ಮಬ್ಬು ಬೆಳಕಿನ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಸೀತಜ್ಜಿ ಗೆ ಕಿರಿಕಿರಿ ಆಗ್ತಾ ಇತ್ತು . ದಿನಾ ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ರೆ ಮಾಡುವುದು ಅವಳ ಅಭ್ಯಾಸ. ಅದೆಷ್ಟೋ ದಶಕಗಳಿಂದ ರೂಢಿಯಾಗಿದ್ದು . ಆದರೆ ಇವತ್ತೇಕೋ ನಿದ್ದೆ ಬರುವ ಲಕ್ಷಣ ಇರಲಿಲ್ಲ . ಆಚೀಚೆ ಹತ್ತು ಸಲ ಮಗ್ಗುಲು ಬದಲಿಸಿದಳು , ಸೆಖೆ ಎನಿಸಿ ಕಾಲ ಮೇಲೆ ಎಳೆದುಕೊಂಡಿದ್ದ ಹೊದಿಕೆಯನ್ನು ತೆಗೆದಳು . ಮತ್ತೊಂದು ಸ್ವಲ್ಪ ಹೊತ್ತಿಗೆ ಚಳಿ ಎನಿಸಿ ಮತ್ತೆ ಹೊದ್ದುಕೊಂಡಳು … ಊಹುಂ .. ನಿದ್ರೆ ಮಾತ್ರ ದೂರವೇ !
ಎದ್ದು ಹೊರಗೆ ಹೋಗೋಣ ಎಂದರೆ ಹೋಗಿ ಮಾಡೋದಾದರೂ ಏನು ? ಯಾರಿದ್ದಾರೆ ಮಾತಾಡಲು ? ಈ ದೊಡ್ಡ ಮನೆಯಲ್ಲಿ ದಿನದ ಹೆಚ್ಚು ಭಾಗ ಒಬ್ಬಳೇ ಇರೋದು ! ಕೆಲಸ ಇದ್ದರೆ ಬಂದು ಹೋಗುವ ಆಳುಗಳು , ಮನೆವಾರ್ತೆ ಮುಗಿಸಿ ಒಮ್ಮೆ ಬಂದು ಮಾತನಾಡಿಸಿಕೊಂಡು ಹೋಗುವ ಪಕ್ಕದ ಮನೆಯ ಸರೋಜಾ , ಬೆಳಿಗ್ಗೆ ಒಮ್ಮೆ ಬಂದು ಮನೆಕೆಲಸ ಮಾಡಿ ಕೊಟ್ಟು ಮತ್ತೆ ಸಂಜೆ ಹೊತ್ತಿಗೆ ಬಂದು ಕಟ್ಟೆಯ ಮೇಲೆ ಕುಳಿತು ಕವಳ ತಿನ್ನುತ್ತಾ ಒಂದು ಗಳಿಗೆ ಹರಟೆ ಹೊಡೆದು ಹೋಗುವ ನಾಗಿ , ಇಷ್ಟು ಜನರನ್ನು ಬಿಟ್ಟರೆ ಬೇರೆ ಸಾಧಾರಣವಾಗಿ ಬೇರೆ ಯಾರೂ ಕಾಣುವುದಿಲ್ಲ.
ರಾತ್ರಿ ಊಟವಾದ ಮೇಲೆ ಸರೋಜಾಳ ಮಗಳು ಶ್ರುತಿ ಬರುತ್ತಾಳೆ ಮಲಗಲು . ಕಾಲೇಜಿಗೆ ಹೋಗುವ ಹುಡುಗಿ. ಅಜ್ಜಿ ಎಂದರೆ ಇಷ್ಟವೇ. ಕಾಲೇಜಿನ ಸುದ್ದಿ, ಊರಿನಲಿ ಏನೇನು ನಡೀತಿದೆ, ಇಂಥದ್ದೆಲ್ಲ ಅಜ್ಜಿಗೆ ಹೇಳುತ್ತಾ, ಮಾತನಾಡುತ್ತಾ ಮಲಗುತ್ತಾಳೆ. ಅವಳಿಗೆ ಪರೀಕ್ಷೆ ಇದ್ದರೆ ಓದುತ್ತಾ ಕುಳಿತುಕೊಳ್ಳುತ್ತಾಳೆ . ಆಗ ಮಾತ್ರ ಮಾತೂ ಕಡಿಮೆ .
ನೆಂಟರು ಇಷ್ಟರು ಇದ್ದಾರೆ ಎನ್ನುವುದೇ ಮರೆತು ಹೋದಂತಾಗಿದೆ . ಮದುವೆ ಮುಂಜಿ ಇದ್ದರೆ ತೀರ ಹತ್ತಿರದವರು ಪದ್ಧತಿ ಬಿಡಲಾಗದು ಎಂದು ಕರೆಯಲು ಬರುತ್ತಾರೆ. ಹೇಗೂ ತಾನು ಬರುವುದಿಲ್ಲ ಎಂದು ಗೊತ್ತಿದ್ದರೂ ರೂಢಿ ತಪ್ಪ ಬಾರದೆಂದು ಕರೆದು ಹೋಗುತ್ತಾರೆ. ಹಾಗೆ ಬಂದವರಿಗೆ ಒಂದು ಊಟವಿರಲಿ ಚಾ- ಕಷಾಯ ಮಾಡಿಕೊಡುವುದೂ ತನಗೆ ಕಷ್ಟವೇ.
ಹಾಗೆ ನೋಡಿದರೆ ಅವಳ ವಯಸ್ಸಿಗೆ ಹೀಗೆ ತನ್ನ ಕೆಲಸ ತಾನು ಮಾಡಿಕೊಂಡಿರುವಷ್ಟು ಗಟ್ಟಿ ಇದ್ದಿದ್ದೇ ದೊಡ್ಡದು. ಹಾಸಿಗೆ ಹಿಡಿದರೆ ನೋಡುವರ್ಯಾರು? ದೇವರೇ, ಇಷ್ಟಾದರೂ ಗಟ್ಟಿ ಇರುವಾಗಲೇ ಕರೆದೊಯ್ಯಪ್ಪಾ ಎಂದು ಪ್ರಾರ್ಥಿಸುತ್ತಾಳೆ. ಆ ದೇವರು ಯಾಕೋ ಕಿವುಡಾಗಿದ್ದಾನೆ . ಕುರುಡನೂ ಆಗಿದ್ದಾನೆ ಎನ್ನೋದು ಅಜ್ಜಿಯ ವ್ಯಥೆ.
ವಯಸ್ಸಾದರೂ ಕಮ್ಮಿ ಆಯ್ತೆ? ಬರುವ ಜ್ಯೇಷ್ಠ ಮಾಸದಲ್ಲಿ ತೊಂಭತ್ತನೆ ವರ್ಷಕ್ಕೆ ಕಾಲಿಡುವುದೇ . ಆದರೆ ಆಚರಿಸಿ ಸಂಭ್ರಮಿಸಲು ಯಾರಿದ್ದಾರೆ ? ಹಲವು ನಿರಾಸೆಗಳು, ಹುಟ್ಟಿಯೂ ದಕ್ಕದ 3-4 ಮಕ್ಕಳ ನಂತರ ಬದುಕಿದ ಇಬ್ಬರು ಮಕ್ಕಳೂ ಕಣ್ಣೆದುರೇ ಹೋಗಿಬಿಟ್ಟರು . ವಂಶೋದ್ಧಾರಕ ಎಂದು ಮುದ್ದಲ್ಲಿ ಬೆಳೆಸಿದ ಮಗ , ಕೆಲಸಕ್ಕೆಂದು ಬೇರೆ ಊರಿಗೆ ಹೋದ. ಇನ್ನು ಅವನಿಗೆ ಮದುವೆ ಮಾಡಿ, ಆದಷ್ಟು ಬೇಗ ಮೊಮ್ಮಕ್ಕಳನ್ನು ಆಡಿಸುತ್ತಾ ಹಾಯಾಗಿರಬಹುದು ಎಂದು ಕೊಳ್ಳುತ್ತಾ ಇರುವಾಗ ಆಕ್ಸಿಡೆಂಟ್ ಲ್ಲಿ ಹೋಗಿಬಿಟ್ಟ ಎಂಬ ಸುದ್ದಿ ಬಂತು . ಆಗ ಗೋಳಾಡಿದ್ದೆಷ್ಟು!
ಅದೇ ದುಃಖದಲ್ಲಿ ಹಾಸಿಗೆ ಹಿಡಿದ ಗಂಡ ಎರಡು ವರ್ಷದಲ್ಲಿ ತೀರಿಕೊಂಡರು . ಮಕ್ಕಳಾಗಲಿಲ್ಲ ಎಂದು ಅಳಿಯ ಎರಡನೇ ಮದುವೆ ಆದ್ಮೇಲೆ ತವರಿಗೆ ಬಂದು ಉಳಿದ ಮಗಳು ಅದೇನೋ ಕಾಯಿಲೆ ಬಂದು ಯಾವ ಔಷಧಿ ಉಪಚಾರಗಳೂ ತಾಗದೆ ತೀರಿಕೊಂಡು ೧೫ ವರ್ಷಗಳೇ ಆಯಿತು . ಇನ್ಯಾರಿದ್ದಾರೆ ಕಷ್ಟ ಸುಖ ಕೇಳಲು ? ಅಪ್ಪ ಅಮ್ಮ ಹೋದ ಮೇಲೆ ಸಡಿಲವಾಗ ತೊಡಗಿದ ತೌರಿನ ಋಣ ಈಗಂತೂ ಮುಗಿದೇ ಹೋಗಿ ಎಷ್ಟು ವರ್ಷವಾಯಿತೆಂದೇ ನೆನಪಿಲ್ಲ . ಒಟ್ಟಿನಲ್ಲಿ ತನ್ನವರು ಎನ್ನಲು ಯಾರೂ ಇಲ್ಲ .
ಯಾಕೋ , ಕೇರಿ ಮನೆಯಾಗಿ ಅಕ್ಕ ಪಕ್ಕಕ್ಕೆ ಅಂಟಿ ಕೊಂಡಂತೆ ಮನೆಗಳಿರುವ ಕಾರಣ ತೀರಾ ಒಂಟಿ ಎನಿಸದೆ ಜೀವನ ಕಳೀತಾ ಇದೆ. ಒಬ್ಬರಲ್ಲಾ ಒಬ್ಬರು ವಿಚಾರಿಸಿಕೊಂಡು ಹೋಗುತ್ತಾರೆ.
ಆಚೆ ಮನೆಯ ರಾಮು , ಚಿಕ್ಕವನಿದ್ದಾಗಿಂದ ಅಜ್ಜಿ ಎನ್ನುತ್ತಾ ಹಚ್ಚಿಕೊಂಡವನು. ಅವನಿಗೆ ತನ್ನ ಜಮೀನಿನ ಜವಾಬ್ದಾರಿ ವಹಿಸಿಯಾಗಿದೆ. ತನ್ನ ಊಟತಿಂಡಿ, ಬಟ್ಟೆ ಮತ್ತು ಅವಶ್ಯಕತೆಗಳಿಗೆ ಆಗುವಷ್ಟು ಕೊಟ್ಟು ಉಳಿದಿದ್ದೆಲ್ಲಾ ಅವನಿಗೆ ಇಟ್ಟುಕೊಳ್ಳಲು ಹೇಳಿಯಾಗಿದೆ. ತನಗಾದರೂ ಇನ್ಯಾರಿದ್ದಾರೆ ಆಸ್ತಿ ಬರೆದುಕೊಡಲು ? ಆದರೂ ಅವನು ಅಡಿಕೆ ಮಾರಿದ ದುಡ್ಡನ್ನು ಬ್ಯಾಂಕಿನಲ್ಲಿ ತನ್ನ ಹೆಸರಿನ ಖಾತೆ ಮಾಡಿ ಅದರಲ್ಲಿ ಹಾಕುತ್ತಾನೆ. ನಿನ್ನ ದುಡ್ಡು ನಿನಗೆ ಇರಲಿ ಎಂಬ ಗುಣ ಅವನದು .
ರಾಮುವಿನ ಹೆಂಡತಿ ಸರೋಜಾ ಕೂಡ ಒಳ್ಳೆ ಹುಡುಗಿ. ಅಜ್ಜಿ ನಿನಗೆ ನಾನೇ ಊಟ ತಂದು ಕೊಡ್ತೀನಿ ನೀ ಯಾಕೆ ಸುಮ್ಮನೆ ಕಷ್ಟ ಪಡೋದು ಅಂತ ಎಷ್ಟೋ ಸಲ ಹೇಳಿದ್ದಾಳೆ. ಆದರೆ ತಾನೇ ನಿರಾಕರಿಸಿದ್ದು. ಆ ಅಡುಗೆ ಬೇಯಿಸಿಕೊಂಡಾದರೂ ಸ್ವಲ್ಪ ಹೊತ್ತು ಹೇಗೋ ಕಳೆಯುತ್ತಲ್ಲಾ ಅಂತ. ತೀರ ಯಾವಾಗಾದರೂ ಹುಷಾರಿಲ್ಲದೆ ಸುಸ್ತು ಎನಿಸಿದಾಗ ಮಾತ್ರ ಅವಳು ತನಗೆ ಅಡುಗೆ ಮಾಡಲು ಬಿಡದೇ ಅವಳೇ ಊಟ ತಂದು ಪ್ರೀತಿಯಿಂದ ಗದರುತ್ತಾ ಊಟ ಮಾಡಿಸಿ ಹೋಗುತ್ತಾಳೆ
ಮಗಳು ಸತ್ತ ಕೆಲ ಸಮಯದ ನಂತರ ,ಒಳಕೋಣೆಯಲ್ಲಿ ಮಲಗಿರುವಾಗ ತನಗೇನಾದರೂ ಆದರೆ ಜನರಿಗೆ ತಿಳಿಯುವುದೂ ಕಷ್ಟವಾದೀತು ಎಂಬ ಯೋಚನೆ ಬಂದು ಒಳ ಜಗುಲಿಯ ಒಂದು ಭಾಗಕ್ಕೆ ಹಲಗೆಯ ಗೋಡೆ ಮಾಡಿಸಿ, ಬಾಗಿಲಿಲ್ಲದ ಕೋಣೆಯಂತೆ ಮಾರ್ಪಾಟು ಮಾಡಿ ಕೊಂಡಾಯ್ತು. ಆಗಲೇ ರಾಮು ಅದಕ್ಕೊಂದು ಅಂಟಿಕೊಂಡಂತೆ ಬಚ್ಚಲು ಸಂಡಾಸು ಮಾಡಿಕೊಳ್ಳೋದು ಒಳ್ಳೇದು ಅಂತ ಒತ್ತಾಯಿಸಿದ್ದು.
ಮೊದಲು ಸ್ವಲ್ಪ ಮುಜುಗರ ಎನಿಸಿದರೂ ಮುಂದಿನ ವಿಚಾರ ಮಾಡಿದಾಗ ಅದು ಸರಿ ಎನಿಸಿತ್ತು. ಇಲ್ಲದಿದ್ರೆ ಈಗೆಲ್ಲಾ ಎಷ್ಟು ಕಷ್ಟ ಆಗಿರೋದು! ರಾತ್ರಿ ಕೆಲವೊಮ್ಮೆ ಎರಡು ಮೂರು ಸಲ ಏಳಬೇಕು . ಸದ್ಯ ಪಕ್ಕಕ್ಕೆ ಬಚ್ಚಲುಮನೆ ಇರೋದಕ್ಕೆ ಸಲೀಸು. ಇನ್ನೂ ಎಷ್ಟು ದಿನ ಅಂತ ಹೀಗೆ ಬದುಕಿರಬೇಕೋ !
ಸೀತಜ್ಜಿಯ ತಲೆಯಲ್ಲಿ ಆಲೋಚನೆಗಳು ಓಡುತ್ತಲೇ ಇದ್ದವು.
ಅಲ್ಲಾ , ನೂರುವರ್ಷ ಬಾಳು ಅಂತ ಯಾರಾದ್ರೂ ಆಶೀರ್ವಾದ ಮಾಡಿದ್ದು ನಿಜವಾಗಿ ಬಿಡುತ್ತಾ ಅಂತ ? ಹಾಗೆ ಮಾಡಿದ ಆಶೀರ್ವಾದಗಳೆಲ್ಲ ನಿಜವಾಗೋ ಹಾಗಿದ್ರೆ, ದೀರ್ಘ ಸುಮಂಗಲಿ ಭವ ಅಂದಿದ್ದಾಗಲೀ, ಅಷ್ಟ ಪುತ್ರವತೀ ಭವ ಎಂದಿದ್ದಾಗಲಿ ಯಾಕೆ ನಿಜವಾಗಲಿಲ್ಲ ಎಂದು ಯೋಚಿಸುತ್ತಾಳೆ. ಅಷ್ಟೇ ಯಾಕೆ, ನೂರುವರ್ಷ ಸುಖವಾಗಿ ಬಾಳು ಅಂದಿದ್ದರಲ್ಲಿ ಅರ್ಧ ಭಾಗವಷ್ಟೇ ನಿಜವಾಗುತ್ತದ? ಎಂದು ಯೋಚಿಸುತ್ತಾಳೆ
ಯಾರೆಲ್ಲ ಆಶೀರ್ವಾದ ಮಾಡಿದ್ದರು ಎಂದು ನೆನಪಿಸಿ ಕೊಳ್ಳುವ ಪ್ರಯತ್ನ ಮಾಡುತ್ತಾಳೆ . ಹಾಗೆ ತನಗೆ ಆಶೀರ್ವಾದ ಮಾಡಿದ ಯಾರ ನಾಲಿಗೆ ಮೇಲೆ ಮಚ್ಚೆ ಇದ್ದಿರಬಹುದು ? ಅವರಿಗಾದರೂ ಕಲ್ಪನೆ ಬೇಡವೇ? ಒಂಟಿಯಾಗಿ ನೂರುವರ್ಷ ಬದುಕೋದು ಎಂಥಾ ಹಿಂಸೆ ಅಂತ?
ತಮ್ಮ ಕಣ್ಣ ಮುಂದೆ ಗಂಡ ಮಕ್ಕಳು ಎಲ್ಲರೂ ಮಣ್ಣಾದಾಗ ಹೊಟ್ಟೆಯಲ್ಲಿ ಎಂಥಾ ಬೆಂಕಿ ಸುಡುತ್ತದೆ ಅಂತ? ಕೈಲಾಗದಿದ್ದರೂ ಹೇಗೋ ತಮ್ಮ ಕೆಲಸ ಮಾಡಿಕೊಂಡು , ಒಂದು ಗಂಜಿಯನ್ನಾದರೂ ಬೇಯಿಸಿಕೊಂಡು ದೊಡ್ಡ ಮನೆಯಲ್ಲಿ ಒಂಟಿ ಭೂತದಂತೆ ತಿರುಗುವುದು ಎಷ್ಟು ಹುಚ್ಚು ಹಿಡಿಯುವಂತೆ ಮಾಡುತ್ತದೆ ಅಂತ? ಸತ್ತ ಮೇಲೆ ತನಗಾಗಿ ಅಳುವವರು , ಚಿತೆಗೆ ಬೆಂಕಿ ಇಡುವವರು ಇಲ್ಲದೆ ಅನಾಥ ಹೆಣವಾಗಿಬಿಡುವ ಸಾಧ್ಯತೆಯನ್ನು ಅವರು ಯೋಚಿಸಿಲ್ಲವೇ? ಬಹುಶಃ ಅವರಿಗೇ ತಮ್ಮ ಆಶೀರ್ವಾದದ ಮೇಲೆ ನಂಬಿಕೆ ಇರಲಿಕ್ಕಿಲ್ಲ ಎಂದು ಅವಳಿಗೆ ನಗು ಬಂತು.
ಗಂಡ ತೀರಿಕೊಂಡಾಗ ಬಂದಿದ್ದ ಮಂಕಾಳತ್ತೆ ಯಾರಿಗೋ “ಸೀತೆ ಹೇಳಿ ಹೆಸರಿರೋರಿಗೆ ಕಷ್ಟ ತಪ್ಪಿದ್ದಲ್ಲವಂತೆ , ಆ ಸೀತಾಮಾತೆಯೆ ಏನೆಲ್ಲ ಕಷ್ಟ ಅನುಭವಿಸಿದಳು” ಎಂದು ಹೇಳಿದ್ದು ಅಜ್ಜಿಗೆ ನೆನಪಾಯ್ತು.
ಹಾಗಾದರೆ, ಇದು ತನ್ನ ಅಪ್ಪ ಅಮ್ಮನಿಗೆ ಗೊತ್ತಿರಲಿಲ್ಲವೇ? ಗೊತ್ತಿದ್ದೂ ಯಾಕೆ ತನಗೆ ಸೀತೆ ಎಂದೇ ಹೆಸರಿಟ್ಟರು? ತಮ್ಮ ಮಗಳಿಗೆ ಹಾಗೇನೂ ಆಗದು ಎಂಬ ಹುಚ್ಚು ಭರವಸೆ ಇತ್ತೇ? ಅವರಿದ್ದಿದ್ದರೆ ಕೇಳಿಯೇ ಬಿಡಬಹುದಿತ್ತು ಎಂದುಕೊಂಡವಳಿಗೆ ಅಲ್ಲೇ ತನ್ನ ತಲೆ ಎಲ್ಲೆಲ್ಲೋ ಓಡುತ್ತಿರುವ ರೀತಿಗೆ ಸಣ್ಣಗೆ ನಗು ಬಂತು.
ಮಗಳು ಸತ್ತು, ತಾನು ತೀರಾ ಒಂಟಿಯಾದ ಶುರುವಿಗಂತೂ ತಾನಾದರೂ ಇನ್ನೇಕೆ ಬದುಕಬೇಕು ಎನಿಸಿ ಜೀವ ಕಳೆದುಕೊಳ್ಳುವ ಯೋಚನೆ ಅದೆಷ್ಟೋ ಸಲ ಬಂದಿತ್ತು. ನೇಣು ಹಾಕಿ ಕೊಳ್ಳಬೇಕು ಅಥವಾ ಅಂಗಳದಾಚೆ ತೋಟದ ಬದಿಯಲ್ಲಿಯ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿವಾಗ ಅದರಲ್ಲಿ ಬಿದ್ದು ಬಿಡಬೇಕು ಎಂದೆಲ್ಲ ಅದೆಷ್ಟೋ ಸಲ ಅನಿಸಿದ್ದಿತ್ತು. ಆದರೆ , ಆತ್ಮಹತ್ಯೆ ಮಹಾಪಾಪ, ಹಾಗೆ ಮಾಡಿಕೊಂಡವರು ಅಂತರ್ ಪಿಶಾಚಿಯಾಗಿ ಅಲೆಯುತ್ತಾರೆ ಎಂಬ ಭಯವಿತ್ತಲ್ಲ ? ಅದರಿಂದಾಗಿ ಹಿಂಜರಿದಿದ್ದಾಯ್ತು. ಹಾಗೆ ನೋಡಿದರೆ ಈಗಲಾದರೂ ಇನ್ನೇನು ? ಒಂಥರಾ ಒಂಟಿ ಪಿಶಾಚಿಯಂತೆ ಅಲೆಯುತ್ತಿಲ್ಲವೇ ಎನಿಸಿ ನಿಟ್ಟುಸಿರು ಹೊರಬರುತ್ತದೆ.
ಆ ದೇವರಿಗಾದರೂ ಯಾಕೆ ತನ್ನ ಮೇಲೆ ಕರುಣೆಯಿಲ್ಲ ? ಕಳೆದ ವರ್ಷ ತುದಿ ಮನೆ ಪರಮುನ ಮಗಳು ಜ್ವರ ಬಂದಿದ್ದೆ ನೆಪವಾಗಿ ತೀರಿ ಕೊಂಡೆ ಬಿಟ್ಟಳಲ್ಲ ? ಇನ್ನೂ ಶಾಲೆಗೆ ಹೋಗುವ ಚಿಕ್ಕ ಹುಡುಗಿ . ಆ ದೇವರಿಗೆ ಇಲ್ಲಿ ಸಾವನ್ನೇ ಕಾಯ್ತಾ ಕೂತಿರೋ ತಾನು ಕಾಣಲಿಲ್ವೆ?
ಯಾವ ಪಾಪಕ್ಕೆ ಇಂಥಾ ಶಿಕ್ಷೆ ಕೊಡ್ತಿದಾನೆ? ತಪ್ಪದ್ದೆ ಶ್ರದ್ಧಾ ಭಕ್ತಿಯಿಂದ ಎಲ್ಲಾ ಹಬ್ಬ ಹುಣ್ಣಿಮೆ , ವ್ರತ ಮಾಡಿದ್ದೇನೆ . ಆದರೂ ಯಾಕೆ ಹೀಗೆ?
ಒಟ್ಟಿನಲ್ಲಿ ತಾನು ಅನುಭವಿಸುತ್ತಿರುವುದನು ನೋಡಲು ತನ್ನವರು ಎಂದು ಯಾರೂ ಇಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟಳು.
ಛೆ, ಹಾಳಾದ್ದು , ಇವತ್ತು ಯಾಕೆ ನಿದ್ದೆ ಬರುತ್ತಿಲ್ಲ ಎನಿಸಿ ಒಳಗೇ ಸ್ವಲ್ಪ ಸಿಟ್ಟೂ ಬರ ತೊಡಗಿತು. ಮತ್ತೆ ಮಗ್ಗುಲು ಬದಲಾಯಿಸಿ ಮಲಗಿದಳು.
ಇದ್ದಕ್ಕಿದ್ದ ಹಾಗೇ ಮತ್ತೊಂದು ಹುಳ ತಲೆ ಕೊರೆಯ ತೊಡಗಿತು!
ತಾನೇನಾದರೂ ಈಗ ಸತ್ತೇ ಹೋದರೆ ಬೇರೆಯವರಿಗೆ ತಿಳಿಯುವುದಾದರೂ ಹೇಗೆ?
ಸಂಜೆ ನಾಗಿ ಬಂದು, ತಾನು ಇನ್ನೂ ಎದ್ದಿಲ್ಲದ್ದು ನೋಡಿ , ಸರೋಜಾಳನ್ನು ಕರೆ ತಂದರೆ….ಆಗ ತಿಳಿಯಬಹುದೇನೋ . ಇವರೆಲ್ಲ ತನ್ನ ಜೀವನದ ಒಂದು ಭಾಗವಾಗಿದ್ದವರು. ತಾನು ಸತ್ತಿದ್ದಕ್ಕೆ ಅಳಬಹುದೇ ಎಂಬ ಕೆಟ್ಟ ಕುತೂಹಲ ಮೂಡಿತು. ಅಲ್ಪ ಸ್ವಲ್ಪ ದುಖವಾಗಬಹುದು, ಜೊತೆಗೇ ಸಾವಿಗಾಗಿ ಎಷ್ಟೋ ವರ್ಷಗಳಿಂದ ಕಾದು ಕುಳಿತಿರುವ ತಾನು ಸತ್ತರೆ ಅವರಿಗೂ ಒಮ್ಮೆ ಸಮಾಧಾನವೇ ಆಗಬಹುದು ಎಂದು ಯೋಚಿಸಿದಾಗ ಬೇಡವೆಂದರೂ ಮನದ ಮೂಲೆಯಲ್ಲೆಲ್ಲೋ ತನಗಾಗಿ ದುಃಖಿಸುವವರು ಯಾರು ಇಲ್ಲವಲ್ಲ ಎಂದು ಪಿಚ್ಚೆನಿಸಿತು.
ಆಮೇಲೆ ಮುಂದಿನ ಕಾರ್ಯಗಳನ್ನು ಯಾರು ಮಾಡಬಹುದು ಎಂಬ ಕುತೂಹಲ ಮೂಡಿತು. ಒಂದು ಕಾಲದಲ್ಲಿ ಜರ್ಬಿನಿಂದಲೇ ಬಾಳಿ, ಇಷ್ಟು ದೀರ್ಘ ಕಾಲ ಗೌರವದಿಂದಲೇ ಬದುಕಿದ್ದು ,ಸತ್ತ ಮೇಲೆ ಅನಾಥ ಹೆಣವಾಗಿ ಬಿಡುವೆನೆ ಎಂದೆನಿಸಿ ದುಃಖವಾಯಿತು.
ಯಾವುದಕ್ಕೂ ಇಂದು ಸಂಜೆ ರಾಮು ಮತ್ತೆ ಸರೋಜಾ ರನ್ನು ಕೂರಿಸಿಕೊಂಡು ಈ ಬಗ್ಗೆ ಮಾತನಾಡಬೇಕು. ಕೊಳ್ಳಿ ಇಡುವ ಕೆಲಸವೊಂದು ನೀನೇ ಮಾಡು ಎಂದು ರಾಮುವನ್ನು ಕೇಳಿಕೊಳ್ಳಬೇಕು . ಎಷ್ಟೆಂದರೂ ದಾಯಾದಿಯೇ ಆಗುತ್ತಾನೆ. ಇಲ್ಲ ಎನ್ನಲಾರ .
ನಂತರದ ಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ ಎಂದು ಹೇಳಬೇಕು. ಅದೆಷ್ಟೋ ಜನ ಅನಾಥರಾಗಿ ಸಾಯುವುದಿಲ್ಲವೇ? ಅಂಥಾ ಅನಾಥ ಹೆಣಗಳನ್ನು ಯಾರೋ ಸುಡುತ್ತಾರೆ. ಆದರೆ ಮುಂದಿನ ಕಾರ್ಯ ಯಾರೂ ಮಾಡುವುದಿಲ್ಲ. ಹಾಗಿದ್ದರೆ ಅವರ ಆತ್ಮ ಮುಕ್ತಿಯಿಲ್ಲದೆ ಅಲೆಯುತ್ತದೆಯೇ? ಆ ರೀತಿ ಏನಾದರೂ ಆದರೆ, ಇಂಥಾ ಆತ್ಮಗಳದ್ದೆ ದೊಡ್ಡ ಜಾತ್ರೆಯಾದೀತು!
ಅದೇಕೋ ತನ್ನ ಆಲೋಚನೆಗೆ ಅವಳಿಗೇ ನಗು ಬಂತು!
ಮತ್ತೆ ಮಗ್ಗುಲಾಗಿ ಗೋಡೆಯ ಕಡೆ ತಿರುಗಿ ಮಲಗಿದಳು.
ನಾಳೆ ನಾಡಿದ್ದು ಯಾವಾಗಲಾದರೂ ಈ ಹಾಸಿಗೆ ಬಟ್ಟೆನಾ ಒಂದ್ಸಲ ತೊಳೀಬೇಕು ಕಮಟಾಗಿ ಬಿಟ್ಟಿವೆ. ಸರೋಜಾ ಗೆ ಹೇಳಿದ್ರೆ ಅವರ ಮನೆ ಮಷಿನ್ ಲ್ಲಿ ತೊಳೆದು ಕೊಡ್ತಾಳೆ. ಸ್ನಾನ ಮಾಡಿ ತನ್ನ ನೈಟಿಯನ್ನು ತೊಳೆದುಕೊಳ್ಳಲು ತನಗೆ ಒಮ್ಮೊಮ್ಮೆ ಕಷ್ಟ ಎನಿಸಿದ್ದಿದೆ. ಆದರೆ ಅದು ಅನಿವಾರ್ಯ ! ಈ ನೈಟಿಯನ್ನಾದರೂ ಹಾಕಿಸಲು ಸರೋಜಾ ಅದೆಷ್ಟು ವಾದ ಮಾಡಿ ಒಪ್ಪಿಸಿದ್ದು !
ಈಗ ಇದೇ ಹಾಯಿ ಎನಿಸುತ್ತದೆ. ನಿಂತು ಸೀರೆ ಉಟ್ಟುಕೊಳ್ಳುವುದು ಬಹುಶಃ ತನಗೆ ಈಗ ಕಷ್ಟವೇ ಆಗ್ತಾ ಇತ್ತೇನೋ .
ದೇವರೇ, ಸದ್ಯ ತನ್ನವರನ್ನೆಲ್ಲ ಕರೆಸಿಕೊಂಡರೂ ಮನೆಯವರಂತೆಯೆ ನೋಡಿಕೊಳ್ಳುವ ಜನರನ್ನಾದರೂ ಕೊಟ್ಟಿದ್ದೀಯಲ್ಲ ಎಂದು ಮನದಲ್ಲೇ ನಮಸ್ಕಾರ ಮಾಡಿದ್ಲು.
ಈ ಎಲ್ಲ ಯೋಚನೆಗಳ ನಡುವೆ ಅಂತೂ ಅವಳಿಗೆ ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ. ಮತ್ತೆ ಎಚ್ಚರವಾಗಿದ್ದು ನಾಗಿಯ ಜೋರಾದ ದನಿಯಿಂದ . ದಿನದಂತೆ ಬಂದು ಕಟ್ಟೆಯಮೇಲೆ ಕುಳಿತ ನಾಗಿ, ಸೀತಜ್ಜಿ ಕಾಣದ್ದು ನೋಡಿ ಜಗುಲಿಗೆ ಹೋಗಿ ಕರೆದಳು . ಎರಡು ಮೂರು ಸಲ ಕರೆದರೂ ಉತ್ತರವಿಲ್ಲದ್ದು ನೋಡಿ ಗಾಬರಿಯಾಗಿ ಜೋರಾಗಿ ಕೂಗಿದಳು. ಆಗಲೇ ಅಜ್ಜಿಗೆ ಎಚ್ಚರವಾಗಿದ್ದು.
ಎದ್ದು ಬಂದ ಅಜ್ಜಿ ಯನ್ನು ನೋಡಿ , ನಾಗಿಯೂ ನಿಟ್ಟುಸಿರು ಬಿಟ್ಟಳು.
“ ಎಂತ ಅಮಾ, ಆ ನಮನಿ ನಿದ್ರೆ? ನಾ ಒಂದ್ ಸಲ ನಿಮಗೆ ಎಂತೋ ಆಯ್ತು ಅಂದ್ಕಂಡೆ “
“ಆಗಿದ್ರೆ ಒಂದು ಸಮಾಧಾನ ಇರ್ತಿತ್ತಲೇ ನಾಗಿ ? ಎಂತ ಮಾಡದು ? ಆ ದೇವರಿಗೆ ನಾ ಕಾಣದೆ ಇಲ್ಲಲ್ಲೇ” ಎಂದು ಅಲವತ್ತುಕೊಂಡಳು ಸೀತಜ್ಜಿ.
ದಿನದ ಹಾಗೇ ಅದೂ ಇದೂ ಸುದ್ದಿ ಹೇಳಿ ನಾಗಿ ಮನೆಗೆ ಹೊರಟಳು. ಅವಳು ಕಟ್ಟೆಯಿಂದ ಅಂಗಳಕ್ಕೆ ಇಳಿಯುತ್ತಿರುವಾಗ ಅದೇನೋ ನೆನಪಾದಂತಾಗಿ ಸೀತಜ್ಜಿ ಅವಳನ್ನು ಕರೆದಳು. ತಿರುಗಿ ಬಂದವಳಿಗೆ “ ನಾಗಿ , ಹೋಗ್ತಾ ಆ ಶ್ರೀಧರ ಭಟ್ರ ಮನೆ ವಿನಾಯಕ ಮನೇಲಿದ್ರೆ ಒಂದ್ ಸತಿ ಬರಲಿಕ್ಕೆ ಹೇಳು . ಅರ್ಜೆಂಟ್ ಎಲ್ಲ ಇಲ್ಲ. ಆದ್ರೂ ಇವತ್ತೇ ಬಂದ್ ಹೋಗಬೇಕಂತೆ ಹೇಳು .” ಎಂದಳು
ನಾಗಿಗೆ ಒಮ್ಮೆ ಆಶ್ಚರ್ಯವಾದರೂ “ಅಡ್ಡಿಲ್ಲ, ಹೇಳಿ ಹೋಗ್ತೇನೆ “ ಎಂದು ಹೊರಟಳು .
“ಹಾಂಗೆ ನಿನ್ ಮಗ ಶಿವಪ್ಪಂಗು ಒಂದ್ಸಲ ಬಂದು ಹೋಗಲಿಕ್ಕೆ ಹೇಳು.”
ನಾಗಿಗೆ ಈಗ ಸ್ವಲ್ಪ ಗಲಿಬಿಲಿಯಾಯಿತು. ಆದರೂ ತೋರಿಸಿಕೊಳ್ಳದೆ “ಆಯ್ತು ಅಮಾ” ಎನ್ನುತ್ತಾ ಗೇಟ್ ದಾಟಿದಳು..
ಒಳ ಹೋಗಿ ದೀಪ ಹಚ್ಚಿ ,ದೇವರಿಗೆ ಕೈ ಮುಗಿದು ಜಗುಲಿಯ ಮೇಲೆ ಕುಳಿತು ರಾಮಾಯಣ ಓದ ತೊಡಗಿದರೂ ಸೀತಜ್ಜಿಯ ತಲೆಯಲ್ಲಿ ಹತ್ತೆಂಟು ಯೋಚನೆಗಳು.
ದಿನದಂತೆ ಶ್ರದ್ಧೆಯಿಂದ ಓದಲಾಗದೇ ಅದನ್ನು ಹಾಗೇ ಮುಚ್ಚಿಟ್ಟು ಸುಮ್ಮನೆ ಕುಳಿತಳು .
ಅಷ್ಟೊತ್ತಿಗೆ ವಿನಾಯಕ ಗಡಿಬಿಡಿಯಿಂದ ಮನೆ ಮೆಟ್ಟಿಲು ಹತ್ತುತ್ತಿರುವುದು ಕಂಡಿತು. ಜಗುಲಿಯಲ್ಲಿ ಪುಸ್ತಕ ತೊಡೆಯ ಮೇಲಿಟ್ಟು ಕುಳಿತ ಅಜ್ಜಿಯನ್ನು ನೋಡಿ ಅವನೂ ಸಮಾಧಾನದ ಉಸಿರು ಬಿಟ್ಟ.
"ಎಂತ ಆ ಯ್ತೆ ಅಜ್ಜಿ ? ಹೇಳಿ ಕಳಿಸಿದ್ದೆ ?ನಾಗಿ ಹೇಳಿದ ಕೂಡ್ಲೇ ನಾನು ಒಂದ್ಸಲ ಗಾಬರಿ ಆಗೋದೆ ನೋಡು . "
ದೊಡ್ಡದಾಗಿ ನಕ್ಕ ಸೀತಜ್ಜಿ , “ಅಯ್ಯ, ನಾನಿನ್ನೂ ಬದುಕಿದ್ದೆ ಮಾರಾಯ. ಇವತ್ತು ತಲೇಲಿ ಏನೇನೋ ಯೋಚನೆ ಬರ್ತಿತ್ತು. ಅದಕ್ಕೇ ಕೆಲವು ವಿಷಯಾನಾ ಒಂದ್ ಹಂತಕ್ಕೆ ತಂದಿಡದು ಒಳ್ಳೇದು ಅನಸ್ತು. ಅದಕ್ಕೇ ನಿಂಗೆ ಹೇಳಿ ಕಳಿಸ್ದೆ . ಆ ರಾಮು ನ ಒಂದ್ಸಲ ಕರದ್ ಬಿಡು ನೀನೇ. ಸರೋಜಾನ್ನೂ ಬರಾಕ್ ಹೇಳು .
ವಿನಾಯಕಂಗೆ ಗೊಂದಲವಾಯಿತು.. ಅದರೂ ಮೊಬೈಲ್ ತೆಗೆದು ರಾಮುಗೆ ಕಾಲ್ ಮಾಡಿ ಅಜ್ಜಿ ಹೇಳಿದ್ದನ್ನು ಹೇಳಿದ.
ಐದು ನಿಮಿಷದಲ್ಲಿ ರಾಮು ಸರೋಜಾ ಇಬ್ಬರು ಗಡಬಡಿಸುತ್ತಾ ಬಂದರು .
ಎಂತ ಆಯಿತು ಅಜ್ಜಿಗೆ ವಿನಾಯಕಣ್ಣ?ಎಂದು ಕೇಳುತ್ತಾ ಒಳ ಹೊಕ್ಕವರು ಅಜ್ಜಿ ಆರಾಮಾಗಿ ಕುಳಿತಿದ್ದು ನೋಡಿ ನಿರಾಳವಾದರು.
ನಾನು ಗಟ್ಟಿನೆ ಇದೀನಪ್ಪಾ. ಒಂದು ಮುಖ್ಯವಾದ ವಿಷಯ ಮಾತಾಡ್ಬೇಕು. ಅದಕ್ಕೆ ಕರೆದಿದ್ದು .
ಮೂರು ಜನ ಮುಖ ಮುಖ ನೋಡಿಕೊಂಡರು.
ಪುಸ್ತಕ ಬದಿಗಿಟ್ಟು ಕಾಲು ನೀಡಿಕೊಂಡ ಸೀತಜ್ಜಿ ಶುರು ಮಾಡಿದಳು.
ರಾಮು, ಇವತ್ತು ಮಧ್ಯಾನ ಯಾಕೋ ತಲೇಲಿ ಏನೇನೋ ಯೋಚನೆಗಳು . ನಿದ್ರೆನೂ ಸರಿಯಾಗಿ ಬರ್ಲಿಲ್ಲ . ಆವಾಗಲೇ ನಿಮ್ಮಿಬ್ಬರ ಹತ್ರ ಈ ವಿಷಯನ ಮಾತಾಡ ಬೇಕು ಅಂತ.
ಒಂದು ಕ್ಷಣ ಸುಮ್ಮನಾದ ಅಜ್ಜಿ , “ ನಾ ಸತ್ತ ಮೇಲೆ ಚಿತೆಗೆ ಬೆಂಕಿ ಕೊಡೊ ಕೆಲಸ ನೀ ಮಾಡ್ತೀಯ ರಾಮು ? “ ಬೇಡಿಕೆಯ ದನಿಯಲ್ಲಿ ಕೇಳಿದಳು.
“ಅಜ್ಜೀ , ಇದೇನೇ ಇದ್ದಕ್ಕಿದ್ದ ಹಾಗೆ?” ಸರೋಜಾ ಗಾಬರಿಯಾದಳು.
“ಅಜ್ಜೀ, ನೀನು ನೂರುವರ್ಷ ಮುಗ್ಸಿಯೇ ಹೋಗೋದು. ಯಾಕೆ ಸುಮ್ನೆ ಏನೇನೋ ಮಾತು ? “ ರಾಮು ತಮಾಷೆ ಮಾಡಿದ.
ಹಾಗಲ್ಲ ರಾಮು , ನಾನು ನೂರುವರ್ಷ ಬದುಕಿ ಮಾಡೋಕೆ ಏನಿದೆ ಹೇಳು ? ಈಗಲೇ ಬೇಕಾಗಿದ್ದಕ್ಕಿಂತ ಜಾಸ್ತಿ ವರ್ಷ ಆಯ್ತು ಈ ಭೊಮಿ ಮೇಲೆ ! ಸಾಯೋ ವಯಸ್ಸಂತು ಆಗಿ ಯಾವ್ದೋ ಕಾಲ ಆಗೋಯ್ತು . ನಂಗೆ ನೂರುವರ್ಷ ಬದುಕೋ ಇಚ್ಛೆ ಇಲ್ವೆ ಇಲ್ಲ. ಯಾಕಾಗಿ , ಯಾರಿಗಾಗಿ ಬದುಕಬೇಕು ಹೇಳು ? ಯಾವ್ ಕ್ಷಣ ದೇವ್ರು ಕರೀತಾನೆ ಅಂತ ಕಾದು ಕೂತಿರೋಳು.ಅದಕ್ಕೆ ಹೇಳ್ತಾ ಇದ್ದೀನಿ. ನೋಡು ದಯವಿಟ್ಟು ನನ್ನ ಹೆಣಕ್ಕೆ ಕೊಳ್ಳಿ ಇಡಾ ಕೆಲಸ ನೀನೇ ಮಾಡು. ಬೇರೆ ಏನೂ ವಿಧಿಗಳನ್ನ ಮಾಡೋದು ಅಗತ್ಯ ಇಲ್ಲ. ನಾನೇನೂ ಭೂತ ಆಗಿ ಕಾಟ ಕೊಡೋದಿಲ್ಲ ! ಯೋಚನೆ ಮಾಡಬೇಡ .
"ಅಜ್ಜಿ , ಎಂತ ಮಾರಾಯ್ತಿ ನೀನು ? ಹೀಗೆಲ್ಲ ಕೇಳಿ ಮನಸಿಗೆ ಹಿಂಸೆ ಕೊಡ್ತೀಯಲ್ಲ ?" ರಾಮು ಭಾರವಾದ ದನಿಯಲ್ಲಿ ಹೇಳಿದ .
“ಅಯ್ಯ , ಹಾಗಲ್ಲ ಮಾರಾಯ , ಹಾಗೆ ನೋಡಿದ್ರೆ , ನೀನು ನನಗೆ ದಾಯಾದಿಯೇ . ಆದ್ರೂ ನಾನು ಸತ್ತ ಮೇಲೆ ಮುಂದಿನದೆಲ್ಲ ಯಾರು ಮಾಡೋದು,ಹೇಗೆ, ಏನು ಅನ್ನೋ ಪ್ರಶ್ನೆ ಎಲ್ಲ ಬರಬಾರದು ನೋಡು. ಅದಕ್ಕೆ ಮುಂಚೆನೇ ಕೇಳಿದ್ದು.” ದೊಡ್ಡಕೆ ನಕ್ಕಳು .
ಉಳಿದ ಮೂವರೂ ಏನು ಹೇಳಬೇಕೋ ತಿಳಿಯದೇ ಕುಳಿತಿದ್ದರು .
ಅದೇ ಹೊತ್ತಿಗೆ ಶಿವಪ್ಪ ಗಡಿಬಿಡಿಯಿಂದ ಬಂದ. ಜಗುಲಿಯ ಮೇಲೆ ಕುಳಿತ ಇವರನ್ನೆಲ್ಲ ನೋಡಿದವ ಗಾಬರಿಯಾದ.
ಸೀತಜ್ಜಿ ನಗುತ್ತಾ, “ಎಂತ ಹೆದರ್ಬೇಡವೋ. ನಾ ಒಂದು ಮುಖ್ಯ ನಿರ್ಣಯ ಮಾಡ್ತಾ ಇದ್ದೆ ಅಷ್ಟೇ. ನೀನು ಬಾ ಕೂತ್ಕೋ” ಎಂದು ಕರೆದಳು.
ಸಂಕೋಚದಿಂದ ಜಗುಲಿಯ ತುದಿಯಲ್ಲಿ ಕುಳಿತ ಶಿವಪ್ಪ .
“ವಿನಾಯಕ , ಈಗ ನಿನ್ನ ಯಾಕೆ ಕರಸಿದ್ದು ಅಂದ್ರೆ , ನೋಡು ನಮ್ಮನೆ ಜಮೀನಲ್ಲಿ ಅರ್ಧದಷ್ಟು ಆಗ ನನ್ ಮಗಳು ಯಮುನಾನ ಆಸ್ಪತ್ರೆ ಔಷಧಿ ಗೆ ಅಂತ ಮಾರಿದ್ದಾಯ್ತು. ಆದ್ರೂ ಪ್ರಯೋಜನ ಏನು ಆಗ್ಲಿಲ್ಲ “. ಸೀತಜ್ಜಿಯ ಮುಖದಲ್ಲಿ ವಿಷಾದ ಕಾಣುತ್ತಿತ್ತು .
“ಇಷ್ಟು ವರ್ಷದಿಂದ ತೋಟದ್ದೆಲ್ಲ ಈ ರಾಮು ನೋಡ್ಕೋತಾನೆ. ನನ್ನ ಹೊಟ್ಟೆ ಬಟ್ಟೆ ಔಷಧಿ ಅಗತ್ಯದ ವಸ್ತುಗಳು ಎಲ್ಲಾ ಅವನೇ ತಂದು ಕೊಡ್ತಾನೆ. ಇನ್ನು ಒಂದೆಕರೆ ಗದ್ದೆನ ಈ ಶಿವಪ್ಪನೇ ಮಾಡ್ಸಿ ,ಕರಾರಿನ ಪ್ರಕಾರ ಅವನ ಪಾಲಿನದು ಎಷ್ಟೋ ಅಷ್ಟೇ ಇಟ್ಟುಕೊಂಡು ಉಳಿದಿದ್ದೆಲ್ಲ ಪ್ರಾಮಾಣಿಕವಾಗಿ ಇಲ್ಲಿ ತಂದು ಹಾಕಿ ಹೋಗ್ತಾನೆ . ಇವರಿಬ್ಬರಿಂದಾಗಿ ನಾನು ಇಷ್ಟು ವರ್ಷ ಜಮೀನಿನ ಚಿಂತೆ ಇಲ್ಲದೆ ಆರಾಮಾಗಿದ್ದೀನಿ. ಈಗ ನಾಳೆ ನಾನು ಸತ್ತೊದ್ರೆ , ಇದೆಲ್ಲ ಅವರವರಿಗೆ ಅಂತ ಆಗ್ಬೇಕು . ಹಾಗೆ ಈ ಮನೆನೂ . ಇದು ಅಜ್ಜಿಯ ಉಡುಗೊರೆ ಅಂತ ಶ್ರುತಿಗೆ ಕೊಡೋದು ಅಂತ ಮಾಡಿದ್ದೀನಿ. ಸತ್ತೋದೆ ಅಂತ ಗೊತ್ತಾದ ಮೇಲೆ ನನ್ನನ್ನು ಇಲ್ಲೀ ವರೆಗೆ ಒಂದು ಸಲಾನೂ ನೋಡದೆ ಇರೋ ಯಾರೋ ಒಬ್ರು ಯಾವುದೊ ಸಂಬಂಧದ ಎಳೆ ಹಿಡಕೊಂಡು ಆಸ್ತಿಗಾಗಿ ಬರಬಹುದು , ಆದ್ರೆ ನಾನು ಇಲ್ಲಿ ಒಬ್ಬಳೇ ಇದ್ರೂನು ಒಂಟಿ ಅಲ್ಲ ಅನ್ನೋ ಭಾವನೆ ಇರೋದು ಇವರಿಂದ. ಇವರೇ ನನ್ನ ಕುಟುಂಬ . ಹೀಗಾಗಿ ನನ್ನ ನಂತರ ಇದೆಲ್ಲ ನ್ಯಾಯವಾಗಿ ಇವರಿಗೆ ಸೇರಲಿ ಅಂತ ನನ್ನಾಸೆ. ನೀನು ವಕೀಲ. ಅದಕ್ಕೆ ನಿನ್ನೆದುರಿಗೆ ಹೇಳಿಬಿಟ್ರೆ ಸರಿ ಆಗಬಹುದು ಅಂತ ಅನಿಸ್ತು .. … ಸೀತಜ್ಜಿ ನಿಲ್ಲಿಸಿದಳು .
ರಾಮು ಸರೋಜಾ ಏನು ಹೇಳಲೂ ತೋಚದೆ ಕುಳಿತಿದ್ದರು. ಸರೋಜಾ ಸುರಿಯುವ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುತ್ತಿದ್ದಳು.
ಸ್ವಲ್ಪ ಹೊತ್ತಿಗೆ ಮತ್ತೇನೋ ನೆನಪಾದಂತೆ , ಹಾಂ , ಜಮೀನಿನ ಉತ್ಪನ್ನ ಎಲ್ಲ ಮಾರಿ ಬಂದ ದುಡ್ಡು ಬ್ಯಾಂಕಲ್ಲಿ ರಾಮು ನನ್ನ ಖಾತೆಯಲ್ಲಿ ಹಾಕ್ತಾ ಬಂದಿದ್ದಾನೆ.. ಎಷ್ಟಿದ್ಯೋ ಸರಿಯಾಗಿ ಗೊತ್ತಿಲ್ಲ . ಅದನ್ನ ಊರಿನ ಶಾಲೆಗೇ ದಾನ ಮಾಡ್ತೀನಿ ಎಂದಳು ಸೀತಜ್ಜಿ
ದಂಗಾಗಿ ಕುಳಿತಿದ್ದ ವಿನಾಯಕ ಗಂಟಲು ಸರಿ ಮಾಡಿಕೊಂಡ.
“ಸೀತಜ್ಜಿ , ನಿಜ ಅಂದ್ರೆ ನಂಗೆ ಏನು ಹೇಳೋಕು ತಿಳಿತಾ ಇಲ್ಲ . ನಿನ್ನ ಮನಸ್ಸು ಅರ್ಥ ಆಗತ್ತೆ . ಸಂಕಟ ತಿಳಿಯತ್ತೆ. ಈ ನಿನ್ನ ಇಚ್ಛೆ ತುಂಬಾ ದೊಡ್ಡ ಮನಸ್ಸಿಂದು .ಆದರೆ ನೀನು ಹೇಳ್ತಿರೋದು ಚಿಕ್ಕ ಪುಟ್ಟ ವಿಷಯ ಅಲ್ಲ. ಇದೆಲ್ಲ ನಾವೂ ಬರೀ ಮಾತಲ್ಲಿ ಹೇಳಿದ್ರೆ ಅದರಿಂದ ಏನು ಆಗಲ್ಲ. ನಿಂಗೆ ರಾಮು ನಿನ್ನ ಕುಟುಂಬ ದವನೇ ಅನ್ನೋ ಭಾವನೆ ಇದ್ರೂನು ಕಾನೂನು ಪ್ರಕಾರ ಅವನು ನಿನ್ನ ಉತ್ತರಾಧಿಕಾರಿ ಅಲ್ಲ.
ಹೀಗಾಗಿ , ನಾವೂ ಏನು ಮಾಡಬೇಕು ಅಂದ್ರೆ , ನೀನು ಈಗ ಹೇಳಿದ್ದೆಲ್ಲ ಕಡೆ ಪಕ್ಷ ಒಂದು ಕಾಗದದ ಮೇಲೆ ಬರೆದು ನಿನ್ನ ಸಹಿ ಹಾಕ ಬೇಕು ,ಇಲ್ಲವೇ ಹೆಬ್ಬೆಟ್ಟು ಒತ್ತಬೇಕು . ಅದಕ್ಕೆ ಸಾಕ್ಷಿದಾರರು ಬೇಕು . ಅದನ್ನ ಆಮೇಲೆ ರಿಜಿಸ್ಟರ್ ಮಾಡ್ಬೇಕು . ಆಗ ಮಾತ್ರ ಕಾನೂನು ಪ್ರಕಾರ ಮಾಡೋಕ್ ಬರದು “
ಸೀತಜ್ಜಿ ಒಂದು ಗಳಿಗೆ ಸುಮ್ಮನೆ ಕುಳಿತಳು . ಆಮೇಲೆ “ರಾಮು, ಹೋಗು ಕಾಗದ ಪೆನ್ನು ತಗಂಬಾ . ಹಾಗೆ ಶಾಯಿನೂ ತಗಂಬಾ “ ಎಂದು ಕಳಿಸಿದಳು.
ಅವನು ಬಂದ ಮೇಲೆ ವಿನಾಯಕನಿಗೆ ನೀನೇ ಬರೆ ಎಂದು ಈ ವರೆಗೆ ಹೇಳಿದ್ದನ್ನು ಪುನಃ ಹೇಳಿ ಬರೆಸಿದಳು . ಎಲ್ಲ ಬರೆದಾದ ಮೇಲೆ ವಿನಾಯಕ ಅದನ್ನೊಮ್ಮೆ ಓದಿ ಹೇಳಿದ. ಆ ನಂತರ ಅಜ್ಜಿ ಅದರ ಮೇಲೆ ಹೆಬ್ಬೆಟ್ಟು ಒತ್ತಿದಳು .
“ವಿನಾಯಕ, ನೀನೇ ಸಾಕ್ಷಿದಾರ ಅಂತ ಸಹಿ ಮಾಡಿಬಿಡು . ಸಾಧ್ಯ ಆದ್ರೆ ನಾಳೆನೇ ರಿಜಿಸ್ಟರ್ ಮಾಡ್ಸು .”
“ಆಗ್ಲಿ ಅಜ್ಜಿ . ಆದಷ್ಟು ಬೇಗ ರಿಜಿಸ್ಟರ್ ಮಾಡ್ಸಿ ಕೊಡ್ತೀನಿ . “
“ ವಿನಾಯಕ , ವಕೀಲ್ರೆಲ್ಲ ಜಾಸ್ತಿ ಫೀಸ್ ತಗೋತಾರೆ ಅಂತ ಆಗಿನ್ ಕಾಲದಲ್ಲೇ ನಮ್ಮ ಯಜಮಾನ್ರು ಹೇಳ್ತಾ ಇದ್ರು.ನಿನ್ನ ಫೀಸ್ ಕೊಡೋಕೆ ನನ್ನತ್ರ ಈಗ ದುಡ್ಡಿಲ್ಲ . ಅದನ್ನ ಆ ಬ್ಯಾಂಕಿಂದ ಬರೋ ದುಡ್ಡಲ್ಲಿ ಮುರಕೊಂಡು ಬಿಡು” ಎಂದು ನಕ್ಕಳು
ಅಜ್ಜೀ … ಎಂದ ವಿನಾಯಕನ ದನಿ ಒದ್ದೆ ಆಗಿತ್ತು.
ಸ್ವಲ್ಪ ಹೊತ್ತು ಅಲ್ಲಿ ಮೌನವೇ ಆವರಿಸಿತ್ತು.ಸರೋಜಾಳ ಸಣ್ಣದಾಗಿ ಬಿಕ್ಕುವ ಸದ್ದು ಬಿಟ್ಟರೆ.ರಾಮುವಿಗೆ ಮನಸ್ಸು ಭಾರವಾಗಿದ್ದು ಕೃತಜ್ಞತೆಗೋ, ನೋವಿಗೋ ತಿಳಿಯಲಾರದಂತಾಗಿತ್ತು. ಶಿವಪ್ಪ ಇನ್ನೂ ಸುಧಾರಿಸಿಕೊಳ್ತಾ ಇದ್ದ .
ಹೂಂ, ಸರಿ. ವಿನಾಯಕ ಇದೊಂದು ಕೆಲಸ ಆದಷ್ಟು ಬೇಗ ಮಾಡ್ಕೊಡು.
ರಾಮು ಸರೋಜಾ, ನಡಿರಿ ಮನೆಗೆ. ನಂಗೂ ಹಸಿವಾಗ್ತಿದೆ.ನಾನೂ ಇನ್ನು ಊಟಾ ಮಾಡ್ತೀನಿ. ಎಂದು ಅಜ್ಜಿ ಏಳ ತೊಡಗಿದಳು.
ಅತ್ತ ಕೆಳ ಜಗುಲಿಯ ಮೇಲೆ ಕುಳಿತಿದ್ದ ಶಿವಪ್ಪ ಏನೂ ಹೇಳಲೂ ತಿಳಿಯದೆ ಎದ್ದು ಬಂದು ಸೀತಜ್ಜಿಯ ಕಾಲಿಗೆ ಬಿದ್ದ.
ಅಮ್ಮಾ, ನಾ ಎಂತ ಹೇಳುಕು ಆಗುದಿಲ್ಲ. ನೀವು ದೇವ್ರಂತವ್ರು ಎನ್ನುತ್ತಾ ಕೈಮುಗಿದು ನಿಂತ.
ಜೋರಾಗಿ ನಕ್ಕ ಅಜ್ಜಿ, ಆ ಮಟ್ಟಕ್ಕೆ ಏರಿಸ್ಬೇಡ ಮಾರಾಯ. ಆ ದೇವ್ರಿಗ್ ನನ್ ಮೇಲೆ ಇನ್ನೂ ಸಿಟ್ಟು ಬಂದ್ರೆ ಕಷ್ಟ. ಮನಿಗ್ ಹೋಗು ಇನ್ನು.
ಎನ್ನುತ್ತಾ ಎದ್ದು ದೇವರ ಕೋಣೆಯ ಕಡೆ ನಡೆದ ಸೀತಾಜ್ಜಿಯ ಮನದಲ್ಲಿ ಶಾಂತಿ ನೆಲೆಸಿತ್ತು. ಊಟ ಮುಗಿಸಿ ಮಲಗಿದ ಅಜ್ಜಿಗೆ ಹಾಯಾಗಿ ನಿದ್ರೆ ಆವರಿಸಿತು.
No comments:
Post a Comment