March 16, 2009

ಆಕಾಶವಾಣಿ...

ಆಕಾಶವಾಣಿ...... ಈ ಶಬ್ದ ಕೇಳಿದಾಗ ನಿಮಗೇನಾದರೂ ನೆನಪಾಗುತ್ತದೆಯೆ?

ನನಗಂತೂ ಪ್ರಸಾರ ಆರಂಭವಾಗುವ ಮೊದಲಿನ ’ ಕುಂಯ್ ’ ರಾಗ ಮತ್ತು ಯುವವಾಣಿ ಆರಂಭವಾಗುವಾಗಿನ ಸಂಗೀತ ಕಿವಿಯಲ್ಲಿ ಕೇಳತೊಡಗುತ್ತವೆ !

ಕೆಲದಿನಗಳ ಹಿಂದೆ ಶಿವರಾತ್ರಿಯಿಂದಾಗಿ ಸಿರಿಗೆ ಒಂದೇಸಲ ಮೂರು ದಿನಗಳ ರಜೆ ಸಿಕ್ಕಿತ್ತು . ಹೀಗಾಗಿ ಪುಣೆಯಲ್ಲಿ ಪ್ರಸಾರವಾಗುವ ಎಲ್ಲಾ ಎಫ್ ಎಂ ರೇಡಿಯೋಗಳನ್ನೂ ಕೇಳುವ ಸುಯೋಗ (?)ನನಗೆ ದೊರೆಯಿತು. ರೇಡಿಯೊ ಮಿರ್ಚಿ , ರೇಡಿಯೋ ಒನ್ , ರೇಡಿಯೋ ಸಿಟಿ , ಇನ್ನೂ ಯಾವುದೋ ಸ್ಟೇಶನ್ ಮತ್ತು ವಿವಿಧ ಭಾರತಿ!
ನನಗೆ ಅಲ್ಲಿಯವರೆಗೂ ರೇಡಿಯೋ ಮಿರ್ಚಿ ಮತ್ತು ವಿವಿಧ ಭಾರತಿ ಬಿಟ್ಟರೆ ಬೇರೆ ಸ್ಟೇಶನ್ ಗಳ ಬಗ್ಗೆ ಅಷ್ಟಾಗಿ ಜ್ಞಾನವಿರಲಿಲ್ಲ . ಸರಿ , ಬೆಳಗಿಂದ ಶುರುವಾದ ಈ ರೇಡಿಯೋ ಕಾರ್ಯಕ್ರಮಗಳು ಎಲ್ಲಿಯೂ ನಿಲ್ಲುವ ಲಕ್ಷಣವೇ ಕಾಣಲಿಲ್ಲ ನನಗೆ. ಬಿಡುವಿಲ್ಲದೇ ಹಿಂದೀ ಮಿಶ್ರಿತ ಮರಾಠೀಯಲ್ಲಿ ವಟಗುಟ್ಟುವ ಆರ್ ಜೆ( ರೇಡಿಯೋ ಜಾಕಿ ) ಸ್ಮಿತಾ , ಶ್ರೀಕಾಂತ್ , ನಿದ್ದೆಯಲ್ಲಿರುವಂಥ ಧ್ವನಿಯಲ್ಲಿ ಜೋಕ್ ಹೇಳುವ ’ ಸುಡ್ ’ ( ಸುದರ್ಶನ್) ಜೊತೆಗೆ ಕೊಲ್ಲಾಪುರಿ ಮರಾಠೀಯಿಂದ ಹೊಸ ಸಿನೆಮಾಗಳ ರೆವ್ಯೂ ಕೊಡುತ್ತಾ ಮನಸೆಳೆಯುವ ’ ಕೋ ಕೋ ಪಾಟೀಲ್ ’ ಇತ್ಯಾದಿಗಳು ಒಬ್ಬರಾದಮೇಲೊಬ್ಬರು ಒಂದೇ ಸಮ ಮಾತನಾಡುತ್ತಾ ನಡು ನಡುವೆ ಹಿಂದೀ ಚಿತ್ರಗೀತೆಗಳನ್ನು ,ಟ್ರಾಫಿಕ್ ಮಾಹಿತಿಯನ್ನು , ಕ್ರಿಕೆಟ್ ಸ್ಕೋರ್ ಇತ್ಯಾದಿ ಪ್ರಸಾರ ಮಾಡುತ್ತಿದ್ದರೆ, ನನ್ನ ಮಗಳು ಅವರೊಂದಿಗೇ ತಾನೇನು ಕಡಿಮೆ ಎಂಬಂತೆ ದನಿಗೂಡಿಸುತ್ತಿದ್ದಳು !
ತಲೆ ಕೆಟ್ಟು ಹೋಗಿ ’ ಎಷ್ಟೊತ್ತಿಗೆ ಮುಗಿಯತ್ತೆ ಈ ರೇಡಿಯೋ ಕಾರ್ಯಕ್ರಮಗಳು ಅಂತ ಕೇಳಿದರೆ ಕೂಲಾಗಿ ಹೇಳಿದಳು ’ ಅಮ್ಮಾ , ರಾತ್ರಿ ೧೨ ಆದ್ರೂ ಆಗತ್ತೆ ನೋಡು " ನನಗೆ ಆಗ ನಮ್ಮ ’ಆಕಾಶವಾಣಿ ’ ನೆನಪಾಯಿತು .

ನಾವು ಸಣ್ಣವರಿದ್ದಾಗ ಇಷ್ಟೆಲ್ಲಾ ಎಫ್ ಎಮ್ ಗಳೆಲ್ಲಿದ್ದವು? ಒಂದೋ ಎರಡೋ ಸ್ಟೇಶನ್ಗಳು ಸಿಗುತ್ತಿದ್ದಿದ್ದು. ಊರಿಗೆ ಹತ್ತಿರವಿರುವ ಸ್ಟೇಶನ್ ಬಿಟ್ರೆ ಅಪ್ಪಿ ತಪ್ಪಿ ವಿವಿಧ ಭಾರತಿ !ಅದೂ ಕೂಡ ಎಷ್ಟೋ ಪ್ರಯತ್ನಿಸಿದ ಮೇಲೆ , ಸಾಕಷ್ಟು ’ ಗೊಸ್ , ಗರ್ರ್ ರ್ ರ್, ತಬಳಕ್ , ಳಕ್ .. ಇತ್ಯಾದಿ ಶಬ್ದಗಳ ನಂತರ ! ಕಾರ್ಯಕ್ರಮಗಳೂ ಕೂಡ ನಿಗದಿತ ವೇಳೆಯಲ್ಲಷ್ಟೇ ಇರುತ್ತಿದ್ದುದ್ದು. ಆಗಂತೂ ರೇಡಿಯೊ ಇಟ್ಟುಕೊಳ್ಳುವುದೇ ಒಂದು ದೊಡ್ಡ ವಿಷಯ . ಅದರಲ್ಲೂ ಎಷ್ಟು ಬ್ಯಾಂಡ್ ನ ರೇಡಿಯೋ ಎನ್ನುವುದರ ಮೇಲೆ ಆ ಮನೆಯವರ ಅಂತಸ್ತು ತಿಳಿಯುತ್ತಿತ್ತು. ಸಾಕಷ್ಟು ದೊಡ್ಡದಾಗಿರುತ್ತಿದ್ದ ರೇಡಿಯೋ,ಜಗುಲಿಯಲ್ಲಿ ,ಬಂದವರಿಗೆ ಕಾಣುವಂತೆ ಆದರೆ ಮಕ್ಕಳ ಕೈ ನಿಲುಕದಂತೆ ಎತ್ತರದಲ್ಲಿ ಅದಕ್ಕೆಂದೇ ಮಾಡಿಸಿದ ಸ್ಪೆಶಲ್ ’ ಶೆಲ್ಫ್ ’ ನ್ನು ಅಲಂಕರಿಸಿರುತ್ತಿತ್ತು. ಮನೆಯ ಹೆಣ್ಣುಮಕ್ಕಳು ಅದಕ್ಕೆ ತಮ್ಮ ಕೈಕಸೂತಿಯಿಂದ ಚೆಂದಗೊಳಿಸಿದ ಕವರ್ ಹಾಕಿರಿಸುತ್ತಿದ್ದರು !

ನಮ್ಮ ಮನೆಯಲ್ಲಿ ನಾವು ಮಕ್ಕಳು ಮಲಗುತ್ತಿದ್ದ ಕೋಣೆ ಜಗುಲಿಗೆ ತಾಗಿಕೊಂಡಿತ್ತು. ನಡುವಿನ ಗೋಡೆಗೆ ನಮ್ಮ ಮನೆಯಲ್ಲಿದ್ದ ದೊಡ್ಡ ’ ಬುಶ್’ ರೇಡಿಯೋ ಇದ್ದಿದ್ದು .
ಬೆಳಿಗ್ಗೆ ೬.೩೦ಕ್ಕೆ ಬೆಳಗಿನ ಪ್ರಸಾರ ಆರಂಭವಾಗುತ್ತಿದ್ದಂತೆ ನಮ್ಮಲ್ಲೂ ರೇಡಿಯೋ ಶುರು. ವಿಶಿಷ್ಟವಾದ ’ ಕುಂಯ್ಯ್ ...’ ಎಂಬ ಸಂಗೀತ ( ?) ಆರಂಭ. ಅಲ್ಲಿಗೆ ನಮ್ಮ ನಿದ್ರಾ ಭಂಗ ! ನಾವು ಮುಸುಕಿನಲ್ಲೇ ಸಿಡಿಮಿಡಿಗೊಳ್ಳುತ್ತಾ ಬೆಳಗಿನ ಸವಿನಿದ್ರೆಯನ್ನು ಹಾಳು ಮಾಡುತ್ತಿರುವ ರೇಡಿಯೋಕ್ಕಷ್ಟು ಶಾಪ ಹಾಕುತ್ತಾ ಮುಸುಕನ್ನು ಇನ್ನೂ ಬಿಗಿಯಾಗಿಸುತ್ತಿದ್ದೆವು! ಮೊದಲು ಭಕ್ತಿಗೀತೆಗಳು ನಂತರ ೬.೫೦ಕ್ಕೆ ’ .. ಸಂಸ್ಕೃತ ವಾರ್ತಾಯ ಶ್ರುಯಂತಾಂ, ಪ್ರವಾಚಕೋ ಬಲದೇವಾನಂದ ಸಾಗರಃ ಅಥವಾ ಪ್ರವಾಚಿಕಾ ವಿಜಯಶ್ರೀಃ ’ ಎಂದು ಆರಂಭಗೊಳ್ಳುತ್ತಿದ್ದಂತೆ ಅಮ್ಮನ ಮೊದಲ ಕರೆ ಕೇಳುತ್ತಿತ್ತು. ಅಮ್ಮನ ದನಿ ಕೇಳುತ್ತಿದ್ದಂತೆ ನಮಗೆ ಗಾಢ ನಿದ್ರೆ ! ನಂತರ ೭.೧೫ಕ್ಕೆ ’ ಇದೀಗ ಪ್ರದೇಶ ಸಮಾಚಾರ, ಓದುತ್ತಿರುವವರು ಕೃಷ್ಣಕಾಂತ್ ...’ ಎನ್ನುವಷ್ಟರಲ್ಲಿ ಮತ್ತೊಮ್ಮೆ ಅಮ್ಮನ ಕರೆ , ಈಗ ಸ್ವಲ್ಪ ಗಟ್ಟಿಯಾಗಿ. ನಾವು ಮೆಲ್ಲಗೆ ಮಿಸುಕಾಡತೊಡಗುತ್ತಿದ್ದೆವು. ಆದರೆ ಇನ್ನೂ ಐದು ನಿಮಿಷ ಬೆಚ್ಚಗೆ ಮಲಗಿಬಿಡೋಣ ಎನ್ನುತ್ತಿತ್ತು ಮನಸು. ಅಷ್ಟರಲ್ಲಿ ೭.೩೦ ! ಪ್ರದೇಶ ಸಮಾಚಾರ ಮುಗಿದು ’ಆಕಾಶವಾಣಿ, ವಾರ್ತೆಗಳು , ಓದುತ್ತಿರುವವರು ಉಪೇಂದ್ರ ಕುಮಾರ್ .. ’ ಎಂದು ಆರಂಭವಾಗುವುದರೊಂದಿಗೆ ಅಪ್ಪಾಜಿಯ ದನಿ ಕೇಳುತ್ತಿತ್ತು. ಆಗ ನಾವು ದಡಬಡಿಸುತ್ತ ಏಳುತ್ತಿದ್ದೆವು .ಹಾಸಿಗೆ ಸುತ್ತಿಟ್ಟು ಬಚ್ಚಲೊಲೆಯ ಕಡೆ ಪ್ರಯಾಣ ನಮ್ಮದು . ನಿಧಾನವಾಗಿ ಮುಖ ತೊಳೆದು ಅಡಿಗೆ ಮನೆಗೆ ಪಾದಬೆಳೆಸುವಷ್ಟರಲ್ಲಿ ೭.೪೫. ’ ಕನ್ನಡ ಚಿತ್ರಗೀತೆಗಳು ’ ಶುರುವಾಗುತ್ತಿದ್ದವು. ಆ ಗೀತೆಗಳನ್ನು ಕೇಳುತ್ತಾ ತಿಂಡಿ ಮುಗಿಸುವಷ್ಟರಲ್ಲಿ ೮.೦ ಗಂಟೆಯ ಇಂಗ್ಲಿಷ್ ವಾರ್ತೆ ಆರಂಭ ’ ದಿಸ್ ಈಸ್ ಆಲ್ ಇಂಡಿಯಾ ರೇಡಿಯೋ ’ ಎಂದು ಕಿವಿಗೆ ಬೀಳುತ್ತಿದ್ದಂತೆ ನಾವು ಓಡಿ ಹೋಗಿ ರೇಡಿಯೋ ಆಫ್ ಮಾಡುತ್ತಿದ್ದೆವು. ಒಂಚೂರೂ ಅರ್ಥವಾಗದ ಇಂಗ್ಲಿಷ್ ವಾರ್ತೆಗೋಸ್ಕರ ಕರೆಂಟ್ ಖರ್ಚುಮಾಡಬೇಕೆ ಎನ್ನುವುದು ನಾವು ಮಕ್ಕಳ ಅಭಿಪ್ರಾಯ !

ವಾರದ ದಿನಗಳಲ್ಲಿ ಪುನಃ ಮಧ್ಯಾಹ್ನದ ಪ್ರಸಾರ ೧.೩೦ರ ವಾರ್ತೆಯೊಂದಿಗೆ , ಆನಂತರ ಚಿತ್ರಗೀತೆಗಳು ,೨ ಗಂಟೆಗೆ ಇಂಗ್ಲಿಷ್ ವಾರ್ತೆಗಳೊಂದಿಗೆ ಮುಗಿದೇಹೋಗುತ್ತಿತ್ತು. ಮತ್ತೆ ಸಂಜೆ ೬ .೩೦ ರ ಕೃಷಿರಂಗ ದವರೆಗೂ ರೇಡಿಯೋದ ಸುದ್ದಿ ಗದ್ದಲವಿಲ್ಲ ! ಜಯಮಾಲಾ, ಯುವವಾಣಿ, ಯುವರಂಜಿನಿ ಇತ್ಯಾದಿಗಳು ಸಂಜೆಯ ಪ್ರಸಾರದಲ್ಲಿ . ಯಾವ ಹೊತ್ತಿನ ಪ್ರಸಾರವಿದ್ದರೂ ಅದು ಇಂಗ್ಲಿಷ್ ವಾರ್ತೆಗಳೊಂದಿಗೇ ಕೊನೆಗೊಳ್ಳುತ್ತಿದ್ದುದೇಕೆ ಎನ್ನುವ ವಿಷಯ ನಮಗೆ ಬಗೆಹರಿಯಲೇ ಇಲ್ಲ !ಅಂದಿನ ದಿನಗಳಲ್ಲಿ ಮನರಂಜನೆಯ ಏಕೈಕ ಆಧುನಿಕ ಸಾಧನವೆಂದರೆ ರೇಡಿಯೋ ! ಟಿವಿ, ಟೇಪ್ ರೆಕಾರ್ಡರ್ ಗಳಿರಲಿ ದಿನಪತ್ರಿಕೆಗಳೂ ಕಷ್ಟಪಟ್ಟೂ ಮನೆ ತಲುಪುತ್ತಿದ್ದ ಕಾಲ ! ಬಸ್ ಸರಿಯಾಗಿ ಬಾರದ ದಿನ ಪೇಪರ್ ಕೂಡ ಇಲ್ಲ ! ಇಂದಿನ ಪೇಪರ್ ಜೊತೆ ಎಷ್ಟೋ ಸಲ ನೆನ್ನೆಯ ಪೇಪರ್ ಸಹ ಒಟ್ಟಿಗೇ ಸಿಗುತ್ತಿತ್ತು ! ಹೀಗಿರುವಾಗ ದೇಶದ ಆಗುಹೋಗುಗಳನ್ನು ತಕ್ಷಣಾ ತಿಳಿಸುವ ರೇಡಿಯೋಕ್ಕಿದ್ದ ಗೌರವ ಅಪಾರ . ( ದೇಶದಲ್ಲಿ ಎಮರ್ಜೆನ್ಸಿ ಹೇರಲ್ಪಟ್ಟಾಗ ರೇಡಿಯೋ ಇಟ್ಟುಕೊಳ್ಳಲೂ ಸಹ ಲೈಸೆನ್ಸ್ ಬೇಕಿತ್ತೆಂದು ಅಪ್ಪಾಜಿ ಹೇಳುತ್ತಿದ್ದ ನೆನಪು )

ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ನಾವೂ ರೇಡಿಯೋವನ್ನು ಮೆಚ್ಚತೊಡಗಿದೆವು. ನನ್ನ ಕಿರಿ ತಮ್ಮನಂತೂ ’ ಇಂಗ್ಲಿಷ್ ವಾರ್ತೆಯನ್ನು ಕೇಳಿ ಅರ್ಥ ಮಾಡಿಕೊಳ್ಳಲೇ ಬೇಕೆಂದು ’ ಎಂದು ಹಟ ತೊಟ್ಟು ನಮ್ಮ ತಲೆ ತಿನ್ನುತ್ತಾ ನಮ್ಮಿಂದ ಬೈಸಿಕೊಳ್ಳುತಿದ್ದ ! ಇಂಥಾ ಹೊತ್ತಿನಲ್ಲಿ ನಮಗೆ ಪರಿಚಯವಾಗಿದ್ದು ಶಾರ್ಟ್ ವೇವ್ ನಲ್ಲಿ ಸಿಕ್ಕುತ್ತಿದ್ದ ’ ಸಿಲೋನ್ ರೇಡಿಯೋ ! ’ ಮಧ್ಯಾಹ್ನ ೨ ಅಥವಾ ೨.೩೦ ( ಸರಿಯಾಗಿ ನೆನಪಿಲ್ಲ ) ಗೆ ಅದರಲ್ಲಿ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ನಾವು ಈ ಕಾರ್ಯಕ್ರಮವನ್ನು ಕೇಳಲು ಬಯಸುತ್ತಿದ್ದ ಕಾರಣ , ಹಾಡುಗಳಲ್ಲ , ಬದಲಿಗೆ ಸರಿಯಾಗಿ ಕನ್ನಡ ಬಾರದ ಪ್ರಸಾರಕಿ ಯ ಚಿತ್ರ ವಿಚಿತ್ರ ಉಚ್ಚಾರಣೆ ಮತ್ತು ಅದರಿಂದಾಗಿ ಸೃಷ್ಟಿಯಾಗುತ್ತಿದ್ದ ಜೋಕುಗಳು ! ಅದರ ಕೆಲವು ಸ್ಯಾಂಪಲ್ ಕೊಡಲೆ ನಿಮಗೆ?
ಆಕೆ ಅವಳದೇ ವಿಶಿಷ್ಟ ಉಚ್ಚಾರಣೆಯಲ್ಲಿ ಹೇಳುತ್ತಿದ್ದಳು ’ ಮೊದಲು ಕೇಲಿ, ಎಡಕಾಲು ಗೂಡದ ಮೇಲೆ ’ ಚಿತ್ರದ ಗೀತೆ . ಹಾಡಿದ್ದಾರೆ ಎಸ್ ಜನಾಕಿ ’
ಆಮೇಲಿನದು ’ ಇದೀಗ ’ಬಾಯಲೂ ದಾರಿ’ ಚಿತ್ರದಿಂದ ಗೀತೆ , ಹಾಡಿದಾರೆ ಏಸ್ ಪಿ ಬಲಸುಬ್ರಮಾಣ್ಯಂ ’. ಎಲ್ಲಕ್ಕಿಂತ ಮಿಗಿಲಾಗಿದ್ದೆಂದರೆ ಆಕೆಯ ಈ ಅನೌನ್ಸ್ ಮೆಂಟ್ " ಈಗ ಕೇಲಿ , ’ಬೇದಿ ಬಂದವಳು’ ಚಿತ್ರದಿಂದ ಈ ಗೀತೆ .. ’ ಹಾಡು ತೇಲಿ ಬರುತ್ತಿದ್ದರೆ , ನಾವು ಬಿದ್ದೂ ಬಿದ್ದೂ ನಗುತ್ತಿದ್ದೆವು !

ಮತ್ತೊಂದು ಮನ ಸೆಳೆದ ಕಾರ್ಯಕ್ರಮ ’ ಬಿನಾಕಾ ಗೀತ್ ಮಾಲಾ’ . ಇದನ್ನು ನಡೆಸಿಕೊಡುತ್ತಿದ್ದ ’ ಅಮೀನ್ ಸಯಾನಿ ’ ಬಹುಶಃ ಮೊದಲ ಸುಪ್ರಸಿದ್ಧ ರೇಡಿಯೋ ಜಾಕಿ ಎನ್ನಬಹುದು! ಅವರ ವಿಶಿಷ್ಟ ಶೈಲಿಗೆ ಮನಸೋಲದವರೇ ಇರಲಿಲ್ಲವೇನೋ! ಆ ನಂತರವೂ ಬಿನಾಕಾ ಗೀತ್ ಮಾಲ ಸರಣಿಯಲ್ಲಿ ಹೊರಬಂದ ಎಷ್ಟೋ ಕ್ಯಾಸೆಟ್ ಗಳು ಅವರ ಜನಪ್ರಿಯತೆಗೆ ಸಾಕ್ಷಿ ! ರೇಡಿಯೋ ಕೇಳುವಾಗ ಮಜಾ ತರುತ್ತಿದ್ದ ಇನ್ನೊಂದು ಕಾರ್ಯಕ್ರಮ ಎಂದರೆ , ಚಿತ್ರಗೀತೆಗಳದ್ದು. ’ ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಹಾಡುಗಳಿಗಿಂತ ಕೇಳ ಬಯಸಿದವರ ಹೆಸರಿನ ಪಟ್ಟಿಯೇ ಉದ್ದವಿರುತ್ತಿತ್ತು. ಪ್ರಸಾರಕಿ ’ ಈ ಹಾಡನ್ನು ಕೇಳ ಬಯಸಿದ್ದಾರೆ ತಿಮ್ಮಾಪುರದಿಂದ ರಾಮಪ್ಪ , ಮಾದಣ್ಣ , ಮಲ್ಲಮ್ಮ , ಚೆನ್ನಮ್ಮಾ ಹಾಗೂ ಮನೆಯವರು , ಚನ್ನಪ್ಪನ ಹಳ್ಳಿಯಿಂದ ಪುಟ್ಟಮ್ಮ ,ಲಕ್ಷ್ಮಿ , ಗೌರಮ್ಮಾ ಕಿಟ್ಟಣ್ಣ ಹಾಗು ಮನೆಯವರು... ’ ಎಂದು ಲಿಸ್ಟ್ ಕೊಡುತ್ತಿದ್ದರೆ ಹೆಚ್ಚೆಂದರೆ ೨ ಹಾಡುಗಳನ್ನು ಮಾತ್ರ ಕೇಳುವಷ್ಟು ಸಮಯವಿರುತ್ತಿತ್ತು ! ಈಗ ಆರ್ ಜೆ ಗಳ ವಟಗುಟ್ಟುವಿಕೆಯಲ್ಲಿ ಬೇರೆಯವರು ಮಾತನಾಡಲು ಅವಕಾಶವೇ ಇಲ್ಲ !

ಒಂದು ಕಾಲದಲ್ಲಿ ಟೇಪ್ ರೆಕಾರ್ಡರ್ , ಟಿವಿ , ಇಂಟರ್ನೆಟ್ , ಐ ಪಾಡ್ ಗಳಿಂದಾಗಿ ಮೂಲೆಗುಂಪಾಗಿ ಕೇಳುವವರಿಲ್ಲದ ರೇಡಿಯೋಕ್ಕೆ ಪುನರ್ಜನ್ಮ ಕೊಟ್ಟಿದ್ದು ಈ ಎಫ್ ಎಂ ಗಳು! ತಮ್ಮ ವೈವಿಧ್ಯತೆ ಯಿಂದಾಗಿ ಯುವಜನತೆಯನ್ನು ಆಕರ್ಷಿಸಿದ್ದು ಇವುಗಳ ಹೆಗ್ಗಳಿಕೆಯೇ! ನನಗೆ ಈಗಲೂ ರೇಡಿಯೋ ಎಂದಕೂಡಲೇ ಆಕಾಶವಾಣಿ ಹಾಗೂ ಅದರ ಜೊತೆ ಹೆಣೆದುಕೊಂಡ ಬಾಲ್ಯದ ಕ್ಷಣಗಳು ನೆನಪಾಗಿ ಕೆಲ ನಿಮಿಷ ಅಲ್ಲಿಗೇ ಕರೆದೊಯ್ದುಬಿಡುತ್ತವೆ!

24 comments:

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ನನಗೂ ಅಷ್ಟೇ "ಓದುತ್ತಿರುವವರು ಉಪೇಂದ್ರ ಕುಮಾರ್.." ಎಂಬ ಹೆಸರು ಇನ್ನೂ ನೆನಪಿದೆ ನೋಡು. ಸವಿನೆನಪುಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

sunaath said...

ಚಿತ್ರಾ,
ಆಕಾಶವಾಣಿಯ ‘ಆ ದಿನಗಳು’! ಎಷ್ಟೊಂದು ಮಧುರ ನೆನಪುಗಳು ಅಲ್ಲಿ ಕೂಡಿವೆ. ಅವನ್ನೆಲ್ಲ ನೆನಪಿಸಿದ್ದಕ್ಕಾಗಿ
ಧನ್ಯವಾದಗಳು.

Ittigecement said...

ಚಿತ್ರಾ..

ನನಗೂ ನನ್ನ ಬಾಲ್ಯಕ್ಕೆ ಕರೆದೊಯ್ದು ಬಿಟ್ಟೆಯಲ್ಲಮ್ಮಾ..

ನಮ್ಮನೆಯಲ್ಲಿ ಕನ್ನಡವಾರ್ತೆಗಳು...
ಊಟದ ಸಮಯ ಆಗಿತ್ತು..
ಬೆಳಿಗ್ಗೆ..೭.೩೦ಕ್ಕೆ ನಾಷ್ಟಾ..
ಮಧ್ಯಾಹ್ನ.. ೧.೧೦ಕ್ಕೆ ಊಟ...
ಸಾಯಂಕಾಲ ೭.೩೫ಕ್ಕೆ ಮತ್ತೆ ಊಟ..

ಮಧ್ಯದಲ್ಲಿ ಬರುವ ಕ್ರಷಿ ರಂಗದ ಹಾಡು ಬಹಳ ಇಷ್ಟವಾಗಿತ್ತು...

"ಮರಿಯಪ್ಪ .. ಮಾಲಿಂಗೋ...."

ರೆಡಿಯೋಗಳಲ್ಲೇ ಹಾಡು ಕೇಳಿ ಹಾಡುತ್ತಿದ್ದೇವು..
ಬಬ್ರುವಾಹನದ "ಯಾರು ತಿಳಿಯರು ನಿನ್ನ.."
ಇಂದಿಗೂ ಸದಾ ಹಸಿರು...

ಕ್ರಿಕೆಟ್ ಕಾಮೆಂಟರಿ...
ಸುಶಿಲ್ ದೋಷಿ ಬಾಲಿನ ಸಂಗಡ ಓಡುತ್ತಿದ್ದುದನ್ನು ಮರೆಯಲು ಸಾಧ್ಯವೇ,,?
ನನ್ನ ಚಿಕ್ಕಪ್ಪ ಬಯಲುಕಡೆಗೆ ಹೋಗುವಾಗಲೂ ರೆಡಿಯೋ ಒಯ್ಯುತ್ತಿದ್ದ..!!

ಧನ್ಯ..ಧನ್ಯ..
ಧನ್ಯವಾದಗಳು..

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ...
ಸವಿ ಸವಿ ಬಾನುಲಿ ಬುತ್ತಿಯ ಗಂಟನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಕ್ಕೆ ಧನ್ಯವಾದ.

‘ಎಡಕಾಲು ಗೂಡದ ಮೇಲೆ’ ಅಲ್ಲಿಂದ ಪೂರ್ತಿ ಆ ಪ್ಯಾರಾ ತುಂಬ ನಕ್ಕಿದ್ದೇ ಆತು :-)
ಚೆಂದದ ಬರಹ. ಥ್ಯಾಂಕ್ಸ್.

shivu.k said...

ಚಿತ್ರಾ ಮೇಡಮ್,

ರೇಡಿಯೋ ಬಗ್ಗೆ ತುಂಬಾ ಚೆನ್ನಾದ ಮಾಹಿತಿ....ಅದರಲ್ಲೂ ಶೂ......ಕುಯ್....ಶಬ್ದದೊಂದಿಗೆ....ಸೂಪರ್...
ಓದುತ್ತಿರುವವರು ಉಪೇಂದ್ರಕುಮಾರ್ ನನಗೂ ಚೆನ್ನಾಗಿ ನೆನಪಿದೆ....ಹಾಗೆಲ್ಲಾ ರೇಡಿಯೋ ಕಾರ್ಯಕ್ರಮವೆಂದರೆ...ಸರಳ ನಿಧಾನ...ಹಿತ ಮಿತ...ಒಂದು ರೀತಿ ನಮ್ಮ ಹಳ್ಳಿ ಆಡುಗೆಯ ರುಚಿಯಂತೆ...ಅದರೆ ಈಗ ಈ ಎಪ್ ಎಮ್ ಗಳು ಹೇಗೆಂದರೆ....ಎಲ್ಲವೂ ಪಾಸ್ಟ್ ಪುಡ್....

ಅದರೂ ಈಗ ನಾನು ನಿಮ್ಮಂತೆ ಎಲ್ಲಾ ಎಫ್ ಎಮ್ ಕೇಳುತ್ತೆನೆ...ರೇಡಿಯೋ ಮಿರ್ಚಿ ನನಗಿಷ್ಟ...ಕಾರಣ...ಅವರು ನನಗೆ ಡಿವಿಡಿ ಪ್ಲೆಯರ್ ಜೊತೆಗೆ ಸುಮಾರು ಬಹುಮಾನ ಕೊಟ್ಟಿದ್ದಾರೆ...ಸುಮಾರು ಪಿ.ವಿ ಅರ್ ಸಿನಿಮಾ ಕೊಟ್ಟಿದ್ದಾರೆ...ಅವರಲ್ಲಿ ಆರ್ ಜೇ...ರಚನಾ, ಹುಡುಗಾಟದ ಹುಡುಗಿ ವರ್ಷಾ, ನಾನ್‌ಸ್ಟಾಪ್ ನವೀನ್, ಭಾಲ್ಕನಿ ಭಾದ್‌ಷಾ..ಅವಿನಾಶ್..ಖತರನಾಕ್ ಪಲ್ಲವಿ...ಡಾಕ್ಟರ್ ಲವ್ ಅಕ್ಷಯ...[ವರ್ಷಾ ಒಬ್ಬರೂ ಬಿಟ್ಟು] ಇವರೆಲ್ಲರ ಜೊತೆಯೂ ನಾನು ಮಾತಾಡಿದ್ದೇನೆ....ಅನೇಕ ಬಹುಮಾನ ಗೆದ್ದಿದ್ದೇನೆ...ಈಗಲೂ ಕೇಳುತ್ತಿರುತ್ತೇನೆ...

ಎಲ್ಲಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್...

ಚಂದ್ರಕಾಂತ ಎಸ್ said...

ಚಿತ್ರಾ

ನನ್ನನ್ನು ಚಂದ್ರಕ್ಕಾ ಎಂದಿದ್ದಕ್ಕೆ ತುಂಬಾ ಖುಷಿಯಾಯಿತು. ನಿಮ್ಮ ಈ ಲೇಖನಕ್ಕೆ ನಾನೆ ಮೊದಲು ಕಾಮೆಂಟ್ ಬರೆದದ್ದು. ಆದರೆ sent ಮಾಡುವಷ್ಟರಲ್ಲಿ ಕರೆಂಟ್ ಹೋಯಿತು. ಪರವಾಗಿಲ್ಲ. ಮತ್ತೆ ಬರೆಯುವೆ.

ನನಗೆ ನೆನಪಿರುವಂತೆ ರಂಗರಾವ್ ಎನ್ನುವವರು ವಾರ್ತೆ ಓದುತ್ತಿದ್ದರು. ಮತ್ತೊಂದು ವಿಷಯ ಹಸಿರಾಗಿರುವುದು- ನೆಹರೂ ಸತ್ತಾಗ ,ಆಗ ನಾನು ಬಹಳ ಚಿಕ್ಕವಳು, ರೇಡಿಯೋದಲ್ಲಿ ಅಂತಿಮ ಮೆರವಣಿಗೆಯ ನೇರ ಪ್ರಸಾರ ಬರುತ್ತಿತ್ತೆನಿಸುತ್ತದೆ. ಆಗ ನಮ್ಮ ಮನೆಯ ತುಂಬಾ ಜನರಿದ್ದರು. ಕೆಲವರಂತೂ ಅಳುತ್ತಿದ್ದರು. ಮತ್ತೊಮ್ದು ವಿಷಯ. ನಮ್ಮ ಮನೆಯಲ್ಲಿದ್ದುದೂ ಬುಷ್ ರೇಡಿಯೋ. ಅದರಲ್ಲಿದ್ದ ಪೊದೆಯ ಚಿತ್ರ ನೋಡಿ ನನ್ನ ತಂಗಿ ಯಾವಾಗಲೂ ‘ಕೊಡೆ’ ಎನ್ನುತ್ತಿದ್ದಳು!!

ಮನಸ್ಸಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ಬರವಣಿಗೆಗೆ ಧನ್ಯವಾದಗಳು

PARAANJAPE K.N. said...

FMಗಳು ರೇಡಿಯೋ ಸ೦ಸ್ಕ್ರತಿಯನ್ನು ಮು೦ದುವರೆಸುತ್ತಿವೆ ಹೌದು. ಆದರೆ ಹಿ೦ದೆ ಆಕಾಶವಾಣಿ ಇದ್ದಾಗಿನ ಸಹಜತೆ ಇಲ್ಲ. ಸ೦ಜೆ ಗೋಧೂಳಿ ಸಮಯದಲ್ಲಿ ಕ್ರಷಿ ರ೦ಗದ ಕಾರ್ಯಕ್ರಮ ಶುರುವಾಗುವ ವೇಳೆ ಬರುತ್ತಿದ್ದ ಹಾಡು ಈಗಲೂ ಕಿವಿಯಲ್ಲಿ ಗುಯ್ಗುಡುತ್ತಿದೆ. ಉತ್ತಮ ಬರಹ.

Umesh Balikai said...

ಚಿತ್ರ ಮೇಡಮ್,

ನಾವು ಚಿಕ್ಕವರಿದ್ದಾಗ, ಮಧ್ಯಾಹ್ನ ಶಾಲೆಯಿಂದ ಊಟಕ್ಕೆ ಬಂದಾಗ ರೇಡಿಯೋ ದಲ್ಲಿ ಮಧ್ಯಾಹ್ನ ಒಂದೂವರೆಗೆ ಬರುತ್ತಿದ್ದ ಚಿತ್ರಗೀತೆಗಳನ್ನು ಕೇಳುತ್ತಾ ಊಟ ಮಾಡುತ್ತಿದ್ದ ದಿನಗಳ ನೆನಪಾಯಿತು. ರೇಡಿಯೋ, ಅದರಲ್ಲಿ ಬರುತ್ತಿದ್ದ ನಿರ್ಮಾ, ವಿಕೊ ವಜ್ರದಂತಿ ಮುಂತಾದ ಜಾಹೀರಾತುಗಳನ್ನು ಎಂದಾದರೂ ಮರೆಯಲು ಸಾಧ್ಯವೇ? ಸವಿನೆನಪುಗಳನ್ನು ಕೆಣಕಿದ್ದಕ್ಕೆ ಧನ್ಯವಾದಗಳು.
-ಉಮೇಶ್

ಚಿತ್ರಾ said...

ತೇಜೂ, ಸುನಾಥ ಕಾಕಾ,
ಧನ್ಯವಾದಗಳು. ಅದು ಯಾವಾಗಲೂ ಹಾಗೇ ಅಲ್ಲವೆ? ಆ ದಿನಗಳ ನೆನಪುಗಳು ಎಂದೂ ಖುಶಿ ತರುತ್ತವೆ !

ಪ್ರಕಾಶಣ್ಣ,
ಥ್ಯಾಂಕ್ಸ್. ನಾವು ಸಹ ಅದೆಷ್ಟೋ ಹಾಡುಗಳನ್ನು ರೇಡಿಯೋ ಕೇಳಿಯೇ ಕಲಿತಿದ್ದೆವು. ಭಾನುವಾರ ಮಧ್ಯಾಹ್ನ ಇಡೀ ಸಿನೆಮಾ ಪ್ರಸಾರವಾಗುತ್ತಿತ್ತು. ಕೇವಲ ಸಿನೆಮಾ " ಕೇಳಿಯೇ" ಅದನ್ನು ಅನುಭವಿಸಿ ಖುಷಿ ಪಡುತ್ತಿದ್ದೆವು. ಆಗೇನಾದರೂ ಕರೆಂಟ್ ಹೋದರೆ ನಮ್ಮ ಸಿಟ್ಟು ಮುಗಿಲಿಗೇರುತ್ತಿತ್ತು !

ಶಾಂತಲಾ,
ನಿಂಗೆ ಸಿಲೋನ್ ಸ್ಟೇಶನ್ ನಲ್ಲಿ ಹಾಡು ಕೇಳಿದ್ದು ನೆನಪಿದ್ದಾ? ಅವಳ ಆ ಕನ್ನಡ ನಂಗಿನ್ನೂ ಕಿವೀಲೇ ಇದ್ದು.ಅದನ್ನು ಶಬ್ದಗಳಲ್ಲಿ ಬರೆಯದು ಕಷ್ಟಾನೇಯಾ.

ಚಿತ್ರಾ said...

ಶಿವೂ,

ನೀವಂದಿದ್ದು ನಿಜಾನೆ. ಈ ಎಫ್ ಎಂ ಗಳು ಒಂಥರಾ ಫಾಸ್ಟ್ ಫುಡ್ ಗಳೇ .ಇದರಲ್ಲಿ ಎಲ್ಲವು ಫಾಸ್ಟ್, ಹಾಡುಗಳೂ, ಆರ್ ಜೆ ಗಳು ಜಾಹೀರಾತುಗಳು ಎಲ್ಲವೂ.
ನಾನು ಕನ್ನಡ ’ ಮಿರ್ಚಿ ’ ಕೇಳಿಲ್ಲ. ಆದರೆ, ಮರಾಠೀಯಲ್ಲೂ ಅಷ್ಟೇ ಮಸಾಲೇದಾರ್ ಇದೆ.
ಅಂದಹಾಗೇ,ನೀವು ಮಿರ್ಚಿಯಲ್ಲಿ ತುಂಬಾ ಜನಪ್ರಿಯರು ಅಂತಾಯ್ತು ! ಬಹಳಾ ಬಹುಮಾನ ಗೆದ್ದಿದೀರಿ , ಅಭಿನಂದನೆಗಳು ಸಾರ್ !

ಚಿತ್ರಾ said...

ಚಂದ್ರಕ್ಕಾ,
ಥ್ಯಾಂಕ್ಸ್. ಹಾ, ರಂಗರಾವ್ ಅವರು ವಾರ್ತೆ ಓದುತ್ತಿದ್ದುದು ನನಗೂ ನೆನಪಿದೆ.
ಆಗ ಹಳ್ಳಿ ಜನರಿಗೆ ರೇಡಿಯೋನೇ ಒಂಥರಾ ಹೊರಜಗತ್ತಿನ ಕೊಂಡಿಯಂತಿತ್ತು ಅಲ್ಲವೆ?
ಬರುತ್ತಿರಿ ಹೀಗೇ.

ಪರಾಂಜಪೆಯವರೇ,
ಕಾಲಕ್ಕೆ ತಕ್ಕಂತೆ ಬದಲಾಗಿದೆ ಬಿಡಿ. ಈಗ ಎಲ್ಲವು ಕೃತ್ರಿಮವೇ ಅಲ್ಲವೆ? ಮೆಚ್ಚಿದ್ದಕ್ಕೆ ಧನ್ಯವಾದಗಳು.

ಉಮಿ,
ಅದೇ , ನಿರ್ಮಾ ಮತ್ತು ವಿಕೋ ವಜ್ರದಂತಿ ಜಾಹೀರಾತುಗಳು ಜೊತೆಗೆ ಝಂಡು ಬಾಮ್ ( ನೆನಪಿದೆಯಾ?) ಇನ್ನೂ ಇವೆ. ಆದರೆ ,ಅವು ಈಗ ಕೇವಲ ಕೇಳುವುದಲ್ಲ ಕಾಣಿಸುತ್ತವೆ ಕೂಡ ! ಅವುಗಳ ಸಂಗೀತ, ಹಾಡುಗಳು ಇನ್ನೂ ಬದಲಾಗಿಲ್ಲ !

heggere said...

ಮರೆತಿದ್ದನ್ನು ಮತ್ತೆ ನೆನಪಿಸಿದ್ದೀರಾ
ಧನ್ಯವಾದಗಳು.

Lakshmi Shashidhar Chaitanya said...

che...naanu late aagi huTTbiTTe...nanna time ge dodda radio hogi transistorgaLu bandbiTTidvu...aadre nanagU chitrageete,pradesha samaachaara keLida nenapide. nanage gottiradidda radio era bagge chennaagi tiLisiddeera ! specially about ceylon radio ! thanks:)

PARAANJAPE K.N. said...

ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ಮನಸಿಗೆ ತು೦ಬಾ ಮುದ ನೀಡಿದ ಬರಹ..... ಅಕಾಶವಾಣಿಯ ವಿಚಿತ್ರ ಟ್ಯೂನಿ೦ದ ಹಿಡಿದು, ಸ೦ಸ್ಕ್ರತ ವಾರ್ತೆ, ಕನ್ನಡ ಚಿತ್ರ ಗೀತೆಗಳು, ಇ೦ಗ್ಲೀಷ್ ವಾರ್ತೆ (ಮ೦ಗಳೂರು ಆಕಾಶವಾಣಿಯಲ್ಲಿ ಇದರ ಮಧ್ಯೆ ಕೃಷಿವಾರ್ತೆ ಬರುತ್ತದೆ), ಕೋರಿಕೆ ಕಾರ್ಯಕ್ರಮ ಎಲ್ಲವೂ ಮನದ ಬಯಲಲ್ಲಿ ಹಸಿರಾಗಿದೆ.

ರೇಡಿಯೋ ಸಿಲೋನ್ ಪ್ರಸಾರಕಿಯ ಪ್ರಸ೦ಗವು ಎ೦ದಿಲ್ಲದ೦ತೆ ನಕ್ಕು ನಗಿಸಿತು. ಬರೆಯುವಾಗಲೂ ನಗು ಉಕ್ಕುಕ್ಕಿ ಬರುತ್ತಿದೆ....

ಚ೦ದದ ಬರಹಕ್ಕೆ ತು೦ಬಾ ಥ್ಯಾ೦ಕ್ಸ್...

Girish Jamadagni said...

ಚಿತ್ರಾ ಅವರಿಗೆ ನಮಸ್ಕಾರ ( )

ಲೇಖನ ಚೆನ್ನಾಗಿದೆ. ಆ ಬಾಲ್ಯದ ದಿನಗಳು ನಮಗೆಲ್ಲ ಆಗಾಗ ನೆನಪಾಗಿ ಮುದ ನೀಡುತ್ತವೆ. ನನ್ನ ಮತ್ತು ರೇಡಿಯೊ ಜೊತೆಗಿನ ಬಂಧವನ್ನು ನನ್ನ ಬ್ಲಾಗ್‌ನಲ್ಲಿ ಸ್ವಲ್ಪ ಹಿಂದೆ ಮೆಲುಕು ಹಾಕಿದ್ದೆ. ಸಮಯವಾದಲ್ಲಿ ಭೇಟಿ ನೀಡಿ. ಹೀಗೇ ಬರೆಯುತ್ತಿರಿ. ಧನ್ಯವಾದಗಳು. ಗಿರೀಶ್ ಜಮದಗ್ನಿ

http://girishjamadagni.blogspot.com/2009/01/blog-post_20.html

Rakesh Holla said...

Tumba chennagide....

Anonymous said...

ಚಿತ್ರಾ ಅವರೇ,
ನಾನು ಚಿಕ್ಕವಳಿದ್ದಾಗ ನಮ್ಮ ಮನೆಗೆ ಆಗಲೇ ಟಿ.ವಿ. ಬಂದಿತ್ತು.
ಆದರೆ ಈಗ ಬೆಂಗಳೂರಲ್ಲಿ ಟಿ.ವಿ. ಇಲ್ಲ. ಯಾವುದೋ ಎಫ್.ಎಂ. ಚಾನೆಲ್ ಕೇಳುವ ಬದಲು ವಿವಿಧ ಭಾರತಿ ಕೇಳುತ್ತಿರುತ್ತೇನೆ. ಇದರಲ್ಲಿ ಅರ್.ಜೆ.ಗಳ ಅಬ್ಬರ ಇರುವುದಿಲ್ಲ.
ಹಳೆಯ ಸುಂದರ ಹಾಡುಗಳನ್ನು ಹಾಕುತ್ತಿರುತ್ತಾರೆ :-)
ಲೇಖನ ಚೆನ್ನಾಗಿದೆ.

ಚಿತ್ರಾ said...

ಹೆಗ್ಗೆರೆಯವರೇ,
ಧನ್ಯವಾದಗಳು. ಹೀಗೇ ಬರುತ್ತಿರಿ.

ಪರಾಂಜಪೆಯವರೇ,
ಧನ್ಯವಾದಗಳು. ಕಾರಣಾಂತರಗಳಿಂದ ತಡವಾಗುತ್ತಿದೆ. ಕ್ಷಮಿಸಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

ಸುಧೇಶ್,
ಥ್ಯಾಂಕ್ಸ್ . ಕೆಲವು ನೆನಪುಗಳು ಮನದಲ್ಲಿ ಅಚ್ಚೊತ್ತಿಕೊಂಡಿರುತ್ತವೆ ಅಲ್ಲವೆ? ನೆನಪಾದಾಗೆಲ್ಲ ಖುಷಿ ತರುತ್ತವೆ.

ಚಿತ್ರಾ said...

ಗಿರೀಶ್,
ಭೇಟಿಯಿತ್ತು ಅಭಿಪ್ರಾಯ ದಾಖಲಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗಿಗೂ ಬರುತ್ತೇನೆ.

ರಾಕೇಶ್,
ಥ್ಯಾಂಕ್ಸ್

ಜ್ಯೋತಿ,
ಚಿಕ್ಕವಳಿದ್ದಾಗಿಂದ ಟಿವಿ ನೋಡಿ ಈಗ ಇಲ್ಲವೆಂದು ಬೇಸರ ಇಲ್ಲವೆ? ಗಲಾಟೆ, ಅಬ್ಬರ ಇಷ್ಟವಾಗದವರಿಗೆ ವಿವಿಧಭಾರತಿ ವರವಿದ್ದಂತೆ.ಹಳೆಯ ಹಾಡು ಪ್ರಿಯರಿಗಂತೂ ಬಹು ಮೆಚ್ಚಿನದು ಅಲ್ಲವೆ? ಬರುತ್ತಿರಿ ಹೀಗೆ.

ಚಿತ್ರಾ said...

ಲಕ್ಷ್ಮೀ,

ಟ್ರಾನ್ಸಿಸ್ಟರ್ ಗಳು ಸುಖ ಕಣ್ರೀ. ಬೇಕಾದಲ್ಲಿಗೆ ತೊಗೊಂಡು ಹೋಗ್ಬಹುದು. ಈಗಂತು ಪಾಕೆಟ್ ನಲ್ಲೇ ಇಟ್ಟುಕೊಂಡು ಓಡಾಡೋ ಅಷ್ಟು ಚಿಕ್ಕ ರೇಡಿಯೋಗಳೇ ಇವೆಯಲ್ಲ. ಆ ದೊಡ್ಡ ರೇಡಿಯೋನ ಜೋಪಾನ ಮಾಡಿಕೊಳ್ಳೋದೇ ದೊಡ್ಡ ಕಷ್ಟ ಆಗಿತ್ತು ಗೊತ್ತ?

Anonymous said...

ನಮಸ್ತೆ,

http://yuvakavi.ning.com : ಇದು ಕನ್ನಡದ ಯುವ ಕವಿಗಳ ತಾಣ. ಕವಿಗಳು ಕವಿತೆಗಳನ್ನು ಪ್ರಕಟಿಸಲು, ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿ ಅವಕಾಶ. ನಮ್ಮೊಡನೆ ಸೇರಿ...

ವಂದನೆಗಳೊಂದಿಗೆ,
ರಾಘವೇಂದ್ರ ಮಹಾಬಲೇಶ್ವರ

* ನಮನ * said...

http://thatskannada.oneindia.in/column/vichitranna/2004/141204newsreader.html
ನಾನು ನಿಮ್ ಬ್ಲಾಗ್ನ ಹೊಸ ಓದುಗ.ನಾನು ದಿನಾಲೂ ಮರೆಯದೆ ಮಡಿಕೇರಿ,ಮಂಗಳೂರು ಆಕಾಶವಾಣಿ ಕೇಳ್ತೇನೆ,ಒಮ್ಮೊಮ್ಮೆ ರೈನ್ಬೌ ಬೆಂಗಳೂರು ಕೇಳ್ತೇನೆ.ನಮನ ಗಣೇಶ್ ಕಾರ್ಕಳ ಬಜಗೋಳಿ http://thatskannada.oneindia.in/column/vichitranna/2005/240505bajagoli.html

Pramod said...

ಅದ್ಭುತ ಲೇಖನ. ಸ್ವಲ್ಪ ಲೇಟ್ ಆಗಿ ನೋಡ್ದೆ. ನನ್ನ ಶಾಲೆಯ ದಿನಗಳು ನೆನಪಾದವು. 'ಸಿಲೋನ್' ಬರುತ್ತಿದ್ದುದು 1:30ಗೆ. ಅದು ಶನಿವಾರ ಹಾಗೂ ಭಾನುವಾರ ಮಾತ್ರ ಕೇಳಿಸುತ್ತಿದುದು.( ಶಾಲೆಯ ರಜಾ ದಿನಗಳು ಅಷ್ಟೇ).