August 11, 2008

ಮಳೆಗಾಲದ ನೆನಪುಗಳು .... ಮತ್ತಷ್ಟು

ಸಲ ಮಳೆಗಾಲ ಕೈಕೊಡಬಹುದೇನೋ ಎಂದು ಮೊನ್ನೆ ಬ್ಲಾಗ್ ನಲ್ಲಿ ಬರೆದ ಮರುದಿನದಿಂದಲೇ ಮಳೆ ಜೋರಾಗಿದೆ. ನನ್ನ ಕಂಪ್ಲೇಂಟಿಗೆ ಉತ್ತರವೋ ಎಂಬಂತೆ ಕಳೆದೆರಡು ದಿನಗಳಿಂದ ಒಂದೇ ಸಮ ಸುರಿಯುತ್ತಲೇ ಇದೆ. ಅಂತೂ ಈಗ ಈರುಳ್ಳಿ ಪಕೋಡಾ ಕರಿಯ ಬಹುದೇನೋ !

ಕಳೆದ ವಾರ ಮಳೆಯಿಲ್ಲದೇ ಬಾಯಿಬಿಟ್ಟ ಭೂಮಿಯ ಚಿತ್ರಗಳನ್ನು , ಮಳೆಗಾಗಿ ಕಾಯುತ್ತಿರುವ ರೈತರ ಚಿತ್ರಗಳನ್ನು ಮುಖಪುಟದಲ್ಲಿ ತುಂಬಿಸಿದ ಪತ್ರಿಕೆಗಳು , ಈಗ ನೀರಿನಲ್ಲಿ ಮುಳುಗಿದ ಹೊಲ ಗದ್ದೆಗಳನ್ನು , ಕುಸಿದ ಬೆಟ್ಟಗಳನ್ನು, ಪ್ರವಾಹದಿಂದಾಗಿ ಮನೆ ಬಿಟ್ಟು ಸುರಕ್ಷಿತ ಜಾಗಕ್ಕೆ ಸಾಗುತ್ತಿರುವ ಜನರ ಚಿತ್ರಗಳನ್ನು ಪ್ರಕಟಿಸುತ್ತಿವೆ.ಕೇವಲ ೪-೫ ದಿನಗಳಲ್ಲೇ ಈ ವ್ಯತ್ಯಾಸ ವಿಪರ್ಯಾಸವಲ್ಲವೆ!

ಸುರಿಯುತ್ತಿರುವ ಮಳೆಯೊಂದಿಗೇ ಮಳೆಗಾಲದ ಮತ್ತಷ್ಟು ನೆನಪುಗಳು ಉಕ್ಕುತ್ತಿವೆ !

ಚಿಕ್ಕವರಿದ್ದಾಗ ಜೋರಾಗಿ ಸುರಿಯುವ ಮಳೆಯಲ್ಲಿ ನೆಪಕ್ಕೊಂದು ಕೊಡೆ ಹಿಡಿದು ಚಪ್ಪಲಿಯನ್ನು ಬೇಕೆಂದೇ ಮನೆಯಲ್ಲಿ ಮರೆತು ಬರಿಗಾಲಲ್ಲಿ ಶಾಲೆಗೆ ಹೋಗುವುದೇ ಒಂದು ಸಂಭ್ರಮ ! ರಸ್ತೆಯಲ್ಲಿ ನೀರಾಡುತ್ತಾ ಹೋಗುವುದು ಎಂಥಾ ಮಜಾ ! ಕೆಸರು ನೀರೋ, ಸ್ವಚ್ಛ ನೀರೋ ನಮಗೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿ ಕಣ್ಣಿಗೆ ಬೀಳುವ ಕೆಂಪು ಬಣ್ಣದ " ರೇಶಿಮೆ ಹುಳು’ ಗಳು, ನೀರಿನಲ್ಲಿ ಆಡುವಾಗ ಕಾಲಿಗೆ ಹತ್ತಿಕೊಳ್ಳುವ ನಂಜುಹುಳಗಳು ( ಎರೆ ಹುಳು) , ಮೈ-ಕೈಗೆ ತಾಗಿ ತುರಿಕೆಯೆಬ್ಬಿಸುವ ಕಂಬಳಿ ಹುಳಗಳು, ರಸ್ತೆಯಲ್ಲಿ ಓಡಾಡುವ ವಾಹನಗಳ ಗಾಲಿಯಡಿ ಅಪ್ಪಚ್ಚಿಯಾಗುವ ಕಪ್ಪೆಗಳು, ಮುಟ್ಟಿದರೆ ಚಕ್ಕುಲಿಯಾಗುವ ’ ಚೋರಟೆ’ , ಇತ್ಯಾದಿ ಜೀವಿಗಳು ಮಳೆಗಾಲದಲ್ಲಿ ನಮ್ಮ ಆಸಕ್ತಿಯ ವಿಷಯಗಳು. ಕಂಬಳಿ ಹುಳುವನ್ನು ಬಿಟ್ಟು ಬೇರೆಲ್ಲವಕ್ಕೂ ನಮ್ಮಿಂದ ಸಾಧ್ಯವಿದ್ದ ರೀತಿಯಲ್ಲಿ ತೊಂದರೆ ಕೊಡುವುದು ನಮ್ಮ ಧರ್ಮ ಎಂದು ನಮ್ಮ ಬಲವಾದ ನಂಬಿಕೆ !


ಬೇಸಿಗೆ ರಜೆ ಮುಗಿಯುತ್ತದೆ ಎನ್ನುವಾಗಲೇ ಅಪ್ಪಾಜಿ ನಮಗೆ ರೈನ್ ಕೋಟ್ ತಂದಿಡುತ್ತಿದ್ದರು .ಜೋರಾದ ಮಳೆಯಲ್ಲಿ ನಾವೂ- ನಮ್ಮ ಪುಸ್ತಕಗಳೂ ಒದ್ದೆಯಾಗ ಬಾರದು ಎನ್ನುವುದು ಅವರ ಉದ್ದೇಶವಾಗಿರುತ್ತಿತ್ತು. ನಮಗೋ ರೈನ್ ಕೋಟ್ ಎಂದರೆ ಕಿರಿಕಿರಿಯಾಗುತ್ತಿತ್ತು. ಎಲ್ಲರೂ ಸ್ಟೈಲಾಗಿ ಕೊಡೆ ತಂದರೆ ನಾವು ಮಾತ್ರ ಆ ಭಾಗ್ಯದಿಂದ ವಂಚಿತರಾಗಿದ್ದೇವೆ ಎಂಬ ಅಸಮಾಧಾನ ! ಇಡೀ ಶಾಲೆಗೆ ನಾವು ಮಾತ್ರ ರೈನ್ ಕೋಟ್ ಹಾಕಿಕೊಂಡು ಹೋಗುವುದು ನಮಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಮಳೆಯಿಂದ ರಕ್ಷಿಸುವ ಹೊರತಾಗಿ ರೈನ್ ಕೋಟ್ ನಿಂದ ಇನ್ನೇನೂ ಸಾಧ್ಯವಿಲ್ಲ ಎನ್ನುವುದು ನಮ್ಮ ವಾದ .
ಜೋರಾಗಿ ಗಾಳಿ ಬೀಸಿದಾಗ ರೈನ್ ಕೋಟ್ ಹಾರುವುದಿಲ್ಲ , ಉಲ್ಟಾ ಮಡಚಿಕೊಂಡು ನಮಗೆ ಕಿರುಚಿಕೊಳ್ಳುವ ಅವಕಾಶ ಕೊಡುವುದಿಲ್ಲ, ಕೊಡೆಯಂತೆ ಹೆಗಲ ಮೇಲಿಟ್ಟುಕೊಂಡು ಗರಗರ ತಿರುಗಿಸಲು ಬರುವುದಿಲ್ಲ... ಹೋಗಲಿ ಸಮಯ ಬಂದರೆ ಅದನ್ನು ಹಿಡಿದುಕೊಂಡು ಹೊಡೆದಾಡಲೂ ಬರುವುದಿಲ್ಲ ......ಛೆ ! ಇಂಥಾ ಎಷ್ಟೋ ಒಳ್ಳೊಳ್ಳೆಯ ಪ್ರಸಂಗಗಳು ಈ ರೈನ್ ಕೋಟ್ ನಿಂದ ನಮಗೆ ತಪ್ಪಿಹೋಗಿವೆ ಎಂದು ಸಿಟ್ಟು ಬರುತ್ತಿತ್ತು ! ಈ ಅಪ್ಪಾಜಿಗೆ ಚೂರೂ ಗೊತ್ತಾಗುವುದಿಲ್ಲ ಎಂದು ಅಮ್ಮನ ಎದುರು ಗೊಣಗುವುದಷ್ಟೇ ನಮಗೆ ಸಾಧ್ಯವಿತ್ತು . ಅಪ್ಪಾಜಿಗೆ ನೇರವಾಗಿ ಹೇಳುವ ಧೈರ್ಯ ನಮಗಿರಲಿಲ್ಲ. ಆದರೂ ಹಟ ಮಾಡಿ ಒಮ್ಮೊಮ್ಮೆ ಕೊಡೆ ತೆಗೆದುಕೊಂಡು ಹೋಗಿ, ವಾಪಸ್ ಬರುವಾಗ ಏನಾದರೂ ಮಳೆಯಿಲ್ಲದಿದ್ದರೆ ಆ ಕೊಡೆಯನ್ನು ಶಾಲೆಯಲ್ಲಿಯೇ ಮರೆತು , ಅದು ಕಳೆದು ಹೋಗಿ ಮನೆಯಲ್ಲಿ ಪೂಜೆ ಮಾಡಿಸಿಕೊಂಡ ದಾಖಲೆಯೂ ಇದೆ.


ಆಗೆಲ್ಲ ಕೊಡೆಗಳಲ್ಲಿ ಇನ್ನೂ ಅಷ್ಟಾಗಿ ವೆರೈಟಿ ಬಂದಿರಲಿಲ್ಲ . ಕಪ್ಪು ಬಟ್ಟೆಯ ದೊಡ್ಡ ಕೊಡೆಗಳಷ್ಟೇ ಹೆಚ್ಚಾಗಿ ಕಾಣಿಸುತ್ತಿದ್ದದ್ದು. ಮರದ ಹಿಡಿಕೆ ಅಥವಾ ಸ್ಟೀಲ್ ಹಿಡಿಕೆಯ ಆಯ್ಕೆ ಮಾತ್ರ ಇದ್ದಿದ್ದು. ಹಾಗಾಗಿ , ಕೊಡೆಗಳಿಗೆ ಹೆಸರು ಬರೆದು ಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೂಡ ಎಷ್ಟೋ ಸಲ ಕೊಡೆಗಳು ಕಳುವಾಗುತ್ತಿದ್ದವು. ಆಗ ನಮ್ಮ ತಪ್ಪಿಲ್ಲದಿದ್ದಾಗಲೂ ಮನೆಯಲ್ಲಿ ಕಡುಬು ತಿನ್ನ ಬೇಕಾಗಿದ್ದು ನಾವೇ !


ಮಳೆಗಾಲ ಶುರುವಾಗುತ್ತಿದ್ದಂತೆ ಕಾಣಿಸುತ್ತಿದ್ದ ಕೊಡೆ ರಿಪೇರಿ ಮಾಡುವವನು, ಹಳೆಯ ಕೊಡೆಗಳಿಗೆ ತೇಪೆ ಹಾಕಿ, ಕಡ್ಡಿಗಳನ್ನೆಲ್ಲ ಸರಿ ಮಾಡಿ ಕೊಡುತ್ತಿದ್ದ. " ಈ ಮಳೆಗಾಲ ಒಂದು ಕಳೆದರೆ ಸಾಕು . ಅಷ್ಟು ರಿಪೇರಿ ಮಾಡಿಕೊಡು " ಎನ್ನುವ ಹೆಂಗಸರಿಗೆ , " ಅಮಾ , ಸುಮಾರು ವರ್ಷದಿಂದ ಹೀಂಗೇ ಹೇಳ್ತಾ ಇದ್ರಿ ಬಿಡಿ ನೀವು. ಈ ಸಲ ಈ ಕೊಡೆ ಬಟ್ಟೆನೇ ಬೇರೆ ಹಾಕಿದ್ರೆ ಇನ್ನೂ ೨-೩ ವರ್ಷಕ್ಕೆ ಇದೇ ಕೊಡೆ ಸಾಕು " ಎಂದು ನಗುತ್ತಿದ್ದವನ ಪ್ಯಾಂಟು ಅದೇ ಹಳೇ ಕೊಡೆ ಬಟ್ಟೆಯಿಂದ ಹೊಲಿಸಿದ್ದೇನೋ ಎನ್ನುವುದು ನಮ್ಮ ಗುಮಾನಿಯಾಗಿತ್ತು. ಈಗಾದರೆ ನೋಡಿದಲ್ಲೆಲ್ಲ ಬಣ್ಣ ಬಣ್ಣದ ತರಹಾವರಿ ಕೊಡೆಗಳು , ಬೇರೆ ಬೇರೆ ಸೈಜುಗಳಲ್ಲಿ , ಚಿತ್ರ ವಿಚಿತ್ರ ಡಿಸೈನ್ ಗಳಲ್ಲಿ!

ಸಿರ್ಸಿಯ ಕಡೆ ಹಳ್ಳಿಗಳಲ್ಲಿ ಕೊಡೆ ಅಥವಾ ರೈನ್ ಕೋಟ್ ಗಳಿಗಿಂತ ’ಕಂಬಳಿ ಕೊಪ್ಪೆ’ ಹೆಚ್ಚು ಜನಪ್ರಿಯವಾಗಿತ್ತು. ಕಂಬಳಿಯನ್ನು ವಿಶಿಷ್ಟವಾಗಿ ಮಡಚಿ ಅದು ಬಿಚ್ಚದಂತೆ ಕೊಟ್ಟೆ ಕಡ್ಡಿ ಚುಚ್ಚಿ ತಲೆಗೆ ಹಾಕಿಕೊಂಡರೆ ಅದು ಕಾಲಿನವರೆಗೂ ಇಳಿಯುತ್ತಿತ್ತು.ಮಳೆಯಿಂದ , ಚಳಿಯಿಂದ ತಪ್ಪಿಸಿ ಬೆಚ್ಚಗಿಡುತ್ತಿತ್ತು. . ಹಾಂ , ಕಂಬಳಿ ಕೊಪ್ಪೆ ಎಂದಾಗ ಕಾಲೇಜಿಗೆ ಹೋಗುತ್ತಿದ್ದ ನಾನು , ಮಳೆಗಾಲದಲ್ಲೊಮ್ಮೆ ಅಜ್ಜನ ಮನೆಗೆ ಹೋದಾಗ ಪುಟ್ಟುವಿನ ಜೊತೆ ಬೆಟ್ ಕಟ್ಟಿ , ಕೊಡೆ ಮನೆಯಲ್ಲೇ ಇಟ್ಟು ಕಂಬಳಿ ಕೊಪ್ಪೆ ಹಾಕಿ ಕೊಂಡು ಪಕ್ಕದ ಊರಿನ ನೆಂಟರ ಮನೆಗೆ ನಡೆದು ಕೊಂಡು ಹೋಗಿ ಅವನ ಕಿಸೆಯಿಂದ ೫೦ ರೂಪಾಯಿ ಖಾಲಿಮಾಡಿದ್ದು ನೆನಪಾಗುತ್ತದೆ.

ಈಗ ನಾನು ತಂದು ಕೊಟ್ಟ ಹೊಸಾ ರೈನ್ ಕೋಟ್ ನೋಡಿ ನನ್ನ ಮಗಳು ಮೂತಿ ತಿರುಗಿಸಿ ತನಗೆ ಕೊಡೆಯೇ ಬೇಕು ಅದರಲ್ಲಿಯೂ ಹೊಸಾ ಡಿಸೈನ್ ನ ಹೊಸರೀತಿಯ ಕೊಡೆಯೇ ಬೇಕು ಅಂಥಾದ್ದು ತನ್ನ ಸ್ನೇಹಿತರ ಬಳಗದಲ್ಲೆಲ್ಲೂ ಇರಬಾರದು ಎಂದು ಹಟ ಮಾಡುವಾಗ , ನಾನು ಅವಳಿಗೆ ರೈನ್ ಕೋಟ್ ಕೊಡೆಗಿಂತ ಹೇಗೆ ಒಳ್ಳೆಯದು ಎಂದು ವಿವರಿಸುವ ಪ್ರಯತ್ನ ಮಾಡುತ್ತೇನೆ. ಒಮ್ಮೆಲೇ ನನ್ನದೇ ಹಳೆಯ ಪ್ರತಿಬಿಂಬ ಎದುರು ನಿಂತಂತಾಗಿ ನಗು ಬಂದುಬಿಡುತ್ತದೆ

10 comments:

ಮಾರುತಿ ಜಿ said...

Hi Chitra,


What a beatiful memories....aa nenapugala maathu madhuara..

Jagali bhaagavata said...

ಚೆನ್ನಾಗಿದೆ ನೆನಪುಗಳು. ಬಹುಶಃ ಕರಾವಳಿ ತೀರದಿಂದ ಬರುವ ಹೆಚ್ಚಿನ ಮಂದಿಯ ಮಳೆಗಾಲದ ನೆನಪುಗಳಿವು. ಕೊಡೆಗಿಂತ ರೈನ್-ಕೋಟ್ ಯಾಕೆ ಒಳ್ಳೇದು ಅಂತ ನಮ್ಮಮ್ಮನೂ ತುಂಬ ಸರ್ತಿ ಕಿವಿ ಊದಿದಾರೆ :-)

ನಿಮ್ ಬ್ಲಾಗ್ ಚೋಲೋ ಇದ್ದು. ಎಲ್ಲೂ ಅತಿಭಾರ ಅನ್ನಿಸುವ ಬರವಣಿಗೆ ಇಲ್ಲ :-)

ಚಿತ್ರಾ said...

ಧನ್ಯವಾದಗಳು ಮರ್ತಿ,

ಬರ್ತಾ ಇರಿ.


ಭಾಗವತರೇ,

ನಿಮ್ಮಮ್ಮ ಎಷ್ಟೇ ಕಿವಿ ಊದಿದರೂ ನೀವು ಕಿವಿ ಮುಚ್ಚಿಕೊಂಡು ಕೊಡೆಗಾಗಿ ಹಟ ಹಿಡಿದಿದ್ದಿರೇನೋ ಅಲ್ಲವೆ? :-)

ಮೆಚ್ಚುಗೆಗೆ ಧನ್ಯವಾದಗಳು. ಬರುತ್ತಿರಿ

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ...
ಒಳ್ಳೆಯ ಲೇಖನ.
‘ಅತೀವೃಷ್ಠಿ ಅಥವಾ ಅನಾವೃಷ್ಠಿ’ ಮುಂದೇನ್ ಕಥೇನೋ!
ಅಲ್ದಾ?
ಈ ರೇನ್’ಕೋಟ್ ಬಗ್ಗೆ ನನ್ನದೂ ತಕರಾರು ಇತ್ತು. ನನ್ನ ಅಮ್ಮ ರೇನ್’ಕೋಟ್ ಬಗ್ಗೆ ಇದೇ ಎಲ್ಲರೀತಿಯ ಗುಣಗಾನ ಮಾಡ್ತಿದ್ರೂ ಹೈಸ್ಕೂಲ್ ಮೆಟ್ಲು ಹತ್ತಿದಾಗ ತಂದ ರೈನ್ ಕೋಟ್ ವಾಪಸ್ಸಾಗಿ ಕೊಡೆ ಕೈಗೆ ಸಿಕ್ಕಿದ್ದು ಪರಮಾನಂದ ಆಗಿತ್ತು. ಆ ನೆನಪೆಲ್ಲ ಎಷ್ಟು ಚಂದ ಅಲ್ದಾ?

ಚಿತ್ರಾ said...

ಶಾಂತಲಾ ,

ಬಹುಶಃ ಎಲ್ಲರ ಬಾಲ್ಯದ ನೆನಪಲ್ಲೂ ರೈನ್ ಕೋಟ್ ಇದ್ದೇ ಇದ್ದು ಕಾಣ್ತು ಅಲ್ದಾ? :-)
ಏನಂದ್ರೂ , ಸುಮ್ಮನೇ , ಕೆಲಸವಿಲ್ಲದೇ ಕುಳಿತಾಗ , ಹಳೆಯ ನೆನಪುಗಳನ್ನು ಮೆಲುಕು ಹಾಕುವುದೇ ಒಂಥರಾ ಖುಷಿ!!

ತೇಜಸ್ವಿನಿ ಹೆಗಡೆ said...

ಚಿತ್ರಾ,

ಸವಿ ನೆನಪುಗಳನ್ನು ನೆನೆಯುವುದು ಎಷ್ಟೊಂದು ಸವಿಯಾಗಿರ್ತು ಅಲ್ದಾ? ನಾನು ಹೈಸ್ಕೂಲಿಗೆ ಹೋಗೋವಾಗ ಅಪ್ಪ ಸ್ಕೂಟರ್ನಲ್ಲಿ ಬಿಡ್ತಿದ್ದ. ರೈನ್ ಕೋಟ್ ಹಾಕ್ತಾ ಅಮ್ಮಾ ದಿನಾ ಹೇಳ್ತಿತ್ತು ಹೋಗ್ತಾ ಮುಖ ಮೇಲೆತ್ತಿ ಮಳೆಗೆ ಕೊಡದ ಶೀತ ಆಗ್ತು, ಜ್ವರ ಬತ್ತು ..etc ಆದ್ರೆ ನಾ ಕೇಳ್ತಿದ್ನೇ ಇಲ್ಲೆ ಮಳೆ ಶುರು ಆದ್ ಕೂಡ್ಲೆ ರೈನ್ ಕೋಟ್ ಟೊಪ್ಪಿ ತೆಗ್ದು ಮೇಲೆ ನೋಡ್ತಿದ್ದಿ. ಮಳೆಹನಿ ಮುಖದ ಮೇಲೆ ಬಿದ್ದು ತಲೆ ಒದ್ದೆ ಆದಾಗ ಆಗು ಖುಶಿ ಆಮೇಲೆ ಅಮ್ಮನತ್ರ ಬೈಸ್ಕಂಡು ಅಪ್ಪು ಬೇಜಾರಕ್ಕಿಂತ ಹೆಚ್ಚಾಗಿರ್ತಿತ್ತು ನೋಡು :)

ಸುಧೇಶ್ ಶೆಟ್ಟಿ said...

ನಿಮ್ಮ ಬ್ಲಾಗ್ ಚೆನ್ನಾಗಿದೆ.ಮಳೆಗಾಲದ ನೆನಪುಗಳು ಮನಸ್ಸಿನಲಿ ಸದಾ ಹಸಿಹಸಿಯಾಗಿರುತ್ತದೆ.
ಟೀನಾ ಅವರು ತಮ್ಮ ಬ್ಲಾಗಿನಲ್ಲಿ ಮಳೆಗಾಲದ ನೆನಪುಗಳನ್ನು ತು೦ಬಾ ಚೆನ್ನಾಗಿ ಹ೦ಚಿಕೊ೦ಡಿದ್ದಾರೆ. ಸಾಧ್ಯವಾದರೆ ಓದಿ.

- ಸುಧೇಶ್

kanasu said...

baraha tumbaa chennaagide..

-kanasu

ಚಿತ್ರಾ said...

ಪ್ರಿಯ ತೇಜಸ್ವಿನಿ,

ಮಳೆಯಲ್ಲಿ ನೆನೆಯದು ಅಂದ್ರೆ ಈಗ್ಲೂ ಇಷ್ಟಾನೇಯಾ. ಆದ್ರೆ ,ಈಗ ಸುಮ್ ಸುಮ್ನೆ ಮಳೆಯಲ್ಲಿ ನೆನೆಯೋದು ಮುಂಚಿನಷ್ಟು ಸುಲಭ ಅಲ್ಲ್ ಅಲ್ದಾ? ಅದಕ್ಕೇ , ಕಡೇಪಕ್ಷ ನೆನಪು ಮಾಡ್ಕ್ಯಂಡಾದ್ರೂ ಖುಷಿ ಪಡದು!!

ಸುಧೇಶ್,

ಧನ್ಯವಾದಗಳು. ಟೀನಾ ಅವರ ಬ್ಲಾಗಿಗೆ ಒಮ್ಮೆ ಹೋಗಿದ್ದೆ. ಸುಮಾರು ವಾರಗಳ ಹಿಂದೆ.ಚೆನ್ನಾಗಿ ಬರೀತಾರೆ. ಈಗ ಮತ್ತೊಮ್ಮೆ ನೋಡುತ್ತೇನೆ. ಬರ್ತಾ ಇರಿ.


ಕನಸು,

ಚೆನಾಗಿದೆ ಹೆಸರು ! ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಬರ್ತಾ ಇರಿ.

shivu.k said...

ಚಿತ್ರಾ ಮೇಡಮ್,

ಮಳೆಗಾಲವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ....ಕೊಡೆ ಪ್ರಸಂಗ......ಇತ್ಯಾದಿಗಳು ನನಗೆ ನನ್ನ ದಿನನಿತ್ಯದ ದಿನಪತ್ರಿಕೆ ವಿತರಣೆಯ ಮಳೆಗಾಲದಲ್ಲಿ ಮತ್ತು ಚಂಡಮಾರುತದ ಸಮುಯದಲ್ಲಿ ನಮ್ಮ ಪರಿಸ್ಥಿತಿಯನ್ನು ನೆನಪಿಸಿತು...
ಮತ್ತೆ ನನಗೊಂದು ಹೊಸ ಲೇಖನಕ್ಕೆ ಸ್ಪೂರ್ತಿ ನೀಡಿದೆ...ಥ್ಯ್ಯಾಂಕ್ಸ್....