February 23, 2024

ಬಿಡುಗಡೆ



"ಶಶಾಂಕ್ , ನಂಗೆ ನಿನ್ನತ್ರ ಒಂದು ವಿಷಯ ಹೇಳಬೇಕು. " ರಶ್ಮಿ ಮೆಲ್ಲಗೆ ಹೇಳಿದಳು.

"ಹ್ಮ್. ಹೇಳು " ಹಾಸಿಗೆಯ ಮೇಲೆ ದಿಂಬಿಗೊರಗಿ ಕಾಲು ನೀಡಿ ಕುಳಿತು ಮೊಬೈಲ್ ನೋಡುತ್ತಿದ್ದ ಶಶಾಂಕ್ ಅವಳತ್ತ ನೋಡದೆಯೇ ಕೇಳಿದ .

"ಸ್ವಲ್ಪ ಆ ಫೋನ್ ಪಕ್ಕಕ್ಕಿಡ್ತೀಯಾ? ಯೋಚನೆ ಮಾಡಬೇಕಿರೋ ವಿಷಯ ಇದು . " ರಶ್ಮಿ ಸಿಡುಕಿದಳು .

"ಆಯ್ತು ತಾಯಿ . ಹೇಳು. " ಫೋನ್ ಪಕ್ಕಕ್ಕಿಟ್ಟು ಹೆಂಡತಿಯತ್ತ ಮುಖ ಮಾಡಿದ .

"ಅದು..ಸ್ವಲ್ಪ ದಿನದಿಂದ ಅತ್ತೆ ಏನೋ ವಿಚಿತ್ರವಾಗಿ ನಡ್ಕೋತಿದಾರೆ ಅನ್ಸ್ತಿದೆ ನಂಗೆ. "

"ಏನು ಹಾಗಂದ್ರೆ ? ಏನಾಯ್ತು ? "
"ಇತ್ತೀಚೆ ಅತ್ತೆ ಹೆಚ್ಚು ಹೊತ್ತು ರೂಮಲ್ಲಿ ಬಾಗಿಲು ಹಾಕ್ಕೊಂಡೆ ಇರ್ತಾರೆ. "

"ಹ್ಮ್… ಅದರಲ್ಲೇನು ವಿಚಿತ್ರ ಅನ್ಸೋದು ? ಬೇಜಾರಿರತ್ತಲ್ವ? 42 ವರ್ಷ ಜತೆಲಿದ್ರು. ಈಗ ಒಮ್ಮೆಲೇ ಒಂಟಿ ಅನಸ್ತಿರಬಹುದು . ಸಹಜ ತಾನೇ? "

"ಅದು ಸರೀಪ್ಪಾ , ಅರ್ಥ ಆಗತ್ತೆ ನಂಗೂ. ಮಾವ ಹೋದ ಶುರುವಿಗೆ ಅತ್ತೆ ಹೀಗೆ ರೂಮಲ್ಲಿ ಕೂತು ಏನೋ ಓದ್ತಾ ಇರ್ತಿದ್ರು. ಆದ್ರೆ ರೂಂ ಬಾಗಿಲು ಹಾಕ್ಕೋತಾ ಇರ್ಲಿಲ್ಲ. ಸ್ವಲ್ಪ ದಿನಕ್ಕೆ ಮೊದಲಿನ ತರ ಆಗಿದ್ರು . ಆದ್ರೆ ಈಗ ಮತ್ತೆ ಹಾಗೇನೆ . ರೂಮಿಂದ ಹೊರಗೆ ಬಂದಷ್ಟು ಹೊತ್ತು ಸರಿಯಾಗೇ ಮಾತಾಡ್ತಾರೆ. ಆದ್ರೆ ಹೊರಗೆ ಬರೋದೇ ಕಮ್ಮಿ ಆಗೋಗಿದೆ. ಬೆಳಿಗ್ಗೆ ತಿಂಡಿ ತಿಂದು ನೀನು ಹೋದಮೇಲೆ ರೂಂ ಹೊಕ್ಕರೆ ಊಟಕ್ಕೆ ,ಕಾಫಿಗೆ ಮಾತ್ರ ಬರ್ತಾರೆ.
ಅಬ್ಬಬ್ಬಾ ಅಂದ್ರೆ ಅರ್ಧ ಗಂಟೆ. ಮುಂಚಿನ ತರ ಟಿವಿ ನೋಡೋದು,ಪೇಪರ್ ಓದೋದು ಏನೂ ಇಲ್ಲ . ಮಕ್ಕಳು ಸ್ಕೂಲಿಂದ ಬಂದ ಮೇಲೆ ಸ್ವಲ್ಪ ಹೊತ್ತು ಅವರ ಜೊತೆ ಮಾತಾಡ್ತಾ ಕೂರ್ತಾರೆ . "

"ಮನಸಾಗಲ್ವೇನೋ ! ಇನ್ನೂ ನಾಲ್ಕೇ ತಿಂಗಳು ಆಗ್ತಿದೆ ಅಷ್ಟೇ. ನೀನಾಗಿ ಅವರ ರೂಮಿಗೆ ಹೋಗಿ ಮಾತಾಡ್ಸು . ಚಿಯರ್ ಅಪ್ ಮಾಡು "

"ಅದೂ ಮಾಡ್ತೀನಿ. ಆದ್ರೆ, ಬಾಗಿಲು ತೆಗದ್ರೆ ತಾನೇ ಮಾತಾಡ್ಸೋದು ? ಅವರ ರೂಂ ಬಾಗಿಲು ಒಳಗಿಂದ ಲಾಕ್ ಮಾಡಿರ್ತಾರೆ. ಮೊದಲು ಹೀಗೆ ಮಾಡ್ತಿರಲಿಲ್ಲ . ಪದೇ ಪದೇ ನಾನು ಹೋಗಿ ಬಾಗಿಲು ತಟ್ಟೋದು , ಅವರು ಎದ್ದು ಬಂದು ಬಾಗಿಲು ತೆಗೆಯೋದು ..ಯಾಕೋ ನಂಗೆ ಸರಿ ಹೋಗಲ್ಲ. ಅವರಿಗೆ ಡಿಸ್ಟರ್ಬ್ ಮಾಡ್ತೀನಾ ಅನ್ಸಿ ಬಿಡತ್ತೆ. ಸುಮಾರು ಸಲ ನಾನು ಅವರ ಬಾಗಿಲ ಹತ್ರ ಹೋದಾಗ ಅವರು ಯಾರತ್ರನೋ ಫೋನ್ ಲ್ಲಿ ಮಾತಾಡ್ತಾ ಇರೋದು ಕೆಳಿಸತ್ತ್ತೆ. ಯಾರ ಜೊತೆ ಅಂತ ಗೊತ್ತಿಲ್ಲ. "

" ಯಾರೋ ಅಮ್ಮನ ಫ್ರೆಂಡ್ ಅಥವಾ ಸಂಬಂಧಿಕರು ಇರಬಹುದು ಕಣೆ. ಈ ಸಂದರ್ಭದಲ್ಲಿ ಜನ ಫೋನ್ ಮಾಡೋದು ಸಹಜ ಆಲ್ವಾ ? "

"ಇರಬಹುದು. ಆದ್ರೆ ನಂಗೆ ವಿಚಿತ್ರ ಅನ್ಸಿದ್ದು ಏನು ಗೊತ್ತಾ? ಈಚೆ ಇರೋವಾಗ ಫೋನ್ ಬಂದ್ರೆ ರೂಮಲ್ಲಿ ಹೋಗಿ ಬಾಗಿಲು ಹಾಕ್ಕೊಂಡೆ ಮಾತಾಡ್ತಾರೆ. ಏನೋ ಹುಡುಕ್ತಿದಾರೆ ಅನ್ಸತ್ತೆ ಒಂದೊಂದ್ ಸಲ . ನಾನು ಒಂದ್ಸಲ ರೂಮಿಗೆ ಹೋದಾಗ ಮಂಚದ ಮೇಲೆಲ್ಲಾ ಬಟ್ಟೆ ಹರಡಿತ್ತು . ಮೊದಲು ಯಾವಾಗಲು ಹೀಗೆ ಮಾಡಿಲ್ಲ . ದುಃಖನೆಲ್ಲ ಒಳಗೇ ಒತ್ತಿಟ್ಟುಕೊಂಡು ಆಮೇಲೆ ಅರೋಗ್ಯ ಹಾಳಾಗಬಾರದಲ್ವ ?" ರಶ್ಮಿ ಗೊಂದಲದಲ್ಲೇ ಹೇಳಿದಳು

"ಹೌದಾ ? ಅಂಥಾದ್ದೇನ್ ಇರತ್ತೆ. ಆದ್ರೂ ಕಪಾಟು ಸೇರಿಸ್ಕೊತಿರಬಹುದು. ಏನಾದ್ರೂ ಮನಸನ್ನು ಡೈವರ್ಟ್ ಮಾಡ್ಕೋಳೋಕೆ. ನನಗೇನೋ ನೀನು ಸುಮ್ಮನೆ ಏನೇನೋ ಯೋಚಿಸ್ತೀಯ ಅನಸ್ತಿದೆ. ಮಲ್ಕೋ ಈಗ . "

ಹೆಂಡತಿಗೆ ಜಾಸ್ತಿ ಯೋಚನೆ ಮಾಡಬೇಡ ಅಂತ ಹೇಳಿ ಪಕ್ಕಕ್ಕೆ ತಿರುಗಿ ಮುಸುಕೆಳೆದ ಶಶಾಂಕ್ .

ಅತ್ತ ರಶ್ಮಿಗೆ ಚಿಂತೆ ತಲೆ ತಿಂತಾನೆ ಇತ್ತು. ಗಂಡ ಏನೋ ಯೋಚನೆ ಮಾಡಬೇಡ ಅಂದ್ರೂ ಅದು ಹೇಗೆ ಸಾಧ್ಯ? ಯಾವತ್ತೂ ನಗ ನಗ್ತಾ, ಮಾತಾಡ್ತಾ ಇರ್ತಿದ್ದ ಅತ್ತೆ ಇದ್ದಕ್ಕಿದ್ದ ಹಾಗೆ ರೂಮಲ್ಲಿ ಇಡೀ ದಿನ ಬಾಗ್ಲು ಹಾಕೊಂಡಿರೋದು ಅವಳಿಗೆ ವಿಚಿತ್ರ ಅನಸ್ತಿತ್ತು . ಜೊತೆಗೇ ಗಾಬರಿನೂ .
ಮಾವ ತೀರಿ ಕೊಂಡಾಗಲೂ ಹೆಚ್ಚು ಅಳುತ್ತಾ ಕೂರದೇ ಅದನ್ನು ಎಲ್ಲರೂ ಒಂದಲ್ಲ ಒಂದು ದಿನ ಜಗತ್ತನ್ನು ಬಿಟ್ಟು ಹೋಗೋರೆ ಎಂಬಂತೆ ಮೌನವಾಗಿ ಸ್ವೀಕರಿಸಿದ ಅತ್ತೆಯ ಬಗ್ಗೆ ಆಗಿಂದಲೂ ರಶ್ಮಿಗೆ ಯೋಚನೆ ಆಗುತ್ತಿತ್ತು. ದುಃಖವನ್ನು ಮನದಲ್ಲೇ ಕಟ್ಟಿ ಇಟ್ಟುಕೊಂಡು ಅದರಿಂದಾಗಿ ಆರೋಗ್ಯ ಹಾಳಾಗುವ ಬಗ್ಗೆ ಓದಿದ್ದಳು. ಅವಳಿಗೆ ಅತ್ತೆಯೂ ದುಃಖವನ್ನು ತಡೆದಿಟ್ಟು ಕೊಂಡಿದ್ದಾರೆ ಎಂದೇ ಅನಿಸುತ್ತಿತ್ತು. ಆಮೇಲೆ ಕೂಡ ಮೊದಲಿನಂತೆ ಮಾತಾಡದೆ ಹಲವು ವಾರ ಗಳ ಕಾಲ ಮಹಾಭಾರತ, ಭಗವದ್ಗೀತೆ , ಸಹಸ್ರನಾಮ ಇತ್ಯಾದಿ ಓದುತ್ತಾ ರೂಮಲ್ಲಿ ಇರುತ್ತಿದ್ದರು. ಆಗೆಲ್ಲ ಒಳಗೊಳಗೇ ಗಾಬರಿ ರಶ್ಮಿಗೆ.

ತಿಂಗಳು ಕಳೆದಂತೆ ಅತ್ತೆ ಸ್ವಲ್ಪ ನಾರ್ಮಲ್ ಗೆ ಬಂದಂತೆ ಅನಿಸಿ ಸಮಾಧಾನವಾಗಿತ್ತು .

ಮತ್ತೆ ಈಗ ಅತ್ತೆಯ ಹೊಸ ರೀತಿಗೆ ತಲೆಬಿಸಿಯಾಗ್ತಾ ಇತ್ತು . ಕಾರಣ ಏನಿರಬಹುದು ಎಂಬ ಯೋಚನೆ ತಲೆ ತಿನ್ನುತ್ತಿತ್ತು. ಹಾಗೆ ಯೋಚಿಸುತ್ತಿದ್ದವಳಿಗೆ 2 ವಾರಗಳ ಮೊದಲು ಅತ್ತೆಯ ಹತ್ತಿರದ ಗೆಳತಿ ಶಶಿಕಲಾ ಬಂದು ಉಳಿದಿದ್ದರು. ಅತ್ತೆಯ ವರ್ತನೆ ಬದಲಾಗಿದ್ದು ಆ ನಂತರ ಎಂದು ಹೊಳೆಯಿತು . ಆದರೂ ಕಾರಣ ಮಾತ್ರ ಹೊಳೆಯಲಿಲ್ಲ.

ಮತ್ತೆ ಕಾರಣ ಹುಡುಕುತ್ತಾ ಕುಳಿತವಳು ಶಶಿ ಆಂಟಿ ಬರುವ ಕೆಲದಿನಗಳ ಮುಂಚೆ ನಡೆದಿದ್ದು ನೆನಪಿಸಿಕೊಂಡಳು!
ಅಂದು ಅತ್ತೆಯ ಫೋನ್ ಜಗುಲಿಯಲ್ಲಿದ್ದಿದ್ದು ನೋಡಿದ ರಶ್ಮಿ ಅದನ್ನು ಕೊಡಲು ಅವರ ರೂಮಿಗೆ ಹೋಗಿದ್ದಳು. ಅಲ್ಲಿ ಜಾಹ್ನವಿ ತಮ್ಮ ಗಂಡನ ಕಪಾಟನ್ನು ತೆರೆದು ಬಟ್ಟೆ ಗಳನ್ನು ತೆಗೆದು ಮಂಚದ ಮೇಲೆ ಇಡುತ್ತಿದ್ದರು. ಅವರೊಂದಿಗೆ ಕೈ ಜೋಡಿಸಿದ ರಶ್ಮಿ ಇದೇ ಸಮಯವೆಂದು ಅವರನ್ನು ಮಾತಿಗೆಳೆದಳು.

"ಇವನ್ನೆಲ್ಲ ಏನು ಮಾಡ್ತಿರಾ ಅತ್ತೆ? "

"ಏನಿಲ್ಲಮ್ಮ, ಏನು ಮಾಡೋದು ? ಅದೆಷ್ಟೋ ಹೊಸ ಶರ್ಟ್ ಪ್ಯಾಂಟ್ ಎಲ್ಲ ಇವೆ. ಅದನ್ನೆಲ್ಲ ತೆಗದು ಯಾವುದಾದರೂ ಆಶ್ರಮಕ್ಕೆ ಕೊಡಬಹುದಾ ಅಂತ ಯೋಚನೆ ಮಾಡ್ತಿದ್ದೆ. ಇನ್ನೇನು ಮಾಡೋದು ಹೇಳು ? ಯಾರು ಹಾಕ್ತಾರೆ ಇನ್ನು ? " ನಿರ್ಲಿಪ್ತರಾಗಿ ಹೇಳಿದರು.

"ಶಶಾಂಕ್ ಗೆ ಹೇಳ್ತೀನಿ ಅತ್ತೆ. ನೋಡೋಣ. "

ಇಬ್ಬರೂ ಸೇರಿ ಬಟ್ಟೆ ಗಳನ್ನು ವಿಂಗಡಿಸಿ ಇಟ್ಟರು.

ಈ ಕಪಾಟಿನ ಲಾಕರ್ ಒಂದು ತೆಗೆದು ನೋಡೋಣ ರಶ್ಮಿ . ಏನಾದ್ರೂ ಇದೆಯಾ ಅಂತ. ಎನ್ನುತ್ತಾ ಜಾಹ್ನವಿ ಬೀಗದ ಕೀ ಗೊಂಚಲನ್ನು ತಂದರು . ಆದರೆ ಲಾಕರ್ ನ ಕೀ ಮಾತ್ರ ಇರಲಿಲ್ಲ. ರೂಮಿನಲ್ಲಿ ಸಾಧಾರಣವಾಗಿ ಇರಬಹುದಾದ ಜಾಗವೆಲ್ಲಾ ಹುಡುಕಿದರೂ ಅದು ಸಿಗಲಿಲ್ಲ.
"ರಶ್ಮಿ, ಇದರದ್ದು ಡೂಪ್ಲಿಕೇಟ್ ಕೀ ಶಶಾಂಕ್ ಹತ್ರ ಏನಾದ್ರೂ ಇದೆಯಾ ಕೇಳಬೇಕು . ಲಾಕ್ ಮಾಡಿದ್ದಾರೆ ಅಂದ್ರೆ ಏನಾದರೂ ಇಟ್ಟಿರಬಹುದು. ನೋಡೋದು ಒಳ್ಳೇದು . "

"ಇರಿ ಅತ್ತೆ, ನಮ್ಮ ರೂಮಿನಲ್ಲಿ ಇರೋ ಕೀ ಬಂಚ್ ತರ್ತೀನಿ. ನೋಡೋಣ . "

ರಶ್ಮಿ ತಂದ ಗೊಂಚಲಿನಲ್ಲೂ ಅದರ ಕೀ ಸಿಕ್ಕಲಿಲ್ಲ.
ಸರಿ , ಶಶಾಂಕ್ ಬರಲಿ ನೋಡೋಣ ಎಂದು ಇಬ್ಬರೂ ಅಲ್ಲಿಗೆ ಬಿಟ್ಟರು.

ಸಂಜೆ ಶಶಾಂಕ್ ಬಂದಮೇಲೆ ಕೇಳಿದಾಗ ಅವನಿಗೂ ಗೊತ್ತಿರಲಿಲ್ಲ.

"ಒಂದು ಕೆಲಸ ಮಾಡು ಶಶಾಂಕ್ , ನಾಳೆ ಆ ಮುನಿಯಪ್ಪ ಇದಾನಲ್ಲ ಬೀಗದಂಗಡಿ ಇದೆ ನೋಡು ಅವನದು , ಅವನ್ನ ಬರೋಕೆ ಹೇಳು. ಅವನು ತೆಗಿತಾನೆ. ಆಮೇಲೆ ಅದಕ್ಕೆ ಬೇರೆ ಬೀಗ ಹಾಕ್ಸಿದ್ರಾಯ್ತು. "

"ಸರಿ. ಆದ್ರೆ , ನಾಳೆ ಆಗತ್ತೋ ಇಲ್ವೋ ಸ್ವಲ್ಪ ಕೆಲಸ ಜಾಸ್ತಿ ಇದೆ. ಶನಿವಾರ ನೋಡೋಣ. "

"ಶಶಾಂಕ್, ಶನಿವಾರ ಅಂದ್ರೆ ಇನ್ನೂ ನಾಲ್ಕು ದಿನ ಕಣೋ ."

"ಅಮ್ಮಾ, ಏನಿದೆ ಅರ್ಜೆಂಟ್ ಈಗ ? ಇಷ್ಟು ದಿನ ಆ ಕಡೆ ನೋಡಿಲ್ಲ ಇನ್ನೊಂದ್ ನಾಲ್ಕು ದಿನ ತಾನೇ? "

"ಹಾಗಲ್ಲ ಕಣೋ , ನಂಗೆ ತಲೇಲಿ ಒಂದು ವಿಷಯ ಕೂತ್ರೆ ಕೊರೆಯೋಕೆ ಶುರುವಾಗತ್ತೆ . ಗೊತ್ತಲ್ವ ನಿಂಗೂ ?"

ರಶ್ಮಿ ಸಹಾಯಕ್ಕೆ ಬಂದಳು. " ಒಂದ್ ಕೆಲಸ ಮಾಡು ಶಶಾಂಕ್ , ಆಫೀಸ್ ಗೆ ಹೋಗೋವಾಗ ಅವನಿಗೆ ಹೇಳ್ಬಿಟ್ಟು ಹೋಗು ಹೇಗೂ ನಾನು ಇದೀನಲ್ಲ ಮನೇಲಿ ? ಅವನು ಬಂದು ಓಪನ್ ಮಾಡ್ಕೊಟ್ಟು ಹೋಗ್ಲಿ. ಅತ್ತೆಗೂ ಸಮಾಧಾನ “

"ಸರಿ ಬಿಡು . ಇಬ್ರೂ ಸೇರ್ಕೊಂಡ ಮೇಲೆ ನಾನೇನು ಮಾಡೋದು . ಹೇಳಿ ಹೋಗ್ತೀನಿ "

ಮರುದಿನ ಮಧ್ಯಾನದ ಹೊತ್ತಿಗೆ ಮುನಿಯಪ್ಪ ಬಂದ. ಎರಡೇ ನಿಮಿಷಕ್ಕೆ ಬೀಗ ತೆಗೆದು ಕೊಟ್ಟ. ಅವನಿಗೆ ಜಗುಲಿಯಲ್ಲಿ ಕಾಯಲು ಹೇಳಿ ರಶ್ಮಿ ದುಡ್ಡು ತರಲು ಹೋದಾಗ, ಜಾಹ್ನವಿ ಲಾಕರ್ ತೆರೆದು ಒಳಗೆ ಏನೇನಿದೆ ಎಂದು ಆತುರದಿಂದ ನೋಡಿದರು. ಮೂಲೆಯವರೆಗೂ ಕೈ ಹಾಕಿ ನೋಡಿದರು. ಕೈಗೆ ಸಿಕ್ಕ ಕಾಗದ ಪತ್ರ ಎಲ್ಲವನ್ನೂ ನೋಡಿ ಒಮ್ಮೆ ಸಮಾಧಾನದ ಉಸಿರು ಬಿಟ್ಟರು .

ಅಷ್ಟರಲ್ಲಿ ರಶ್ಮಿ ಒಳಬಂದಳು

"ಏನಾದ್ರೂ ಸಿಕ್ತಾ ಅತ್ತೆ ? "

" ಕೆಲವು ಮುಗಿದು ಹೋದ ಇನ್ಶುರನ್ಸ್ ನ ಕಾಗದ ಪತ್ರಗಳು , ಪೋಸ್ಟ್ ಆಫೀಸಿನಲ್ಲಿ ಇಟ್ಟ ಡಿಪಾಸಿಟ್ ಒಂದರ ಕಾಗದ ಇದೆ. ಮತ್ತೆ ನೋಡು ಇದೊಂದಿತ್ತು " ಎಂದು ಕವರ್ ಒಂದನ್ನು ಮುಂದೆ ಹಿಡಿದರು .

ತೆರೆದು ನೋಡಿದ ರಶ್ಮಿ “ ಅತ್ತೆ ಇದರಲ್ಲಿ ದುಡ್ಡಿದೆ “ . ಎಣಿಸಿದಳು. "ಅರವತ್ತು ಸಾವಿರ ಇದೆ ಅತ್ತೆ. ತೊಗೊಳಿ " ಎಂದು ಕೈಗಿಟ್ಟಳು .

"ನನಗೇಕೆ ರಶ್ಮಿ ? ನಿನ್ನತ್ರ ಇರಲಿ "

"ಅತ್ತೆ, ಇದು ಮಾವ ಇಟ್ಟ ದುಡ್ಡು. ನಿಮಗೆ ಸೇರಬೇಕು. ಇಟ್ಟುಕೊಳ್ಳಿ . ನಂಗೆ ಬೇಕಾದ್ರೆ ನಾನೇ ಕೇಳ್ತೀನಿ ."

ಈ ಘಟನೆ ಆಗಿ ಸುಮಾರು 4 - 5 ದಿನಕ್ಕೆ ಶಶಿ ಆಂಟಿ ಬಂದಿದ್ದು . ಅವರು ಹೋದ ಮೇಲಿಂದ ಅತ್ತೆ ಹೀಗೆ ಆಡ್ತಾ ಇರೋದು . ಎಂದು ರಶ್ಮಿ ನೆನಪಿಸಿಕೊಂಡಳು. ಆದರೆ ಯಾಕಿರಬಹುದು ಅಂತ ಮಾತ್ರ ಅವಳಿಗೆ ಹೊಳೀತಾ ಇಲ್ಲ .
ಅವರು ಏನಾದ್ರೂ ಅಂದಿರಬಹುದಾ ? ಅತ್ತೆಗೆ ಅದರಿಂದ ಬೇಜಾರಾಗಿರಬಹುದ? ಇಲ್ಲ, ಅದು ಸಾಧ್ಯವಿಲ್ಲ. ಅತ್ತೆಗೆ ಅವರು ಬೆಸ್ಟ್ ಫ್ರೆಂಡ್. ಅವರು ತಮ್ಮ ಗೆಳತಿಗೆ ಬೇಸರವಾಗೋ ತರ ಏನೂ ಮಾತಾಡೋಲ್ಲ. ಹಾಗಿದ್ರೆ ಇನ್ನೆನಿರ ಬಹುದು? ರಶ್ಮಿಗೆ ಇದು ಯಕ್ಷ ಪ್ರಶ್ನೆಯಂತಾಯಿತು .

ಹೀಗಿರೋವಾಗ ಎರಡು ಮೂರು ದಿನದ ನಂತರ ಕೆಲಸದ ವಿಜಯಾ
“ ಅಕ್ಕಾ , ದೊಡ್ದಮ್ಮಾರು ಊರಿಗೆನಾದ್ರೂ ಹೋಗ್ತಾರೆನಕ್ಕ ?" ಅಂತ ಕೇಳಿದ್ಲು .

"ಯಾಕೆ ? ಹಿಂಗ್ಯಾಕೆ ಕೇಳ್ತಿಯೇ ? "

"ಅಯ್ಯೋ , ಏನಿಲ್ಲಕ್ಕ , ಇವತ್ತು ರೂಂ ಕ್ಲೀನ್ ಮಾಡೋವಾಗ ಮೇಲಿಂದ ಆ ದೊಡ್ಡ ಬ್ಯಾಗ್ ಮತ್ತೆ ಸೂಟ್ ಕೇಸ್ ತೆಕ್ಕೊದು ಅಂತ ಕೆಳಗೆ ಇಳಿಸ್ಕಂದ್ರು . ಯಾಕ್ರಮ್ಮಾ ಅಂತ ಕೇಳ್ದೆ . ಬಟ್ಟೆ ತುಂಬಿಡಬೇಕು ಕಣೆ ಅಂತ ಅಂದ್ರು . "

"ಹೇಳಿದಾರಲ್ಲ ಮತ್ತೆ ? ಇನ್ನೇನು ಊರಿಗೆ ಹೋಗ್ತಾರಾ ಅಂತ ನನ್ನತ್ರ ಕೇಳೋದು ನೀನು ? "
ಹಾಗೆಂದು ವಿಜಯಾಳ ಬಾಯಿ ಮುಚ್ಚಿಸಿದರೂ ರಶ್ಮಿಗೆ ಇದು ಹೊಸ ಹುಳ ಬಿಟ್ಟಂತೆ ಆಯ್ತು.

ರಾತ್ರಿ ಮತ್ತೆ ಶಶಾಂಕ್ ಗೆ ವರದಿ ಮಾಡಿದಳು.
“ ಶಶಾಂಕ್ , ಏನಾಗ್ತಾ ಇದೆ ಅಂತ ಗೊತಾಗ್ತಿಲ್ಲ . ಈಗ ಬ್ಯಾಗ್ , ಸೂಟ್ ಕೇಸ್ ಎಲ್ಲ ಯಾಕೆ ತೆಗೆಸಿದರು ? “

"ನೋಡೋಣ ಇರು . ಅವಳಾಗಿ ಏನಾದ್ರೂ ಹೇಳ್ತಾಳಾ ಅಂತ . ಇಲ್ಲಾ ಅಂದ್ರೆ ನಾನೇ ಕೇಳ್ತೀನಿ ಆಯ್ತಾ? "

ಮರುದಿನ ಭಾನುವಾರ . ಮಧ್ಯಾಹ್ನದ ನಿದ್ದೆ ಮುಗಿಸಿಡ ಶಶಾಂಕ್ ರೂಮಿಂದ ಹೊರಗೆ ಬಂದ.. ಡೈನಿಂಗ್ ಟೇಬಲ್ ಮೇಲೆ ಅದಾಗಲೇ ಕುರುಕಲು ತಿಂಡಿ ಯ ಪ್ಲೇಟ್ ಬಂದಾಗಿತ್ತು. ಅವನನ್ನು ನೋಡಿ ರಶ್ಮಿ “ ಅತ್ತೇ , ನೀವು ಬನ್ನಿ ಕಾಫಿಗೆ “ ಎಂದು ಕರೆದು ಕಾಫಿ ತರಲು ಒಳಗೆ ಹೋದಳು .
ಮಕ್ಕಳು ಅದಾಗಲೇ ಪಕ್ಕದ ಮನೆಯ ಮಕ್ಕಳ ಜೊತೆ ಆಡಲು ಹೋಗಿಯಾಗಿತ್ತು.

ಕಾಫಿ ಕುಡಿಯುತ್ತಾ ಜಾಹ್ನವಿ ಹೇಳಿದರು
“ ಶಶಾಂಕ, ನಾನು ಸ್ವಲ್ಪ ದಿನ ಎಲ್ಲಾದರೂ ಹೋಗೋಣ ಅಂದ್ಕೊಂಡಿದೀನಿ “

ಶಶಾಂಕ್ ಮತ್ತು ರಶ್ಮಿ ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿದರು. ಅಂದ್ರೆ ಊಹೆ ಪೂರ್ತಿ ತಪ್ಪಿಲ್ಲ ! ಆದರೆ, ತಮ್ಮ ಹಳ್ಳಿ , ಊರು ಅಂತೆಲ್ಲ ಈಗ ಏನೂ ಉಳಿದೇ ಇಲ್ಲ . ಇನ್ನೆಲ್ಲಿ ಹೋಗೋದು ಇವರು ? ಅದೂ ಈಗ ?

"ಅಮ್ಮಾ, ಇನ್ನೂ ನಾಲ್ಕೇ ತಿಂಗಳು ಆಗಿರೋದು…. "

"ಅಂದ್ರೆ ? "

"ಅದೂ, ಜನ ಸುಮ್ನೆ ಆಡ್ಕೊತಾರೆ ಅಂತ .."

"ಊರಿಗೆಲ್ಲ ಡಂಗುರ ಸಾರಬೇಕಿಲ್ಲ ಕಣೋ "

"ಹಾಗಲ್ಲಮ್ಮ, ಅಷ್ಟಕ್ಕೂ , ನಂಗೆ ಈಗ ರಜೆ ಸಿಕ್ಕಲ್ಲ ನಿನ್ನ ಕರ್ಕೊಂಡು ಹೋಗೋಕೆ. ಮಕ್ಕಳಿಗೆ ಸ್ಕೂಲ್ ಸೊ, ರಶ್ಮಿ ಬರೋಕಾಗಲ್ಲ . "

"ನೀವು ಕರ್ಕೊಂಡು ಹೋಗಿ ಅಂತ ಹೇಳ್ತಿಲ್ಲ ಕಣೋ . ನಾನು ಹೋಗ್ಬರ್ತೀನಿ ಅಂದೆ."

"ವರ್ಷ ಕಳೆಯೋದ್ರೊಳಗೆ ಯಾತ್ರೆ ಅಂತ ಹೇಗಮ್ಮ ಹೋಗ್ತೀಯಾ? ಅಷ್ಟಕ್ಕೂ .. ಈಗ ಎಲ್ಲಿಗೆ ಹೋಗ್ಬೇಕು ಅಂತ ? ಒಳ್ಳೆ ಟ್ರಾವೆಲ್ಸ್ ನ ಹುಡುಕ್ತೀನಿ ಸ್ವಲ್ಪ ದಿನ ತಡೆಯಮ್ಮ .. "

ಜಾಹ್ನವಿ ಆಶ್ಚರ್ಯದಿಂದ ಎಂಬಂತೆ ಮಗನ ಮುಖವನ್ನೇ ನೋಡಿದರು .

"ಅಲ್ಲ ಕಣೋ , ನಾನು ಹೋಗ್ಬೇಕು ಅಂದ ಕೂಡ್ಲೇ ಯಾತ್ರೆಗೆ ಹೋಗೋದು ಅಂತ ನೀ ಹೇಗೆ ಡಿಸೈಡ್ ಮಾಡಿದ್ಯೋ ? "

"ಅಂದ್ರೆ ? ಅಮ್ಮಾ , ಒಗಟಾಗಿ ಮಾತಾಡ್ಬೇಡ. ಸರಿ, ಈಗ ನೀನೇ ಹೇಳು ಎಲ್ಲಿಗೆ ಹೋಗ್ಬೇಕು ಅಂದ್ಕೊಂಡಿದೀಯಾ? " ಶಶಾಂಕ್ ದೀರ್ಘ ಉಸಿರೆಳೆದುಕೊಂಡು ಕೇಳಿದ.

" ಸಿಂಗಾಪುರ್ ! "

ಗಂಡ ಹೆಂಡತಿ ಇಬ್ಬರೂ ಅವಾಕ್ಕಾದರು .

" ಏನ್ ತಮಾಷೆನಮ್ಮ ಇದು ? " ಶಶಾಂಕ್ ಈಗ ಸ್ವಲ್ಪ ಬೇಸರದ ದನಿಯಲ್ಲಿ ಹೇಳಿದ. ರಶ್ಮಿ ಅತ್ತೆಯ ಮುಖವನ್ನೇ ನೋಡುತ್ತಾ ಕುಳಿತಿದ್ದಳು ನಂಬಲಾರದಂತೆ .

"ತಮಾಷೆ ಅಲ್ಲ ಕಣೋ . ನಿಜಕ್ಕೂ ಸಿಂಗಾಪುರಕ್ಕೆ ಹೋಗ್ಬೇಕು ನಂಗೆ . "

" ಏನ್ ಹೇಳ್ತಿದೀಯ ಅಮ್ಮ , ಹುಶಾರಿದೀಯ ? ಅಪ್ಪ ಸತ್ತು ನಾಲ್ಕು ತಿಂಗಳ ಕೂಡ ಆಗ್ಲಿಲ್ಲ . ಬೇರೆ ಯಾರೋ ಆಗಿದ್ರೆ ಬೇಜಾರಿಂದ ಮನೇಲೆ ಕೂತಿರೋರು , ಇಲ್ಲ ಹೋಗೋದಿದ್ರೂ ಯಾವ್ದೋ ಯಾತ್ರಾ ಸ್ಥಳಕ್ಕೆ ಹೋಗೋರು . ನೀನು ನೋಡಿದ್ರೆ ಸಿಂಗಾಪುರ್ ಸುತ್ತಾಡೋಕೆ ಹೋಗ್ಬೇಕು ಅಂತೀಯ? ಏನಮ್ಮ ಇದು ? ಅಷ್ಟಕ್ಕೂ ಅದೇನು ಪಕ್ಕದ ಊರಾ ? ಪಾಸ್ಪೋರ್ಟ್ , ವೀಸಾ ಎಲ್ಲ ಬೇಕು . ನಂಗೆ ರಜೆ ಇಲ್ಲ ಅಂತ ಆಗ್ಲೇ ಹೇಳ್ದೆ. ಅಲ್ಲೇನು ನೆಂಟರ ಮನೆ ಇದ್ಯಾ ? ಅಲ್ಲದೆ ಖರ್ಚು ? "ಶಶಾಂಕ್ ಸಿಡುಕಿದ .

"ಪಾಸ್ ಪೋರ್ಟ್, ಲಂಡನ್ ಲ್ಲಿ ನಿಮ್ಮನೆಗೆ ಬರೋವಾಗ ಮಾಡ್ಸಿದ್ವಲ್ಲ ? ಅದು ಅಷ್ಟು ದಿನ ರೂಮೆಲ್ಲ ಹುಡುಕಿದರೂ ಸಿಕ್ಕಿರಲಿಲ್ಲ. ಅಂತೂ ಅವತ್ತು ನಿಮ್ಮಪ್ಪನ ಲಾಕರ್ ಲ್ಲಿ ಸಿಕ್ತು . ಇನ್ನೂ ವ್ಯಾಲಿಡ್ ಇದೆ. ವೀಸಾ , ಫ್ಲೈಟ್ , ಹೋಟೆಲ್ ಯಾವುದರ ಬಗ್ಗೆನೂ ನೀನು ಯೋಚನೆ ಮಾಡಬೇಡ. ಎಲ್ಲ ವ್ಯವಸ್ಥೇನೂ ಆಗಿದೆ. ನೀನು ಬರೋ ಅಗತ್ಯ ಕೂಡ ಇಲ್ಲ. ನಾನು, ಶಶಿ ಹೋಗ್ತಿದೀವಿ. ಅವಳು ಎಲ್ಲ ನೋಡ್ಕೊಂಡಿದಾಳೆ. ಟಿಕೆಟ್ ಕೂಡ ಆಗತ್ತೆ ಇನ್ನೆರಡು ದಿನಕ್ಕೆ. ಅಷ್ಟೇ ಅಲ್ಲ , ನೀನು ದುಡ್ಡಿನ ಬಗ್ಗೆ ಕೂಡ ಯೋಚನೆ ಮಾಡಬೇಡ. ನನ್ನತ್ರ ಇದೆ ." ಶಾಂತವಾಗಿ ಹೇಳಿದಳು ಜಾಹ್ನವಿ .

"ಅಂದ್ರೆ ? ಎಲ್ಲ ತಯಾರಿನೂ ಮಾಡ್ಕೊಂಡ್ ಆಗಿದ್ಯಾ? ಏನಾಗಿದೆ ಅಮ್ಮ ನಿಂಗೆ? ಏನಿದು ಹುಚ್ಚಾಟ ? "

" ಅಲ್ಲ ಕಣೋ , ಇನ್ನು ಅಪ್ಪ ಸತ್ತು ಒಂದು ವರ್ಷನೂ ಆಗಿಲ್ಲ ಅನ್ನೋದು ಅಥವಾ ಯಾತ್ರೆಗೆ ಹೋಗೋದು ಬಿಟ್ಟು ಸುತ್ತೋಕೆ ಹೋಗ್ತೀಯ ಅಂದ್ಯಲ್ಲ … " ಒಂದು ದೀರ್ಘ ಉಸಿರೆಳೆದು ಕೊಂಡಳು ಜಾಹ್ನವಿ .
" ಈಗ ನಾನು ಹೇಳೋದು ಸರಿಯಾಗಿ ಕೇಳು . ನಾನು ದುಃಖ ಮರೀಬೇಕು ಅಂತ ಹೋಗೊದಾಗಿದ್ರೆ , ಯಾವುದೋ ತೀರ್ಥ ಕ್ಷೇತ್ರಕ್ಕೆ ಹೋಗಿ ಧ್ಯಾನ ಮಾಡಿ, ಪೂಜೆ ಮಾಡಿ ಸಮಾಧಾನ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೆ. ಆದರೆ ಹಾಗಲ್ಲ
ನನಗೆ ಒಂಥರಾ ನನ್ನ ಬಿಡುಗಡೆ ನ ಸೆಲೆಬ್ರೇಟ್ ಮಾಡ ಬೇಕಾಗಿದೆ . ಸಿಂಗಪುರಕ್ಕೆ ಹೋಗ್ಬೇಕು ಅನ್ನೋದು ನನ್ನ ಎಷ್ಟೋ ವರ್ಷಗಳ ಕನಸು . ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗೋ ಮಾತಾಡ್ತಿದ್ದೆ ಅಂತ ನಿಮ್ಮಪ್ಪ ನನ್ನಿಂದ ಪಾಸ್ ಪೋರ್ಟ್ ಕಸಿದು ಇಟ್ಗೊಂಡಿದ್ರು . "

ಮಗ ಸೊಸೆ ಇಬ್ರೂ ಆಶ್ಚರ್ಯದಿಂದ ಅಮ್ಮನ ಮುಖವನ್ನೇ ನೋಡ್ತಾ ನಿಂತರು .

"ಏನಮ್ಮ ನೀನು ? ಬಿಡುಗಡೆ ಅಂತೆ? ಯಾರಿಂದ? ಯಾವ ಜೈಲಿನಲ್ಲಿ ಇಟ್ಟಿದ್ರು ನಿನ್ನ ? ಹುಷಾರಾಗಿ ಇದೀಯಾ ಅಮ್ಮ ? ಏನೇನೋ ಮಾತಾಡ್ತಾ ಇದೀಯಲ್ಲ ? ಅಪ್ಪ ಸತ್ತು ಇನ್ನು ಸರಿಯಾಗಿ ನಾಲ್ಕು ತಿಂಗಳು ಕೂಡ ಆಗಿಲ್ಲ ನೀನು ಸುತ್ತೋಕೆ ಹೋಗ್ತೀನಿ ಅಂತೀಯಲ್ಲ ? ಯಾರು ಏನಂತಾರೆ ಅಂತ ಜ್ಞಾನ ಬೇಡವೆನಮ್ಮ ? "

"ಯಾರು ಏನಂತಾರೆ ಅಂತ ಯೋಚ್ನೆ ಮಾಡ್ತಾ ನನ್ನ ಜೀವನಾ ನೆ ಕಳೆದುಹೋಯ್ತು . ಬೇರೆಯವರಿಗೊಸ್ಕರ ನಮ್ಮ ಕನಸುಗಳನ್ನು ಎಷ್ಟು ದಿನ ಅಂತ ಬಚ್ಚಿಡಬೇಕು? ಅಷ್ಟಕ್ಕೂ ಯಾಕೆ ಬಚ್ಚಿಡಬೇಕು? ಹೇಳೋರು ನಮ್ಮ ಕಷ್ಟಕ್ಕೆ ಆಗ್ತಾರ?
ಅಲ್ಲ ಕಣೋ. ನೀನು ಮನೆಗೆ ವಾಪಸ್ ಬಂದು ಎಷ್ಟು ಸಮಯ ಆಯ್ತೋ ? ಪೂರ್ತಿ ಒಂದು ವರ್ಷ ಕೂಡ ಆಗಿಲ್ಲ. ಅದೂ ನಿಮ್ಮಪ್ಪನಿಗೆ ತೀರಾ ಹುಷಾರಿಲ್ಲ ನಂಗೆ ಒಬ್ಬಳಿಗೆ ಕಷ್ಟ ಆಗತ್ತೆ ನೋಡ್ಕೊಳೋದು ಅಂತ ಆದಾಗ ಮನೆಗೆ ವಾಪಸ್ ಬಂದೆ. ನೀನು ಮನೆ ಬಿಟ್ಟು ಎಷ್ಟು ವರ್ಷ ಆಯ್ತು ಹೇಳು ? ಪಿಯುಸಿ ಮುಗ್ಸಿ ಓದೋಕೆ ಹೊರಗೆ ಹೋದೊನು ಸರಿಯಾಗಿ ಮನೇಲಿ ಉಳಿಯೋಕೆ ಬಂದಿದ್ದು ಈಗ ತಾನೆ? ಅಂದ್ರೆ ಹೆಚ್ಚು ಕಮ್ಮಿ 20- 22 ವರ್ಷಗಳು . ಅಲ್ವಾ ? "

" ಅದಕ್ಕೂ ಇದಕ್ಕೂ ಏನಮ್ಮ ಸಂಬಂಧ ? "

" ಇದೆ ಕಣೋ . ಈ ಇಪ್ಪತ್ತೆರಡು ವರ್ಷಗಳಲ್ಲಿ ನನ್ನ ಜೀವನ ಹೇಗಿತ್ತು ಅಂತ ಯಾವಾಗದ್ರು ಸರಿಯಾಗಿ ಗಮನಿಸಿದ್ಯಾ ? ನಿನ್ ತಪ್ಪಿಲ್ಲ ಬಿಡು . ಕೆಲವು ವಾರಗಳ ರಜೆಗೆ ಬಂದಾಗ ಎಲ್ಲವೂ ಸರಿಯಾಗೇ ಇದ್ದಂಗೆ ಕಾಣಿಸತ್ತೆ. ಚಿಕ್ಕ ಪುಟ್ಟ ಬದಲಾವಣೆಗಳು ಕಂಡರೂ ಆ ಬಗ್ಗೆ ಯಾರೂ ಅಷ್ಟಾಗಿ ತಲೆ ಕೆಡಿಸ್ಕೊಳೋದಿಲ್ಲ . ನಾಲ್ಕು ದಿನ ಖುಷಿಯಾಗಿ ಇದ್ದು ಹೋದರಾಯ್ತು ಅಂದ್ಕೋತಾರೆ.
ನಿಂಗಾಗಿದ್ದೂ ಅದೇ . ನಿನ್ನಪ್ಪ ಮತ್ತು ನನ್ನ ನಡುವಿನ ಅಂತರ ಹೆಚ್ಚಾಗಿದ್ದು ನಿನ್ ಕಣ್ಣಿಗೆ ಯಾವತ್ತೂ ಬೀಳಲಿಲ್ಲ. ಅಥವಾ ನಾನು ಅದನ್ನ ಮರೆ ಮಾಚ್ತಾ ಇದ್ದೆ. ಆದ್ರೆ ನಾನು ಅನುಭವಿಸಿದ ನರಕ ನನಗೊಬ್ಬಳಿಗೆ ಗೊತ್ತು . "

" ಅಮ್ಮಾ, ಅಪ್ಪ ಈಗ ಇಲ್ಲ ಅಂತ ಏನೇನೋ ಮಾತಾಡ್ಬೇಡ. ಅಪ್ಪ ಯಾವತ್ತೂ ನಿನ್ನ ಮಿಸ್ ಟ್ರೀಟ್ ಮಾಡಿದ್ದು ನೋಡಿಲ್ಲ ನಾನು .ಎಲ್ಲೇ ಹೋದ್ರೂ ಯಾವಾಗಲೂ ಜೊತೇಲೆ ಹೋಗ್ತಾ ಇದ್ರಿ . ಅಪ್ಪಂಗೆ ಏನಿಷ್ಟ ಅಂತ ಅದನ್ನ ನೀನು ಮಾಡ್ತಾ ಇದ್ದೆ . ಅದೆಲ್ಲ ನೋಡಿ ನನಗೆಷ್ಟು ಖುಷಿ ಆಗ್ತಿತ್ತು ಗೊತ್ತ ನಿಂಗೆ? ಅಪ್ಪ ಒಂದಿನ ನಿಂಗೆ ಜೋರಾಗಿ ಒಂದು ಮಾತು ಹೇಳಿದ್ದು ನಾನು ಕೇಳಿಲ್ಲ. ಅಂಥಾದ್ರಲ್ಲಿ ನೀನು ಹೀಗೆ ಹೇಳ್ತೀಯಲ್ಲಮ್ಮ ? "

" ಹ್ಮ್, ಎಷ್ಟು ವಿಚಿತ್ರ ಆಲ್ವಾ? ಸ್ಟೇಜ್ ಮೇಲೆ ರಾಮಂದೋ, ಬುದ್ಧಂದೋ ಪಾತ್ರ ಮಾಡ್ತಿರೋವ್ನು ಪರದೆಯ ಹಿಂದೆ ಮೇಕಪ್ ರೂಂ ನಲ್ಲಿ ಸಿಗರೇಟ್ ಅಥ್ವಾ ಬೀಡಿ ಸೇದಿರಬಹುದು ಅಂದ್ರೆ ನಾವೂ ನಂಬೋಕೆ ತಯಾರಿರಲ್ಲ .ನಂಬೋದು ತಮ್ಮೆದುರು ಏನು ಕಾಣತ್ತೋ ಅದನ್ನ ಮಾತ್ರ . .ಕೇವಲ ಹೊಡೆದು ಬಯ್ದು ಮಾಡಿದ್ರೆ ಮಾತ್ರ ಹಿಂಸೆ ಕೊಟ್ಟಂಗೆ ಅಂತ ಯಾಕೆ ಅಂದ್ಕೋತಾರೆ ಎಲ್ರೂ ? ಜೋರಾಗಿ ಬಯ್ದೇನೂ ಬರೀ ಮೆಲು ಮಾತಲ್ಲೇ ನೋವು ಕೊಡಬಹುದು ಅನ್ನೋದು ಗೊತ್ತ ನಿಂಗೆ? ಕೈ ಎತ್ತದೇನೂ ಮನಸಿನ ಮೇಲೆ ಎಂಥಾ ಗಾಯ ಮಾಡಬಹುದು ಅನ್ನೋದು ಗೊತ್ತೇನೋ ನಿಂಗೆ ? ಎಲ್ಲರೆದುರು ಶಾಂತವಾಗಿದ್ದು ಒಳ್ಳೆತನದ ಮುಖವಾಡ ಹಾಕಿ ಹಿಂದಿಂದ ಹೇಗೆ ಚುಚ್ಚಿ ಚುಚ್ಚಿ ಚಿತ್ರಹಿಂಸೆ ಕೊಡ ಬಹುದು ಅನ್ನೋದು ಗೊತ್ತ ನಿಂಗೆ? ಇದೆಲ್ಲವನ್ನೂ ಇನ್ನೊಬ್ಬರಿಗೆ, ಅಷ್ಟೇನು ಹೆತ್ತ ಮಗನಿಗೆ ಗೊತ್ತಾಗದೆ ಇರೋ ತರ ಮುಚ್ಚಿಟ್ಟು ಬದುಕೋ ಹಿಂಸೆ ಹೇಗಿರತ್ತೆ ಗೊತ್ತಾ ನಿಂಗೆ?

ಈಗ ಇವೆಲ್ಲವುದರಿಂದ ನಂಗೆ ಬಿಡುಗಡೆ ಸಿಕ್ಕಿದದಂತಲ್ವಾ ? ಅದನ್ನ ಸೆಲೆಬ್ರೇಟ್ ಮಾಡೋದ್ರಲ್ಲಿ ಏನೂ ತಪ್ಪಿಲ್ಲ. ನನ್ನ ಗಂಡ ಅನ್ನೋ ಅಭಿಮಾನ -ಪ್ರೀತಿ ಎಲ್ಲ ಸುಟ್ಟು ಯಾವ್ದೋ ಕಾಲ ಆಗೋಗಿದೆ. ಜೊತೇಲಿ ಒಂದೇ ಮನೇಲಿ , ಉಸಿರು ಕಟ್ಟಿದಂತೆ ಆದ್ರೂ ಒಟ್ಟಿಗೆ ಬದುಕಿದ್ದು ಕೇವಲ ಮದ್ವೆ ಆಗಿದಿನಲ್ಲ ಅನ್ನೋ ಕಾರಣಕ್ಕಾಗಿ . ಸಮಾಜಕ್ಕೆ ಹೆದರಿಕೊಂಡು . ಬಿಟ್ಟು ಹೋಗೋ ಧೈರ್ಯ ಇರಲಿಲ್ಲ ನೋಡು ಅದಕ್ಕಾಗಿ . ಮಗನಿಗೆ ಅಪ್ಪ ಬೇಕಲ್ಲ ಅನ್ನೋದಕ್ಕಾಗಿ.
ಇನ್ನು ಅದ್ಯಾವ ಹಂಗೂ ಬೇಡ ನಂಗೆ. ಯಾರು ಏನು ಬೇಕಾದ್ರೂ ಅಂದಕೊಳ್ಳಿ. ಅವರ್ಯಾರೂ ನನ್ನ ಕಷ್ಟದಲ್ಲಿ ಜೊತೆಯಾಗಿಲ್ಲ. ನಂಜೊತೆ ಆಸರೆಯಾಗಿ ನಿಂತೊಳು ಶಶಿ ಮಾತ್ರ .

ನೆನಪಿಟ್ಕೋ ಶಶಾಂಕ್, ಒಬ್ಬ ಹೆಂಡತಿ, ನಲವತ್ತು ವರ್ಷಕ್ಕೂ ಹೆಚ್ಚು ಕಾಲ ಗಂಡ ಅನಿಸಿಕೊಂಡೋನು ಸತ್ತಿದ್ದನ್ನ ತನ್ನ ಬಿಡುಗಡೆ ಅಂತ ಸೆಲೆಬ್ರೇಟ್ ಮಾಡಬೇಕು ಅಂದುಕೊಳೋದು ಒಂಥರಾ ಅವಳು ಅವನಿಂದ ಅದೆಷ್ಟು ನೋವನ್ನ ಅನುಭವಿಸಿರಬಹುದು ಅನ್ನೋದನ್ನ ತೋರಿಸಲ್ವ ?

ಇದಕ್ಕಿಂತ ಜಾಸ್ತಿ ವಿವರಿಸಿ ಹೇಳೋದು ಸಾಧ್ಯ ಇಲ್ಲ ಕಣೋ. ನಾನು ನಿರ್ಧಾರ ಮಾಡಿ ಆಗಿದೆ. ಶಶಿ ಎಲ್ಲಾನೂ ಅರೇಂಜ್ ಮಾಡಿದ್ದಾಳೆ. ನಾವಿಬ್ರೂ ಹೋಗಿ ಬರ್ತೀವಿ.

ನೀವುಗಳು ಅರ್ಥ ಮಾಡ್ಕೋತೀರಾ ಅಂದುಕೊತೀನಿ "

ಜಾಹ್ನವಿ ನಿಧಾನವಾಗಿ ಎದ್ದು ತಮ್ಮ ರೂಮಿಗೆ ನಡೆದರು.

ಶಶಾಂಕ್ ಹಾಗೂ ರಶ್ಮಿ ನಂಬಲಾರದವರಂತೆ ಅವರನ್ನೇ ನೋಡುತ್ತಾ ಕುಳಿತಿದ್ದರು.

No comments: