ನಿನ್ನ ಕನಸುಗಳಲ್ಲಿ ನಾನಿಹೆನೋ ಇಲ್ಲವೋ 
ನನ್ನ ಕನವರಿಕೆಯಲಿ ನೀನಿರುವೆ ಗೆಳೆಯ 
ಬೆಳಗಿನಲಿ  ಸಂಜೆಯಲಿ , ಏಕಾಂತದಿರುಳಿನಲಿ 
ನನ್ನ ಮನ ಬಯಸಿಹುದು  ನಿನ್ನ ಸನಿಯ 
ತನುವ ಕಚಗುಳಿಯಿಡುತ ಕೇಳುತಿದೆ ತಂಗಾಳಿ 
ಎಂದು ಬರುವನು  ಹೇಳು ನಿನ್ನ  ಇನಿಯ ?
ಬಳಸುವನೆ ತೋಳಿನಲಿ  ಕೆಣಕುವನೆ ಮಾತಿನಲಿ ?
ಪಿಸುಮಾತು  ತುಂಬುವುದೇ  ನಿನ್ನ  ಕಿವಿಯ ?
ಮುಡಿದ ಮಲ್ಲಿಗೆ ಮಾಲೆ  ಜಡೆಯಲ್ಲೇ ಬಾಡುವುದೇ?
ಪರಿಮಳವು  ಪಸರುವುದೇ ಕೋಣೆಯಲ್ಲಿ?
ಬಳೆಯ ಕಿಂಕಿಣಿ  ನಾದ ಕೇಳುವುದೇ ನೀ  ಹೇಳು 
ಕುಂಕುಮವು  ಕರಗುವುದೇ  ಬೆವರಿನಲ್ಲಿ ? 
ಸಂಜೆ ಇಳಿದಿದೆ ನಲ್ಲ ,  ಒಳಗೆ ಬೆಳಗಿದೆ ದೀಪ  
ಸಜ್ಜೆಮನೆಯೊಳಗಿಹುದು  ಧೂಪದಾರತಿಯು   
ಕಾತರದಿ ಕಾಯುತಿಹೆ ಮನೆಯ ಮುಂಬಾಗಿಲಲಿ  
ಬಂದು ಬೇಗನೆ  ಮನಕೆ ಮುದವ ನೀಡು
 
 
3 comments:
Beautiful poem. ವಿರಹಿಣಿಯ ಪ್ರತೀಕ್ಷೆ ಮನವನ್ನು ಆವರಿಸುತ್ತಿದೆ.
kayuvikeya kavalugalu..chendada kavana
kayuvikeya kavalugalu..chendada kavana
Post a Comment