ನರ್ವಸ್ ಆಗುತ್ತಿದ್ದೆ ನಾನು . ಇನ್ನೇನು ಸ್ವಲ್ಪ ಹೊತ್ತಿಗೆ ಅವಳು ಬಂದು ಬಿಡುತ್ತಾಳೆ .
ಜೀವನದ ಮೊಟ್ಟಮೊದಲ ವ್ಯಾಲಂಟೈನ್ ಡೇ ಇದು .
ಯಾವ ಹೋಟೆಲ್ ಗೆ ಹೋಗಬೇಕು ಎಂದು ಅವಳೇ ಡಿಸೈಡ್ ಮಾಡಿದ್ದಳು . ಸ್ವಲ್ಪ ಮೇಲ್ದರ್ಜೆಯ ಹೋಟೆಲ್ ಅದು .
" ನಿಮ್ಮ ಅಪ್ಪ ಅಮ್ಮನ ಲೆವೆಲ್ ಗೆ ಓಕೆ ಕಣೆ ಅದು. ನನ್ನ ಜೇಬಿಗೆ ಸ್ವಲ್ಪ ಹೆಚ್ಚಾಯ್ತೆನೋ" ಅಂತ ಗೊಣಗಿದ್ದಕ್ಕೆ ಅವಳು ಹುಸಿಮುನಿಸು ತೋರಿದ್ದಳು .
"ಒಂದ್ಸಲ ಆ ಹೋಟೆಲ್ ಗೆ ಕರ್ಕೊಂಡು ಹೋಗೋಕೆ ಕಂಜೂಸಿ ಮಾಡ್ತೀಯಾ? ಹೆದರ್ಕೋಬೇಡ ನಂಗೆ ಪರಿಚಯದವರಿದ್ದಾರೆ ಅಲ್ಲಿ. ಒಂದು ಡಿಸ್ಕೌಂಟ್ ಕೂಪನ್ ಅರೇಂಜ್ ಮಾಡ್ತೀನಿ." ಅಂತಾನೂ ಹೇಳಿದ್ಲು.
"ಸ್ವಲ್ಪ ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಬಾ . ಅಲ್ಲಿರೋರು ನಮ್ಮನ್ನೇ ನೋಡಿ ಹೊಟ್ಟೆ ಉರ್ಕೋ ಬೇಕು . " ಅಂತ ನಕ್ಕಿದ್ಲು.
ಅವಳು ಹೇಳಿದ ಟೈಮ್ ಗೆ ಸ್ವಲ್ಪ ಮುಂಚೆನೇ ಬಂದು ಕಾಯ್ತಿದ್ದೆ. ಅಷ್ಟೊತ್ತಿಗೆ ಅವಳ ಫೋನ್ ಬಂತು.
ನಾನು ಟೇಬಲ್ ಬುಕ್ ಮಾಡ್ಸಿದೀನಿ. ನಿನ್ನ ಹೆಸರಲ್ಲಿ! ಅಲ್ಲೇ ಹೋಗಿ ಕೂತಿರು . ೧೦ ನಿಮಿಷದಲ್ಲಿ ಬಂದೆ . "
ಸರಿ ಅವಳು ಬುಕ್ ಮಾಡಿದ ಟೇಬಲ್ ಗೆ ಹೋಗಿ ಕೂತೆ. ಎ ಸಿ ಯ ತಂಪಲ್ಲೂ ನಂಗೆ ಬೆವರುತ್ತಿತ್ತು.
ಮನೇಲಿ ಗೊತ್ತಾದ್ರೆ ? ಆಗೋ ಎಡವಟ್ಟುಗಳನ್ನು ನೆನೆದು ತಲೆಯಲ್ಲಿ ನೂರಾರು ಯೋಚನೆಗಳು !
ಎರಡು ಗ್ಲಾಸ್ ನೀರು ಖಾಲಿ ಆಗುವಷ್ಟರಲ್ಲಿ ಅವಳು ಕಾಣಿಸಿಕೊಂಡಳು . ಕೆಂಪು ಡ್ರೆಸ್ ನಲ್ಲಿ ಚೆಂದದ ಗುಲಾಬಿ ಹೂವಿನಂತೆ ಮುದ್ದಾಗಿ ಕಾಣುತ್ತಿದ್ದಳು. ಅವಳ ಕೈಯಲ್ಲಿ ಕೆಂಪು ಗುಲಾಬಿಯ ಗುಚ್ಛ ನೋಡಿದಾಗ , ಎದೆ ಧಸಕ್ಕೆಂದಿತು ! ನಾನು ಗುಲಾಬಿ ಹೂ ತರಲು ಮರೆತು ಬಿಟ್ಟಿದ್ದೆ ! ಮನಸಲ್ಲಿ ಹಳಹಳಿಸಿದೆ ! ನಗುತ್ತಾ ಬಂದವಳು ಹೂಗುಚ್ಛವನ್ನು ನನ್ನ ಕೈಲಿಟ್ಟು ಹಗುರಾಗಿ ಅಪ್ಪಿಕೊಂಡು " ಹ್ಯಾಪಿ ವ್ಯಾಲಂಟೈನ್ ಡೇ " ಎಂದು
ಕೆನ್ನೆಗೆ ಮುತ್ತಿಟ್ಟಳು .
ನಾನು ಮೆಲ್ಲಗೆ ಜೇಬಿನಿಂದ ದೊಡ್ಡ ಚಾಕೊಲೇಟ್ ತೆಗೆದು ಅವಳ ಕೈಲಿಟ್ಟೆ .
" ಹ್ಯಾಪಿ ವ್ಯಾಲಂಟೈನ್ ಡೇ " ಥ್ಯಾಂಕ್ಸ್ ನಿನ್ ಜೊತೆ ನನ್ನ ಕರಕೊಂಡು ಬಂದಿದ್ದಕ್ಕೆ ... "
" ನಿಂಗಿಂತ ಬೆಸ್ಟ್ ವ್ಯಾಲಂಟೈನ್ ಯಾರೂ ಸಿಕ್ಕಲ್ಲ ಗೊತ್ತಾ ? ನನ್ನ ಮುದ್ದು ಅಜ್ಜಾ " ಎನ್ನುತ್ತಾ ಕೆನ್ನೆ ಎಳೆದಳು ಮೊಮ್ಮಗಳು.
" ಸರಿ , ಮನೇಲಿ ಏನಂತ ಹೇಳಿದೆ?
"ನಿಜಾನೆ ಹೇಳಿದ್ದು. ನಿನ್ನಜೊತೆ ಆಚೆ ಹೋಗ್ತಾ ಇದ್ದೀನಿ ಅಂತ. ಅಜ್ಜಂಗೆ ಅದೇನು ಕಾಟ ಕೊಡ್ತೀಯಾ ನೀನು ಅಂತ ಬೈದ್ಲು ಅಮ್ಮ " ನಕ್ಕಳು ನನ್ನ ವ್ಯಾಲಂಟೈನ್ !
" ಸರಿ ಹೋಯ್ತು ! ಇಷ್ಟೊತ್ತಿಗೆ ಅವಳು ನಮ್ಮನೆಗೆ ಫೋನ್ ಮಾಡಿ, ತಮ್ಮಂಗೆ ಹೇಳಿ , ಅಪ್ಪನ ವ್ಯಾಲಂಟೈನ್ ಡೇ ಅಂತ ಇಬ್ಬರೂ ನಕ್ಕಿರ್ತಾರೆ ಜೋರಾಗಿ ! " ನಾನು ಹುಳಿ ನಗೆ ನಕ್ಕೆ .
" ನಗಲಿ ಬಿಡು ಅಜ್ಜಾ ! ನಾವು ಇಲ್ಲಿ ಡಿನ್ನರ್ ಎಂಜಾಯ್ ಮಾಡೋಣ ! ಆಮೇಲೆ ನಂಗೆ ಐಸ್ ಕ್ರೀಮ್ ಬೇಕು ದೊಡ್ಡದು !"
" ಖಂಡಿತಾ ! ನಿಂಗೆ ಬೇಡ ಆಂತೀನಾ ನಾನು ? "
" ಓಹ್ ಅಜ್ಜಾ .... ಐ ಲವ್ ಯೂ ! ಖುರ್ಚಿಯಿಂದ ಎದ್ದು ಬಂದು ಗಟ್ಟಿಯಾಗಿ ಅಪ್ಪಿಕೊಂಡಳು ಮೊಮ್ಮಗಳು.
Chitra
1 comment:
ಖುಶಿ ಹಾಗು ಕಚಗುಳಿಯನ್ನು ಒಟ್ಟಿಗೆ ಕೊಡುವ ಕಥೆ; ಧನ್ಯವಾದಗಳು.
Post a Comment