ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮದಿಂದ ಬಂದು ಸೀರೆ ಬದಲಿಸುತ್ತಿದ್ದವಳ ಲಕ್ಷ್ಯಕನ್ನಡಿಯಲ್ಲಿ ಕಾಣುತ್ತಿದ್ದ ಪ್ರತಿಬಿಂಬದತ್ತ ಹೋಯಿತು . ಸೂಕ್ಷ್ಮವಾಗಿ ಗಮನಿಸಿದಳು !
ಕಳೆಯಿರದ ಆಳಕ್ಕಿಳಿದ ಕಣ್ಣಿನ ಸುತ್ತ ಕಪ್ಪು ವರ್ತುಲ. ಕಣ್ಣಂಚಿನಲ್ಲಿ ಸಣ್ಣದಾಗಿ ಮೂಡಿದ ಹತ್ತಾರು ಗೆರೆಗಳು,
ಹೊಳಪಿರದ ಕೆನ್ನೆ , ಕೊಂಚ ಜಗ್ಗಿದ ಗಲ್ಲ, ಹಣೆಯ ಮೇಲೆ ಕಂಡೂ ಕಾಣದ ಒಂದೆರಡು ನೆರಿಗೆಗಳು, ಮೊದಲು ದಟ್ಟವಾಗಿದ್ದ , ಈಗ ಉದುರಿ ತೆಳುವಾದ ,ಹಚ್ಚಿದ ಬಣ್ಣ ಮಾಸುತ್ತಿರುವ ಕೂದಲು
ಚರ್ಮ ಸಡಿಲಾದ ಕತ್ತು , ಬಿಗಿಯಿರದ ಎದೆ , ಹಲವು ಸುತ್ತು ದಪ್ಪವಾದ ಸೊಂಟ .... ನೋಡುತ್ತಾ ನೋಡುತ್ತಾ ಹೊಟ್ಟೆಯಲ್ಲಿ ಏನೋ ತಳಮಳವಾಯಿತು. ಕನ್ನಡಿಯಲ್ಲಿ ಕಾಣುತ್ತಿರುವುದು ,ಪಕ್ಕದ ಟೇಬಲ್ ಮೇಲಿದ್ದ ದಶಕಗಳ ಹಿಂದಿನ ಫೋಟೋದಲ್ಲಿದ್ದ ತನ್ನ ನೆರಳು ಎಂದು ಅವಳಿಗೆ ಭಾಸವಾಯಿತು . ಜೊತೆಗೆ , ಸಂಕಟ ಹೆಚ್ಚಿತು.
ಟೇಬಲ್ ಮೇಲಿನ ಫೋಟೋವನ್ನು ಕೈಗೆತ್ತಿಕೊಂಡು ನೋಡಿದಳು . ಮದುವೆಯ 10ನೇ ವಾರ್ಷಿಕೋತ್ಸವದಲ್ಲಿ ತೆಗೆದ ಫೋಟೋ . ಅದರಲ್ಲಿ ತಾನೆಷ್ಟು ಬೇರೆಯೇ ಕಾಣುತ್ತಿದ್ದೆ ಎಂದುಕೊಂಡಳು . ಮುಖದಲ್ಲಿ ಸಂತೋಷದ ಕಳೆಯಿತ್ತು . ಆ ಫೋಟೋ ನೋಡಿ ಎಷ್ಟೊಂದು ಜನ ಎಷ್ಟು ಮುದ್ದಾಗಿ ಕಾಂತೀಯ ಒಂದು ದೃಷ್ಟಿ ತೆಗೆಸಿಕೊ ಎಂದೆಲ್ಲ ಹೇಳಿದ್ದು ನೆನಪಾಯಿತು. ಹಾಗೆ ಕಣ್ಣು ಗೋಡೆಯ ಮೇಲೆ ಹಾಕಿದ್ದ ಮತ್ತೊಂದು ಫೋಟೋದತ್ತ ಹೋಯಿತು. ಮಕ್ಕಳಿಬ್ಬರ ಜೊತೆ ತೆಗೆಸಿದ್ದು ! ಅದನ್ನು ನೋಡಿದವರೆಲ್ಲ " ಇದನ್ನ ನೋಡಿದ್ರೆ, ನೀನು ಅಮ್ಮ ಅಲ್ಲ ,ಅವರಿಬ್ಬರ ಅಕ್ಕನ ತರಾ ಕಾಣ್ತೀಯಾ " ಎಂದು ಹೇಳುವಾಗ ಎಷ್ಟು ಹೆಮ್ಮೆ ಆಗಿತ್ತು ! ಅದೆಲ್ಲ ನೆನಪಾದಾಗ ಅವಳ ಮುಖದಲ್ಲಿ ವಿಷಾದ ದಟ್ಟವಾಗುತ್ತಿತ್ತು .
ಮತ್ತೆ ಮತ್ತೆ ಫೋಟೋಗಳನ್ನೂ ಕನ್ನಡಿಯನ್ನೂ ನೋಡುತ್ತಿದ್ದವಳಿಗೆ ತಾನು ನಿಜಕ್ಕೂ ಕೆಟ್ಟದಾಗಿ ಕಾಣುತ್ತಿದ್ದೇನಾ ಎನಿಸಿ ಅಳುವೇ ಬಂದಂತಾಯಿತು..
ಕೊನೆಗೊಮ್ಮೆ ಎಚ್ಚರವಾಗಿ ಧಡಬಡಿಸಿಕೊಂಡು ಸೀರೆ ಬದಲಿಸಿ ಹೊರಗೆ ಹೆಜ್ಜೆ ಹಾಕಿದಳು .
ಆ ದಿನವಿಡೀ ಮನಸಿಗೆ ಕಸಿವಿಸಿ , ಸಂಶಯ . ನೆಮ್ಮದಿಯೇ ಇಲ್ಲ . ಗಂಡನಿಗೂ ಹೀಗೆ ಅನಿಸಿರಬಹುದೇ? ನಿನ್ನ ನೋಡಿದ ತಕ್ಷಣ ನಾನು ಕ್ಲೀನ್ ಬೋಲ್ಡ್ ಆಗಿದ್ದೆ ಕಣೆ ಎಂದು ಗಂಡ ಹೇಳ್ತಾ ಇದ್ದಿದ್ದು ನೆನಪಾಯ್ತು. ಈಗ? ತನ್ನ ಮೇಲಿನ ಆಸಕ್ತಿ ಕಮ್ಮಿ ಆಗಿರಬಹುದೇ? ಹಾಗೇನಾದರೂ ಆಗಿ ಬೇರೆ ಯಾರಾದರೂ ಚಂದ ಕಂಡು.... ...
ತಕ್ಷಣ , ಇಂಥಾ ಆಲೋಚನೆ ಮಾಡಿದ್ದರ ಬಗ್ಗೆ ತನಗೆ ತಾನೇ ಬೈದುಕೊಂಡಳು. ಆದರೂ ಸಮಾಧಾನವಿಲ್ಲ.
ಬೆಳಿಗ್ಗೆ ತಿಂಡಿ ತಿನ್ನುತ್ತಾ ಹಿಂದಿನ ದಿನದ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದಾಗ ಗಂಡ ಇದ್ದಕ್ಕಿದ್ದ ಹಾಗೆ " ಎಷ್ಟು ವರ್ಷ ಆದ್ಮೇಲೆ ಸತೀಶ ಸಿಕ್ಕಿದ ನಿನ್ನೆ ! ಅವನ ಹೆಂಡತಿ ರಶ್ಮಿ ಚೂರೂ ಬದಲಾಗಿಲ್ಲ ನೋಡು! ಹತ್ತು ವರ್ಷದ ಹಿಂದೆ ಹೇಗಿದ್ಲೋ ಹಾಗೆ ಇದಾಳೆ" ಎಂದಾಗ ಕಸಿವಿಸಿ ಹೆಚ್ಚೇ ಆಯಿತು.
ಅಂದು ರಾತ್ರಿ ಮಲಗುವ ಮುನ್ನ ಸ್ವಲ್ಪ ಹೆಚ್ಚೇ ಹೊತ್ತು ಕನ್ನಡಿ ನೋಡಿದಳು .
ನಂತರದ 3-4 ದಿನಗಳು ಹೀಗೆ ಕಳೆದವು.
ಗಂಡನ ಪ್ರತಿ ಮಾತು ನಡವಳಿಕೆಯಲ್ಲೂ ತನ್ನ ಬಗ್ಗೆ ನಿರಾಸಕ್ತಿ ಕಾಣಿಸುತ್ತಿದೆ ಎಂದೆನಿಸ ತೊಡಗಿತು.
ಕೇಳಿಬಿಡಲೇ? ಅಂದುಕೊಂಡಳು. ಅದರ ಹಿಂದೆಯೇ , ಛೆ, ಯಾವ ರೀತಿ ಯೋಚನೆ ಮಾಡುತ್ತಿದ್ದೇನೆ ಎಂದು ನಾಚಿಕೆಯೂ ಆಗಿ ಸುಮ್ಮನಿದ್ದಳು .
ಕೊನೆಗೆ ಅಂತೂ ಧೈರ್ಯ ಮಾಡಿಕೊಂಡು ಒಂದು ರಾತ್ರಿ ಗಂಡನೆದುರು ವಿಷಯ ಪ್ರಸ್ತಾಪಿಸಿದಳು.
" ರೀ, ಒಂದು ವಿಷಯ ಕೇಳಬೇಕಿತ್ತು "
" ಅದಕ್ಕೇನು ಪೀಠಿಕೆ? ಕೇಳು " ಮೊಬೈಲಿಂದ ಕಣ್ಣು ಸರಿಸದೆ ಕೇಳಿದ.
" ನಾನು ಇತ್ತೀಚೆ ತುಂಬಾ ಕೆಟ್ಟದಾಗಿ ಕಾಣ್ತಿದೀನ ?"
ಅವನು ಆಶ್ಚರ್ಯದಿಂದ ಮೊಬೈಲ್ ಬದಿಗಿಟ್ಟು ಅವಳ ಮುಖ ನೋಡಿದ.
"ಏನು ಹಾಗಂದ್ರೆ? "
"ಅಂದ್ರೇ,..... ತುಂಬಾ ವಯಸ್ಸಾದ ಹಾಗೆ ಕಾಣತಾ ಇದೀನ? "
" ಯಾಕೆ? ಏನಾಯ್ತು ಇದ್ದಕ್ಕಿದ್ದ ಹಾಗೆ? " ಅವನು ಅನುಮಾನದಿಂದ ಕೇಳಿದ
"ಏನೂ ಇಲ್ಲ. ಯಾಕೋ ಕನ್ನಡಿ ನೋಡೋವಾಗ ಹಾಗೆ ಅನಿಸ್ತು ."
" ಎಷ್ಟು ಸಲ ಹೇಳಿದೀನಿ ಕನ್ನಡಕ ಹಾಕೊಂಡಿರು ಅಂತ . ಕೇಳಲ್ಲ ನೀನು." ತಮಾಷೆ ಮಾಡುತ್ತಾ ನಕ್ಕು ಬಿಟ್ಟ .
" ರೀ, ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ " ಅವಳ ಅಳುದನಿ .
" ಹ್ಮ್ಮ್ . ನಂಗೇನು ಹಾಗೆ ಅನಿಸಲ್ವೇ ? ನೀನು ಸದಾ ಸುಂದರಿ ನನ್ನ ಕಣ್ಣಿಗೆ . " ಪ್ರೀತಿಯಿಂದ ಕೆನ್ನೆ ತಟ್ಟಿದ .
ಆದರೆ ನಿಂಗ್ಯಾಕೆ ಹಾಗೆ ಅನಿಸ್ತಾ ಇದೆ ?
" ಏನೋ , ಹಳೆ ಫೋಟೋ ಕ್ಕೂ ಕನ್ನಡಿಲಿ ಕಾಣೋ ರೂಪಕ್ಕೂ ತುಂಬಾ ವ್ಯತ್ಯಾಸ ಇದೆ ಅನಿಸ್ತು ."....
ಆಶ್ಚರ್ಯದಿಂದ ಕೆಲ ಸೆಕೆಂಡ್ ಅವಳ ಮುಖ ದಿಟ್ಟಿಸಿದವನು ನಕ್ಕು ಬಿಟ್ಟ.
" ಹಹಹ..ಒಳ್ಳೆ ಕಥೆ ಕಣೆ ನಿಂದು ! ವಯಸ್ಸಾದ ಹಾಗೆ ಬದಲಾಗಲ್ವೇನೇ?
ಈಗ ನೋಡು ಈ ಫೋಟೋದಲ್ಲಿ ನಾನು ಹೇಗಿದ್ದೆ ! ತಲೆ ತುಂಬಾ ಕಪ್ಪು ಕೂದಲು ಒಳ್ಳೆ ಹದವಾದ ಮೈಕಟ್ಟು .. ಈಗ ನೋಡು , ತಲೆ ಬೋಳು , ಇರೋ ಕೂದಲೂ ಬಿಳಿಯಾಗಿದೆ , ಹೊಟ್ಟೆ ಬಂದಿದೆ .. "
ಅವನನ್ನೊಮ್ಮೆ ನೋಡಿದವಳಿಗೆ .. ಹೌದಲ್ಲ, ತಾನು ಫೋಟೋದಲ್ಲಿ ಇದನ್ನು ಗಮನಿಸಿಯೇ ಇಲ್ಲ ಅನಿಸಿತು .
"ಅದು ಸರಿ , ಆದರೂ ತಲೇಲಿ ಒಂಥರಾ ಯೋಚನೆಗಳು ... " ದ್ವನಿ ಮೆತ್ತಗಾಯಿತು
"ಏನು ಯೋಚನೆ ಅಮ್ಮಾವ್ರಿಗೆ ?"
" ಅದೂ .. ಮತ್ತೆ .. ನೀವು ತಪ್ಪು ತಿಳೀಬಾರದು ." ಅನುಮಾನಿಸಿದಳು .
"25 ವರ್ಷ ಆಯ್ತು ಮದ್ವೆ ಆಗಿ , ಇನ್ನೂ ಹೀಗೆ ಮಾಡ್ತಿಯಲ್ಲೇ? "
" ಅಲ್ಲಾ.. ನಾನು ನೋಡೋಕೆ ಚೆನ್ನಾಗಿದ್ದೆ ಅಂತ ನೀವು ಮೊದಲನೇ ಸಲ ನೋಡಿದಾಗಲೇ ಮೆಚ್ಚಿಕೊಂಡಿದ್ದು ಅಂದಿದ್ರಿ ಅಲ್ವ? "
" ಹ್ಮ್ಮ್... ಹೌದು ಅದು ನಿಜ. "
" ಮತ್ತೇ.. ಈಗ ಮುಂಚಿನ ತರಾ ಇಲ್ಲ ಅಂತ ಅನಿಸಿ ನೀವೇನಾದ್ರೂ ಬೇರೆ ... " ಅಲ್ಲಿಗೆ ನಿಲ್ಲಿಸಿದಳು .
ಎರಡು ಕ್ಷಣ ಅವಳನ್ನು ದಿಟ್ಟಿಸಿದವನು ಅವಳು ಹೇಳಿದ್ದು ಅರ್ಥವಾಗುತ್ತಲೇ ನಕ್ಕು ಬಿಟ್ಟ
"ನಾನೇನಾದ್ರೂ ಬೇರೆ ಏನು? ಗರ್ಲ್ ಫ್ರೆಂಡ್ ಮಾಡ್ಕೊಂಡಿದೀನಿ ಅಂತಾನ?" ಜೋರಾಗಿ ನಕ್ಕವನು , ಅವಳ ಅಳುಮೋರೆ ನೋಡಿ ಬಳಿ ಸೆಳೆದುಕೊಂಡ. ಅವಳನ್ನು ಬಳಸುತ್ತಾ ಹೇಳಿದ
" ಒಬ್ಬರನ್ನೇ ಸುಧಾರಿಸೋದು ಕಷ್ಟ ನಂಗೆ .. ಇನ್ನು ಗರ್ಲ್ ಫ್ರೆಂಡ್ ಮ್ಯಾನೇಜ್ ಮಾಡೋಕಾಗಲ್ಲ ಅಮ್ಮಾವ್ರೇ. ಅಷ್ಟಕ್ಕೂ ಈ ಮುದುಕನ ಹಿಂದೆ ಯಾರೇ ಬರ್ತಾರೆ? ಇಂಥಾದ್ದೆಲ್ಲಾ ಯೋಚನೆ ಬರತ್ತಲ್ಲ ನಿಂಗೆ? ಕರ್ಮಾ ! "
ಅವಳು ತನ್ನ ಯೋಚನೆಯ ಬಗ್ಗೆ ತಾನೇ ನಾಚಿಕೊಂಡಳು .
" ಸಾರಿ ರೀ . ಅದೂ, ಯಾಕೋ ಹಾಗನಿಸ್ತು ನಂಗೆ. ಕೇಳಿಬಿಟ್ಟೆ. ನಿಜಕ್ಕೂ ಸಾರಿ "
" ಅಲ್ಲ ಕಣೆ , ನಾನು ಹೀಗೆ ಕೇಳಬಹುದಾ? ಈ ಮುದುಕ ಗಂಡ ಬೇಜಾರಾಯ್ತು ಹೊಸಾ ಹುಡುಗನ್ನ ಹುಡುಕೋಣ ಅಂತ ನೀನು ಪ್ಲಾನ್ ಹಾಕಿದೀಯಾ ಅಂತ ?"
" ಸುಮ್ನಿರಿ ಸಾಕು" ಎಂದು ಅವನ ತೋಳಿಗೆ ಗುದ್ದಿ ಗಟ್ಟಿಯಾಗಿ ಅಪ್ಪಿಕೊಂಡಳು
No comments:
Post a Comment