June 24, 2018

ಮುತ್ತೈದೆ ಭಾಗ್ಯ !


"ಗೌರೂ..... "
ಗಂಡ ಅಡುಗೆಮನೆಗೆ ಬಂದು , ಬೆನ್ನ ಹಿಂದೆ ನಿಂತು ಹೀಗೆ ರಾಗ ಎಳೆದರೂ ಅಂದ್ರೆ , ಏನೋ ವಿಶೇಷ ಬೇಡಿಕೆ ಇದೆ ಅನ್ನೋದು ಗೌರಕ್ಕಂಗೆ ಗೊತ್ತಿರೋದೆ !
ಕುಕರ್ ಇಟ್ಟು ಒಲೆಗೆ ಬೆಂಕಿ ಹಚ್ಚುತ್ತಲೇ ಕೇಳಿದ್ರು .. "ಹಂ.. ಏನು ಬೇಡಿಕೆ ರಾಯರದ್ದು ? "
"ಅದೂ ... ಈಗ ತರಂಗ ಓದ್ತಾ ಇದ್ದೆ. ತರಾವರಿ ಬೋಂಡಾ - ಭಜಿ ಎಲ್ಲ ಕೊಟ್ಟಿದ್ರು , ಅದನ್ನ ನೋಡಿ , ನೀನು ಮುಂಚೆ ಮಾಡ್ತಿದ್ಯಲ್ಲಾ , ಗೋಳಿಬಜೆ ಅದು ನೆನಪಾಯ್ತು ...ತಿನ್ನೋಣ ಅನಿಸ್ತಿದೆ ಕಣೆ "
ಗಂಡನ ಕಡೆ ಥಟ್ಟೆಂದು ತಿರುಗಿದ ಗೌರಕ್ಕ ಹುಬ್ಬು ಗಂಟು ಹಾಕಿಕೊಂಡು ಗದರಿದರು " ಮೊನ್ನೆ ಮೊನ್ನೆ ಅಷ್ಟೇ ಜ್ವರ ಬಿಟ್ಟಿದೆ , ಕೆಮ್ಮು ಇನ್ನೂ ಪೂರ್ತಿ ಕಮ್ಮಿ ಆಗಿಲ್ಲ , ನಿಮಗೆ ಗೋಳಿಬಜೆ ಬೇಕ ? ವಯಸ್ಸಾಗಿದೆ ಇಂಥದ್ದೆಲ್ಲ ಕಂಟ್ರೋಲ್ ಮಾಡ್ಬೇಕು ಅಂತ ಮೊನ್ನೆ ಡಾಕ್ಟರ್ ಹೇಳಲಿಲ್ವೆ ? ಆರೋಗ್ಯ ಮುಖ್ಯ ಕಣ್ರೀ . "
"ನಿಜಾ ಕಣೆ ನೀನು ಹೇಳೋದು. .. ಆದ್ರೂ ..."
"ಹ್ಮಂ , ಮೊಮ್ಮಕ್ಕಳು ಸಂಜೆ ಪಕೋಡಾ ಕರಿದು ಕೊಡು ಅಂದಿದಾರೆ , ಈಗ ಮಧ್ಯಾಹ್ನ ನೆ ನಾಲ್ಕು ಮಾಡಿ ನಿಮಗೆ ಕೊಡ್ತೀನಿ. ಆದ್ರೆ ನಾಲ್ಕು ಅಂದ್ರೆ ನಾಲ್ಕೇ . ಮತ್ತೆ ಕೇಳೋ ಹಾಗಿಲ್ಲ . ಗೊತಾಯ್ತ? " ಒಲೆಯತ್ತ ತಿರುಗಿ ಹೇಳಿದರು ಗೌರಕ್ಕ.
" ಸರಿ ಮಹಾತಾಯಿ , ನೀನು ನನ್ ಪ್ಲೇಟ್ ಗೆಹಾಕಿದಷ್ಟನ್ನೇ ತಿಂತೀನಿ . ಮತ್ತೆ ಕೇಳಲ್ಲ. ಈಗ ಪಕೋಡಾ ಮಾಡ್ತೀಯಾ ತಾನೆ ? " ನಗುತ್ತಾ ಕೇಳಿದರು .
ಗೊತ್ತು ಅವರಿಗೆ, ಈಗ ಎಷ್ಟೇ ಹಾರಾಡಿದರೂ ಬಡಿಸುವಾಗ ಮಾತ್ರ ಹೆಂಡತಿ ಎಂದರೆ ಸಾಕ್ಷಾತ್ ಅನ್ನಪೂರ್ಣೆ ಎಂದು.
ಅಂತೂ ಪಕೋಡ ಮಾಡಿಸಿ ಕೊಂಡು ಮಧ್ಯಾಹ್ನ ಜೊತೆಯಲ್ಲಿ ಊಟ ಮಾಡಿ ಎಂದಿನಂತೆ ಸ್ವಲ್ಪ ಹೊತ್ತಿಗೆ ರೂಮಿನಲ್ಲಿ ಮಲಗಿದ ಸದಾಶಿವರು ೪.೩೦ ಆದರೂ ಏಳದಾಗ ಕಾಫೀ ಮಾಡಿ ಕಾಯುತ್ತಿದ್ದ ಗೌರಕ್ಕ ಅವರನ್ನು ಏಳಿಸಲು ಹೋದರು . ಮೆಲ್ಲಗೆ ಮೈ ಮುಟ್ಟಿದವರೇ ಹೌಹಾರಿ ಅಲ್ಲೇ ಕುಸಿದರು . ಹೇಗೋ ಎದ್ದು ನಡುಗುವ ಕೈಗಳಿಂದ ಮಗನಿಗೆ ಫೋನ್ ಮಾಡಿದರು . ಹತ್ತು ನಿಮಿಷಗಳಲ್ಲಿ , ಅಶ್ವಿನಿ ಧಾವಿಸಿ ಬಂದಳು ಮತ್ತರ್ಧ ಗಂಟೆಯಲ್ಲಿ ಮಗನೂ ಬಂದ. ಮನೆ ಶೋಕದ ಬೀಡಾಗಿತ್ತು.
ಹತ್ತು ದಿನಗಳೇ ಕಳೆದು ಹೋದವು ರೂಮಲ್ಲಿ ಭಗವದ್ಗೀತೆ ಓದುತ್ತಾ ಕುಳಿತಿದ್ದ ಗೌರಕ್ಕಂಗೆ ಪಕ್ಕದಲ್ಲೇ ಅಳುವ ಧ್ವನಿ ಕೇಳಿ ಮುಖ ಮೇಲೆತ್ತುವಷ್ಟರಲ್ಲಿ " ಇದೆನಾಯ್ತೆ ಹೀಗೆ " ಎಂದು ಅವರನ್ನಪ್ಪಿ ಕೊಂಡು ಲಕ್ಷ್ಮಿ ಅಳುತ್ತಿದ್ದರು .
ಲಕ್ಷ್ಮಿ , ಗೌರಕ್ಕನ ನಾದಿನಿ . ಎರಡು ವರ್ಷ ಚಿಕ್ಕವಳಾದ್ರೂ ಅವರಿಗೆ ಜೀವದ ಗೆಳತಿಯಾಗಿದ್ದರು .
ಯಾತ್ರೆಗೆ ಹೋಗಿದ್ನಲ್ಲೇ, ಅಲ್ಲಿ ನೆಟ್ವರ್ಕ್ ಇರ್ಲಿಲ್ಲ ಆಮೇಲೆ ಮೊಬೈಲ್ ಕಳೆದುಹೋಗಿ , ಸುದ್ದಿನೇ ಗೊತಾಗಲಿಲ್ಲ ನೋಡು . ಯಾವಾಗ ಮನೆಗೆ ಫೋನ್ ಮಾಡಿದ್ನೋ ಅವಾಗ ಗೊತಾಯ್ತು , ತಕ್ಷಣ ಓಡಿ ಬಂದೆ , ಆದರೂ ಅಣ್ಣನ ಮುಖ ಕೊನೆ ಬಾರಿ ನೋಡೋ ಭಾಗ್ಯ ಇರಲಿಲ್ಲ ಕಣೆ ... ಎನ್ನುತ್ತ ಕಣ್ಣೀರಿಟ್ಟ ನಾದಿನಿಯನ್ನು ಸಮಾಧಾನಿಸಿದರು .
"ಏನೇನು ಯಾವಾಗ ಆಗಬೇಕು ಅಂತ ಇದ್ಯೋ ಅದನ್ನ ತಪ್ಪಿಸೋಕೆ ಆಗಲ್ಲೆ ಲಕ್ಷ್ಮಿ . ಸಮಾಧಾನ ಮಾಡ್ಕೋ. ಎಲ್ಲಾರು ಹೋಗೋದೇ ಅಲ್ವ ಒಂದಿನ ? ಆದ್ರೆ ಒಂದು ಕಣೆ , ದೇವರು ನಮ್ಮಿಬ್ರ ಕೋರಿಕೆನೂ ಪೂರೈಸಿಬಿಟ್ಟ ! ಅದು ನಂಗೆ ಸಮಾಧಾನ . "
ಅರ್ಥವಾಗದೆ ಲಕ್ಷ್ಮಿ ಅತ್ತಿಗೆಯ ಮುಖ ನೋಡಿದಳು .
"ಹ್ಞೂ , ಕಣೆ. ಯಾರಿಗೂ ಹೊರೆ ಆಗದೆ , ಕಷ್ಟ ಕೊಡದೇ ಹೋಗೋ ಅಂತ ಸಾವು ಬರಬೇಕು ಕಣೆ ಅಂತ ನಿಮ್ಮ ಅಣ್ಣ ಯಾವಾಗಲೂ ಹೇಳ್ತಾ ಇದ್ರು. ಹಾಗೆ ಆಯ್ತು. ನಾನು ಕೂಡ , ದೇವರೇ , ಅವರ ಕೊನೆ ಉಸಿರು ಇರೋವರೆಗೂ ನಾನು ಅವರ ಜೊತೆ ಇರೋ ಹಾಗೆ ಮಾಡಪ್ಪ ಅಂತ ಕೇಳ್ಕೋತಾ ಇದ್ದೆ .ಒಟ್ನಲ್ಲಿ ದೇವರು ಇಬ್ರದ್ದೂ ಕೇಳಿಸ್ಕೊಂಡ ." ಮೆಲ್ಲಗೆ ಕಣ್ಣು ಒರೆಸಿಕೊಂಡರು .
ಅಲ್ಲೇ ಕುಳಿತಿದ್ದ ಬೀಗಿತ್ತಿ ಸುನಂದಾ " ಅಯ್ಯೋ , ಹಾಗಂದ್ರೆನೆ ಗೌರತ್ತಿಗೆ ? ಎಲ್ಲರು ಮುತ್ತೈದೆ ಸಾವಿಗೋಸ್ಕರ ಬೇಡ್ಕೊತಾರೆ . ನೀನು ನೋಡಿದ್ರೆ ...... "
" ನಿಜ , ಈಗ ಎರಡು ವರ್ಷಗಳ ಹಿಂದಿನ ವರೆಗೂ ನಾನು ಮುತ್ತೈದೆ ಸಾವು ಬಯಸ್ತಿದ್ದೆ . ಆದರೆ , ಅವರ ಸ್ನೇಹಿತ ಶಂಕರಣ್ಣ ನ ಹೆಂಡತಿ ಸತ್ತೋದ ಮೇಲೆ ಅವರ ಪರಿಸ್ಥಿತಿ ನೋಡಿ ಇವರಿಗೆ ಒಂಥರಾ ಭಯ ಶುರುವಾಯ್ತು . ಶಂಕರಣ್ಣಗೆ ಮರೆವು ಬೇರೆ ಶುರುವಾಗಿತ್ತಲ್ಲ ? ಮಕ್ಕಳು ಅವರನ್ನ ನೋಡ್ಕೋಳೋಕೆ ಕಿರಿ ಕಿರಿ ಮಾಡ್ತಾ ಇದಿದ್ದನ್ನ ನೋಡ್ತಿದ್ರಲ್ಲ ಇವರು , ತುಂಬಾ ಬೇಜಾರು ಮಾಡ್ಕೋತಿದ್ರು . ಇವರಿಗೂ ನಡುವೆ ಸಲ್ಪ ಮರೆವು ಶುರುವಾಯ್ತು ನೋಡು , ಆಗಿಂದ ನನ್ನತ್ರ ಯಾವಾಗಲೂ ಹೇಳೋರು ನೀನು ನನ್ನ ಜೊತೆಗೆ ಇರ್ಬೇಕು ಕಣೆ," ನಂಗೂ ಹೀಗೆಲ್ಲ ಆಗೋದ್ರೆ , ನೀನೇ ನೋಡ್ಕೋಬೇಕು ಅಂತ . ಅಯ್ಯೋ ಯಾಕೆ ಹಾಗೆಲ್ಲ ಅಂತೀರಾ? ನಮ್ ಮಕ್ಕಳು ನಮ್ಮನ್ನ ಚೆನ್ನಾಗೆ ನೋಡ್ಕೋತಾರೆ ಅಂತ ಹೇಳ್ತಿದ್ರು ಅವರಿಗೆ ಸಮಾಧಾನ ಇರಲಿಲ್ಲ . ಏನೇ ಆದ್ರೂ , ನಿನ್ನತ್ರ ಹೇಳ್ಕೊಳೋ ಅಷ್ಟು ಸುಲಭವಾಗಿ ಮಕ್ಕಳತ್ರ ಮಾತಾಡೋಕಾಗತ್ತ ? ಅಂತ . ಒಂಥರಾ ಒಳಗೊಳಗೇ ಭಯ , ಗಾಬರಿ ಅವರಿಗೆ . ಅದನ್ನೆಲ್ಲ ನೋಡಿದ್ಮೇಲೆ ನಂಗೂ ಅನ್ನಿಸ್ತು ಅವರ ಕೊನೆ ಉಸಿರಿನವರೆಗೆ ನಾನು ಅವರ ಜೊತೆಲೇ ಇರ್ಬೇಕು ಅಂತ . ಅವತ್ತಿಂದ ದೇವರತ್ರ ಅದನ್ನೇ ಕೇಳ್ತಾ ಇದ್ದೆ ."
"ಏನೇ ಹೇಳು ಗೌರತ್ತಿಗೆ , ಇದೊಂತರ ಗಂಡನಿಗೆ ನನಗಿಂತ ಮೊದಲೇ ಸಾವು ಕೊಡು ಅಂತ ಕೇಳಿದ ಹಾಗೆ ಅಗ್ಲಿಲ್ವೇನೆ ? ಮೊದಲಿಂದ ನಾವು ಹೆಂಗಸರು ಮುತ್ತೈದೆ ಸಾವು ಕೊಡಪ್ಪಾ ದೇವ್ರೇ ಅಂತ ಕೇಳ್ಕೊಂಡು ಬಂದಿದ್ದು "
"ಅಲ್ಲ ಸುನಂದಾ , ಮೊದಲಿನ ಕಾಲ ಬೇರೆ ಇತ್ತು . ಗಂಡ ಸತ್ತ ಮೇಲೆ ಆ ಹೆಂಗಸಿಗೆ ಗೌರವ ಕೊಡೋರು ಕಮ್ಮಿ ಜನ ಇದ್ರೂ . ನೂರೆಂಟು ಕಷ್ಟ ಅನುಭವಿಸಬೇಕಿತ್ತು . ಅದಕ್ಕೋಸ್ಕರ ಹಾಗೆ ಕೇಳ್ಕೊತಾ ಇದ್ರೇನೋ .
ಈಗ ಹಾಗಿಲ್ವಲ್ಲ ? ಅಷ್ಟಕ್ಕೂ ಇದು ಗಂಡನಿಗೆ ಬೇಗ ಸಾವು ಬರಲಿ ಅಂತಲ್ಲ , ಆದರೆ ಅವನ ಕೊನೆ ಉಸಿರಿನವರೆಗೂ ನಾವು ಜತೆಯಲ್ಲಿರೋಕೆ ಬಯಸಿದಂತೆ ಆಗಲಿಲ್ವ? ಮದುವೇಲಿ ಸಪ್ತಪದಿ ತುಳೀವಾಗ ಜೀವನದ ಪ್ರತಿ ಹೆಜ್ಜೆಲೂ ಜೊತೆಗೆ ಇರ್ತೀನಿ ಅಂತ ವಚನ ಕೊಡ್ತೀವಲ್ವ? ಆಮೇಲೆ ಮುತ್ತೈದೆ ಸಾವು ಬೇಕು ಅಂತ ಕೇಳೋದು ತಪ್ಪಲ್ವ? ಅದು ಸ್ವಾರ್ಥ ಆಗಲ್ವ? ನಾವು ಹೆಂಗಸರು, ಏನೇ ಪರಿಸ್ಥಿತಿ ಬಂದರೂ ಹೇಗೋ ಹೊಂದ್ಕೊಂಡು ಹೋಗ್ತೀವಿ. ಆದರೆ , ಗಂಡಸರಿಗೆ ಅದು ಕಷ್ಟ . ಹೆಂಡತಿ ಹತ್ರ ಸುಖ ದುಃಖ ಹೇಳಿಕೊಂಡ ಹಾಗೆ, ಅದು ಬೇಕು ಇದು ಬೇಕು ಅಂತ ಕೇಳಿದ ಹಾಗೆ , ಹಾಗಾಗ ಬೇಕು ಹೀಗೆ ಬೇಕು ಅಂತೆಲ್ಲ ಜಬರ್ದಸ್ತ್ ಮಾಡಿದ ಹಾಗೆ ಸೊಸೆ ಅಥವಾ ಮಗಳ ಎದುರು ಮಾಡೋಕಾಗಲ್ಲ . ಒಂದು ರೀತಿಯಿಂದ ನೋಡಿದ್ರೆ , ಭಾವನಾತ್ಮಕವಾಗಿ ನಮ್ಮ ಮೇಲೆ ಡಿಪೆಂಡ್ ಆಗಿರ್ತಾರೆನೋ ಅನ್ಸತ್ತೆ .
ಯಾರ ಕಾಲ ಯಾವಾಗ ಮುಗಿಯತ್ತೋ ಅದು ನಮ್ಮ ಕೈಲಿ ಇಲ್ದೆ ಹೋಗಿದ್ದು . ಕೊನೆ ಪಕ್ಷ ಅವರನ್ನ ಒಂಟಿಯಾಗಿಸಿ ನಾನೇ ಮೊದಲು ಪ್ರಪಂಚ ಬಿಟ್ಟು ಹೋಗ್ತೀನಿ ಅಂತ ಬಯಸೋದು ಬೇಡ ಅನಿಸ್ತು ನಂಗೆ . ಇನ್ನು ಚಿಂತೆ ಇಲ್ಲ .
ಯಾವಾಗ ಸಾವು ಬಂದರೂ ನಾನು ರೆಡಿ ಆಗಿದೀನಿ ."
ನಿರಾಳ ದನಿಯಲ್ಲಿ ಹೇಳಿದ ಗೌರಕ್ಕನ ಕಣ್ಣಲ್ಲಿ ಶಾಂತ ಭಾವ ನೆಲೆಸಿತ್ತು .

1 comment:

sunaath said...

ಅಚ್ಚರಿಯಾದರೂ ಕೂಡ, ಗೌರಕ್ಕನ ಮನಸ್ಸು ಅರ್ಥವಾಯಿತು. Amazing story.