July 28, 2009

ಮರೆಯಲಾಗದ ದಿನ -ಭಾಗ ೨

ಅರುಯುವುದು ವ್ಯವಸ್ಥೆಯ ಬಗ್ಗೆ ನಮಗೆ ಯೋಚನೆಯಿರಲಿಲ್ಲ. ನಮ್ಮ ಮನೆಯಿಂದ ಸುಮಾರು ೪ ಕಿ. ಮೀ. ದೂರದಲ್ಲಿ ಮಹೇಶ್ ರ ಚಿಕ್ಕಪ್ಪನ ಸುಸಜ್ಜಿತ ಬಂಗಲೆಖಾಲಿ ಇತ್ತು. ಅದರ ಕೀಲಿಕೈ ಸಹ ನಮ್ಮಲ್ಲಿತ್ತು. ಆದರೆ ,ಇಲ್ಲಿಂದ ದಾಟಿಹೋಗುವುದೇ ದೊಡ್ಡ ಪ್ರಶ್ನೆಯಾಗಿತ್ತು. ಮಳೆಯೇನೋ ಸ್ವಲ್ಪ ಕಡಿಮೆಯಾಗಿದ್ದರೂ , ನದಿಯ ನೀರು ಇಳಿದಿರಲಿಲ್ಲ ! ಅದೇ ಹೊತ್ತಿನಲ್ಲಿ , ಡ್ಯಾಮ್ ನಿಂದ ಇನ್ನೂ ಹೆಚ್ಚು ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂಬ ಸುದ್ದಿ ಬಂತು. ಹಾಗೇನಾದರೂ ಆದರೆ ಸ್ಥಿತಿ ಇನ್ನೂ ಬಿಗಡಾಯಿಸ ಬಹುದೆಂದು ನಾವು ಅಲ್ಲಿಂದ ಹೇಗಾದರೂ ದಾಟುವ ನಿರ್ಧಾರ ಮಾಡಿದೆವು.

ನಮ್ಮ ಬಿಲ್ಡಿಂಗ್ ನ ಉಳಿದ ಸದಸ್ಯರು ಆ ಬಗ್ಗೆ ಕಾಳಜಿ ವ್ಯಕ್ತಪಡಿಸಿದರೂ ನಮ್ಮ ನಿರ್ಧಾರ ಗಟ್ಟಿಯಾಗಿತ್ತು. ಸೂಟ್ ಕೇಸ್ ಒಂದರಲ್ಲಿ ತಕ್ಷಣಕ್ಕೆ ಬೇಕಾಗುವ ಬಟ್ಟೆಬರೆಗಳನ್ನು ತುಂಬಿಕೊಂಡು, ಸಿರಿಯ ಶಾಲಾಪುಸ್ತಕಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ,ಉಳಿದೆಲ್ಲವನ್ನೂ ಸುಜಾತಾ ಹಾಗೂ ಕಲ್ಪನಾರ ಮನೆಯಲ್ಲಿ ಬಿಟ್ಟು ಕೆಳಗಿಳಿದೆವು. ಕಡೆಯ ಮೆಟ್ಟಿಲು ಇಳಿಯುತ್ತಿದ್ದಂತೆ ನೀರು ಸೊಂಟಕ್ಕಿಂತ ಮೇಲಿತ್ತು. ಜಯಾ ಅಂತೂ ಹೆದರಿ ಬಿಳುಚಿಕೊಂಡಿದ್ದಳು. ನೀರಿನಲ್ಲಿಕಾಲಿಡುವಾಗ ಭಯವೆನಿಸಿದರೂ ಒಮ್ಮೆ ದೇವರನ್ನು ನೆನೆದು ಹೆಜ್ಜೆ ಮುಂದಿಟ್ಟೆವು.

ನಮ್ಮ ಪಕ್ಕದ ಹೌಸಿಂಗ್ ಸೊಸೈಟಿ

ಗೇಟ್ ದಾಟಿ ರಸ್ತೆಗೆ ಕಾಲಿಟ್ಟರೆ ಎದೆಯೆತ್ತರಕ್ಕೆ ನೀರು ! ಸೆಳೆತ ಬೇರೆ ! ಸುತ್ತ ಮುತ್ತಲಿನ ಬಿಲ್ಡಿಂಗ್ ಗಳ ಗಂಡಸರು , ಯುವಕರು ಮಾನವ ಸರಪಳಿ ಮಾಡಿಕೊಂಡು, ದಾಟಿ ಹೋಗಬಯಸುವವರಿಗೆ ಸಹಾಯ ಮಾಡುತ್ತಿದ್ದರು. ಸುರಿಯುತ್ತಿರುವ ಮಳೆಯಲ್ಲಿ, ಅಕ್ಷರಶಃ ತಲೆಯಮೇಲೆ ಸೂಟ್ ಕೇಸ್ , ಚೀಲಗಳನ್ನು ಹೊತ್ತು ಎದೆಯೆತ್ತರದ ನೀರಿನಲ್ಲಿ ನಡೆಯುವಾಗ ಎಷ್ಟೋ ಸಿನೆಮಾಗಳಲ್ಲಿ ನೋಡಿದ್ದ ಇಂಥದೇ ದೃಶ್ಯಗಳು ನೆನಪಾದವು.ಆ ವರೆಗೆ ಕೇವಲ ನೋಡಿ ಗೊತ್ತಿದ್ದ ದೃಶ್ಯಗಳನ್ನು ಈಗ ನಾವು ಸ್ವತ: ಅನುಭವಿಸುತ್ತಿದ್ದೆವು. ಕಣ್ಣೀರು ಸುರಿಯುತ್ತಿರಲಿಲ್ಲ ಈಗಾಗಲೇ ಉಕ್ಕಿಹರಿಯುತ್ತಿರುವ ನೀರಿಗೆ ಆ ನಾಲ್ಕು ಹನಿಗಳು ಸೇರಿಕೊಳ್ಳುವುದು ಬೇಡವಾಗಿತ್ತು !


ನೀರಿನ ಮಟ್ಟ ಅಳೆಯುತ್ತಿರುವ ನಮ್ಮ ಬಿಲ್ಡಿಂಗಿನ ಸದಸ್ಯರು !!

ಸಿರಿ ,ಅಂದೂಶಾಲೆಗೆ ಹೋಗಿದ್ದೂ ಸಹ ಒಂದು ರೀತಿಯಿಂದ ಅನುಕೂಲವೇ ಆಗಿತ್ತು. ಇಲ್ಲವಾದರೆ , ಅವಳನ್ನು ಎತ್ತಿಕೊಂಡು ನೀರಿನಲ್ಲಿ ನಡೆಯುವುದು ನಮಗೆ ಸಾಧ್ಯವಿರಲಿಲ್ಲ . ಅವಳು ಅಷ್ಟೊಂದು ಸಣ್ಣವಳಲ್ಲ ! ಹಾಗೆಂದು ಅವಳೇ ಆ ನೀರಿನಲ್ಲಿ ನಡೆದುಕೊಂಡು ದಾಟುವುದಂತೂ ಅಸಾಧ್ಯವೇ ಆಗಿತ್ತು. ಅಂತೂ ನೀರಿನಿಂದಾಚೆ ಬಂದು ಕಾರ್ ಹತ್ತಿ ಚಿಕ್ಕಪ್ಪನ ಮನೆಗೆ ಬಂದೆವು. ಬೀಗ ತೆಗೆದು ಬ್ಯಾಗ್ ಗಳನ್ನು ಕೆಳಗಿಟ್ಟು ಕುಸಿದು ಕುಳಿತವಳಿಗೆ ಆಗ ಮಾತ್ರ ದುಃಖ ಉಕ್ಕಿಬಂತು.ನಾವಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತುಬಿಟ್ಟೆವು. ಇಂಥ ಮನೋಸ್ಥಿತಿಯಲ್ಲಿ ಮಹೇಶ್ ಹೇಗೆ ಡ್ರೈವ್ ಮಾಡಿದರೋ ತಿಳಿಯದು.

ಬಂಗಲೆಯೆನೋ ಸುಸಜ್ಜಿತವಾಗಿತ್ತು. ಹಾಸಿಗೆ ಬಟ್ಟೆಗಳಿಂದ ಹಿಡಿದು ಗ್ಯಾಸ್ ಒಲೆಯವರೆಗೂ ಇದ್ದುದರಿಂದ ಸದ್ಯಕ್ಕಂತೂ ತೊಂದರೆ ಇರಲಿಲ್ಲ. ರಾತ್ರಿ ಮಲಗುವಾಗ ಸಿರಿ ಕೇಳಿದಳು " ಅಮ್ಮ , ಎಷ್ಟು ಬ್ಯಾಡಲಕ್ ಅಲ್ವಾ? ನಮಗೇ ಏಕೆ ಹೀಗಾಯ್ತು ಅಮ್ಮ ? " ಅವಳ ಪ್ರಶ್ನೆ ನನ್ನನ್ನು ಯೋಚಿಸುವಂತೆ ಮಾಡಿತು . ಹಾಗೆ ನೋಡಿದರೆ , ನಾವೆಷ್ಟೋ ಅದೃಷ್ಟವಂತರು. ಈ ಹೊತ್ತು ರಾತ್ರಿ ಬೆಚ್ಚಗೆ ಮಲಗಲು ಒಂದು ಮನೆಯಿದೆ. ಪ್ರವಾಹ ಇಳಿದು ನಮ್ಮ ಮನೆ ಮತ್ತೊಮ್ಮೆ ಮೊದಲಿನ ಸ್ವರೂಪಕ್ಕೆ , ಅಂದರೆ ಉಳಿದುಕೊಳ್ಳುವ ಮಟ್ಟಕ್ಕೆ ಬರುವವರೆಗೂ ನಾವಿಲ್ಲಿ ಯಾವ ಯೋಚನೆಯೂ ಇಲ್ಲದೇ ಇರಬಹುದು. ಆದರೆ ಅದೆಷ್ಟು ನತದೃಷ್ಟ ಜನರಿಲ್ಲ? ಈ ಮಳೆಯಲ್ಲಿ ರಾತ್ರಿಯನ್ನು ಹೇಗೋ ಸ್ನೇಹಿತರು, ಬಂಧುಗಳ ಮನೆಯಲ್ಲಿ ಕಳೆದರೂ ಬೆಳಗಾದ ಮೇಲೆ ಎಲ್ಲಿಹೋಗುವುದು ? ಮುಂದೇನು ಎಂಬ ದೊಡ್ಡ ಪ್ರಶ್ನೆ ಅವರ ಮುಂದೆ ! ಇದನ್ನೇ ಮಗಳಿಗೆ ತಿಳಿಸಿ ಹೇಳಿದೆ. " ಹೌದಲ್ಲ ಅಮ್ಮಾ, ಇದು ನನ್ನ ತಲೆಯಲ್ಲಿ ಬಂದೇ ಇರಲಿಲ್ಲ. ನಾವು ಒಂದು ಕೆಲಸ ಮಾಡೋಣ ನಮ್ಮ ಪರಿಚಯದವರು ಯಾರದಾದರೂ ಮನೆಯಲ್ಲಿ ನೀರು ಬಂದಿದ್ದರೆ , ಅವರನ್ನು ಇಲ್ಲೆ ಬನ್ನಿ ಎಂದು ಕರೆಯೋಣ ಅಲ್ಲ ಅಮ್ಮ ? " ಎಂದಾಗ ಅವಳ ಬಗ್ಗೆ ಹೆಮ್ಮೆ ಮೂಡಿ ಅಪ್ಪಿಕೊಂಡೆ.

ರಾತ್ರಿ ಬೆಚ್ಚಗೆ ಹೊದ್ದು ಮಲಗಿದರೂ ನಿದ್ದೆ ಬಾರದು . ತಲೆಯಲ್ಲಿ ನೂರಾರು ಯೋಚನೆಗಳು. ನೀರಿನ ಮಟ್ಟ ಹೇಗಿರಬಹುದು? ನನ್ನ ಬುಕ್ ಶೆಲ್ಫ್ ವರೆಗೂ ನೀರು ಬಂದಿರಬಹುದೇ? ಆ ಬಿಲ್ಡಿಂಗಿನ ಉಳಿದ ಮನೆಯವರು ಹೇಗಿರಬಹುದು? ವಯಸ್ಸಾದವರು,ಪುಟ್ಟ ಮಕ್ಕಳು ಇರುವ ಕುಟುಂಬಗಳು. ಕರೆಂಟ್ ಇಲ್ಲದ ಕತ್ತಲ ರಾತ್ರಿಯಲ್ಲಿ , ಸುರಿಯುವ ಮಳೆ , ಅಬ್ಬರಿಸುತ್ತಿರುವ ಪ್ರವಾಹ ಎಷ್ಟು ಭೀತಿ ತರುತ್ತದೆ ಎನ್ನುವುದು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. ನೀರಿಗೇನು ಮಾಡಬಹುದು? ಒಂಥರಾ " water water every where, not a drop to drink " ಎಂಬಂಥಾ ಪರಿಸ್ಥಿತಿ ! ಮುನ್ಸೂಚನೆ ಇಲ್ಲದೇ ನಡೆದ ಘಟನೆಯಾಗಿದ್ದರಿಂದ ಯಾರೂ ಅಷ್ಟಾಗಿ ನೀರನ್ನು ತುಂಬಿಸಿಟ್ಟುಕೊಂಡಿರಲಿಲ್ಲ . ಬೇರೆ ಎಲ್ಲ ಹೋಗಲಿ, ಕಡೇ ಪಕ್ಷ ಕುಡಿಯುವ ನೀರಿಗೇನು ಮಾಡ ಬಹುದು ? ಎಂಬ ಚಿಂತೆ ಕಾಡುತ್ತಿತ್ತು. ನನ್ನ ಕಳವಳವನ್ನು ಮಹೇಶ್ ಜೊತೆ ಹಂಚಿಕೊಂಡೆ. " ಯೋಚನೆ ಮಾಡಬೇಡ ,ಬೆಳಿಗ್ಗೆ ಅಲ್ಲಿಗೆ ಕುಡಿಯುವ ನೀರಿನ ದೊಡ್ಡ ಕ್ಯಾನ್ ಕಳಿಸುವ ವ್ಯವಸ್ಥೆ ಮಾಡ್ತೀನಿ " ಎಂದ ಅವರ ನುಡಿಗಳು ಸ್ವಲ್ಪ ಸಮಾಧಾನ ತಂದು ನಿದ್ರಿಸುವ ಪ್ರಯತ್ನ ಮಾಡಿದೆ .

( ಮುಂದುವರಿಯುವುದು )

10 comments:

ಸುಧೇಶ್ ಶೆಟ್ಟಿ said...

ಪ್ರವಾಹದ ಭಯಾನಕ ಸನ್ನಿವೇಶಗಳನ್ನು ಓದುತ್ತಿದ್ದರೆ ನೀವು ಅದನ್ನೆಲ್ಲಾ ಹೇಗೆ ನಿಭಾಯಿಸಿದಿರಿ ಅ೦ತ ಆಶ್ಚರ್ಯ ಆಗುತ್ತದೆ... ಸೂರಿಲ್ಲದವರ ಪರಿಸ್ಥಿತಿ ಹೇಗೋ...

Guruprasad said...

ತುಂಬ ಚೆನ್ನಾಗಿ ಇದೆ ಒಳ್ಳೆ ರೋಚಕ ಅನುಭವ......ಮುಂದುವರಿಲಿ.......

shivu.k said...

ಚಿತ್ರಾ ಮೇಡಮ್,

ನೀವು ಅನುಭವಿಸಿದ ಸನ್ನಿವೇಶಗಳನ್ನು ಓದುತ್ತಿದ್ದರೇ ಮೈ ಜುಮ್ಮೆನಿಸುತ್ತಿದೆ. ಪರಿಸ್ಥಿತಿ ಕೈಮೀರಿದಾಗ ಎಂಥವರಿಗೂ ಅದನ್ನು ನಿಭಾಯಿಸುವ ಶಕ್ತಿ ಅದೆಲ್ಲಿಂದ ಬರುತ್ತದೋ....ಅದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಬೇಕು..

ಮುಂದೇನಾಯಿತು....

sunaath said...

ಚಿತ್ರಾ,
This is a nightmare!
ಎದೆಯತ್ತರದ ಪ್ರವಾಹವನ್ನು ದಾಟಿಕೊಂಡು ನೀವು ಬೇರೊಂದು ಮನೆಯ ಕಡೆ ಹೋಗಿದ್ದು ಬಹಳ ಧೈರ್ಯದ ಮಾತು. ಇಷ್ಟೆಲ್ಲದರ ನಡುವೆ ಮಹೇಶ ತೋರಿಸಿದ cool courage
ಹಾಗು ಸಿರಿಯ ಅನುಕಂಪ ಮನೋಭಾವ ಮೆಚ್ಚುವಂತಹದು.

Shweta said...

ಚಿತ್ರಾ.
ಓಹ್ ಗಾಡ್ .....!
ನಿಮ್ಮ ಅನುಭವ ಓಹ್ ಹೇಳಲು ಆಗದು . ....ಪರೀಸ್ಥಿತಿ ಎಲ್ಲವನ್ನು ನಿಭಾಯಿಸಲು ಕಲಿಸುವುದಲ್ಲವೇ?
ಏನು ಹೇಳುವದೆಂದೆ ತಿಳಿಯುತ್ತಿಲ್ಲ...ಈಗ ಎಲ್ಲ ತಿಳಿಯಾಗಿದೆಯೇ?

LAxman said...

tumba chennagi bretira. ide modalsal nimma blogige bandiddu.

keep it up
laxman

ಚಿತ್ರಾ said...

ಸುಧೇಶ್,
ನಿಜ, ಉಳಿಯಲೊಂದು ಜಾಗವಿದ್ದ ನಾವು ಅದೆಷ್ಟೋ ಅದೃಷ್ಟವಂತರು ! ಸುರಿಯುವ ಮಳೆಯಲ್ಲಿ ಮಕ್ಕಳು , ಮುದುಕರನ್ನು ಕಟ್ಟಿಕೊಂಡು ರಾತ್ರಿ ಕಳೆಯಲು ಜಾಗ ಹುಡುಕಬೇಕಾದ ಅದೆಷ್ಟೋ ಕುಟುಂಬಗಳನ್ನು ನೆನದಾಗ ಕಣ್ಣೀರು ಉಕ್ಕಿಬರುತ್ತದೆ !

ಚಿತ್ರಾ said...

ಗುರು,
ಧನ್ಯವಾದಗಳು.

ಶ್ವೇತಾ,
ಧನ್ಯವಾದಗಳು. ಈಗ ಎಲ್ಲವು ಸರಿಯಾಗಿದೆ. ಹೊಸಮನೆ ಆಕಾಶದಲ್ಲಿರುವುದರಿಂದ ಪ್ರವಾಹ ಭೀತಿ ಇಲ್ಲ !!!

ಚಿತ್ರಾ said...

ಕಾಕಾ,
ನಿಜ . ನೀವಂದಂತೆ , ಅದೊಂದು ದುಃಸ್ವಪ್ನವೇ . ಆದರೆ , ಸಿರಿಗೊಸ್ಕರವಾಗಿ ಬೇರೆ ಮನೆಯತ್ತ ಹೋಗುವುದು ಅನಿವಾರ್ಯವಾಗಿತ್ತು. ನಾವು ಇಲ್ಲೆ ಉಳಿದು ಅವಳು ನಮ್ಮ ಬಗ್ಗೆ ಕಾಳಜಿ ಮಾಡಿಕೊಳ್ಳುವುದು ಬೇಡವಾಗಿತ್ತು. ಮಹೇಶ್ ರ ಧೈರ್ಯದ ಜೊತೆಯಿಲ್ಲದಿದ್ದರೆ , ಏನು ಮಾಡಲೂ ಆಗುತ್ತಿರಲಿಲ್ಲವೇನೋ !

ಚಿತ್ರಾ said...

ಲಕ್ಷ್ಮಣ್,
ನನ್ನ ಬ್ಲಾಗಿಗೆ ಸ್ವಾಗತ ! ಮೆಚ್ಚುಗೆಗೆ ಧನ್ಯವಾದಗಳು. ಬರುತ್ತಿರಿ .