Shared with Kannad
ಅತ್ತೆ, ಅತ್ತೆ,  ಯಾರೋ ಮೆಲ್ಲನೆ  ಕರೆದಂತಾಯ್ತು ,  ನಿದ್ದೆಯಲ್ಲೇ  ಹ್ಞೂ ಗುಟ್ಟಿದೆ . 
ಅತ್ತೇ ,  ಅಮ್ಮ  ಏಳಿಸೋಕೆ ಹೇಳಿದ್ಲು ,ಎಲ್ಲಾರದ್ದೂ ತಿಂಡಿ   ಮುಗೀತಾ  ಬಂತು . ಏಳ್ತೀಯಾ ? 
ಹಾಂ , ಬಂದೆ . ನೀ ಹೋಗು  ಎಂದು ಮಗ್ಗುಲಾದೆ . ಮತ್ತೆರಡು ನಿಮಿಷಕ್ಕೆ ಮೆಲ್ಲಗೆ ಕಣ್ಣು ಬಿಟ್ಟವಳಿಗೆ  ಎಲ್ಲ ಅಯೋಮಯ ! ಎಲ್ಲಿದ್ದೇನೆ  ಎಂಬ ಕನ್ಫ್ಯೂಷನ್ . ಕಿಡಕಿಯಿಂದ ಬೆಳಕಿನ ರೇಖೆ ಮುಖ ಸವರುತ್ತಿತ್ತು . 
ಥಟ್ ಎಂದು ಎದ್ದು ಕುಳಿತವಳಿಗೆ ಊರಲ್ಲಿ ಮನೆಯಲ್ಲಿರುವುದು ನೆನಪಾಯಿತು . ಹಿಂದಿನ ದಿನ  ಊರು ತಲುಪುವಾಗಲೇ ಕತ್ತಲಾಗಿತ್ತು.  ಎಲ್ಲರನ್ನೂ ಮಾತನಾಡಿಸಿ , ಊಟ ಮುಗಿಸುವಷ್ಟರಲ್ಲಿ ಕಣ್ಣು ಬಿಡಲಾಗದಷ್ಟು ನಿದ್ರೆ .  ಅಂತೂ   ಮಲಗಿದವಳಿಗೆ ಈಗಲೇ ಎಚ್ಚರಾಗಿದ್ದು . ಅದೂ ಅಣ್ಣನ ಮಗಳು ಕರೆದಾಗ . 
 ಕೆಳಗಿಳಿದು ಬಚ್ಚಲಿಗೆ ಹೋಗಿ  ಮುಖ ತೊಳೆದು ಫ್ರೆಶ್ ಆಗಿ  ಅಡುಗೆ ಮನೆಗೆ ಕಾಲಿಟ್ಟಾಗ ಅತ್ತಿಗೆ  ತೆಳ್ಳೇವು ಮಾಡುತ್ತಿದ್ದಳು . 
"ಗುಡ್ ಮಾರ್ನಿಂಗ್ !  ಚೆನ್ನಾಗಿ ನಿದ್ರೆ ನಿಂಗೆ ಅದಕ್ಕೆ ಬೇಗ ಏಳಿಸಿಲ್ಲ . ಎಲ್ಲಾರದ್ದೂ ತಿಂಡಿ ಮುಗೀ ತಾ ಬಂತು. ಆಮೇಲೆ ನಿಂಗೆ  ಹಿಟ್ಟು ಖರ್ಚಾಗೋದ್ರೆ  ಅಂತ ಎಳ್ಸೋಕೆ  ಹೇಳಿದ್ದು"  ಅಂತ ನಕ್ಕಳು 
"ಅಯ್ಯೋ ಅತ್ಗೆ , ಹಾಸಿಗೆ ಮೇಲೆ   ಬಿದ್ದವಳಿಗೆ ಸಹನಾ ಕರೆಯೋವರೆಗೂ  ಏನೇನೂ ಎಚ್ಚರ ಇರ್ಲಿಲ್ಲ ನೋಡು !" ನಗುತ್ತ ಎದುರಿಗಿದ್ದ ಪ್ಲೇಟಿನಿಂದ ತೆಳ್ಳೇವು ಚೂರು ಮಾಡಿ ಬೆಲ್ಲ ಹಚ್ಚ ತೊಡಗಿದೆ . 
"ನಾಳೆಯಿಂದ ಇನ್ನು ಮನೆ ತುಂಬಾ  ಜನ . ಇವತ್ತೊಂದಿನ ನಿನ್ನತ್ರ ಸುದ್ದಿ ಹೇಳೋಕಾಗೋದು"  ಎನ್ನುತ್ತಾ ಅತ್ತಿಗೆ ಬಿಸಿ ಬಿಸಿ ಚಹಾ ಲೋಟ ತಂದಿಟ್ಟಳು . 
ಹನ್ನೆರಡು ವರ್ಷಗಳ ನಂತರ ಊರಿಗೆ ಬಂದಿದ್ದು . ಅದೂ ಅಣ್ಣನ ಮಗಳ ಮದುವೆಗೆ ಎಂದು . ಮಾತಾಡಲು ಬೇಕಷ್ಟಿದೆ . 
ಮದುವೆ ಆಗಿ ಅಮೆರಿಕಾ ಕ್ಕೆ ಹೋಗಿ ಇಪ್ಪತ್ತು ವರ್ಷಗಳೇ ಆಗೋಯ್ತು. ನಡುವೆ  -ಒಂದು ಎರಡು ವರ್ಷಕ್ಕೊಮ್ಮೆ ಬರುತ್ತಿದ್ದರೂ  ಬೆಂಗಳೂರುವರೆಗಷ್ಟೇ . ಅಪ್ಪ ಅಮ್ಮ , ಮತ್ತೆ  ಅತ್ತೆ ಮಾವ ಕೂಡ  ಅಲ್ಲೇ ಇರೋದ್ರಿಂದ  ಅಲ್ಲಿಗಷ್ಟೇ  ಟ್ರಿಪ್ . ಊರಲ್ಲಿದ್ದಿದ್ದು ದೊಡ್ಡಪ್ಪನ ಕುಟುಂಬ . ತುಂಬಾ ಪ್ರೀತಿ ಮಾಡಿಕೊಳ್ಳುತ್ತಿದ್ದರೂ  ಯಾಕೋ ಅಲ್ಲಿಗೆ ಹೋಗಲು ಟೈಮ್ ಸಿಕ್ತಾ ಇರಲಿಲ್ಲ . ಮಕ್ಕಳು ಚಿಕ್ಕವರಿದ್ದಾಗ ಒಮ್ಮೆ ಬಂದಿದ್ದು,  ಅದಾಗಿ ಹನ್ನೆರಡು ವರ್ಷಗಳು !!  
ಯೋಚಿಸುತ್ತಾ ತಿಂಡಿ ತಿನ್ನುತ್ತಿದ್ದವಳಿಗೆ  ಅತ್ತಿಗೆ  ಹೇಳಿದ್ಲು. 
"ಮಕ್ಳನ್ನೂ  ಕರ್ಕೊಂಡ್ ಬರ್ಬೇಕಿತ್ತು.  ಎಷ್ಟು  ವರ್ಷ ಆಗೋಯ್ತು ನೋಡಿ. "
"ಅವರಿಬ್ಬರಿಗೂ ರಜೆ ಸಿಕ್ಕಲ್ಲ ಅತ್ಗೆ  ಈಗ. ಕಾಲೇಜ್ ಅಲ್ವ ? ನಂಗೆ ಯಾಕೋ  ತುಂಬಾ ಆಸೆ ಆಯ್ತು ಸಹನಾ ಮದ್ವೇಗ್ ಬರಲೇ ಬೇಕು ಅಂತ . ಅದಕ್ಕೆ , ದೀಪಕ್ ಹೇಳಿದ , ಮಕ್ಕಳ ಜೊತೆ  ಇದ್ದೀನಿ  ನೀ ಹೋಗು ಅಂತ .ಬಂದ್ಬಿಟ್ಟೆ ! "
"ಒಳ್ಳೆದಾಯ್ತು ಬಿಡು . ನಮಗೂ ಎಷ್ಟು ಖುಷಿಯಾಯ್ತು ! " ಅತ್ತಿಗೆ ಮುಖ ಹೊಳೀತಿತ್ತು . 
ಒಬ್ಬೊಬ್ಬರೇ ನೆಂಟರು ಬರತೊಡಗಿ ನಾಲ್ಕುದಿನಕ್ಕೆ ಭರ್ಜರಿಯಾಗಿ ಮದುವೆಯೂ ಮುಗೀತು .  ಮತ್ತೆರಡು ದಿನ ಊರಲ್ಲೇ ಕಳೆಯಬೇಕೆನಿಸಿತು ಇಷ್ಟು ವರ್ಷಗಳ ಬಾಕಿ  ಇತ್ತಲ್ಲ ? ಬಾಲ್ಯದ ನೆನಪು , ಚಿಕ್ಕವಳಿದ್ದಾಗ ಸುತ್ತಿದ್ದ  ಜಾಗಗಳಿಗೆಲ್ಲ  ಮತ್ತೆ ಹೋಗಿ ನೋಡಬೇಕೆನಿಸುತ್ತಿತ್ತು . ಚಿಕ್ಕಪ್ಪನ ಮಗಳು ಮಾಧವಿಯ ಜೊತೆ ತೋಟ , ಗದ್ದೆ ,ಹೊಳೆ , ದೇವಸ್ಥಾನ ಎಲ್ಲ ಅಲೀತಾ ಇದ್ದೆ . ತುಂಬಾ ಬದಲಾವಣೆ  ಏನೂ ಇರಲಿಲ್ಲ . ಅದೇ ಶಾಂತ ಪರಿಸರ, ಆತ್ಮೀಯತೆಯಿಂದ ಮಾತಾಡಿಸೋ ಜನ .  
ಅವತ್ತು ಲಕ್ಷ್ಮತ್ತೆ ಮನೆಗೆ  ಹೋಗುವಾಗ  ಅವ  ಕಂಡ . ಅವನೇ ಹೌದೋ ಅಲ್ಲವೋ ಎಂದು ಯೋಚಿಸುತ್ತಿರುವಾಗಲೇ  ಮಾಧವಿ  ಮಾತಾಡಿಸಿದಳು.  "ವಿನಯಣ್ಣ  , ಯಾಕೋ ಮೊನ್ನೆ ಮದ್ವೆಗೆ ಬರ್ಲೆ ಇಲ್ಲ? ಊರ ಮನುಷ್ಯರೇ ಹೀಂಗೆ ಮಾಡಿದ್ರೆ ಎಂತ ಮಾರಾಯ ? " 
"ಅಯ್ಯೋ, ಹೌದೇ ಮಾರಾಯ್ತಿ. ಅವತ್ತೇ ಸಲ್ಪ ಕೋರ್ಟಲ್ಲಿ ಕೆಲಸ ಇತ್ತು. ಎಂತ ಮಾಡದು?  ಮನೇವ್ರೆಲ್ಲ ಬಂದಿದ್ರಲ್ಲೇ "  ಎನ್ನುತ್ತಾ, ಹಿಂದಿದ್ದ ನನ್ನನ್ನು ನೋಡಿ " ಅರೆ, ಇದೇನು ಭಾರಿ ಅಪರೂಪದ ಜನ  ಬಂದ್ರಲ್ಲ ?  " ಎಂದು ನಕ್ಕ . 
" ಗುರ್ತು ಸಿಕ್ತಲ್ಲ ಮಾರಾಯ ನಂದು . ಮರೆತೇ ಹೋಯ್ತೆನ ಅಂದ್ಕಂಡಿದ್ದೆ " 
" ಅದು ಹ್ಯಾಂಗೆ ಗುರ್ತ ಸಿಕ್ಕಲ್ಲ ಮಾರಾಯ್ತಿ ?  ನೀನೇನು ಜಾಸ್ತಿ ಬದಲಾಗಿಲ್ಲ. ನನ್ನ ನೋಡು "  ಎಂದು ದೊಡ್ಡದಾಗಿ ನಕ್ಕು 
" ಮತ್ತೆ? ಎಲ್ಲ ಆರಾಮ ? ಎಷ್ಟ್ ವರ್ಷ ಆಗೋಯ್ತು ನಿನ್ನ ನೋಡಿ.  ಒಂದ್ ಕೆಲಸ ಮಾಡು.  ಸಂಜೆ ಬಾ ಮನೆಗೆ  ಚಾ ಕುಡಿಯೋಕೆ . ಆರಾಮಾಗಿ ಸುದ್ದಿ ಹೇಳ್ವ . ಈಗ  ಕೆಲಸ ಇದೆ . ಮಾಧವಿ ಇವಳನ್ನ ಕರ್ಕೊಂಡ್ ಬಾ, ನಿನ್ನ ಜವಾಬ್ದಾರಿ ಮತ್ತೆ "  ಎಂದವನು  "ಸಿಗುವ  ಸಂಜೆಗೆ"  ಎನ್ನುತ್ತಾ ನಡೆದು ಬಿಟ್ಟ . 
ನಾನು ಅವನು ಹೋದತ್ತ ನೋಡುತ್ತಾ ನಿಂತುಬಿಟ್ಟೆ .  ಬದಲಾಗಿದ್ದ ಅವನು ಹೊರನೋಟಕ್ಕಂತೂ ! ಅರ್ಧ ಬೋಳಾದ ತಲೆಯಲ್ಲಿ ಉಳಿದಿದ್ದು ಸಲ್ಪ ಬಿಳಿಕೂದಲು . ಮುಖದಲ್ಲಿ ಎದ್ದು ಕಾಣುವ ನೆರಿಗೆಗಳು . ಎಲೆ ಅಡಿಕೆ ತಿಂದು ಕೆಂಪಾದ ಹಲ್ಲುಗಳು . ವಯಸ್ಸಾಗಿದ್ದಕ್ಕಿಂತ ಹೆಚ್ಚೇ ಎನಿಸುವ ಶರೀರ .  ಹೇಗಿದ್ದವನು ಹೇಗಾಗಿ ಬಿಟ್ಟ !!  ನಾನು ನೋಡಿದ್ದ,  ಇಷ್ಟ ಪಟ್ಟಿದ್ದ , ತಲೆತುಂಬ ಕೂದಲಿನ , ಬಿಳಿ ನಗೆಯ , ಸ್ಪುರದ್ರೂಪಿ ವಿನಯ ಇವನಲ್ಲ ಎನಿಸಿತು ಮನಸ್ಸಿಗೆ . 
"ಏ ಅಕ್ಕ, ವಿನಯಣ್ಣ ಅವರ ಮನೆಗೆ ಸಂಜೆ ಕರೆದಿದ್ದು . ಈಗ ನಡಿ  ಲಕ್ಷ್ಮತ್ತೆ ಮನೆಗೆ . ಕಾಯ್ತಿರ್ತಾಳೆ ಅವಳು "  ಎನ್ನುತ್ತಾ  ಎಚ್ಚರಿಸಿದಳು . 
ಸಂಜೆಯವರೆಗೂ   ವಿನಯ ತಲೆಯಲ್ಲಿ ಸುತ್ತುತ್ತಿದ್ದ .
ಚಿಕ್ಕವಳಿದ್ದಾಗ ಬೇಸಿಗೆ ರಜೆಗೆ ಊರಿಗೆ ಹೋದಾಗೆಲ್ಲ  ಜೊತೆಗೆ ಆಡುತ್ತಿದ್ದೆವು , ಅಲೆಯುತ್ತಿದ್ದೆವು . ಮಾವಿನ ಹಣ್ಣು , ಗೇರು ಹಣ್ಣು , ಕವಳಿ ಕಾಯಿ, ಕೊಯ್ಯಲು  ಅವನೇ ಜೊತೆ.  ಬೆಟ್ಟದಲ್ಲಿ ಹೊಳೆ ದಾಸಾಳ ಹಣ್ಣು ಕೊಯ್ಯುವಾಗ  ಒಮ್ಮೊಮ್ಮೆ ಇಡೀ ಗೊಂಚಲನ್ನೆ ಕೊಯ್ದು  ಕೈಗಿಡುತ್ತ ನೋಡು ಒಳ್ಳೆ ಕೆಂಪು ಹೂ ತರಾ ಇದೆ . ಮುಡ್ಕೋ . ಚಂದ ಕಾಣತ್ತೆ ಎನ್ನುತ್ತಿದ್ದ.  ದೊಡ್ಡಾಗುತ್ತಿದ್ದಂತೆ  ಹಾಗೆ ಅಲೆಯುವುದು ಕಮ್ಮಿ ಆದರೂ ಸಂಜೆ  ಗದ್ದೆ ಬದಿಯಲ್ಲಿ ಕುಳಿತು ಸುದ್ದಿ ಹೇಳುವುದು ಕಮ್ಮಿ ಆಗಿರಲಿಲ್ಲ . ಮೆಲ್ಲಗೆ  ಕನಸುಗಳು ಮನದಲ್ಲಿ ಕಾಲಿಡಿತ್ತಿದ್ದುದು ನನಗೆ  ಅರಿವಾಗುತ್ತಿತ್ತು . ಇಂಜಿನಿಯರಿಂಗ್ ಮಾಡಲೆಂದು ಬೆಂಗಳೂರಿಗೆ ಬಂದವನು  ಹಾಸ್ಟೆಲ್ ವ್ಯವಸ್ಥೆ ಆಗುವ ವರೆಗೂ ನಮ್ಮಲ್ಲೇ ಇದ್ದ . ಆಗ ನನ್ನ ಕನಸುಗಳು ಮತ್ತಷ್ಟು ಗಟ್ಟಿ ಆಗ ತೊಡಗಿದ್ದವು . ಅವನನ್ನೇ  ಮದುವೆ ಆಗಬೇಕೆನಿಸುತ್ತಿತ್ತು . ಅವನಿಗೆ ಹೇಳಬೇಕೆಂದರೂ ಆಗದ ನಾಚಿಕೆ.  ಅವನು ಎಂಜಿನಿಯರಿಂಗ್ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಮೇಲೂ ಆಗೀಗ ಮನೆಗೆ ಬರ್ತಿದ್ದ.  ಅಪ್ಪ ಅಮ್ಮ ನನಗೆ ಮದುವೆ ಮಾಡುವ  ತಯಾರಿಯಲ್ಲಿದ್ದರು.  ಮನೆಗೆ ಬಂದವನಿಗೆ .
"ನಮ್ಮ ರೂಪಾಗೆ ಗಂಡು ನೋಡ್ತಾ ಇದೀವಿ. ನಿಂಗ್ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಹೇಳು ಮಾರಾಯ , ನೀನು ಸಣ್ಣ ಇದ್ದಾಗಿಂದ ನೋಡಿದ ಹುಡುಗಿ "   ಅಮ್ಮ ಹೇಳುತ್ತಿದ್ದರೆ , ನನ್ನ ಎದೆ ಬಡಿತ ಏರುತ್ತಿತ್ತು . ಇವನೇ ಅಡ್ಡಿಲ್ಲ ನಂಗೆ ಎಂದು ಹೇಳಿಬಿಡಲೇ  ಎಂಬ  ತುಡಿತ . ಹೊರಡುವಾಗ ಅವನು ನನ್ನನ್ನು ಕರೆದ . ನಾನು  ಬಯಸಿದ್ದನ್ನು ಅವನು ಹೇಳಬಹುದೇನೋ ಎಂದು ಕಲ್ಪಿಸಿ  ಪುಳಕಗೊಂಡೆ  . 
" ರೂಪಾ ,  ನಿಂಗೆ ಇಂಥದ್ದೇ ಹುಡುಗ ಬೇಕು ಅಂತ ಏನಾದ್ರೂ ಇದ್ರೆ , ನಂಗೆ ಹೇಳು . ನೋಡ್ತೀನಿ, ಎಷ್ಟೆಂದ್ರೂ ಚೈಲ್ಡ್ ಹುಡ್  ಫ್ರೆಂಡ್ ನೀನು . ಸಂಕೋಚ ಮಾಡ್ಕೋಬೇಡ  " ಎಂದು ನಕ್ಕು , ತಲೆ ಮೇಲೆ ಮೆಲ್ಲಗೆ ತಟ್ಟಿ  ಹೊರಟೆ ಹೋದ !   
ನನ್ನ ಕನಸುಗಳು ಚೂರಾದಂತೆನಿಸಿತು . ಪೂರ್ತಿ ಗೊಂದಲ ! ಹಾಗಿದ್ದರೆ , ಅವನಿಗೆ ನನ್ನ ಬಗ್ಗೆ ಏನೂ ಭಾವನೆಗಳೇ ಇರಲಿಲ್ಲವೇ? ಅದು ಬರೀ ಸ್ನೇಹ ಮಾತ್ರನಾ ? ನಾನಷ್ಟೇ   ಪ್ರೀತಿ -ಪ್ರೇಮ ಅಂತ ಕನಸು ಕಾಣ್ತಿದ್ದೆನಾ  ? ಏಕೋ ನನಗೆ ಅರಗಿಸಿಕೊಳ್ಳುವುದು ಕಷ್ಟ ಆಗ್ತಾ ಇತ್ತು. ಕೆಲವು ದಿನ ಮಂಕಾಗಿದ್ದೆ . 
ಮತ್ತೆ  ಇವೆಲ್ಲವನ್ನೂ ಕೊಡವಿಕೊಂಡು ಬಿಟ್ಟೆ . ಅವನಿಗೆ ನನ್ನ ಬಗ್ಗೆ ಸ್ನೇಹವಲ್ಲದೆ ಮತ್ತೇನೂ ಭಾವನೆ ಇರದಾಗ , ನಾನು ಏನೋ ಕಲ್ಪಿಸಿಕೊಂಡು ಬೇಜಾರಾಗುವುದರಲ್ಲಿ ಅರ್ಥವಿಲ್ಲ ಎನಿಸಿತು.  ದೀಪಕ್ ನ  ಮದುವೆ  ಆಗಿ ಅಮೆರಿಕಾಕ್ಕೆ ಹಾರಿ ಬಿಟ್ಟೆ . ಕ್ರಮೇಣ  ಇವೆಲ್ಲ  ಮರೆತೇ ಹೋದಂತಾಯಿತು.  ನೆನಪಾದರೂ  ನನ್ನ ಹುಚ್ಚುತನವನ್ನು ನೆನೆದು  " ಸಿಲ್ಲಿ " ಅನಿಸುವಷ್ಟು  . 
ಈಗ 20 ವರ್ಷಗಳ ನಂತರ ಮತ್ತೆ ಅವನು ಎದುರು ಬಂದಾಗ  ಹಳೆಯದೆಲ್ಲ ನೆನಪಾಗಿ ಬಿಟ್ಟಿತು . 
ಸಂಜೆ ವಿನಯನ ಮನೆಗೆ ಹೊರಡಲು ತಯಾರಾಗುತ್ತಿದ್ದೆ. ತಂದಿದ್ದ  ಕೆಲವೇ  ಡ್ರೆಸ್ ಗಳು ತೊಳೆದು ಒಣಗುತ್ತಿದ್ದವು. ಇದ್ದ ಒಂದೆರಡು ಸೀರೆಗಳು  ರೇಶಿಮೆಯವು .  ಏನು ಹಾಕಿಕೊಂಡು ಹೋಗುವುದು ಎಂಬ ತಲೆಬಿಸಿಯಲ್ಲಿದ್ದೆ . 
ಅತ್ತಿಗೆ  ಹೇಳಿದ್ಲು. "ಅಯ್ಯೋ ನೀನು ಪ್ಯಾಂಟ್ ಹಾಕ್ಕೊಂಡೆ ಹೋಗೆ . ಅಡ್ಡಿಲ್ಲ . ಈಗೆಲ್ಲ ಯಾರೂ ಅಷ್ಟೆಲ್ಲ ಮಾತಾಡಲ್ಲ ಬಟ್ಟೆ ಬಗ್ಗೆ. ಅದ್ರಲ್ಲೂ ಊರಲ್ಲಿ ಎಲ್ಲರಿಗೂ ಗೊತ್ತು ನೀನು ಅಮೆರಿಕಾದಲ್ಲಿರೊಳು ಅಂತ " ಎನ್ನುತ್ತಾ ನಕ್ಕು ಬಿಟ್ಟಳು . 
ಸರಿ ಎಂದು , ಜೀನ್ಸ್ ಏರಿಸಿ  ಒಂದು ಕುರ್ತಾ ಹಾಕಿ  ರೆಡಿ ಆದೆ . ಮಾಧವಿಯ ಜೊತೆ ಹೆಜ್ಜೆ ಹಾಕಿದೆ . 
ಅವನ ಮನೆ ಇದ್ದಲ್ಲೇ ಇತ್ತು . ಸ್ವಲ್ಪ ಹೊಸರೂಪ ಪಡೆದಿತ್ತು . ಗೇಟ್ ಶಬ್ದವಾದಾಗ , ಹೊರಗೆ ಬಂದವನು ,  ಎಲೆ ಅಡಿಕೆ ತುಪ್ಪಿ, ಬಾಯ್ತುಂಬಾ ನಗುತ್ತಾ ಬನ್ನಿ ಬನ್ನಿ ಎಂದು ಕರೆದ . 
ಒಳಗೆ ಹೋಗಿ ಖುರ್ಚಿಯ ಮೇಲೆ ಕೂತೆವು . 
ಸೀರೆ ಸೆರಗಿಗೆ ಕೈ ಒರೆಸುತ್ತಾ ಬಂದ  ಹೆಂಡತಿಯನ್ನು, ಓದುತ್ತಾ ಕುಳಿತದ್ದ ಮಗನನ್ನು ಪರಿಚಯಿಸಿದ . ಬೇಡವೆಂದರೂ  ಎರಡೆರಡು ಬಾರಿ ಶಿರಾ ಬಡಿಸಿದಳು ಅವನ ಹೆಂಡತಿ. ಚಹಾ ಕುಡಿಯುತ್ತಾ  ಶುರುವಾದ ಹರಟೆ  ಮುಗಿಯುತ್ತಲೇ  ಇರಲಿಲ್ಲ . 
ಹಳೆಯದನ್ನೆಲ್ಲ ನೆನಪಿಸಿಕೊಂಡು ನಕ್ಕೆವು. ಅವನ ಹೆಂಡತಿಯೂ  ಆಸಕ್ತಿಯಿಂದ ಕೇಳುತ್ತಿದ್ದಳು . 
ಅಷ್ಟರಲ್ಲಿ ಮಾಧವಿಯ ಮೊಬೈಲ್ ರಿಂಗಣಿಸಿತು.  ಮಾತಾಡಿದವಳು , "ಅಕ್ಕಾ  ನಾನು ಅರ್ಜೆಂಟ್ ಮನೆಗೆ ಹೋಗ್ಬೇಕು.  ನಿನ್ನ ಭಾವ ಬಂದಿದಾರಂತೆ . ನೀನು ಆರಾಮಾಗಿ ಸುದ್ದಿ ಹೇಳ್ಕೊಂಡು ಆಮೇಲೆ ಬಾ . " 
ನಂಗೆ ಒಮ್ಮೆಲೇ ಮುಜುಗರ ಎನಿಸ ತೊಡಗಿತು.  
ಅಷ್ಟ್ರಲ್ಲಿ ಅವನೇ ಹೇಳಿದ , "ನೀ ಹೋಗು ಮಾಧವಿ, ಇವಳು ಸಲ್ಪ ಹೊತ್ತು ಇರಲಿ.  ತುಂಬಾ ವರ್ಷ ಆಯ್ತು. ಮತ್ತೆ ಸಿಗೋದು ಯಾವಾಗ್ಲೋ ! ನಾನು ಬಿಟ್ಟು ಕೊಡ್ತೇನೆ  ಅವಳಿಗೆ". 
ಮಾಧವಿ ಹೋದಮೇಲೂ ತಾಸುಗಟ್ಟಲೆ ನಾವು ಹರಟುತ್ತಿದ್ದೆವು. ಮನೆ , ಜಮೀನು, ಮಕ್ಕಳು , ಅಮೆರಿಕಾ , ಅದು ಇದು ಏನೇನಿಲ್ಲ  ! 
 " ನೀನು ಅಷ್ಟೇನೂ ಬದಲಾಗಿಲ್ಲ ನೋಡು .  ಇನ್ನೂ ಚಿಕ್ಕ ಹುಡುಗಿ ತರಾನೇ ಕಾಣಿಸ್ತೀಯ , ಹಾಗೆ ಮಾತಾಡ್ತೀಯಾ"  ಎಂದು ತಮಾಷೆ ಮಾಡಿದ . "ನಾನು ನೋಡು ಹೇಗಾಗಿದೀನಿ ಅಂತ!  ಏನೋ ನನ್ನ ಹೆಂಡ್ತಿ  ಇನ್ನು ನನ್ನ  ಜೊತೆ ಇದಾಳೆ ನನ್ನ  ಪುಣ್ಯ" ಎಂದು ನಕ್ಕ. 
ನಂಗೆ ಕುತೂಹಲವಾಗಿ ಕೇಳಿದೆ .  "ಹೌದೂ ,ನೀನು ಜಾಬ್ ಮಾಡ್ತಾ ಇದ್ಯಲ್ಲ ಮಾರಾಯ ? ಮತ್ತೆ ಯಾಕೆ ಬಿಟ್ಟೆ ? ಊರಿಗೆ ಯಾವಾಗ್ ಬಂದೆ ? "
ಅವನು ಗಂಭೀರನಾದ .  ದೊಡ್ಡ ಉಸಿರು ಬಿಟ್ಟು  ಹೇಳಿದ.  "ಅಯ್ಯೋ ದೊಡ್ಡ  ಕತೆ !  ನಾಲ್ಕೇ ವರ್ಷ ನಾನು ಜಾಬ್  ಮಾಡಿದ್ದು.  ಯಾಕೋ ಸರಿ ಹೋಗಲಿಲ್ಲ. ಅಷ್ಟೊತ್ತಿಗೆ , ಅಪ್ಪಂಗೆ ಬಿದ್ದು ಕಾಲು ಮುರೀತು . ಆವಾಗ ನೋಡ್ಕೊಳೋಕೆ ಅಂತ ಮನೆಗೆ ಬಂದವನಿಗೆ ವಾಪಸ್ ಹೋಗ್ಬೇಕು ಅನಿಸಲಿಲ್ಲ . ಇಲ್ಲೇ ಉಳ್ಕೊಂಡು ಬಿಟ್ಟೆ. ಇರೋದ್ರಲ್ಲಿ ಅದು ಇದು ಅಂತ ಮಾಡ್ಕೊಂಡ್ ಆರಕ್ಕೆ ಹೆಚ್ಚಿಲ್ಲ ಮೂರಕ್ಕೆ ಕಮ್ಮಿ ಇಲ್ಲ ಅನ್ನೋ ತರಾ  ಇದೆ ಜೀವನ.  , ಶ್ರೀಮಂತಿಕೆ ಇಲ್ಲದೆ ಹೋದ್ರೂ  ಕೊರತೆ ಅಂತೇನು ಇಲ್ಲ . ಜೀವನಕ್ಕೆ ಸಾಕು .  ಕಷ್ಟಪಟ್ಟು ಒಂದ್ ಮದ್ವೆ ಮಾಡ್ಕೊಂಡೆ ,  ಅದೂ ಈಗ ಊರಲ್ಲಿರೋರಿಗೆ ಹೆಣ್ಣು ಕೊಡೋಲ್ಲ ನೋಡು , ಅದ್ಕೆ ಹೇಳಿದ್ದು ಕಷ್ಟ ಪಟ್ಟು ಮದ್ವೆ ಅಂತ ." ದೊಡ್ಡದಾಗಿ ನಕ್ಕ .
 ಅವನ ಹೆಂಡತಿ ಹುಸಿಮುನಿಸಿನಿಂದ  ಅವನತ್ತ ನೋಡಿದ್ದು ಕಂಡಿತು . 
ಅಂತೂ ಹೊರಗೆ ಸುಮಾರು ಕತ್ತಲಾದಾಗ , ನಾನು ಎದ್ದೆ . 
"ಲೇಟಾಗೋಯ್ತು ಹೊರಡ್ತೀನಿ . "
"ಇರು , ಒಬ್ಳೆ ಬೇಡ . ನಾನು ಬಿಟ್ ಕೊಡ್ತೀನಿ" ಎಂದು ಎದ್ದ . ಅವನ ಹೆಂಡತಿಯೂ ದನಿಗೂಡಿಸಿದಳು . 
ಅರಿಶಿನ ಕುಂಕುಮ ಇಟ್ಟು ಒಂದು ಸೀರೆಯನ್ನು ಕೈಲಿಟ್ಟಳು. "ನಿಂಗೆ ಇಷ್ಟ ಆಗತ್ತೋ ಇಲ್ವೋ , ಅರ್ಜೆಂಟಲ್ಲಿ ಇವರು ತೊಗೊಂಡ್ ಬಂದ್ರು"  ಎಂದು ಸಂಕೋಚದಿಂದ ಹೇಳಿದಳು . 
ಹೆಗಲಿಗೊಂದು ಟವೆಲ್ ಹಾಕಿ ಹೋರಟ.  "ನೀನ್ ನೋಡು ಟಿಪ್ ಟಾಪ್ ಆಗಿ  ಪ್ಯಾಂಟ್  ಹಾಕಿ ಬಂದಿದ್ಯ. ನಾನು  ಹೀಗೆ  ಹಳೆ ಲುಂಗಿ ಬನಿಯನ್ ! "ನಕ್ಕ .
ನಿಧಾನವಾಗಿ ಹೊರಟೆವು .ಗದ್ದೆಯಲ್ಲಿ ನಡೆಯುತ್ತಿರುವಾಗ ತಲೆಯಲ್ಲಿ ನೂರೆಂಟು ಪ್ರಶ್ನೆಗಳು .  ಅಕಸ್ಮಾತ್ ನಾನು ಇವನನ್ನು ಮದುವೆ ಆಗಿದ್ದರೆ ,ಈಗ ಇದೇ ಹಳ್ಳಿಯಲ್ಲಿರುತ್ತಿದ್ದೆ. ಒಂದು ಹಳೆ ಸೀರೆಯನ್ನೂ, ನೈಟಿಯನ್ನೋ ಹಾಕಿರುತ್ತಿದ್ದೆ. ಮನೆ- ಮಕ್ಕಳು , ನೆಂಟರು ,ಕೊಟ್ಟಿಗೆಯ ಪ್ರಪಂಚದಲ್ಲಿ. ಬೆಂಗಳೂರಲ್ಲಿ ಹುಟ್ಟಿ ಬೆಳೆದವಳು ಇಲ್ಲಿಗೆ ಹೊಂದಿಕೊಳ್ಳುತ್ತಿದ್ದೆನಾ? ಸಾಧ್ಯವಾಗದಿದ್ದರೆ ಬೇರೆ ಆಪ್ಷನ್ ಇತ್ತಾ? ಅವನಿಗೆ ಹಳ್ಳಿ ಜೀವನ ಇಷ್ಟ . ಆದರೆ ನಂಗೆ  ಸರಿ ಹೋಗ್ತಾ ಇತ್ತಾ ? ಯಾಕೋ , ಆಗಿದ್ದೆಲ್ಲ ಒಳಿತೇ ಆಯಿತು ಎಂದೆನಿಸಿಬಿಟ್ಟಿತು .  ಆದರೂ ಒಂದು ಕುತೂಹಲ ಕಾಡ್ತಾನೇ ಇತ್ತು . ಅವನಿಗೆ ನಿಜಕ್ಕೂ ನನ್ನ ಬಗ್ಗೆ ಯಾವ ಭಾವನೆಗಳೂ ಇರಲಿಲ್ವಾ? ಇವತ್ತು ಕೇಳಿಯೇ ಬಿಡಬೇಕೆನಿಸಿತು.  
ಅಷ್ಟರಲ್ಲಿ ಪಿಚಕ್ ಎಂದು ಎಲೆ ಅಡುಕೆ ತುಪ್ಪಿದವನನ್ನು ಕೇಳಿದೆ "ಎಂತ ಮಾರಾಯ ಬಿಡದೆ ಕವಳ ಹಾಕ್ತೀಯಲ್ಲ? "
 ನಕ್ಕು ಬಿಟ್ಟ . "ಏನ್ ಮಾಡೋದೇ ? ಊರಿಗೆ ಬಂದ  ಮೇಲೆ ಇಲ್ಲಿನವರ ಜೊತೆ ಸೇರಿ ಅಭ್ಯಾಸ ಆಗೋಗಿದೆ  ಬಿಡಬೇಕು ಅಂದ್ರೆ ಕಷ್ಟ . "
"ವಿನಯ, ಒಂದು ವಿಷ್ಯ ಕೇಳಲಾ ? ಹುಚ್ಚು ಎನಿಸ ಬಹುದು ನಿಂಗೆ , ಆದ್ರೆ ನಿಜ ಹೇಳು ನಿಂಗೆ ಯಾವತ್ತೂ ನನ್ನ ಬಗ್ಗೆ ಏನೂ ಫೀಲಿಂಗ್ಸ್ ಇರಲೇ  ಇಲ್ವಾ? "
ನಿರೀಕ್ಷಿಸಿರದ ಪ್ರಶ್ನೆಗೆ ಮೌನವಾಗಿಬಿಟ್ಟ . ಒಂದೇ ಕ್ಷಣ ! ಮತ್ತೆ ನಕ್ಕು ಬಿಟ್ಟ . 
"ಎಂತ ಹುಡುಗಿ ಮಾರಾಯ್ತಿ.  ಹಂಗೆಲ್ಲಾ ಇದಿದ್ರೆ , ನೀನು ಇವತ್ತು ಈ ಹಳ್ಳಿ ಮೂಲೇಲಿ  ದನ ಕರೀತಾ ಇರ್ಬೇಕಾಗ್ತಿತ್ತು ನೋಡು ! ಈಗ ಎಷ್ಟ್ ಆರಾಮಾಗಿ , ಅಮೆರಿಕಾದಲ್ಲಿ ಝಂ ಅಂತ ಕಾರಲ್ಲಿ ಓಡಾಡ್ಕೊಂಡು,  ವಿಮಾನದಲ್ಲಿ ಹಾರಾಡಿಕೊಂಡು ಇದೀಯಾ . ಹುಚ್ಚು ಯೋಚನೆ ಮಾಡ್ಬೇಡ. " ಅದೇ ಆತ್ಮೀಯತೆಯಿಂದ ತಲೆ ಮೇಲೆ ಮೆಲ್ಲಗೆ ತಟ್ಟಿದ . 
ಅಷ್ಟ್ರಲ್ಲಿ ಮನೆ ಬಂತು.  ಗೇಟ್  ತೆಗೆಯುವಷ್ಟರಲ್ಲಿ , "ನಾ ಮತ್ತೆ ಒಳಗೆ ಬರೋದಿಲ್ಲ . ನೀ ಸಿಕ್ಕಿದ್ದು , ಇಷ್ಟೊತ್ತು ಕೂತು ಮಾತಾಡಿದ್ದು ತುಂಬಾ ಖುಷಿ ಆಯಿತು ರೂಪಾ . ಇನೊಂದ್ಸಲ ಯಾವಾಗ ಸಿಗೋದೋ  ಗೊತ್ತಿಲ್ಲ . ಮತ್ತೆ ಭಾರತಕ್ಕೆ ಬಂದಾಗ  ಸಾಧ್ಯ ಆದಾಗೆಲ್ಲ ಬಂದು ಹೋಗು . ಖುಷಿ ಆಗತ್ತೆ "ಅಂದ . 
ಹೃದಯ ಭಾರವಾದಂತೆನಿಸಿ ಅವನ ಕೈ ಹಿಡಿದು ಒತ್ತಿದೆ ." ಖಂಡಿತಾ ಬರ್ತೀನಿ ಕಣೋ . ನಂಬರ್ ಇದೆಯಲ್ಲ  ಈಗ . ವಾಟ್ಸ್ ಅಪ್ ಮಾಡು ಯಾವಾಗಾದ್ರೂ ." ಎಂದು ಗೇಟ್  ತೆಗೆದೆ  .   
 " ರೂಪಾ " ಕರೆದ ಅವನು . ತಿರುಗಿದೆ . 
"ನಿಜ ಅಂದ್ರೆ , ನಿನ್ನ ಮದ್ವೆ ಆದ್ಮೇಲೆ ಯಾಕೋ ಬೆಂಗಳೂರಲ್ಲಿ  ಇರ್ಬೇಕು ಅನಿಸ್ಲಿಲ್ಲ  ಕಣೇ .  ಅದ್ಕೆ ಅಪ್ಪನ ಕಾಲು ಮುರಿದಿದ್ದೇ ನೆವ  ಮಾಡಿ ಊರಿಗೇ  ಬಂದ್ಬಿಟ್ಟೆ. ಅಷ್ಟೇ ಮತ್ತೇನೂ ಕೇಳ್ಬೇಡ "  
ಅವನು ಬಿರಬಿರನೆ ಹೆಜ್ಜೆ ಹಾಕುತ್ತಾ ನಡೆದು ಬಿಟ್ಟ . 
 ನಾನು ಕಲ್ಲಾಗಿ ನಿಂತುಬಿಟ್ಟೆ . ಯಾಕೋ ಪ್ರಶ್ನೆ ಕೇಳಿ ತಪ್ಪು ಮಾಡಿಬಿಟ್ಟೆ ಎನಿಸಿಬಿಟ್ಟಿತು.
2 comments:
ಸುಂದರವಾದ ರೋಮ್ಯಾಂಟಿಕ್ ಕಥೆ. ಕೊನೆಯಲ್ಲಿ ಬರುವ twist ಓದುಗರ ಮನದಲ್ಲೂ ಅಲೆಗಳನ್ನು ಎಬ್ಬಿಸುತ್ತದೆ.
ಕಥೆ ತುಂಬಾ ಆಪ್ತವಾಯಿತು.. ಯಾರಾದ್ರೂ ಒಳ್ಳೆ ನಿರ್ದೇಶಕರು ಸಿಕ್ಕಿದರೆ Short Film ಮಾಡಲಿಕ್ಕೆ ಯೋಗ್ಯವಾಗಿದೆ.
ಬಿಡುವಿದ್ದಾಗ ನನ್ನ ಬ್ಲಾಗ್ ಒಮ್ಮೆ ನೋಡಿ
www.mijarchitra.wordpress.com
Post a Comment