September 28, 2021

ನಿರ್ಧಾರ !

 ಕೇಳಬಾರದ ಪ್ರಶ್ನೆಯೇನೂ ಆಗಿರಲಿಲ್ಲ ಅದು .ಅದರ ಬಗ್ಗೆ ಇಷ್ಟು ಕೋಪಿಸಿಕೊಂಡು ತಿಂಗಳಾದರೂ ಮಾತಾಡದೆ ಇರುವಂಥಾದ್ದಾಗಿರಲಿಲ್ಲ ! ಯಾವುದೇ ಹೆತ್ತವರಿಗಿರುವ ಕಾಳಜಿಯಿಂದಲೇ ಅಪ್ಪಯ್ಯ ಕೇಳಿದ ಪ್ರಶ್ನೆ .

ಇಷ್ಟಕ್ಕೂ ಅಪ್ಪಯ್ಯ ಕೇಳಿದ್ದಾದರೂ ಏನು ? ನಿನಗೆ ಸಂಬಳ ಎಷ್ಟು ಬರುತ್ತೆ ? ನಿನ್ನ ಸಂಸಾರವನ್ನೂ , ನಿನ್ನ ಅಪ್ಪ ಅಮ್ಮಂದಿರನ್ನೂ ನೋಡಿಕೊಳ್ಳಲು ತೊಂದರೆ ಇಲ್ಲ ತಾನೇ ಎಂದಷ್ಟೇ .
ಹಳ್ಳಿಯಲ್ಲೇ ಜೀವನವೆಲ್ಲ ಕಳೆದ ಅಪ್ಪಯ್ಯ ಅಷ್ಟಾಗಿ ನಯ ನಾಜೂಕಿನ ಮಾತಾಡುವವನಲ್ಲ. ಅವನು ಕೇಳಿದ್ದರಲ್ಲಿ ಸಹಜವಾದ ಕಾಳಜಿ ಇತ್ತೇ ಹೊರತು ವ್ಯಂಗ್ಯವಿರಲಿಲ್ಲ .
ಪ್ರಶ್ನೆ ಕೇಳಿದ ತಕ್ಷಣ ತನ್ನ ಮುಖವನ್ನೂ ತೀಕ್ಷ್ಣವಾಗಿ ನೋಡಿದಾಗಲೇ ಗೊತ್ತಾಗಿತ್ತು . ಇದೇಕೋ ಸರಿ ಹೋಗಿಲ್ಲ ಎಂದು. ಪುಣ್ಯಕ್ಕೆ ಅಪ್ಪಯ್ಯನ ಮುಖಕ್ಕೆ ಹೊಡೆದಂತೆ ಏನೋ ಒಂದು ಹೇಳದೆ "ಅದಕ್ಕೆಲ್ಲ ತೊಂದರೆ ಇಲ್ಲ " ಎಂದಷ್ಟೇ ಹೇಳಿದ್ದ.
ಆದರೆ , ತಾನು ಗೇಟ್ ವರೆಗೆ ಕಳಿಸಿಕೊಡಲು ಹೋದಾಗ ಮುಖ ದಪ್ಪವಾಗಿದ್ದು ಕಂಡಿತ್ತು .
ಮರು ದಿನ ಫೋನ್ ಮಾಡಿದರೆ ಸರಿಯಾಗಿ ಮಾತಾಡಿರಲೂ ಇಲ್ಲ . ನಿನ್ನ ಅಪ್ಪನಿಗೆ ಹೇಗೆ ಮಾತಾಡ ಬೇಕು ಅನ್ನೋ ನಯ ನಾಜೂಕಿಲ್ಲ ಎಂದು ಬಿಟ್ಟಿದ್ದ . ತಾನು ಆ ಬಗ್ಗೆ ಏನು ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ ಫೋನ್ ಕಟ್ ಆಗಿತ್ತು ಆಮೇಲೆ ಅದೆಷ್ಟೋ ದಿನಗಳ ವರೆಗೂ ಅವನಾಗಿ ಫೋನ್ ಮಾಡಲೆ ಇಲ್ಲ ತಾನೇ ಮಾಡಿದರೂ ಚುಟುಕಾದ ಉತ್ತರ ಅಷ್ಟೇ ! ಮನಸಿಗೆ ಏನೋ ಕಸಿವಿಸಿ !
ಅಪ್ಪನ ತಪ್ಪೇನಿತ್ತು ? ಹಾಗೆ ನೋಡಿದರೆ ತನ್ನದು ಸಂಪ್ರದಾಯಸ್ಥ ಮನೆತನ , ಊರಿನ ಗೌರವಾನ್ವಿತ ಕುಟುಂಬ ! ಹಾಗಿದ್ದರೂ ಕೂಡ , ಮಗಳು ತಾನು ಇವನನ್ನು ಮದುವೆ ಆಗುತ್ತೇನೆ ಎಂದು ಪರಿಚಯಿಸಿದ ಹುಡುಗನ ಜಾತಿ, ಕುಲ ಗೋತ್ರ ಯಾವುದನ್ನೂ ಅಪ್ಪ ಕೇಳಲಿಲ್ಲ ! ಅವನಿಗೆ ಮಗಳ ಮುಖದ ನಗುವಿಗಿಂತ ಹೆಚ್ಚಿನದು ಬೇರೆ ಯಾವುದೂ ಆಗಲಿಲ್ಲ ಮದುವೆ ಆದಮೇಲೆ ಮಗಳು ಸುಖವಾಗಿರಬಲ್ಲಳೆ ? ಯಾವುದೇ ಬಗೆಯ ಕೊರತೆ ಆಗಲಿಕ್ಕಿಲ್ಲವಷ್ಟೇ ಎಂಬ ಯೋಚನೆ ಅಷ್ಟೇ ಅವನದು ! ಅದು ತಪ್ಪಲ್ಲವಲ್ಲ ?
ಬಳಿಕ ಅದೆಷ್ಟೋ ದಿನ ಅವನು ಮಾತನಾಡ್ಲೆ ಇಲ್ಲ .
ಮನಸ್ಸು ತಡೆಯದೆ ಇವಳೆ ಫೋನ್ಮಾ ಡ್ದಾಗ ಜಾಬ್ ಚೇಂಜ್ ಮಾಡೊ ಗಡಿಬಿಡಿಲಿ ಇದೀನಿ ಆಮೆಲೆ ತಾನೆ ಮಾಡ್ತೀನಿ ಅಂತ ಇಟ್ಟು ಬಿಟ್ಟ .
ಅದಾಗಿ ಎರಡು ವಾರಗಳಾದ ಮೇಲೆ ಅವನ ಫೋನ್ . ಖುಶಿಯಲ್ಲಿದ್ದ . ದೊಡ್ಡ ಕಂಪನಿ , ದೊಡ್ಡ ಸಂಬಳ! ವಿದೇಶಕ್ಕೆ ಹೋಗೊ ಚಾನ್ಸ್ ಅಂತೆಲ್ಲ ಖುಶಿಯಿಂದ ಹೇಳಿಕೊಂಡ . ಕೊನೆಯಲ್ಲಿ ಅವಳ ಸಂತೋಷದ ಬಲೂನಿಗೆ ಪಿನ್ ಚುಚ್ಚುವಂತೆ ಈಗ ಇದನ್ನೆಲ್ಲ ನಿಮ್ಮಪ್ಪಂಗೆ ಹೇಳಿ ನಂಗೆ ನಿನ್ನ ಸಾಕೊ ಕೆಪ್ಯಾಸಿಟಿ ಇದೆ ನಂಗೆ ಅಂತ ಕನ್ಫ಼ರ್ಮ್ ಮಾಡಬಹುದು ನೋಡು ! ಅಂದಾಗ ಒಮ್ಮೆ ಕೆನ್ನೆಗೆ ಬೀಸಿ ಹೊಡೆದಂತಾಯ್ತು.
ಹಾಗೆ ಹೇಳೋ ಅಗತ್ಯ ಇತ್ತಾ? ಆ ಕ್ಷಣಕ್ಕೆ ಬಂದ ಕೋಪವನ್ನು ಹೇಗೋ ತಡೆದುಕೊಂಡಳು.
ಅಮ್ಮ ಹೇಳುತ್ತಿದ್ದಳು . ಮಾತಿನಿಂದ ನಮಗೆ ತುಂಬಾ ಪ್ರಿಯವಾದ ಸಂಬಂಧ ಕೆಡಿಸಿಕೊಳ್ಳೋಕಿಂತ , ಕಷ್ಟ ಆದ್ರೂ ಕೆಲವೊಮ್ಮೆ ಸುಮ್ಮನಿದ್ದು ಅದನ್ನ ಉಳಿಸಿಕೊಳ್ಳೋದ್ರಲ್ಲಿ ಅರ್ಥ ಇದೆ ಕಣೆ ಅಂತ . ಅದನ್ನು ನೆನಪಿಸಿಕೊಂಡು ಸುಮ್ಮನಾಗಿ ಬಿಟ್ಟಳು .
ಒಂದು ದಿನ ಗೆಳೆಯರೊಂದಿಗೆ ಪಾರ್ಟಿ ಕೂಡ ಆಯ್ತು ಎಲ್ಲವೂ ಒಂದು ನಾರ್ಮಲ್ ಹಂತಕ್ಕೆ ಬರುತ್ತಿರುವ ಬಗ್ಗೆ ಸಮಾಧಾನ ಆಗುತ್ತಿತ್ತು.
ಶುಕ್ರವಾರ ಮಧ್ಯಾಹ್ನ ಫೋನ್ ಬಂತು ಅವನದ್ದು . ಧ್ವನಿಯಲ್ಲಿ ಎಲ್ಲಿಲ್ಲದ ಉತ್ಸಾಹ !
" ಹೇಯ್ , ಸಂಜೆ ಸ್ವಲ್ಪ ಬೇಗ ಬರೋಕಾಗತ್ತಾ ಆಫೀಸಿಂದ? ನಾನೇ ಪಿಕ್ ಮಾಡ್ತೀನಿ. "
" ಏನಪ್ಪಾ ವಿಶೇಷ? ವೀಕೆಂಡ್ ಸ್ಪೆಷಲ್ ಏನಾದ್ರೂ ಪ್ಲಾನ್ ಮಾಡಿದ್ಯಾ? "
"ಅದೆಲ್ಲಾ ಆಮೇಲೆ ಹೇಳ್ತೀನಿ. ಪ್ಲೀಸ್ ಪ್ಲೀಸ್ ಸ್ವಲ್ಪ ಬೇಗ ಹೊರಡು. 4-4.30 ಗೆ ಆಗತ್ತಾ? "
ಅವಳು ಗಡಿಯಾರ ನೋಡಿಕೊಂಡಳು . 12.30 ಆಗಿತ್ತು. ಕೆಲಸ ಸುಮಾರು ಆಗಿತ್ತು. ಬೇಗ ಹೊರಡಲು ತೊಂದರೆ ಇಲ್ಲ ಎನಿಸಿತು .
" ಸರಿ , ಬರ್ತೀನಿ. ನೀನು ಗೆಟ್ ಹತ್ರ ಬಂದ ಕೂಡ್ಲೇ ಫೋನ್ ಮಾಡು . ಕೆಳಗಡೆ ಇಳಿದು ಬರ್ತೀನಿ "
" ಓಕೇ ... ಥ್ಯಾಂಕ್ಯೂ ಡಿಯರ್ ! "
" ಬಟ್, ಏನು ವಿಶೇಷ ಅಂತ ಹೇಳಲೇ ಇಲ್ವಲ್ಲಾ ? "
" ಭೇಟಿ ಆದ ಕೂಡ್ಲೇ ಹೇಳ್ತೀನಿ ... ಬಾಯ್ "
ಫೋನ್ ಕಟ್ ಆಯ್ತು .
ಯಾಕಿರಬಹುದು ಎಂದು ಕೊಳ್ಳುತ್ತಾ ಕೆಲಸ ಮುಂದುವರಿಸಿದಳು .
ಅವನು ಹಾರಾಡೋ ರೀತಿ ನೋಡಿದ್ರೆ ಬೇರೆ ದೇಶಕ್ಕೆ ಹಾರೋ ತರಾ ಇದೆ ಎಂದು ಮನಸಲ್ಲೇ ಅಂದುಕೊಂಡಳು .
4 ಕ್ಕೆ ರೆಸ್ಟ್ ರೂಮ್ ಗೆ ಹೋಗಿ ಸಲ್ಪ ತಲೆ ಬಾಚಿ ಮುಖ ತೊಳೆದು ಫ್ರೆಶ್ ಆಗಿ ಜಾಗಕ್ಕೆ ಬರೋ ಹೊತ್ತಿಗೆ ಅವನ ಫೋನ್ !
ಪಕ್ಕದವಳಿಗೆ ಹೇಳಿ ಬ್ಯಾಗ್ ತೆಗೆದುಕೊಂಡು ಕೆಳಗಿಳಿದು ಬಂದಳು .
"ಹೇಳು ಈಗ್ಲಾದ್ರೂ . ಏನ್ ವಿಷಯ ? ಎಲ್ಲಿಗ್ ಕರ್ಕೊಂಡು ಹೋಗ್ತಿದೀಯಾ ಈಗ?"
"ನಮ್ಮನೆಗೆ !! "
"ವಾಟ್ ?" ಅವಳಿಗೆ ಅಚ್ಚರಿ !
"ಹಾ, ಅಮ್ಮ ನಿನ್ನ ಮೀಟ್ ಮಾಡಬೇಕು ಅಂದ್ಲು. ಅದಕ್ಕೆ ..... "
ಒಮ್ಮೆ ಅವಳ ಕಡೆ ನೋಡಿದವನು , "ನೀನು ಆಫೀಸ್ ಗೆ ಯಾವಾಗ್ಲೂ ಜೀನ್ಸ್ ಹಾಕೊಂಡೆ ಬರ್ತೀಯ ?"
ಅವಳಿಗೆ ವಿಚಿತ್ರ ಎನಿಸಿತು ." ಹೌದು . ಜೀನ್ಸ್ ಅಥವಾ trouser ನಾರ್ಮಲ್ ಆಗಿ ಹಾಕ್ತೀನಿ. ಸಲ್ವಾರ್ ಕಮೀಜ್ ಅಥ್ವಾ ಸೀರೆ ಸ್ವಲ್ಪ ಕಮ್ಮಿ ನೇ . ಅದೇನ್ ಒಳ್ಳೆ ಹೊಸದಾಗಿ ನೋಡ್ತಿರೋ ತರ ಕೇಳ್ತೀಯಲ್ಲ? "
"ಸರಿ ಕೂತ್ಕೋ" ಎಂದವನು ಬೈಕ್ ಸ್ಟಾರ್ಟ್ ಮಾಡಿದ.
ಅವನ ಹಿಂದೆ ಮೆಲ್ಲಗೆ ಮನೆಯೊಳಗೆ ಕಾಲಿಟ್ಟವಳನ್ನು ಅವನಮ್ಮ ನಗುತ್ತಲೇ ಸ್ವಾಗತಿಸಿದರು.
ನಮಸ್ಕಾರ ಎಂದು ಕೈ ಜೋಡಿಸಿದವಳನ್ನು ಕೈ ಹಿಡಿದು ಸೋಫಾದಲ್ಲಿ ಪಕ್ಕಕ್ಕೆ ಕೂರಿಸಿಕೊಂಡರು . ಅವಳ ಅಪ್ಪ,ಅಮ್ಮ, ಮನೆ ಊರು ಎಲ್ಲ ವಿವರ ವಿಚಾರಿಸುವಾಗ ಅವಳಿಗೆ ಯಾಕೋ ಏನೋ ಮುಜುಗರ ಆಗ್ತಾ ಇತ್ತು .
ಕಾಫಿ ತಿಂಡಿ ಎಲ್ಲ ಎಲ್ಲ ಆಗುವಷ್ಟರಲ್ಲಿ ಅವನ ಅಪ್ಪ ಕೂಡ ಬಂದರು . ಮತ್ತೊಮ್ಮೆ ಎಲ್ಲ ವಿವರಗಳು.. ಅವಳ ಮುಜುಗರ ಹೆಚ್ಚಾಗುತ್ತಲೇ ಇತ್ತು .
ಮನೆಗೆ ಹೋದಾಗಿನಿಂದ ಅವನು ಅವಳ ಪಕ್ಕ ಇರಲೇ ಇಲ್ಲ . ಅಮ್ಮನ ಪಕ್ಕ ಸ್ವಲ್ಪ ಹೊತ್ತು ಕೂತವನು "ನೀವಿಬ್ರು ಮಾತಾಡ್ಕೊಳಿ ನಾನು ಈಗ ಬಂದೆ" ಎಂದು ತನ್ನ ರೂಮಿಗೆ ಹೊರಟು ಹೋದವನು ಪತ್ತೆ ಇರಲಿಲ್ಲ !
ಅವನಮ್ಮ ಕೇಳಿದರು " ನಿಂಗೆ ಸಂಬಳ ಎಷ್ಟು ಬರತ್ತೆ ? "
ಸಂಕೋಚದಿಂದಲೇ ಹೇಳಿದಾಗ " ಅದನ್ನೆಲ್ಲ ಏನ್ ಮಾಡ್ತಿಯಾ? ಚಿನ್ನ ಗಿನ್ನ ಮಾಡ್ಸಿಕೊಂಡಿದೀಯ ?
"ನಂಗೆ ಅದ್ರಲ್ಲಿ ಅಷ್ಟು ಇಷ್ಟ ಇಲ್ಲ ಆಂಟಿ ! ಅಮ್ಮಂಗೆ ಒಂದು ನೆಕ್ಲೇಸ್ ಕೊಡ್ಸಿದೆ ಅಷ್ಟೇ . "
"ಅಮ್ಮಂಗೆ ನಿಮ್ಮ ತಂದೆ ಕೊಡಸಲ್ವಾ ? "
ಇವಳಿಗೆ ಕೋಪ ಏರುತ್ತಿತ್ತು
"ಹಾಗೇನಿಲ್ಲ ಆಂಟಿ , ಮಗಳು ಅಮ್ಮಂಗೆ ಕೊಡಿಸಬಾರದು ಅಂತೇನಿಲ್ವಲ್ಲ ? "
ಅವನಪ್ಪ ನಡುವೆ ಬಂದರು " ಇರಲಿ ಬಿಡೆ , ಈಗ ಅವಳಮ್ಮನಿಗೆ ಅವಳು ಕೊಡ್ಸಿದ್ದಾಳೆ . ಮದ್ವೆ ಆದ್ಮೇಲೆ ನಿಂಗೆ ಕೊಡಸ್ತಾಳೆ ಅದ್ಯಾಕ್ ಅಷ್ಟು ಟೆನ್ ಶನ್ ಮಾಡ್ಕೊತೀಯ " ದೊಡ್ಡದಾಗಿ ನಕ್ಕರು .
"ಅದು ಸರಿನೇ ಬಿಡಿ . ಆದ್ರೂ, ನೋಡಮ್ಮ , ಮದ್ವೆ ಆದ್ಮೇಲೆ ನೀನು ತವರು ಮನೇವ್ರಿಗೆ ಚಿಕ್ಕ ಪುಟ್ಟದು , ಸೀರೆ ಬಟ್ಟೆ ಎಲ್ಲ ಓಕೆ ಆದರೆ ಚಿನ್ನ ಬಣ್ಣ ಅಂತ ಕೊಡಸೋದು ಅಂಥಾದ್ದೆಲ್ಲ ನಮಗೆ ಅಷ್ಟು ಸರಿ ಹೋಗಲ್ಲ . ಎಷ್ಟಂದ್ರೂ ಮದ್ವೆ ಆದ್ಮೇಲೆ ನೀನು ನಮ್ಮ ಮನೆಗೆ ಸೇರಿದೋಳು . ಮತ್ತೆ ನಮ್ಮವರಲ್ಲಿ , ವರದಕ್ಷಿಣೆ , ಚಿನ್ನ ಬೆಳ್ಳಿ ಇತ್ಯಾದಿ ಸಲ್ಪ ಜಾಸ್ತಿ ನೇ .
ಮಗ ಮೆಚ್ಚಿದ್ದಾನೆ ಅಂದ್ಮೇಲೆ , ವರದಕ್ಷಿಣೆ ಎಲ್ಲ ನಾವೂ ಕೇಳೋಲ್ಲ . ಆದ್ರೆ, ನೀನು ಸ್ವಲ್ಪ ಒಡವೆ ಎಲ್ಲ ಚೆನ್ನಾಗಿ ಹಾಕೋಬೇಕು ಮದ್ವೆಲಿ .ಹೀಗಾಗಿ ನಿಮ್ಮ ಮನೇಲಿ ಹೇಳಿ ನಿಂಗೊಸ್ಕರ ಮಾಡಿಸ್ಕೋ . ನಮ್ಮ ಕಡೆ ಜನ ಆಡ್ಕೋ ಬಾರದು ನೋಡು "
ಇವಳ ತಲೆ ಗಿರ್ರೆನ್ನುತ್ತಿತ್ತು !
ಅಷ್ಟೊತ್ತಿಗೆ ಬಂದು ಅಮ್ಮನ ಪಕ್ಕದಲ್ಲಿ ಕುಳಿತಿದ್ದವನ ಕಡೆ ನೋಡಿದಳು. ಅವನು ತನಗೆ , ಸಂಬಂಧವೇ ಇರದ ರೀತಿ ಮೊಬೈಲ್ ನಲ್ಲಿ ಮುಳುಗಿದ್ದ.
ಹೇಗೋ ಮತ್ತೆ ಹತ್ತು ನಿಮಿಷಗಳು ಕಳೆದ ಮೇಲೆ , ಇವಳೇ ಎದ್ದಳು . ನಂಗೆ ಲೇಟ್ ಆಗ್ತಿದೆ ರಾತ್ರಿ ಬಸ್ ಗೆ ಊರಿಗೆ ಹೋಗ್ಬೇಕು ಎಂದಳು .
"ಓಹ್ ಹೌದ , ಸರಿ ಸರಿ , ಹೋಗೋ ಅವಳನ್ನು ಡ್ರಾಪ್ ಮಾಡಿ ಬಾ" . ಅಮ್ಮನ ಆಜ್ಞೆಯಾದ ಮೇಲೆ ಮಗ ಮೆಲ್ಲಗೆ ಎದ್ದ .
ದಾರಿಯುದ್ದಕ್ಕೂ ಅವನೇ ಮಾತನಾಡುತ್ತಿದ್ದ . ಅವನ ಫ್ಯಾಮಿಲಿ ಬಗ್ಗೆ , ಅವರ ಶ್ರೀಮಂತ ಸಂಬಂಧಿಕರು , ಲೈಫ್ ಸ್ಟೈಲ್ , ಕುಟುಂಬದ ಕಟ್ಟಳೆಗಳು ಇತ್ಯಾದಿ . ಅವಳು ಅನ್ಯ ಮನಸ್ಕಳಾಗಿ ಕೇಳುತ್ತಿದ್ದಳು . ಮನಸಲ್ಲಿ ಮಹಾ ಯುದ್ಧವೇ ನಡೆಯುತ್ತಿತ್ತು .
ಪಿ ಜಿ ಎದುರು ಇಳಿದವಳು ಹೆಚ್ಚು ಮಾತನಾಡದೆ , ಗುಡ್ ನೈಟ್ ಹೇಳಿ ಒಳಗೆ ಬಂದಳು .
ತಲೆಯಲ್ಲಿ ಏನೋ ಗೊಂದಲ . ಅವನ ಬಗ್ಗೆ ಕೋಪ ಬರುತ್ತಿತ್ತು . ತಾನು ಕಳೆದ ಎರಡೂವರೆ ವರ್ಷದಿಂದ ನೋಡಿದ ವ್ಯಕ್ತಿ ಇವನೇನಾ ಎನಿಸಿತು . ಮನೆ ತಲುಪಿ 5 ನಿಮಿಷಕ್ಕೆಲ್ಲ ಅವನ ಫೋನ್.
"ಅಲ್ಲ, ಅಮ್ಮ ಏನೋ ಕೇಳಿದ್ದಕ್ಕೆ ತಿರುಗಿ ಹೇಳಿದ್ಯಂತೆ ? ಆದರೂ ಅವರೇನೂ ಅಂದ್ಕೊಂಡಿಲ್ಲ .ಪರವಾಗಿಲ್ಲ ಬಿಡೋ ಅಂದ್ರು. ಮತ್ತೆ ಕೇಳಿಲ್ಲಿ , ಗುಡ್ ನ್ಯೂಸ್ ಅಂದ್ರೆ ಅಮ್ಮ ಅಪ್ಪಂಗೆ ನೀನು ಇಷ್ಟ ವಾಗಿದೀಯ . ಮುಂದಿನ ವಾರ ನೇ ನಿಮ್ಮನೆಗೆ ಹೋಗಿ ಮಾತಾಡೋಣ ಅಂದಿದಾರೆ . ಹೇಳಿಬಿಡು" ಅಂದವನು ಉತ್ತರಕ್ಕೂ ಕಾಯದೆ ಫೋನ್ ಇಟ್ಟಾಗ , ಮನಸಿಗೆ ಕಿರಿಕಿರಿ ಹೆಚ್ಚಾಗುತ್ತಲೇ ಇತ್ತು .
ಅದೇ ಗೊಂದಲದಲ್ಲೇ , ಊರಿಗೆ ಫೋನ್ ಮಾಡಿದಳು . ಫೋನ್ ಎತ್ತಿಕೊಂಡ ಅಮ್ಮ , " ಆಫೀಸಿಗೆ ಫೋನ್ ಮಾಡಿದ್ದೆ , ನೀನು ಬೇಗ ಹೋಗಿದ್ಯಂತೆ . ಹುಷಾರಾಗಿದೀಯ ತಾನೇ? ನಿನ್ನ ಮೊಬೈಲ್ ಗೆ ಮಾಡೋಣ ಅಂದ್ರೆ , ನಂಗೆ ನಂಬರ್ ಸಿಕ್ತಾ ಇರಲಿಲ್ಲ . ಅಪ್ಪ ಬೇರೆ ಆಚೆ ಹೋಗಿದ್ರು . ಹೇಗಿದ್ದೀಯ? ಆರಾಮಾಗಿದಿಯ ತಾನೇ ? "
"ಹಾಂ ಅಮ್ಮ , ಹುಷಾರಾಗಿದೀನಿ . ಯೋಚನೆ ಮಾಡ್ಬೇಡ . ಇವತ್ತು ರಾತ್ರಿ ಬಸ್ ಬುಕ್ ಮಾಡಿದೀನಿ . ಬೆಳಿಗ್ಗೆ ಮನೆಲಿರ್ತೀನಿ. ಈಗ ಊಟ ಮಾಡಿ ರೆಡಿ ಆಗ್ಬೇಕು . ಲೇಟ್ ಆಗತ್ತೆ ಆಮೇಲೆ ."
"ಸರಿ ಕಣೆ , ಹುಷಾರಾಗಿ ಬಾ . ಬೆಳಿಗ್ಗೆ ಚಂದು ಬರ್ತಾನೆ ಬಸ್ ಸ್ಟಾಪ್ ಗೆ . ಇಡ್ತೀನಿ "
ರಾತ್ರಿಯಿಡೀ ಬಸ ನಲ್ಲಿ ಅವಳಿಗೆ ನಿದ್ದೆ ಕೊಡದಂತೆ ನೂರೆಂಟು ಯೋಚನೆಗಳು .
ಬೆಳಿಗ್ಗೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದ ತಮ್ಮನ ಹತ್ತಿರವೂ ಎಂದಿನಂತೆ ಕೀಟಲೆ ಮಾತಾಡದೆ ಮನೆಗೆ ಬಂದವಳು " ಅಮ್ಮ ಬಸ್ಸಲ್ಲಿ ನಿದ್ದೆ ಬಂದಿಲ್ಲ ,ತಲೆ ನೋಯ್ತಿದೆ . ಸಲ್ಪ ಕಾಫಿ ಕೊಡು, ಕುಡದು ಸಲ್ಪ ಮಲ್ಕೋತೀನಿ ಎಂದು ಕಾಫಿ ಕುಡಿದು ಮಲಗಿ ಬಿಟ್ಟಳು . ಹಾಸಿಗೆಯಲ್ಲಿ ಅಡ್ಡಾದರೂ ಅದೆಷ್ಟೋ ಹೊತ್ತು ಒದ್ದಾಡಿದ ಮೇಲೆ ಅಂತೂ ನಿದ್ರೆ ಒಲಿಯಿತು .
ಮಧ್ಯಾಹ್ನ ದ ಹೊತ್ತಿಗೆ ಎದ್ದು ತಿಂಡಿ ತಿಂದು ಸಪ್ಪಗೆ ಕುಳಿತ ಮಗಳನ್ನು ನೋಡಿ ಅಪ್ಪ ಅಮ್ಮ ಮುಖ ಮುಖ ನೋಡಿಕೊಂಡರು .
" ಯಾಕೆ ಪುಟ್ಟ ? ಏನಾಯ್ತು? ಹೀಗ್ಯಾಕಿದೀಯಾ ? ಆಫೀಸಲ್ಲಿ ಏನಾದ್ರು ತೊಂದ್ರೆ ನ ? " ಅಪ್ಪ ಕೇಳಿದಾಗ , ಇಲ್ಲವೆನ್ನುವಂತೆ ತಲೆ ಅಲ್ಲಾಡಿಸಿದಳು .
ಅಮ್ಮ ಮೆಲ್ಲಗೆ ಕೇಳಿದಳು " ನೀವಿಬ್ರೂ ಏನಾದ್ರೂ ಜಗಳ ಮಾಡ್ಕೊಂಡ್ರೆನೇ? "
ಥಟ್ ಎಂದು ಅಮ್ಮನ ಮುಖ ನೋಡಿದವಳಿಗೆ ಅಲ್ಲಿ ಆತಂಕ ಕಂಡಿತು .
"ಪುಟ್ಟಾ, ಏನೋ ಚಿಕ್ಕ ಪುಟ್ಟ ಮಾತು , ಜಗಳ ಸಹಜ ಲೈಫಲ್ಲಿ . ಅದನ್ನೆಲ್ಲ ಸೀರಿಯಸ್ ಆಗಿ ತೊಗೊಂಡು ಸಂಬಂಧ ಹಾಳು ಮಾಡ್ಕೋ ಬಾರ್ದು , ಮನಸಲ್ಲಿ ಕಹಿ ತಂದ್ಕೊ ಬಾರ್ದು "
ಅಮ್ಮನ ಮಾತು ಕೇಳಿ ಮನಸು ತಡೆಯದೆ , ಹಿಂದಿನ ದಿನ ತಾನು ಅವನ ಮನೆಗೆ ಹೋಗಿದ್ದು , ಅಲ್ಲಿ ನಡೆದ ಮಾತುಕತೆಗಳನ್ನೆಲ್ಲ ಹೇಳಿದವಳಿಗೆ ಏಕೋ ಹಗುರವೆನಿಸಿತು .
" ಅಯ್ಯೋ , ಮಗಾ, ಇಷ್ಟೇನಾ? ಅವರು ಅವರ ಪ್ರಕಾರ ಯೋಚನೆ ಮಾಡ್ತಾರೆ ,ಅವರ ಪದ್ಧತಿ , ರೀತಿ-ನೀತಿ ಪ್ರಕಾರ ಮಾತಾಡಿದ್ರು . ನಿನಗೆ ಅವೆಲ್ಲ ಗೊತ್ತಿಲ್ಲದೇ ಇರೋದ್ರಿಂದ ಅದು ಸರಿ ಅನಿಸಿಲ್ಲ ಅಷ್ಟೇ .
ನೀನು ಬೆಳೆದಿರೋ ರೀತಿ ಬೇರೆ ಅಲ್ವ? ಅದಕ್ಕೆ . ಇಷ್ಟಕ್ಕೆಲ್ಲ ಹೀಗೆ ತಲೆ ಮೇಲೆ ಆಕಾಶ ಬಿದ್ದವರ ತರಾ ಆಡ್ತಿಯಲ್ಲ ?" ಅಪ್ಪ ನಗುತ್ತ ತಲೆ ಸವರಿದಾಗ , ಅಪ್ಪನ ಭುಜಕ್ಕೆ ತಲೆಯಿಟ್ಟು ಸುಮ್ಮನೆ ಕುಳಿತು ಬಿಟ್ಟಳು .
"ಅವರು ಯಾವಾಗ ಬರ್ತಾರೆ ಅಂತ ಸರಿಯಾದ ಡೇಟ್ ಹೇಳಿದ್ರೆ , ನಾವೂ ಸ್ವಲ್ಪ ತಯಾರಿ ಮಾಡ್ಕೋ ಬಹುದಲ್ವೇನೆ?ಎಷ್ಟಂದ್ರೂ ದೊಡ್ಡ ಊರಿಂದ ಬರೋರು. ವ್ಯವಸ್ಥೆ ಮಾಡಬೇಕಲ್ವ?" ಅಮ್ಮ ಅಲವತ್ತು ಕೊಂಡಳು
ಇವಳಿಗೆ ಏನೋ ಗೋಜಲು , ಮನಸಿನಲ್ಲಿ ಎಲ್ಲವೂ ಸರಿಯಿರದ ಭಾವ . ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು .
ಆ ತುದಿಯಲ್ಲಿ ಅವನು ಖುಷಿಯಿಂದ ಹೇಳುತ್ತಿದ್ದ. " ಕೇಳು , ಮುಂದಿನ ವಾರ ಅಪ್ಪ ಅಮ್ಮ ನಿಮ್ಮನೆಗೆ ಹೋಗೋಣ ಮಾತು ಕತೆ ಮುಗಿಸೋಣ ಅಂತಿದಾರೆ. ನೀನು ಮನೇಲಿ ಹೇಳ್ಬಿಡು . ಅವರು ಎಲ್ಲ ಸರಿಯಾಗಿ ತಯಾರಿ ಮಾಡ್ಕೋಬೇಕು ಅಂತ ಹೇಳ್ಬಿಡು . ಇಲ್ಲಿಂದ ಅಲ್ಲಿ ಬಂದು ಅಪ್ಪ- ಅಮ್ಮಂಗೆ ಏನೂ ತೊಂದರೆ ಆಗ್ಬಾರ್ದಲ್ವ ? . ನೀನು ವಾಪಾಸ್ ಬಂದ್ ತಕ್ಷಣ ಫೋನ್ ಮಾಡು ಮಾತಾಡೋಣ " ಒಂದೇ ಉಸಿರಲ್ಲಿ ಹೇಳುತ್ತಿದ್ದ.
ಇವಳು ಕಣ್ಣು ಮುಚ್ಚಿ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದಳು. ಕಣ್ಣು ಬಿಟ್ಟಾಗ , ಅವನು " ಹಲೋ , ಕೇಳಿಸ್ತಿದ್ಯಾ ? ಇದ್ದೀಯ ಲೈನ್ ಲ್ಲಿ ? ಎನ್ನುತ್ತಿದ್ದ .
ಅಪ್ಪ ಅಮ್ಮ ಇಬ್ಬರೂ ತನ್ನ ಮುಖವನ್ನೇ ನೋಡುತ್ತಿರುವುದು ಗಮನಕ್ಕೆ ಬಂತು .
ಗಂಟಲು ಸರಿ ಮಾಡಿ ಕೊಂಡವಳು " ಹಾ, ಕೇಳಿಸ್ಕೊಂಡೆ .
"ಮತ್ತೆ ಏನೂ ರಿಪ್ಲೈ ಮಾಡಿಲ್ಲ ? "
" ಅವರು ಇಲ್ಲಿ ಬರೋ ಅಗತ್ಯ ಇಲ್ಲ ಅನಿಸ್ತಿದೆ ಕಣೋ. ಬೇಡ ಅಂತ ಹೇಳ್ಬಿಡು !"
" ಏ, ಯಾಕೆ ? ಏನರ್ಥ ಹಂಗಂದ್ರೆ ? ಏನಾಯ್ತೆ ನಿಂಗೆ? ಅವರನ್ನ ಒಪ್ಪಿಸೋಕೆ ನಾನೆಷ್ಟು ಕಷ್ಟ ಪಟ್ಟಿದೀನಿ ಗೊತ್ತಾ ? ಊರಿಗ್ ಹೋದ ತಕ್ಷಣ ತಲೆ ತಿರಗೋಯ್ತಾ ನಿಂಗೆ? ಏನ್ ಹೇಳಿದ್ರು ನಿಮ್ಮಪ್ಪ ?
ಸಿಟ್ಟು ಒಮ್ಮೆಲೇ ತಲೆಗೇರಿದರೂ ಎದುರಿಗೆ ಅಪ್ಪ ಅಮ್ಮ ಇರುವುದರ ಅರಿವಾಗಿ
" ನೋಡು , ನಾನು ಹೇಳಿದ್ದು ನನ್ನದೇ ಅಭಿಪ್ರಾಯ . ಬೇರೆ ಯಾರೂ ಏನೂ ಹೇಳಿಲ್ಲ . ವಾಪಸ್ ಬಂದಮೇಲೆ ನಾನೇ ಫೋನ್ ಮಾಡ್ತೀನಿ . ಬೈ " ಎಂದು ಫೋನ್ ಕಟ್ ಮಾಡಿದಳು .
ಏನೂ ತಿಳಿಯದೆ , ಗೊಂದಲದಿಂದ ನೋಡುತ್ತಿರುವ ಅಪ್ಪ-ಅಮ್ಮನತ್ತ ನೋಡಿ
"ಸರಿಯಾದ ನಿರ್ಧಾರ ತೊಗೊಂಡಿದೀನಿ ಅಪ್ಪಾ, ಯೋಚನೆ ಮಾಡ್ಬೇಡ" ಎಂದು ಮುಗುಳು ನಕ್ಕಳು!

2 comments:

sunaath said...

ಸುಂದರ ಕಥೆ. ಹೆಣ್ಣೆಂದರೆ ಒಂದು ಯಃಕಶ್ಚಿತ್ ವಸ್ತು. ಗಂಡನ ಇಷ್ಟಾನಿಷ್ಟಗಳೇ ಅವಳದೂ ಆಗಿರಬೇಕು ಎಂದುಕೊಳ್ಳುವ ಅಭಿಪ್ರಾಯಗಳು ಈ ಶತಮಾನದಲ್ಲಿ, ಇನ್ನೂ ಮುಂದುವರೆಯುತ್ತಿರುವಾಗ, ನಿಮ್ಮ ಕಥೆ ಒಂದು ಅವಶ್ಯವಾದ relief ಆಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ, theme ಮತ್ತು style ಎರಡೂ ಮನಸ್ಸನ್ನು ಸೆಳೆಯುವಂತಿವೆ.

ಚಿತ್ರಾ said...

ಥ್ಯಾಂಕ್ಯೂ ಕಾಕಾ ! ನೀವು ಹೇಳಿದಂತೆ, ಮದುವೆ ಆದ್ಮೇಲೆ ಹೆಣ್ಣಿನ ಇಷ್ಟಾನಿಷ್ಟಗಳನ್ನು ಗಂಡ ಹಾಗೂ ಅವನ ಮನೆಯವರೇ ನಿರ್ಧರಿಸಬೇಕು ಎಂಬ ಅಭಿಪ್ರಾಯ ಇಂದಿಗೂ ಮುಂದುವರಿದಿರುವುದು ವಿಷಾದನೀಯ . ಹಾಗೆಯೇ, ಇತ್ತೀಚೆ ಹೆಣ್ಣು ಮಕ್ಕಳು ತಮ್ಮ ಜೀವನದ ನಿರ್ಧಾರವನ್ನು ತಾವೇ ತೆಗೆದು ಕೊಳ್ಳುವ ಧೈರ್ಯ ತೋರಿಸುತ್ತಿರುವುದೂ ಸಹ ಸ್ವಾಗತಾರ್ಹ ! ಆ ನಿಟ್ಟಿನಲ್ಲಿ ಇದು ನನ್ನದೊಂದು ಸಾಹಿತ್ಯಿಕ ಪ್ರಯತ್ನ .
ನಿಮ್ಮ ಬೆಂಬಲ ಹೀಗೆ ಇರಲಿ .