January 9, 2009

ಪರಮಾತ್ಮ ಆಡಿಸಿದಂತೆ .....

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು !
ಹತ್ತು ದಿನಗಳು ಕಳೆದಮೇಲೆ ನೆನಪಾಯ್ತ ಅಂತ ಕೇಳ್ಬೇಡಿ . ಈ ತಿಂಗಳಿಡೀ ಶುಭಾಶಯ ಹೇಳಬಹುದು . ಡಿಸೆಂಬರ್ ಕೊನೆಯವರೆಗೂ ಕನ್ನಡ ರಾಜ್ಯೋತ್ಸವ ಆಚರಿಸೋದಿಲ್ವೆ ? ಅದೇ ಥರ !

ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಿ ತೇಲಾಡಿದವರನ್ನು ನೋಡುವಾಗ , ನಮ್ಮೂರ ಪರಮಾತ್ಮನ ಭಕ್ತರು ನೆನಪಾದರು !

ನಾವು ಚಿಕ್ಕವರಿದ್ದಾಗ ಇದ್ದ ಬಾಡಿಗೆ ಮನೆ , ಊರ ಹೊರಗಿತ್ತು. ೨-೩ ಮನೆಗಳನ್ನು ಬಿಟ್ಟರೆ ಉಳಿದೆಲ್ಲವೂ ಕೂಲಿ ಕಾರ್ಮಿಕರ ಮನೆಗಳು. ಸಂಜೆಯಾಗುತ್ತಿದ್ದಂತೆ , ಎದುರಿನ ರಸ್ತೆಯಲ್ಲಿ ಪುಕ್ಕಟೆ ಮನರಂಜನೆ ಗ್ಯಾರಂಟಿ. ಅದರ ಮುಂದೆ ಸಿನೆಮಾ -ನಾಟಕಗಳು ಯಾವ ಲೆಕ್ಕಕ್ಕೂ ಇರುತ್ತಿರಲಿಲ್ಲ .

ರಸ್ತೆಯ ಉದ್ದಗಲಗಳನ್ನು ಅಳೆಯುತ್ತಾ ಯಾವ ಹಿಂಜರಿಕೆಯಿಲ್ಲದೆ , ದೊಡ್ಡದಾಗಿ ಹಾಡುತ್ತ ಓಲಾಡುವವರು ಕೆಲವರಾದರೆ, ತಮ್ಮಷ್ಟಕ್ಕೇ , ಗೊಣಗುತ್ತಾ ನಡು ನಡುವೆ ಯಾರನ್ನೋ ಜೋರಾಗಿ ಬೈಯುತ್ತ ಓಡಾಡುವವರು ಕೆಲವರು .ನಮ್ಮ ಮನೆಯಿಂದ ೩ ನೆಯದೋ -೪ ನೆಯದೋ ಮನೆಯಲ್ಲಿ ಕಳ್ಳಭಟ್ಟಿ ಮಾರಾಟ ಜೋರಾಗಿ ನಡೆಯುತ್ತಿತ್ತು . ಪರಮಾತ್ಮನನ್ನು ಸೇವಿಸಿದ ಭಕ್ತರು , " ಪರಮಾತ್ಮಾ ಆಡಿಸಿದಂತೆ ಆಡುವೆ ನಾನು " ಎಂದು ಆಕಾಶದಲ್ಲಿ ತೇಲಾಡುತ್ತಾ , ಭೂಮಿಯಲ್ಲಿ ಓಲಾಡುತ್ತಾ ಸುಖವನ್ನನುಭವಿಸುತ್ತಿದ್ದರು!

ಮನೆಯೆದುರು ದಿನಾ ಸಂಜೆ , ಅವರುಗಳ ಮಾತು , ಬಯ್ಗುಳ , ವರ್ತನೆಯಿಂದ ನಮ್ಮ ಅಪ್ಪ -ಅಮ್ಮ ನಿಗೆ ಇರುಸು ಮುರುಸಾದರೆ , ಮಕ್ಕಳಾದ ನಮಗೆ , ಕುತೂಹಲ ! ಹಗಲಲ್ಲಿ ಎದುರಿಗೆ ಸಿಕ್ಕಾಗೆಲ್ಲ , " ಅಪೀ , ಶಾಲಿಗೆ ಹೊಂಟ್ಯನಾ? " , " ಅಮೀ , ನಾಳೆ ಬಂದು ಅಂಗಳಕ್ಕೆ ಮಣ್ಣು ಹಾಕ್ ಕೊಡ್ತಿನಿ। ಅಮ್ಮಂಗೆ ಹೇಳು ಆತಾ ? " ಎಂದೆಲ್ಲಾ ಮಾತಾಡಿಸುವ , ನಮ್ಮಂತೆಯೇ ಸರಿಯಾಗಿ ಓಡಾಡುವ ನಾಗರಾಜ, ಕುಪ್ಪ , ಕನ್ನ ಎಲ್ಲರೂ ಸಂಜೆಯಾಗುತ್ತಲೇ ಹೀಗೇಕಾಡುತ್ತಾರೆ ಎಂಬುದು ಸುಮಾರು ದೊಡ್ಡ ಆಗುವವರೆಗೂ ನಮಗೆ ಒಗಟಾಗಿತ್ತು.

ಆಗಿನ ಕೆಲವು ಸಂದರ್ಭಗಳು ಇನ್ನೂ ನೆನಪಲ್ಲಿ ಹಸಿರಾಗಿವೆ.

ಒಂದು ಸಂಜೆ ಹೀಗೆ ಕಂಠ ಮಟ್ಟ ಏರಿಸಿದ ಇಬ್ಬರು ಮಾತಿಗೆ ಮಾತು ಬೆಳೆದು ಜಗಳಕ್ಕೆ ನಿಂತರು . ಅಲ್ಲಿ ಇದ್ದವರಲ್ಲಿ ಎರಡು ಗುಂಪುಗಳಾದವು. ಕೂಗಾಡುತ್ತಾ , ಬೈದಾಡುತ್ತಾ , ಒಬ್ಬರನ್ನೊಬ್ಬರು ತಳ್ಳಾಡುತ್ತಾ ನಮ್ಮ ಮನೆಯೆದುರಿನ ರಸ್ತೆಯಲ್ಲಿ ನಿಂತರು. ಗಲಾಟೆ ಕೇಳಿ , ಹೊರಗೆ ಬಂದ ಅಮ್ಮ , ಅಂಗಳದಲ್ಲಿ ಆಟವಾಡುತ್ತಿದ್ದ ನಮ್ಮ ನ್ನು ಒಳಗೆ ಕರೆದಳು. ಇದನ್ನು ಗಮನಿಸಿದ ಜಗಳವಾಡುತ್ತಿದ್ದ್ದವರಲ್ಲೊಬ್ಬ " ಏಯ್ , ಬುದ್ಧಿ ಗಿದ್ಧಿ ಏನಾರ ಐತನಾ ನಿಂಗೆ ? ಮರ್ವಾದಸ್ತರ ಮನೆ ಬಾಗ್ಲಾಗೆ ಜಗ್ಳ ಮಾಡ್ ಬಾರದು ಅಂತ ತಿಳಿಯಲ್ಲನಾ ನಿಂಗೆ ? ಸುಮ್ಮನ್ ಬಾರಾ , ಅತ್ಲಾಗ್ ನಮ್ಮನೆ ಎದ್ರಿಗೆ ಹೋಗಿ ಜಗ್ಳ ಮಾಡನಾ ನಡಿಯಲೇ " ಎನ್ನುತ್ತಾ ತನ್ನೊಂದಿಗೆ ಜಗಳವಾಡುತ್ತಿದ್ದವನ ಹೆಗಲ ಮೇಲೆ ಕೈ ಹಾಕಿಕೊಂಡು ಆಚೆ ಕರೆದುಕೊಂಡು ಹೋದ.

ಆಗ ಅರ್ಥವಾಗದ ಈ ಡೈಲಾಗ್ ಅನ್ನು ಈಗ ನೆನಪಿಸಿಕೊಂಡು ನಾವು ನಗುತ್ತಿರುತ್ತೇವೆ !

ಇಂಥದೇ ಇನ್ನೊಂದು ಘಟನೆ !
ಫುಲ್ ಟೈಟಾಗಿದ್ದ ನಾಗಪ್ಪ ಒಂದು ಸಂಜೆ ತೂರಾಡುತ್ತಾ ಜೊತೆಯಲ್ಲಿದ್ದವನಿಗೆ ಹೇಳುತ್ತಿದ್ದ.
" ಅಲ್ಲ ಕಣಾ , ತಾನೊಬ್ಬನೇ ದೊಡ್ಡ ಮರ್ವಾದಸ್ತ ಅಂದ್ಕಂಡಾನೇನಾ ಆ ರಾಮಪ್ಪ ? ನಾಯೇನ್ ಮರ್ವಾದೆ ಬಿಟ್ಟೀನೇನಾ? ನೋಡಾ, ನಾನು ಇಸ್ಫೀಟ್ ಆಡ್ತೀನಿ, ಹೆಂಡ ಕುಡೀತೀನಿ , ಚರಂಡ್ಯಾಗ್ ಬಿದ್ದಿರ ಬಹುದು ಕಣಾ . ಆದ್ರೆ , ಮರ್ವಾದೆ ಬಿಟ್ಟೀನನಾ? ಹೇಣ್ತೀಗ್ ಹೊಡಿತಿನಿ , ಗಲಾಟೆ ಮಾಡ್ತಿನಿ ಅಂತ ನಮ್ಮನ್ಯಾಗ್ ನನ್ನ ಹೊರಗ್ ಹಾಕಿದ್ರು ಕಣಾ , ಆ ಸೂರಪ್ಪನೋರ ತ್ವಾಟ್ ದಾಗೆ ಕಾಯಿ ಕದ್ದೀನಿ ಅಂತ ಪೊಲೀಸ್ ಕಂಪ್ಲೇಂಟ್ ಕೊಟ್ಟು ಹಿಡಿಸಿಹಾಕಿದ್ರು ನನ್ನ. ಟೇಸನ್ಗೋಗಿ ಒದೆ ತಿಂದ್ಕಂಡು ಬಂದೆ , ಎರಡು ತಿಂಗ್ಳು ಜೈಲಾಗೆ ಇದ್ದು ಬಂದೆ , ಅದೆಲ್ಲ ಏನು ಬೇಕಾದ್ರೂ ಆಗ್ಲಿ , ಆದ್ರೆ , ಇಲ್ಲೀ ವರೆಗೆ ಮರ್ವಾದೆ ಮಾತ್ರ ಬಿಟ್ಟಿಲ್ಲ ಕಣಾ .. ಏನು ಮಾತಾಡ್ತಾನ ಆ ರಾಮಪ್ಪ ..... "
ನಾಗಪ್ಪನ ಭಾಷಣ ಮುಂದುವರಿದಿತ್ತು .

ಮನೆಯೊಳಗೆ ಬಂದ ನಾವು " ಮರ್ವಾದೆ " ಬಿಡದ ನಾಗಪ್ಪನ ಮಾತಿಗೆ ಬಿದ್ದೂ ಬಿದ್ದೂ ನಗುತ್ತಿದ್ದೆವು !

12 comments:

Ittigecement said...

ಚಿತ್ರಾ..!

ಮಜಾ ಇದ್ದವು ಕುಡುಕರ ಡೈಲಾಗ್ ಗಳು...

ನಕ್ಕು ನಕ್ಕು ಸುಸ್ತಾದೆ...
" ಮರ್ಯಾದಿ ಬಿಟ್ಟಿಲ್ಲ ".....ಅಂತೂ .. ಸೂಪರ್...!!!!!!!!!!

ನಾನೊಂದು ಲೆಖನ ಬರೆದು "ತಲೆ ಬರಹ " ಏನು ಕೊಡಬೇಕೆಂದು ತಲೆ ಕೆರೆದುಕೊಳ್ಳುತ್ತಿದ್ದೆ.....
ನಿಮ್ಮ ಬ್ಲೋಗಿಗೆ ಬಂದು ಓದಿದ ಮೇಲೆ ಒಂದು ಐಡಿಯಾ ತಗೊಂಡಿದ್ದೀನಿ...
ಸ್ಪೂರ್ತಿ ಅಂತಲೂ ಅನ್ನಿ...

ಅದಕ್ಕಾಗಿ ಧನ್ಯವಾದಗಳು...

ನಗಿಸಿದ್ದಕ್ಕೆ...
ಅಭಿನಂದನೆಗಳು..

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ...
ಚೆನಾಗಿದ್ದು ಲೇಖನ :-)

ಕೊನೇ ಎರಡು ಪ್ಯಾರಾ ಓದಿ ಜೋರು ನಗು ಬಂತು :-)
ನಗ್ಸಿದ್ದಕ್ಕೆ ಧನ್ಯವಾದ.

Sushrutha Dodderi said...

ಹೆಹೆ! ಒಳ್ಳೇ ನಾಗಪ್ಪ! :D
ನಂಗೆ ನಮ್ಮೂರ ’ದ್ಯಾವಪ್ಪ’ ನೆನಪಾದ. ಬರಿತಿ ಯಾವಾಗಾದ್ರೂ..

sunaath said...

ಹೇ,ಪರಮಾತ್ಮ ಎಷ್ಟೊಂದು ಹಾಸ್ಯಪ್ರಿಯ ಇದ್ದಾನಲ್ಲ!

ತೇಜಸ್ವಿನಿ ಹೆಗಡೆ said...

ಚಿತ್ರಾ,

ನಗು ಒಳ್ಳೆಯ ಟಾನಿಕ್ ಅಂತೆ. ನೀವು ಎಲ್ಲರಿಗೂ ಈ ಟಾನಿಕ್ ಅನ್ನು ಫ್ರೀಯಾಗಿ ಕೊಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು. ಆದರೂ ಅಂತಹ ಒಂದು ಪರಿಸರದಲ್ಲಿದ್ದಾಗ ನಿಮ್ಮ ತಂದೆತಾಯಿಯರು ಎಷ್ಟು ಆತಂಕ ಗೊಂಡಿದ್ದರೋ ಎಂದೆನಿಸುತ್ತಿದೆ. ಮರ್ವಾದೆ ಬಿಡದ ನಾಗಪ್ಪ ಸದಾ ನೆನಪಲ್ಲುಳಿವ ನೋಡು..:D

shivu.k said...

ರ್ರಿ...ಚಿತ್ರಾ ಮೇಡಮ್,

ಇಷ್ಟು ದಿನ ನಾನ್ಯಾಕೆ ನಿಮ್ಮ ಬ್ಲಾಗಿಗೆ ಬರಲಿಲ್ಲ ಅಂತ ಈಗ ನನ್ನನ್ನ ನಾನೆ ಪ್ರಶ್ನೆ ಕೇಳಿಕೊಂಡೆ.....

ಮಸ್ತಾಗಿ ಬರೀತೀರಿ....ನಿಜಕ್ಕೂ ನನಗೇ ಇಂಥವೂ ತುಂಬಾ ಇಷ್ಟ.....ದೊಡ್ಡವರ ಆಡಂಬರದ ಮುಚ್ಚುಮರೆಯ ಪರದೆಗಿಂತ ಬಡವರ,ಸಣ್ಣವರ ಮಕ್ಕಳ ಇಂಥ ಕಚ್ಚಾ ಪ್ರಸಂಗಗಳು ಬಲು ಮಜಕೊಡುತ್ತವೆ....ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ....ಮತ್ತೆ ಪ್ರತಿದಿನ ಬರುತ್ತೇನೆ...ಆದರೆ ಒಂದು ಶರತ್ತು ಇಂಥ Raw itemಗಳು ಕೊಡುತ್ತಿರಬೇಕು.....

ಚಿತ್ರಾ said...

ಪ್ರಕಾಶ್,

ನೆನಪಿಟ್ಕೊಳಿ ! ಏನೇ ಆದ್ರೂ ’ ಮರ್ವಾದೆ ’ ಮಾತ್ರ ಬಿಡಬೇಡಿ ! ಧನ್ಯವಾದಗಳು !

ಶಾಂತಲಾ,
ನಕ್ಕಿದ್ದಕ್ಕೆ ಧನ್ಯವಾದ ! :)

ಸುಶ್ರುತ,
ಬರಿ ಬೇಗ ! ನಿಮ್ಮೂರ ದ್ಯಾವಪ್ಪನ ಡೈಲಾಗ್ ಕೇಳಕೆ ಕಾಯ್ತಿದ್ದಿ.

ಸುನಾಥ್ ಕಾಕಾ,
ನಿಜಕ್ಕೂ ’ ಪರಮಾತ್ಮ’ ನ ಹಾಸ್ಯಪ್ರಿಯತೆಯನ್ನು ಹೊಗಳಲೇ ಬೇಕು !

ತೇಜೂ ,
ಧನ್ಯವಾದಗಳು .
ನಿಜ ನನ್ನ ಅಪ್ಪ ಅಮ್ಮಂಗೆ ನಾವು ಬೆಳೆಯುವ ಪರಿಸರದ ಬಗ್ಗೆ ಆತಂಕ ಇತ್ತು . ಆದರೆ,ಪರಿಸ್ಥಿತಿಯೂ ಹಾಗೇ ಇತ್ತು.ಆಗೆಲ್ಲ ಹಳ್ಳಿ ಮೇಲೆ ಬಾಡಿಗೆ ಮನೆ ಸಿಕ್ಕದೇ ಕಷ್ಟ . ಹಾಗಾಗಿ ಹೊಂದಾಣಿಕೆ ಅನಿವಾರ್ಯವೂ ಆಗಿತ್ತು .
ಏನಿದ್ದರೂ , ಇಂಥಾ ಪರಿಸರದಲ್ಲೇ ಇದ್ದರೂ ಅದನ್ನು ತಾಗಿಸಿಕೊಳ್ಳದೇ ’ ನಿಜವಾಗಿಯೂ ’ ಮರ್ಯಾದಸ್ಥರಾಗಿ ಬೆಳೆದ ಮಕ್ಕಳ ಬಗ್ಗೆ ಅವರಿಗೀಗ ಹೆಮ್ಮೆ ಇದೆ ! :)

ಶಿವೂ ,
ಖಂಡಿತಾ ಇಂಥದೇ ಇನ್ನಷ್ಟು ಸಂದರ್ಭಗಳನ್ನು ನೆನಪಿಸಿಕೊಂಡು ಬರೆಯುತ್ತೇನೆ. ಬರ್ತಾ ಇರಿ ಬ್ಲಾಗಿಗೆ .
ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು.

Ittigecement said...

ಚಿತ್ರಾ....

ನಿಮ್ಮ "ಮರ್ಯಾದೆ ಬಿಟ್ಟಿಲ್ಲ " ಲೇಖನ ಓದಿ ನನ್ನ ಲೇಖನದ " ತಲೆಬರಹದ" ಸ್ಪೂರ್ತಿ ಪಡೆದುಕೊಂಡೆ..

"ನಾನು ಮಾಡಿದ ಕೆಲಸಕ್ಕೆ ಮರ್ಯಾದಿ ಬೇಡವಾ..?"

ಅದಕ್ಕಾಗಿ ಧನ್ಯವಾದ ಅರ್ಪಿಸದಿದ್ದರೆ ನನ್ನ "ಮರ್ವಾದಿ" ಕಥೆ ಏನು..?

ಇದೇ ಸಂದರ್ಭದಲ್ಲಿ ನಿಮಗೆ "ಧನ್ಯವಾದಗಳು" ಅಂಥ ಹೇಳಿ ....

ನಿಮಗೂ "ಮರ್ವಾದಿ" ಇಟ್ಟಿದ್ದೇನೆ..!

ನಾನೂ "ಮರ್ವಾದಿ" ಬಿಡಲಿಲ್ಲ ಅಂದ್ಕೊಂಡಿದ್ದೀನಿ..!

ತುಂಬಾ..ತುಂಬಾ..ಧನ್ಯವಾದಗಳು...

ಹೀಗೆ ನಗಿಸುತ್ತಾ ಇರಿ...

ಸುಧೇಶ್ ಶೆಟ್ಟಿ said...

ಹ್ಮ್.. ಮರ್ವಾದೆ ಮುಖ್ಯ:)

ಬರಹ ಸೂಪರ್...

- ಸುಧೇಶ್

Rajesh Manjunath - ರಾಜೇಶ್ ಮಂಜುನಾಥ್ said...

:D

Harisha - ಹರೀಶ said...

ಪರಮಾತ್ಮ.. ಪಾರು ಮಾಡಬಾರದೇ!

ಚಿತ್ರಾ said...

ಪ್ರಕಾಶ್,
ನೀವು ಖಂಡಿತಾ ಮರ್ವಾದೆ ಬಿಟ್ಟಿದ್ರಿಲ್ಲೆ ! ಥ್ಯಾಂಕ್ಸ್ ನಿಮಗೂವ .

ಸುಧೇಶ್, ರಾಜೇಶ್,
ಧನ್ಯವಾದಗಳು .

ಹರೀಶ ,
ಅವೂ ಎಲ್ಲ ಹಾಂಗೇ ತಿಳ್ಕಂಡೇ ’ಪರಮಾತ್ಮ’ ನ ಸೇವೆ ಮಾಡ್ತಿದ್ದ !