July 11, 2010

ನಿನ್ನ ನೆನಪು....


ಮಬ್ಬುಗತ್ತಲೆಯಲ್ಲಿ
ತಂಪಾದ ಸಂಜೆಯಲಿ
ಸೋನೆ ಮಳೆ ಸುರಿವಾಗ ನಿನ್ನ ನೆನಪು
ತಂಗಾಳಿ ಸುಳಿದಾಡಿ , ಮಿಂಚೊಂದು ಹರಿದಾಡಿ
ಮನಸು ಮುದಗೊಳುತಿರಲು
ನಿನ್ನ ನೆನಪು
 
ಆಗಸದಿ ಮೋಡಗಳು
ಕಪ್ಪಾಗಿ ಸೇರುತಿರೆ
ಗರಿ ಬಿಚ್ಚಿ ಕುಣಿಯುವಾ ನವಿಲಿನಂತೆ
ಮತ್ತೆ ನೀ ನೆನಪಾಗಿ
ಕಾಡುತಿರೆ ಮನವನ್ನು
ಕೆಂಪಾಗಿ ಕೆನ್ನೆ
ನಾ ನಾಚಿ ನಿಂತೆ 
 
ತಂಪು ಗಾಳಿಗೆ ಕೆದರಿ 
ಹಾರುತಿವೆ ಮುಂಗುರುಳು 
ನೀನಿಲ್ಲ  ನಾನಿಂದು ಏಕಾಂಗಿ
ಈ  ಇರುಳು
ನಿದ್ದೆ ಬಾರದು ಇನಿಯ
ಹೊಮ್ಮುತಿದೆ ನಿಟ್ಟುಸಿರು
ಮನದಲ್ಲಿ ಮೊರೆಯುತಿದೆ
ನಿನ್ನದೇ ಹೆಸರು !
 

26 comments:

sunaath said...

ಮಳೆ ಸುರಿವಾಗ, ಪ್ರಿಯರಾದವರ ನೆನಪೂ ಸಹ ಧಾರೆಯಾಗಿ ಬರುತ್ತದೆ, ಅಲ್ಲವೆ? ಉತ್ತಮ ಕವನ.

PARAANJAPE K.N. said...

ಚೆನ್ನಾಗಿದೆ

ಸವಿಗನಸು said...

ನೆನಪು ತರಿಸುವ ಕವನ ಸೊಗಸಾಗಿದೆ....

Raghu said...

ಚಿತ್ರ ಅವರೇ..
ನೆನಪಿನ ಸಂಜೆಗೆ ನೆನಪೇ ತಂಗಾಳಿ...
ತುಂಬಾ ಚೆನ್ನಾಗಿದೆ.
ನಿಮ್ಮವ,
ರಾಘು.

ಜಲನಯನ said...

ಚಿತ್ರಾ, ನಿಮ್ಮ ಕವನ ಓದಿ ನನಗೆ ಹಳೆಯ ತೆಲುಗು ಹಾಡು ನೆನಪಾಯ್ತು...
ಚಿಟಪಟ ಚಿನುಕುಲು ಪಡುತೂ ಉಂಟೆ
ಚೆಲಿಕಾಡು ಪಕ್ಕನ ಉಂಟೆ.....ಅಂದರೆ ಮಳೆಯ ತಣ್ಣನೆ ವಾತಾವರಣದಲ್ಲಿ ಪ್ರೇಮಿಗಳ ಸನಿಹಗಳು ಬಿಸಿಯುಸಿರು ಬೆಚ್ಚನೆ ಹಿತನೀಡುತ್ತದಂತೆ.....ಬಹಳ ರಸಿಕತೆ ಮೂಡಿಸೋ ಸಾಲುಗಳು...

ಚಿತ್ರಾ ನಿಮ್ಮಿಂದ ಒಂದು ಲೇಖನ ಸುಮಾರು ಒಂದು ಪುಟದ್ದು...ರಕ್ಷಾಬಂಧನ್ ಬಗ್ಗೆ...ಬರೆದು ಕಳುಹಿಸುತ್ತೀರಾ..ನಮ್ಮ ಕುವೈಟ್ ಕನ್ನಡ ಕೂಟದ ಮರಳ ಮಲ್ಲಿಗೆ ಪತ್ರಿಕೆಗೆ. ..ಈ ವಿಳಾಸಕ್ಕೆ ಕಳುಹಿಸಿ..
suruaz@gmail.com ಮತ್ತು sugunamahesh@gmail.com

ಸೀತಾರಾಮ. ಕೆ. / SITARAM.K said...

ಸೋನೆಮಳೆಯ ರಾತ್ರಿಯಲ್ಲಿನ ವಿರಹವನ್ನ ಚೆಂದವಾಗಿ ಕವನದಲ್ಲಿ ಹಿಡಿದಿಟ್ಟಿದ್ದಿರಾ!

shridhar said...

ಚಿತ್ರಾ ಅವರೇ,
ಚೆನ್ನಾಗಿದೆ ಕವನ ಮತ್ತು ಮಳೆ ನೆನಪು.

ಮನಸಿನಮನೆಯವನು said...

ಚಿತ್ರಾ,
ನೆನಪ ಹನಿ ಸುರಿದಂತಿದೆ..

ಸುಧೇಶ್ ಶೆಟ್ಟಿ said...

ನಿಮ್ಮ ಕವನ ಓದಿದಾಗ ನನಗೆ ತುಂಬಾ ಇಷ್ಟ ಆದವರು ಕಾಡಿದರು :) ತು೦ಬಾ ಇಷ್ಟ ಆಯಿತು ಈ ಕವನ... ಸೋನೆ ಮಳೆಗೂ, ನೆನಪಿನ ಸೋನೆಗೂ ಅವಿನಾಭಾವ ಸ೦ಬ೦ಧ ಅಲ್ವೇ?

ಸಾಗರದಾಚೆಯ ಇಂಚರ said...

ಚಿತ್ರಾ
ಮೈಸೂರ ಮಲ್ಲಿಗೆಯ ಒಂದು ಹಾಡು ನೆನಪಾತು
ಚೊಲೋ ಬರದ್ದೆ

ಅನಂತ್ ರಾಜ್ said...

ನೆನಪಿನ ಚಿತ್ರಣ, ಭಾವ ತು೦ಬಿದ ಸು೦ದರ ಪದಗಳ ಜೋಡಣೆಯಿ೦ದ ಕವನ ಓದುಗರ ಮನ ಮುದಗೊಳಿಸಿದೆ.

ಶುಭಾಶಯಗಳು
ಅನ೦ತ್

ಚಿತ್ರಾ said...

ಕಾಕಾ ,
ಮಳೆಯೊಂದಿಗೆ ಬಹಳಷ್ಟು ನೆನಪುಗಳು ಮನದಲ್ಲಿ ಉಕ್ಕಿ ಬರುತ್ತವೆ ಅಲ್ಲವೇ? ಧನ್ಯವಾದಗಳು ಕಾಕಾ.

ಚಿತ್ರಾ said...

ಪರಾಂಜಪೆ,
ಥ್ಯಾಂಕ್ಸ್

ಚಿತ್ರಾ said...

ಮಹೇಶ್, (ಸವಿಗನಸು )
ಮೆಚ್ಚುಗೆಗೆ ಧನ್ಯವಾದಗಳು

ಚಿತ್ರಾ said...

ರಾಘು ,
ನಿಮ್ಮ ಪ್ರತಿಕ್ರಿಯೆ ' ಸಾಕ್ಷಾತ್ಕಾರ" ದ ಹಾಡನ್ನು ನೆನಪಿಸಿಬಿಟ್ಟಿತು .
ಧನ್ಯವಾದಗಳು

ಚಿತ್ರಾ said...

ಆಜಾದ್,
ಸಾಲುಗಳು ರಸಿಕತೆ ಮೂಡಿಸುವಂತಿವೆ ಎಂದಿದ್ದೀರಿ , ಹಾಗೆ ನೋಡಿದರೆ , ಮಳೆಗಾಲವೇ ಹಾಗೆ ಅಲ್ಲವೇ ? ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ..

ಚಿತ್ರಾ said...

ಸೀತಾರಾಮ್ , ಶ್ರೀಧರ್ ಮತ್ತು ಜ್ಞಾನಾರ್ಪಣಮಸ್ತು ..
ತಮ್ಮ ಮೆಚ್ಚುಗೆಗೆ ಆಭಾರಿಯಾಗಿದ್ದೇನೆ.

ಚಿತ್ರಾ said...

ಸುಧೇಶ್ ,
ಕವನದಿಂದ ಮಧುರ ನೆನಪುಗಳು ತಾಜಾ ಆದರೆ, ಖುಷಿ ತಂದರೆ ನನಗೂ ಸಂತೋಷ !
ನೀವು ಹೇಳಿದಂತೆ , ಸೋನೆ ಮಳೆಯ ಧಾರೆಯೊಡನೆ , ಹಳೆಯ ನೆನಪುಗಳೂ ಸುರಿಯ ತೊಡಗುವುದು ವಿಚಿತ್ರವಲ್ಲವೇ?

ಚಿತ್ರಾ said...

ಗುರು ,
ಥ್ಯಾಂಕ್ಸು. ಅಂದರೂ ನಿನ್ನ ಕವನಗಳ ಮಟ್ಟಕ್ಕಿಲ್ಲೇ ಮಾರಾಯ

ಚಿತ್ರಾ said...

ಅನಂತ್,
ಬ್ಲಾಗಿಗೆ ಸ್ವಾಗತ ! ಕವನವನ್ನು ಮೆಚ್ಚಿದ್ದಕ್ಕೆ , ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಮತ್ತೆ ಬರುತ್ತಿರಿ.

Ittigecement said...

ಚಿತ್ರಾ...

ಬಹಳ ಸುಂದರ ಕವನ..

ಪ್ರತಿ ಸಾಲುಗಳಲ್ಲಿ ಭಾವಗಳು ತುಂಬಿವೆ..

ನನಗೂ ಒಂದೆರಡು ಸಾಲು ಬರೆಯೋಣ ಅನ್ನಿಸಿಬಿಡ್ತು...

ಅಭಿನಂದನೆಗಳು ಚಂದದ ಕವನಕ್ಕೆ....

ಚಂದ್ರು said...

ಚಿತ್ರಾರವರೆ ,
ಚೆನ್ನಾಗಿದೆ ನಿಮ್ಮ ಕವನ .ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ.ನಿಮ್ಮ ಮತ್ತೊ೦ದು ಕನ್ನಡ ಲೇಖನವೂ ಇಷ್ಟವಾಯಿತು. ಹೌದು ನಮ್ಮಲ್ಲಿ ಎಷ್ಟೋ ಜನ ಕನ್ನಡ ಮಾತೃ ಭಾಷೆಯಾದರು ಮಾತನಾಡಲು ಹಿಂದೇಟು ಹಾಕುತ್ತಾರೆ.

Harisha - ಹರೀಶ said...

ಚಿತ್ರಕ್ಕಾ!!! ಅಪರೂಪಕ್ಕೆ ಕವನ ಬರದ್ರೂ ಅದ್ಭುತವಾಗಿ ಬರದ್ದೆ.. :-)

ಚಿತ್ರಾ said...

ಹರೀಶ,
ನೀನು ಸರಿಯಾಗಿ ಬ್ಲಾಗ್ ಓದ್ತಾ ಇಲ್ಲೆ ಮಾರಾಯ.
ಈಗಿತ್ಲಾಗಿ , ಕವನ- ಚುಟುಕಗಳೇ ಹೆಚ್ಚಾಜು !!! ಅಪರೂಪಕ್ಕೆ ಕವನ ಹೇಳಿ ಬರದ್ಯಲ ? :)
ಆಗಾಗ ಬರ್ತಾ ಇರು ನೆನಪಿರ್ತು. ಹಿ ಹಿ ಹಿ .
ಮೆಚ್ಚಿದ್ದಕ್ಕೆ ಥ್ಯಾಂಕ್ಸು !

ಚಿತ್ರಾ said...

ಚಂದ್ರು ,
ಬ್ಲಾಗಿಗೆ ಸ್ವಾಗತ ! ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಹೀಗೆ ಬರುತ್ತಿರಿ ಮತ್ತು ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿರಿ

Ramesh said...

ಚಿತ್ರಾ - ಕ್ಶಮಿಸಿ ಬಹಳ ತಡವಾಗಿ ನನ್ನ ಪ್ರತಿಕ್ರಿಯೆಯನ್ನು ಬರೆಯುತ್ತಿದ್ದೇನೆ. ನನಗೆ ಕೆ.ಎಸ್.ನರಸಿಂಹಸ್ವಾಮಿಯವರ "ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನಾ ಹೆಸರು" - ಈ ಹಾಡು ಗ್ನಾಪಕಕ್ಕೆ ಬಂತು...

ತುಂಬಾ ಚೆನ್ನಾಗಿದೆ.. ಹೀಗೆ ಬರಿತಾ ಇರಿ.. ಹಾಗೆ ನನ್ನ ಬ್ಲೊಗ್ ಕಡೆನು ಬರ್ತಾ ಇರಿ.. ಹಿಂದಿ ಶಾಯರಿಗಳು ಬಹಳಷ್ಟಿವೆ :)