February 14, 2009

ಪ್ರೀತಿಯ ಅರ್ಥ

ಬೆಳಿಗ್ಗೆ ಬೆಳಿಗ್ಗೆ ಕ್ಲಿನಿಕ್ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದವರಂತೆ , ಸುಮಾರು ೭೦-೭೫ ವಯಸ್ಸಿನ ತಾತ ಒಳಗೆ ಬಂದರು. ತಮ್ಮ ಕೈಗಾದ ಗಾಯಕ್ಕೆ ಚಿಕಿತ್ಸೆ ಪಡೆಯಬೇಕಾಗಿತ್ತು ಅವರಿಗೆ. ನಾನು ಟೇಬಲ್ ಒರೆಸಿಕೊಂಡು , ಬ್ಯಾಂಡೇಜ್ ಗೆ ತಯಾರಿ ನಡೆಸುತ್ತಿದ್ದಾಗ ಆತ ಕುಳಿತಲ್ಲೇ ಚಡಪಡಿಸುತ್ತಿದ್ದರು .
ಅಂತೂ ಮೆಲ್ಲಗೆ ಕೇಳಿದರು ಆ ತಾತ " ಡಾಕ್ಟ್ರೇ , ಸ್ವಲ್ಪ ಬೇಗ ಆಗಬಹುದಾ? ನನಗೆ , ೯.೩೦ ಗೆ ಒಂದುಕಡೆ ಹೋಗಬೇಕಾಗಿದೆ "
ಹೀಗೆ ಶುರುವಾಯಿತು ನಮ್ಮ ಸಂಭಾಷಣೆ .

" ಏನು ತಾತಾ, ೯.೩೦ ಗೆ ಬೇರೆ ಡಾಕ್ಟರ್ ಹತ್ರ ಅಪಾಯಿಂಟ್ಮೆಂಟ್ ಇದೆಯ ? " ನಗುತ್ತಾ ಕೇಳಿದೆ.

" ಇಲ್ಲಾ ಡಾಕ್ಟ್ರೇ , ನನ್ನ ಹೆಂಡತಿ ಆಸ್ಪತ್ರೇಲಿ ಇದಾಳೆ. ೯.೩೦ಗೆ ಅವಳ ಜೊತೆ ತಿಂಡಿ ತಿನ್ನೋಕೆ ಹೋಗಬೇಕು "
" ಓ , ಆಸ್ಪತ್ರೇಲಿ ಇದಾರಾ? ಹುಷಾರಿಲ್ವಾ ಅವರಿಗೆ ?
" ಹೂಂ. ಕಳೆದ ೫ ವರ್ಷಗಳಿಂದ ಆಸ್ಪತ್ರೇಲೇ ಇದಾಳಪ್ಪ ಅವಳು. "

" ಹಾಗಾ? ಅವರು ಕಾಯ್ತಾ ಇರ್ತಾರಲ್ವಾ ,ನಿಮಗೆ ತಡ ಆದ್ರೆ ಯೋಚನೆ ಆಗತ್ತೆ ಅವರಿಗೆ ! ಲೇಟಾಯ್ತು ಅಂತ ರೇಗ್ತಾರಾ ತಾತ, ಅಜ್ಜಿ ? " ತಮಾಶೆ ಮಾಡಿದೆ.

" ಆ ಥರಾ ಏನೂ ಇಲ್ಲಾ , ಅವಳಿಗೆ ಅಲ್ಝೀಮರ್ಸ್ ಆಗಿದೆ. ಅವಳು ಯಾರನ್ನೂ ಗುರುತು ಹಿಡಿಯೋದಿಲ್ಲ ಡಾಕ್ಟ್ರೇ " ಶಾಂತವಾಗಿ ತಾತ ಉತ್ತರಿಸಿದರು.

ನನಗೊಮ್ಮೆ ಎದೆಗೆ ಯಾರೋ ಗುದ್ದಿದ ಅನುಭವ !

" ಅಂದ್ರೂ ನೀವು ಪ್ರತಿದಿನ ಹೊತ್ತಿಗೆ ಸರಿಯಾಗಿ, ಗಡಿಬಿಡಿ ಮಾಡ್ಕೊಂಡು ಅವರ ಜೊತೆ ಬೆಳಿಗ್ಗೆ ತಿಂಡಿ ತಿನ್ನೋಕೆ ಹೋಗ್ತೀರಾ? ಅವರು ನಿಮ್ಮನ್ನು ಗುರುತೇ ಹಿಡೀದಿದ್ದರೂ ಸಹ? " ತೊದಲುತ್ತಿದ್ದೆ ನಾನು.

ಮೊದಲಿನಷ್ಟೇ ಶಾಂತವಾಗಿ ತಾತ ಉತ್ತರಿಸಿದರು " ಅವಳೇನೋ ಈಗ ನನ್ನ ಗುರುತು ಹಿಡೀದೇ ಇರಬಹುದು. ಆದರೆ ನನಗಂತೂ ಅವಳ ಗುರುತು ಇದೆ ಅಲ್ವಾ? ನಾವಿಬ್ಬರೂ ಅದೆಷ್ಟೋ ವರ್ಷಗಳನ್ನು ಜೊತೆಯಾಗಿ ಕಳೆದಿದ್ದೇವೆ .ನನ್ನ ಹೆಂಡತಿ ಅವಳು. ಅವಳಮೇಲೆ ನಾನು ಜೀವಾನೇ ಇಟ್ಕೊಂಡಿದೀನಿ ಡಾಕ್ಟ್ರೇ"

ಮೆಲ್ಲಗೆ ಎದ್ದ ತಾತನ ಕೈಚೀಲದಿಂದ ಕೆಂಪು ಗುಲಾಬಿ ಕೆಳಗೆ ಬಿತ್ತು. ಮೃದುವಾಗಿ ಎತ್ತಿಕೊಟ್ಟಾಗ , ಅದಕ್ಕೆ ನೋವಾಗದಂತೆ ಮತ್ತೆ ಚೀಲದಲ್ಲಿಟ್ಟುಕೊಂಡವರು ನುಡಿದರು,
" ಈ ಗುಲಾಬಿ ಅವಳು ನೆಟ್ಟ ಗಿಡದ್ದು. ಅವಳಿಗೀಗ ನೆನಪಿಲ್ಲದೇ ಹೋದ್ರೂ ,ಈ ಹೂವನ್ನು ಅವಳ ಕೈಯಲ್ಲಿಟ್ಟು ,ಮೊದಲ ಬಾರಿಗೆ ಈ ಗಿಡ ಹೂಬಿಟ್ಟಾಗ ಅವಳ ಮುಖದಲ್ಲಿನ ಸಂಭ್ರಮಾನ ನೆನಪು ಮಾಡ್ಕೋತೀನಿ. "

ನಾನು ಸ್ತಬ್ಧನಾಗಿ ನಿಂತುಬಿಟ್ಟೆ.

ಇದೇ ಅಲ್ಲವೆ ನಿಜವಾದ ಪ್ರೀತಿ ? ಪ್ರೀತಿ ಎಂದರೆ ಕೇವಲ ಬಯಸುವದಲ್ಲ ಆದರೆ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೇ ತನ್ನ ಹೃದಯದ ಪ್ರೇಮವನ್ನು ಬೊಗಸೆಯಲ್ಲಿ ಮೊಗೆ ಮೊಗೆದು ಜೊತೆಗಾರ/ ಗಾತಿಯ ಮಡಿಲಲ್ಲಿ ಸುರಿಯುವುದು. ತಾನು ಪ್ರೀತಿಸಿದವರನ್ನು , ಅವರು ಹೇಗಿದ್ದರೆ ಹಾಗೇ ಸ್ವೀಕರಿಸುವುದು , ಅವರಿಗಾಗಿ ಸರ್ವಸ್ವವನ್ನೇ ಧಾರೆಯೆರೆಯುವುದು ಇದಲ್ಲವೆ ಪ್ರೀತಿ?

ನಿಧಾನವಾಗಿ ರಸ್ತೆಗಿಳಿದ ತಾತನ ಕಣ್ಣಲ್ಲಿ ನನ್ನ ಬಗ್ಗೆ ಕನಿಕರವಿತ್ತೆ? ಅಯ್ಯೋ, ಇಂಥ ಪ್ರೇಮ ನಿಮಗೆ ಅರ್ಥವಾಗುವುದೇನೋ ಹುಚ್ಚಪ್ಪಾ ಎಂಬ ಭಾವವಿತ್ತೆ ?

(ಇ-ಮೇಲ್ ನಿಂದ )

22 comments:

sunaath said...

Valentine Dayಗೆ ಈ ಬರಹವೇ ನಿಜವಾದ ಕಾಣಿಕೆ.
"ಅವಳಿಗೆ ಗುರುತು ಹಿಡಿಯದಿದ್ದರೇನು, ನನಗೆ ಅವಳ ಗುರುತು
ಇದೆಯಲ್ಲ", ಇದು ನಿಜವಾದ ದಾಂಪತ್ಯಪ್ರೀತಿ.
ಚಿತ್ರಾ, ತುಂಬ ಸೊಗಸಾದ ಲೇಖನ.
ಅಭಿನಂದನೆಗಳು.

shivu.k said...

ಚಿತ್ರಾ ಮೇಡಮ್,

ನೀವು ನನ್ನ ಬ್ಲಾಗಿನ ಕತೆ ಓದಿ ನನ್ನ ಕಣ್ಣಲ್ಲಿ ನೀರು ತರಿಸಿದ್ದು ನ್ಯಾಯವೇ ಅಂತ ಕೇಳಿದ್ರಿ....ಈಗ ನೀವೇನು ಕಡಿಮೇನಾ...ಲೇಖನ ಪುಟ್ಟದಾಗಿ ಬರೆದರೂ ಸಿಕ್ಕಾಪಟ್ಟೆ ಕಾಡುವಂತೆ ಬರೆತ್ತೀರಲ್ಲ.....ತಾತ ಅಜ್ಜಿ ಕತೆ ಅವರ ಪರಿಶುದ್ಧ ಪ್ರೇಮದ ಪರಿ....ಅದರಲ್ಲೂ ಗುಲಾಬಿ ಗಿಡ..ಗುಲಾಬಿ...ಎಲ್ಲಾ ಸೂಪರ್ಬ್...ಈ ದಿನ ಅವರಿಬ್ಬರಿಗೂ ಒಂದು ಸಲಾಂ...ಮತ್ತು ಅದನ್ನು ಕೊಟ್ಟ ನಿಮಗೊಂದು ಸಲಾಂ!

ಚಂದ್ರಕಾಂತ ಎಸ್ said...

ತುಂಬಾ ಸೊಗಸಾದ ಕಥೆ. ಅಷ್ಟೇ ಸೊಗಸಾದ ನಿರೂಪಣೆ.

Ittigecement said...

ಚಿತ್ರಾ..

ಪ್ರೀತಿ ಪ್ರೇಮದ..
ಎಷ್ಟು ಚಂದದ..

"ಚಿತ್ರ"
ಬಿಡಿಸಿಟ್ಟಿದ್ದೀರಿ,,ಚಿತ್ರಾ,,?

ಪ್ರೇಮಿಗಳ ದಿನದ..
ಅತ್ಯಂತ ಒಳ್ಳೆಯ

"ಚಿತ್ರಣ"
ಇದು...

ವಂದನೆಗಳು....

ಏ ಜೆ ಜಾವೀದ್ said...

ಚಿತ್ರಾ ಮೇಡಮ್,

ನಿಮ್ಮ ಈ ವ್ಯಾಲೆನ್‍ಟೈನ್ ಗಿಫ್ಟ್ ಗೆ ಅನಂತ ಅನಂತ ಧನ್ಯವಾದಗಳು. ಇದರ ಬಗ್ಗೆ ಹೆಚ್ಚು ಹೇಳೊಲ್ಲ.

Harisha - ಹರೀಶ said...

ಚಿತ್ರಕ್ಕಾ, ನೀ ಯಾವಾಗ ಡಾಕ್ಟರ್ ಆದೆ ಅಂತ ಒಂದು ಸಲ ಕನ್ಫ್ಯೂಸ್ ಆದಿ...

ಪ್ರೀತಿ ಅಂದ್ರೆ ಏನು ಅಂತ ಗೊತ್ತಿಲ್ದೇ ಪಾರ್ಟಿ, ಪಬ್ಬು ಸುತ್ತೋ ಜನಕ್ಕೆ ಇಂಥ ವಿಷಯ ಓದಿ ಆದ್ರೂ ಬುದ್ದಿ ಬಂದ್ರೆ ಸಂತೋಷ... ವ್ಯಾಲೆಂಟೈನ್ಸ್ ಡೇ ದಿನ ಅದಕ್ಕೆ ತಕ್ಕ ಲೇಖನ ಹಾಕಿದ್ದೆ..

ನನ್ನ ಫ್ರೆಂಡ್ಸ್ ಎಲ್ಲರಿಗೂ ಇದರ ಲಿಂಕ್ ಕಳ್ಸ್ತಿ :-)

ಮಲ್ಲಿಕಾರ್ಜುನ.ಡಿ.ಜಿ. said...

ಏನನ್ನೂ ಬಯಸದೇ ಪ್ರೀತಿಸುವುದೇ ನಿಜವಾದ ಪ್ರೀತಿ.ತುಂಬಾ ಚೆನ್ನಾಗಿ ಬರೆದಿರುವಿರಿ ಮೇಡಮ್ ಕಥೆಯನ್ನು.ನನ್ನ ಬ್ಲಾಗಿಗೆ ಬಂದು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ತೇಜಸ್ವಿನಿ ಹೆಗಡೆ said...

ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ಕೊಡುವ ಪ್ರೀತಿಯ ಒಳಗಿನ ಸುಖ ಬೇರೆಯಾವುದರಲ್ಲೂ ಇರದು. ತುಂಬಾ ಅರ್ಥವತ್ತಾಗಿದೆ ಕಥೆ. ಸುಂದರವೂ ಕೂಡ. ತುಂಬಾ ಇಷ್ಟವಾಯಿತು.

ಚಿತ್ರಾ said...

ಕಾಕಾ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಇಂಥಾ ಪ್ರೀತಿ ಎಲ್ಲರಲ್ಲೂ ಇದ್ದರೆ ಜೀವನ ಎಷ್ಟು ಸುಂದರವಾಗುತ್ತಿತ್ತು ಅಲ್ಲವೆ?

ಶಿವೂ,
ಇದು ನನಗೆ ಬಂದ ಮರಾಠೀ ಇ-ಮೇಲ್ ಗಳಲ್ಲೊಂದು. ಬಹಳ ಹಿಂದೆಯೇ ಬಂದಿದ್ದರೂ ಇಂದಿನವರೆಗೂ ನನ್ನನ್ನು ಕಾಡುತ್ತಿರುವ ಮೇಲ್ ಗಳಲ್ಲೊಂದು.ವಾಲಂಟೈನ್ ಡೇ ಗೆ ಏನು ಬರೆಯಲಿ ಎಂದು ಯೋಚಿಸುತ್ತಿದ್ದಾಗ ನೆನಪಾಗಿದ್ದು ಇದು. ಮರಾಠೀ ಶಬ್ದಗಳಲ್ಲಿದ್ದ ಭಾವುಕತೆಯನ್ನು ಸಮರ್ಥವಾಗಿ ಕನ್ನಡದಲ್ಲಿ ಸಮೀಕರಿಸಲಾಗಲಿಲ್ಲವೇನೋ ಎಂಬ ಸಂಶಯ ನನಗಿದೆ.ಹೀಗಾಗಿ ನಿಮ್ಮ ಸಲಾಂ ಇದರ ಮೂಲ ಲೇಖಕರಿಗೆ (ಯಾರೆಂದು ನನಗೂ ಗೊತ್ತಿಲ್ಲ) ಸೇರಬೇಕಾದ್ದು.ಹಾಂ, ಗುಲಾಬಿಗಿಡ , ಹೂ ಮಾತ್ರ ನನ್ನದು !
ಧನ್ಯವಾದಗಳು.

ಚಂದ್ರಕಾಂತಾ,
ಬಹುದಿನಗಳ ನಂತರ ಭೇಟಿ.
ಥ್ಯಾಂಕ್ಸ್ ! ಬರುತ್ತಾ ಇರಿ.

ಚಿತ್ರಾ said...

ಪ್ರಕಾಶಣ್ಣ ,

ನಿಮ್ಮ ಚೇತನಾಳ ಸ್ಪೂರ್ತಿ ನನಗೆ !ನಿಮಗೆ ’ ಚೆಂದ’ ಎನಿಸಿದ್ದು ತಿಳಿದು ನನಗೆ ಖುಶಿಯಾಯಿತು.
ಪ್ರೋತ್ಸಾಹಕ್ಕೆ ಧನ್ಯವಾದಗಳು.

ಜಾವೇದ್,
ಬ್ಲಾಗಿಗೆ ಸ್ವಾಗತ .
ನಿಮ್ಮ ಮೆಚ್ಚುಗೆಗೆ ತುಂಬಾ ಥ್ಯಾಂಕ್ಸ್ ! ಬರುತ್ತಾ ಇರಿ.

PARAANJAPE K.N. said...

ಚಿತ್ರಾ,
ಪ್ರೇಮಿಗಳ ದಿನಕ್ಕೆ ಸಕಾಲಿಕವೆನಿಸುವ ಲೇಖನ ಕೊಟ್ಟಿದ್ದೀರಿ. ನಿಮ್ಮ ಲೇಖನದೊಳಗಿರುವ
ಭಾವನೆ ಪವಿತ್ರ ಪ್ರೇಮದ ಸ೦ಕೇತ. ಅಭಿನ೦ದನೆಗಳು. ನನ್ನ ಬ್ಲಾಗಿಗೆ ಭೇಟಿ
ಕೊಟ್ಟು ಅಭಿಪ್ರಾಯಿಸಿದ್ದಕ್ಕೆ ವ೦ದನೆಗಳು. ನಿಮ್ಮನ್ನು ಕೇಳದೇನೇ ನಿಮ್ಮ ಬ್ಲಾಗನ್ನು ನನ್ನ ರೋಲಿಗೆ ಸೇರಿಸಿಕೊ೦ಡಿದ್ದೇನೆ. ನನ್ನ ಬ್ಲಾಗನ್ನು
ನಿಮ್ಮ ಬ್ಲಾಗ್ ರೋಲ್ ಗೆ ಸೇರಿಸಿಕೊಳ್ಳಿ.

ಚಿತ್ರಾ said...

ಹರೀಶ ,
ಕನ್ ಫ್ಯೂಸ್ ಮಾಡ್ಕ್ಯಳಡಾ ಮಾರಾಯ.ಇದು ನನ್ನ ಕಥೆ ಅಲ್ಲ !
ಎಲ್ಲರಿಗೂ ಲಿಂಕ್ ಕಳಿಸಿದ್ದಕ್ಕೆ ಥ್ಯಾಂಕ್ಸು.
ಆದ್ರೂ ನಿಜವಾದ ಪ್ರೀತಿನ ಅರ್ಥ ಮಾಡ್ಕ್ಯಳವು ರಾಶಿ ಕಮ್ಮಿ ಅಲ್ದ?

ಮಲ್ಲಿಕಾರ್ಜುನ,
ಬ್ಲಾಗಿಗೆ ಸ್ವಾಗತ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು !
ನಿಮ್ಮ ಬ್ಲಾಗನ್ನು ನೋಡಿದೆ. ಅದ್ಭುತ ಫೋಟೋಗಳು !ನನಗೆ ಫೋಟೊಗ್ರಫಿ ಅನ್ನೋದು ಇಷ್ಟದ ವಿಷಯ. ಆದರೆ ತಾಂತ್ರಿಕತೆಯ ಗಂಧಗಾಳಿಯೂ ನನಗಿಲ್ಲ.ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ನಿಮ್ಮ ಬ್ಲಾಗಿನಲ್ಲೇ ನನ್ನ ಅನಿಸಿಕೆಗಳನ್ನು ಬರೆಯುತ್ತೇನೆ. ಬರುತ್ತಿರಿ.

ತೇಜೂ ,
ಲೇಖನ ಇಷ್ಟವಾದದ್ದು ನಂಗೆ ಖುಶಿಯಾತು.ಇಂಥ ಪ್ರೀತಿ ನಮ್ಮೆಲ್ಲರಲ್ಲೂ ತುಂಬಿಕೊಳ್ಳಲಿ ಅಂತ ಹಾರೈಸೋಣವೆ?

Unknown said...

Hey Chitra...wonderful.... so straight...so simple...but very touching.... expressing the feelings also a talent...u have that...reading ur blog regularly..keep writing..all the best.

Unknown said...

ಬಹಳ ಚೆನ್ನಾಗಿದ್ದು. ಪ್ರೇಮಿಗಳ ದಿನಕ್ಕೆ ಸುಂದರವಾದ ಕಾಣಿಕೆ.

ಮನಸ್ವಿ said...

ಪ್ರೀತಿ ಪ್ರೇಮ ಅಂತ ಇದ್ದ ಬದ್ದ ಹುಡುಗ/ಹುಡುಗಿ ಜೊತೆ ಓಡಾಡಿ ಬಟ್ಟೆ ಬದ್ಲಾಯ್ಸಿದಂಗೆ ದಿನಕ್ಕೊಬ್ಬ ಬಾಯಿ/ಗರ್ಲು ಫ್ರೆಂಡ್ ಬದಲಾಯಿಸ ಬದಲು ಇದನ್ನ ಓದಿಯಾದ್ರು ಪ್ರೀತಿಸಿದ್ರೆ ಒಬ್ಬರನ್ನೆ ಸಾಯೋ ತನಕ ಪ್ರೀತ್ಸಿದ ಇದ್ದಲ ಅದು.. ನಿಜವಾದ ಪ್ರೀತಿ ಅಂತ ಗೊತ್ತಾಗಲಿ.ಪ್ರೇಮಿಗಳ ದಿನಕ್ಕೆ ಅತ್ಯುತ್ತಮ ಲೇಖನ... ಚಿತ್ರಕ್ಕಾ..ಇಷ್ಟ ಆತು...

ಶಿವಪ್ರಕಾಶ್ said...

nice article chitra.
thank you...

ಗೀತಾ ಗಣಪತಿ said...

Chitra,

'Notebook' helo english movie kathenoo hinge iddu...

ಚಿತ್ರಾ said...

ಪರಾಂಜಪೆಯವರೇ,
ಧನ್ಯವಾದಗಳು. ಬ್ಲಾಗ್ ರೋಲ್ ನಲ್ಲಿ ಸೇರಿಸಲು ನನ್ನ ಅನುಮತಿ ಬೇಕಾಗಿಲ್ಲ. ಥ್ಯಾಂಕ್ಸ್ . ನಿಮ್ಮನ್ನು ನನ್ನ ಪಟ್ಟಿಯಲ್ಲಿ ಸೇರಿಸಿದ್ದೇನೆ.


ಸಂತೋಷ್,
ಮೆಚ್ಚುಗೆಗೆ ಧನ್ಯವಾದಗಳು.
ನೀವು ರೆಗ್ಯುಲರ್ ಆಗಿ ನನ್ನ ಬ್ಲಾಗನ್ನು ಓದ್ತೀರಿ ಅಂತ ತಿಳಿದು ಖುಶಿಯಾಯ್ತು. ಹೀಗೇ ನಿಮ್ಮ ಅಭಿಪ್ರಾಯಾನೂ ಬರೀತಾ ಇರಿ.

ಮಧು ,
ಬಹಳ ದಿನಗಳ ನಂತರ ನಿನ್ನ ನೋಡಿ ಖುಶಿಯಾತು. ಬರುತ್ತಾ ಇರು.

ಮನಸ್ವಿ,
ನೀ ಹೇಳೋದು ಸರಿ. ಆದರೆ ,ಎಷ್ಟು ಜನ ಇದನ್ನ ಅರ್ಥ ಮಾಡ್ಕ್ಯತ್ತ ? ಜನಕ್ಕೆ ಈಗಿತ್ಲಾಗಿ , ನಿಜವಾದ ಪ್ರೀತಿಗೂ , ಬರೀ ಮೋಹಕ್ಕೂ ವ್ಯತ್ಯಾಸ ಗೊತ್ತಾಗದೇ ಇದ್ದಂಗೇ ಆಯ್ದು ಅಲ್ದಾ? ಬರುತ್ತಾ ಇರು.

ಶಿವಪ್ರಕಾಶ್,
ಧನ್ಯವಾದಗಳು. ಹೀಗೇ ಬರುತ್ತಾ ಇರಿ. ಪ್ರೋತ್ಸಾಹ ಕೊಡುತ್ತಿರಿ.

ಗೀತಾ ,
ನನ್ನ ಬ್ಲಾಗಿಗೆ ಸ್ವಾಗತ !ನೀವು ಹೇಳಿದ ಚಿತ್ರ ನೋಡಿಲ್ಲ. ಈಗ ಕುತೂಹಲ ಆಗ್ತ ಇದೆ ! ಈ ಕಥೆ ನನಗೆ ಇ-ಮೇಲ್ ನಲ್ಲಿ ಬಂದಿತ್ತು. ’ ಮರಾಠೀ’ ಯಲ್ಲಿ. ನಂಗೆ ತುಂಬಾ ಇಷ್ಟ ವಾಯ್ತು. ಅದಕ್ಕೆ , ಸ್ವಲ್ಪ ನನ್ನ ಸಾಲುಗಳನ್ನೂ ಬೆರೆಸಿ ಬಡಿಸಿದ್ದೇನೆ . ನಿಮಗಿಷ್ಟವಾಯಿತೇ ಅಂತ ತಿಳಿಯೋ ಆಸೆಯಿದೆ . ಬರುತ್ತಿರಿ.

ಚಂದ್ರಕಾಂತ ಎಸ್ said...

ಚಿತ್ರಾ
ನಿಮ್ಮ ಈ ಈ-ಮೆಯ್ಲ್ ಕಥೆ ನನಗೆ ಇನ್ನೊಂದು ಕಥೆಯನ್ನು ನೆನಪಿಸಿತು. ಅದೂ ಸಹ ಈ-ಮೆಯ್ಲ್ ಮೂಲಕ ಹಾರಿ ಬಂದದ್ದೇ. ಅದು ಇಂಗ್ಲೀಷ್ ನಲ್ಲಿದ್ದುದು. ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ. ಒಮ್ಮೆ ಓದಿ ಪ್ರೇಮವನ್ನು ವಿಶೇಷ ರೀತಿಯಲ್ಲಿ ಅರ್ಥೈಸುವ ಕಥೆ. ಅದರ ಹೆಸರು " ಹೃದಯದ ಭಾಷೆ ". ನಿಮಗೆ ಖಂಡಿತ ಇಷ್ಟವಾಗುತ್ತೆ. ( ನಾನೂ ಸಹ ಅದನ್ನು ಪ್ರೇಮಿಗಳ ದಿನದಂದೇ ಪೋಸ್ಟ್ ಮಾಡಿದ್ದರೆ ಚೆನ್ನಾಗಿತ್ತೇನೋ )

ಸಾಗರದಾಚೆಯ ಇಂಚರ said...

ಚಿತ್ರಾ ಅವರೇ,

ಒಳ್ಳೆಯ ಬರಹ,

ಬರೆಯುತ್ತಿರಿ, ಬರುತ್ತಿರುವೆ.

ಚಿತ್ರಾ said...

ಚಂದ್ರಕಾಂತಾರವರೇ,
ನಿಮ್ಮ ಬ್ಲಾಗ್ ನಲ್ಲಿನ ಲೇಖನ ಓದಿದೆ. ಬಹಳ ಚೆನ್ನಾಗಿದೆ.
ಥ್ಯಾಂಕ್ಸ್ .

ಸಾಗರದಾಚೆಯವರೇ,
ಈಚೆ ಬಂದು, ಓದಿ , ಮೆಚ್ಚಿ ,ಪ್ರೋತ್ಸಾಹಿಸಿದ್ದಕ್ಕೆ ತುಂಬಾ ಧನ್ಯವಾದಗಳು !ಬರುತ್ತಿರಿ.

naz said...

chitra ..ji...its heart touching artical...l o v e..its a miracle word thanx chitra ji ..