ಅಲ್ಲಿ ಆಗಿದ್ದನ್ನು ನೋಡಿದವನ ಎದೆ ಧಸಕ್ ಎಂದಿತು ! ಏನು ಮಾಡುವುದೋ ತೋಚದಂತಾಯಿತು .
ಒಂದು ಸಣ್ಣ ದೌರ್ಬಲ್ಯದಿಂದ ಆದ ಅನಾಹುತಕ್ಕೆ ಹಳ ಹಳಿಸಿದ . ಗಡಿಯಾರ ನೋಡಿದ . ಇನ್ನು ಹೆಚ್ಚೆಂದರೆ ಇಪ್ಪತ್ತು ನಿಮಿಷದೊಳಗೆ ಅವಳು ಬರುತ್ತಾಳೆ . ಅಷ್ಟರಲ್ಲಿ , ಇಲ್ಲಿ ನಡೆದುದರ ಕುರುಹೇ ಇಲ್ಲದಂತೆ ಮಾಡಬೇಕು ! ಅವಳಿಗೆ ಗೊತ್ತಾದರೆ ಏನಾಗಬಹುದೆಂದು ಯೋಚಿಸಿಯೇ ಅವನು ಬೆವರುತ್ತಿದ್ದ .
ಊಹ್ಞೂ ಯೋಚಿಸುತ್ತಾ ನಿಲ್ಲಲು ಸಮಯವಿಲ್ಲ ! ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತನಾದ ! ಎದುರಿಗೆ ಸಾಕ್ಷಿಯಾಗಿದ್ದೆಲ್ಲವನ್ನೂ ಬದಿಗೆ ಒತ್ತಿದ . ಮೊದಲು ಬರೀ ನೀರು ಹಾಕಿ ಒರೆಸಿದ , ಹೋಗಲಿಲ್ಲ , ನಂತರ ಸೋಪ್ ಹಾಕಿ ಬ್ರಶ್ ನಿಂದ ತಿಕ್ಕಿದ , ಎಲ್ಲೂ ಕಲೆ ಕಾಣದಂತೆ , ಈ ಘಟನೆಯೇ ನಡೆದಿಲ್ಲ ಎನ್ನುವಂತೆ ಮಾಡುವುದು ಅಷ್ಟು ಸುಲಭವಿರಲಿಲ್ಲ ! ಮೂರು -ಮೂರು ಸಲ ಸೋಪ್ ಹಚ್ಚಿ , ಬ್ರಶ್ ನಿಂದ ತಿಕ್ಕಿ , ಆಮೇಲೆ ಬಟ್ಟೆಯಿಂದ ಉಜ್ಜಿ ಉಜ್ಜಿ ಒರೆಸಿದ ಮೇಲೆ ಅಂತೂ ಒಂದು ಹಂತಕ್ಕೆ ಬಂತು . ಇನ್ನು ಐದೇ ನಿಮಿಷ ! ಅಷ್ಟರಲ್ಲಿ ಮತ್ತೊಮ್ಮೆ ಎಲ್ಲವನ್ನೂ ಪರಿಶೀಲಿಸಿದ . ಅವಳಿಗೆ ಖಂಡಿತ ತಿಳಿಯಲಾರದು ಎಂಬ ವಿಶ್ವಾಸ ಬಂತು. ತನ್ನ ಕೆಲಸಕ್ಕೆ ತಾನೇ ಬೆನ್ನು ತಟ್ಟಿಕೊಂಡ!
ಬೆಲ್ ಹೊಡೆದು ಕೊಂಡಿತು . ಢವಗುಟ್ಟುತ್ತಿದ್ದ ಎದೆಯೊಂದಿಗೆ ಬಾಗಿಲು ತೆಗೆದ. ಬಂದವಳನ್ನು ನಗುಮುಖದಿಂದ ಸ್ವಾಗತಿಸಿದ. ದೇವರೇ , ಆಗಿದ್ದು ಅವಳಿಗೆ ತಿಳಿಯದಿರಲಿ ಎಂದು ಪ್ರಾರ್ಥಿಸುತ್ತ ಅಲ್ಲೇ ಓರೆಗಣ್ಣಲ್ಲಿ ತಾನು ಸ್ವಚ್ಛಗೊಳಿಸಿದತ್ತ ನೋಡಿ ಸಮಾಧಾನಗೊಂಡ.
ಅವಳು ಎಂದಿನಂತೆ ಬ್ಯಾಗ್ ನ್ನು ರೂಮ್ ನಲ್ಲಿ ಟೇಬಲ್ ಮೇಲಿಟ್ಟು , ಕೈ ಕಾಲು ತೊಳೆದು ಅಡುಗೆ ಮನೆಗೆ ಹೋದಳು .
ಅವನೂ ರಿಲ್ಯಾಕ್ಸ್ ಆಗಿ ಸೋಫಾ ಮೇಲೆ ಕುಳಿತು ಚಾನಲ್ ಬದಲಾಯಿಸತೊಡಗಿದ!
ಆಗಲೇ ಅವಳು ಜೋರಾಗಿ ಕರೆದಳು ! ಇವನೂ ಓಡಿದ .
ಅವಳು ಇವನತ್ತ ಸೀರಿಯಸ್ ಆಗಿ ನೋಡುತ್ತಾ ಕೇಳಿದಳು . "ನೀನು ಕ್ಲೀನ್ ಮಾಡಿದ್ರೆ ನಂಗೇನು ಗೊತ್ತಾಗಲ್ಲ ಅಂದ್ಕೊಂಡ್ಯಾ? ಎಷ್ಟ್ ಸತಿ ಹೇಳಿದೀನಿ ನಿಂಗೆ ನಾನು ಬಂದಮೇಲೆ ಎಲ್ಲ ಮಾಡ್ತೀನಿ , ನೀನು ಹಾಲು ಸ್ಟವ್ ಮೇಲಿಟ್ಟು ಕ್ರಿಕೆಟ್ ನೋಡ್ತಾ ಕೂತ್ಕೋಬೇಡ ಅಂತ !!! ".......
ಅವಳು ಇನ್ನೂ ಏನೇನೋ ಹೇಳ್ತಾ ಇದ್ದಳು . ಇವನ ಕಿವಿಗೆ ಬೀಳಲಿಲ್ಲ !
ಇಷ್ಟು ಕ್ಲೀನ್ ಮಾಡಿದ್ರೂ ಅದು ಅವಳಿಗೆ ಗೊತ್ತಾಗಿದ್ದು ಹೇಗೆ ಅಂತ ಅವನು ಯೋಚಿಸ್ತಾ ಇದ್ದ .
ಅತ್ತ ಇವನೇ ಬದಿಗೆ ಇಟ್ಟಿದ್ದ , ಹಾಲು ಉಕ್ಕಿ ಕರೆಗಟ್ಟಿದ್ದ ಹಾಲಿನ ಪಾತ್ರೆ ಇವನನ್ನು ಅಣಕಿಸುತ್ತಿತ್ತು !
ಒಲೆ, ಅಡುಗೆ ಕಟ್ಟೆ ಎಲ್ಲವನ್ನೂ ಉಜ್ಜಿ ಚೊಕ್ಕಟಗೊಳಿಸಿದವನು ಹಾಲಿನ ಪಾತ್ರೆಯನ್ನು ಮರೆತೇ ಬಿಟ್ಟಿದ್ದ!!
No comments:
Post a Comment