ಬಲು ಮಾತುಗಾತಿ . ಅಷ್ಟೇ ಅಲ್ಲಾ , ಪ್ರತಿಭಾವಂತೆ ! ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಒಂದು ಬಹುಮಾನ ಹಿಡಿದೇ ಮರಳಿ ಬರುವ ಹುಡುಗಿ ! ಛದ್ಮ ವೇಷ , ಏಕಪಾತ್ರಾಭಿನಯ, ಹಾಡು , ನೃತ್ಯ ಎಲ್ಲದರಲ್ಲೂ ಎತ್ತಿದ ಕೈ ಅವಳದು. ಒಮ್ಮೆಯಂತೂ ಸುಮಾರು ೨೦ ನಿಮಿಷಗಳ ಕಾಲ ಅಭಿನಯ ಸಹಿತ ' ಹರಿ ಕೀರ್ತನೆ ' ಮಾಡಿ ಎಲ್ಲರನ್ನೂ ದಂಗು ಬಡಿಸಿದ್ದಳು .
ಕಳೆದ ವರ್ಷ ನಮ್ಮ ಬಿಲ್ಡಿಂಗ್ ನ ಕಾರ್ಯಕ್ರಮದಲ್ಲಿ ಆಕೆ ಅಭಿನಯಿಸಿದ ಒಂದು ತುಣುಕನ್ನು ಕನ್ನಡೀಕರಿಸಿ ಇಲ್ಲಿಟ್ಟಿದ್ದೇನೆ.
----------------------------------------------------------------------------------------
" ಅಯ್ಯೋ ಏನು ಹೇಳೋದು ನಿಮಗೆ ? ನನ್ನ ಅಮ್ಮಂಗೆ ನಾನು ಏನು ಮಾಡಿದರೂ, ಏನು ಹೇಳಿದ್ರೂ ತಪ್ಪೇ ! ಒಂದು ಚಿಕ್ಕ ವಿಷಯ ಹೇಳ್ತೀನಿ ಕೇಳಿ ..
ಮೊನ್ನೆ ನನ್ನ ೫ನೇ ಹುಟ್ಟು ಹಬ್ಬ ಮಾಡಿದ್ಲು. ಇಷ್ಟು ವರ್ಷ ಮಾಡ್ಲಿಲ್ಲ ಅದ್ಸಕ್ಕೆ ಈ ಸಲ ಗ್ರಾಂಡ್ ಆಗಿ ಮಾಡೋಣ ಅಂತ ತುಂಬಾ ಜನರಿಗೆ ಕರದು, ಹಾಲ್ ಬುಕ್ ಮಾಡಿ , ತಯಾರಿ ಮಾಡಿದ್ರು.
ಅಲ್ಲಾ , ಹುಟ್ಟು ಹಬ್ಬ ನಂದು , ಡೆಕೊರೇಶನ್ ಹೇಗೆ ಮಾಡೋಣ , ನಿಂಗೆ ಏನು ಇಷ್ಟ ಅಂತ ನನ್ನ ಒಂದು ಮಾತು ಕೇಳಬಾರದಾ? ಊಹೂಂ , ನನ್ನ ಏನೂ ಕೇಳ್ದೆ ತಾವೇ ಎಲ್ಲ ಮಾಡಿದ್ರು ನನ್ನ ಅಪ್ಪ ಅಮ್ಮ !
ನಾನು ಯಾವಾಗ್ಲಾದ್ರೂ ಇವರ ಹುಟ್ಟುಹಬ್ಬಕ್ಕೆ ಆ ತರ ಮಾಡಿದ್ರೆ ಸುಮ್ನೆ ಇರ್ತಾರಾ? ಇದನ್ನೇ ನಾನು ಅಮ್ಮನತ್ರ ಕೇಳಿದ್ದಕ್ಕೆ .. ' ಅಧಿಕ ಪ್ರಸಂಗಿ ' ಅಂತ ಬಯ್ದೇ ಬಿಟ್ಲು ! ನೀವೇ ಹೇಳಿ , ನಂದೇನಾದ್ರೂ ತಪ್ಪಿದ್ಯಾ ಇದ್ರಲ್ಲಿ ?
ಸರಿ , ಅವ್ರ ಇಷ್ಟದ್ದೆ ಫ್ರಾಕ್ ಹಾಕ್ಕೊಂಡು , ಅವ್ಳು ಕಟ್ಟಿದ ತರ ಜುಟ್ಟು ಕಟ್ಟಿಸ್ಕೊಂಡು ಹಾಲ್ ನ ಬಾಗಲಲ್ಲಿ ನಿಂತಿದ್ದಾಯ್ತು. ೬.೩೦ ಗೆ ಅಂತ ಎಲ್ಲರಿಗು ಹೇಳಿದ್ವಿ . ೭ ಆಗ್ತಾ ಬಂದರೂ ಯಾರದು ಪತ್ತೇನೆ ಇಲ್ಲ ! ನನಗಂತೂ ಟೆನ್ಶನ್ . ಮತ್ತೇನೂ ಇಲ್ಲ, ಯಾರೂ ಬರ್ಲಿಲ್ಲ ಅಂದ್ರೆ ಗಿಫ್ಟ್ ಹೇಗೆ ಸಿಗತ್ತೆ ಅಲ್ವ? ಅದನ್ನೇ ಅಮ್ಮಂಗೆ ಹೇಳಿದ್ದಕ್ಕೆ , " ನಿನಗೊಂದು ಗಿಫ್ಟ್ ಚಿಂತೆ ' ಅಂತ ಅಂದ್ಲು ! ನೀವೇ ಹೇಳಿ , ನಂಗೆ ಹಾಗನಿಸೋದು ತಪ್ಪಾ?
ಅಂತೂ ಇಂತೂ ೭.೩೦ ಹೊತ್ತಿಗೆ ಜನ ಸೇರೋಕೆ ಶುರುವಾದ್ರು .ಸ್ವಲ್ಪ ಹೊತ್ತಿಗೆ ನನ್ನ ಅತ್ತೆ ಬಂದಳು ! ಕೈಯಲ್ಲಿ ದೊಡ್ಡದೊಂದು ಗಿಫ್ಟ್ ! ನನಗಂತೂ ಅದನ್ನ ನೋಡಿ ಖುಶಿನೋ ಖುಷಿ ! ಅತ್ತೆಗೆ ನಾನು ಅಂದ್ರೆ ತುಂಬಾ ಪ್ರೀತಿ. ಬರೋವಾಗೆಲ್ಲ ಚಾಕೊಲೆಟ್ ತರ್ತಾಳೆ . ಅಮ್ಮ ಬೇಡ ಅಂದ್ರೆ , ಇರ್ಲಿ ಬಿಡು ಅಪರೂಪಕ್ಕೆ ತಿಂದರೆ ಏನೂ ಆಗಲ್ಲ ಅಂತ ಸುಮ್ನೆ ಇರ್ಸ್ತಾಳೆ .
ಈಗ ಅಮ್ಮ ಅಂತು ಅತ್ತೆಗೆ " ಅಯ್ಯೊಇಷ್ಟು ದೊಡ್ಡದೆಲ್ಲ ಯಾಕೆ ತಂದೆ ? " ಅಂತ ೫-೬ ಸಲ ಹೇಳ್ತಾ ಇದ್ರೆ ... ನಂಗೆ ಮತ್ತೆ ಟೆನ್ಶನ್ ! ಏನಾದ್ರೂ , ಅತ್ತೆ, ಅಮ್ಮನ ಮಾತು ಕೇಳಿ ತಂದಿರೋದನ್ನ ವಾಪಸ್ ತೊಗೊಂಡು ಹೋದ್ರೆ ಅಂತ ! ಮೊದ್ಲು , ಅತ್ತೆ ಕೈಯಿಂದ ಗಿಫ್ಟ್ ತೊಗೊಂಡೆ ' ಇರ್ಲಿ ಬಿಡಮ್ಮಾ, ಅತ್ತೆ ಅಷ್ಟು ಪ್ರೀತಿಯಿಂದ ತಂದಿದಾಳೆ ನಂಗೆ .. .. ಈಗೇನು , ನಾವು ಅತ್ತೆಗೆ ಬರೀ ಸ್ನಾಕ್ಸ್ ಕೊಡ್ತೀವ? ಫುಲ್ ಊಟಾನೇ ಇಟ್ಟಿಲ್ವ ಇವತ್ತು ? " ಅಂದೆ . ಅಮ್ಮ ನಂಗೆ ಕಣ್ಣು ಬಿಟ್ಟಿದ್ದು ನೋಡಬೇಕಿತ್ತು ನೀವು ! ಅಲ್ಲಾ , ನೀವೇ ಹೇಳಿ, ನಾನೇನಾದ್ರೂ ತಪ್ಪಾಗಿ ಹೇಳಿದ್ನಾ?
ನನ್ನ ಕ್ಲೋಸ್ ಫ್ರೆಂಡ್ ಡಾಲಿ ಮತ್ತೆ ಅವಳಮ್ಮ ಬಂದ್ರು. ಪಿಂಕ್ ಕಲರ್ ಚಂದ ಪ್ಯಾಕ್ ಕೊಟ್ರು . ಅವರನ್ನ ನಾನು ಕೇಳೆ ಬಿಟ್ಟೆ , ಏನು ಕೊಟ್ಟಿದೀರಾ " ಅಂತ ! ಆಂಟಿ ನಗ್ತಾ ಹೇಳಿದ್ರು , " ನಿನಗಿಷ್ಟ ಆಗೋದೇ ಕೊಟ್ಟಿದಾಳೆ ಬಿಡು ಡಾಲಿ " ಅಂತ .
ಅಮ್ಮ , ನಂಗೆ " ಹಾಗೆಲ್ಲಾ ಕೇಳ್ತಾರೆನೆ ? " ಅಂತ ಬಯ್ದ್ಲು . ಅಲ್ಲಾ , ನನ್ನ ಫ್ರೆಂಡ್ ನಂಗೆ ಏನು ಕೊಟ್ಳು ಅಂತ ನಾನು ಕೇಳಿದ್ರೆ ಸುಮ್ನೆ ಯಾಕೆ ಬೈಬೇಕು ಹೇಳಿ ?
ನನಗೋ ಅಲ್ಲೇ ಎಲ್ಲ ಗಿಫ್ಟ್ ಬಿಚ್ಚಿ ನೋಡ್ಬೇಕು ಅಂತ , ಆದ್ರೆ ಅಮ್ಮ ಹಾಗೆಲ್ಲಾ ಗಡಿಬಿಡಿ ಮಾಡಬಾರದು ಕಣೆ , ಮನೆಗೆ ಹೋದಮೇಲೆ ನೋಡೋದು ಅಂತ ಹೇಳಿ ಬಿಟಿದಾಳೆ . ಯಾವಾಗಲು ನನ್ನ ಮಾತೇ ಕೇಳೋ ಅಪ್ಪ ಬೇರೆ ಇವತ್ತು ಅಮ್ಮ ಹೇಳಿದಂಗೆ ಹೇಳ್ತಾರೆ. ಇಷ್ಟುಜನ ಇದಾರಲ್ಲ ಅಂತ ಇರಬಹುದು !
ಅಬ್ಬಾ, ಅಂತೂ ಮನೆ ಮುಟ್ತಿದ್ದಾಯ್ತು ! ಈಗ ಮಾತ್ರ ಯಾರು ಏನೇ ಅಂದ್ರು ನಾನು ಕೇಳಲ್ಲ ! ಜಗುಲಿ ಮೇಲೆ ಗಿಫ್ತ್ಸ್ ಹರಡಿಕೊಂಡು ಕುಳಿತೆ. ನಂಜೊತೆ ಅಮ್ಮನೂ . ಅಲ್ಲಾ, ಇದು ನನ್ ಹುಟ್ಟು ಹಬ್ಬ , ನನ್ ಗಿಫ್ತ್ಸ್ , ಆದರೂ ತಾನೆ ಎಲ್ಲ ಓಪನ್ ಮಾಡ್ತಿದಾಳೆ ! ನಾನು ಹಾಳು ಮಾಡಿ ಬಿಡ್ತೀನಂತೆ ! ನಾನ್ಯವತ್ತಾದ್ರೂ ಅವಳ ಗಿಫ್ಟ್ ನ ಹಾಗೇ ಓಪನ್ ಮಾಡಿದ್ರೆ , ಬಯ್ಯಲ್ವ ಅವಳು ? ಅದನ್ನೇ ಕೇಳಿದ್ದಕ್ಕೆ " ತುಂಬಾ ಮಾತಾಡೋಕೆ ಕಲ್ತಿದೀಯ " ಅಂದ್ಲು. ನೀವೇ ಹೇಳಿ ? ನಂದು ತಪ್ಪಿದ್ಯ ಇದ್ರಲ್ಲಿ ?
" ಸೋನೂ , ನೋಡೇ , ನಿನ್ ಫ್ರೆಂಡ್ ಡಾಲಿ , ನೀನು ಅವಳ ಬರ್ತ್ ಡೇ ಗೆ ಕೊಟ್ಯಲ್ಲ ಅಂಥದೇ ಗೊಂಬೆ ಕೊಟ್ಟಿದಾಳೆ ಕಣೆ , "
" ಅಂಥದೇ ಅಲ್ಲಮ್ಮಾ,' ಅದೇ ' ಗೊಂಬೆ " ಅಂದೆ ನಾನು .
" ಏನೇ ಹಂಗಂದ್ರೆ ? "
ಥೂ ಅಮ್ಮಂಗೆ ಎಲ್ಲ ಬಿಡ್ಸಿ ಹೇಳ್ಬೇಕು . " ಅಮ್ಮಾ, ನಾವು ಅವಳ ಬರ್ತ್ ಡೇಗೆ ಗಿಫ್ಟ್ ತರೋಕೆ ಹೋದಾಗ , ನನಗಿದು ತುಂಬಾ ಇಷ್ಟ ಆಯ್ತು ಅಂದ್ರು ಕೇಳ್ದೆ, ನೀನು ಈ ಗೊಂಬೆ ನ ಅವಳಿಗೆ ಅಂತ ಪ್ಯಾಕ್ ಮಾಡ್ಸಿದ್ದೆ ಅಲ್ವ? ಅದನ್ನ ಅವಳಿಗೆ ಕೊಟ್ಟ ಮೇಲೆ , ನಾನು ಅವಳ ಅಮ್ಮಂಗೆ , ' ಆಂಟೀ, ಡಾಲಿ ಗೆ ಈ ಗೊಂಬೆ ಇಷ್ಟ ಆಗ್ಲಿಲ್ಲ ಅಂದ್ರೆ , ಅಥವಾ ಆಟ ಆಡಿ ಬೇಜಾರು ಬಂದ್ರೆ , ನಂಗೆ ಕೊಡಿ ಈ ಗೊಂಬೆ ನ. ಇದು ನಂಗೆ ತುಂಬಾ ಇಷ್ಟ ಆಯ್ತು . ಆದ್ರೆ , ಅಮ್ಮ ನಂಗೆ ಕೊಡಿಸಲಿಲ್ಲ ! ' ಅಂತ ಹೇಳಿದ್ದೆ . ಅದಕ್ಕೆ ಅವರು ಈಗ ಅದೇ ಗೊಂಬೆ ನ ಕೊಟ್ಟಿದಾರೆ "
.. ಅಮ್ಮ ಇಷ್ಟು ದೊಡ್ಡ ಕಣ್ಣು ಮಾಡಿ .. ಹಾಗೆಲ್ಲ ಹೇಳ್ತಾರೆನೆ ಕತ್ತೆ ? ಅಂತ ಒಂದು ಗುದ್ದೇ ಬಿಟ್ಟಳು ನಂಗೆ ! ಅದೂ ನನ್ ಹುಟ್ಟಿದ ಹಬ್ಬದ ದಿನಾನೆ ! ನೀವೇ ಹೇಳಿ , ನನ್ದೆನಾದ್ರು ತಪ್ಪಿದ್ಯಾ ಇದ್ರಲ್ಲಿ ? ...... "
ಮುದ್ದು ಮುದ್ದಾಗಿ ಅಭಿನಯಿಸುತ್ತಾ ಪುಟ್ಟ ' ರಾಧಾ' ಮಾತನಾಡುತ್ತಿದ್ದರೆ , ನಾವೆಲ್ಲಾ ಬಿದ್ದೂ ಬಿದ್ದೂ ನಗುತ್ತಿದ್ದೆವು !
" ಈಗ ತುಟಿಯ ಮೇಲೆ ಮೂಡಿದ ನಗು ಎಂದೂ ಮಾಸದಿರಲಿ! "
" ಎಲ್ಲರಿಗೂ ಹೊಸವರ್ಷದ ಶುಭಾಶಯಗಳು !! "
27 comments:
ಹೌದು.... ರಾಧ ಹೇಳಿದ್ದರಲ್ಲಿ ತಪ್ಪೇನು ಕಾಣಿಸಲಿಲ್ಲ... ಹೊಸವರುಷದಲ್ಲಿ ನಗು ಉಕ್ಕಿಸಿದ್ದಕ್ಕೆ ಥ್ಯಾ೦ಕ್ಸ್ :)
ಬಿದ್ದೂ ಬಿದ್ದೂ ನಕ್ಕೆವು ..ಅನ್ನೊದನ್ನ ಓದುತ್ತಿದ್ದ೦ತೆಯೆ ನನಗೂ ಜೋರಾಗೇ ನಗುಬ೦ತು. ನಗ್ತಾನೆ ಬರಿತಾ ಇದ್ದೇನೆ..
ತು೦ಬಾ....ಚೆನ್ನಾಗಿದೆ.ರಾಧಾಗೆ ನನ್ನಿ೦ದ ಒ೦ದು ದೊಡ್ಡ ನಗೆ ಬಹುಮಾನ... ಹಹಹಹಹ... ನಿಮಗೂ ಕೂಡ ಅದೇ ಬಹುಮಾನ ನಮ್ಮನ್ನು ನಗಿಸಿದ್ದಕ್ಕೆ.ಹಹಹಹಹ....
ಬರಿತಾ ಇರಿ...
ಧನ್ಯವಾದಗಳು.
ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ನಿಮ್ಮ ಬಿಲ್ಡಿ೦ಗಿನ ಪುಟ್ಟ ಹುಡುಗಿ ರೂಪಾ ಬಗ್ಗೆ ಚೆನ್ನಾಗಿ ಮೂಡಿ ಬಂದಿದೆ ಲೇಖನ, ಓದಿ ನಗು ಬಂತು, ಹೊಸ ವರುಷದಲ್ಲಿ ನಿಮ್ಮ ಮೊಗದಲ್ಲೂ ನಗು ಮಾಸದಿರಲಿ ಎ೦ಬುದೇ ನನ್ನ ಹಾರೈಕೆ
ಚಿತ್ರಾ..
ನಿಮ್ಮ ತುಂಟ ಪುಟ್ಟಿ ನಮ್ಮ ಮನಕದ್ದಿದ್ದಾಳೆ...
ಈ ದೊಡ್ಡವರೆನಿಸಿಕೊಂಡವರು ಮಾಡುವದೂ ಹೀಗೆನೇ...
ನಾವೆಲ್ಲ ನಕ್ಕು ನಕ್ಕು ಸುಸ್ತು...
ಹೊಸವರ್ಷವನ್ನು ನಗಿಸುತ್ತ ಶುರು ಮಾಡಿದ್ದಕ್ಕೆ ಧನ್ಯವಾದಗಳು...
ನಿಮ್ಮ ಪುಟ್ಟಿಗೂ ಶುಭಾಶಯ ತಿಳಿಸಿ....
ಚಿತ್ರಾ ಮೇಡಮ್,
ಆ ಪುಟಾಣಿ ಹುಡುಗಿಯ ಮಾತನ್ನು ಕೇಳುತ್ತಿದ್ದರೇ[ಎಲ್ಲವನ್ನು ಓದುತ್ತಿದ್ದರೇ ನಾವೇ ನೋಡುತ್ತಾ ಕೇಳುತ್ತಿದ್ದಂತೆ ಅನುಭವವಾಯಿತು]ನನಗೂ ತುಂಬಾ ನಗು ಬಂತು. ನಿಜಕ್ಕೂ ಎಲ್ಲರ ಮನಸ್ಸಿನ ಮಾತುಗಳನ್ನು ನೇರವಾಗಿ ಹೇಳುತ್ತಿದ್ದಾಳೆ ಪುಟ್ಟಿ. ಕಹಿಸತ್ಯಗಳನ್ನು ಹೊರಗೆಳೆಯುವುದು ಒಂದು ಕಲೆ. ಅದನ್ನು ಆ ಹುಡುಗಿ ಸಿದ್ಧಿಸಿಕೊಂಡಿದ್ದಾಳೆ ಅವಳಿಗೆ ನನ್ನ ಕಡೆಯಿಂದ ಅಭಿನಂದನೆಗಳನ್ನು ತಿಳಿಸಿ.
ಪುಟ್ಟ ರಾಧಾಳ ಜಾಣತನವನ್ನು ನಮಗೆಲ್ಲರಿಗೆ ಹೇಳಿದ್ದಕ್ಕೆ ನಿಮಗೆ
ಧನ್ಯವಾದಗಳು.
ನಕ್ಕೆ .... ತು೦ಟಿಯ ಮಾತುಗಳಿಗೆ..
ನಗುತ್ತಲೆ.... ಯೋಚನೆಗೆ ಬಿದ್ದೆ...
ಮಕ್ಕಳ ವಿಚಾರ ಕಶ್ಮಲವಿಲ್ಲದ್ದು...
ನಾವೇ ಜಾಗರೂಕರಾಗಿರಬೇಕು..
ಹೊಸ ವರುಷ ನಿಮಗೂ ತರಲಿ ಹರುಷ.
ಪುಟ್ಟ ರಾಧಳ ಮಾತು ನಗು ತರಿಸಿದವು....
ಹೊಸವರ್ಷದ ಹಾರ್ದಿಕ ಶುಭಾಶಯಗಳು....
ರಾಧ ಪುಟ್ಟಿಗೂ ಶುಭಾಶಯಗಳನ್ನು ತಿಳಿಸಿ....
ಸೂಪರ್ರಾಗಿತ್ತು. ಪುಟ್ಟಿಗೆ ನನ್ನ ಕಡೆಯಿಂದ ಒಂದು ಪಪ್ಪಿ :)
ನನ್ನ ತಂಗಿ ಹೆಸರೂ ರಾಧಾ :)
ಚಿತ್ರಾ, ಮಕ್ಕಳ ಮನಸು ನಿಷ್ಕಲ್ಮಷ...ಹಾಗಂತ ಅದರಲ್ಲಿ ಕಸ ತುಂಬೋರೂ ನಾವೇ...ನಮ್ಮ ಎಷ್ಟೋ ಗುಟ್ಟುಗಳನ್ನು ಮಕ್ಕಳು ಬಯಲು ಮಾಡಿದಾಗ ಹಿ.ತಿ.ಮಂ. ಆಗುವುದು ನಾವೇ...ನಕ್ಕು ಸುಮ್ಮನಾಗದೇ ಯೋಚನೆಗೆ ತಳ್ಳುತ್ತವೆ ಒಮ್ಮೊಮ್ಮೆ ಮಕ್ಕಳ ಹರಕತ್ತುಗಳು.
ಅಕ್ಕ,
ನಕ್ಕೂ ನಕ್ಕೂ ಸುಸ್ತಾತು. ರಾಧಾ ಪುಟ್ಟಿ ರಾಶಿನೇ ಚೂಟಿ ಅನ್ನಿಸ್ತು. ನಂಗೆ ನನ್ನ ಅದಿತಿತೂ ಹೀಂಗೇ ಆಗ್ಗು ಮುಂದೆ ಅನಸ್ತಾ ಇದ್ದು. :)
ಮಕ್ಕಳು ಸತ್ಯವನ್ನೇ ಹೇಳ್ತಾರೆ. ಅವರ ಮಾತಿನಲ್ಲಿ ಒಣ ಆಡಂಭರ ಕೊಂಕು, ಪಾಲಿಶಿತನ ಇರದು. ಇದ್ದುದನ್ನು ಇದ್ದಹಾಗೇ ಬಹು ಮುದ್ದಾಗಿ ಮುಗ್ಧವಾಗಿ ಹೇಳುತ್ತಾರೆ. "ಇರಬೇಕು ಅರಿಯದ ಕಂದನ ತರಹ" ಎಂದು ಹೇಳಿದ್ದು ಸುಳ್ಳಲ್ಲ ಅಲ್ಲವೇ?
ಚಂದದ ಬರಹ. ರಾಧಾ ಪುಟ್ಟಿಗೆ ಸಿಹಿ ಮುತ್ತು :)
ಚಿತ್ರಾ,
ಹೊಸ ವರ್ಷದ ಶುಭಾಶಯಗಳು
ಬರಹ ಚೆನ್ನಾಗಿದೆ
ಹೊಸ ವರ್ಷಕ್ಕೆ ಒಂದು ಉತ್ತಮ ನಗೆಯ ಬರಹ
ಪ್ರತಿಕ್ರಿಯಿಸಿದ ಎಲ್ಲರಿಗೂ ಮನಸ್ಪೂರ್ವಕ ಧನ್ಯವಾದಗಳು ! ಕೆಲಸದ ಒತ್ತಡದಿಂದಾಗಿ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಧನ್ಯವಾದ ಸಲ್ಲಿಸಲು ಸಮಯವಾಗುತ್ತಿಲ್ಲ . ದಯವಿಟ್ಟು ಕ್ಷಮಿಸಿ. ನಿಮ್ಮ ಪ್ರೋತ್ಸಾಹ , ಆಶೀರ್ವಾದ ಹೀಗೆ ಇರಲಿ
ನಾನೂ ಒದ್ತಾ ಹೋದ ಹಾಗೆ ದೊಡ್ಡದಾಗಿ ನಗಲಿಕ್ಕೆ ಶುರು ಮಾಡಿದೆ. ನಾ ನಗೋದನ್ನ ಕೇಳಿ ಪಕ್ಕದ ರೂಮಿನವರು ಬಂದು "What happended?"ಅಂದ್ರು. ಅವರಿಗ್ಯಾರಿಗೂ ಕನ್ನಡ ಬರಲ್ಲ. "nothing" ಅಂದು ಸಾಗ ಹಾಕ ಪ್ರಯತ್ನ ಮಾಡಿದೆ.
ಏನೋ ತಪ್ಪು ಮಾಡಿದೆ ಅಂದ ಹಾಗೆ ನನ್ನನ್ನೆ ಒಂದ ಥರಾ ನೋಡ್ತಾ ಹೋದ್ರು.
ನೀವೇ ಹೇಳಿ , ನನ್ದೆನಾದ್ರು ತಪ್ಪಿದ್ಯಾ ಇದ್ರಲ್ಲಿ ? ......
radha helidralli tappilla.tamasheya jote kelavashtu gambheer vicharagaloo ive avala maatalli.baraha ishtavaaytu:)
ಚೆನ್ನಾಗಿದೆ. ಅವಳ ಮುಗ್ಧ ಪ್ರಶ್ನೆ ಸಮಂಜಸವಾಗಿದೆ
"ಮಕ್ಕಳಾಟವು ಚಂದ ಮತ್ತೆ ಯೌವನ ಚಂದ" ಮುಪ್ಪಿನಲಿ ಚಂದ ನರೆಗಡ್ಡ ಜಗದೊಳಗೆ, ಎತ್ತ ನೋಡಿದರೂ ನಗು ಚಂದ" ಎಂಬ ಜಾನಪದ ಹಾಡಿನ ಸಾಲುಗಳು ಆಯಾ ಕಾಲಕ್ಕೆ ಯಾವುದು ಯಾವುದು ಚಂದ ಎಂಬುದರ ಮಹತ್ವವನ್ನು ತಿಳಿಸುತ್ತವೆ. ಅಂತೆಯೇ ಮಕ್ಕಳು ಏನು ಮಾಡಿದರೂ ಚಂದವೇ.ಮಕ್ಕಳ ಮನಸ್ಸು ಜಗತ್ತಿನ ಆಗು ಹೋಗುಗಳು, ಅನ್ಯಾಯ ಅಕ್ರಮಗಳು, ಅಸತ್ಯ,ವಂಚನೆ ಇತ್ಯಾದಿ ಏನೂ ಅರಿಯದ ಮುಗ್ಧ ಮನಸ್ಸು .ಮಕ್ಕಳಾಟ ಎನ್ನುವುದು ಇದಕ್ಕೇ ಅಲ್ಲವೇ?
ರಾಧಾ ಪುಟ್ಟಿ ತುಂಬಾ ನಗಿಸಿಬಿಟ್ಟಳು ಕಣ್ರೀ, ಮಕ್ಕಳ ಮನಸ್ಸನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಲು ನಾವು ಕೂಡ ಮಕ್ಕಳಾಗಬೇಕು ಅಷ್ಟೇ! ತುಂಬಾ ಮುದ್ದಾಗಿದೆ.
ಪ್ರವಿ
ನಮಸ್ತೆ,
ಆಕೆ ಮಾಡಿದ್ದೂ ಅವಳಿಗೆ ತಪ್ಪು ಅನಿಸಲಿಲ್ಲ , ಆದ್ರೆ ಅವರ ಅಮ್ಮನಿಗೆ ತಪ್ಪು ಅನಿಸುತ್ತೆ..
ನಮ್ಮ-ನಿಮ್ಮ ಮನೆಯಲ್ಲೂ ಅಂತ ಹುಡುಗಿ ಇದ್ರೆ ಅವಳು ಮಾಡಿದ್ದೂ ನಮಗೆ ಏನನ್ನಿಸುತ್ತೆ ಯೋಚಿಸಿ..
ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/
ಬಾಲು,
ಬ್ಲಾಗಿಗೆ ಸ್ವಾಗತ . ತಡವಾದ ಧನ್ಯವಾದಕ್ಕಾಗಿ ಕ್ಷಮಿಸಿ.
ಖಂಡಿತವಾಗಿಯೂ ನಿಮ್ಮ ತಪ್ಪಿಲ್ಲ ಬಿಡಿ. ಕನ್ನಡ ಬಾರದ್ದು , ಈ ಲೇಖನವನ್ನು ಓದಲಾಗದ್ದು , ಓದಿ ನಗುತ್ತಿದ್ದ ನಿಮ್ಮನ್ನು " What happened ? " ಎಂದು ಕೇಳುವ ಧೈರ್ಯ ಮಾಡಿದ್ದು ನಿಮ್ಮ ಪಕ್ಕದವರ ತಪ್ಪು ! ಹಿ ಹಿ ಹಿ. ನಕ್ಕಿದ್ದು ಸಂತೋಷವಾಯಿತು. ಬರುತ್ತಿರಿ
ಗೌತಮ್ ,ದೀಪಸ್ಮಿತಾ
ಬರಹ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ
ನಮನ
ನೀವಂದಿದ್ದು ನಿಜ. ಮಕ್ಕಳ ಮನಸ್ಸು ಮುಗ್ಧ ಹಾಗೂ ನಿಷ್ಕಲ್ಮಶ ! ಬೆಳೆಯುತ್ತ ಹೋದಂತೆ , ಅದರಲ್ಲಿ ಮೋಸ, ವಂಚನೆ, ಧೂರ್ತತನ ಇತ್ಯಾದಿಗಳನ್ನು ದೊಡ್ದವರೇ ತುಂಬುತ್ತಾ ಹೋಗುತ್ತೇವೆ ಎನಿಸುತ್ತದೆ.
ಪ್ರವೀಣ್,
ರಾಧಾಳ ಮಾತನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮಕ್ಕಳೊಂದಿಗೆ ನಾವೂ ಮಕ್ಕಳಾದಾಗ ಜೀವನದ ಆನಂದವನ್ನು ಹೆಚ್ಚು ಸವಿಯಬಹುದೇನೋ!
ಗುರುದೆಸೆ, ( ತಮ್ಮ ಹೆಸರು ತಿಳಿಯಲಿಲ್ಲ ! )
ನಮ್ಮ ಮಕ್ಕಳು ಹೀಗೇ ಮಾಡಿದರೆ , ನಮಗೂ ತಪ್ಪೆನಿಸಬಹುದಲ್ಲವೇ? ಆದರೆ , ಮಾತು ಮಾತಿನಲ್ಲಿಯೇ, ತನ್ನ ಸ್ವಾತಂತ್ರ್ಯವನ್ನು ' ಅಮ್ಮ' ಮೊಟಕುಗೊಳಿಸುವ ಬಗ್ಗೆ ಅಸಮಧಾನ ತೋರುತ್ತಿರುವ ರಾಧಾಳ ಪ್ರಬುದ್ಧತೆ ಎಲ್ಲಿಯೋ ಸೆಳೆದುಬಿಡುತ್ತದೆ .
ನಿಮ್ಮ " ಮನಸಿನ ಮನೆ" ಗೆ ಖಂಡಿತಾ ಬರುತ್ತೇನೆ. ನೀವೂ ಸಹ ಹೀಗೇ ಬರುತ್ತಿರಿ
ಹೊಸ ವರುಷ ಕಳೆದುಹೋಗಿ ತಿ೦ಗಳು ಆಯಿತು.... ಇನ್ನೂ ಏನೂ ಬರೆದೇ ಇಲ್ಲ... ಬೇಗ ಬರೆಯಿರಿ...
ಅಪರೂಪಕ್ಕೆ ನೀವು ಬ್ಲಾಗ್ ಅಪ್‍ಡೇಟ್ ಮಾಡದೆ, ಬ್ಲಾಗ್ ಅಪ್‍ಡೇಟ್ ಮಾಡಿ ಎ೦ದು ನಿಮಗೆ ಹೇಳುವ ಅಪರೂಪದ ಅವಕಾಶ ಬ೦ದಿದೆ.... ಹೇಗೆ ಬಿಡೋಕೆ ಆಗುತ್ತೆ ಈ ಅವಕಾಶವನ್ನು :):)
ಸುಧೇಶ್,
ಸಿಕ್ಕ ಅವಕಾಶ ಬಿಟ್ಟುಕೊಡದೆ , ಸೇಡು ತೀರಿಸಿಕೊ ಬೇಕು ಅಂತಿದೀರಾ? ಹಾ ಹಾ ಹಾ .. ಪರವಾಗಿಲ್ಲ ಬಿಡಿ.
ಕೆಲಸದ ಒತ್ತಡದಿಂದಾಗಿ ಕೆಲ ಸಮಯದಿಂದ ಬ್ಲಾಗ್ ಬರೆಯುವುದಿರಲಿ , ನಿಮ್ಮೆಲ್ಲರ ಬ್ಲಾಗ್ ಓದಲೂ ಆಗುತ್ತಿಲ್ಲ ! ಒಂದೆರಡು ದಿನಗಳಲ್ಲಿ ಹೊಸ ಲೇಖನ ಹಾಕುತ್ತೇನೆ .
ಹುಟ್ಟಿದ ಹಬ್ಬದ ದಿನ ಬೈದಿದ್ದು ತಪ್ಪೇ....{ಇದು ನನ್ ಹುಟ್ಟು ಹಬ್ಬ , ನನ್ ಗಿಫ್ತ್ಸ್ , ಆದರೂ ತಾನೆ ಎಲ್ಲ ಓಪನ್ ಮಾಡ್ತಿದಾಳೆ ! ನಾನು ಹಾಳು ಮಾಡಿ ಬಿಡ್ತೀನಂತೆ ! ನಾನ್ಯವತ್ತಾದ್ರೂ ಅವಳ ಗಿಫ್ಟ್ ನ ಹಾಗೇ ಓಪನ್ ಮಾಡಿದ್ರೆ , ಬಯ್ಯಲ್ವ ಅವಳು ? ಅದನ್ನೇ ಕೇಳಿದ್ದಕ್ಕೆ " ತುಂಬಾ ಮಾತಾಡೋಕೆ ಕಲ್ತಿದೀಯ " ಅಂದ್ಲು. ನೀವೇ ಹೇಳಿ ? ನಂದು ತಪ್ಪಿದ್ಯ ಇದ್ರಲ್ಲಿ ?} ಈ ಸಾಲು ತುಂಬಾ ಇಷ್ಟವಾಯಿತು... ನಗು ಅರಳುತಿರಲಿ...
Post a Comment