July 10, 2023

ಪಾಶ

 ಓ ಮಂಜಕ್ಕ ಆರಾಮನೆ? 


ಪಾರ್ವತಕ್ಕನ ಮನೆ ಅಡುಗೆ ಮನೆಯಲ್ಲಿ ಸಾರಿನ ಪುಡಿಗೆ ಹುರಿಯುತ್ತಿದ್ದ ಮಂಜಕ್ಕ ದನಿ ಬಂದತ್ತ ನೋಡಿದಳು.


“ಅರೆ , ಶಾಂತಾ! ಆರಾಮಾ? ಈಗ 4 ಗಂಟೆ ಬಸ್ಸಿಗೆ ಬಂದ್ಯಾ? ಒಬ್ಳೇ ಬಂದ್ಯಾ?  ರಾಗಣ್ಣ ನೂ  ಬಂದ್ನಾ? ಕಾಫಿ ಮಾಡ್ಲಾ?”


“ಹ್ಞೂ ,ಇಬ್ರೂ ಬಂದ್ಯ . ಒಂದರ್ಧ ಅರ್ಧ  ಕಪ್ ಕಾಫಿ ಮಾಡು. ಅತ್ತಿಗೆ ಎಲ್ಲಿ ?”

 ಕೈಚೀಲ ಕೆಳಗಿಟ್ಟು ಕಾಲು ತೊಳೆದು ಬಂದು ಕುಳಿತ ಶಾಂತಾ ಗೆ ಕಾಫಿ ಲೋಟ ತಂದು ಕೊಟ್ಟಳು ಮಂಜಕ್ಕ.


ಬಿಸಿ ಕಾಫಿ ಕುಡಿಯುತ್ತಾ, "ಅರ್ಧ ಲೋಟ ಆದರು ಕಾಫಿ ಕುಡಿದೆ ಹೋದ್ರೆ ಒಂಥರಾ ಜಡ್ಡು ನೋಡೇ. ಅಲ್ದೇ, ನೀನು ಮನೆ ಮದ್ವೆ ತಯಾರಿ  ಬಿಟ್ಟು ಇನ್ನು ಈ ಬದಿಗೆ ಇದ್ಯಲೇ ಮಂಜಕ್ಕ ?"


 ಹುರಿಯುತ್ತಿದ್ದ ಮಂಜಕ್ಕ  ತಲೆ ಎತ್ತದೆ ಕೇಳಿದಳು. 

"ಯಾವ ಮದ್ವೇನೆ ಶಾಂತಾ?"


"ಅಯ್ಯೋ, ಎಂತ ಹೀಂಗೆ ಕೇಳ್ತೆ? ಮೊನ್ನೆ ಸಾಗರದಲ್ಲಿ ಸಂತೆ ಪೇಟೆಲಿ ನಿನ್ ತಂಗಿ ಮಾಲತಿ ಗಂಡ ತಿಮ್ಮಪ್ಪಣ್ಣ ಸಿಕ್ಕಿದ್ನಡ ಇವರಿಗೆ.    ಶುಕ್ರವಾರ 12 ನೆ ತಾರೀಖು ಮಗನ ಮದ್ವೆ , ಗೋಪಾಲ ಕೃಷ್ಣ ದೇವಸ್ಥಾನದಲ್ಲಿ.ಅದೇ ತಯಾರಿ  ಗಡಿಬಿಡಿಲಿ ಇದ್ದಿ ಮಾರಾಯ ಅಂತ ಹೇಳಿದ  ಅಂದ್ರು ಇವ್ರು. ನಿಂಗೆ ಕರೆಯ ಬರಲ್ಯಾ? "


ಮಂಜಕ್ಕ ಒಂದು ಕ್ಷಣ ಸ್ಥಬ್ದಳಾದಳು.


ಅಷ್ಟರಲ್ಲಿ ಅಲ್ಲಿಗೆ ಬಂದ ಪಾರ್ವತಕ್ಕ  ಶಾಂತಾಗೆ  ಕಣ್ಣ ಸನ್ನೆಯಲ್ಲೇ ಸುಮ್ಮನಿರುವಂತೆ ಹೇಳುತ್ತಾ

 "ಮಂಜಕ್ಕಾ, ಸಂಬಾರ ಪರಿಮಳ ಬರ್ತಾ ಇದ್ದು. ಕೆಳಗೆ ಇಳಿಸಿ ಬಿಡು. ಹಾಂಗೆ ಹೊರಗೆ ರಾಗಣ್ಣ ಮತ್ತೆ ಹೆಗಡೇರಿಗೆ ಕಾಫಿ ಕೊಟ್ಟಿಕ್ ಬಾ "ಎಂದಳು.


ಅವಳು ಆಚೆ ಹೋಗುತ್ತಲೇ  "ಶಾಂತಾ,  ಹಿಂದೆ ಮುಂದೆ ನೋಡಿ ಮಾತಾಡದು ಯಾವಾಗ್ ಕಲೀತೆ ಮಾರಾಯ್ತಿ? ಅವಳ ವಿಷಯ ಗೊತ್ತಿಲ್ಯ ನಿಂಗೆ? ಸುಮ್ನೆ ಪಾಪ ಬೇಜಾರು ಮಾಡಿಸ್ದೆ ನೋಡು."


" ಅಯ್ಯೋ  ಅತ್ಗೆ, ಕೇಳಿದ್ ಮೇಲೆ ನಂಗೂ ಅನಸ್ತು . ತಪ್ಪಾಗೊತು ಹೇಳಿ. " ಶಾಂತಾ ಅಲವತ್ತುಕೊಂಡಳು .


ಖಾಲಿ ಟ್ರೇ ಹಿಡಿದು ಒಳಗೆ ಬಂದ ಮಂಜಕ್ಕ ಏನೂ ಆಗಿಲ್ಲವೆಂಬಂತೆ  ಮುಂದಿನ ಕೆಲಸಕ್ಕೆ ತೊಡಗಿದಳು. 


ಐದೂವರೆಯ  ಹೊತ್ತಿಗೆ ಸುಮಾರಾಗಿ ಎಲ್ಲ ಕೆಲಸ ಮುಗಿಸಿದ ಮಂಜಕ್ಕ  " ಪಾರ್ವತಕ್ಕಾ, ಇನ್ನೆಂತ ಮಾಡದು ಇದ್ರೆ ಹೇಳು. ಮುಗಸಿಕ್ಕೆ ಮನಿಗೆ ಹೋಗ್ತಿ.  ನಾಳೆ -ನಾಡಿದ್ದು  ಸಾಧ್ಯಾ ಆದ್ರೆ ಬರ್ತಿ. ಇಲ್ದೆ ಇದ್ರೆ ಮದ್ವೆಗೆ ಎರಡು ದಿನ ಇರಕಿದ್ರಿಂದ ಈ ಬದಿಗೆ ಇರ್ತಿ. "  ಎಂದು ತನ್ನ ಚೀಲ ತೆಗೆದುಕೊಂಡು ಹೊರಟಳು. 


" ಮಂಜಕ್ಕಾ, ಸ್ವಲ್ಪ ಹುಳಿ -ಪಲ್ಯ ತಗಂಡು ಹೋಗು . ಸಂಜಿಗೆ ಮತ್ತೆ ಅಡುಗೆ ಎಂತ ಮಾಡ್ಕ್ಯತ್ತೆ  "  ಎಂದು ಕರೆಯುತ್ತಿದ್ದ  ಪಾರ್ವತಕ್ಕನ ದನಿ ಕಿವಿಗೆ ಬೀಳಲಿಲ್ಲವೇನೋ ಎಂಬಂತೆ ಬಿರಬಿರನೆ ಮನೆಯತ್ತ ಹೆಜ್ಜೆ ಹಾಕಿದಳು.


ಮನೆಗೆ ಬಂದು ಕೈಕಾಲು ತೊಳೆದು  ದೇವರಿಗೆ ದೀಪ ಹಚ್ಚಿಟ್ಟು  ಅಲ್ಲೇ ಕುಸಿದು ಕುಳಿತ ಮಂಜಕ್ಕ ಜೋರಾಗಿ ಅಳತೊಡಗಿದಳು . 


“ರಾಘವೇಂದ್ರಾ , ಇದೆಂತ ಶಿಕ್ಷೆ ಕೊಡ್ತೆ ನಂಗೆ?  ಇನ್ನೆಷ್ಟು ಪರೀಕ್ಷೆ ? ನೀನೇ ಗತಿ ಹೇಳಿ ನಂಬಿದ್ರೆ ಇಷ್ಟು ಮೋಸ ಮಾಡ್ತ್ಯ ನೀನು ? ಎಂತಕ್ ಪೂಜೆ ಮಾಡ್ಲಿ ನಿಂದು? ಎಂತಕ್  ಎಲ್ಲ ನಿನ್ ಮುಂದೆ ಹೇಳ್ಕ್ಯಳವು ? ನಿಂಗೆ ಈ ಬಡವೆ ಮೇಲೆ ಸ್ವಲ್ಪ ಆದ್ರೂ ಕರುಣೆ ಇದ್ದಾ?”  ಎಂದು ರಾಘವೇಂದ್ರ ಸ್ವಾಮಿಯ  ಫೋಟೋದೆದುರು   ಬಡಬಡಿಸುತ್ತಾ ಕುಳಿತ ಮಂಜಕ್ಕನ ಕಣ್ಣಿಂದ ನೀರು ಧಾರೆಯಾಗಿ ಹರಿದು ಕೆನ್ನೆ ಕುತ್ತಿಗೆ ತೋಯಿಸುತ್ತಿತ್ತು. 


ಒಂದು ಅಡುಗೆ ಮನೆ ಹಾಗೂ ಒಂದು ಜಗುಲಿಯ ಪುಟ್ಟ ಮನೆ ಮಂಜಕ್ಕನದು. ಹಿಂದೆ ಅಂಟಿಕೊಂಡಿರುವ ಬಚ್ಚಲು,  ಅದಕ್ಕೆ ತಾಗಿ ಒಂದು ಓರಿ . ಸ್ವಲ್ಪ ದೂರದಲ್ಲಿ ಸಂಡಾಸು. 


ಆ ಊರಿಗೆ ಬಂದಾಗಿಂದ ಮಂಜಕ್ಕ ತನ್ನ ಗಂಡನ ಜೊತೆ ಊರ ತುದಿಗಿದ್ದ ಶೇಷಣ್ಣನ ಜಾಗದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಳು. ಗಂಡ ನಾರಾಯಣ ಕಷ್ಟಪಟ್ಟು ದುಡಿಯುವವ. ಯಾವ  ಕೆಲಸಕ್ಕೂ ಸೈ .ಹುಟ್ಟಿದಾಗಿಂದ ಬಡತನ ಬಿಟ್ಟು ಬೇರೆ ಕಾಣದ  ಮಂಜಕ್ಕ ಕೂಡ ಕಮ್ಮಿಯೇನಿಲ್ಲದಂತೆ ಕೇರಿಯ  ಬ್ರಾಹ್ಮಣರ   ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಿಕೊಡುತ್ತಾ, ಹಬ್ಬ ಹುಣ್ಣಿಮೆಗಳಲ್ಲಿ ,  ಚಿಕ್ಕ ಪುಟ್ಟ ಕಾರ್ಯಗಳಲ್ಲಿ   ಅಡುಗೆ ಕೆಲಸ ಅದೂ ಇದೂ ಸಹಾಯ ಎನ್ನುತ್ತಾ  ಬದುಕಿನ ಬಂಡಿ ಎಳೆಯಲು ಕೈಜೋಡಿಸಿದ್ದಳು . ನಾರಾಯಣ  ಹಾವು ಕಚ್ಚಿ  ಸತ್ತಾಗ , ಮತ್ತೆ ಯಾರೂ ಇಲ್ಲದ ಮಂಜಕ್ಕನಿಗೆ , ಶೇಷಣ್ಣ,  ಹೆಂಡತಿ ಪಾರ್ವತಿಯ ಕೋರಿಕೆಯ ಮೇರೆಗೆ  ಮಂಜಕ್ಕನ ಗುಡಿಸಿಲಿದ್ದ ಜಾಗವನ್ನು ಅವಳ ಹೆಸರಿಗೆ ಮಾಡಿಕೊಟ್ಟು ಸರಕಾರಿ  ಮನೆ ಕಟ್ಟಿಸಿ ಕೊಳ್ಳಲು,  ಅಷ್ಟೇ ಅಲ್ಲದೆ  ವಿಧವಾ ವೇತನ  ಕೂಡ  ಬರಲು  ಸಹಾಯ ಮಾಡಿದ್ದರು. ಹೀಗೆ  ಪಾರ್ವತಕ್ಕನ ಮೇಲಿನ  ಮಂಜಕ್ಕನ ಗೌರವ  ಮತ್ತಷ್ಟು ಗಟ್ಟಿಯಾಗಿತ್ತು 


ಗಂಡ ಸತ್ತಾಗ  ಮಂಜಕ್ಕನ ಮಗನಿಗೆ ೫-೬ ವರ್ಷವಷ್ಟೇ.  ಕಣ್ಣ ಮುಂದೆ ಭವಿಷ್ಯ   ಕತ್ತಲಾಗಿ ಬಿಟ್ಟಿತ್ತು .  ತಾನು ಮಾಡುವ ಚಿಕ್ಕ ಪುಟ್ಟ ಕೆಲಸದಿಂದ ಎಷ್ಟು ಸಿಗುತ್ತದೆ?  ಬರುತ್ತಿರುವ ವಿಧವಾ ವೇತನ ಸೇರಿಸಿದರೂ  ಇಬ್ಬರ ಜೀವನ ಸಾಗಬಲ್ಲದೇ  ಎಂಬ ಪ್ರಶ್ನೆ  ಭೂತಾಕಾರವಾಗಿ ನಿಂತಿತ್ತು .  ತಾನೇನೋ  ಅರೆ ಹೊಟ್ಟೆ ಉಂಡೋ ಅದೂ ಇಲ್ಲದಾಗ ಉಪವಾಸವಾದರೂ ಇದ್ದೇನು , ಮಗನ ಗತಿಯೇನು  ಎಂಬ ಯೋಚನೆ  ಹೈರಾಣ ಮಾಡುತಿತ್ತು.  ಬೆಳೆಯುವ ಹುಡುಗನ ಹಸಿವು ಇಂಗಿಸಬಲ್ಲೇನೆ ? ವಿದ್ಯಾಭ್ಯಾಸ, ಬಟ್ಟೆ , ಪುಸ್ತಕ  ಇದಕ್ಕೆಲ್ಲ ಯಾರೆದುರು  ಕೈ ಜೋಡಿಸಲಿ ಎಂದು ಕುಸಿಯುತ್ತಿದ್ದ ಮಂಜಕ್ಕನಿಗೆ ಆಗ ಬೆಳಕಾಗಿ ಬಂದವಳು ಅವಳ ತಂಗಿ ಮಾಲತಿ . 

" ಅಕ್ಕಾ, ನೀ ತಪ್ಪು ತಿಳಿದೇ ಇದ್ರೆ ಒಂದು ಮಾತು.  ಅಪ್ಪಿ ಇನ್ನೂ ಸಣ್ಣ. ಅವನ ವಿದ್ಯಾಭ್ಯಾಸ , ಹೊಟ್ಟೆ- ಬಟ್ಟೆ  ಎಲ್ಲದೂ ನಿನ್ನತ್ರ ಸಾಧ್ಯ ಇಲ್ಲೇ. ನಂಗೆ  ದೇವ್ರು ದೊಡ್ಡ ಮನೆ, ದುಡ್ಡು ಬಂಗಾರ ಎಲ್ಲಾ ಕೊಟ್ಟ. ಆದ್ರೆ ಮಕ್ಕಳನ್ನೊಂದು ಕೊಡಲ್ಲೇ . ಹೀಂಗಾಗಿ  ನಾ ಹೇಳದು ಏನು ಅಂದ್ರೆ , ಅವನ್ನ ನಾ ಕರ್ಕ ಹೋಗ್ತಿ. ಅವನ್ನ ನನ್ನ ಮಗನ ಹಾಂಗೆ ಸಾಕ್ತಿ. ಅವಂಗೆ ಯಾವದೇ ಕಮ್ಮಿ ಇಲ್ದೆ ಹೋದಂಗೆ ಬೆಳಸ್ತಿ . ರಜೆ ಇದ್ದಾಗೆಲ್ಲ ಪ್ರಕಾಶ ಇಲ್ಲಿ ಬಂದು  ಉಳಿಲಿ.  ಏನು ನಿನ್ನ ಅಭಿಪ್ರಾಯ " ಎಂದು ಕೇಳಿದಾಗ ಮಂಜಕ್ಕನಿಗೆ ಏನು ಹೇಳಬೇಕೋ ತಿಳಿಯದ ಪರಿಸ್ಥಿತಿ. 


ಇದ್ದೊಬ್ಬ ಮಗನನ್ನೂ ಕಳಿಸಿದರೆ ತಾನು ಒಬ್ಬಂಟಿಯಾಗಿ ಜೀವನ ಕಳೆಯಬೇಕೆಂಬ  ನೋವು. ತನ್ನ ಜೊತೆ ಇಟ್ಟುಕೊಂಡರೆ ಅವನನ್ನು ಬೆಳೆಸುವುದು ಹೇಗೆಂಬ ಪ್ರಶ್ನೆ . ಅದನ್ನು ಆಕೆ  ಹೇಳಿಯೂ ತೋರಿಸಿದಳು . 

" ಮಾಲತಿ, ನೀ ಹೇಳಿದ್ದು ನಿಜಾನೆ ಆದ್ರೂ ,  ಪ್ರಕಾಶನ್ನೂ ಕಳಿಸಿ ಬಿಟ್ರೆ ನಾನು ಒಬ್ಬಳೇ ಇರದು ಹೆಂಗೆ ? ಅವ ಒಬ್ಬನೇ  ಈಗ ನಂದು ಹೇಳಿ ಇರದು ..  ನಂಗೆ ಏನು ಮಾಡದು ತಿಳಿತಾ ಇಲ್ಲೇ.  " 


ಕೊನೆಗೂ ಮಗನ ಭವಿಷ್ಯದ ಕನಸು ಗೆದ್ದಿತು. ಮಾಲತಿ ಪ್ರಕಾಶನನ್ನು ಕರೆದುಕೊಂಡು ಹೋದಳು . 

ಮೊದ ಮೊದಲು , ಪ್ರತಿ ರಜೆಗೂ ಅಮ್ಮನನ್ನು ನೋಡಲು ಬರುತ್ತಿದ್ದ ಪ್ರಕಾಶ  ದೊಡ್ದಾದಂತೆ ,  ಬರುವುದು ಕಮ್ಮಿ ಆಗತೊಡಗಿತು. ದೊಡ್ಡ ಕ್ಲಾಸು , ಓದುವುದು ಜಾಸ್ತಿ ಇರುತ್ತೆ ಎಂದು ಅಕ್ಕನನ್ನು ನಂಬಿಸಿದ ಮಾಲತಿ , ಚಿಕ್ಕಮ್ಮನ ಮನೆಯಲ್ಲಿ  ರಾಜಕುಮಾರನಂತೆ ಏನೂ  ಕೊರತೆಯಿಲ್ಲದೆ ಮುದ್ದಿನಿಂದ ಬೆಳೆಯುತ್ತಿದ್ದ   ಅವನಿಗೆ, ಅಮ್ಮನ ಚಿಕ್ಕ ಮನೆಯಲ್ಲಿ  ಎದ್ದು ಕಾಣುವ ಬಡತನ ಇಷ್ಟವಾಗುತ್ತಿರಲಿಲ್ಲ , ಅಮ್ಮ ಬೇರೆಯವರ ಮನೆಯಲ್ಲಿ ಕೆಲಸ ಮಾಡುವುದು ಮುಜುಗರ ಎನಿಸುತ್ತಿತ್ತು   ಎನ್ನುವುದನ್ನು ಮರೆ ಮಾಚಿದಳು .

ಕಾಲೇಜು ಸೇರಿದ ಮೇಲಂತೂ ಅವನ ದರ್ಶನ ಅಪರೂಪವೇ ಆಗಿ  ಕೊನೆಗೆ ಕೆಲಸಕ್ಕೆ ಸೇರಿದ್ದು ಕೂಡ ಮಾಲತಿ ಹೇಳಿದ ಮೇಲೆ ಮಂಜಕ್ಕನಿಗೆ ತಿಳಿದಿದ್ದು. 

ಮಗ  ನೌಕರಿ ಶುರು ಮಾಡಿದ ಮೇಲೆ ತನ್ನನ್ನು ಕರೆದೊಯ್ಯುತ್ತಾನೆ , ಅಥವಾ ತನಗೆ ಸ್ವಲ್ಪವಾದರೂ ಸಹಾಯ ಮಾಡುತ್ತಾನೆ ಎಂದು ಕನಸು ಕಾಣುತ್ತಿದ್ದ ಮಂಜಕ್ಕ  ಸಂಪೂರ್ಣವಾಗಿ ನಿರಾಶಳಾದಳು . ಒಮ್ಮೆ ಮಾಲತಿಯ ಜೊತೆ ಬಂದ ಮಗ  ಕಾಟಾಚಾರಕ್ಕೆ ಎಂಬಂತೆ  ಎರಡು ಮಾತನಾಡಿ ಜಗುಲಿಯಲ್ಲಿ ಇದ್ದ ಒಂದೇ ಒಂದು ಖುರ್ಚಿಯ ಮೇಲೆ ಚಡಪಡಿಸುತ್ತಾ ಕುಳಿತಿದ್ದು ಅವಳ ಗಮನಕ್ಕೆ ಬಾರದಿರಲಿಲ್ಲ.  ಉಳಿಯಲು ಸುತಾರಾಂ ಒಪ್ಪದೇ ಅಂದೆ ಮರಳಿ ಹೋದವನು ಮತ್ತೆ ಬಂದಿರಲಿಲ್ಲ. ಹೋಗುವ ಮೊದಲು ಬೇಡವೆಂದರೂ ತನ್ನ  ಕೈಲಿ 500 ರುಪಾಯಿ ಇಟ್ಟಿದ್ದು ಕೂಡ ಮಾಲತಿಯ ಸನ್ನೆಯ ಮೇರೆಗೆ ಎನ್ನುವುದನ್ನೂ ಮಂಜಕ್ಕ ಗಮನಿಸಿದ್ದಳು .


ಇದೀಗ ಅವನ ಮದುವೆ ಎಂಬ ಸುದ್ದಿ ಕೇಳಿ ಮಂಜಕ್ಕ ನಿಗೆ ಇಷ್ಟು ವರ್ಷ ಎದೆಯಲ್ಲೇ ಬಚ್ಚಿಟ್ಟ ನೋವೆಲ್ಲ  ಒಮ್ಮೆಲೇ ಉಕ್ಕಿ ಹರಿಯತೊಡಗಿತು . ಅಲ್ಲಾ , ಅವನಂತೂ ತಾನು ಅವನ ಸ್ವಂತ ಅಮ್ಮ ಎನ್ನುವುದನ್ನು ಮರೆತೇ ಬಿಟ್ಟಿದ್ದಾನೆ . ಮಾಲತಿಯಾದರೂ  ಒಂದು ಮಾತು ತಿಳಿಸ ಬಹುದಿತ್ತಲ್ಲ ? ಎಷ್ಟಾದರೂ ತಾನು  ಅವನನ್ನು ಹೆತ್ತಿಲ್ಲವೇ? ಮಂಜಕ್ಕನಿಗೆ   ತನ್ನ ಬಡತನದ ಬಗ್ಗೆ, ಅಸಹಾಯಕತೆಯ ಬಗ್ಗೆ  ಅತೀವ ದುಃಖವಾಯಿತು. 

ರಾತ್ರಿ ಊಟ ಸೇರದೆ ಹಾಗೆ ಮಲಗಿದವಳಿಗೆ ನಿದ್ರೆಯೂ ಹತ್ತದೆ ಒದ್ದಾಡಿದಳು.  ಮರುದಿನ ಕೂಡ ಕಣ್ಣೀರು ಹರಿಸುತ್ತ, ರಾಘವೇಂದ್ರ ಸ್ವಾಮಿಗಳ ಫೋಟೋ ಜೊತೆ ಜಗಳ ಮಾಡುತ್ತಾ , ದಿನ ಕಳೆದಳು. 

ಗುರುವಾರ ಸಂಜೆ , ಏನೋ ನಿರ್ಧಾರ ಮಾಡಿ ಅಡುಗೆ ಮನೆಯ ಮೂಲೆಯಲ್ಲಿ ತನ್ನ ಇದ್ದೆರಡು  ಹೊಸಾ ಸೀರೆ , ಪರ್ಸ್ ಇತ್ಯಾದಿಗಳನ್ನಿಟ್ಟಿದ್ದ ಪುಟ್ಟ ಹಳೆಯ ಕಪಾಟಿನಿಂದ  ಹಳೆಯ ಗಂಟನ್ನು ತೆಗೆದಳು . ಹಾಗೆಯೇ, ಕಪಾಟಿನಲ್ಲಿ  ಇದ್ದ ಒಟ್ಟು ದುಡ್ಡನ್ನು  ಎಣಿಸಿ ಪರ್ಸಿಗೆ  ಹಾಕಿಕೊಂಡಳು . 

ಬೆಳಿಗ್ಗೆ , ಇದ್ದುದರಲ್ಲೇ ಹೊಸತಾದ ಸೀರೆಯುಟ್ಟು ಬ್ಯಾಗನ್ನು  ಹೆಗಲಿಗೇರಿಸಿ  ಎಂಟು ಗಂಟೆಯ  ಬಸ್ ಹತ್ತಿದಳು . 


ಸಾಗರದಲ್ಲಿ ಇಳಿದು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ಬಂದಾಗ ಮದುವೆ ಮನೆಯ ಸಡಗರ ಕಾಣುತ್ತಿತ್ತು. ಪರಿಚಯದ ಕೆಲವರು ಮಾತನಾಡಿಸಿದರು.  ಒಳಗೆ ಬಂದ ಮಂಜಕ್ಕನನ್ನು ನೋಡಿ ಮಾಲತಿಯ ಮುಖ ಬಿಳುಚಿತು . ವರಪೂಜೆಗೆ ತಯಾರಾಗಿ ಕುಳಿತಿದ್ದ ಪ್ರಕಾಶ ಕಂಡೂ ಕಾಣದಂತೆ ಗೆಳೆಯರೊಡನೆ ಮಾತನಾಡುತ್ತ ಕುಳಿತಿದ್ದ. . 


“ಅಕ್ಕ,  ಬಾ, 8  ಗಂಟೆ ಬಸ್ಸಿಗೆ ಬಂದ್ಯಾ ?..” 


" ಹ್ಞೂ .  ಅಲ್ದೇ  ಮಾಲತಿ, ಒಂದು ಮಾತೂ ಹೇಳಲೆ ಕಷ್ಟ ಆತ  ನಿಂಗೆ? ನೀನೇ ಬೆಳೆಸಿ ದೊಡ್ಡ ಮಾಡಿದ್ದು ನಿಜ. ಸ್ವಂತ ಮಗನಂಗೆ ಸಾಕಿದ್ದೂ ಹೌದು . ಅದ್ರ ಬಗ್ಗೆ ಮಾತಿಲ್ಲೇ ನಂದು . ಆದ್ರೆ  ಹಡೆದವಳು ನಾನೇ ಅಲ್ದಾ? ನನ್ನ ಪರಿಸ್ಥಿತಿ ಹಾಂಗಿತ್ತು. ಪ್ರಕಾಶ ನಿನ್ನ ಮಗ ಆಗಿ ಬೆಳೆದ. ಬೆಳಿತಾ ಬೆಳಿತಾ ಸ್ವಂತ ಅಮ್ಮ ಅಂದ್ರೆ ಬೇಡ ಆತು ಅವಂಗೆ.  ನೀನು ತಿದ್ದಲಾಗಿತ್ತು ಆದರೆ  ತಿದ್ದಲ್ಲೇ .  ಇರಲಿ . ಈಗಲಾದ್ರೂ ನ್ಯಾಯವಾಗಿ ನೀನು ನಂಗೆ ಒಂದು ಮಾತು ಹೇಳಕಾಗಿತ್ತು. ಅಲ್ದಾ?  ಹೋಗ್ಲಿ ,ಮದ್ವೆಗೆ ಬಾ ಅಕ್ಕ  ಹೇಳೂ ಕರಿಯಲ್ಲೇ. ಇದು ಸರಿನಾ?  ನಾನು ಎಷ್ಟೇ ತಡಕತ್ತಿ ಅಂದ್ರೂ ಹೊಟ್ಟೆಲಿ ಹುಟ್ಟಿದ ಮಗ ಹೇಳ ಪಾಶ ಬಿಡಲ್ಲೆ. ಅದಕ್ಕೆ ಕರಿದೆ ಇದ್ರೂ ಬಂದಿ.  ಮಗನ ಮದ್ವೆ ನೋಡಕ್ಕೂ ಹೇಳ ಆಸೆ ನೋಡು ... " ಮಂಜಕ್ಕನ ಗಂಟಲುಬ್ಬಿ ಬಂತು. 


ಮಾಲತಿ ಏನೂ ಹೇಳಲೂ ತೋಚದೆ " ಅಕ್ಕಾ , ಅದೂ  ಹಾಂಗಲ್ಲ. ಇವರತ್ರೆ ಹೇಳಿದ್ದಿ . ನಿಂಗೆ ಕರೆಯಲೇ.  ಗಡಿಬಿಡಿಲಿ ಮರೆತು ಹೋದರು ಕಾಣ್ತು. “ ತಡವರಿಸುತ್ತಿದ್ದಳು . ಅಷ್ಟರಲ್ಲಿ ಅವಳನ್ನು ಹುಡುಕಿಕೊಂಡು ಯಾರೋ ಬಂದಿದ್ದರಿಂದ ಪಾರಾದೆ ಎಂದು ಉಸಿರು ಬಿಡುತ್ತ ,  

“ಅಕ್ಕಾ ಯಾರೋ ಕರಿತಾ ಇದ್ದ ನನ್ನ, ನೀನು ತಿಂಡಿ ತಿಂದಕ ಬಾ ಮಾತಾಡನ. ಸುಜಾತಾ , ಅಕ್ಕನ್ನ ತಿಂಡಿಗೆ ಕರ್ಕ ಹೋಗು “

ಎನ್ನುತ್ತಾ  ಮಾಲತಿ ನಡೆದಳು .


ಊಟದ ಹಾಲ್ ಗೆ ಹೋಗಿ  ತಿಂಡಿಯ ಪ್ಲೇಟ್ ಎದುರು ಕೂತರೂ  ಹೊಟ್ಟೆಯ ಸಂಕಟಕ್ಕೆ ಏನೂ ಸೇರದಂತಾಗಿ ಕಷ್ಟದಿಂದ ಒಂದು ಇಡ್ಲಿ ತಿಂದು, ಅರ್ಧ ಕಪ್ ಕಾಫಿ ಕುಡಿದು ಎದ್ದು ಬಿಟ್ಟಳು .


ಮತ್ತೆ ಒಳಗೆ ಬಂದಾಗ  ಮದುವೆಯ ವಿಧಿಗಳು ಶುರುವಾಗಿದ್ದವು. ಮುಂದಿನ ಸಾಲುಗಳೆಲ್ಲ ಆಗಲೇ ತುಂಬಿದ್ದರಿಂದ ಮೂರನೇ ಸಾಲಿನಲ್ಲಿ  ಒಂದು ಕಡೆ ಕೂತಳು ಮಂಜಕ್ಕ . 

ಮಾಲತಿ ಪ್ರಕಾಶ ನನ್ನು ಕರೆದುಕೊಂಡು ಎಲ್ಲ ಹಿರಿಯರಿಗೂ ನಮಸ್ಕಾರ ಮಾಡಿಸುತ್ತಿದ್ದಳು. ಹಾಗೆ ಮಂಜಕ್ಕನ ಸಾಲಿಗೂ ಬಂದ ಪ್ರಕಾಶ ನಮಸ್ಕಾರ ಮಾಡಿದ ಶಾಸ್ತ್ರ ಮಾಡಿ  ಯಾಂತ್ರಿಕವಾಗಿ ,"ಆರಾಮಿದ್ಯ"  ಎಂದು ಕೇಳಿ ಅವಳು ಉತ್ತರಿಸುವ ಮೊದಲೇ ಮುಂದೆ ಹೋಗಿಬಿಟ್ಟ. ಅವಮಾನದಿಂದ ಕರುಳಿಗೆ ಬೆಂಕಿಯಿಟ್ಟಂತೆ ಆದರೂ  ಉಕ್ಕಿಬರುತ್ತಿದ್ದ ಕಣ್ಣೀರನ್ನು ಕಷ್ಟದಿಂದ ನಿಯಂತ್ರಿಸಿಕೊಂಡು  ಕಲ್ಲಾಗಿ ಕುಳಿತುಬಿಟ್ಟಳು . ಬಂದವರಲ್ಲಿ ಹೆಚ್ಚಿನವರು ಮಾಲತಿಯ ಗಂಡನ ಮನೆ ಕಡೆಯ ಸಂಬಂಧಿಕರೆ ಆಗಿದ್ದರಿಂದ ಮಂಜಕ್ಕನನ್ನು ಚೆನ್ನಾಗಿ ಪರಿಚಯವಿರುವವರು  ಬಹಳ ಕಮ್ಮಿ ಜನರಿದ್ದರು .


ಕಣ್ಣ ಮುಂದೆಯೇ  ಮಗನ ಮದುವೆ  ವೈಭವದಿಂದ ಸಾಗುತ್ತಿದ್ದುದನ್ನು  ಕಣ್ಣು ತುಂಬಿಸಿಕೊಳ್ಳುತ್ತಿದ್ದರೂ  ಮಂಜಕ್ಕನ ಮನಸ್ಸು ಅಲ್ಲಿರಲಿಲ್ಲ.  ತಾನು ಬಂದು ತಪ್ಪು ಮಾಡಿಬಿಟ್ಟೆನೆ  ಎಂದು ಒಮ್ಮೆ ಅನಿಸಿದರೂ , ಇದು ತನ್ನ ಕರ್ತವ್ಯವಲ್ಲವೇ? ಅದನ್ನು ಹೇಗೆ ಬಿಡಬಲ್ಲೆ ಎಂದೂ ಒಮ್ಮೆ ಅನಿಸುತ್ತಿತ್ತು .


ಅಂತೂ , ಶಾಸ್ತ್ರಗಳು ಮುಗಿದು ಮದುಮಕ್ಕಳು ಮಂಟಪದಲ್ಲಿಯೇ ಕೂತಿರುವಾಗ ಕೆಲವರು ಉಡುಗೊರೆ ಕೊಡುತ್ತಿರುವುದನ್ನು ಕಂಡ ಮಂಜಕ್ಕ ತಾನೂ ಎದ್ದಳು . 

 ಉಡುಗೊರೆ ಕೊಡುವವರ ಸಾಲಿನಲ್ಲಿ ನಿಂತ  ತನ್ನನ್ನು  ನೋಡಿ ಪ್ರಕಾಶನ ಮುಖ  ಇಳಿದಿದ್ದೂ, ಅವನ ಕಣ್ಣು ಮಾಲತಿಯನ್ನು ಅರಸಿದ್ದೂ  ಮಂಜಕ್ಕನಿಗೆ ಕಂಡಿತು .  ಅಂತೂ ಮದುಮಕ್ಕಳ ಎದುರು  ಹೋಗಿ ನಿಂತ ಮಂಜಕ್ಕ ,  ಪ್ರಕಾಶ  ಬಾಯಿ ತೆರೆಯುವ ಮುನ್ನ ಅವನ ಹೆಂಡತಿಗೆ ತನ್ನ ಪರಿಚಯ ಮಾಡಿಕೊಂಡಳು. 

“ ನಾನು ಪ್ರಕಾಶಂಗೆ ಒಂದು ರೀತಿಯಿಂದ ದೊಡ್ದಮ್ಮನೆ  ಆಗವು .  ಇಬ್ರೂ ನೂರು ವರ್ಷ ಸುಖವಾಗಿರಿ “ ಎಂದು ಆಶೀರ್ವಾದ ಮಾಡಿದಳು . ಆಮೇಲೆ ತನ್ನ ಬ್ಯಾಗಿನಿಂದ  ಒಂದು ಚಿಕ್ಕ ಪರ್ಸ್ ತೆಗೆದು ಅದರಲ್ಲಿದ್ದ  ಉಂಗುರವನ್ನು ಅವನ ಬೆರಳಿಗೆ ತೊಡಿಸಿದಳು. ಅದೇ ಪರ್ಸ್ ನಿಂದ ಕೆಂಪು ಬಣ್ಣದ ಪೇಪರ್ ನ ಮಡಿಕೆಯೋಳಗಿಂದ ಒಂದು ಜೊತೆ ಪುಟ್ಟ  ಕಿವಿಯೋಲೆ ತೆಗೆದು ಅವನ ಹೆಂಡತಿಯ ಕೈಲಿಟ್ಟಳು.

ಮುಜುಗರದಿಂದ ಪ್ರಕಾಶ “ ಇದೆಲ್ಲ ಎಂತಕೆ …. “  ಎನ್ನುವಷ್ಟರಲ್ಲಿ ,  

" ಇದು ನ್ಯಾಯವಾಗಿ ನಿಂಗೆ ಸೇರಕಾಗಿದ್ದು.  ನಂಗಾದ್ರೂ ಬೇರೆ ಯಾರಿದ್ದ ಇದನ್ನ ಕೊಡಲೆ ?   "  ಎಂದವಳೇ ಅಲ್ಲಿಂದ  ಹೊರಟಳು . 

ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದ ಮಾಲತಿ “ ಅಕ್ಕಾ ಊಟಕ್ಕೆ ತಯಾರಿದ್ದು  “  ಎಂದಿದ್ದು ಕೇಳಿಸಲೇ ಇಲ್ಲ ಎಂಬಂತೆ ಮಾಲತಿ ನೋಡುತ್ತಾ ಇರುವಂತೆ   ಬಿರ ಬಿರನೆ ಅಲ್ಲಿಂದ ಬಾಗಿಲ ಕಡೆ ನಡೆದಳು.


ಮೂರುಗಂಟೆ ಬಸ್ ಹಿಡಿದು ಮನೆ ತಲುಪಿದವಳಿಗೆ ಬಾಗಿಲು ತೆರೆಯುತ್ತಿದ್ದಂತೆ ಅಷ್ಟು ಹೊತ್ತಿಂದ ತಡೆ ಹಿಡಿದ ದುಃಖದ ಕಟ್ಟೆ ಒಡೆದಂತೆ  ಬಿಕ್ಕಿ ಬಿಕ್ಕಿ ಅಳ ತೊಡಗಿದಳು . ಅಂದಿಡೀ  ಊಟ ಮಾಡದೇ  ಉಪವಾಸವೇ ಮಲಗಿದ ಮಂಜಕ್ಕನಿಗೆ  ರಾತ್ರಿಯಿಡೀ  ನಿದ್ದೆಯಿಲ್ಲದೆ ಹೊರಳಾಡಿ  ಬೆಳಗಿನ ಜಾವದಲ್ಲಿ ಸ್ವಲ್ಪ ನಿದ್ರೆ ಹತ್ತಿತು  . ಎಚ್ಚರವಾದಾಗ  ಮಧ್ಯಾನ್ಹವಾಗಿತ್ತು . ಮನೆ ಕೆಲಸ ಮುಗಿಸಿ ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಅನ್ನ ಮಾಡಿಕೊಂಡು ಮಜ್ಜಿಗೆ ಕಲಸಿ ಉಂಡಳು.   ನಾಲ್ಕು ಗಂಟೆಯ ಹೊತ್ತಿಗೆ  ಶೇಷಣ್ಣನ ಮನೆಯತ್ತ ನಡೆದಳು. 

 

ಮನೆಯವರಿಗೆ , ನೆಂಟರಿಗೆ ಕಾಫಿ  ಕೊಟ್ಟು  ಅದೇ ತಾನೇ  ಶಾಂತಾ ಮತ್ತು ಕೆಲವು ಹೆಂಗಸರೊಂದಿಗೆ  ಕಾಫಿ ಲೋಟ ಹಿಡಿದು  ಕುಳಿತಿದ್ದ  ಪಾರ್ವತಕ್ಕನಿಗೆ ಮಂಜಕ್ಕನನ್ನು ನೋಡಿ ಆಶ್ಚರ್ಯವಾಯಿತು .ಅವಳ ಮುಖ ನೋಡಿ  ಯಾಕೋ ಎಲ್ಲವೂ ಸರಿ ಇಲ್ಲ ಎಂದೆನಿಸಿದರೂ ತೋರಿಸಿ ಕೊಳ್ಳದೇ 

“ ಮಂಜಕ್ಕ,   ಬಂದ್ಯ ? ಬಾ,  ಕೂತ್ಗ .   ಕಾಫಿ ಕುಡಿಲಕ್ಕಡ “  ಎಂದು ಕಾಫಿ ಲೋಟ ಮುಂದಿತ್ತಳು .

ಮಾತನಾಡದೆ ಮಂಜಕ್ಕ ಅವರ ಜೊತೆಗೆ ಕಾಫಿ ಕುಡಿದಳು  .ಕಾಫಿ ಕುಡಿದು ಆದ ಮೇಲೆ  ನೆಂಟರಿಗೆ ಹಂಚುವ ಸೀರೆಗಳನ್ನು  ತೋರಿಸುತ್ತಿದ್ದ ಪಾರ್ವತಕ್ಕ ಕೊನೆಯಲ್ಲಿ ಒಂದು ಕಡ್ಡಿಯಂಚಿನ ಕಡುನೀಲಿ  ರೇಶಿಮೆ ಸೀರೆಯನ್ನು  ಮಂಜಕ್ಕನ ಕೈಲಿಟ್ಟಳು . 

“ಮಂಜಕ್ಕ , ಇದು ನಿಂಗೆ ಹೇಳಿ ಆರ್ಸಿದ್ದಿ. ಇಷ್ಟ ಆತಾ?”


ಥಟ್ಟನೆ  ಪಾರ್ವತಕ್ಕನ ಮುಖ ನೋಡಿದ  ಮಂಜಕ್ಕ

 “ ನಂಗೆಂತಕೆ  ಸೀರೆ ಪಾರ್ವತಕ್ಕಾ ? ಅದೂ  ದುಬಾರಿ ಸೀರೆ ! ನಾ ಎಲ್ಲಿಗ ಹೋಗ್ತಿ  ರೇಷ್ಮೆ ಸೀರೆ ಎಲ್ಲ ಉಟಗಂಡು ? " 


" ಮಂಜಕ್ಕಾ, ನೀನು ಮನೆ ಜನವೇಯ ನಂಗಕ್ಕೆ. ಮನೆ ಮದ್ವೇಲಿ  ರೇಷ್ಮೆ ಸೀರೆ ಉಡದೇ  ಇದ್ರೆ ಹೆಂಗೆ ಮಾರಾಯ್ತಿ ? " ಪಾರ್ವತಕ್ಕ  ನಕ್ಕಳು . 

ಮತ್ತೊಮ್ಮೆ ಅವಳ ಮುಖ ನೋಡಿ ಸೀರೆಯನ್ನು ಒಮ್ಮೆ ನೇವರಿಸಿದ  ಮಂಜಕ್ಕ  , " ಹೋಪಕಿದ್ರೆ ತಗ ಹೋಗ್ತಿ "  ಎಂದು ಅಡುಗೆಮನೆಯತ್ತ ನಡೆದವಳ ಮುಖದಲ್ಲಿ ಮೂಡಿದ್ದು ಸಂತಸವಾ , ವಿಷಾದವಾ ಎಂದು ಗೊತ್ತಾಗಲಿಲ್ಲ ಪಾರ್ವತಕ್ಕಂಗೆ .


 ಸಂಜೆ ಕೆಲಸಗಳೆಲ್ಲ  ಮುಗಿದು  ಹೊರಡುವ ಮುನ್ನ ಮಂಜಕ್ಕ ಪಾರ್ವತಕ್ಕನನ್ನು ಕರೆದಳು . 

“ ಪಾರ್ವತಕ್ಕ, ಒಂದ್ಸಲ  ಅಪ್ಪಿ ಕರಿತ್ಯಾ ? “ 


ಯಾಕೆಂದು ಕೇಳದೇ  ಪಾರ್ವತಕ್ಕ  ಮಗನನ್ನು ಕರೆದಳು . 

ಅವನು ಬಂದಾಗ ಮಂಜಕ್ಕ ತನ್ನ  ಕೈಚೀಲದಿಂದ  ಪೊಟ್ಟಣವೊಂದನ್ನು ತೆಗೆದು  ಅದರಲ್ಲಿದ್ದ ಪುಟ್ಟ ಚಿನ್ನದ ಚೈನ್ ಅನ್ನು ಅವನ ಕೈಗಿಟ್ಟಳು . ಅವನು ಏನೂ ಅರ್ಥವಾಗದೆ ಅಮ್ಮನತ್ತ ನೋಡಿದ.

ಅವಕ್ಕಾದ ಪಾರ್ವತಕ್ಕ “ ಮಂಜಕ್ಕ , ಇದೆಂತದೆ … ? “ 


“ ಪಾರ್ವತಕ್ಕ, ಮದುವೆ ಆಗಿ ಬಂದಾಗಿಂದ ನಿಮ್ಮಲ್ಲಿ ಕೆಲಸ ಮಾಡಿದ್ದಿ.  ನಿಂಗನೂ ಯಾವತ್ತೂ ನನ್ನ  ಹೊರಗಿನವಳ ತರ ನೋಡಲ್ಲೇ . ಸಂದೀಪನೂ ನನ್ನ ಕಣ್ಣೆದುರೇ ಹುಟ್ಟಿ ಬೆಳೆದವ. ನಂಗೆ ಅವ  ಮಗನಾಂಗೆಯಾ . ಅದಕ್ಕೆ ಅವನ ಮದ್ವೆಗೆ ನಂದು ಸಣ್ಣ ಉಡುಗೊರೆ . ಮದ್ವೆ ದಿನ ಎಲ್ಲ ಕೊಡಲೇ ನಾಚ್ಕೆ ನಂಗೆ. ಹಾಂಗಾಗಿ ಈಗಲೇ ಕೊಟ್ ಬಿಡ್ತಿ “ 


“ಆದ್ರೂ ಮಂಜಕ್ಕಾ , ಇದೆಲ್ಲ  ಕೊಡವು ಹೇಳಿಲ್ಲೆ. ನೀನು ಆಶೀರ್ವಾದ ಮಾಡು ಸಾಕು. ಅದೇ ದೊಡ್ಡ ಉಡುಗೊರೆ . ಇದೆಲ್ಲ ನಿನ್ ಮಗಂಗೆ ಸೇರಕಾಗಿದ್ದು .  “


“ ಪಾರ್ವತಕ್ಕಾ, ನನ್ ಮಗಂಗೆ ಸೇರಕಾಗಿದ್ದಿದ್ದು ನಿನ್ನೆ ಅವಂಗೆ ಕೊಟ್ಟಿಕ್ ಬಂದಿ . ಅವನ ಅಪ್ಪನ ಉಂಗುರ , ನಂಗೆ ಮದ್ವೇಲಿ ಹಾಕಿದ್ದ ಒಂದು ಜೊತೆ ಕಿವಿ ಓಲೆನ ಪ್ರಕಾಶಂಗೆ, ಅವನ ಹೆಂಡತಿಗೆ  ಕೊಟ್ಟಿದ್ದಿ.  ಇದು ನಾನು ನನ್ನ ಇಷ್ಟು ವರ್ಷದ ದುಡಿಮೆಲಿ ಮಾಡ್ಸಿದ್ದು.  ಮಗನ ಮದುವೆ ಆದಾಗ  ಕೊಡಲಾತು ಹೇಳಿ. ಆದ್ರೆ ಅಮ್ಮ -ಮಗ  ಹೇಳ ಪಾಶ ನನಗೊಬ್ಬಳಿಗೆ ಇದ್ದಿದ್ದು ಹೇಳಿ ಅರ್ಥಾ ಅದಮೇಲೆ ಅವಂಗೆ ಕೊಡ ಅಗತ್ಯ ಕಂಡಿದ್ದಿಲ್ಲೇ. ಆಗ್ಲೇ ಹೇಳಿದ್ನಲೇ ? ಸಂದೀಪನೂ ನಂಗೆ  ಮಗನಾಂಗೆಯಾ ಹೇಳಿ ?  ಅದಕ್ಕೆ  ಈ ಮಗನ ಮದುವೆಗೆ ಇದು ನನ್ನ  ಉಡುಗೊರೆ. ಜಾಸ್ತಿ ದಪ್ಪ ಚೈನ್ ಅಲ್ಲ .ಆದರೂ ನನ್ ಕೈಲಿ ಆಗಿದ್ದು  ಇಷ್ಟು . “ 


ಕಣ್ಣೀರು ತುಂಬಿಕೊಂಡ ಪಾರ್ವತಕ್ಕ ಮಂಜಕ್ಕನನ್ನು ಅಪ್ಪಿಕೊಂಡಳು . ಬಗ್ಗಿ ನಮಸ್ಕಾರ ಮಾಡಿದ ಸಂದೀಪನ ಕಣ್ಣಲ್ಲಿ ನೀರಿತ್ತು .  

 ,


No comments: