ನನ್ನ ಹೆಂಡತಿ ಹಬ್ಬ-ಹುಣ್ಣಿಮೆ ಫಂಕ್ಷನ್ನು ಅಂತ ರೆಡಿಯಾಗತಾ ಇದ್ರೆ ನಂಗೆ ಫುಲ್ ಟೆನ್ಶನ್.
ನಿಜಕ್ಕೂ ಹೌದು ಸ್ವಾಮೀ !
ಹೊಸ ಬಟ್ಟೆ , ಆಭರಣ ತಗೊಂಡ್ರೆ ಏನು ತೊಂದರೆ ಇಲ್ಲ. ಆದರೆ ಅದೆಲ್ಲ ಹಾಕಿ ಮೇಕಪ್ ಗೀಕಪ್ ಮಾಡಿ ರೆಡಿ ಆಗ್ತಾಳಲ್ಲ ಅದೇ ಕಷ್ಟ ! ಅವಳು ರೆಡಿಯಾದ್ರೆ ನಿಂಗೇನು ಕಷ್ಟ ಅಂತ ಮೂಗು ಎಳಿಬೇಡಿ. ಹೇಳ್ತೀನಿ ಇರಿ.
ಹೊಸಾ ಬಟ್ಟೆ / ಸೀರೆ ತೊಟ್ಟು , ಚೆನ್ನಾಗಿ ಅಲಂಕಾರ ಮಾಡ್ಕೊಂಡು ರೆಡಿ ಆಗ್ತಾಳ ? (ಸುಂದರವಾಗೇ ಕಾಣ್ತಾಳೆ ಅಂತ ನಾನು ಹೇಳಿ ಬಿಡ್ತೀನಿ ) . ಏನಾದ್ರೂ ಫಂಕ್ಷನ್ ಗೆ ಹೋಗೋ ಪ್ಲಾನ್ ಇದ್ರೆ ಹೊರಡಬೇಕಾಗಿರೋ ಟೈಮ್ ಮುಗದು ಒಂದರ್ಧ ಗಂಟೆ ಆಗಿರತ್ತೆ ಆಗಲೇ . "ಆಯ್ತಾ ? ಇನ್ನೂ ಎಷ್ಟು ಹೊತ್ತು" ಅಂತ ಕೇಳೋ ಅಭ್ಯಾಸ ನಂಗಿಲ್ಲ !( ಅದೆಲ್ಲ ಬಿಟ್ಟು ಬಹಳ ಸಮಯ ಆಯ್ತು. ಅದು ಬೇರೆ ವಿಷ್ಯ ) . ನನ್ನ ಕರದ್ಲು ಅಂದ್ರೆ ರೆಡಿ ಆದರು ಅಮ್ಮಾವ್ರು, ಇನ್ನು ನಾನು ಖುರ್ಚಿಯಿಂದ ಏಳಬೇಕು ಅಂತ ಅರ್ಥ .
ಆಯ್ತಾ ?ಅಂತೂ ಹೊರಟ್ರಾ ? ಅಂತ ಕೇಳಬೇಡಿ . ಇರಿ ಇರಿ ..
ಅವಳು ಕರೆದಳು ಅಂದ್ರೆ , ಈಗ ನಾನು ಮೊಬೈಲ್ ರೆಡಿಮಾಡಿಕೊಂಡು ಹೋಗಬೇಕು ಅಂತ ಅರ್ಥ.
ಇಷ್ಟೊತ್ತಿಂದ ರೆಡಿಯಾಗಿದಾಳಲ್ಲ ಅವಳ ಫೋಟೋ ತೆಗೀಬೇಕು. ಮೇಕಪ್, ಡ್ರೆಸ್ ಎಲ್ಲ ಫ್ರೆಶ್ ಇರತ್ತೆ ನೋಡಿ ಅದಕ್ಕೇ.
ಅಲ್ಲ,ಫೋಟೋ ತೆಗೆಯೋಕೆ ನಂಗೆ ಏನೂ ಬೇಜಾರಿಲ್ಲ .ಆದರೆ ಅದು ಚೆನ್ನಾಗಿ ಬರಬೇಕು ಅಂತ ಅವಳು ಎಕ್ಸ್ ಪೆಕ್ಟ್ ಮಾಡ್ತಾಳಲ್ಲ ಅದೇ ಕಷ್ಟ !
ಅದು ಹೆಂಗೆ ತೆಗೆದರೂ ನಾನು ತೆಗೆದಿರೋ ಫೋಟೋ ಅವಳಿಗೆ ಇಷ್ಟ ಆಗಲ್ಲ. ಏನೋ ಒಂದು ಕೊರತೆ ಇದ್ದೇ ಇರುತ್ತೆ .
“ಕೈಯಿ ದಪ್ಪ ಕಾಣ್ತಿದೆ , ಈ ಆಂಗಲ್ ಇಂದ ತೆಗಿಬೇಕಿತ್ತು. ಮೂಗು ಯಾಕೆ ಇಷ್ಟು ಉದ್ದ ಕಾಣ್ತಿದೆ? ಕೂದಲು ಹರಡಿದೆ, ಹೇಳಬಾರದಾ? ಸರಿ ಅದರೂ ಮಾಡ್ಕೋತಿದ್ದೆ . ಹೊಟ್ಟೆ ದೊಡ್ಡ ಕಾಣಿಸ್ತಿದೆ ಕ್ಲಿಕ್ ಮಾಡೋವಾಗ ಹೇಳಿದ್ರೆ ಸರಿಯಾಗಿ ನಿಂತ್ಕೊತಿದ್ದೆ ” … ಹೀಗೆ ಒಟ್ನಲ್ಲಿ ನಾನು ತೆಗೆದಿರೋ ಫೋಟೋಗಳಲ್ಲಿ ಒಂದಲ್ಲ ಒಂದು ಕೊರತೆ ಕಂಡು ಅವಳಿಗೆ ಸಿಟ್ ಬರುತ್ತೆ. ನಾನು ಏನ್ ಸ್ವಾಮಿ ಮಾಡ್ಲಿ? ನನಗೇನೋ ನಾನು ತೆಗೆದಿರೋ ಎಲ್ಲಾ ಫೋಟೋಗಳೂ ಚೆನ್ನಾಗೆ ಕಾಣ್ತವೆ. ಅವಳಿಗೆ ಮಾತ್ರ ಒಂದು ಫೋಟೋ ನೂ ಇಷ್ಟ ಆಗಲ್ಲ .
ಅಲ್ಲಿಂದ ಶುರು ನೋಡಿ ..
ಅಲ್ಲಾ, ನೀವ್ ಹೇಳಿ , ನೀನು ಚೆನ್ನಾಗಿ ಫೋಟೋ ತೆಗಿಯಲ್ಲ , ನಿಂಗೆ ಫೋಟೋ ತೆಗ್ಯೋಕೆ ಬರಲ್ಲ ಅಂತೆಲ್ಲ ಹೇಳ್ತಾಳೆ . ಆದರೆ ಮತ್ತೆ ಮತ್ತೆ ನನ್ನೇ ಯಾಕೆ ಕರೀಬೇಕು ? ಫೋಟೋ ತೆಗೀತಿಯಾ ಪ್ಲೀಸ್ ..ಅಂತ. ಅದು ಸರಿನಾ?
ನನಗೂ ಬೇಜಾರಾಗಿ ಒಂದ್ಸಲ( ಧೈರ್ಯ ಮಾಡಿ) ಹೇಳಿದೆ “ ನೋಡು ನಾನು ತೆಗೆದಿದ್ದು ಹೇಗೂ ಸರಿಯಾಗಲ್ಲ . ನೀನು ಮತ್ತೆ ಸೆಲ್ಫಿ ತೆಕ್ಕೋ ಬೇಕು, ಸುಮ್ನೆ ಡಬಲ್ ಕೆಲಸ . ಇದಕ್ಕಿಂತ ನನ್ನ ಕರಿಲೇ ಬೇಡ ಫೋಟೋ ತೆಗೆಯೋಕೆ “ ಅಂದೆ .
ತಗೊಳಪ್ಪ, ಇನ್ನೊಂದು ರಾಮಾಯಣ ಶುರು ಆಯ್ತು!
“ ಇಷ್ಟು ವರ್ಷ ಆಯ್ತು ನೀನು ಫೋಟೋ ತೆಗಿತಾ . ನೀನು ತೆಗೆದಿರೋ ಫೋಟೋದಲ್ಲಿ ಏನು ಸರಿಬಂದಿಲ್ಲ ಅಂತನೂ ಎಷ್ಟು ಸಲ ಹೇಳಿದೆ . ಯಾವ ಆಂಗಲ್ ನಲ್ಲಿ ಕ್ಯಾಮೆರ ಹಿಡ್ಕೋಬೇಕು ಅಂತನೂ ತೋರ್ಸಿಕೊಟ್ಟೆ. ಇಷ್ಟಾದರೂ ನೀನು ಇನ್ನು ಕಲ್ತಿಲ್ಲಾ ! “ ಅಂತ ಸಿಟ್ಟು ಅವಳದ್ದು .
ಅಷ್ಟೇ ಅಲ್ಲ “ನನ್ ಫ್ರೆಂಡ್ಸ್ ಎಲ್ಲಾ ನೋಡು, ಎಷ್ಟು ಒಳ್ಳೆ ಫೋಟೋ ಹಾಕ್ತಾ ಇರ್ತಾರೆ ಎಫ್ ಬಿ ಮತ್ತೆ ಇನ್ಸ್ಟಾ ದಲ್ಲಿ. ಅವರ ಗಂಡಂದಿರು ತೆಗೆಯೋ ಕ್ಯಾಂಡಿಡ್ ಫೋಟೋ ಎಷ್ಟು ಚೆನ್ನಾಗಿರುತ್ತೆ ! ನೀನಾಗಿ ಯಾವಾಗದ್ರು ನನ್ನ ಫೋಟೋ ತೆಗಿದಿದಿಯಾ? ನಿಂಗೆ ನಾನೇ ದಮ್ಮಯ್ಯ ಹಾಕ ಬೇಕು ಫೋಟೋ ತೆಕ್ಕೊಡು ಅಂತ. ಎಷ್ಟು ಸಲ ಹೇಳಿ ಕೊಟ್ಟರೂ ಇನ್ನೂ ಒಂದು ಫೋಟೋ ಸರಿಯಾಗಿ ತೆಗ್ಯೋಕೆ ಕಲಿತಿಲ್ಲ. ಏನ್ ಮಾಡೋದು ಎಲ್ಲಾ ನನ್ನ ಹಣೆಬರಹ “ ಅಂತ ಮುಖ ದಪ್ಪ ಮಾಡಿಕೊಂಡು ಕಣ್ತುಂಬಿಕೊಂಡು ಧಿಮಿ ಧಿಮಿ ಅಂತ ಕಾಲು ಅಪ್ಪಳಿಸುತ್ತ ಒಳಗೆ ಹೋದ್ಲು ಅಂದ್ರೆ, ಅಲ್ಲಿಗೆ ಇನ್ನು 2 ದಿವಸ ಮನೇಲಿ ಮಾತುಕತೆ ಇಲ್ಲ ಅಂತ ನಾನು ತಿಳ್ಕೊತೀನಿ.
ಮೊನ್ನೆ ಮೊನ್ನೆ ಅಂತೂ ಹೊಸಾ ಧಮಕಿ ಸಿಕ್ಕಿದೆ . “ನೀನು ಹೀಗೇ ಕೆಟ್ಟದಾಗಿ ಫೋಟೋ ತೆಗಿತಾ ಇದ್ರೆ , ಬರೀ ಫೋಟೋ ತೆಗ್ಯೋಕೆ ಅಂತ ಒಬ್ಬನ್ನ ಫ್ರೆಂಡ್ ಮಾಡ್ಕೊಬೇಕಾಗತ್ತೆ ನೋಡು !” ಅಂತ.
ಮದುವೆ ಆದ ಹೊಸತರಲ್ಲಿ ನನ್ನತ್ರ ಕ್ಯಾಮೆರಾ ಇರಲಿಲ್ಲ. ಕ್ಯಾಮೆರಾ ಫೋನ್ ಗಳೂ ಹೆಚ್ಚಿರಲಿಲ್ಲ. ಇರೋವನ್ನ ತೊಗೊಳೋ ಕೆಪ್ಯಾಸಿಟಿ ನಮಗಿರಲಿಲ್ಲ. ಹೀಗಾಗಿ ಸ್ವಲ್ಪ ಹಾಯಾಗಿದ್ದೆ. ಇಲ್ಲ ಅಂದ್ರೆ , ಬಹುಶಃ ಹನೀಮೂನ್ ಮುಗ್ಯೋಕು ಮುಂಚೆ ಡೈವೋರ್ಸ್ ಮಾಡಿ ಬಿಡ್ತಿದ್ಲೋ ಏನೋ !
ಆಮೇಲೆ ಊರಿಗೆ ಬಂದೋಳು ನೀರಿಗೆ ಬರ್ಬೇಕಲ್ಲ ಅನ್ನೋ ತರ ನಮ್ಮನೆಗೂ ಒಂದು ಕ್ಯಾಮೆರ ಫೋನ್ ಬಂತು ಬಿಡಿ.
ಆಗ ಇದ್ದಿದ್ದು VGA ಕ್ಯಾಮೆರಾ. ಫೋಟೋ ಕ್ವಾಲಿಟಿ ಕೇಳಬಾರದು ! ಆದ್ರೂ ಭಾರೀ ಉತ್ಸಾಹದಿಂದ ( ಎಲ್ಲರೂ ಹಾಗೆ ತಾನೆ?) ಫೋಟೋ ತೆಗೆದಿದ್ದೇ ತೆಗೆದಿದ್ದು . ಅದನ್ನ ನೋಡಿ ಚೆನ್ನಾಗಿದೆ ಅಂತ ಒತ್ತಾಯದಿಂದ, ನಮ್ಮದೇ ಸಮಾಧಾನಕ್ಕೆ ಹೇಳ್ಕೋತಾ ಇದ್ವಿ . ಬೇರೆ ಕಾಮೆಂಟ್ ಹೊಡಿಯೋಕೆ , ಫೋಟೋ ಸ್ಪಷ್ಟವಾಗಿ ಕಾಣಿಸ ಬೇಕಲ್ವೆ?
ಈಗ ನೋಡಿ ಶುರುವಾಗಿದ್ದು ಪರದಾಟ ! ಅದ್ಯಾರಿಗೆ , ಯಾಕೆ ಈ ಮೊಬೈಲ್ ಲ್ಲಿ ಫೋಟೋ ತೆಗೆಯೋ ಹಾಗೆ ಅದೂ ಕ್ಯಾಮೆರಾ ಲೆವೆಲ್ ಗೆ ಫೋಟೋ ತೆಗೆಯೋ ಹಾಗೆ ಮಾಡೋ ಆಲೋಚನೆ ಬಂತೋ . ನಮ್ಮಂತೋರೆಲ್ಲ ಒದ್ದಾಡೋ ಪರಿಸ್ಥಿತಿ ತಂದುಬಿಟ್ಟ .
ಈಗೀಗ ಮೊಬೈಲ್ ಅನ್ನೋದು ಫೋನ್ ಕಿಂತ ಕ್ಯಾಮೆರಾ ಕೆಲಸ ಜಾಸ್ತಿ ಮಾಡ್ತಿದೆ ! ಪ್ರತಿ ದಿನ ಫೋನ್ ಲ್ಲಿ ಕ್ಯಾಮೆರಾ ಲೆನ್ಸಗಳ ಸಂಖ್ಯೆ, ಪಿಕ್ಸಲ್ ರೇಟ್ ಹೆಚ್ಚಾಗ್ತಾನೆ ಇದೆ. ಜೊತೆಗೆ ಬೆಲೆ ನೂ. ಬೇರೆ ಏನು ವರ್ಕ್ ಆಗತ್ತೋ ಇಲ್ವೋ ಕ್ಯಾಮೆರಾ ಅಂತೂ ಸೂಪರ್ ಆಗಿರ್ಬೇಕು ಅಂತ ಹೇಳೋರೆ ಜಾಸ್ತಿ ಆಗಿದಾರೆ. ನಮ್ಮನೆಲೂ ಅದೇ ಕೆಟಗರಿ ಬಿಡಿ!
ಇನ್ನೇನು ಈ ಸಲ ಬಹುಶಃ ಒಂದು ಕಿಡ್ನಿ ಮತ್ತೆ ಒಂದು ಕಣ್ಣು ಮಾರಾಟ ಮಾಡಿ ಫೋನ್ ತೊಗೊಳೋ ಚಾನ್ಸ್ ಇದೆ. ಫೋಟೋ ಚೆನ್ನಾಗಿ ಬರಬೇಕು ನೋಡಿ ?
ಸರಿ, ನಂಗೆ ಕರೆಯ ಬಂತು. ಹೋಗ್ಬೇಕು ಈಗ. ಇಲ್ಲ ಅಂದ್ರೆ ಕಿಡ್ನಿ ನಂದೇ ಮಾಯಾ ಆಗೋ ಚಾನ್ಸ್ ಇದೆ. ಬರ್ಲಾ?
No comments:
Post a Comment