October 28, 2020

ಕಲ್ಲಾದವಳು

  ಋಷಿಮುನಿಗಳಿಗೆ  ಮದುವೆ  ಎನ್ನುವುದು  ಜೀವನದಲ್ಲಿ  ಆಗಲೇ ಬೇಕಾದ ಅನಿವಾರ್ಯತೆಯೇ ಹೊರತು  ಯಾವುದೇ ಬಗೆಯ ಸಂತೋಷಕ್ಕಲ್ಲ . 

ಸಂತಾನ, ಅದರಲ್ಲೂ ಪುತ್ರ ಸಂತಾನವಿಲ್ಲದಿದ್ದಲ್ಲಿ ಸದ್ಗತಿ  ದೊರೆಯುವುದು ಹೇಗೆ  ಎಂಬ ಒಂದೇ ಕಾರಣಕ್ಕಾಗಿ ಮದುವೆ ! 
ಅಲ್ಲದೆ ಮನುಷ್ಯನಾಗಿ ಹುಟ್ಟಿದ ಮೇಲೆ  ೪ ಆಶ್ರಮಗಳನ್ನು  ನಿಭಾಯಿಸ ಬೇಕೆಂಬ ನಿಯಮ . 
ಬ್ರಹ್ಮಚರ್ಯದಿಂದ  ಗ್ರಹಸ್ಥಾಶ್ರಮಕ್ಕೆ  ಹೋಗಲೇ ಬೇಕಾದ ಅನಿವಾರ್ಯತೆ.  

ಮದುವೆ ಇವರಿಗೆ ಕೇವಲ  ಪಿತೃ ಋಣ  ಕಳೆಯಲಿಕ್ಕಷ್ಟೇ. 
ಕೈ ಹಿಡಿದ ಹೆಣ್ಣಿನ ಬಗ್ಗೆ  ಹೆಚ್ಚು ಯೋಚಿಸುವುದು ಎಂದರೆ  ತಮ್ಮ ತಪಸ್ಸು ಅನುಷ್ಟಾನಕ್ಕೆ  ಭಂಗ ತರುವುದು ಎಂಬ ಭಾವನೆ. 

 ಪ್ರತಿನಿತ್ಯದ ಅಗ್ನಿಹೋತ್ರಕ್ಕೆ  ಸರ್ವವನ್ನೂ ಸಿದ್ಧ ಗೊಳಿಸುವುದು, ಸಮಯಕ್ಕೆ ಸರಿಯಾಗಿ  ತಮ್ಮ ಎಲ್ಲಾ ಅಗತ್ಯಗಳನ್ನೂ  ನೋಡಿಕೊಳ್ಳುವುದು. ಆಶ್ರಮಕ್ಕೆ ಬರುವ ಅತಿಥಿ ಅಭ್ಯಾಗತರ  ಸತ್ಕಾರಗಳನ್ನು  ಗೋವುಗಳ , ವಟುಗಳ , ವಿದ್ಯಾರ್ಥಿಗಳ ದೇಖರೇಖೆ  ಇವೆಲ್ಲವುಗಳನ್ನು  ನಿರ್ವಹಣೆಗೆ   ಪತ್ನಿ ಬೇಕು . ಅಷ್ಟೇ. 
ಆಕೆಯ ಇಷ್ಟಾನಿಷ್ಟಗಳು,  ಕಷ್ಟಗಳು, ಉಳಿದ ಯಾವುದೇ ಭಾವನೆಗಳಿಗೆ  ಇಲ್ಲಿ ಬೆಲೆಯಿಲ್ಲ ! 
ವರ್ಷದ  ಹೆಚ್ಚಿನ ದಿನಗಳು ಆಶ್ರಮದಿಂದ ದೂರದಲ್ಲೆಲ್ಲೋ  ತಪಸ್ಸಿನಲ್ಲಿ  ಅಥವಾ ಪ್ರಪಂಚ ಪರ್ಯಟನೆಯಲ್ಲಿ ಕಳೆಯುವವರು  ಸಂತಾನಾಭಿಲಾಷಿಗಳಾಗಿ ಮಾತ್ರ ಕೆಲ ಸಮಯವನ್ನು ಪತ್ನಿಯೊಂದಿಗೆ ಕಳೆಯುತ್ತಾರೆ . 
ಅದೂ ಕೂಡ  ತೀರಾ ಯಾಂತ್ರಿಕವಾಗಿ ಮಾತ್ರ . 

ಪತ್ನಿ ಗರ್ಭಿಣಿಯಾದರೆ , ಮಕ್ಕಳಾದರೆ ಅವರ ಮುಖ್ಯ  ಕರ್ತವ್ಯ ಪೂರೈಸಿದಂತೆ. 
ಗೌತಮರೂ ಕೂಡ ಇದಕ್ಕೆ ಹೊರತಲ್ಲ . ಆದರೆ  ನಾನು ತಪಸ್ವಿನಿಯಲ್ಲ !  ಎಲ್ಲರಂತೆ ಆಸೆಗಳು ನನಗೂ ಇವೆ. ಅವುಗಳನ್ನು ಹತೋಟಿಯಲ್ಲಿಡುವುದು ನನಗೆ ಬಹು ಕಷ್ಟದ ವಿಷಯ. 

ಆಶ್ರಮದ ಎಳೆಯ ದಂಪತಿಗಳನ್ನು ನೋಡುವಾಗ ಎದೆಯಲ್ಲಿ ಏನೋ ಚುಚ್ಚುತ್ತದೆ. 
ಆ ನವ ವಧುವಿನ ಮುಖದ  ಹೊಳಪು , ನಾಚಿ ಕೆಂಪಾದ ಕದಪು  ಮಧುರ ಭಾವಗಳನ್ನು ಮೀಟುತ್ತವೆ . ಆದರೆ ನನ್ನ  ಅದೃಷ್ಟ ಅಷ್ಟು ಒಳ್ಳೆಯದಿಲ್ಲ !

ಇನ್ನೂ ಯೌವನ ತುಂಬಿದ ವಯಸ್ಸು  ನನ್ನದು. ಬಯಕೆ ತುಂಬಿದ  ದೇಹ ನನ್ನದು  ಏನೇನೋ ಬೇಡುತ್ತದೆ ಒಮ್ಮೊಮ್ಮೆ . ಆದರೆ ಗೌತಮರು  ಅಂಥಾ ಬಯಕೆಗಳನ್ನು ನಿಗ್ರಹಿಸಿಕೊ ಎಂಬ ಸಲಹೆ  ನೀಡುತ್ತಾರೆ.  ಅವರ ಪ್ರಕಾರ ಪತಿ ಪತ್ನಿಯರ ನಡುವೆ ದೈಹಿಕ ಸಂಬಂಧ  ಪುತ್ರ ಸಂತಾನಕ್ಕಾಗಿ ಬೇಕಾದ ಅನಿವಾರ್ಯತೆ.  ಅದೊಂದು ಕರ್ತವ್ಯ ಮಾತ್ರ .  ಮನಸ್ಸಿನ ಕಾಮನೆಗಳನ್ನು  ಪ್ರೋತ್ಸಾಹಿಸ ಬಾರದು ಎಂಬುದು ಅವರ ಅಭಿಪ್ರಾಯ . 
ಆದರೆ ಹೇಳಿದೆನಲ್ಲ? ನಾನೊಬ್ಬ ಸಾಧಾರಣ ಮನುಷ್ಯಳು . ಪ್ರಕೃತಿ ಸಹಜ ಬಯಕೆಗಳು ನನ್ನನ್ನು ಕಾಡುತ್ತವೆ ಎಂದು ?

ಇಂಥಾ ಒಂದು  ದಿನದಲ್ಲಿ ' ಆತ ' ಬಂದ . ಗೌತಮರದೆ ವೇಷದಲ್ಲಿ .  ಮೊದಲ ನೋಟಕ್ಕೆ  ನಾನು  ನಂಬಿಬಿಟ್ಟೆ. ನಿತ್ಯದ ಅನುಷ್ಠಾನಕ್ಕೆಂದು  ಹೋದವರು ಅದೇಕೆ ಇಷ್ಟು ಬೇಗ ಬಂದುಬಿಟ್ಟರೆ?  ನನ್ನ ನೆನಪಾಗಿ ಬರಲಿಲ್ಲವಷ್ಟೆ?   ಇನ್ನೂ  ಬೆಳಕು ಹರಿದಿರಲಿಲ್ಲ .  ನನ್ನನ್ನು ಬಳಿಗೆ ಕರೆದಾಗ ಅತೀವ ಆಶ್ಚರ್ಯದಿಂದ ಉಬ್ಬಿ ಹೋದೆ. ನನಗೆ ಸಂಶಯವೂ ಸಂತೋಷವೂ ಒಟ್ಟಿಗೆ ಆಗುತ್ತಿತ್ತು

" ಅಹಲ್ಯೆ , ನೀನಿಷ್ಟು ಚೆಲುವೆ ಎಂಬುದನ್ನು ಇಷ್ಟು ವರ್ಷ ನಾನು ಗಮನಿಸಲೇ ಇಲ್ಲವಲ್ಲೆ ? "  ಎನ್ನುತ್ತಾ ಬಳಿ ಸೆಳೆದರು. 

ಆದರೆ ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನನಗೆ ಸಂಶಯ ಬಂತು . ಮೊದಲ ಸ್ಪರ್ಶದಲ್ಲಿ ಖಚಿತವಾಗಿಬಿಟ್ಟಿತು. ಇದು ಗೌತಮರಲ್ಲ ಎಂದು. 
 ಅದೆಷ್ಟೇ ಚೆನ್ನಾಗಿ ವೇಷ ಬದಲಿಸಿದರೂ ಕೂಡ  ಹೆಣ್ಣಿಗೆ ತನ್ನ ಪತಿಯ ಗುರುತು ತಿಳಿಯದೆ ? ಅದರಲ್ಲೂ ಏಕಾಂತದಲ್ಲಿರುವಾಗ !

ಆದರೂ ಆ ಕ್ಷಣದಲ್ಲಿ ನಾನು ಸೋತು ಬಿಟ್ಟಿದ್ದೆ. ಮನಸ್ಸು ಬುದ್ಧಿಯ ಹಿಡಿತಕ್ಕೆ ಸಿಕ್ಕುತ್ತಿರಲಿಲ್ಲ  ! ಆ ಸ್ಪರ್ಶ , ಬಿಸಿಯುಸಿರು ನನಗೆ ಮೈಮರೆಸುತ್ತಿತ್ತು . ಇಷ್ಟು ಕಾಲ ನನ್ನಲ್ಲಿ ಬಂದಿಯಾಗಿದ್ದ ಕಾಮನೆಗಳು ಒಮ್ಮೆಲೇ ಭುಗಿಲೆದ್ದವು . ಆ ಜ್ವಾಲೆಗೆ ಆತನ ಪಿಸುಮಾತುಗಳು ತುಪ್ಪ ಸುರಿದು ಮತ್ತಷ್ಟು ಜ್ವಲಿಸುವಂತೆ ಮಾಡು ತ್ತಿದ್ದವು. ಸಮಯ ಮೀರಿಲ್ಲ ಎಚ್ಚೆತ್ತುಕೊ ಎಂದು ಎಚ್ಚರಿಸುತ್ತಿದ್ದ ನನ್ನ  ಬುದ್ಧಿಯನ್ನು ಕತ್ತಲಲ್ಲಿ ಕೂಡಿಹಾಕಿಬಿಟ್ಟೆ ! ಆ ಕ್ಷಣ ನನಗೆ  ಅದೆಲ್ಲವೂ ಬೇಕಿತ್ತು . ನಾನು ಆ ಜ್ವಾಲೆಯಲ್ಲಿ ಕರಗಿ ಬಿಟ್ಟೆ !

ಆ ಮಧುರ ಕ್ಷಣಗಳು ಬೇಗನೆ ಕಳೆದು ಹೋದವು .
ಕೆಲ ಸಮಯದಲ್ಲೇ  " ದೇವಿ, ನನಗೆ ಈಗ ಹೊರಡಲೇ ಬೇಕಿದೆ . ನಿನ್ನ ಮೇಲಿನ ಆಸೆಯಿಂದ  ಮರಳಿ ಬಂದೆ . ಆದರೆ ಇನ್ನು ನಿಲ್ಲುವುದಿಲ್ಲ . " ಎಂದು ಹೊರಟಾಗ,  ಮಂದ  ಬೆಳಕಲ್ಲಿ  ಮುಖ ನೋಡಿದೆ . ಮರೆಸಿಕೊಂಡಿದ್ದ ವೇಷ  ಹಾಸಿಗೆಯಲ್ಲಿ, ಬೆವರಿನಲ್ಲಿ ಅರ್ಧ  ಕಳಚಿ ಹೋಗಿತ್ತು . ಅವನ್ಯಾರೆಂಬುದು ನನಗೆ ತಿಳಿದು ಬಿಟ್ಟಿತು ! 
ಅವನಾಗಲೇ ಬಾಗಿಲ ಬಳಿಯಿದ್ದ. 

" ನಿಲ್ಲು ! ನೀನ್ಯಾರೆಂದು ನನಗೆ ಈಗ  ತಿಳಿದು ಬಿಟ್ಟಿದೆ . ಆ ಒಂದು ಗಳಿಗೆಯಲ್ಲಿ ನಾನು ಜಾರಿ ಬಿಟ್ಟೆ. ಅದು ನನ್ನ  ತಪ್ಪು .  ಆದರೆ ಮತ್ತೆಂದೂ ಇತ್ತ ಸುಳಿಯ ಬೇಡ . ಚೆನ್ನಾಗಿರುವುದಿಲ್ಲ "   

" ಅಹಲ್ಯೆ , ನನ್ನನ್ನು ಕ್ಷಮಿಸು. ನಿನ್ನಂಥ ಚೆಲುವೆಯನ್ನು ನೋಡಿ ನನ್ನ ಮನಸ್ಸು ನಿಲ್ಲಲಿಲ್ಲ . ಹೀಗಾಗಿ ಈ ರೀತಿ ಮಾಡಿದೆ . ಇನ್ನು ಹೀಗಾಗುವುದಿಲ್ಲ  "  ಎಂದವನೇ  ನಡೆದುಬಿಟ್ಟ . 

ನಾನು  ಬಚ್ಚಲಿಗೆ ಹೋಗಿ  ತಣ್ಣೀರು ಸುರಿದುಕೊಂಡೆ . ನನ್ನ ಪರಿಸ್ಥಿತಿಯ ಬಗ್ಗೆ ನನಗೆ ಕೆಟ್ಟದೆನಿಸುತ್ತಿತ್ತು.  ನನ್ನ ಸಂಯಮ ಕಳೆದುಕೊಂಡಿದ್ದಕ್ಕೆ , ಪರಪುರುಷನೊಂದಿಗೆ ರಮಿಸಿದ್ದಕ್ಕೆ ನನ್ನ ಮೇಲೆ ನನಗೆ ಅಸಹ್ಯ ಎನಿಸುತ್ತಿತ್ತು . 

ಅದೇ ಕ್ಷಣ  ಆಲೋಚನೆಗಳು ಬೇರೊಂದು ದಿಶೆಯಲ್ಲೂ ನಡೆಯುತ್ತಿದ್ದವು . 
ಪ್ರಕೃತಿ ಸಹಜವಾದ ಬಯಕೆಗಳನ್ನು   ಬದಿಗೊತ್ತಲೇ ಬೇಕಾಗಿದ್ದು ಅಗತ್ಯವೇ ? ಅನಿವಾರ್ಯವೇ? ಪತಿಯಾದವನಿಗೆ ತನ್ನ ಪತ್ನಿಯ ಸಹಜ ಬಯಕೆಗಳನ್ನು ಪೂರೈಸುವ ಬಾಧ್ಯತೆ ಇಲ್ಲವೇ? ದೈಹಿಕ ಕಾಮನೆಗಳನ್ನು ಕಡೆಗಣಿಸುವುದು  ಅಥವಾ ಅಂಥಾ ಆಸೆಗಳನ್ನು ತಪ್ಪೆಂದುಕೊಳ್ಳುವುದು  ಸರಿಯೇ? ಅದು ಎಲ್ಲರಿಂದ ಸಾಧ್ಯವೇ? ಋಷಿ ಪತ್ನಿಯಾದ ಮಾತ್ರಕ್ಕೆ ನಾನು ಇವೆಲ್ಲವುಗಳಿಂದ ಹೊರತಾಗಿಬಿಡುವೆನೆ? ಅಂಥಾ ಸಂಯಮ ನನ್ನಲ್ಲಿದೆಯೇ?  ಅಷ್ಟಕ್ಕೂ  ನಾನು ಧನ ಕನಕಗಳನ್ನು , ಐಶ್ವರ್ಯವನ್ನು, ಸುಪ್ಪತ್ತಿಗೆಯನ್ನು ಎಂದೂ ಬಯಸಲಿಲ್ಲ !  ನಾನು ಬಯಸಿದ್ದು  ಪ್ರೀತಿಯ ಸಾಂಗತ್ಯ ! ಅದೂ ಪತಿಯಿಂದಲೇ ! ಅದು ತಪ್ಪೇ?
ದೈಹಿಕವಾಗಿ ಕೂಡುವಿಕೆ  ಕೇವಲ ಸಂತಾನಕ್ಕಾಗಿ ಮಾತ್ರ . ಸಂತೋಷಕ್ಕಲ್ಲ . ಅದರಿಂದ ಪರಮಾತ್ಮನ ಚಿಂತನೆಯಲ್ಲಿ ತೊಡಗುವ ಋಷಿಮುನಿಗಳ  ತಪಸ್ಸಾಧನೆಯಲ್ಲಿ ಭಂಗ ಬರುತ್ತದೆ  ಎಂದು  ಯಾರು ಹೇಳಿದರೋ ! ಇದೊಂದು ರೀತಿಯಿಂದ  ಪ್ರಾಣಿಗಳು ಸೇರುವಂತೆಯೇ ಆಯಿತಲ್ಲ? 
ಅತ್ತಿತ್ತ ಹರಿಯುತ್ತಿದ್ದ ನನ್ನ ಆಲೋಚನೆಗಳು  ಈಗ ಆಗಿ ಹೋಗಿದ್ದನ್ನು ಎಲ್ಲೋ ಒಂದು ಕಡೆ ಕ್ಷೀಣವಾಗಿ ಸಮರ್ಥಿಸುತ್ತಿವೆ ಎನಿಸಿತು. 
ಆದರೆ , ನಾನೀಗ ಕಠೋರಳಾಗಿದ್ದೆ.  ಕಾರಣವೇನೆ ಇದ್ದರೂ , ನಾನು ನನ್ನ ಮನಸ್ಸನ್ನು ಹತೋಟಿಯಲ್ಲಿಡಲಾಗದ್ದು  ನನ್ನ ದೌರ್ಬಲ್ಯ ಎನಿಸಿಬಿಟ್ಟಿತು . ಅದನ್ನು ಎಂದಿಗೂ ಕ್ಷಮಿಸಲಾರೆ .  ಗೌತಮರು ಬರುತ್ತಲೇ , ಅವರಲ್ಲಿ ಎಲ್ಲವನ್ನೂ ನಿವೇದಿಸಿ ತಪ್ಪೊಪ್ಪಿಕೊಳ್ಳಬೇಕು , ಇನ್ನೆಂದೂ ಹೀಗಾಗದು , ಒಂದೇ ಒಂದು ಅವಕಾಶ ಕೊಡಿ ಎಂದು ಬೇಡಿಕೊಳ್ಳ ಬೇಕು  ಪ್ರಾಯಶ್ಚಿತ್ತವಾಗಿ   ಅವರೇನೇ ಶಿಕ್ಷೆ ವಿಧಿಸಿದರೂ  ಅದನ್ನು ಸ್ವೀಕರಿಸಬೇಕು ಎಂದು ನಿಶ್ಚಯಿಸಿದ್ದೆ. 
ಮುಂದಿನ ಅದೆಷ್ಟೋ ಕ್ಷಣಗಳನ್ನು  ಕಣ್ಣೀರಲ್ಲಿ , ಪಶ್ಚಾತ್ತಾಪದಲ್ಲಿ  ಕಳೆದೆ . 

ಕೆಲ ಸಮಯದಲ್ಲಿ ಗೌತಮರು ಬಂದರು . ಅವರಿಗಾಗಲೇ ಹೇಗೋ ವಿಷಯ ತಿಳಿದಿತ್ತು.  ಕೋಪದಿಂದ ಕುದಿಯುತ್ತಲೇ ಬಂದವರು ನನ್ನ ಮೇಲೆ ಕೆಂಡ ಕಾರತೊಡಗಿದರು.  ಅದು ಸಹಜವೇ , ನಾನು  ಇದನ್ನು ನಿರೀಕ್ಷಿಸಿಯೇ ಇದ್ದೆ. 
"ಎಷ್ಟು ದಿನದಿಂದ ಈ ನಾಟಕ ನಡೆದಿದೆ?  ಇವನೊಬ್ಬನೆಯೋ ? ಮತ್ತೂ ಇದ್ದಾರೋ ? "

"ಸ್ವಾಮೀ , ನಾನು ತಪ್ಪು ಮಾಡಿದ್ದೇನೆ ನಿಜ . ಆದರೆ , ಇದು ಮೊದಲ ಹಾಗೂ ಕಡೆಯ ತಪ್ಪು.  ಆತ ನಿಮ್ಮ ವೇಷದಲ್ಲಿ ಬಂದ . ನಾನು ಒಳಗೆ ಕರೆದುಕೊಂಡೇ. ನಿಜದ ಅರಿವಾದಾಗ , ನಾನು ಮೈಮರೆತು ಬಿಟ್ಟಿದ್ದೆ.  ಇದು ನನ್ನ ತಪ್ಪು . ಇದನ್ನು ನಾನು ಒಪ್ಪಿಕೊಳ್ಳುತ್ತೇನೆ , ನನ್ನನು ಕ್ಷಮಿಸಿ "

"ಅಂದರೆ , ನನ್ನ ವೇಷದಲ್ಲಿ ಯಾರು ಬೇಕಾದರೂ ಬಂದು  ನಿನ್ನನ್ನು ಮರುಳು ಮಾಡಬಹುದೋ?  ಇದೊಂದು ನೆವ ಹೇಳಬೇಡ .  ಇನ್ನೆಷ್ಟು  ಜನರೊಂದಿಗೆ ಹೀಗೆ ನಡೆದಿದೆಯೋ ! "    
ಕೋಪದಿಂದ ಗೌತಮರ ಮೈ ನಡುಗುತ್ತಿತ್ತು . ಕಣ್ಣುಗಳು ಕಿಡಿ ಕಾರುತ್ತಿದ್ದವು. 

ನಾನು ನಡುಗಿಬಿಟ್ಟೆ . ಆದರೆ ಧೈರ್ಯದಿಂದ ಹೇಳಿದೆ. 
 "ಆರ್ಯರೇ, ನಾನು ಹೇಳುತ್ತಿರುವುದು ನಿಜ.  ನಮ್ಮ ಮದುವೆಯಾದ ಇಷ್ಟು ವರ್ಷಗಳಲ್ಲಿ ಹೀಗೆಂದೂ ಆಗಿರಲಿಲ್ಲ.  ಇದು ಮೊದಲ ಬಾರಿ ಹಾಗೂ ಕೊನೆಯ ಸಲ ಕೂಡ. ನನ್ನ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಅದಕ್ಕೆ ಪ್ರಾಯಶ್ಚಿತ್ತಕ್ಕೂ ತಯಾರಿದ್ದೇನೆ.  ಆದರೆ ನಾನು ಸುಳ್ಳು ಹೇಳುತ್ತಿರುವೆ  ಎಂದೋ , ಸದಾ ಪರಪುರುಷರ ಸಹವಾಸದಲ್ಲಿದ್ದೇನೆ ಎಂದೋ  ಅಪವಾದ ಹೊರಿಸಬೇಡಿ . 
ಈಗಲಾದರೂ ಸಹ , ನಾನು  ನೀವೇ ಎಂಬ ಭ್ರಮೆಯಲ್ಲಿ ಅವನನ್ನು ಕೂಡಿದೆ.  ಸಾಧಾರಣ ಮನುಷ್ಯಳಾದ ನನ್ನ ಮನಸಿನಲ್ಲಿ ಅದುಮಿಟ್ಟ ಸಹಜ ಬಯಕೆಗಳು  ನನ್ನ ಭ್ರಮೆಯ ಪಟ್ಟಿಯನ್ನು  ಭದ್ರವಾಗಿಸಿ ಬಿಟ್ಟವು. ದಯವಿಟ್ಟು ನನ್ನನ್ನು ಕ್ಷಮಿಸಿ "

"ನಿರ್ಲಜ್ಜ  ಹೆಣ್ಣು ನೀನು.  ನಿನ್ನ ತಪ್ಪಿಗೆ ನನ್ನನ್ನು ಕಾರಣವಾಗಿಸುತ್ತೀಯಾ?  ನಿನಗಿಲ್ಲಿ ಜಾಗವಿಲ್ಲ . ಈಗಲೇ ಹೊರಡು. ಈ ಆಶ್ರಮದ ಸುತ್ತ ಮುತ್ತೆಲ್ಲೂ ಕಾಣಿಸಬೇಡ. ನಿನ್ನಂಥವಳ  ಜೊತೆ ಸಂಸಾರ ಮಾಡಿದ ಪಾಪ ತೊಳೆಯಲು ನಾನು ಇನ್ನೆಷ್ಟು ತಪಸ್ಸು ಮಾಡಬೇಕೋ ! ತೊಲಗು ಇಲ್ಲಿಂದ "
ಗೌತಮರ ಧ್ವನಿ ಆಶ್ರಮದಲ್ಲಿ ಮೊಳಗುತ್ತಿತ್ತು .
 ಕುಟೀರದ  ಹೊರಗೆ ಕುತೂಹಲದಿಂದ ಇಣುಕುವ  ಕಣ್ಣುಗಳು ಕಾಣ ತೊಡಗಿದವು.  ನಿಂತ ನೆಲ ಕುಸಿಯಬಾರದೇ  ಎಂದೆನಿಸಿತು . 

"ಸ್ವಾಮೀ, ನಾನೆಲ್ಲಿ ಹೋಗಲಿ ? ಇಲ್ಲಿಯೇ ಒಂದು ಮೂಲೆಯಲ್ಲಿ ನನ್ನ ನೆರಳೂ ನಿಮಗೆ ಸೋಕದಂತೆ ಇದ್ದುಬಿಡುತ್ತೇನೆ. ದಯವಿಟ್ಟು ಕ್ಷಮಿಸಿ  , ಒಂದೇ ಒಂದು ಅವಕಾಶ ಕೊಟ್ಟು ನೋಡಿ"
 ಗಂಟಲುಬ್ಬಿ ಬಂದು ಹೇಳುವಾಗ ಕಣ್ಣೀರು ಹರಿಯುತ್ತಿತ್ತು . 

"ಎಲ್ಲಿ ಬೇಕಾದರೂ ಹೋಗು. ನಿನ್ನ ಗೆಳೆಯನಲ್ಲಿ  ಹೋಗಿರು.  ನಿನಗೇಕೆ  ಸಂಸಾರ ? ನನಗೂ ನಿನಗೂ ಇನ್ನು ಯಾವ ಸಂಬಂಧವೂ ಇಲ್ಲ ! ಮಹಾವಿಷ್ಣುವೆ ಬಂದು ನೀನು ಪವಿತ್ರಳು ಎಂದು ಹೇಳಲಿ ಆಗ ನಿನ್ನನ್ನು ಪರಿಗ್ರಹಿಸುತ್ತೇನೆ . ಹ್ಞೂ , ಇನ್ನೂ ಏಕೆ ನಿಂತಿದ್ದೀಯಾ? ಈ ಕ್ಷಣ ಇಲ್ಲಿಂದ ತೊಲಗು " 
ಮತ್ತೊಮ್ಮೆ  ದನಿ ಅಪ್ಪಳಿಸಿತು . 

ಅಪಮಾನದಿಂದ ಹಿಡಿಯಷ್ಟಾಗಿ ತಲೆ ತಗ್ಗಿಸಿ ಬೆನ್ನು ಬಾಗಿಸಿಕೊಂಡು ಅಲ್ಲಿಂದ ಹೊರಟುಬಿಟ್ಟೆ. 
ಆಶ್ರಮದ ಪರಿಸರವನ್ನು ದಾಟಿ  ಬಂದು  ಅಲ್ಲೇ ಇದ್ದ ವಿಶಾಲವಾದ ಮರದ ಬುಡದಲ್ಲಿ ನಿಂತೆ

ನಾನು ಚೂರಾಗಿದ್ದೆ.  ನನ್ನ ತಪ್ಪಿತ್ತು ನಿಜ . ಆದರೆ , ಅದನ್ನು ಒಪ್ಪಿಕೊಂಡಿದ್ದೆ. ಪ್ರಾಯಶ್ಚಿತ್ತಕ್ಕೂ  ತಲೆಬಾಗಿದ್ದೆ. ಆದರೆ,ಇದು ಏಕೆ ಘಟಿಸಿತು ಎಂಬ ಹಿನ್ನೆಲೆಯನ್ನು ಅವರು ಪರಿಗಣಿಸಲಿಲ್ಲವೇಕೆ? ಹೀಗೇಕೆ ಮಾಡಿದೆ  ಒಂದು ಸಲ ಕೇಳ  ಬಹುದಿತ್ತು. ಇದೇ ಮೊದಲು, ಇದೆ ಕಡೆ ಎಂದು ನಾನು ಸಾರಿ ಸಾರಿ ಹೇಳಿದ್ದನ್ನು ನಂಬ ಬಹುದಿತ್ತು. ಒಂದೇ ಒಂದು ಅವಕಾಶ ಕೊಡಬಹುದಿತ್ತು .  ಕೊಟ್ಟ ಶಿಕ್ಷೆ ಅನುಭವಿಸಲು ತಯಾರಿದ್ದೆ  . ಆದರೆ , ಅಪವಾದವನ್ನು ಎಲ್ಲರೆದುರು ಸಾರಬೇಕಿತ್ತೆ?  ತಪ್ಪು ನನ್ನೊಬ್ಬಳದು ಮಾತ್ರ ವೇ?  ತಪ್ಪೆಸಗಲು  ಅವರೂ ಕಾರಣರಲ್ಲವೇ? ಕಾರಣವಾದವರಿಗೆ ಪಾಪವಿಲ್ಲವೇ? ಒಮ್ಮೆ ಅಪರಾಧ  ನಡೆದುಹೋಯಿತು.  
ನಿಜ . ಆದರೆ ಅದು ಒಮ್ಮೆ ಮಾತ್ರವೇ ಆಗಿದ್ದು. ಹಿಂದೆಂದೂ ಆಗಿರಲಿಲ್ಲ, ಮುಂದೆಯೂ ಆಗುತ್ತಿರಲಿಲ್ಲ. ಆದರೆ ಅಪವಾದ ಮಾತ್ರ ಅಜೀವ ಪರ್ಯಂತವೇ! 
ಮುಂದೇನೋ ಒಂದು ಕಾಲದಲ್ಲಿ ಮಹಾವಿಷ್ಣುವೇ ಅವತಾರವೆತ್ತಿ ಬಂದು ನನ್ನ ಪಾವಿತ್ರ್ಯವನ್ನು  ಧೃಢಪಡಿಸಿದಾಗ ಮಾತ್ರ  ಮರಳ ಬಹುದು ಎಂದರಲ್ಲ ?  ಏನರ್ಥ?  ಮಹಾವಿಷ್ಣುವಿನ ಆಗಮನದ ವರೆಗೆ ನಾನು ನನ್ನ ಕಳಂಕವನ್ನು ಹೊತ್ತೇ ತಿರುಗಬೇಕೇ? ನನ್ನ  ಬೇಡಿಕೆಗೆ  ಮನ್ನಣೆಯಿಲ್ಲವೇ? ಪತಿ ಪತ್ನಿಯರ ನಡುವಿನ   ಈ ಸಮಸ್ಯೆ ಯನ್ನು ನಾವು ನಾವೇ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲವೇ?  ನಾನು  ಪರಿಶುದ್ಧಳೆಂದು ಯಾರೋ  ಮೂರನೆಯವರೇ ಹೇಳ ಬೇಕೆ? 

ಸಾವಿರ ಪ್ರಶ್ನೆಗಳು  ತಲೆಯಲ್ಲಿ ತಿರುಗತೊಡಗಿದವು .  ಇಂಥಾ ಬದುಕು ಬೇಕೇ  ಎನಿಸತೊಡಗಿತು.  ಅಪರಾಧಕ್ಕೆ ಪಶ್ಚತ್ತಾಪದಿಂದ ಪ್ರಾಯಶ್ಚಿತ್ತ ಎಂದು ಕೇಳಿದ್ದೆ. ಆದ್ರೆ ಅದು ಸುಳ್ಳಾಯಿತಲ್ಲ ಎನಿಸಿತು . ಮನಸ್ಸು ಒಮ್ಮೆಲೇ ನಿರ್ಲಿಪ್ತವಾಯಿತು.  ಎಲ್ಲ ಭಾವಗಳೂ  ನಶಿಸಿಹೋದವು . 

 ಮನಸು  ಕಲ್ಲಾಯಿತು ! ನಾನು ಕಲ್ಲಾಗಿಬಿಟ್ಟೆ !



 

2 comments:

sunaath said...

ಅಹಲ್ಯೆಯ ಮನಸ್ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ಇಲ್ಲಿ ಮತ್ತೊಂದು pointಅನ್ನು ನಿಮಗೆ ಹೇಳಬೇಕು. ಅಹಲ್ಯಾ ಎನ್ನುವ ಹೆಸರನ್ನು ನೋಡಿರಿ: ಹಲ್ ಅಂದರೆ ಸಂಸ್ಕೃತದಲ್ಲಿ ನೇಗಿಲು. ಅಹಲ್ಯಾ ಹೆಸರಿನ ಅರ್ಥವೆಂದರೆ ‘unfurrowed'ಅಂತ! ಅರ್ಥಾತ್ ಅವಳ ಮದುವೆಯಾದಾಗಿನಿಂದಲೂ ಅವಳಿಗೆ ಪತಿಯ ಸ್ಪರ್ಶವು ಇರಲಿಲ್ಲ. ಹೀಗಿರುವಾಗ ಅವಳ ಬಯಕೆ ಭುಗಿಲೆದ್ದುದರಲ್ಲಿ ಅಸಹಜತೆ ಏನೂ ಇಲ್ಲ. ಅವಳನ್ನು ಜಾರಿಣಿ ಎಂದು ಅವಹೇಳನ ಮಾಡುವವರಿಗೆ, ನಾಣ್ಯದ ಮತ್ತೊಂದು ಮುಖವನ್ನು ತೋರಿಸಿದ್ದೀರಿ.

ಚಿತ್ರಾ said...

ಕಾಕಾ,
" ಅಹಲ್ಯಾ " ಎಂಬುದರ ಅರ್ಥ ತಿಳಿದಿದ್ದರೂ ಆಕೆಗೆ ಪತಿಯ ಸ್ಪರ್ಶ ಇರಲಿಲ್ಲ ಎಂಬ ಮಾಹಿತಿ ನನಗೆ ಹೊಸದು !
ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .
ನನ್ನ ಬ್ಲಾಗ್ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಓದುವುದು ನನ್ನ ಪ್ರೀತಿಯ ಕೆಲಸ . ನಿಮ್ಮ ಪ್ರೋತ್ಸಾಹ ನನಗೆ ಬರೆಯಲು ಉತ್ತೇಜನ ನೀಡುತ್ತದೆ ಎಂದರೆ ತಪ್ಪಿಲ್ಲ.
ನಿಮ್ಮ ಆಶೀರ್ವಾದ ಹೀಗೆ ಇರಲಿ .
ಧನ್ಯವಾದಗಳು !