August 25, 2018

ಉಳಿದಿದ್ದು " ರೆ " ಗಳಷ್ಟೇ !

ನಾನು ಯಾಜ್ಞಸೇನಿ !  ದ್ರುಪದ ರಾಜನ ಮಗಳಾದ್ದರಿಂದ  ದ್ರೌಪದಿ ಎಂಬ ಹೆಸರಿನಿಂದ  ಸುಪರಿಚಿತಳು .
ಪಾಂಚಾಲ ದೇಶದ ರಾಜಕುಮಾರಿಯಾದ್ದರಿಂದ " ಪಾಂಚಾಲಿ" ಎಂದೂ ಕರೆಯುವರು . 
 ಶ್ಯಾಮಲ ವರ್ಣದ ನನ್ನನ್ನು  " ಕೃಷ್ಣೆ " ಎಂದರು.  ಆ ಬಗ್ಗೆ ನನಗೆ ಬೇಸರವಿಲ್ಲ !  ಆದರೂ ಈ ಎಲ್ಲ  ಹೆಸರುಗಳಲ್ಲಿ  ನನ್ನ ನಿಜವಾದ ಹೆಸರು ನನಗೆ ನೆನಪಿಲ್ಲದಂತಾಗಿದೆ !

ಮಕ್ಕಳಿಲ್ಲ  ಎಂದು  ನೊಂದು  ಗುರುಗಳ ಸಲಹೆಯಂತೆ  ಯಾಗ ಮಾಡಿದಾಗ ಹುಟ್ಟಿದವಳು ನಾನು  ! ನನ್ನೊಂದಿಗೆ ಅಣ್ಣನೂ ಇದ್ದ. ನಮ್ಮಿಬ್ಬರನ್ನೂ ಸರಿಸಮಾನರಾಗಿ ಬೆಳೆಸಿದ ಅಪ್ಪ ದ್ರುಪದ ರಾಜ ! 
ಸ್ವಲ್ಪ ಕಪ್ಪಾದರೂ , ನಾನು ಅತ್ಯಂತ  ಸುಂದರಿ ಎಂದು ಎಲ್ಲರೂ  ಹೇಳುತ್ತಿದ್ದರು . ನನ್ನ ಮುಖದ ತೇಜಸ್ಸು , ಕಣ್ಣಲ್ಲಿನ  ತೀಕ್ಷ್ಣತೆಗೆ  ಬೆರಗಾಗದವರಿಲ್ಲ ! 
ಬಾಲ್ಯದಿಂದಲೂ ಸ್ವಲ್ಪ ಹಟಮಾರಿಯಾಗೆ ಬೆಳೆದವಳು !   ಹೆಣ್ಣು ಮಕ್ಕಳಿಗೆ ಸಹನೆ ಬೇಕು , ಹಠ ಸಲ್ಲ  ಎಂಬ ಅಮ್ಮನ ಮಾತು ನನ್ನ ಕಿವಿಗೆ ಬೀಳುತ್ತಿರಲಿಲ್ಲ!  ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕೆಂಬ ಹಠ ನನ್ನದು  , ಅನ್ಯಾಯವನ್ನು  ಸಹಿಸಲಾರೆ  ಎಂಬ ಧೋರಣೆ ನನ್ನದು ! 

ಯೌವನಕ್ಕೆ ಕಾಲಿಟ್ಟು ಶೋಭಿಸುತ್ತಿರುವ ನನ್ನ  ಮದುವೆಯ ಯೋಚನೆ ಅಪ್ಪನಿಗೆ  ಬರುವುದು ಸಹಜ ! ಅವನ ಮನಸ್ಸಿನಲ್ಲಿ  ಹಸ್ತಿನಾಪುರದ ರಾಜಕುಮಾರ   ಪರಾಕ್ರಮಿ ಅರ್ಜುನ  ತನ್ನ ಅಳಿಯನಾಗಬೇಕೆಂಬ ಬಯಕೆ ಇತ್ತು.  ಆದರೆ  ಪಾಂಡವರ  ಹತ್ಯೆಯ ಸಂಚು ನಡೆದು ಲಾಕ್ಷಾಗೃಹದಲ್ಲಿ  ಹೊತ್ತಿಕೊಂಡ ಅಗ್ನಿಗೆ ಅವರೆಲ್ಲ ಆಹುತಿ ಆದರೆಂಬ  ಸುದ್ದಿ ಕೇಳಿದಾಗಿಂದ ಅಪ್ಪನ ಉತ್ಸಾಹವೇ ಕುಂದಿದ್ದನ್ನು ನಾನು ಕಂಡಿದ್ದೆ . ಆದರೆ , ಕಾಲ ನಿಲ್ಲುವುದಿಲ್ಲ , ಹಾಗೆಯೇ ಕರ್ತವ್ಯವನ್ನು ನಿಲ್ಲಿಸಬಾರದು .

ಅಂತೆಯೇ ಒಂದು ದಿನ   ನನ್ನನ್ನು ಕರೆಸಿಕೊಂಡು  " ಮಗಳೇ , ಇಷ್ಟು ವರ್ಷ ನಿನ್ನ ಆಟೋಟ , ಬೆಳವಣಿಗೆಗಳನ್ನು ಕಂಡು ಸಂತೋಷಪಡುತ್ತಿದ್ದ  ನಮಗೆ  ಈಗ ಬೆಳೆದು ನಿಂತಿರುವ ನಿನ್ನ ಮದುವೆ ಮಾಡುವ ಯೋಚನೆ  ಬಂದಿದೆ .  ಅದಕ್ಕೋಸ್ಕರ "ಸ್ವಯಂವರ" ದ ಏರ್ಪಾಡು ಮಾಡಲು ಹೇಳಿದ್ದೇನೆ ." ಎಂದ .

"ಅಪ್ಪಾ, ನನ್ನನ್ನು ನಿಮಗಿಂತ ಚೆನ್ನಾಗಿ ಬಲ್ಲವರು ಯಾರಿದ್ದಾರೆ? ನನ್ನ  ಗುಣ- ಅವಗುಣಗಳು, ಇಷ್ಟ-ಅ ಇಷ್ಟಗಳು 
ಎಲ್ಲವೂ ನಿಮಗೆ ಸುಪರಿಚಿತ.  ನೀವೇ  ನನಗೊಬ್ಬ ಸೂಕ್ತ ವರನನ್ನು ಹುಡುಕ ಬಲ್ಲಿರಿ . ಆ ನಂಬಿಕೆ ನನಗಿದೆ . ಮತ್ತೆ ಸ್ವಯಂವರವೇಕೆ ?"

"ಹಾಗಲ್ಲ ಮಗಳೇ , ನಿನ್ನಂಥಾ ಕುವರಿಯನ್ನು ಪಡೆದಿದ್ದು ನನ್ನ ಸೌಭಾಗ್ಯ .   ನಿನ್ನನ್ನು ಮದುವೆಯಾಗುವವನೂ ಎಲ್ಲಾ ರೀತಿಯಿಂದ ನಿನಗೆ ಯೋಗ್ಯನಾಗಿರ ಬೇಕೆಂಬುದು ನನ್ನ ಆಸೆ .  ನೀನು ಒಂದು ಪ್ರತಿಷ್ಠಿತ ಸಾಮ್ರಾಜ್ಯದ ಬಲಿಷ್ಠ ರಾಜನ ಮಹಾರಾಣಿ ಆಗಬೇಕೆಂಬುದು ನಮ್ಮ ಬಯಕೆ . ಅದಕ್ಕೆಂದೇ , ಈ ಸ್ವಯಂವರದಲ್ಲಿ  ಒಂದು ಪರೀಕ್ಷೆಯಿಟ್ಟಿದ್ದೇನೆ .  ಮೇಲೆ ತಿರುಗುತ್ತಿರುವ ಚಕ್ರಕ್ಕೆ  ಒಂದು ಮತ್ಸ್ಯವನ್ನು ಕಟ್ಟಿ, ಕೆಳಗಿರುವ ಎಣ್ಣೆಯ ಪಾತ್ರೆಯಲ್ಲಿ ಆ ಮತ್ಸ್ಯದ  ಪ್ರತಿಬಿಂಬವನ್ನು ನೋಡಿ  ತನ್ನ ಬಾಣದಿಂದ  ಅದರ ಕಣ್ಣನ್ನು ಭೇದಿಸಿದವನು ನಿನ್ನನ್ನು ವರಿಸುವನು . "

ಅಪ್ಪನ ಮಾತುಗಳನ್ನು ನಡುವೆಯೇ  ತುಂಡರಿಸಿ ಕೇಳಿದೆ ,  " ಅಪ್ಪಾ , ಸ್ವಯಂವರ ಎಂದರೆ  ನಾನು ಸ್ವತಃ  ವರನನ್ನು ಆರಿಸ ಬೇಕಲ್ಲವೇ?  ಈಗ  ಇದು ಮತ್ಸ್ಯ ಭೇದಿಸಿದವರಿಗೆ  ನಾನು ಬಹುಮಾನವಾಗಿ ಸಿಕ್ಕಂತಾಗಲಿಲ್ಲವೇ? "

ಅಪ್ಪ, ನನ್ನ ಪ್ರಶ್ನೆ ಕಿವಿಗೆ ಬೀಳಲಿಲ್ಲ ಎಂಬಂತೆ ಮುಂದುವರಿಸಿದ . "ಇದು ಅಷ್ಟು ಸುಲಭವಲ್ಲ ಮಗಳೇ ! ಮತ್ಸ್ಯ  ಸದಾ ತಿರುಗುತ್ತಿರುತ್ತದೆ,  ಬಾಣ ಹೂಡುವವನು ಅದನ್ನು ನೇರವಾಗಿ ನೋಡದೆ  ಕೆಳಗಿನ ಪಾತ್ರೆಯಲ್ಲಿರುವ ಪ್ರತಿಬಿಂಬವನ್ನೂ  ನೋಡುತ್ತಾ ಮೇಲಿನ ಮತ್ಸ್ಯಕ್ಕೆ ಗುರಿ ಇಟ್ಟು ಅದರ ಕಣ್ಣನ್ನು ಭೇದಿಸಬೇಕು !!  ತಾಳ್ಮೆ, ವೇಗ, ಲಕ್ಷ್ಯ ,  ಎಲ್ಲವೂ ಆತನಲ್ಲಿರಬೇಕು . ಅಲ್ಲದೆ , ಅಲ್ಲಿ ಇಡುತ್ತಿರುವ  ಧನುಸ್ಸು ಕೂಡ  ಸಾಮಾನ್ಯದ್ದಲ್ಲ !  ಅತ್ಯಂತ ಭಾರವಾದ್ದು . "

ಉತ್ತರ ನನಗೆ   ಸರಿ ಹೋಗಲಿಲ್ಲ " ಅಕಸ್ಮಾತ್  ,  ಇದರಲ್ಲಿ  ಗೆದ್ದವನು ನನಗೆ ಹಿಡಿಸದೇ ಹೋದರೆ?

"ಇಲ್ಲ  ಮಗಳೇ,  ಗೆದ್ದವನನ್ನು ನೀನು ವರಿಸಲೇ ಬೇಕು  ಅದು ನಿಯಮ ! "

"ಅಕಸ್ಮಾತ್,  ಒಬ್ಬರಿಗಿಂತ  ಹೆಚ್ಚು ಜನ  ಯಶಸ್ವಿ ಆದರೆ .... ?  "

 "ಹಾಗಾಗದು ಮಗಳೇ , ನನಗೆ ತಿಳಿದಂತೆ  ಕೇವಲ  ಒಬ್ಬಿಬ್ಬರಷ್ಟೇ  ಈ  ಪಂಥವನ್ನು ಗೆಲ್ಲ ಬಲ್ಲವರು ."
"ಅಕಸ್ಮಾತ್   ಆ ಇಬ್ಬರೂ ಗೆದ್ದರೆ? "  ನನ್ನ ಪ್ರಶ್ನೆಗಳು ಮುಗಿಯುತ್ತಿರಲಿಲ್ಲ 

"ಮಗೂ,  ಮೊದಲು ಯಾರು  ಯಶಸ್ವಿಯಾಗುತ್ತಾರೋ , ಅವರೇ ನಿನ್ನನ್ನು ವರಿಸುವವರು ."

"ಆದರೆ ಅಪ್ಪ, ಅದು  ಅನ್ಯಾಯವಲ್ಲವೇ?  ಇನ್ನೊಬ್ಬ ಸ್ಪರ್ಧಿಗೆ ಅವಕಾಶವನ್ನೇ  ಕೊಡದೆ  ಫಲಿತಾಂಶ  ಘೋಷಿಸುವುದು  ತಪ್ಪಲ್ಲವೇ ?  ಎಲ್ಲಕ್ಕಿಂತ  ಮುಖ್ಯವಾಗಿ  ಇದರಲ್ಲಿ ನನ್ನ ಆಯ್ಕೆಗೆ  ಅವಕಾಶವೇ ಇಲ್ಲದಿರುವಾಗ  ಸ್ವಯಂವರ ಹೇಗಾಗುತ್ತದೆ? "

ಅಪ್ಪ ನ ಹಣೆಯಲ್ಲಿ ನೆರಿಗೆ ಮೂಡಿತು . ಉತ್ತರ ಕೊಡಲು ತಡವರಿಸುವಾಗ .. ಅಷ್ಟೊತ್ತೂ  ಇದನ್ನೆಲ್ಲಾ ಕೇಳುತ್ತಾ ಕುಳಿತಿದ್ದ ಅಮ್ಮ ಸಿಡುಕಿದಳು  .
" ಈಗ ಸ್ವಯಂವರ ಘೋಷಣೆಯ ಆಜ್ಞೆಯಾಗಿದೆ . ನೀನು ತಯಾರಿ ಮಾಡಿಕೊ ಸಾಕು . ಉಳಿದಂತೆ ನಿನ್ನ ಅಭಿಪ್ರಾಯ  ಬೇಕಿಲ್ಲ " ಎಂದಳು.

ಅವಮಾನವಾಗಿ ನಾನು ಅಲ್ಲಿಂದಾ  ಧುಮುಗುಡುತ್ತ ನನ್ನ ಕೋಣೆಗೆ ಹೋದೆ .

ಅಂತೂ ಆ ದಿನ ಬಂದೆ ಬಿಟ್ಟಿತು .  ಹಿಂದಿನ ರಾತ್ರಿಯೆಲ್ಲ ನನಗೆ ನಿದ್ರೆಯಿಲ್ಲ .  ಸ್ವಯಂವರ ಹೆಸರಿಗೆ ಮಾತ್ರ . ಇಲ್ಲಿ ನನಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ ಎಂದು ಮನಸ್ಸು ಕೆರಳುತ್ತಿತ್ತು .   ಬಾಲ್ಯದಲ್ಲಿ ನಾನು ಕೇಳಿದ್ದೆಲ್ಲವನ್ನೂ  ಇಲ್ಲವೆನ್ನದೆ ಕೊಟ್ಟು   ಮುದ್ದು ಮಾಡಿದ  ತಂದೆ-ತಾಯಿ , ಈಗ  ನನ್ನ ಜೀವನದ ಅತ್ಯಂತ ಮಹತ್ವದ  ಹಂತದಲ್ಲೇ ನನಗೆ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸಿದ್ದು ನನಗೆ  ನಂಬಲಾಗುತ್ತಿಲ್ಲ

ಮರುದಿನ ಸಾಲಂಕೃತಳಾಗಿ ಸಭಾಮಂಟಪದಲ್ಲಿ  ನಡೆದು ಬರುವಾಗ ಎಲ್ಲರ ಕಣ್ಣುಗಳೂ ನನ್ನ ಮೇಲಿದ್ದಿದ್ದು  ಕಸಿವಿಸಿ  ತರುತ್ತಿತ್ತು . ರಾಜಕುಮಾರಿಯಾದ ನಾನು ಇಂದು  ಇಲ್ಲಿ  ಪ್ರದರ್ಶನದ ವಸ್ತುವಾದೆ ಎಂಬ ಭಾವನೆಯಿಂದ ಕ್ರುದ್ಧಳಾಗುತ್ತಿದ್ದೆ .  ಎಲ್ಲಾ ಹೆಣ್ಣು ಮಕ್ಕಳಂತೆ  ತಲೆ ತಗ್ಗಿಸಿ ನಾಚುತ್ತಾ  ನಡೆಯುವ ಸ್ವಭಾವ ನನ್ನದಲ್ಲ ! ಅತ್ತಿತ್ತ ಕುಳಿತ ವಿವಾಹಾರ್ಥಿಗಳನ್ನು  ಅಳೆಯುವಂತೆ  ನೋಡುತ್ತಾ  ಗಂಭೀರವಾಗಿ ಮುಂದೆ ಸಾಗಿ  ನನ್ನ ಜಾಗದಲ್ಲಿ ಕುಳಿತವಳನ್ನು ಅಲ್ಲಿ ನೆರೆದ ಎಲ್ಲರ ಕಣ್ಣುಗಳೂ ಹಿಂಬಾಲಿಸುತ್ತಿದ್ದವು . 

ಪಕ್ಕದಲ್ಲಿ ಕುಳಿತ ಸಖಿ ಕುಮುದಿನಿ  ಸಣ್ಣ ದನಿಯಲ್ಲಿ  ಅಲ್ಲಿ ಬಂದಿರುವವರ ಕಿರುಪರಿಚಯ ಮಾಡಿಕೊಡುತ್ತಿದ್ದಳು . 
ಸ್ಥೂಲವಾಗಿ ಅವರನ್ನು ಅವಲೋಕಿಸುತ್ತಿದ್ದೆ. 

ಅನ್ಯ ಮನಸ್ಕಳಾಗಿ  ನನ್ನದೇ ಯೋಚನಾ  ಲಹರಿಯಲ್ಲಿ ಮುಳುಗಿರುವಾಗ , ಅದೆಷ್ಟೋ , ರಾಜರು, ರಾಜಕುಮಾರರು , ಮತ್ಸ್ಯ ಯಂತ್ರ ಭೇದಿಸುವ ಪ್ರಯತ್ನ ಮಾಡಿ  ಸೋತರು . ನನ್ನ ಕಣ್ಣು ಆ ದಿಕ್ಕಿಗಿತ್ತೆ ಹೊರತು ಲಕ್ಷ್ಯವಿರಲಿಲ್ಲ . ಅಷ್ಟರಲ್ಲಿ  ಸಭೆಯಲ್ಲಿ ಗದ್ದಲ ಕೇಳಿ ಅತ್ತ ನೋಡಿದೆ. ಒಬ್ಬ ಸುಧೃಡ  ಸುಂದರ ಯುವಕ ಎದ್ದೇಳುತ್ತಿದ್ದ . ಆದರೆ  ಅತ್ತಿತ್ತಲಿನವರೆಲ್ಲ  ಅಸಮಧಾನ ವ್ಯಕ್ತಪಡಿಸುತ್ತಿದ್ದರು. ಯಾರೋ ಒಬ್ಬರು  ಎಲ್ಲರಿಗೂ ಕೇಳುವಂತೆ " ಕೇವಲ ಕ್ಷತ್ರಿಯ ರಾಜಕುಮಾರರು  ಭಾಗವಹಿಸ ಬಹುದು . ಸೂತರಲ್ಲ ! "  ಎಂದು ಕುಹಕವಾಡಿದರು. ಆತ ಅವಮಾನವಾಗಿ ಕುಳಿತು ಬಿಟ್ಟ .  ಅಲ್ಲಿದ್ದ  ಎಲ್ಲ ರಾಜರುಗಳು ಪ್ರಯತ್ನಿಸಿ ಸೋತರು . ಅಪ್ಪನ ಮುಖದಲ್ಲಿ  ಆತಂಕದ ನೆರಳು ಸುಳಿಯುತ್ತಿತ್ತು.  ಅಲ್ಲೇ ಪಕ್ಕದಲ್ಲಿ ಕುಳಿತಿದ್ದ  ಕೃಷ್ಣ ಮುಗುಳು ನಗುತ್ತಲೇ, ಅಪ್ಪನನ್ನು ಸಮಾಧಾನಿಸುತ್ತಿದ್ದ . 
ಆಗ , ಸ್ವಯಂವರ ನೋಡಲು ನೆರೆದಿದ್ದ  ಬ್ರಾಹ್ಮಣರ ನಡುವೆಯಿಂದ  ಒಬ್ಬ ಎದ್ದೇಳುತ್ತಿದ್ದ . ಕುಮುದಿನಿ  ಅಚ್ಚರಿಯಿಂದ " ರಾಜಕುಮಾರರೆ ಸೋತಿರುವಾಗ ಈ ಬ್ರಾಹ್ಮಣ ಯುವಕ ಏನು ಮಾಡುವನೋ ? " ಎಂದು ಉದ್ಗರಿಸಿದಳು .  ನನಗೂ ಕುತೂಹಲವಾಯ್ತು ! 
ನಾನೊಬ್ಬ ದೊಡ್ಡ ಸಾಮ್ರಾಜ್ಯದ ಮಹಾರಾಣಿ ಆಗಬೇಕೆಂಬ ಅಪ್ಪನ ಇಚ್ಛೆಯನ್ನೂ ನೆನೆಸಿಕೊಂಡೆ !  ಇವನೇನಾದರೂ ಗೆದ್ದರೆ , ಒಬ್ಬ ಬ್ರಾಹ್ಮಣನಿಗೆ ಅಪ್ಪ ಧಾರೆ ಎರೆಯುವನೆ? ಎಂದು  ನೆನೆಸಿಕೊಂಡು , ಮನಸಲ್ಲೇ ನಕ್ಕು ಬಿಟ್ಟೆ. 
ಈ ಯುವಕನ ಮುಖದಲ್ಲಿ ತೇಜಸ್ಸಿತ್ತು ಆದರದು ' ಕ್ಷಾತ್ರ ತೇಜಸ್ಸು " ಎಂದು ನನಗೆ ಎನಿಸಿತು .  ಹೊದ್ದುಕೊಂಡ ಉತ್ತರೀಯವು  ಹರವಾದ ಎದೆ, ಬಲಿಷ್ಠ  ಬಾಹುಗಳು ಮತ್ತು ಅವುಗಳ ಮೇಲಿನ ಗಾಯದ ಕಲೆಗಳನ್ನು ಮರೆಮಾಚಲು ಅಸಫಲವಾಗಿತ್ತು !  ಸಭೆಯಲ್ಲಿ ಪುನಃ ಗಲಿಬಿಲಿ ಶುರುವಾಯಿತು . 
ಗೊಂದಲಗೊಂಡ ಅಪ್ಪನಿಗೆ ಕೃಷ್ಣ  ಕಿವಿಯಲ್ಲಿ ಏನೋ ಉಸುರಿ ಸಮಾಧಾನಿಸಿದ ಮೇಲೆ , ಅಪ್ಪ ಆ ಯುವಕನಿಗೆ ಅನುಮತಿ ಕೊಟ್ಟ. 
ಅವನು ತನ್ನ ಪಕ್ಕದಲ್ಲಿದ್ದ ಇನ್ನಿಬ್ಬರು ಬ್ರಾಹ್ಮಣರಿಗೆ ವಂದಿಸಿ ,  ಯಂತ್ರದ ಬಳಿ ಬಂದ . ಅಲ್ಲಿಂದಲೇ ಅಪ್ಪನಿಗೂ , ಕೃಷ್ಣನಿಗೂ ವಂದಿಸಿದಾಗ , ಮತ್ತೆ ಗುಸು ಗುಸು ಶುರುವಾಯಿತು . 

ಅತ್ತಿತ್ತ ಗಮನ ಕೊಡದೇ ಒಮ್ಮೆ ಧನುಸ್ಸನ್ನೂ, ಮೇಲೆ ತಿರುಗುತ್ತಿರುವ ಮೀನನ್ನೂ ಲಕ್ಷ್ಯಕೊಟ್ಟು ನೋಡಿದ . ನಂತರ ಬಾಗಿ ಬಿಲ್ಲನ್ನೆತ್ತಿಕೊಂಡ .  ಠೀವಿಯಿಂದ ಹೆದೆಯೇರಿಸಿದವನನ್ನು ನೋಡಿ ಸಭೆಯ ಗೊಂದಲ  ಒಮ್ಮೆಲೆ ಶಾಂತವಾಯ್ತು . ಕೆಳಗಿದ್ದ  ತೈಲದ ಪಾತ್ರೆಯಲ್ಲಿ  ಕಾಣುವ ಮತ್ಸ್ಯದ ಪ್ರತಿಬಿಂಬವನ್ನೇ  ತದೇಕ ಚಿತ್ತದಿಂದ ನೋಡುತ್ತಾ  ಗುರಿಯಿಡತೊಡಗಿದ . ಎಲ್ಲರೂ ಈಗ ಉಸಿರು ಬಿಗಿ ಹಿಡಿದು  ಕುತೂಹಲದಿಂದ ನೋಡುತ್ತಿದ್ದರು . ಅವನ ಮುಖದಲ್ಲಿ ಸ್ವಲ್ಪವೂ ಗೊಂದಲ ,ಉದ್ವೇಗ  ಕಾಣುತ್ತಿರಲಿಲ್ಲ !  ನೋಡುತ್ತಿದ್ದ ನನ್ನ ಎದೆ ಬಡಿತ ಹೆಚ್ಚ ತೊಡಗಿತು .

ಅಷ್ಟರಲ್ಲಿ , ಹುರಿಯಿಂದ  ಚಿಮ್ಮಿದ ಬಾಣ  ಮೇಲೆ ತಿರುಗುತ್ತಿದ್ದ  ಮೀನಿನ ಕಣ್ಣನ್ನು  ಭೇದಿಸಿ ಬಿಟ್ಟಿತು !  ಬ್ರಾಹ್ಮಣರ ಸಮೂಹದಿಂದ ಹರ್ಷೋದ್ಗಾರಗಳು  ಕೇಳಿದವು . ಕುಳಿತಿದ್ದ ರಾಜರು, ರಾಜಕುಮಾರರು  ತಮ್ಮ ಕಣ್ಣನ್ನೇ ನಂಬದವರಂತೆ  ಮುಖ ಮುಖ ನೋಡ ತೊಡಗಿದರು . ಕೆಲವರಿಂದ  ಮೆಚ್ಚುಗೆಯ  ಮಾತು ಕೇಳಿತಾದರೂ , ಹೆಚ್ಚಿನವರ ಮುಖದಲ್ಲಿ ಅಸಹನೆ  ಎದ್ದು ತೋರುತ್ತಿತ್ತು .

ಅಪ್ಪನ ಮುಖದ ಲ್ಲಿ ನಿರಾಳ ಭಾವ ತೋರಿದರೂ , ಚಿಂತೆಯ ಸುಳಿಹೂ  ಜೊತೆಯಲ್ಲೇ ಇತ್ತು . ಅಮ್ಮ ನ  ಮುಖದಲ್ಲಿ  ನಿರಾಸೆ , ಆತಂಕವಿತ್ತು .  ಆದರೆ  ಸ್ವಯಂವರದ  ನಿರ್ಧಾರ ಅವರದ್ದೇ  ಆಗಿದ್ದರಿಂದ ಈಗ ಅದರ ನಿಯಮ ಪಾಲಿಸದೆ ಗತ್ಯಂತರವಿಲ್ಲ . 
ಅಪ್ಪನ ಸಂಜ್ಞೆಯ  ಮೇರೆಗೆ , ನಾನು ಮೆಲ್ಲನೆ ಎದ್ದು  ವರಮಾಲೆಯೊಡನೆ ಗೆದ್ದ ಯುವಕನತ್ತ ನಡೆದೆ.  ಮಾಲೆ ಹಾಕಲು ಹೊರಟಾಗ  ಅವನು  ನನ್ನನ್ನು ತಡೆದು , ಅಪ್ಪನತ್ತ  ತಿರುಗಿ  ನಮಸ್ಕರಿಸಿದ .  ಗಂಭೀರವಾದ ದನಿಯಲ್ಲಿ " ಮಹಾರಾಜ , ನಾನು ಉದ್ಧಟ ಎಂದು ಕೊಳ್ಳಬೇಡಿ. ಆದರೆ ನಾನು ವಿಜಯಿಯೇ ಆಗಿದ್ದರೂ  ನಿಮ್ಮ  ಮಗಳನ್ನು ವರಿಸುವ ಮುನ್ನ  ನನ್ನ ತಾಯಿಯ ಅಪ್ಪಣೆ ಕೇಳ ಬಯಸುತ್ತೇನೆ.  ದಯವಿಟ್ಟು ಅನುಮತಿ ನೀಡಿ ." ಎಂದು ವಿನೀತನಾಗಿ  ನುಡಿದ .  
ಆತನ  ಕೋರಿಕೆ ಸಾಧುವೇ ಆಗಿದ್ದರಿಂದ  ಅಪ್ಪನಿಗೆ  ಬೇರೆ  ದಾರಿಯಿರಲಿಲ್ಲ .  " ನಿಮ್ಮ ಮನೆ ಎಲ್ಲಿದೆ  ಎಂದು ತಿಳಿಸಿದರೆ  ಈ ಕ್ಷಣವೇ  ರಥವನ್ನು ಕಳಿಸಿ  ನಿಮ್ಮ ತಾಯಿಯನ್ನು ಗೌರವದಿಂದ ಇಲ್ಲಿ ಕರೆಯಿಸುತ್ತೇನೆ "

ಅಪ್ಪನ ಮಾತಿಗೆ  ಆತ ನಮ್ರನಾಗಿಯೇ . " ಕ್ಷಮಿಸಿ ಮಹಾರಾಜಾ,  ನನ್ನ ತಾಯಿ ಹೊರಗೆಲ್ಲೂ ಬರುವುದಿಲ್ಲ.  ಆದ್ದರಿಂದ ನಾನೇ  ರಾಜಕುಮಾರಿಯನ್ನು ಮನೆಗೆ ಕರೆದೊಯ್ಯುತ್ತೇನೆ. ದಯವಿಟ್ಟು ಕಳಿಸಿಕೊಡಿ  "  ಎಂದ.

ಅಪ್ಪನ ಗೊಂದಲ ಹೆಚ್ಚಿತು.  ಮದುವೆಗೂ ಮುಂಚೆ  ಮಗಳನ್ನೂ ಹೀಗೆ ಪರ ಪುರುಷನೊಂದಿಗೆ ಕಳಿಸುವ  ಪದ್ಧತಿಯಿಲ್ಲ  . "ಅಕಸ್ಮಾತ್ ನಿಮ್ಮ ತಾಯಿ  ಯಾವುದೇ ಕಾರಣದಿಂದ  ಒಪ್ಪದಿದ್ದಲ್ಲಿ...... "

"ಮಹಾರಾಜಾ , ಆ ಬಗ್ಗೆ ಯೋಚನೆ ಬೇಡ. ಅಮ್ಮನ ಅನುಮತಿ ಖಂಡಿತ  ಸಿಗುವುದೆಂಬ ನಂಬಿಕೆ ನನಗಿದೆ. ನೀವು ರಾಜಕುಮಾರಿಯನ್ನು  ಯಾವ  ಸಂಶಯವೂ ಇಲ್ಲದೆ  ಕಳಿಸಿಕೊಡಿ . ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ  ನೋಡಿಕೊಳ್ಳುವ  ಜವಾಬ್ದಾರಿ ನನ್ನದು  ". 

ಅಂತೂ ನಾನು ನನ್ನ ಭಾವೀ ಪತಿಯ ಜೊತೆ ಅವನ  ತಾಯಿಯನ್ನು  ಭೇಟಿಯಾಗಲು ಹೊರಟೆ.  ಇಲ್ಲಿ ನನ್ನನ್ನು ಕೇಳುವವರು ಯಾರೂ ಇರಲಿಲ್ಲ . ಅವರೇ ನಿರ್ಧರಿಸಿದ್ದನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ !
ನನ್ನ ಕೋರಿಕೆಯ ಮೇರೆಗೆ ಕುಮುದಿನಿಯನ್ನೂ ನನ್ನ ಜೊತೆ ಕಳಿಸಲು ಹಾಗೂ ಕರೆದೊಯ್ಯಲು ಅಪ್ಪ ಮತ್ತು  ಆ ಯುವಕ ಒಪ್ಪಿದರು 

ಪಟ್ಟಣದ ಮೂಲೆಯಲ್ಲಿ  ರಥ  ಹೋಗದಷ್ಟು ಚಿಕ್ಕ ಗಲ್ಲಿಯ ಬಳಿ  ಇಳಿದು , ನಾನು  ಯುವಕ  ಹಾಗು ಅವನ ೪ ಸೋದರರೊಂದಿಗೆ  ಮನೆಯತ್ತ ಹೊರಟೆ.  ಗಲ್ಲಿಯ ಎರಡೂ ಕಡೆಯಲ್ಲಿದ್ದ ಮನೆಗಳಿಂದ  ಜನರು  ಹೊರಬಂದು ಕುತೂಹಲದಿಂದ ನೋಡುತ್ತಿದ್ದರು . 
ರಾಜಕುಮಾರಿ  ತಮ್ಮ  ಮನೆಗಳ ಮುಂದೆ  ೪ ಜನ ಬ್ರಾಹ್ಮಣ ಯುವಕರೊಂದಿಗೆ ಕಾಲ್ನಡಿಗೆಯಲ್ಲಿ  ಹೋಗುತ್ತಿರುವುದು ಅವರಿಗೆ ನಂಬಲಾಗುತ್ತಿಲ್ಲ . ನಾನೋ ,  ಮುಜುಗರದಿಂದ  ಕೆಂಪಾಗಿ ನೆಲ ನೋಡುತ್ತಾ ನಡೆಯುತ್ತಿದ್ದೆ . ಎಂದು  ತಲೆ ತಗ್ಗಿಸಿ ನಡೆಯದವಳು ಇಂದು ಹೀಗೆ  ಹೋಗುತ್ತಿರುವುದು ನನಗೆ ನಾನೇ ಅಪರಿಚಿತಳೆನಿಸುತ್ತಿತ್ತು. 

ಅಂತೂ ಆ ರಸ್ತೆಯ  ತುದಿಗಿಂತ ಸ್ವಲ್ಪ ಮುಂಚೆ ಒಂದು ಚಿಕ್ಕ ಮನೆಯೆದುರು  ನಿಂತರು. ಯುವಕ ನನ್ನತ್ತ  ತಿರುಗಿ ,
"ರಾಜಕುಮಾರೀ, ಇದೆ ನಮ್ಮ  ಮನೆ , ಚಿಕ್ಕದೆಂದು ನೊಂದುಕೊಳ್ಳಬೇಡ . ನಿನಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ " ಎಂದ . 
ನಾನು ಏನು ಹೇಳಬೇಕು ಎಂದು ತಿಳಿಯದೇ,  ಮನೆಯೊಳಗೆ ಹೊಕ್ಕ ಆ ಸೋದರರನ್ನು  ಹಿಂಬಾಲಿಸಿದೆ .
ಜಗುಲಿಯಲ್ಲಿ ನಿಂತು  ಅವನು  "  ಅಮ್ಮಾ  , ನೋಡಿಲ್ಲಿ , ನಾನು ಇಂದು ಏನನ್ನು ತಂದಿದ್ದೇನೆ  ! " ಎಂದು  ಹೆಮ್ಮೆಯಿಂದ  ಹೇಳಿದ.
ಅಡುಗೆ ಮನೆಯಲ್ಲಿದ್ದ  ತಾಯಿ ಅಲ್ಲಿಂದಲೇ  ನುಡಿದಳು " ಮಗೂ ,   ಅದೇನೇ ತಂದರೂ   ನೀವು  ಐವರೂ ಸಮನಾಗಿ ಹಂಚಿಕೊಳ್ಳಬೇಕು  ಎಂದು ನಾನು ಯಾವತ್ತೂ ಹೇಳಿರುವೆನಲ್ಲ ! "
ನನಗಾದ ಆಘಾತವನ್ನು  ಹೇಗೆ ವರ್ಣಿಸಲಿ?   ಕುಮುದಿನಿ ಅಂತೂ ಮೂರ್ಚೆ ಹೋದಳು . ಯುವಕನ ಮುಖವೂ  ಬಿಳುಚಿತು.
 ಅವನು  ಇನ್ನೊಮ್ಮೆ " ಅಮ್ಮಾ .. ನೀನೊಮ್ಮೆ ನೋಡು ಬಾ  " ಎಂದ 

ಸೆರಗಿಗೆ ಕೈ ಒರೆಸಿಕೊಳ್ಳುತ್ತಾ  ಹೊರಬಂದ ಆಕೆ  ನನ್ನನ್ನು ನೋಡುತ್ತಲೇ   " ಹೇ ದೇವಾ, ಇದೇನು   ಮಾಡಿಬಿಟ್ಟೆ ನಾನು " ಎಂದು ಉದ್ಗರಿಸುತ್ತಾ  ಬಾಗಿಲನ್ನು ಆಧರಿಸಿ  ಕುಳಿತುಬಿಟ್ಟಳು !  "ಉದ್ದೇಶಪೂರ್ವಕವಾಗಿ  ಹೇಳಿದ್ದಲ್ಲ ಮಗೂ  ಘೋರ ಅಪರಾಧವಾಗಿ ಬಿಟ್ಟಿತು  ನನ್ನಿಂದ" ಎಂದು ನೊಂದುಕೊಂಡಳು.

ಅಷ್ಟರಲ್ಲಿ ಸ್ವಲ್ಪ ಸುಧಾರಿಸಿಕೊಂಡ  ಯುವಕ   " ರಾಜಕುಮಾರಿ,  ನಮ್ಮೆಲ್ಲರನ್ನೂ  ಪರಿಚಯ ಮಾಡಿಕೊಡುತ್ತೇನೆ . 
ಮೊದಲನೆಯದಾಗಿ ನಾವು ವಿಪ್ರರಲ್ಲ !  ಹಸ್ತಿನಾವತಿಯ  ರಾಜ ಪಾಂಡುವಿನ ಪುತ್ರರು . ಈಕೆ ನಮ್ಮ ತಾಯಿ ಕುಂತೀ ದೇವಿ ... "   ಆತ  ಹೇಳುತ್ತಲೇ ಇದ್ದ. ನನಗೆ ತಕ್ಷಣ  ಅವನ್ಯಾರೆಂದು ಹೊಳೆದು  ಎದೆಬಡಿತ ಹೆಚ್ಚಾಯಿತು ! 
ಇವನು ಅರ್ಜುನ !!!  ಅಪ್ಪ ಯಾರು  ತನ್ನ ಅಳಿಯನಾಗಬೇಕೆಂದು ಬಯಸಿದ್ದನೋ , ಅದೇ ಅರ್ಜುನ !  ನಾನೀಗ ಈ  ಮಹಾ ಪರಾಕ್ರಮಿಯ ಪತ್ನಿಯಾಲಿದ್ದೇನೆ ಎಂಬ ಆಲೋಚನೆಯಿಂದಲೇ ಮನಸ್ಸು ಪ್ರಫುಲ್ಲವಾಯಿತು . ಮುಖ ನಾಚಿಕೆ  ಸಂತೋಷದಿಂದ  ಕೆಂಪೇರಿತು .
ಈ ಹೊಸ ಭಾವಗಳಲ್ಲಿ ತೇಲಾಡುತ್ತಿರುವಾಗಲೇ   ಅವನು  ಗಂಭೀರವಾಗಿ ನುಡಿದ  "  ರಾಜಕುಮಾರೀ , ಸ್ವಯಂವರದ ಪ್ರಕಾರ ನಾನು  ಗೆದ್ದರೂ , ಅಮ್ಮನ ಮಾತನ್ನು  ಮೀರಲಾರೆ . ಆದರಿಂದ ನಾವು ಐವರೂ ನಿನ್ನನ್ನು ವರಿಸುತ್ತೇವೆ . "

ನಾನು ಅಪ್ರತಿಭಳಾಗಿ ನಿಂತುಬಿಟ್ಟೆ !  ಅವರೆಲ್ಲರೂ  ವೀರರು , ಬಲಶಾಲಿಗಳು , ಒಬ್ಬ  ಹೆಣ್ಣು ಬಯಸುವ ಎಲ್ಲ  ಸದ್ಗುಣಗಳು ಅವರಲ್ಲಿದ್ದವು. ಹಾಗೆಂದು ಎಲ್ಲರನ್ನೂ ವರಿಸುವುದು  ಸಾಧ್ಯವೇ ? 
ಒಬ್ಬ ರಾಜಕುಮಾರ ಹಲವು ಕನ್ಯೆಯರನ್ನು ಮದುವೆಯಾಗುವುದು ಸಾಧಾರಣ ವಿಷಯ . ಆದರೆ  ಒಬ್ಬ ರಾಜಕುಮಾರಿ , ಹಲವು ರಾಜಕುಮಾರರನ್ನು  ಮದುವೆಯಾಗುವುದು  ಈ ವರೆಗೆ ಕೇಳಿಲ್ಲದ್ದು  .

ಮರಳಿ ಅರಮನೆ ತಲುಪಿದಾಗ ನಾನಿನ್ನೂ ಅಯೋಮಯ ಸ್ಥಿತಿಯಲ್ಲೇ  ಇದ್ದೆ . ಅದಾಗಲೇ  ವಿಷಯ ಅಪ್ಪನನ್ನು ತಲುಪಿತ್ತು . ಗುಪ್ತವಾಗಿ ನಮ್ಮನ್ನು ಹಿಂಬಾಲಿಸಿದ ಅಣ್ಣ ದೃಷ್ಟದ್ಯುಮ್ನ , ಅವರು ಯಾರೆಂಬುದನ್ನು ಅಪ್ಪನಿಗೆ ತಿಳಿಸಿದ್ದ . ಆದರೆ ಮುಂದೆ ನಡೆದಿದ್ದು , ಅವನಿಗೂ ಗೊತ್ತಿರಲಿಲ್ಲ  .

ಅಪ್ಪನೆದುರು ಹಿರಿಯ ಪಾಂಡವ  ಯುಧಿಷ್ಟಿರ  ಮದುವೆಯ ವಿಷಯ ಪ್ರಸ್ತಾಪಿಸಿದಾಗ , ಅಪ್ಪನಿಗೂ ಆಘಾತ ! 
ಹೀಗೆಲ್ಲಾದರೂ ಉಂಟೇ? ಅದಗಾದ ಮಾತು ಎಂದು ಪ್ರತಿಭಟಿಸಿದಾಗ , ಮತ್ತೆ ಸಮಾಧಾನಿಸಿ ಅಪ್ಪನನ್ನು ಒಪ್ಪಿಸಿದ್ದು  ಕೃಷ್ಣ !

 ಮೊದಲಬಾರಿಗೆ  ನಡೆದ ಇಂಥಾ  ಮದುವೆಯಲ್ಲಿ  ನಾನು ಐವರು ಪಾಂಡವರ ಪತ್ನಿಯಾದೆ ! ನನ್ನ ಅಭಿಪ್ರಾಯ ಏನೆಂದು  ಯಾರೂ ಕೇಳಲಿಲ್ಲ. 

ಯಾರೇ ಆಗಲಿ ಹೆಮ್ಮೆ ಪಡುವಂಥ ಐವರು  ಗಂಡಂದಿರನ್ನು ಪಡೆದೂ  ನಾನು ಮುಂದಿನ ಜೀವನವನ್ನ  ವಿವಿಧ ಬಗೆಯ ನೋವು, ಅವಮಾನಗಳಿಂದ   ಕಳೆಯಬೇಕಾಗುವುದೆಂದು ಆಗ ಯಾರಿಗೂ ತಿಳಿದಿರಲಿಲ್ಲ  . ಗೊತ್ತಿದ್ದ ಒಬ್ಬನೇ ಒಬ್ಬ   " ಶ್ರೀ ಕೃಷ್ಣ " ಎಂದಿನಂತೆ  ಮುಗುಳ್ನಗುತ್ತ ಸುಮ್ಮನ್ನಿದು ಬಿಟ್ಟ !

ಅಕಸ್ಮಾತ್,  ಅಂದು  ಕುಂತೀ ದೇವಿ , ತನ್ನ ಆಜ್ಞೆ  ಹೆಣ್ಣಿಗೆ ಅನ್ವಯಿಸುವುದಿಲ್ಲ ,  ಹೆಣ್ಣನ್ನು ಹಂಚಿ ಕೊಳ್ಳುವುದಕ್ಕೆ ತನ್ನ ಸಮ್ಮತಿಯಿಲ್ಲ ಎಂದಿದ್ದರೆ?
ಅರ್ಜುನ  ತಾನು ಗೆದ್ದ  ವಸ್ತು  ತನ್ನದು  ಮಾತ್ರ ಎಂದಿದ್ದರೆ ?  ಅಪ್ಪ ಖಡಾ ಖಂಡಿತವಾಗಿ   ನಿರಾಕರಿಸಿದ್ದರೆ ? 
ಯಾರಾದರೂ ನನ್ನ  ಮನದಲ್ಲೇನಿದೆ ಎಂದು ಕೇಳಿದ್ದರೆ?  .. .

ಕೇವಲ " ರೆ " ಗಳಷ್ಟೇ  ಉಳಿದು ಬಿಟ್ಟವು !

2 comments:

sunaath said...

ಮೂಲ ಮಹಾಭಾರತದಲ್ಲಿ ದ್ರೌಪದಿಯ ಅಂತರಂಗದ ಬಗೆಗೆ ಬರದೇ ಇಲ್ಲ. ನೀವು ಈ ಪ್ರಸಂಗವನ್ನು ಹೊಸ ದೃಷ್ಟಿಯಿಂದ ನೋಡಿ, ನೂತನ ಶೈಲಿಯಲ್ಲಿ ನಿರೂಪಿಸಿದ್ದೀರಿ. ದ್ರೌಪದಿಗೆ ನ್ಯಾಯವನ್ನು ದೊರಕಿಸಿದ್ದೀರಿ. ಕೆಲವರು ಈ ಆಖ್ಯಾನವನ್ನು feminist view poin ಎಂದು ಕರೆಯಬಹುದು. ನಾನು ಹಾಗೆನ್ನುವುದಿಲ್ಲ. ಇದು fair and just thinking ಎನ್ನುವುದು ನನ್ನ ಅಭಿಪ್ರಾಯ.

ಚಿತ್ರಾ said...

ಕಾಕಾ,
ಧನ್ಯವಾದಗಳು . ನಮ್ಮ ಪುರಾಣಗಳಲ್ಲಿನ ಬಹಳಷ್ಟು ಸ್ತ್ರೀಯರ ಕಥೆಗಳು ನನಗೆ ಬೇರೆಯೇ ಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ.ಚಿಕ್ಕವಳಿದ್ದಾಗಿಂದ ಇದು ಹೀಗೆಯೇ ! ನನ್ನ ಪ್ರಶ್ನೆಗಳು, ಅಭಿಪ್ರಾಯಗಳಿಂದಾಗಿ ಅಜ್ಜ-ಅಜ್ಜಿಯರಿಂದ ಬಹಳಷ್ಟು ಶಾಲಾ ಬೈಸಿಕೊಂಡಿದ್ದೇನೆ .
ಒಬ್ಬ ಹೆಣ್ಣಿಗೆ ಸಂಬಂಧಿಸಿದ ವಿಷಯವನ್ನು , ಹೆಣ್ಣಿನ ದೃಷ್ಟಿಯಿಂದ ನೋಡಿ ಅಭಿಪ್ರಾಯ ವ್ಯಕ್ತ ಪಡಿಸಿದಾಕ್ಷಣ " ಫೆಮಿನಿಸ್ಟ್ " ಎಂಬ ಹಣೆಪಟ್ಟಿ ಕಟ್ಟಿ ವಿಚಿತ್ರವಾಗಿ ನೋಡುವ ಬಗೆ ಮಾತ್ರ ನನಗಿನ್ನೂ ಅರ್ಥವಾಗೆ ಇಲ್ಲ !