July 6, 2020

ನಯಾಗರಾ



ಆಗಲೇ ಕತ್ತ ಲು ಮುಸುಕುತ್ತಿತ್ತು . ಸುತ್ತ ಮುತ್ತ ದೀಪಗಳು ಹೊತ್ತಿಕೊಂಡವು . ಬಣ್ಣಬಣ್ಣದ ದೀಪಗಳ ಬೆಳಕಲ್ಲಿ ಧುಮ್ಮಿಕ್ಕುವ ಜಲಪಾತ ಇನ್ನೂ ಸುಂದರವಾಗಿ ಕಾಣುತ್ತಿತ್ತು . ಆಚೆ ಕೆನಡಾ ಬದಿಯಿಂದ ಜಲಪಾತಕ್ಕೆ ಬರುತ್ತಿದ್ದ ಫೋಕಸ್ ಲೈಟ್ ಗಳು, ಆಕಾಶದಲ್ಲಿ ಸಿಡಿಯುತ್ತಿದ್ದ ಪಟಾಕಿಗಳು ಅಲ್ಲೊಂದು ಬೇರೆಯದೇ ಲೋಕ ಸೃಷ್ಟಿ ಮಾಡಿದ್ದವು
 
ನಾನು ಅದೆಷ್ಟು ಹೊತ್ತಿನಿಂದ  ಅಲ್ಲೇ ಕುಳಿತಿದ್ದೆನೋ  ನನಗೆ ಅರಿವಿರಲಿಲ್ಲ . ಕನಿಷ್ಠ ಎರಡು ತಾಸಾದರೂ ಆಗಿರಬೇಕೇನೋ . ಭೋರ್ಗರೆಯುವ , ಧುಮ್ಮಿಕ್ಕುವ  ನೀರನ್ನು ನೋಡುತ್ತಾ ಕುಳಿತರೆ  ಇನ್ಯಾವುದರ ಅರಿವೂ ನನಗಿರುವುದಿಲ್ಲ . ಅದಕ್ಕೆ ಎಲ್ಲರೂ  ಹೇಳುತ್ತಿರುತ್ತಾರೆ  ,  ಹಿಂದಿನ ಜನ್ಮದಲ್ಲಿ ನೀನೆಲ್ಲೋ ಮೀನಾಗಿದ್ದೆ   ಅಂತ . ಸುಮ್ಮನೆ ನಕ್ಕು ಬಿಡುತ್ತೇನೆ ಹೀಗೆಲ್ಲ ಯಾರಾದರೂ ಹೇಳಿದರೆ . 
ಅದು ಸಮುದ್ರವಾಗಿರಲಿ, ಜಲಪಾತವಾಗಿರಲಿ ಅಥವಾ ಹರಿಯುವ ಹೊಳೆಯಾಗಿರಲಿ , ನೀರನ್ನು ನೋಡುತ್ತಾ ಕುಳಿತಿರುವುದು ನನಗೆ ತುಂಬಾ ಪ್ರಿಯವಾದ ಕೆಲಸ .  ಇನ್ನು ಇದಂತೂ  " ನಯಾಗರಾ "  .  ಇದರ ಪಕ್ಕ , ಇದನ್ನೇ ನೋಡುತ್ತಾ  ಜನ್ಮ ಪೂರ್ತಿ ಕುಳಿತೇನು ಎನಿಸುತ್ತಿದೆ. 
ನನ್ನ  ನೀರಿನ ಸೆಳೆತವನ್ನು  ತಮಾಷೆ ಮಾಡುವವರಿಗೆ  ನೀರಿನ ಬಗ್ಗೆ ಏನೂ ಗೊತ್ತಿಲ್ಲ  ಎನ್ನುವುದು ನನ್ನ ಅನಿಸಿಕೆ. ಅವರ ಪಾಲಿಗೆ , ನೀರು  ಬದುಕಿಗೆ  ಅತ್ಯಾವಶ್ಯಕವಾಗಿದ್ದು ಪಂಚಭೂತಗಳಲ್ಲೊಂದು . ಅದಿಲ್ಲದೆ ಬದುಕು ಅಸಾಧ್ಯ . ಅಷ್ಟೇ!
ನನಗೆ ಹಾಗಲ್ಲ . ಇವುಗಳ ಹೊರತಾಗಿ  ನೀರಿಗೆ  ಅದರದೇ ಆದ ವ್ಯಕ್ತಿತ್ವವಿದೆ . ಜೀವವಿದೆ , ನಮ್ಮೆಲ್ಲರಂತೆ ಭಾವನೆಗಳಿವೆ , ಆ  ಬೇರೆ ಬೇರೆ ಭಾವಗಳನ್ನು ವ್ಯಕ್ತಪಡಿಸುವ ರೀತಿಯಿದೆ  .  ಒಂಥರಾ ನೀರು ಕೂಡ ಮನುಷ್ಯರಂತೆಯೇ . 
ಕೆಲವರು  ಸಮುದ್ರದ ಹಾಗೆ . ಸದಾ ಭೋರ್ಗರೆಯುತ್ತಾರೆ.  ಒಡಲಲ್ಲಿ ಏನೂ ಇಟ್ಟುಕೊಳ್ಳದೆ ಹೊರಚೆಲ್ಲಿ ಬಿಡುತ್ತಾರೆ. .  ಮತ್ತೆ ಕೆಲವರು  ಕೆರೆಯಂತೆ .  ಶಾಂತ , ನಿಶ್ಚಲ , ಯಾವ ಅಬ್ಬರವಿಲ್ಲ . ಕೆಲವರು ಸಣ್ಣ ಝರಿಯಂತೆ  ಮೆಲ್ಲಗೆ ತಮ್ಮಷ್ಟಕ್ಕೆ ತಾವು ಸಾಗುತ್ತಾರೆ. ಯಾವ ಧಾವಂತವಿಲ್ಲದೆ. ಮತ್ತೂ ಕೆಲವರು ನದಿಯಂತೆ. ಹೊಂಡದಲ್ಲ್ಲೇಲ್ಲೋ ಹುಟ್ಟಿ ಸಣ್ಣ ಹೊಳೆಯಾಗಿ ಹರಿದು ನಿಧಾನವಾಗಿ ಬೆಳೆಯುತ್ತಾರೆ.ಅಷ್ಟು ದೂರ  ಶಾಂತವಾಗಿ , ಮತ್ತೆ ಕೆಲವೆಡೆ ರಭಸದಿಂದ ಹರಿಯುತ್ತಾರೆ. ಮುಂದೆ ದಾರಿ ಮುಗಿಯಿತು ಅನಿಸಿದರೆ , ಹೆಚ್ಚು ಯೋಚಿಸದೇ  ಪ್ರಪಾತಕ್ಕೆ ಧುಮುಕಿದರೂ ಮತ್ತೆ ಶಾಂತವಾಗಿ  ಮುಂದೆ ಸಾಗಬಲ್ಲಂತವರು . 
ಇವರನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ,ಎಲ್ಲಿ ಯಾವ ರೀತಿ ಮನಸ್ಸು ತಿರುಗುತ್ತದೋ  ತಿಳಿಯದು . 

ನನ್ನ ಈ ರೀತಿಯ ಮಾತುಗಳನ್ನು ಕೇಳಿದಾಗ ಯಾರಿಗೆ ಆಗಲಿ  ನಗು ಬರುವುದು ಸಹಜವೇ ಅಲ್ವ? ಹೀಗೆ ನನ್ನ ಅನಿಸಿಕೆಗಳನ್ನು ಯಾರಲ್ಲಾದರೂ ಹೇಳಿದರೆ , ನನಗೆ ತಲೆ ಕೆಟ್ಟಿದೆ  ಎಂದು ಬಿರುದು ಕೊಡುವುದು ಗ್ಯಾರಂಟಿ.  ಬೇರೆ ಯಾರೋ ಏಕೆ ,  ನನ್ನ ಬೆಸ್ಟ್ ಫ್ರೆಂಡ್ , ಆತ್ಮ ಸಖ ಎಂದು ಅಂದುಕೊಂಡಿದ್ದೇನಲ್ಲ  ,  ಅವನ ಹತ್ತಿರ ಒಮ್ಮೆ ಹೇಳಿದ್ದೆ ಇದೆಲ್ಲ .  ಜೋರಾಗಿ ನಕ್ಕು ಬಿಟ್ಟ. ಆಮೇಲೆ , ಉಪದೇಶ ಮಾಡಿದ . " ನೋಡು , ಇಂಥಾದ್ದೆಲ್ಲಾ ನನ್ನ ಎದುರು ಹೇಳಿದ ಹಾಗೆ ಬೇರೆ ಯಾರ ಎದುರೂ ಹೇಳ ಬೇಡ. ನಿಂಗೆ ಹುಚ್ಚು ಅಂದ್ಕೊತಾರೆ "  ಎಂದವನೇ , ಮತ್ತೆ ನಕ್ಕಿದ್ದ .  
ಬಹುಷಃ  ಅದೇ ಕೊನೆ. ಮತ್ತೆ ಯಾರಲ್ಲೂ  ಇದನ್ನೆಲ್ಲಾ ಹೇಳಿರಲಿಲ್ಲ . ಅವನಲ್ಲೂ  ಹೇಳ ಹೋಗಲಿಲ್ಲ !  ನಾ ಬದಲಾದೆ ಅಂತಲ್ಲ , ಆದರೆ ನನ್ನ ಹಾಗೂ ನೀರಿನ ಅನುಬಂಧವನ್ನು ಯಾರೂ ಗೇಲಿ ಮಾಡುವುದು ನನಗಿಷ್ಟವಿರಲಿಲ್ಲ . 
ಕ್ಷಮಿಸಿ, ಎಲ್ಲಿಂದ ಎಲ್ಲೋ  ಹೋಗಿಬಿಟ್ಟೆ  !

ಹಾಂ , ನನ್ನೆದುರು  ನಯಾಗರಾ ಜಲಪಾತ  ಭೋರ್ಗರೆಯುತ್ತಿತ್ತು.  ಸಣ್ಣಗೆ  ಬೀಸುವ ಗಾಳಿ , ತುಂಬು  ಚಂದ್ರನ ತಂಪು ಕಿರಣಗಳಲ್ಲಿ ತೊಯ್ದ  ನೀರು  ಅಲೌಕಿಕ  ಎನಿಸುತ್ತಿತ್ತು.   ಅಷ್ಟರಲ್ಲಿ ಎದುರಿನ ಕೆನಡಾ  ಬದಿಯಿಂದ ಹಾಕಿದ ಬಣ್ಣ ಬದಲಾಗುವ ಫೋಕಸ್ ಲೈಟ್ ನ ಬೆಳಕಲ್ಲಿ  ಇನ್ನಷ್ಟು ಅದ್ಭುತವಾಗಿ ಕಾಣುತ್ತಿತ್ತು . 
ಆ ಜಲಪಾತದ ಸದ್ದು   ನನ್ನ ಕಿವಿಯಷ್ಟೇ ಅಲ್ಲದೆ ಇಡೀ ನನ್ನನ್ನೇ ಆವರಿಸಿಕೊಳ್ಳ ಬೇಕು , ನನ್ನೊಳಗೆಲ್ಲ ಅದೇ ತುಂಬಿಕೊಳ್ಳಬೇಕು ಎಂಬ ಉತ್ಕಟ ಬಯಕೆ .  
ಅಷ್ಟು ದೂರದಿಂದ ಶಾಂತವಾಗಿ , ಹೊಳೆಯಂತೆ ಹರಿದು ಬಂದ  ಸರೋವರದ ನೀರು  ಒಮ್ಮೆಲೇ ರಭಸದಿಂದ ಪ್ರಪಾತಕ್ಕೆ  ಜಿಗಿಯುವುದು  ಮತ್ತೆ  ಹಾಗೆ ಜಿಗಿದಿದ್ದೆ ಸುಳ್ಳು ಎಂಬಂತೆ   ಹೆಚ್ಚೇನೂ ಹಾರಾಡದೆ ಶಾಂತವಾಗಿ ನದಿಯಾಗಿ  ಮುಂದುವರಿಯುವುದು  ಆ ಕ್ಷಣಕ್ಕೆ ಆಪ್ತವೆನಿಸಿಬಿಟ್ಟಿತು .  ಜಲಪಾತಕ್ಕೂ  ಸ್ವಲ್ಪ ಮೇಲೆ  ಹೋಗಿ ನೋಡಿದರೆ , ಈ ನೀರಲ್ಲಿ ಇಂಥ ರಭಸ, ಶಕ್ತಿ ಇರಬಹುದೇ ಎಂದು ಸಂಶಯ ಬರುವಷ್ಟು ಶಾಂತ ! 


ಚಳಿಗಾಲದಲ್ಲಿ ಹೆಪ್ಪುಗಟ್ಟುವ  ಈ ಜಲಪಾತದ ಮೇಲೆ   ನಡೆಯುವವರೆಷ್ಟು , ಈ ದಂಡೆಯಿಂದ ಆ ದಂಡೆಯ ವರೆಗೂ ಹಗ್ಗ ಕಟ್ಟಿ ಅದರಮೇಲೆ ನಡೆಯುವ  ಹುಚ್ಚರೆಷ್ಟು ...  ಜಲಪಾತದ ತಲೆಯ ಮೇಲಿಂದ  ನೀರಿನ ಜೊತೆಗೆ  ಧುಮುಕುವ ಸಾಹಸಿಗಳೆಷ್ಟು  !
ಇವರಿಗೆಲ್ಲ  ತಮ್ಮ ಸಾಧನೆಯಷ್ಟೇ ಮುಖ್ಯ . ಆದರೆ ಆ ನೀರಿಗೆ ಏನೆನಿಸುತ್ತದೆ ಎಂದು ಯಾರಿಗೂ  ಅರ್ಥವಾಗುವುದಿಲ್ಲ . ಇವಳಿಗೆ ಖಂಡಿತಾ ಹುಚ್ಚು ಅಂತೀರಾ? 

ತಲೆಯಲಿ ಏನೇನೋ ಸಾಗುತ್ತಿದ್ದಾಗ,  ಪಕ್ಕದಲ್ಲಿ  "  Hey , do you mind if I sit here?  "   ಎಂದು ಕೇಳಿತು.  ದನಿ ಬಂದತ್ತ ತಿರುಗಿದೆ . ಸುಮಾರು ನನ್ನಷ್ಟೇ ವಯಸ್ಸಿನ  ಯುವಕನೊಬ್ಬ  ಮುಗುಳ್ನಗುತ್ತ ನಿಂತಿದ್ದ.  Sure !   no need to ask "  ಎಂದೇ. 
ಥ್ಯಾಂಕ್ಸ್ ಹೇಳುತ್ತಾ ಬೆಂಚ್ ನ ಇನ್ನೊಂದು ತುದಿಯಲ್ಲಿ ಕುಳಿತವನು  ಪರಿಚಯ ಮಾಡಿಕೊಂಡ . 
 ಐ ಆಮ್  ಸೆರ್ಜಿಯೋ  !  ಎನ್ನುತ್ತಾ ಬೆಂಚ್ ನ ಇನ್ನೊಂದು ತುದಿಯಲ್ಲಿ ಕುಳಿತ. ಸುಮಾರು ಆರಡಿಗೆ ಹತ್ತಿರವಿರಬಹುದಾದ  ಅವನ ಮುಖ ಅರೆಗತ್ತಲಿನಲ್ಲಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ . 
ನಾನು ಮತ್ತೆ ನೀರಿನತ್ತಲೇ ದೃಷ್ಟಿ ಕೀಲಿಸಿದೆ . 
ಇಂಡಿಯನ್ ? 
ಹ್ಞೂ  
ನಿಮಗೆ ಈ ಜಾಗ ತುಂಬಾ ಇಷ್ಟವೇ?  
ಹಾಂ 
ನನ್ನ ಶಾಂತಿಗೆ ಭಂಗ ಬಂದಂತಾಗಿ ಸಲ್ಪ  ಸಿಡಿಮಿಡಿ ಆಗುತ್ತಿತ್ತು. 
ಅದನ್ನು ಗ್ರಹಿಸಿದನೋ ಎಂಬಂತೆ ಆತ ಹೇಳಿದ . 

ಸಾರಿ, ನಾನು ಬಹುಶಃ ಡಿಸ್ಟರ್ಬ್ ಮಾಡ್ತಾ ಇದಿನೇನೋ .  ಬಹಳ ಹೊತ್ತಿಂದ ನೀವು ಇಲ್ಲಿ ಕೂತಿರೋದನ್ನ ಗಮನಿಸಿದೆ . ಇಲ್ಲಿ ಕೇವಲ ಪ್ರಸಿದ್ಧ ಜಲಪಾತವನ್ನು ನೋಡಲು ಬರುವ , ಅದರ ಮುಂದೆ ಫೋಟೋ ತೆಗೆಸಿಕೊಂಡು  ಹೆಮ್ಮೆಯಿಂದ ಪ್ರದರ್ಶನ ಮಾಡಿಕೊಳ್ಳೋ ಅಂಥಾ ಜನರಿಂದ ನೀವು ಬೇರೆ ಅನಿಸಿತು . ಅದಕ್ಕೆ ಮಾತನಾಡಿಸಿದೆ . ಅಷ್ಟೇ . ನೀವು  ಮಾತನಾಡಲೇ ಬೇಕಾದ  ಅನಿವಾರ್ಯತೆ ಇಲ್ಲ ! 
ಎಂದು ನಕ್ಕ . 

ಅವನ ನೇರ ಮಾತು ಇಷ್ಟವಾಯ್ತು . 
ನನಗೆ ನೀರೆಂದರೆ ತುಂಬಾ ಇಷ್ಟ . ಅದರಲ್ಲೂ  ಇಲ್ಲಿ ಕುಳಿತು ನೋಡ್ತಾ ಇದ್ದರೇ , ಮನಸಿಗೆ ಏನೋ ಶಾಂತಿ ಸಿಗ್ತಿದೆ .  ಇಲ್ಲಿಂದ ಏಳೋಕೆ ಮನಸಾಗ್ತಾ ಇಲ್ಲ. 

ಹಹಹ , ನಾನು ನಿಮ್ಮ ಶಾಂತಿ ಭಂಗ ಮಾಡಿದೆ . ಕ್ಷಮಿಸಿ. 
ನಂಗೆ ಜಲಪಾತಗಳು ತುಂಬಾ ಕುತೂಹಲ ಹುಟ್ಟಿಸುತ್ತವೆ. ನೋಡಿ , ಇಲ್ಲಿಂದ ಮೇಲೆ ಕೆಲವೇ ಮೀಟರ್ ಗಳ  ಅಂತರದಲ್ಲಿ ಎಷ್ಟು ಶಾಂತವಾಗಿ ಹರೀತಿರೋ ಇದನ್ನ ನೋಡಿದರೆ  ಸ್ವಲ್ಪ ಮುಂದೆ ಹೋಗುತ್ತಲೇ , ಅಷ್ಟು ರಭಸ ಹೇಗೆ ಬಂತು ಅನ್ನೋದು ಆಶ್ಚರ್ಯ ಅಲ್ವೇ?   ನಾವೂ ಕೂಡ ಹಾಗೆ ಅಲ್ಲವೇ ? 
ಶಾಂತವಾಗಿರೋ ಕೆಲವರು ಕೆಲವು ಪರಿಸ್ಥಿತಿಯಲ್ಲಿ ಹೇಗೆ ಸಿಡೀತಾರೆ ಅನ್ನೋದನ್ನ ಯೋಚಿಸೋಕು ಸಾಧ್ಯವಿಲ್ಲ ಅಲ್ವೇ? 

ನಾನು ಥಟ್ಟನೆ ಅವನತ್ತ ನೋಡಿದೆ . ನನ್ನದೇ ವಿಚಾರಗಳನ್ನು ಅವನು ಹೇಗೆ ಹೇಳುತ್ತಿದ್ದಾನೆ? ಅಂತ ಅಚ್ಚರಿಯಾಯಿತು . ಆದರೆ ಮಾತನಾಡಲಿಲ್ಲ . 
ಜನರೆಲ್ಲಾ ಹೊರಟು ಪಾರ್ಕ್  ನಿರ್ಜನವಾಗುತ್ತಿತ್ತು . ದೂರದಲ್ಲಿ ಪೊಲೀಸ್ ಒಬ್ಬ ನಮ್ಮತ್ತ ಬರುತ್ತಿರುವುದನ್ನು  ಗಮನಿಸಿ  ಅವನು ಎದ್ದ. ನನ್ನನ್ನೂ ಎಚ್ಚರಿಸಿದ.   
ಇಬ್ಬರೂ  ರಸ್ತೆಯತ್ತ ನಡೆದೆವು . 

"ನೀವು ವಿಂಡ್ ಹ್ಯಾಮ್ ನಲ್ಲಿ ಉಳಕೊಂಡಿದೀರಾ ? "
"ಹೌದು" ... ನಾನು ಅನುಮಾನದಿಂದ ಅವನತ್ತ ನೋಡಿದೆ . 
"ಹೇ, ನಾನೂ ಅಲ್ಲೇ ಉಳಕೊಂಡಿದೀನಿ . ಮಧ್ಯಾನ್ಹ   ಲಾಬಿಯಲ್ಲಿ ನಿಮ್ಮನ್ನ ನೋಡಿದ್ದೇ . ಅದಕ್ಕೆ ಕೇಳಿದ್ದು . ಬೇರೇನಿಲ್ಲ. "
ಇವನೇನು ನನ್ನ ಮನಸ್ಸನ್ನು ಓದಿಬಿಡ್ತಾನಾ  ?  
"ಹೊರಡ್ತಿದೀರಾ ನಾಳೆ? "
"ಇಲ್ಲ . ಇನ್ನು ಒಂದು ದಿನ ಇಲ್ಲೇ ಇರ್ತೀನಿ . "
"ಒಹ್!  ಸರ್ಪ್ರೈಸಿಂಗ್  !  ಸಾಧಾರಣವಾಗಿ ಇಲ್ಲಿ ಬರೋರು ಒಂದು ದಿನಕ್ಕೆ ಹೊರಟು ಬಿಡ್ತಾರೆ ಅಂತ ಕೇಳಿದೀನಿ . "
"ಹಾಗೇನಿಲ್ಲ.  ನಾನು ಬಂದಿದ್ದೆ ಇವತ್ತು ಮಧ್ಯಾನ್ಹ .  ಸಂಜೆ ಹೊತ್ತಿಗೆ ಇಲ್ಲಿ ಬಂದೆ ಅಷ್ಟೇ. ಇನ್ನೂ ಸರಿಯಾಗಿ ನೋಡೇ ಇಲ್ಲ . ನಂಗೆ  ನಯಾಗರ  ಜೀವನದ ಕನಸು. ಹೀಗಾಗಿ , ಒಂದಿಡೀ ದಿನ ಆದರೂ ಇಲ್ಲಿ ಕಳೆಯಬೇಕು . "

ರಸ್ತೆಯನ್ನು ತಲುಪುತ್ತಿದ್ದೆವು . ವ ಕೇಳಿದ   " ಟ್ಯಾಕ್ಸಿ  ಕರೀಲಾ? " 

"ಬೇಡ  ಬೇಡ !  ಎಷ್ಟು ಮಹಾ ದೂರ ಇದೆ ? ನಡಕೊಂಡೆ ಹೋಗ್ತೀನಿ.  ಇಪ್ಪತ್ತು ನಿಮಿಷದಲ್ಲಿ ತಲುಪಬಹುದು . ನೀವು ಬೇಕಿದ್ರೆ .... " 

ಜೋರಾಗಿ ನಕ್ಕು ಬಿಟ್ಟ . "ನನಗೆ  ಗಂಟೆಗಟ್ಟಲೆ ಬೇಕಾದ್ರೂ ನಡೆದು ಅಭ್ಯಾಸವಿದೆ . ನಿನಗೋಸ್ಕರ ಕೇಳಿದ್ದು 
ಅಷ್ಟೇ . ಐ  ಲವ್ ಟು ವಾಕ್  .  ಮಾತಾಡ್ತಾ ಹೋಗಬಹುದು . "

  ಸ್ವಲ್ಪ ಅನುಮಾನಿಸಿದರೂ , ಅವನು ಅಪಾಯಕಾರಿಯಲ್ಲ ಎನಿಸಿ  ಹೆಜ್ಜೆ ಹಾಕ ತೊಡಗಿದೆ . ತಣ್ಣನೆ ಗಾಳಿಗೆ ಕತ್ತಿ ಗೆ ಸುತ್ತಿಕೊಂಡಿದ್ದ ಸ್ಟೋಲ್ ನ್ನು  ಹೊದ್ದುಕೊಂಡೆ.   

"ಅಂದ ಹಾಗೆ ಹೋಟೆಲ್ ನಲ್ಲಿ  ಡಿನ್ನರ್ ಸಿಗೋದು ಕಷ್ಟ.  ಇಲ್ಲೇ  ಏನಾದ್ರು ತಿಂದು ಹೋಗ್ಬಹುದಲ್ಲ ?"

"ನಂಗೆ ಹೆಚ್ಚು ಹಸಿವಿಲ್ಲ. ಸೊ, ಹೋಟೆಲ್ ನಲ್ಲಿ ಕುಳಿತು ಊಟಮಾಡುವ ಇಚ್ಛೆಯಿಲ್ಲ !"
"ತೊಂದರೆ ಇಲ್ಲ  ಇಲ್ಲೇ  ಹತ್ತಿರ ಸಬ್  ವೇ  ಇದೆ . ಸ್ಯಾಂಡ್ ವಿಚ್ ಏನಾದ್ರು ತೊಗೊಬಹುದು. ಮತ್ತೆ  ಅಲ್ಲೇ ಕುಳಿತು ತಿನ್ನ ಬೇಕು ಅಂತೇನಿಲ್ಲ. ನಡೀತಾ ನಡೀತಾ ತಿನ್ನಬಹುದು ."
ಸ್ಯಾಂಡ್ ವಿಚ್ ತಿನ್ನುತ್ತಾ  ಹೋಟೆಲ್ ನತ್ತ  ನಡೆದೆವು 

ಅವನು ಸ್ಪೇಯ್ನ್ ನವನು . ಕ್ಯಾಲಿಫೋರ್ನಿಯಾ ದ  ಕಂಪನಿ ಒಂದರಲ್ಲಿ  ಪ್ರೋಗ್ರಾಮ್ ಬರೆಯುತ್ತಾನೆ . ಫುಟ್ ಬಾಲ್  ಅಂದ್ರೆ ಇಷ್ಟ , ಆಡುತ್ತಾನೆ ಕೂಡ . ನಯಾಗರಕ್ಕೆ  ಎರಡನೆಯ ಭೇಟಿ .  ಈಗ  ಲಾಂಗ್ ವೀಕೆಂಡ್ ಆಗಿದ್ದರಿಂದ  ಬಂದಿದ್ದಾನೆ  ಎಂದು ಮಾತಿನ ನಡುವೆ ತಿಳಿದು ಕೊಂಡೆ . 
ನನ್ನ ಹೆಸರು ನೀರಜಾ  ಎಂದಾಗ , ಅದರ ಅರ್ಥ ಕೇಳಿದವನು  " ವಾಹ್ , ನಿನಗೆ ಸರಿಯಾದ ಹೆಸರು " ಎಂದು ನಕ್ಕ . ಹಾಗೆಯೇ  ಹೆಚ್ಚೇನಲ್ಲದಿದ್ದರೂ ನನ್ನ ಬಗ್ಗೆ  ಬೇಸಿಕ್  ಮಾಹಿತಿ ಕೊಟ್ಟೆ. ೩ ತಿಂಗಳ ಟ್ರೇನಿಂಗಗಾಗಿ  ಸಿಯಾಟಲ್ ಗೆ ಬಂದ  ಬಗ್ಗೆ ,  ಅಲ್ಲೇ ಹತ್ತಿರದಲ್ಲಿರುವ ಅಕ್ಕನ ಮನೆಗೆ ಪ್ರತಿ ವೀಕೆಂಡ್ ಹೋಗುವ ಬಗ್ಗೆ , ಗೆಳತಿಯ  ಜೊತೆ ಪ್ಲಾನ್ ಮಾಡಿದ ಈ ಟ್ರಿಪ್ ,ಅನಿವಾರ್ಯ ಕಾರಣದಿಂದ  ಅವಳು  ಬರಲಾಗದಕ್ಕೆ  ಒಬ್ಬಳೇ ಬರಬೇಕಾಗಿದ್ದು  ಇದಿಷ್ಟನ್ನು ಹೇಳಿದೆ .
ಒಳ್ಳೇದೇ ಆಯಿತು  ಅಂದ . ನೀನು ಫ್ರೆಂಡ್  ಜೊತೆ ಬಂದಿದ್ರೆ  ಹೀಗೆ ಪರಿಚಯ ಆಗ್ತಿರಲಿಲ್ಲ ಅಂದು ನಕ್ಕ .  

ದೀಪಗಳ ಬೆಳಕಲ್ಲಿ ಅವನ ಮುಖ ಚಂದವಾಗಿ ಕಂಡಿತು . ಕೊಂಚವೇ ಅಲೆ  ಅಲೆಯ ಕಪ್ಪು ಕೂದಲು . ತುದಿ ಸ್ವಲ್ಪ ಮೊಂಡಾದ ಉದ್ದ  ಮೂಗು . ಕುರುಚಲು ಗಡ್ಡ ಹಾಗೂ ಮೀಸೆಯ ನಡುವೆ ಅಡಗಿದ ಬಾಯಿ . ಸುಧೃಢ ಮೈಕಟ್ಟು . ಕೈ ತಾಗದಂತೆ ಅಷ್ಟು ದೂರದಲ್ಲೇ   ನಡೆದು ಬರುತ್ತಿದ್ದ . ಅಷ್ಟರಲ್ಲಿ ಹೋಟೆಲ್ ಬಂತು.  ನಮ್ಮ ನಮ್ಮ ರೂಮಿಗೆ ಹೋಗುವಾಗ  ಕೇಳಿದ 
"ನಾಳೆ  ಎಷ್ಟೊತ್ತಿಗೆ  ಹೋಗ್ತೀಯ ಫಾಲ್ಸ್ ಹತ್ತಿರ?   ನಾನು  ಜೊತೆಗೆ ಬರಬಹುದಾ ?"

ಏನು ಹೇಳಬೇಕೋ ತಿಳಿಯಲಿಲ್ಲ . "ನೋಡೋಣ   ಬ್ರೇಕ್ ಫಾಸ್ಟ್   ಹೊತ್ತಲ್ಲಿ  ಸಿಕ್ಕಾಗ ಹೇಳ್ತಿನಿ ."  
"ನೋ ಪ್ರಾಬ್ಲಮ್ . ಅಟ್ ಲೀಸ್ಟ್  ಸಮ್ ಥಿಂಗ್  ಪಾಸಿಟಿವ್ ". ಎಂದು ನಕ್ಕವನು 
buenas noches ! ಎಂದು ಅವನ ರೂಮ್ ನತ್ತ  ನಡೆದ . 

ರೂಮಿಗೆ ಬಂದು ಹಾಸಿಗೆಯ ಮೇಲೆ  ಬಿದ್ದವಳಿಗೆ ಏನೋ ಕಸಿವಿಸಿ .  
ಬ್ರೇಕ್ ಫಾಸ್ಟ್ ಲ್ಲಿ  ಸಿಗ್ತೀನಿ ಅನ್ನೋ ಅರ್ಥದಲ್ಲಿ  ಹೇಳಿಬಿಟ್ಟೆನಾ  ಅಂತ . ಏನು ಮಾಡೋದು  ? ಒಬ್ಬಳೇ ಹೋಗೋದ  ಅವನಿಗೆ ಜೊತೆಗೆ ಬರಲು  ಒಪ್ಪಿಗೆ ಕೊಡೋದಾ ? ಅನ್ನೋ ಗೊಂದಲ . 
ಕೊನೆಗೆ  ನಿಶ್ಚಯಿಸಿದೆ.  ಇಡೀ ದಿನ ಒಬ್ಬಳೇ ಅಲೆಯೋದಕ್ಕಿಂತ  ಮಾತನಾಡಲು ಜೊತೆ ಇರುತ್ತಲ್ಲ  ಎನಿಸಿತು.  ತೀರಾ  ಇರಿಟೇಟಿಂಗ್ ಅನಿಸಿದರೆ , ನೇರವಾಗಿ ಹೇಳಿ ಬಿಡೋದು  ಎಂದು ತೀರ್ಮಾನಿಸಿದೆ. 
ಮನಸ್ಸು  ಹೇಳುತ್ತಿತ್ತು  ಹಾಗೇನೂ ಆಗದು . ಸೆನ್ಸಿಬಲ್ ಇದ್ದಾನೆ ಅವನು  ತೊಂದರೆ ಆಗದು ಅಂತ . 

ಫೋನ್ ಚೆಕ್ ಮಾಡಿದರೆ  ಅಕ್ಕನ ೪-೫ ಮಿಸ್ ಕಾಲ್ ಗಳಿದ್ದವು. ನಾನು ಒಬ್ಬಳೇ ಬರಬೇಕಾದ , ಅಪರಿಚಿತ ಜಾಗದಲ್ಲಿ ಒಬ್ಬಳೇ ಇರಬೇಕಾದ ಬಗ್ಗೆ   ಕಾಳಜಿ ಅವಳಿಗೆ .  ಫೋನ್ ಮಾಡಿ ಇಂದಿನ ರಿಪೋರ್ಟ್ ಕೊಟ್ಟೆ.
 ಅವನು  ಬಗ್ಗೆ ಹೇಳಲಿಲ್ಲ .  ಹೇಳುವ ಅಗತ್ಯವಿಲ್ಲ ಎನಿಸಿತು . 

ಬೆಳಿಗ್ಗೆ   ರೆಡಿಯಾಗಿ ಡೈನಿಂಗ್ ಹಾಲ್  ಗೆ ಬಂದೆ. ತಿಂಡಿಯ ಪ್ಲೇಟ್ ಹಿಡಿದು  ಟೇಬಲ್ ಗಾಗಿ ನೋಡುವಾಗ  ಮೂಲೆಯಲ್ಲಿ ಕುಳಿತ ಅವನು  ಕೈ ಮಾಡಿದ.  
ಗುಡ್ ಮಾರ್ನಿಂಗ್ !  ಅವನೆದುರು ಕುಳಿತುಕೊಳ್ಳುತ್ತಾ ಹೇಳಿದೆ . 

ರೆಡಿ ಆಗ್ಬಿಟ್ಟಿದೀಯಾ ?  ಎಂದು ನಕ್ಕ. 
"ಹ್ಞೂ , ಹೇಳಿದ್ನಲ್ಲ ನಂಗೆ ಎಷ್ಟಾಗತ್ತೋ ಅಷ್ಟು ಹೊತ್ತನ್ನ  ನೀರಿನ ಮುಂದೆ ಕಳೆಯಬೇಕು ಅಂತ ?  ನೀನು ಇನ್ನೂ ಸ್ನಾನನೇ ಮಾಡಿಲ್ಲ ಅನ್ಸತ್ತೆ  !"
"ಅಂದ್ರೆ , ಸ್ನಾನ ಮಾಡಿದ್ರೆ ನಾನು ಬರ ಬಹುದಾ ನಿನ್ ಜೊತೆ ?  " ಮುಂದೆ ಬಾಗಿ ಕಣ್ಣಲಿ ಕಣ್ಣಿಟ್ಟು ಕೇಳಿದ. 
ಅವನು ಕೇಳಿದ ರೀತಿಗೆ  ಮುಜುಗರ ಎನಿಸಿತು .  "ವೆಲ್...   ನನ್ನ ಶಾಂತಿಗೆ   ಭಂಗ ತರೋಲ್ಲ ಅಂದ್ರೆ ... "

ವೊವ್  ! ಕೂಲ್ ! I am honoured ! ಯೋಚನೆ ಮಾಡಬೇಡ . ಡಿಸ್ಟರ್ಬ್ ಮಾಡಲ್ಲ ನಾನು .  ಅರ್ಧ ಗಂಟೆ ಕೊಡು. ತಿಂಡಿ ತಿಂದು ರೆಡಿ ಆಗಿ ಬರ್ತೀನಿ  ಎಂದ . 

ಮುಂದಿನ ಅರ್ಧ ಗಂಟೆಯಲ್ಲಿ ಇಬ್ಬರೂ  ಹೊರಟೆವು. ಹತ್ತಿರವೇ ಇದ್ದುದರಿಂದ ನಡೆದುಕೊಂಡೇ ಹೊರಟೆವು. ಜಲಪಾತದ ಶಬ್ದ ಕೇಳಿಬರುತ್ತಿದ್ದಂತೆ , ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಿದಂತೆ ಭಾಸವಾಗುತ್ತಿತ್ತು.  ಮೊತ್ತ ಮೊದಲ ಬಾರಿಗೆ ಡೇಟ್ ಗೆ ಹೋಗುವ ಹದಿಹರಯದ ಹುಡುಗಿಯಂತೆ ಅನಿಸುತ್ತಿತ್ತು,
ಅವನೂ ಕೂಡ  ವಾವ್ , ಬ್ಯುಟಿಫುಲ್ , ಅಮೇಜಿಂಗ್  ಎನ್ನುತ್ತ ಅದರ ಸೌಂದರ್ಯವನ್ನು ಅನುಭವಿಸುತ್ತಿದ್ದ. ನಯಾಗರ  ಅವನಿಗೂ ಮೋಡಿ ಮಾಡಿತ್ತು . ನನಗಂತೂ ಕೇಳುವುದೇ ಬೇಡ .
ನಾನಿವತ್ತು ನಿನ್ನ ಟೂರ್ ಗೈಡ್ . ನಡಿ  ಎಂದ .
ಸರಿ ಸರಿ. ನೀನು ಯಾವಾಗ್ಲಾದ್ರೂ ಭಾರತಕ್ಕೆ ಬರ್ತೀಯಲ್ಲ ಆಗ ನಾನು ಗೈಡ್ ಆಗ್ತೀನಿ  ಎಂದೆ ನಗುತ್ತಾ  . 
"ನಾನು ೩ ವರ್ಷಗಳ ಹಿಂದೆ ಬಂದಿದ್ದೆ . ಆಗ ನಿನ್ನ ಪರಿಚಯವಿರಲಿಲ್ಲ , ಎಂಥ ಕೆಲಸ ಆಯ್ತು ನೋಡು ! "
ಆಶ್ಚರ್ಯ ನನಗೆ . 
"ಒಹ್ ಹೌದ? ಏನೇನು ನೋಡಿದೆ ? ರಾಜಸ್ಥಾನ್? ತಾಜ್ ಮಹಲ್? ಕೇರಳ? ಸಾಧಾರಣವಾಗಿ ಟೂರಿಸ್ಟ್ಗಳೆಲ್ಲ ತಪ್ಪದೆ ಹೋಗೋ ಜಾಗಗಳು ಇವು . "

"ಹೇಯ್  ಹೋಲ್ಡ್ ಆನ್ !  ಇದರಲ್ಲಿ ತಾಜ್ ಮಹಲ್ ಮಾತ್ರ ಹೋಗಿದೀನಿ. ಉಳಿದಂತೆ  ನಾರ್ಥ್ ಈಸ್ಟ್ ಇಂಡಿಯಾ  ,  ಮಧ್ಯ ಪ್ರದೇಶ  ಸುತ್ತಿದೆ . "

"ಒಹ್ !  ಥಟ್ ಈಸ್ ವಿಯರ್ಡ್ "
"ಹಾಂ , ಎಲ್ಲರೂ ಹಾಗೆ ಅಂತಾರೆ.  ಬಟ್ , ನಾನು ಹೇಳಿದ್ನಲ್ಲ? ನಂಗೆ ಕಾಡುಗಳು , ಜಲಪಾತಗಳು ಇಷ್ಟ ಅಂತ ...  ಅದಕ್ಕೋಸ್ಕರ  ಅಲ್ಲಿ ಹೋಗಿದ್ದು. "
ನಾನು ಆಶ್ಚರ್ಯದಿಂದ ನೋಡುತ್ತಿದ್ದೆ.  
"ನೀನು ದಕ್ಷಿಣ ಭಾರತಕ್ಕೆ  ಬರಲಿಲ್ವ? ಚಂದದ ಜಲಪಾತಗಳು ಇವೆ ನಮ್ಮ ರಾಜ್ಯದಲ್ಲಿ ! "
"ನಾನು ತುಂಬಾ ಪ್ಲಾನ್ ಮಾಡಿರಲಿಲ್ಲ. ನನ್ನ ಸಹೋದ್ಯೋಗಿ  ಕಲ್ಕತ್ತಾದವನು . ಅವನು ಹೇಳಿದ ಜಾಗಗಳಿಗೆ ಹೋಗಿದ್ದೆ.  ಆದರೆ ತುಂಬಾ ಚಂದವಿದೆ ನಿನ್ನ ದೇಶ.  ಮತ್ತೊಮ್ಮೆ ಬರಬೇಕು. ಈ ಸಲ ನೀನು ಹೇಳಿದಲ್ಲಿ" ಎಂದು ನಕ್ಕ. 

"ಖಂಡಿತಾ ! ಯೋಚ್ನೆನೇ  ಮಾಡಬೇಡ. ಆದ್ರೆ ಸದ್ಯ ನಯಾಗರಾ  ನೋಡೋಣ ನಡಿ. "
ಅದೆಷ್ಟೋ ವರ್ಷದ ಸ್ನೇಹಿತರಂತೆ  ಹರಟುತ್ತಾ ನಡೆದೆವು .
 ಗೋಟ್ಸ್ ಐಲ್ಯಾಂಡ್  ನೋಡಿ , ಬ್ರೈಡಲ್ ವೇಲ್ ನ ಬಳಿ  ಕೆಳಗಿಳಿದು ಚಿಮ್ಮುವ ನೀರಹನಿಗಳಲ್ಲಿ  ತೋಯ್ದು  ಮೈಮರೆತೆ.  ಅಮೇರಿಕನ್ ಫಾಲ್ಸ್ ನ್ನು ನೋಡಿ  ಬರುವಷ್ಟರಲ್ಲಿ ಹಸಿವಾಗತೊಡಗಿತು.  ಅಲ್ಲೇ ಇದ್ದ ಚಿಕ್ಕ ರೆಸ್ಟೋರೆಂಟ್ನಲ್ಲಿ  ಪಿಜ್ಝಾ  ತೆಗೆದುಕೊಂಡೆವು .  
 ಆಮೇಲೆ cruise ಹತ್ತಿ ಹಾರ್ಸ್ ಶೂ ಫಾಲ್ಸ್ ನತ್ತ ಹೋಗುವಾಗಂತೂ ನನ್ನ  ಉತ್ಸಾಹ ಮೀರಿತ್ತು.   ರೇಲಿಂಗ್ ನ ಪಕ್ಕದಿಂದ ಅಲುಗಾಡದ ನನ್ನನ್ನು ಅವನೆಷ್ಟೋ  ಬಾರಿ ಕರೆದ , ಸ್ವಲ್ಪ ಹಿಂದೆ ಬಾ , ನೀರು ಸಿಡಿಯುವ ರಭಸಕ್ಕೆ  ಒದ್ದೆ ಆಗಿ ಬಿಡ್ತೀಯ  ಎಂದು ಎಷ್ಟೋ ಸಲ  ಹೇಳುತ್ತಿದ್ದ. ನಾನು ನಿಂತಲ್ಲಿಂದ ಅಲುಗಾಡಲಿಲ್ಲ. ಚಿಕ್ಕ ಮಗುವಿನಂತೆ  ಖುಷಿ ಪಡುತ್ತಿದ್ದ ನನ್ನನ್ನು ನೋಡಿ , ನಿನ್ನ ಗೈಡ್  ಅಲ್ವ ನಾನು ? ನಿನ್ನನ್ನ ಸುರಕ್ಷಿತವಾಗಿ ನೋಡ್ಕೊಳೋದು ನನ್ನ ಜವಾಬ್ದಾರಿ  ನೋಡು ಜೋರಾಗಿ ನಗುತ್ತ ಪಕ್ಕದಲ್ಲಿ ಬಂದು ನಿಂತುಕೊಂಡ !
ಚಿಕ್ಕಚಿಕ್ಕದ್ದನ್ನೂ ಎಂಜಾಯ್ ಮಾಡ್ತೀಯ ನೀನು. ತುಂಬಾ ಇಷ್ಟ ಆದೇ ನಂಗೆ ..  . ನಗುತ್ತಾ ಹೇಳಿದ್ದು  ಆ ಭೋರ್ಗರೆವ ಶಬ್ದ, ಇತರ ಪ್ರವಾಸಿಗಳ ಕೇಕೆಯ ನಡುವೆಯೂ  ಕೇಳಿತು. 
ಹೊಟ್ಟೆಯಲ್ಲಿ ಚಿಟ್ಟೆ  ಹಾರಿದಂತಾಗಿ  ಕಿವಿ ಕೆಂಪಾಯ್ತು   . Cruise  ತಿರುಗಿ ಬರುವಷ್ಟರಲ್ಲಿ ರೈನ್ ಕೋಟ್ ಇದ್ದರೂ  ನಾವು ಪೂರ್ತಿ ಒದ್ದೆಯಾಗಿದ್ದೆವು. 
ನನ್ನ ಮನಸ್ಸು ಸಂತೋಷದಿಂದ ತುಂಬಿತ್ತು. ಅದೆಷ್ಟೋ ಕಾಲದ ಕನಸು  ನನಸಾದ ಸಂಭ್ರಮ . 
ಮೇಲೆ ಬಂದು  , ಹೊಳೆಯಂಚಿಗೆ ನಿಧಾನವಾಗಿ ನಡೆಯತೊಡಗಿದೆವು.   ಆಫೀಸ್, ಕೆಲಸ, ಬಾಸು, ಸಹೋದ್ಯೋಗಿಗಳು, ಊರು, ಮನೆ, ಮನೆಯವರು... ಎಲ್ಲವೂ ನಮ್ಮ ಮಾತಿನಲ್ಲಿ ಭಾಗಗಳಾದವು. ವೀಸಾ ಇಲ್ಲದ ಕಾರಣ  ಕೆನಡಾ ಕಡೆಯಿಂದ ನೋಡಲಾಗದ್ದಕ್ಕೆ ಬೇಸರ ಹಂಚಿಕೊಂಡೆ.  ಅವನೀಗ ಬಹುಕಾಲದ ಪರಿಚಿತನಾಗಿಬಿಟ್ಟಿದ್ದ . ಹರಟಲು  ಮುಜುಗರವೆನಿಸಲಿಲ್ಲ. ಮೆಲ್ಲಗೆ ಸಂಜೆ ಇಣುಕುತ್ತಿದ್ದಂತೆ   ದೀಪಗಳು , ಪಟಾಕಿಗಳು  ಮತ್ತೆ  ದೇವಲೋಕ ಸೃಷ್ಟಿಸುತ್ತಿದ್ದವು.  ಹಿಂದಿನ ದಿನ ಕುಳಿತ ಬೆಂಚ್ ಖಾಲಿ ಇರುವುದು ಕಂಡು ಅತ್ತ ತಿರುಗಿದೆವು. ಅಲ್ಲಿ ಕುಳಿತು ಸ್ವಲ್ಪ ಸಮಯ ಮಾತಿಲ್ಲದೆ  ಬಣ್ಣದ ಬೆಳಕಲ್ಲಿ ದಿವ್ಯವಾಗಿ ಕಾಣುವ ಜಲಪಾತವನ್ನು ನೋಡುತ್ತಾ ಮೈಮರೆತೆವು. ಒಮ್ಮೆಲೇ ಎದ್ದ  ಅವನು ನನ್ನತ್ತ ತಿರುಗಿ " ಬಿಯರ್" ?  ಎಂದ.  ಬೇಡವೆನ್ನುವ ಮನಸಾಗಲಿಲ್ಲ. 
ಹತ್ತು ನಿಮಿಷದಲ್ಲಿ ತಿರುಗಿ ಬಂದವನ  ಕೈಯಲ್ಲಿ ಬಿಯರ್ ಬಾಟಲ್  ಹಾಗೂ  ಬರೀತೋ ಇದ್ದವು . 
ಇದು ಹೊಸಾ ಫ್ರೆಂಡ್ಶಿಪ್ ಗೆ  ಎಂದು ನಗುತ್ತಾ ಚೀಯರ್ಸ್ ಹೇಳಿದ.  ಮಾತಿಲ್ಲದೆ  ತಣ್ಣಗಿನ ಬಿಯರ್ ಹೀರುತ್ತಾ , ಬೆಳದಿಂಗಳ ರಾತ್ರಿಯನ್ನು  ಅನುಭವಿಸುತ್ತಾ ಮೌನವಾಗಿ ಕುಳಿತೆವು. ಇದೆ ಸ್ವರ್ಗ ಎನಿಸತೊಡಗಿತ್ತು ನನಗೆ . 
"ನಿಂಗೆ ಬಾಯ್ ಫ್ರೆಂಡ್ ಇದಾನ? "
ಸಡನ್ನಾಗಿ ಬಂದ ಪ್ರಶ್ನೆಗೆ ಗಲಿಬಿಲಿಯಾದೆ. 
"ಯಾಕೆ? "
"ಹೇ, ಗಾಬರಿ  ಆಗಬೇಡ. ಸುಮ್ನೆ ಕೇಳಿದೆ ಅಷ್ಟೇ. ಅವನೂ ನಿನ್ನ ತರಾನೇ ಪ್ರಕೃತಿ, ನೀರು ನೆಲ ಅಂತೆಲ್ಲ ಇಷ್ಟ ಪಡೋನಾದ್ರೆ ಮಾತ್ರ  ಬದುಕ್ತಾನೆ  ಇಲ್ಲ ಅಂದ್ರೆ ಅಷ್ಟೇ !"  ಚಂದದ  ಹಲ್ಲು ಕಾಣುವ ನಗು !
ನಾನು ಹುಬ್ಬು ಗಂಟು ಹಾಕಿದೆ . 
"ಕೋಪ ಮಾಡ್ಕೋಬೇಡ . ಹೇಳಲೇ ಬೇಕು ಅಂತ ಒತ್ತಾಯ ಇಲ್ಲ ".  ನಕ್ಕು ಬಿಟ್ಟ . 
ನಾಚಿಕೆ  ಆದಂತಾಯಿತು ." ವೆಲ್ ... ಹಾಗೇನಿಲ್ಲ.  ಒಬ್ಬ ಫ್ರೆಂಡ್ ಇದಾನೆ . ತುಂಬಾ ಕ್ಲೋಸ್ ನಾವಿಬ್ರೂ ..  ಬಟ್ , ಬಾಯ್ ಫ್ರೆಂಡ್   ಅಂತ ಹೇಳ್ಕೊಳೋ  ಹಂಗಿಲ್ಲ ಅನ್ಸತ್ತೆ !  ಐ ಆಮ್ ನಾಟ್ ಶ್ಯೂರ್  " ಅದೇಕೋ ಮುಚ್ಚಿಡಬೇಕು ಎನಿಸಲಿಲ್ಲ . 

"ಹ್ಮ್ಮ್..  ಇಂಟರೆಸ್ಟಿಂಗ್! ಕ್ಲೋಸ್  ಅಂತೀಯಾ, ನಾಟ್ ಶ್ಯೂರ್  ಅಂತೀಯಾ .. ಅಷ್ಟಕ್ಕೂ ನಿಮ್ಮ ದೇಶದ  ಸಂಸ್ಕೃತಿ -ಪದ್ಧತಿಗಳು ಗಳು ಸ್ವಲ್ಪ ಬೇರೆ ಅಲ್ವ?  ಹಾಗಂತ ಓದಿದೀನಿ . "
"ಹಾಂ  ವೆಸ್ಟರ್ನ್ ದೇಶಗಳಿಗೆ ಹೋಲಿಸಿದರೆ , ತುಂಬಾನೇ ಬೇರೆ ರೀತಿ ನಮ್ಮದು .  ಅಂದಹಾಗೆ , ನಿಂಗೆ ಗರ್ಲ್ ಫ್ರೆಂಡ್  ಇದಾಳ? ಅಥವಾ ಬಾಯ್ ಫ್ರೆಂಡ್ ?"

"ಹಾಹಾಹಾ ,  ನೋ ಬಾಯ್ ಫ್ರೆಂಡ್ !  ಐ ಆಮ್  ಸ್ಟ್ರೈಟ್ !   ಗರ್ಲ್ ಫ್ರೆಂಡ್ ಇದ್ದಳು. ಅಮೆರಿಕಾದವಳೇ . ಬೇರೆ ಆಗಿ ೪-೫  ತಿಂಗಳಾಯ್ತು. ನನ್ನ ಹುಚ್ಚುಗಳು , ತಿರುಗಾಟ ಎಲ್ಲ ಅವಳಿಗೆ ವಿಚಿತ್ರ ಅನಿಸ್ತಾ ಇತ್ತು . ಇತ್ತೀಚೆ  ಅವಳಿಗೆ ನಾನು ಹೆಚ್ಚು ಸಮಯ ಅವಳ ಜೊತೆ  ಕಳೆಯೋದಿಲ್ಲ ಅಂತ ಅನಿಸ್ತಾ ಇತ್ತು .  ಅದಕ್ಕೆ , ಬೇರೆ ಆಗಿಬಿಟ್ವಿ . ಈಗ ನಾನು ನನ್ನ ಲೈಫ್ ನ ನಂಗೆ ಬೇಕಾದಂಗೆ ಎಂಜಾಯ್ ಮಾಡ್ತಾ ಇದೀನಿ  ನೋಡು ! "

" ಓಹ್ ! ಸಾರಿ !"

"ಸಾರಿ ಯಾಕೆ?  ನಾನು ಖುಷಿಯಾಗೆ ಇದ್ದೀನಿ . ಇಷ್ಟ ಇಲ್ಲದೇ  ವಿಷಯಗಳಲ್ಲಿ ಕಷ್ಟದಿಂದ  ಇರೋದು  ನಂಗೆ ಸೇರಿ ಬರಲ್ಲ . ಅದಕ್ಕೆ ನಿಂಗೆ  ಹೇಳಿದ್ದು ನಿನ್ನ ತರದವನೇ ಆದ್ರೆ ಮಾತ್ರ ಖುಷಿಯಾಗಿರಬಹದು ಅಂತ . ರಿಲೇಷನ್ ಶಿಪ್ ನಲ್ಲಿ  ಎಲ್ಲೋ ಸ್ವಲ್ಪ ಆದ್ರೂ ಸಾಮ್ಯತೆ ಇರಬೇಕು ಅಥವಾ ಜೊತೆಗಾರರ    ಆಸಕ್ತಿಗಳನ್ನು ಗೌರವಿಸುವ , ಅದರ ಜೊತೆ ಸ್ವಲ್ಪ ಆದ್ರೂ  ಹೊಂದಾಣಿಕೆ ಮಾಡಿಕೊಳ್ಳೋ ಮನೋಭಾವ ಆದ್ರೂ ಇರಬೇಕು . ಇಲ್ಲಾ ಅಂದ್ರೆ  ಕಷ್ಟ !"

ಅವನತ್ತ ನೋಡಿದೆ . ಅವನು ಆಚೆಯೆಲ್ಲೋ  ನೋಡುತ್ತಿದ್ದ. ಆ ಕ್ಷಣ  ಅವನು ತುಂಬಾ ಇಷ್ಟವಾಗಿ , ಹತ್ತಿರ ಸರಿದು ಕೈ ಹಿಡಿದುಕೊಳ್ಳ ಬೇಕೆನಿಸಿದ  ಬಲವಾದ ಆಸೆಯನ್ನು  ಹೇಗೋ ತಡೆದುಕೊಂಡೆ  . 
ಆ ಅಲೌಕಿಕ  ಪರಿಸರಕ್ಕೋ , ಕುಡಿಯುತ್ತಿದ್ದ ಬಿಯರ್ ನ ಪ್ರಭಾವವೋ , ಮೋಡಿಗೊಳಿಸುತ್ತಿದ್ದ ಜಲಪಾತದ ಸನ್ನಿಧಿಯೋ  ತಿಳಿಯದೆ ಗಲಿಬಿಲಿ ಯಾಯಿತು . ಹಾಗೆ ನನ್ನ ಆಲೋಚನೆಯ ಬಗ್ಗೆ ನಾಚಿಕೆಯೂ ಆಯಿತು. 
ಮತ್ತದೆಷ್ಟೋ ಹೊತ್ತು ಹಾಗೆ ಕುಳಿತಿದ್ದೆವು. ನಡು ನಡುವೆ ಒಂದೆರಡು ಮಾತು,  ಹೆಚ್ಚು ಮೌನ !

ಹೋಟೆಲ್ ನತ್ತ  ಮರಳುವಾಗ  ರಾತ್ರಿಯಾಗಿತ್ತು. 
ಸಣ್ಣ ಚಳಿಯಿತ್ತು , ಅಪರೂಪಕ್ಕೆ ಕುಡಿದ ಬಿಯರ್ ನ ಜೂಮ್  ಸ್ವಲ್ಪ ಇತ್ತು . 
"ನಾಳೆ ಎಷ್ಟು  ಗಂಟೆಗೆ  ಹೋಗೋದು ನೀನು ? " ಕೇಳಿದ ಅವನು. 

"ಫ್ಲೈಟ್ ಇರೋದು ಒಂದೂವರೆಗೆ. ಬಹುಶಃ ಒಂಭತ್ತೂವರೆ ಅಥವಾ ಹತ್ತಕ್ಕೆ ಹೊರಟರೆ ಸರಿ ಆಗಬಹುದೇನೋ . ಟ್ಯಾಕ್ಸಿ ಬುಕ್ ಮಾಡ್ಬೇಕು ." 

"ಹೇ , ಟ್ಯಾಕ್ಸಿ ಯಾಕೆ? ನಾನೂ ನಾಳೇನೇ ಹೊರಡ್ತಿದೀನಿ . ನಾನು ಕಾರ್ ರೆಂಟ್ ಮಾಡಿದೀನಿ .   ಒಟ್ಟಿಗೆ ಹೋದರಾಯ್ತು.  ಆಗಬಹುದಾ? "

"ನಿಂಗ್ಯಾಕೆ ತೊಂದ್ರೆ ?"  ಸಂಕೋಚವೆನಿಸಿತು . 

"ತೊಂದ್ರೆ ಏನು? ಹೇಗೂ ನಾನೂ ಹೋಗ್ಬೇಕು , ಕಾರ್ ಅಲ್ಲಿ ಒಬ್ಬನೇ. ಸೊ , ನಿಂಗಾಗೋ ಅಷ್ಟು   ಜಾಗ ಇದೆ . ಜಾಸ್ತಿ ಯೋಚನೆ ಮಾಡ್ಬೇಡ.   ಸ್ನೇಹಿತ ಅಂತ  ಅಂದ್ಕೊಂಡಿದ್ರೆ .... ಹಕ್ಕಿನಿಂದ ಬಾ !"

ಮರುದಿನ ಬೆಳಿಗ್ಗೆ ಹತ್ತಕ್ಕೆ ಹೋಟೆಲ್ ನಿಂದ ಹೊರಟೆವು .  ನಯಾಗಾರವನ್ನು  ಮತ್ತೊಮ್ಮೆ ನೆನೆಸಿಕೊಳ್ಳುತ್ತಾ , ಏನೇನೋ ಹರಟುತ್ತಾ  ದಾರಿ ಕಳೆಯುತ್ತಿತ್ತು . 
ಬಫೆಲೊ ವಿಮಾನ ನಿಲ್ದಾಣ ಹತ್ತಿರವಾಗುತ್ತಿದ್ದಂತೆ ,  ಏಕೋ  ಇಬ್ಬರೂ ಮೌನವಾದೆವು .  ಮತ್ತೆ ಸ್ವಲ್ಪ ಹೊತ್ತಿಗೆ  ಮೌನ ಅಸಹನೀಯವೆನಿಸಿ  ಬಲವಂತದಿಂದ ಶಬ್ದಗಳನ್ನು ಹುಡುಕಿದೆವು . 
 ನಿಲ್ದಾಣದೆದುರು ಕಾರ್ ವಾಪಸ್ ಮಾಡಿ ಒಳಹೊಕ್ಕೆವು . ಪುಟ್ಟ ಏರ್ ಪೋರ್ಟ್ ನಲ್ಲಿ ಹೆಚ್ಚು ಜನರಿರಲಿಲ್ಲ . ಒಳ ಹೊಕ್ಕು  ಕುಳಿತಾಗ  ಕೇಳಿದೆ , ನಿನ್ನ  ಫ್ಲೈಟ್ ಎಷ್ಟೊತ್ತಿಗೆ ಅಂತಾನೆ ಕೇಳಿಲ್ಲ ನೋಡು  !
"ತುಂಬಾ ಹೊತ್ತಿದೆ ಬಿಡು . ಸಂಜೆ ೭ ಕ್ಕೆ  ನನ್ನ ಫ್ಲೈಟ್ !"
"ಮತ್ತೆ ಆರಾಮಾಗಿ ಬರಬಹುದಿತ್ತಲ್ಲ ನೀನು ? " ನನಗೇಕೋ ಕಸಿವಿಸಿ ಆಯಿತು  
"ಅಯ್ಯೋ ಹೋಟೆಲ್ ನಲ್ಲಿ ಇದ್ದಾದರೂ ಏನ್ ಮಾಡೋದು?  ಮಾತಾಡೋಕೆ ಕಂಪನಿ ಸಿಗತ್ತಲ್ಲ ಅಂತ ಬಂದ್ಬಿಟ್ಟೆ ! "
  ಹಣೆ ಚಚ್ಚಿಕೊಂಡೆ .   
"ನೋಡು ನೀನಾದ್ರೂ ಒಬ್ಬಳೇ ಕೂತು ಬೋರ್ ಆಗ್ತಿದ್ದೆ ಅಲ್ವ? ಈಗ  ಜೊತೇಲಿ ನಾನಿದೀನಿ  ಹರಟೋದಕ್ಕೆ . ಮತ್ತೆ ಸಿಗ್ತಿವೋ ಇಲ್ವೋ. ನೀನು ನೆನಪಿಟಗೊತೀಯೋ ಇಲ್ವೋ .. ಅದಕ್ಕೇ ... "
ಅವನು ಸೀರಿಯಸ್ ಆಗಿ ಹೇಳ್ತಿದಾನ ತಮಾಷೆಗಾ  ಅವನ ಮುಖ ಭಾವದಲ್ಲಿ ಅರ್ಥವಾಗಲಿಲ್ಲ . 

ಅನೌನ್ಸ್ಮೆಂಟ್ ಗೆ ಕಾಯುತ್ತಾ ಕಾಫೀ ಕುಡಿದೆವು. 
"ಏನೇನೂ ರುಚಿ ಇಲ್ಲದ ನೀರು ಕಾಫೀಗೆ  ಒಂದು ದಿನದ ಸಂಬಳ ಕೊಡಬೇಕು ನೋಡು ಏರ್ಪೋರ್ಟ್ ಲ್ಲಿ "  ಅಂತ ನಕ್ಕ . 

ಕೊನೆಗೊಮ್ಮೆ  ಫ್ಲೈಟ್  ಅನೌನ್ಸ್ ಆಯ್ತು .  ಬ್ಯಾಗನ್ನು  ಹೆಗಲಿಗೇರಿಸಿ ಎದ್ದು ನಿಂತೇ . 
"ಸೋ ? ಸೆರ್ಜಿ, ನೀ ಭೇಟಿಯಾಗಿದ್ದು  ಖುಷಿಯಾಯ್ತು . ಇಂಡಿಯಾಕ್ಕೆ ಬರೋವಾಗ ಹೇಳು.  ಗೈಡ್ ಆಗ್ತೀನಿ ಅಂತ ಮಾತು ಕೊಟ್ಟಿದೀನಲ್ಲ ?" ಕಿಚಾಯಿಸಿದೆ . 

"ನಂಗೂ ಖುಷಿ ಆಯಿತು ನಿನ್ನ ಭೇಟಿ.  ಇಂಡಿಯಾಕ್ಕೆ ಬರೋವಾಗ ಹೇಳು ಅಂತೀಯಾ  ಕೊನೆ ಪಕ್ಷ ನಿನ್ನ  ಈ ಮೇಲ್ ಆದ್ರೂ ಕೊಟ್ಟಿದೀಯಾ  ? ಹಹಹ "  ಮತ್ತೆ  ಸಡನ್ ಆಗಿ  ಸೀರಿಯಸ್ ಆದವನು 

"ನೀರಜಾ, ಕೆಲವು ಮಾತು ಹೇಳಲಾ? ಇಂಪಲ್ಸಿವ್  ಹಾಗೂ ಅಷ್ಟೇ ಸೆನ್ಸಿಟಿವ್ ಹುಡುಗಿ ನೀನು ! ನೀನು ಕೂಡ  ನದಿಯ ಹಾಗೆ ಅಂತ ನನಗನಿಸತ್ತೆ . ಸ್ವಲ್ಪ ಶಾಂತ , ಸ್ವಲ್ಪ ಅಬ್ಬರ,  ಆಳ, ವೇಗ  ಎಲ್ಲವೂ ನಿನ್ನಲ್ಲಿದೆ.  ನಿನ್ನ ಜೊತೆಗಾರನನ್ನು ಆಯ್ಕೆ ಮಾಡೋವಾಗ ನಿನ್ನ ಹರಿವಿಗೆ ಅಡ್ಡ ಆಗದೆ ಇರೋ ಅಂಥವನನ್ನು ಹುಡುಕು . ಇಲ್ಲ ಅಂದರೆ , ಇಬ್ಬರಿಗೂ ಕಷ್ಟ . ಒಂದೋ ನಿನ್ನ ಹರಿವು ಸಣ್ಣದಾಗಬಹುದು ಅಥವಾ  ಒಡ್ಡನ್ನು ಕೊಚ್ಚಿಕೊಂಡು ಹೋಗಿಬಿಡಬಹುದು. ಎರಡೂ ನೋವು ಕೊಡೊ ಅಂಥಾದ್ದು. 
ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ನನಗೆ ನೀನು ಇಷ್ಟವಾಗಿದೀಯಾ. ಕೇವಲ ಎರಡೇ ದಿನಗಳ ಹಿಂದೆ ನಾವು ಅಪರಿಚಿತರಾಗಿದ್ದೆವು ಅಂತ ನನಗೆ ಅನಿಸ್ತಾನೇ ಇಲ್ಲ. 
ತುಂಬಾ ವರ್ಷದ  ಗೆಳೆತನ ಇರೋ ತರಾ ಅನಿಸ್ತಿದೆ. ಗಾಬರಿ ಆಗ್ಬೇಡ. ನನ್ನ ಜೊತೆಗಾತಿ ಆಗ್ತೀಯಾ ಅಂತ ಕೇಳೋವಷ್ಟು ನಾವಿಬ್ಬರೂ ಹತ್ತಿರವಾಗಿಲ್ಲ.  ಆದರೆ ಆಗಬಾರದೂ   ಅಂತಾನೂ ಇಲ್ಲ  ! ನಿನ್ನ ಫೋನ್ ನಂಬರ್ ಕೊಡು ಅಂತ ಕೇಳ್ತಿಲ್ಲ.  ಯಾಕೆಂದ್ರೆ , ನೀನು ನನ್ನ ಬಗ್ಗೆ ಏನಂದ್ಕೊತಾ ಇದ್ದೀಯ , ಈ ಗೆಳೆತನದ ಬಗ್ಗೆ ನಿನ್ನ ಅನಿಸಿಕೆ ಏನು ಅಂತ ನಂಗಿನ್ನೂ ಗೊತ್ತಿಲ್ಲ.ಆದರೆ  ನನಗೇಕೋ ನಿನ್ನ ಸ್ನೇಹ ಆಪ್ತವಾಗುತ್ತಿದೆ.  ಇದು ನನ್ ಬಿಸಿನೆಸ್  ಕಾರ್ಡ್.  ನಿಂಗೆ ನನ್ನ ಕಾಂಟಾಕ್ಟ್ ಮಾಡ್ಬೇಕು ಅಂತ ಅನಿಸಿದ್ರೆ   ನನ್ನ ನಂಬರ್ , ಈ-ಮೇಲ್  ಇದರಲ್ಲಿದೆ. ಮಾಡ್ಬೇಕೊ ಬೇಡವೋ ಅನ್ನೋದು ನಿಂಗೆ ಬಿಟ್ಟಿದ್ದು.  ಆದರೆ .. ನಾನು ಚಿಕ್ಕ ಆಸೆಯೊಂದಿಗೆ ಕಾಯ್ತೀನಿ. Adios amiga !! "

ಮಳೆ ಸುರಿದಂತೆ  ಮಾತಾಡಿ ಒಂದು ಚಿಕ್ಕ ಹಗ್  ಮಾಡಿ ನಡೆದುಬಿಟ್ಟ . ಅಷ್ಟು  ದೂರ ಹೋದವನು ಹಿಂತಿರುಗಿ  ಕೈ ಆಡಿಸಿ ಆಗಷ್ಟೇ ಬಂದಿಳಿದ  ನೂರಾರು ಪ್ರಯಾಣಿಕರ ನಡುವೆ ಕಳೆದುಹೋದ . 
ನನಗೆ ಏನೋ ಅಯೋಮಯ . ಕಸಿವಿಸಿ , ಏನಾಗ್ತಾ ಇದೆ  ಅನ್ನೋ ತಳಮಳ . ಬಫೆಲೊದಿಂದ ಚಿಕಾಗೋ ಗೆ ಬಂದು  ಅಲ್ಲಿಂದ ಸಿಯಾಟಲ್  ತಲುಪುವ ಊದ್ದಾ  ಪ್ರಯಾಣದಲ್ಲಿ ಅಷ್ಟೇ  ಗಾಢವಾಗಿ ಅವನು ಕಾಡತೊಡಗಿದ. ರೂಮು ತಲುಪಿದವಳೇ ಸ್ವಲ್ಪ ಫ್ರೆಶ್ ಆಗಿ ಮಲಗಿಬಿಟ್ಟೆ. ಅನಿಕೇತ್ ಜೊತೆ ಮಾತಾಡಲೇ ಎನಿಸಿತು.  ಆದರೆ ಅವನಿಗೆ ಏನು ಅಂತ ಹೇಳಲಿ? ನಕ್ಕು ಬಿಡ್ತಾನಷ್ಟೇ . ನಿಂಗೆ ತಲೆ ಇಲ್ಲ ಕಣೆ ಅಂತ  ಯಾರೋ ಏನೋ , ಹಿಂದೆ ಮುಂದೆ ಗೊತ್ತಿಲ್ಲ , ಬೇರೆ ಯಾವುದೋ ದೇಶದವನು ಯಾಕೆ ಜಾಸ್ತಿ ಮಾತಾಡೋಕೆ ಹೋದೆ ಅಂತ . ನನಗೂ ಹಾಗನಿಸುತ್ತಿರಲಿಲ್ಲವೇ?  ಆದರೆ ಕೆಲವರು ನಮ್ಮ ಹೃದಯ ತಟ್ಟಲು  ಕೆಲವೇ ಕ್ಷಣಗಳು ಸಾಕು.  ಕೆಲವರು ವರ್ಷಗಳಿಂದ ಜೊತೆಯಲ್ಲಿದ್ದರೂ ಅಪರಿಚಿತರಾಗಿಬಿಡುತ್ತಾರೆ. ಅಷ್ಟಕ್ಕೂ  ಸ್ನೇಹಕ್ಕೇನಡ್ಡಿ ?  
ಮತ್ತೆ ಜೀವನ ಹೇಗೆ  ಕರೆದುಕೊಂಡು ಹೋಗತ್ತೋ ಹಾಗೆ ಹರಿದು ಹೋಗಿಬಿಡೋದು ಅಂತ ನಿಶ್ಚಯಿಸಿದೆ. 

ಎರಡು ದಿನ ಗೊಂದಲದಲ್ಲೇ ಕಳೆಯಿತು. ಅವನು ಕಾಡುತ್ತಲೇ ಇದ್ದ .  ಇನ್ನೊಂದು ಹತ್ತು  ದಿನದಲ್ಲಿ  ಭಾರತಕ್ಕೆ ವಾಪಸ್ ಆಗಬೇಕು . ಹೊಟ್ಟೆಯಲ್ಲಿ ವಿಚಿತ್ರ ತಳಮಳ . 
ಮತ್ತೆ ಹತ್ತು ದಿನಗಳಲ್ಲಿ ಭಾರತಕ್ಕೆ ವಾಪಾಸಾದೆ. ನಂತರದ ಕೆಲವು ದಿನಗಳು , ಕುಟುಂಬದವರ ಜೊತೆ , ಸ್ನೇಹಿತರ ಜೊತೆ ಕಳೆಯಿತು .  ಆದರೆ  ಸೆರ್ಜಿ  ನನ್ನ ನೆನಪಲಿ ಕಾಡುತ್ತಿದ್ದ . ಅನಿಕೇತ್ ಗೆ ಹೇಳಲಾ ಎಂದುಕೊಂಡವಳು ಮತ್ತೆ  ಸುಮ್ಮನಾಗಿಬಿಟ್ಟೆ . ಅಷ್ಟರಲ್ಲಿ ಅನಿಕೇತ್ ದ್ದೇ  ಫೋನ್  ಬಂತು . ಎಕ್ಸೈಟ್  ಆಗಿದ್ದ . "ಕೇಳು, ನಾನಿವತ್ತು ಡೇಟ್ ಗೆ ಹೋಗ್ತಾ ಇದ್ದೀನಿ . ಯಾರು ಅಂತ ಗೆಸ್ಸ್ ಮಾಡು !  ಅವಳೇ , ನನ್ನ ಡ್ರೀಮ್ ಗರ್ಲ್  ಸೀಮಾ !  ಕ್ಯಾನ್  ಯು ಇಮೇಜಿನ್  ? ಗಾಡ್! ನಂಗೆ ನಂಬೋಕೆ ಆಗ್ತಿಲ್ಲ  ಇವತ್ತು ಮೀಟ್ ಮಾಡ್ತೀನಿ ಅವಳನ್ನ ಅಂತ ...  "   ಯಾಕೋ, ಏನೂ ಮಾತಾಡಬೇಕೆನಿಸಲಿಲ್ಲ , ಎಲ್ಲೋ ಒಂದು ಕಡೆ ಮನಸ್ಸು ನಿರಾಳವಾಯ್ತಾ ಅನ್ನೋ ಭಾವನೆ .
ಮತ್ತೆ ಆಫೀಸ್ ದಿನಚರಿ  ಆರಂಭವಾಯಿತು. 
ಅವತ್ತು ಬ್ರೇಕ್ ಲ್ಲಿ ಕಾಫೀ ತೊಗೊಂಡು ಬಂದು ಕುಳಿತವಳು  ಯಾಕೋ ಪರ್ಸ್ ತೆಗೆದಾಗ  ಅವನ ವಿಸಿಟಿಂಗ್ ಕಾರ್ಡ್ ಕಾಣಿಸಿತು  .  ನೆನಪುಗಳು ಉಕ್ಕಿ ಬಂದವು.  "ಸೆರ್ಜಿಯೋ  ಗೊಮೆಜ್ "  ನಂಬರ್ ಮೊಬೈಲ್ ಲ್ಲಿ  ಸೇವ್ ಮಾಡಿದೆ  ವಾಟ್ಸಪ್  ಓಪನ್ ಮಾಡಿ "  ಹೋಲಾ !  ಇಟ್ಸ್ ಮಿ !!!  "  ಮೆಸೇಜ್ ಕಳಿಸಿದವಳೇ ಮೊಬೈಲ್ ಬದಿಗಿಟ್ಟೆ . 
ಮರುಕ್ಷಣಕ್ಕೆ  ಟೈಪಿಂಗ್  .....    ಎಂದು ತೋರಿಸಿತು. ನನ್ನ ಎದೆಬಡಿತ್ ಹೆಚ್ಚೇ ಆಗುತಿತ್ತು. 
" ಐ ನ್ಯೂ ಯು ವಿಲ್ ಕಾಂಟಾಕ್ಟ್ ! ಐ ವಾಸ್ ವೈಟಿಂಗ್ ! muchos gracias  mi amiga ! te quiero....

ನನ್ನೆದೆಯಲ್ಲಿ ನಯಾಗರದ ಭೋರ್ಗರೆತ ಪ್ರತಿಧ್ವನಿಸುತ್ತಿತ್ತು !



2 comments:

usha aland said...

wow amazing story. refreshed all my memories of niagara. chennagi odisikondu hogutte. bhavapoorna baravanige.

sunaath said...

ಆಪ್ತ ಭಾವನೆ ಬೆಳೆಯುವ ಬಗೆಯನ್ನು ನಯಾಗಾರಾದಷ್ಟೇ ಸುಂದರವಾಗಿ ನಿರೂಪಿಸಿದ್ದೀರಿ. ಅಭಿನಂದನೆಗಳು.