November 24, 2023

ಸಾಗುತಿರಲಿ ಬದುಕು...


ಕೈಲಿ ಬಿಸಿ ಕಾಫಿಯ ಕಪ್ ಹಿಡಿದು ಎಂದಿನಂತೆ ಆ ಕಲ್ಲು ಬೆಂಚಿನ ಮೇಲೆ ಕುಳಿತಾಗ ಅದಾಗಲೇ ಎದುರಿಗಿರುವ ಕೆರೆಯ ನೀರಿನ ಜೊತೆ ಮುಳುಗುತ್ತಿರುವ ಸೂರ್ಯ ಹೊರಡುವ ಮುನ್ನ ಕಡೆಯ ಸಲ ಎಂಬಂತೆ ಚೆಲ್ಲಾಟ ವಾಡುತ್ತಿದ್ದ. ಅವನ ತುಂಟಾಟಕ್ಕೋ ಎಂಬಂತೆ ಕೆರೆಯಲ್ಲ ಕಂಡೂ ಕಾಣದಂಥ ಅಲೆಗಳು ನಾಚಿ ಕೆಂಪಾಗುತ್ತಿದ್ದವು .
ಬಿಸಿ ಕಾಫಿ ಗಂಟಲಲ್ಲಿ ಇಳಿಯುತ್ತಾ ಹಿತವೆನಿಸುತ್ತಿದ್ದಂತೆ ಅವಳ ಕೈ ಅಯಾಚಿತವಾಗಿ ಬೆಂಚಿನಲ್ಲಿ ತನ್ನ ಪಕ್ಕದ ಖಾಲಿ ಜಾಗವನ್ನು ನೇವರಿಸಿತು. ಕೆರೆಯ ಮೇಲಿಂದ ಬೀಸಿ ಬಂದ ತಂಪು ಗಾಳಿಗೆ ಮೈ ಒಮ್ಮೆ ಸಣ್ಣಗೆ ನಡುಗಿತು. ಮೊದಲಾದರೆ ಇಂಥಾ ಸಂಜೆಗಳಲ್ಲಿ ಬೆಚ್ಚಗೆ ಬಳಸಿ ಕೂರಲು ಅವನಿರುತ್ತಿದ್ದ .
ವೀಕೆಂಡ್ ಗಳಲ್ಲಿ ಸಂಜೆಗೂ ಮೊದಲು ಇಲ್ಲಿ ಬಂದು ಇದೆ ಬೆಂಚ್ ನ ಮೇಲೆ ಕುಳಿತು ಕತ್ತಲಾಗುವವರೆಗೂ ಮಾತನಾಡುತ್ತ , ಕೆಲವೊಮ್ಮೆ ಒಬ್ಬರನ್ನೊಬ್ಬರು ಬಳಸಿ ಮೌನವಾಗಿ ಮುಳುಗುವ ಸೂರ್ಯನನ್ನು ನೋಡುತ್ತಾ ಕುಳಿತುಕೊಳ್ಳುವುದನ್ನು ಅವನೇ ಕಲಿಸಿದ್ದ .
ಬೆಳ್ಳಿಯಂತೆ ಹೊಳೆಯುವ ನೀರು ಮೆಲ್ಲಗೆ ಬಣ್ಣ ಬದಲಾಯಿಸುತ್ತಾ , ಕೆಂಪಾಗುತ್ತಾ ಕೊನೆಗೆ ಕಪ್ಪಾಗುವ , ಆ ಕತ್ತಲಲ್ಲಿ ಕೆರೆಯಾಚೆ ಈಚೆಗಿನ ಕಟ್ಟಡಗಳ , ದೀಪಗಳು, ಬೀದಿ ದೀಪಗಳು ಹೊತ್ತಿಕೊಂಡು ಆ ಕಪ್ಪು ನೀರಲ್ಲಿ ಪ್ರತಿಫಲಿಸುವವರೆಗೂ ಆ ಬೆಂಚ್ ನ ಮೇಲಿಂದ ಏಳುತ್ತಿರಲಿಲ್ಲ ಅವರು. ಆಮೇಲೆ ಕೈ ಹಿಡಿದು ಅಷ್ಟು ದೂರ ನಿಧಾನವಾಗಿ ವಾಕ್ ಮಾಡಿ ಮರಳುವುದು ಅಭ್ಯಾಸ. ಆ ನಡುವೆ ಅಲ್ಲೇ ಹುಟ್ಟಿಕೊಂಡಿದ್ದ ಪುಟ್ಟ ಹೋಟೆಲ್ ನಲ್ಲಿ ಚಹಾ ಅಥವಾ ಕಾಫಿ ಕುಡಿದು ಕಲ್ಲು ಬೆಂಚ್ ನ ಕಡೆ ಹೋಗುವುದು ರೂಢಿಯಾಯಿತು .
ಅವರಿಬ್ಬರನ್ನು ಪ್ರತಿ ವಾರಾಂತ್ಯದಲ್ಲಿ , ಕೆಲವೊಮ್ಮೆ ವಾರದ ದಿನಗಳಲ್ಲೂ ನೋಡಿ ಅಂಗಡಿಯವರಿಗೂ ಅಭ್ಯಾಸವಾಯಿತು. ಮಳೆಗಾಲದಲ್ಲೂ ತಪ್ಪದೆ ಬರುವ ಅವರು ಆ ಟೀ ಸ್ಟಾಲ್ ನ ಹೊರಮೂಲೆಯ ಇಬ್ಬರೆ ಕುಳಿತುಕೊಳ್ಳುವ ಟೇಬಲ್ ನ ಕಾಯಂ ಗಿರಾಕಿಗಳಾಗಿ ಬಿಟ್ಟರು. ಪರಿಚಯ ಮುಗುಳ್ನಗುವಿನಿಂದ ಹೇಗಿದೀರಾ ಸಾರ್ ಎನ್ನುವವರೆಗೆ, ಕೊನೆಗೆ ಆ ಟೀ ಸ್ಟಾಲ್ ನವನ ಮದುವೆಗೆ ಅಟೆಂಡ್ ಆಗುವವರೆಗೂ ಬೆಳೆಯಿತು .
ಅವನ ಹೆಂಡತಿಯೂ ಬಂದ ಮೇಲೆ , ಕೇವಲ ಟೀ/ ಕಾಫಿ ಬಿಸ್ಕಟ್ ಸಿಗುತ್ತಿದ್ದ ಸ್ಟಾಲ್ ನಲ್ಲಿ , ಬಿಸಿ ಮೆಣಸಿನಕಾಯಿ ಭಜಿ, ಈರುಳ್ಳಿ ಪಕೋಡಾ , ಮಸಾಲೆ ಮಂಡಕ್ಕಿಗಳು ಜನಪ್ರಿಯವಾಗ ತೊಡಗಿ ಗಿರಾಕಿಗಳೂ ಹೆಚ್ಚಾದರು . ಆದರೂ ಇವರಿಬ್ಬರಿಗೂ ಇದ್ದ ವಿಶೇಷ ಸ್ಥಾನ ಬದಲಾಗಲಿಲ್ಲ .
ಹೋಟೆಲ್ ನ ದಂಪತಿಗೆ ಮಗುವೂ ಆಯಿತು . ಮಗುವಿಗೆ ಎರಡು ತಿಂಗಳಾಗುತ್ತಲೇ ಅವಳು ಶಿಶುವನ್ನು ಕಟ್ಟಿಕೊಂಡು ಕೆಲಸ ಶುರು ಮಾಡಿದ್ದಳು.
ಕೇಳಿದಾಗ, ಅಯ್ಯೋ ಅಕ್ಕ, ಇಲ್ಲಿ ಒಬ್ರೇ ಆದ್ರೆ ವ್ಯಾಪಾರ ಕಮ್ಮಿ ಆಗೋಗತ್ತೆ. ಮಗಿನ್ನ ನೋಡ್ಕೊಳೋಕೆ ಮನೇಲಿ ಯಾರು ಇಲ್ಲ . ಅದಕೆ ಇಲ್ಲೇ ಕರ್ಕೊಂಡ್ ಬರ್ತೀನಿ ಅಕ್ಕಾ ಎಂದಿದ್ದಳು ನಗುತ್ತಲೇ .
ಇದ್ದಕ್ಕಿದ್ದಂತೆ ಒಂದು ವೀಕೆಂಡ್ ಅವರಿಬ್ಬರೂ ಬರಲೇ ಇಲ್ಲ . ಅದರ ನಂತರದ ವೀಕೆಂಡಲ್ಲೂ ಅವರು ಕಾಣಿಸಲಿಲ್ಲ ! ಇನ್ನೂ ಕೆಲವು ವಾರಗಳು ಅವರಿಬ್ಬರ ಪತ್ತೆಯೇ ಇಲ್ಲದೆ ಕಳೆದವು !
ಅಂದು ಟೀ ಸ್ಟಾಲ್ ನಲ್ಲಿ ಸಿಕ್ಕಾಪಟ್ಟೆ ರಶ್ ಇತ್ತು. ಕೊನೆಯಲ್ಲಿ ಪಾತ್ರೆ ತೊಳೆದು ಟೇಬಲ್ ಎತ್ತಿಡುತ್ತಿರುವಾಗ ಟೀ ಸ್ಟಾಲ್ ನವನ ಹೆಂಡತಿ ಆ ಬಗ್ಗೆ ಗಂಡನ ಗಮನ ಸೆಳೆದಳು . ಏನೋ ತೊಂದರೆ ಆಗಿರಬಹುದು ಕಣೆ , ಊರಿಗೆ ಹೋಗಿರಬಹುದು , ತುಂಬಾ ಕೆಲ್ಸನೂ ಏನೋ, ಮದ್ವೆ ಆಗಿ ಹನೀಮೂನ್ ಗೆ ಹೋಗಿರಬಹುದು ಎಂದು ಗಂಡ ನಕ್ಕ !
ಮದ್ವೆ ಆದ್ರೆ ನಮಗೆ ಹೇಳ್ತಿರಲಿಲ್ವೇನ್ರಿ? ಏನಾದ್ರೂ ಹುಷಾರಿಲ್ವೇನೋ .. ಹೆಂಡತಿ ಕೊನೆಯ ಸಾಧ್ಯತೆಯ ಬಗ್ಗೆ ಹೇಳುವಾಗ ಒಮ್ಮೆಲೇ ಅವರಿಬ್ಬರೂ ಕಳವಳಗೊಂಡರು.
ಇನ್ನೂ ಎರಡು ವೀಕೆಂಡ್ ಕಳೆದರೂ ಪತ್ತೆ ಇಲ್ಲದಾಗ ಟೀ ಅಂಗಡಿಯವನೂ , ಅವನ ಹೆಂಡತಿಯೂ ಗಾಬರಿಯಾಗತೊಡಗಿದರು.ಅವರಿಗೂ ಏನೋ ತಳಮಳ . ಅವ್ರ ಫೋನ್ ನಂಬರ್ ಕೂಡ ತಮಗೆ ಗೊತ್ತಿಲ್ಲವಲ್ಲ ಎಂಬ ಅಪರಾಧಿ ಪ್ರಜ್ಞೆ !
ಪೂರ್ತಿ ಐದು ತಿಂಗಳುಗಳ ಮೇಲೆ ಅವಳು ಬಂದಳು . ಒಬ್ಬಳೇ. ಒಂದು ಸ್ಟ್ರಾಂಗ್ ಕಾಫಿ ಕೊಡು ಎನ್ನುವಾಗ ಅವಳ ಮುಖದಲ್ಲಿ ಬೇರೇನೂ ಕೇಳಬೇಡ ಪ್ಲೀಸ್ ಎಂಬ ಭಾವ ವಿತ್ತು. ಮಾಮೂಲು ಟೇಬಲ್ ಗೆ ಹೋಗಿ ಕುಳಿತು ಮುಳುಗುತ್ತಿದ್ದ ಸೂರ್ಯನತ್ತ ದೃಷ್ಟಿ ನೆಟ್ಟು ನಿಧಾನವಾಗಿ ಕಾಫಿ ಹೀರುತ್ತಿದ್ದವಳನ್ನು ಗಂಡ ಹೆಂಡತಿ ಇಬ್ಬರೂ ಕದ್ದು ಕದ್ದು ನೋಡುತ್ತಿದ್ದರು . ಆಳಕ್ಕಿಳಿದಿದ್ದ ಕಣ್ಣುಗಳು , ಬಾಡಿದ್ದ ಮುಖ , ಸೋತು ಹೋದಂತಿದ್ದ ಭಾವ ಯಾಕೋ ಎಲ್ಲವೂ ಸರಿ ಇಲ್ಲ ಎಂಬುದನ್ನು ಎದ್ದು ಹೇಳುತ್ತಿದ್ದವು . ಕೇಳುವುದೋ ಬೇಡವೋ ಎಂಬ ದ್ವಂದ್ವ .
ಮರುದಿನವೂ ಒಬ್ಬಳೇ ಬಂದಳು . ರಶ್ ಇತ್ತು. ಮಾಮೂಲು ಟೇಬಲ್ ಕೂಡ ಖಾಲಿ ಇರಲಿಲ್ಲ.
ಅಕ್ಕಾ, ನೀವು ಆ ಬೆಂಚ್ ಲ್ಲಿ ಕೂತಿರಿ . ನಾನು ಅಲ್ಲೇ ಕಳಿಸ್ತೀನಿ ಎಂದ ಅಂಗಡಿಯವನು.
ಅವಳು ಒಲ್ಲದ ಮನಸಿಂದ ಕಾಲೆಳೆಯುತ್ತಾ ಹೋಗಿ ಬೆಂಚ್ ಮೇಲೆ ಕುಳಿತಳು . ಪಕ್ಕದ ಜಾಗವನ್ನು ನೇವರಿಸುತ್ತಾ , ಸ್ವಲ್ಪ ಹೊತ್ತಿಗೆ ಹುಡುಗನೊಬ್ಬ ಕಾಫಿ ತಂದುಕೊಟ್ಟ .
ಮತ್ತೆ ಮುಂದಿನ ಪ್ರತಿ ವೀಕೆಂಡ್ ಗೂ ಅವಳು ಬಂದಳು . ಒಬ್ಬಳೇ !
ಅವಳು ಹೋಗಿ ಕಲ್ಲುಬೆಂಚ್ ನ ಮೇಲೆ ಕುಳಿತುಕೊಳ್ಳುವುದೂ ,ಅಲ್ಲಿಗೆ ಕಾಫೀ ಬರುವುದೂ , ಹೊರಡುವಾಗ ಕಾಫೀ ಲೋಟ ಹಾಗೂ ದುಡ್ಡನ್ನು ಗಲ್ಲ ಪೆಟ್ಟಿಗೆಯ ಮೇಲೆ ಅವಳು ಇಟ್ಟು ವಾಪಸಾಗುವುದೂ ನಡೆಯುತ್ತಲೇ ಇತ್ತು. ಏನಾಯ್ತು ಎಂದು ಎಷ್ಟೋ ಸಲ ಕೇಳಬೇಕೆನಿಸಿದರೂ , ಗಂಡ ಹೆಂಡತಿ ಸುಮ್ಮನಾಗುತ್ತಿದ್ದರು. ಮೊದಮೊದಲು ಸೋತಂತಿದ್ದ ಅವಳ ಮುಖ ನಿಧಾನವಾಗಿ ಚೇತರಿಸಿಕೊಳ್ಳುತ್ತಿದುದನ್ನು ನೋಡಿ ಅವರಿಗೆ ಗಾಯವನ್ನು ಕೆದಕುವ ಮನಸಾಗುತ್ತಿರಲಿಲ್ಲ . ಅದೆಷ್ಟೋ ವಾರಗಳು ಹೀಗೆ ಕಳೆದವು.
ಕೊನೆಗೊಂದು ದಿನ ತೀರಾ ಬಸವಳಿದಂತೆ ಕಾಣುತ್ತಿದ್ದವಳು ಎಂದಿಗಿಂತ ತಡವಾಗಿ ಬಂದಳು . ಅಂಗಡಿಯಿಂದ ನೋಡುತ್ತಿದ್ದ ಇಬ್ಬರಿಗೂ ಅವಳು ಪದೇ ಪದೇ ಕಣ್ಣೊರೆಸಿಕೊಳ್ಳುತ್ತಿದ್ದಾಳೆ ಎಂದು ಅನಿಸುತ್ತಿತ್ತು . ತೀರಾ ಕತ್ತಲಾದರೂ ಅವಳು ಏಳದಾಗ , ಹೆಂಡತಿ ಬೆಂಚ್ ನ ಬಳಿ ಹೋದಳು .
ಕಾಲುಗಳನ್ನು ಮಡಚಿ ಮೇಲಿಟ್ಟುಕೊಂಡು ಎರಡೂ ಕೈಯಿಂದ ಕಾಲುಗಳನ್ನು ಬಳಸಿ ಮಂಡಿಯಮೇಲೆ ಗಲ್ಲವೂರಿ ಶೂನ್ಯದಲ್ಲಿ ದೃಷ್ಟಿ ನೆಟ್ಟವಳಿಗೆ ತನ್ನೆದುರು ಟೀ ಅಂಗಡಿಯವನ ಹೆಂಡತಿ ಬಂದು ಕುಳಿತಿದ್ದೂ ಅರಿವಿರಲಿಲ್ಲ.
ಅವಳು ಮೆಲ್ಲಗೆ " ಅಕ್ಕಾ" ಎಂದಾಗ ಎಚ್ಚರಾಯಿತು. " ಅಕ್ಕಾ ಏನಾಯ್ತಕ್ಕಾ ? ತುಂಬಾ ಬೇಜಾರಲ್ಲಿದೀರಾ. ನಿಮಗೆ ಪರವಾಗಿಲ್ಲ ಅಂದರೆ ನಂಗೆ ಹೇಳಿ ಅಕ್ಕಾ ... "
ಕೆಲವು ಸೆಕೆಂಡ್ಗಳು ಅವಳ ಮುಖ ನೋಡಿದ ಈಕೆ , "ರಾಧಾ" ಎಂದು ಟೀ ಸ್ಟಾಲ್ ನವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಕ್ಕ ತೊಡಗಿದಳು . ಗಾಬರಿಯಾದ ರಾಧಾ .. ಮೆಲ್ಲಗೆ ಬೆನ್ನು ನೇವರಿಸಿದಳು .
" ಅವನು ನನ್ನ ಬಿಟ್ಟು ಹೋಗಿಬಿಟ್ಟ ಕಣೇ.,..." ಬಿಕ್ಕು ಹೆಚ್ಚಾಯಿತು.
ರಾಧಾಗೆ ಏನೂ ಅರ್ಥವಾಗದೇ , ಏನು ಹೇಳಬೇಕೋ ತಿಳಿಯದೆ ಸುಮ್ಮನೆ ನಿಂತಳು.
"ಇಲ್ಲ, ಅವನಾಗೆ ಹೋಗಲಿಲ್ಲ. ನನ್ನ ದುರ್ದೈವ ಕಿತ್ಕೊಳ್ತು. " ಮತ್ತೆ ಬಿಕ್ಕಿದಳು.
"ಅಕ್ಕಾ "….. ಮುಂದೇನೂ ಹೇಳಲಾಗದೆ ರಾಧಾ ತಡವರಿಸಿದಳು.
" ಅಪ್ಪ ಅಮ್ಮನ ಹತ್ರ ನಮ್ ವಿಷಯ ಹೇಳ್ತೀನಿ ಅಂತ ಊರಿಗೆ ಹೋದ. ಹೋಗೋವಾಗ ಬಸ್ ಆಕ್ಸಿಡೆಂಟ್ ಲ್ಲಿ…… " ಬಿಕ್ಕಿದಳು.
" ಕೊನೇ ಬಾರಿಗೆ ಅವನ ಮುಖ ನೋಡೋಕೂ ಆಗಲಿಲ್ಲ. ಬದುಕಿದರೂ ಪ್ರತಿ ದಿನವೂ ಸಾಯ್ತಾ ಇದೀನಿ. ಇವತ್ತು ಅವನ ಹುಟ್ಟು ಹಬ್ಬ ಆಗಿತ್ತು , ಆದ್ರೆ.... " ಅವಳ ಬಿಕ್ಕು ಹೆಚ್ಚಾಯಿತು.
ಏನು ಹೇಳುವುದೋ ತಿಳಿಯದೇ ರಾಧಾ ಒಮ್ಮೆ ಸ್ತಬ್ಧವಾದಳು. ಮೆಲ್ಲಗೆ “ ಅಕ್ಕಾ., ಏನು ಮಾಡೋದು? ಎಲ್ಲ ನಮ್ಮ ಹಣೆಬರಹ! ದೇವರಿಗೆ ಕರುಣೆ ಇಲ್ಲ “ ಸಮಾಧಾನಿಸುವ ಪ್ರಯತ್ನ ಮಾಡಿದಳು.
ಅಂದು ಅವರು ಗಂಡ ಹೆಂಡತಿ ಇಬ್ಬರೂ ತಮ್ಮವರೇ ಯಾರನ್ನೋ ಕಳೆದುಕೊಂಡಂತೆ ಅವಳ ದುಃಖದಲ್ಲಿ ಪಾಲುದಾರರಾದರು.
ದಿನ ಉರುಳುತ್ತಿತ್ತು.
ಒಂದು ತಂಪಾದ ಸಂಜೆ ಕಾಫಿ ತೆಗೆದುಕೊಂಡು ಹೋದ ರಾಧಾ ಅವಳ ಪಕ್ಕ ಕುಳಿತು
“ ಅಕ್ಕಾ, ನಿಮಗೆ ಹೇಳೋ ಜಾಗದಲ್ಲಿ ನಾನಿಲ್ಲ. ಆದ್ರೂ ನೀವು ನಮಗೆ ಒಂಥರಾ ಮನೆ ಜನ ಇದ್ದಂಗೆ ಆಗಿದೀರಾ . ಅದ್ಕೆ ಹೇಳ್ತಿದೀನಿ, ಹೋಗೋರು ಹೋಗಿಬಿಟ್ರು. ಆದ್ರೆ ನೀವು ಹೀಂಗೆ ಬೇಜಾರಲ್ಲೇ ಇರ್ತೀನಿ ಅಂದ್ರೆ ಸರೀನಾ? ನಾವೂ ಕೂಡ ಹಳೇದನ್ನ ಹಿಂದೆ ಬಿಟ್ಟು ಮುಂದ್ ಹೋಗೋದನ್ನ ಕಲೀಬೇಕು ಅಲ್ವಾ? "
ಅವಳು ರಾಧಾಳ ಮುಖವನ್ನೇ ದಿಟ್ಟಿಸಿದಳು.
" ಅಕ್ಕಾ, ಅವರನ್ನ ವಾಪಸ್ ತರೋಕೆ ಆಗಲ್ಲ. ಅವರಿಗಾಗಿ ಜೀವನ ಇಡೀ ಕಣ್ಣೀರು ಹಾಕಿದ್ರೆ, ಅವರ ಆತ್ಮಕ್ಕೆ ಶಾಂತಿ ಸಿಗುತ್ತಾ? ನೀವೂ ಹೊಸದಾಗಿ ಬದುಕು ಶುರು ಮಾಡಿ ಅಂತ ನಾನು ಹೇಳೋದು ಅಕ್ಕಾ. “
ಅವಳು ಮೌನವಾಗಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತಳು. ಜೀವವಿಲ್ಲದ ದನಿಯಲ್ಲಿ “ ರಾಧಾ, ಅಷ್ಟು ಸುಲಭನೇನೆ ?ನಾಲ್ಕು ವರ್ಷ ಒಟ್ಟಿಗೆ ಇದ್ವಿ. ಮುಂದೆ ಹೇಗಿರಬೇಕು, ಏನ್ ಮಾಡಬೇಕು ಅಂತೆಲ್ಲ ಇಬ್ರೂ ಒಟ್ಟಿಗೆ ಕನಸು ಕಂಡಿದ್ವಿ. ಈಗ ನಡುವೇನೆ ಅವ್ನು ಬಿಟ್ಟು ಹೋಗ್ಬಿಟ್ಟ. ಅವನ ಹಿಂದೇನೆ ಎಲ್ಲಾನೂ ಮರ್ತು ಬಿಡು ಅಂದ್ರೆ ಆಗತ್ತಾ? “
"ಹಾಗಲ್ಲ ಅಕ್ಕಾ, ಅಣ್ಣನ್ನ ಮರ್ತು ಬಿಡಿ ಅಂದಿಲ್ಲ ನಾನು. ಆದ್ರೆ ನೀವು ಬದುಕೊದನ್ನ ಮರೀಬೇಡಿ ಅಂದೆ. ಅವರ ನೆನಪನ್ನು ಜೊತೆಗಿಟ್ಟುಕೊಂಡು ನೀವು ಹೊಸದಾಗಿ ಜೀವನ ಶುರು ಮಾಡಬಹುದಲ್ವ? ಅಣ್ಣನ ಆತ್ಮಕ್ಕೂ ನೆಮ್ಮದಿ ಆಗಬಹುದಲ್ಲವ? ಪ್ರಯತ್ನ ಮಾಡಿ ಅಕ್ಕಾ . "
ಅವಳು ನಿಟ್ಟುಸಿರಿಟ್ಟಳು.
ಮುಂದಿನ ದಿನಗಳಲ್ಲಿ ನಿಧಾನವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡಿತು. ಆಕೆಯ ಮುಖದಲ್ಲಿ ಸಣ್ಣ ನಗು ಕಾಣತೊಡಗಿತು. ಹೋಟೆಲ್ ನವನು ಅವನ ಹೆಂಡತಿ ಸಮಾಧಾನದ ಉಸಿರು ಬಿಟ್ಟರು.
ಒಂದು ಸಂಜೆ , ಕಾಫಿ ಲೋಟ ಮರಳಿಸ ಬಂದವಳು ರಾಧಳನ್ನು ನೋಡಿ ಏನೋ ಹೊಳೆದಂತೆ
"ರಾಧಾ, ಇಷ್ಟು ಬೇಗ ಎರಡನೇದಾ ? ಮೊದಲಿನದು ಗಂಡು ಅಲ್ವ? ಎಲ್ಲಿ ಕಾಣ್ತಾ ಇಲ್ಲ? ತುಂಬಾ ದಿನದಿಂದ ನೋಡೇ ಇಲ್ಲ ನಾನು ? "
"ಅದೂ… ಅಕ್ಕಾ, ಹೌದು ಗಂಡು ಮಗು . ಆದ್ರೆ ಹುಟ್ಟಿ ನಾಲ್ಕನೇ ತಿಂಗಳಲ್ಲಿ ಅದೇನೋ ಜ್ವರ ಬಂದಿದ್ದೇ ನೆಪ ಆಗಿ ಹೋಗ್ಬಿಟ್ಟ. ಏನು ಅಂತ ಗೊತ್ತಾಗೊದ್ರೊಳಗೆ ಹೋಗಿಬಿಟ್ಟ . ಸರಿಯಾಗಿ ಟ್ರೀಟಮೆಂಟ್ ಕೂಡ ಕೊಡ್ಸೋಕೆ ಆಗ್ಲಿಲ್ಲ ಅಕ್ಕಾ. " ರಾಧಾ ಳ ಕಣ್ಣಲ್ಲಿ ನೀರು ತುಂಬಿತ್ತು.
ಮರು ಕ್ಷಣವೇ, “ತುಂಬಾ ದಿನ ಅತ್ತೆ ಅಕ್ಕ, ಎಷ್ಟಂದ್ರು ಹೆತ್ತ ಕರುಳು ಅಲ್ವಾ? ನಿಧಾನವಾಗಿ ನೋವು ಕಮ್ಮಿ ಆಯ್ತು. ಪೂರ್ತಿ ಹೋಗೋ ನೋವಲ್ಲ ಅದು. ಆದ್ರೆ, ಅಲ್ಲಿಗೆ ನನ್ ಜೀವ್ನ ಮುಗೀತು ಅನಿಸಲಿಲ್ಲ. ಮತ್ತೊಂದು ಮಗು ಮಾಡ್ಕೊಂಡು ಕಣ್ಣು ರೆಪ್ಪೇಲಿ ಇಟ್ಟು ನೋಡ್ಕೋತೀವಿ ಅಂತ ನಿರ್ಧಾರ ಮಾಡಿದ್ವಿ. ಈಗ ನೋಡಿ ಇನ್ನೊಂದು 5 ತಿಂಗಳು ಅಷ್ಟೇ. ಪ್ರೀತಿಯಿಂದ ಹೊಟ್ಟೆ ನೇವರಿಸಿ ಕೊಂಡಳು.
ಈಗ ಇವಳಿಗೆ ಏನು ಹೇಳುವುದೋ ತಿಳಿಯದೇ, ಸಪ್ಪೆ ನಗು ನಕ್ಕು ರಾಧಾಳ ಕೆನ್ನೆಯನ್ನು ಮೃದುವಾಗಿ ತಟ್ಟಿದಳು.
ಕಾಲ ಯಾರನ್ನೂ ಕಾಯುವುದಿಲ್ಲ ಓಡುತ್ತಲೇ ಇರುತ್ತದೆ.
ಅವನು ಸತ್ತು ಒಂದು ವರ್ಷವೇ ಕಳೆಯಿತು. ಅವಳು ಮಾತ್ರ ತಪ್ಪದೆ ಬರುತ್ತಾಳೆ. ರಾಧಾ ತುಂಬು ಬಸುರಿ ಆದರೂ ಇವಳಿಗೆ ತಾನೇ ಕಾಫಿ ತಂದು ಕೊಡುತ್ತೇನೆ ಎಂದು ಹಠ ಮಾಡುತ್ತಾಳೆ. ಅವಳ ಪಕ್ಕ ಬೆಂಚ್ ಮೇಲೆ ಕುಳಿತು ಸ್ವಲ್ಪ ಹೊತ್ತು ಸುಖ ದುಃಖ ಹಂಚಿ ಕೊಳ್ಳುತ್ತಾಳೆ .
ಅಂದೂ ಕೂಡ ಹಾಗೆಯೇ ಹರಟೆ ಆದ್ಮೇಲೆ “ ಅಕ್ಕಾ, ನಾಳೆಯೇ ಲಾಸ್ಟ್ . ಆಮೇಲೆ ನಾನೂ ಹೆರಿಗೆ ರಜ ತೊಗೋತೀನಿ . ನೀವು ನಾಳೆ ಸ್ವಲ್ಪ ಹೊತ್ತಿಗಾದರೂ ಸರಿ ಬಂದು ಹೋಗಿ “ ಎಂದಳು .
"ಅಷ್ಟು ಬೇಗ ಹೆರಿಗೆ ದಿನಾನು ಬಂತೇನೆ ? ಯಾವ ಆಸ್ಪತ್ರೆಗೆ ಹೋಗ್ತೀಯಾ? "
"ಇಲ್ಲೇ ಹತ್ರ ಪ್ರಶಾಂತಿ ನರ್ಸಿಂಗ್ ಹೋಂ ಅಕ್ಕಾ . ಗೋಪಿಗೂ ಬಂದು ಹೋಗೋದಕ್ಕೆ ಅನುಕೂಲ . ಎಲ್ಲಾ ಸರಿ ಆದ್ರೆ ಸಾಕು ಅಕ್ಕಾ. "
"ಎಲ್ಲ ಸರಿ ಆಗತ್ತೆ . ಯೋಚನೆ ಮಾಡಬೇಡ. ನಾನು ನಾಳೆ ಬರ್ತೀನಿ . "
ಮರುದಿನ ಸಂಜೆ ಅವಳು ಎಂದಿಗಿಂತ ಬೇಗನೆ ಬಂದಳು. ಆದರೆ ಹೋಟೆಲ್ ನಲ್ಲಿ ಗೋಪಿ ಮತ್ತು ರಾಧಾ ಇಬ್ಬರು ಕಾಣಲಿಲ್ಲ.
ಅಲ್ಲಿದ್ದ ಹುಡುಗ ಹೇಳಿದ “ ರಾಧಕ್ಕಂಗೆ ರಾತ್ರೆನೆ ಅಡ್ಮಿಟ್ ಮಾಡಿದ್ರು. ಡೆಲಿವರಿ ಆಯ್ತೋ ಇಲ್ವೋ ಗೊತ್ತಿಲ್ಲ ಅಕ್ಕ “
ತಕ್ಷಣ ಅವಳು ನರ್ಸಿಂಗ್ ಹೋಂ ಹುಡುಕಿಕೊಂಡು ಹೊರಟಳು. ಒಳಹೊಕ್ಕು ರಿಸೆಪ್ಶನ್ ಲ್ಲಿ ವಿಚಾರಿಸುವಾಗ ಗೋಪಿ ಕಂಡ.
ಮುಖ ಅರಳಿಸಿಕೊಂಡು ಬಂದವನು “ ಅಕ್ಕಾ, ಹೆಣ್ಣು ಮಗು ಆಯ್ತು. ಬೆಳಿಗ್ಗೆ . ಇಬ್ರೂ ಹುಷಾರಾಗಿದಾರೆ . ಬನ್ನಿ " ಎಂದು ವಾರ್ಡ್ ಗೆ ಕರೆದೊಯ್ದ.
ರಾಧಾ ಮಲಗಿದಲ್ಲಿಂದಲೇ ನಕ್ಕಳು . ಪಕ್ಕದ ತೊಟ್ಟಿಲಲ್ಲಿ ಮಗು ನಿದ್ರಿಸುತ್ತಿತ್ತು.
ಮಗುವನ್ನು ನೋಡಿ , ರಾಧಾ ಬಳಿ ಹೋಗಿ ಕೆನ್ನೆ ತಟ್ಟಿದಳು , ಅಷ್ಟರಲ್ಲೇ ಮೊಬೈಲ್ ರಿಂಗಣಿಸಿತು. ಹೊರ ಹೋಗಿ ಮಾತನಾಡಿ ಬಂದವಳು ,
“ ರಾಧಾ, ತುಂಬಾ ಮುದ್ದಾಗಿದಾಳೆ ಮಗಳು “ ಎಂದಳು .
“ ಜಾಸ್ತಿ ಕಷ್ಟ ಇಲ್ದೆ ಹೆರಿಗೆ ಆಯಿತು. ಮಗೂನು ಆರೋಗ್ಯವಾಗಿದೆ ಅಂದ್ರು ಡಾಕ್ಟರ್. ತುಂಬಾ ಸಮಾಧಾನ ಆಯ್ತಕ್ಕಾ. . ಈಗ ನೀವು ನೋಡೋಕೆ ಅಂತ ಅಸ್ಪತ್ರೆ ಹುಡಿಕ್ಕಂಡು ಬಂದ್ರಿ . ಇನ್ನೂ ಖುಷಿ ಅಕ್ಕ ನಂಗೆ “
ಅಷ್ಟರಲ್ಲಿ ಬಾಗಿಲ ಬಳಿ ಯಾರೋ ಬಂದಂತಾಯ್ತು.
“ರಾಧಾ, ನಿಂಗೆ ಇನ್ನೂ ಸ್ವಲ್ಪ ಖುಷಿ ಪಡಿಸೋಣ ಅಂತ ….. ಇವರು ಸೂರಜ್. ನನ್ನ ಜೊತೆ ಕೆಲಸ ಮಾಡ್ತಾರೆ . ನೀನು ಎಷ್ಟೋ ಸಲ ಹೇಳಿದ್ದೆ ಅಲ್ವ ? ನೆನಪುಗಳ ಜೊತೆ ನಿಂತು ಬಿಡಬಾರದು ಅಂತ ? ಅದಕ್ಕೆ, ನಾನು ಆ ನೆನಪುಗಳನ್ನ ಜೊತೇಲಿ ಇಟ್ಕೊಂಡು ಇವರ ಜೊತೆ ಮುಂದೆ ನಡೆಯೋದು ಅಂತ ತೀರ್ಮಾನ ಮಾಡಿದೀನಿ . ಖುಷಿನಾ?"
ಗೋಪಿಯ ನಗು ದೊಡ್ದವಾಯ್ತು . ರಾಧಾಳ ಕಣ್ಣ ರಳಿತು ಇವಳ ಕೈಯನ್ನು ಬಿಗಿಯಾಗಿ ಹಿಡಿದು ಮನ ಬಿಚ್ಚಿ ನಕ್ಕಳು.

No comments: