November 8, 2008

ನೀವೇ ಅರ್ಥೈಸಿಕೊಳ್ಳಿ !




ಶಿರಸಿಯಲ್ಲಿ ನನ್ನ ಕಣ್ಣಿಗೆ ಬಿದ್ದ ಈ ಬೋರ್ಡನ್ನು ಹೇಗೆ ಅರ್ಥೈಸಿಕೊಳ್ಳುವುದೋ ನಿಮಗೆ ಬಿಟ್ಟಿದ್ದು !

ಇಂಥದೇ ಇನ್ನೊಂದು " ಎಲೆಕ್ಟ್ರಾನಿಕ್ ಪಾನ್ ಶಾಪ್ " ಎಂಬ ಬೋರ್ಡ್ ಖಾನಾಪುರ ಬಳಿಯ ’ ಬೀಡಿ’ ಊರಿನಲ್ಲಿ ಇತ್ತು. ಕ್ಯಾಮೆರಾ ಎದುರಿಗಿಲ್ಲದ್ದರಿಂದ ತೆಗೆಯಲಾಗಲಿಲ್ಲ ! ನಿಜವಾಗಿ ಅಂದರೆ " ಎಲೆಕ್ಟ್ರಾನಿಕ್ ಮತ್ತು ಪಾನ್ ಶಾಪ್" ಎಂದಿದ್ದ ಬೋರ್ಡ್ ನಲ್ಲಿ " ಮತ್ತು" ಎಂಬ ಶಬ್ದ ತೀರಾ ಚಿಕ್ಕದಾಗಿ " ಎಲೆಕ್ಟ್ರಾನಿಕ್ ಪಾನ್ ಶಾಪ್ " ಮಾತ್ರ ಎದ್ದು ಕಾಣುತ್ತಿತ್ತು !

ಹಾ , ಕೆಲ ವರ್ಷಗಳ ಹಿಂದೆ , ಇಲ್ಲಿ ಪುಣೆಯಲ್ಲಿ ಗೆಳತಿಯೊಬ್ಬಳ ಮನೆಗೆ ಹೋಗುವ ದಾರಿಯಲ್ಲೊಂದು ಬೋರ್ಡ್ !’ ಗೀತಾ ವೆಜಿಟೇಬಲ್ ಮಟನ್ ಶಾಪ್ " ಎಂಬ ಈ ಬೋರ್ಡ್ ಬರೆದ ಮಹಾಶಯ ನಡುವೆ 'ಅಂಡ್' ಸೇರಿಸಲು ಮರೆತೇ ಬಿಟ್ಟಿದ್ದ ಎಂದು ಕಾಣುತ್ತದೆ !

ಸುಮಾರು ಹತ್ತು ವರ್ಷಗಳ ಹಿಂದೆ , ಅಜ್ಜನ ಮನೆಗೆ ಹೋಗುವಾಗ ಶಿರಸಿಯ ಪದ್ಮಶ್ರೀ ಸರ್ಕಲ್ ಹತ್ತಿರ ಒಂದು ಗೂಡಂಗಡಿಯ ಎದುರಿದ್ದ ’ ಇಲ್ಲಿ ಕಂಪ್ಯೂಟರೈಸ್ಡ್ ಚಹಾ, ಕಾಫೀ ಸಿಕ್ಕುತ್ತದೆ’ ಎಂಬ ಬೋರ್ಡ್ ಕೆಲ ದಿನಗಳ ಕಾಲ ನನ್ನ ತಲೆ ಕೆಡಿಸಿತ್ತು.

ಆಗಿನ್ನೂ ಕಂಪ್ಯೂಟರ್ ಗಳು ಕಾಲಿಟ್ಟ ಹೊಸತು, ಅದರಲ್ಲೂ ಶಿರಸಿಯಂಥಾ ಚಿಕ್ಕ ಊರಲ್ಲಿ ... ಇದೇನಿರಬಹುದು ಎಂದು ಯೋಚಿಸಿ ಹಣ್ಣಾದೆ. ಕಂಪ್ಯೂಟರ್ ಇಂಜಿನಿಯರ್ ತಮ್ಮನಲ್ಲೂ ಚರ್ಚಿಸಿದೆ .ಅವನಿಗೂ ಇದರ ತಲೆ ಬುಡ ತಿಳಿಯಲಿಲ್ಲ ! ಕಡೆಗೊಮ್ಮೆ ಪದ್ಮಶ್ರೀ ಸರ್ಕಲ್ ನ ಖಾಯಂ ಗಿರಾಕಿ ಕಸಿನ್ ಒಬ್ಬನನ್ನು ಕೇಳಿದಾಗ ಅಂವ ಹೇಳಿದ " ಅದೇಯೆ ಮಾರಾಯ್ತಿ , ಹೊಸಾ ನಮನಿ ಕಂಪ್ಯೂಟರ್ ಬಂಜಲೆ, ಈ ಚಾ , ಕಾಫೀ ಮಾಡಲೆ ಹೇಳಿ, ಒಂದು ಸ್ವಿಚ್ ಒತ್ತಿದ ಕೂಡ್ಲೇ ಹ್ಯಾಂಗೆ ಬಿಸಿ ಬಿಸಿ ಚಾ ಬತ್ತು ಹೇಳ್ತೆ ! ನಿಂಗ ದೊಡ್ಡ ದೊಡ್ಡ ಊರಲ್ಲಿ ಇರ್ತ್ರಪಾ ನಿಂಗೊತ್ತಿಲ್ಯನೆ? ಅಲ್ಲಂತೂ ಎಲ್ಲ ಬದಿಗೂ ಇದ್ದಿಕಪಾ "

ಉತ್ತರ ಕೇಳಿ ಉಕ್ಕಿದ ನಗುವನ್ನು ಅವನೆದುರು ತಡೆದುಕೊಂಡಿದ್ದು ನನ್ನ ಸಾಧನೆಯೇ ಆಗಿತ್ತು.

ಪುಣೆಯಂತೂ ಇಂಥಾ ಚಿತ್ರ ವಿಚಿತ್ರ ಬೋರ್ಡ್ ಗಳಿಗೆ ಪ್ರಸಿದ್ಧ ! ಆದರೆ ಹೆಚ್ಚಿನವು ಮರಾಠೀಯಲ್ಲಿರುವುದರಿಂದ ಬ್ಲಾಗಿನಲ್ಲಿ ಹಾಕಲು ಕಷ್ಟ. ಯಾವಾಗಲಾದರೂ ಅವುಗಳ ಕನ್ನಡನುವಾದ ಸಹಿತ ಹಾಕುತ್ತೇನೆ !

16 comments:

ಚಂದ್ರಕಾಂತ ಎಸ್ said...

ನಮಸ್ತೆ ಚಿತ್ರಾ
ನಾನು ಈ ಬ್ಲಾಗ್ ಲೋಕಕ್ಕೆ ಹೊಸಬಳು. ಈ ದಿನ ನಿಮ್ಮ ಬ್ಲಾಗ್ ನ ಪರಿಚಯ ’ಮಾನಸ’ದಿಂದ ಆಯಿತು. ಈ ಬರಹ ಓದಿ ನಗು ಉಕ್ಕುಕ್ಕಿ ಬಂತು. ಇನ್ನೂ ನಿಮ್ಮ ಇತರ ಬರಹಗಳನ್ನು ಓದಿಲ್ಲ.

sunaath said...

ಚಿತ್ರಾ,
ರಂಜನೀಯವಾದ ವಿವರಗಳು.
ನಾನು ಕೇಳಿದ ಒಂದು ಫಲಕ ಹೀಗಿತ್ತು:
"ಸೂಪರ ಫರ ನೀಚರ ವರ್ಕ್ಸ".
'ಫರನೀಚರ' ಅನ್ನು ಬಿಡಿಸಿ ಬರೆದದ್ದರ ಫಲವಿದು!
ಮರಾಠಿ ಫಲಕಗಳ (ಅನುವಾದ ಸಹಿತ) ಅವಾಂತರವನ್ನು ಕಾಯುತ್ತಿರುತ್ತೇನೆ.
-ಕಾಕಾ

Ittigecement said...

ನಗು ತಡೆಯಲಾಗಲಿಲ್ಲ. ಸಿರ್ಸಿ ಕಡೆ ಮುಗ್ಧರು ಜಾಸ್ತಿ. ಅಲ್ಲವಾ? ನಿಮ್ಮ ಬರಹ ಚೆನ್ನಾಗಿದೆ

ಚಿತ್ರಾ said...

ಚಂದ್ರಕಾಂತಾ,
ಬ್ಲಾಗಿಗೆ ಸ್ವಾಗತ. ಮೆಚ್ಚುಗೆಗೆ ಧನ್ಯವಾದಗಳು.
ಹೀಗೇ ಬರುತ್ತಿರಿ .

ಕಾಕಾ,
"ಸೂಪರ ಫರ ನೀಚರ ವರ್ಕ್ಸ" ನಂತಹ ಫಲಕಗಳು ಹುಬ್ಬಳ್ಳಿ, ಧಾರವಾಡಗಳ ಕಡೆ ಹೆಚ್ಚು ನೋಡಸಿಗುತ್ತವೆ ಅಲ್ಲವೆ? ( ನನ್ನ ಮೂರು ವರ್ಷಗಳ ಅನುಭವ) . ಇನ್ನು ಗದಗ ಶಾಬಾದಿಮಠ ಬುಕ್ ಡಿಪೋ ದ " ಕೊಲೇಜ ಗಾಯಿಡ " ಅಂತೂ ಇಂತಹದೇ ಕನ್ನಡೀಕರಿಸಿದ ಶಬ್ದಗಳಿಂದ ಸಂಪದ್ಭರಿತವಾಗಿದೆ ಎಂದು ನೆನಪು .

ಸಿಮೆಂಟು ಮರಳಿನ ಮಧ್ಯೆ ಇರುವವರೇ,

ಧನ್ಯವಾದಗಳು, ಹೀಗೇ ಬರುತ್ತಿರಿ.
ಅಂದಹಾಗೇ, ತಮ್ಮ ಹೆಸರು ತಿಳಿದರೆ ಥ್ಯಾಂಕ್ಸ್ ಹೇಳಲು ಅನುಕೂಲ .

Sushrutha Dodderi said...

ಹಹಹಾ! ಮಜಾ ಇದ್ದು! :D

Anveshi said...

ಹೂಂ...

ಕಾರವಾರಕ್ಕೆ ಹತ್ತಾರು ವರ್ಷಗಳ ಕೆಳಗೆ ಹೋಗಿದ್ದಾಗ ನೋಡಿದ ಬೋರ್ಡು ಇಂದಿಗೂ ನೆನಪಿಗೆ ಬರ್ತಾ ಇದೆ...

ಕಾಮತ ಲಂಚ ಹೋಮ !

Ittigecement said...

ನನ್ನ ಹೆಸರು ಪ್ರಕಾಶ್ ಹೆಗಡೆ. ನನ್ನ ಬ್ಲೊಗ್ ಗೂ ಬರುತ್ತಾ ಇರಿ... ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಚಿತ್ರಾ,

ಇಂತಹ ಸುಂದರ ವಾಕ್ಯಗಳನ್ನೊಳಗೊಂಡ ಕನ್ನಡ ಸಂಪದ್ಭರಿತ ಬೋರ್ಡುಗಳು ಎಲ್ಲೆಂದರಲ್ಲಿ ಸಿಗುತ್ತವೆ :) ರಾಶಿ ನಗಿ ಬಂತು ನೋಡು. ತುಂಬಾ ಸಮಯದ ಹಿಂದೆ ಎಲ್ಲೋ ನೋಡಿದ ನೆನ್ಪು. ಒಂದು ಕಡೆ ಹೀಗೆ ಬರೆದಿತ್ತು

"ಇಲ್ಲಿ ಹಂದಿ, ಊಟ ಸುಗುತ್ತದೆ"!! ಯಾರೋ ಅರ್ಧವಿರಾಮ ಶಾಸ್ತ್ರಜ್ಞರೇ ಬರೆದಿರಬೇಕೆಂದು ತಿಳಿಯಿತು :)

ಚಿತ್ರಾ said...

ಸುಶ್ರುತ ,
ಥ್ಯಾಂಕ್ಸ್ !

ಅಸತ್ಯ ಅನ್ವೇಷಿಗಳೇ ,
’ ಕಾಮತ (ರ) ಲಂಚ ಹೋಮ’ ಚೆನಾಗಿದೆ !

ಪ್ರಕಾಶ ಹೆಗಡೆಯವರೇ ,
ಖಂಡಿತಾ ಬರುತ್ತೇನೆ.


ತೇಜೂ,
ಇಂತಹ " ಸಂಪದ್ಭರಿತ ಕನ್ನಡ " ನೋಡಿದ್ದರೆ , ಕನ್ನಡದ ಹಿರಿಯ ಕವಿಗಳು ಏನು ಮಾಡಿಕೊಳ್ಳುತ್ತಿದ್ದರೋ ಏನೋ!
ಸದ್ಯ ಬಚಾವಾದರು ಅಲ್ಲವೆ?

Arun said...

ಹಾಯ್,

ಅಲ್ಲ ಎಲ್ಲಾ ಕೆಲ್ಸಾ ಬಿಟ್ಟು ಬೊಅರ್ಡ್ ಯ್ಯಾಕ್ ನೊಡ್ಕೊತ್ ಹೊಗ್ತಿ?

ಹಾ ಹಾ !!!!

jomon varghese said...

ವ್ಹಾ.... ಚಿತ್ರ ನೋಡಿ, ನಮ್ಮ ಆಫೀಸಿನವರಿಗೆ ಎಲ್ಲರಿಗೆ ತೋರಿಸಿ, ನಾನೂ ನಕ್ಕೆ. ಧಾರವಾಡದಲ್ಲಿ ಒಂದು ಅಯ್ಯಂಗಾರ್ ಬೇಕರಿ ಇತ್ತು. ಆ ಬೋರ್ಡಿನ ಕೆಳಗೆ ಯಾರೋ ಅಯ್ಯಂಗಾರ್ಸ್ ಮಗಳು ಬೇಕ್ರೀ? ಅಂತ ಕೊರೆದಿದ್ದರು.. ಈ ಚಿತ್ರ ನೋಡಿ ಅದು ನೆನಪಾಯಿತು.

ಸುಧೇಶ್ ಶೆಟ್ಟಿ said...

ನಾನಿರುವ ಜೆ.ಪಿ. ನಗರದ ಅ೦ಗಡಿಯ ಮು೦ದೆ ಆ೦ಗ್ಲದಲ್ಲಿ 'Fashion Center' ಎ೦ದು ಸರಿಯಾಗಿ ಬರೆದಿದ್ದರೆ ಕನ್ನಡದಲ್ಲಿ 'ಪಾಯ್ಸನ್ ಸೆ೦ಟರ' ಎ೦ದು ಬರೆದಿದ್ದ ಬೋರ್ಡ್ ಇತ್ತು!
ನಿಮ್ಮ ಬರಹ ತು೦ಬಾ ಚೆನ್ನಾಗಿತ್ತು.

ಚಿತ್ರಾ said...

ದೇಶಪಾಂಡೆಯವರೇ,

ನಾವು ಹಪ್ಪಟ ಖನ್ನಡಿಗರು ಕಣ್ರೀ, ಯಾರಾದ್ರೂ ಖನ್ನಡದ ಕೊಲೆ ಮಾಡ್ತಾಇದಾರೇನು ಅಂತ ನೋಡ್ತಿರಬೇಕಾಗ್ತದ. ಅಂತೂ ಭಾಳ ದಿವ್ಸದ್ ಮ್ಯಾಲೆ ಬಂದೀರಿ. ಹೀಂಗೇ ಬರ್ತಾ ಇರಿ.

ಜೋಮನ್,
ಹಾ ಹಾ ಹಾ .. ನೀವು ಹೇಳಿರೋ ಬೋರ್ಡ್ ಕೂಡ ಚೆನಾಗಿದೆ. ಚಿಕ್ಕವರಿದ್ದಾಗ ಬೇಕರಿ ಎಂದರೇನು ಅಂತ ಗೊತ್ತಿರದ ನಮಗೆ,ಜೈಹಿಂದ್ ಬೇಕರಿ , ರಾಮಕೃಷ್ಣ ಬೇಕರಿ..ಇತ್ಯಾದಿ ಬೋರ್ಡ್ ಓದಿದಾಗ , ತಲೆಬಿಸಿಯಾಗುತ್ತಿತ್ತು ಹೀಗೇಕೆ ಅವ್ರು ಬೇಕರಿ ಇವ್ರು ಬೇಕರಿ ಅಂತೆಲ್ಲ ಬೋರ್ಡ್ ಹಾಕ್ತಾರೆ , ಬೇಕಾದ್ರೆ ಹೋಗಿ ಹುಡುಕ ಬಾರದೆ ಅಂತ ! ಹಿ ಹಿ ಹಿ..
ನಿಮ್ಮ ಆಫೀಸಿನವರನ್ನೂ ನಗಿಸಿದ ಪುಣ್ಯ ಬಂತು ನಂಗೆ ಅಂತೀರಾ ?

ಸುಧೇಶ್,
ಇದೂ ಚೆನ್ನಾಗಿದೆ. ಅವರು ಹೇಳೋದೂ ಒಂಥರಾ ಸರೀನೆ ಅನ್ನಿ. ಇತ್ತೀಚೆ ಫಾಷನ್ ಅನ್ನೋದು ಪಾಯಿಸನ್ನೇ ಆಗಿದೆ ಅಲ್ವಾ?

Harisha - ಹರೀಶ said...

ಚಿತ್ರಕ್ಕಾ, ಇದು ದವಾಖಾನೆ ಮುಂದಿನ್ ಓಣೀಲಿರ ಬೋರ್ಡಾ?

ಚಿತ್ರಾ said...

ಹೌದು ಹರೀಶ
ಅದೇ ಬೋರ್ಡ್ !!!

shivu.k said...

ಚಿತ್ರಾ ಮೇಡಮ್,

ಎಲೆಕ್ಟ್ರಾನಿಕ್ ಪಾನ್ ಶಾಪ್.....ವೆಜಿಟೇಬಲ್ ಮಟನ್ ಶಾಪ್......ನಗೆ ತರಿಸಿತ್ತು....

ಕಂಪ್ಯೂಟರೈಸ್ಡ್ ಟೀ ಕಾಪಿಯಂತೂ......ನಾನು ನನ್ನಾಕೆ ಹೇಮ ಇಬ್ಬರೂ ಓದಿ ಹೊಟ್ಟೊ ಹುಣ್ಣಾಗುವಷ್ಟು ನಕ್ಕೆವು...
ಸಾದ್ಯವಾದಷ್ಟು ಬೇಗ ಮರಾಠಿ ಬೋರ್ಡುಗಳನ್ನ ಕನ್ನಡ ಅನುವಾದ ಮಾಡಿ ನಾನು ಮತ್ತು ನನ್ನ ಶ್ರೀಮತಿ ಕಾಯುತ್ತಿರುತ್ತೇವೆ...