಡ ಉಂಬಳಗಳು ಯಥಾ ಶಕ್ತಿ ರಕ್ತ ಕುಡಿದು ಉದುರಿ ಬಿದ್ದ ಮೇಲೆಯೇ ನಮಗೆ ಗೊತ್ತಾಗುತ್ತಿದ್ದದ್ದು . ಹರಿಯುವ ರಕ್ತ ನೋಡಿ ಯಾರಾದರೂ " ಉಂಬ್ಳ ಕಚ್ಚಿತ್ತು ಕಾಣ್ತು" ಹೇಳುವುದೊಂದೇ ತಡ , ನಾವು ಜಗುಲಿಯಿಡೀ ಯಕ್ಷಗಾನ ಕುಣಿದು ( ನಮ್ಮದೇ ಹಿಮ್ಮೇಳದೊಂದಿಗೆ ) ಇನ್ನೇನು ಸತ್ತೇ ಹೋಗುತ್ತೇವೇನೋ ಎನ್ನುವಷ್ಟು ರಂಪಾಟ ಮಾಡುತ್ತಿದ್ದೆವು. ಅತ್ತೆಯೋ , ಅಜ್ಜಿಯೋ ಹೊಗೆಸೊಪ್ಪು -ಸುಣ್ಣ ಇತ್ಯಾದಿ ತಂದು , ಉಂಬಳ ಕಚ್ಚಿದಲ್ಲಿ ಸವರುತ್ತಿದ್ದರು. ಅಷ್ಟರಲ್ಲಿ ನಮ್ಮ ಗಲಾಟೆಗೆ ತಲೆ ಕೆಟ್ಟು ಅಮ್ಮ ಬೆನ್ನ ಮೇಲೆರಡು ಬಾರಿಸಿದರೆ , ನಮ್ಮ ದನಿ ಇನ್ನೂ ತಾರಕಕ್ಕೇರುತ್ತಿತ್ತು .


ಈ ಸಲ ಮಳೆಗಾಲದ ಶುರುವಿನಲ್ಲಿ ಕುಮಟಾದಿಂದ ಸಿರ್ಸಿಗೆ ಹೋಗುವಾಗ ದೇವಿಮನೆ ಘಟ್ಟದಲ್ಲಿ ಕಾರಿಂದ ಕೆಳಗಿಳಿದ ಮಹೇಶ್ ರ ಜೊತೆ ಎರಡು ಉಂಬಳಗಳು ’ ಫ್ರೀ’ ಆಗಿ ಸಿರ್ಸಿಯ ವರೆಗೂ ಪ್ರವಾಸ ಮಾಡಿದ್ದವು .ಮನೆಗೆ ಬಂದು ಕಂಬಳಿಯ ಮೇಲೆ ಕುಳಿತ ಮೇಲಷ್ಟೇ ಅವು ಪ್ಯಾಂಟ್ ನಿಂದ ಕೆಳಗಿಳಿದವು . ’ಸಿರಿ’ ಅದೇ ಮೊದಲಬಾರಿಗೆ ಉಂಬಳ ನೋಡಿದ್ದು , ಆಮೇಲೆ ಹೊರಗೆ ಪ್ರತಿ ಹೆಜ್ಜೆಯಿಡುವಾಗಲೂ ಸುತ್ತ ಮುತ್ತ ನೋಡಿ ಕೊಂಡು ಅತೀ ಜಾಗರೂಕತೆಯಿಂದ ಹೆಜ್ಜೆ ಯಿಡುತ್ತಿದ್ದ ಅವಳನ್ನು ನೋಡಿ ಹಳೆಯ ನೆನಪುಗಳು ತಾಜಾಗೊಂಡವು .

ಮತ್ತೀಗ ಪುಣೆಯ ಮೇಲಂತಸ್ತಿನ ಮನೆಯಲ್ಲಿ , ’ನಿಜವಾದ ಮಳೆಗಾಲ’ ಕ್ಕಾಗಿ ಕಾಯುತ್ತಿದ್ದೇನೆ. ಹೊರಗೆ ಅಂಗಳದಲ್ಲಿ ನೀರಾಡಲಾಗದಿದ್ದರೂ ಕಡೇ ಪಕ್ಷ ಟೆರೇಸ್ ನಲ್ಲಾದರೂ ನಿಂತಷ್ಟೇ ನೀರಿನಲ್ಲಿ ಕಾಲೂರುವ ಬಯಕೆಯಿದೆ. ಸಿರಿಯ ಜೊತೆ ಕಾಗದದ ದೋಣಿ ಮಾಡಿ ತೇಲಿ ಬಿಡುವ ಕಾಲಕ್ಕಾಗಿ ಕಾಯುತ್ತಿದ್ದೇನೆ.

5 comments:

Harisha - ಹರೀಶ said...

>> ಅವರ ಹಿಂದೆ ಕುಳಿತುಕೊಳ್ಳುವವರಿಗೆ , ಮುಂದಿನ ಬೋರ್ಡ್ ಕಾಣದೇ ಒದ್ದಾಟ.

ತಲೆ ಸಣ್ಣದೋ ಹೂವು ದೊಡ್ಡದೋ?!

ಕಡತೋಕಾದಲ್ಲಿ ಉಂಬಳ ಇಲ್ಯ??? :-)

Sushrutha Dodderi said...

feeling nostalgic.. :-( ಮುಂದಿನ್ ವಾರನರು ಊರಿಗ್ ಹೋಗವು..

ಚಿತ್ರಾ said...

ಹರೀಶ,

ಸಣ್ಣ ತಲೆ ಮೇಲೆ ದೊಡ್ಡ ಹೂವು ಕೂತರೆ ಹಾಂಗೇ ಅಲ್ದ?

ಕಡತೋಕಾದ ಮಳೆಗಾಲ ನೋಡಿದ್ದು ಸ್ವಲ್ಪ ಕಮ್ಮಿನೇ. ಹಾಂಗಾಗಿ ಆ ಬದಿಗೆ ಉಂಬಳ ಇದ್ದ ಇಲ್ಯ ಹೇಳಿ ಕೇಳ್ಕ್ಯಂಡು ಹೇಳಕಾಗ್ತು ! :-))


ಸುಶ್ರುತ,

ಊರ ಬದಿಗೆ ಜೋರು ಮಳೆ ಹೇಳಿ ಕೇಳಿದ್ದಿ.ಈಗ ಹೋದ್ರೆ ಒಳ್ಳೆ ಮಜಾ ಬತ್ತಿಕ್ಕು! ಅದೃಷ್ಟವಂತ್ರು!!

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ...
ಚಂದದ ಬರಹ.

ಶಿರಸಿಯಲ್ಲಿ ಎಲ್ಲ ಕಡೆ ಉಂಬ್ಳ ಇಲ್ಲೆ. ನಾನಿನ್ನೂ ಉಂಬಳ ನೋಡ್ಲಿಲ್ಲೆ. ಒಂದ್ಸಲ ಜಿಗಣೆ ನೋಡಿದಿದ್ದಿ. ಜಿಗಣೆ ಹಂಗೆ ಸಣ್ಣಕಿರ್ತು ಉಂಬಳ ಹೇಳಿ ಹೇಳದ್ ಕೇಳಿದ್ದಿ.

ಚಿತ್ರಾ said...

ಶಾಂತಲಾ,


ಧನ್ಯವಾದಗಳು.
ಶಿರಸಿ ಕಡೆಗೂ ಎಲ್ಲ ಬದಿಗೆ ಉಂಬಳ ಇಲ್ಯೇನ ! ನಂಗೊತ್ತಿಲ್ಲೆ !ಆದರೂ ,ಉಂಬಳ ಕಚ್ಚಿಸ್ಕ್ಯಳದ್ದೆ ನೀನು ಒಂದು ಮಜಾ ತಪ್ಪಿಸ್ಕ್ಯಂಡೆ ಛೆ! :-))