ನನ್ನ ಅಜ್ಜಿ ನಮಗಷ್ಟೇ ಅಲ್ಲದೇ ಇಡೀ ಊರಲ್ಲಿ ಎಲ್ಲರಿಗೂ ’ ಅಬ್ಬೆ " ಎಂದೇ ಪರಿಚಿತ. ಮಕ್ಕಳೆಲ್ಲ ಚೆನ್ನಾಗಿ ಕಲಿತು , ಬೇರೆ ಬೇರೆ ಊರುಗಳಲ್ಲಿ ಒಳ್ಳೊಳ್ಳೇ ಕೆಲಸದಲ್ಲಿದ್ದ ಬಗ್ಗೆ ಅವಳಿಗೆ ತುಂಬಾ ಹೆಮ್ಮೆ . ಹಾಗೇ ಇಂಗ್ಲಿಷ್ ವಾರ್ತೆ ಕೇಳುವ , ಇಂಗ್ಲಿಷ್ ಪೇಪರ್ ಓದಬಲ್ಲ ಮಕ್ಕಳಿರುವಾಗ ತಾನೂ ಅಷ್ಟಿಷ್ಟಾದರೂ ಇಂಗ್ಲಿಷ್ ಬಳಸದಿದ್ದರೆ ಹೇಗೆ ಎಂಬುದು ಅಬ್ಬೆಯ ಅನಿಸಿಕೆ. ಹೀಗಾಗಿ , ಅವಕಾಶ ಸಿಕ್ಕಿದಾಗೆಲ್ಲ ಇಂಗ್ಲಿಷ್ ಬಳಸುತ್ತಿದ್ದಳು. ಅವಳದೇ ರೀತಿಯಲ್ಲಿ ! ಅವಳ ಇಂಗ್ಲಿಷ್ ಸೃಷ್ಟಿಸಿದ ಕೆಲವು ಮರೆಯಲಾರದ ಪ್ರಸಂಗಗಳು ಇಲ್ಲಿವೆ.
ಪ್ರಸಂಗ ೧:
ಒಮ್ಮೆ ನೆಂಟರೊಬ್ಬರ ಮನೆ ಮದುವೆಗೆ ಹೋಗಿ ಬಂದ ಅಬ್ಬೆಯನ್ನು ಚಿಕ್ಕಮ್ಮ ಕೇಳಿದ್ಲು " ಆಯಿ , ಮದ್ವೆ ಕೂಸು ಹ್ಯಾಂಗಿದ್ಲೆ? "
ಅಬ್ಬೆಯ ಉತ್ತರ " ಮದ್ವೆ ಕೂಸಿನ ’ಪರ್ನಾಸಾಟಿ’ ರಾಶಿ ಚೊಲೋ ಇದ್ದು ನೋಡು । ಮಧುಕರಂಗೆ ಹೇಳಿ ಮಾಡಿಸಿದ ಹಾಂಗಿದ್ದು ಕೂಸು "
ಈ ’ ಪರ್ನಾಸಾಟಿ ’ ಏನೆಂದು ತಿಳಿಯದೇ ಜಗುಲಿಯಲ್ಲಿದ್ದ ನಾವೆಲ್ಲ ಮುಖ ಮುಖ ನೋಡಿ ಕೊಂಡೆವು . ಅಮ್ಮ ಕೇಳಿಯೇ ಬಿಟ್ಟಳು . " ಆಯೀ , ಅದೆಂತದೆ ಪರ್ನಾಸಾಟಿ ಅಂದ್ರೆ?
" ತಂಗೀ, ಅದೇ ನಿಂಗ ಎಲ್ಲ ಹದಾ ಮೈಕಟ್ಟಿದ್ದು ,ಬೆಳ್ಳಗೆ ಚೆಂದಕಿದ್ರೆ ಹೇಳ್ತ್ರಲೆ, ಚೊಲೊ ಪರ್ನಾಸಾಟಿ ಹೇಳಿ ..."
" ಅಯ್ಯ , ಆಯೀ, ಅದು ಪರ್ನಾಸಾಟಿ ಅಲ್ದೆ ಮಾರಾಯ್ತಿ , ಪರ್ಸನಾಲಿಟಿ ’ ಚಿಕ್ಕಮ್ಮ ಹೇಳಿದಾಗ , ಜಗುಲಿಯಲ್ಲಿ ಒಮ್ಮೆಲೆ ನಗೆಯ ಅಲೆ ಎದ್ದಿತು .
’ ನಿಂಗ ಎಂತೆಂತ ಹೇಳ್ತ್ರನ ಯಂಗೆಂತ ಗೊತ್ತಾಗ್ತೆ ’ ಎಂದು ಗೊಣಗುತ್ತಾ ಅಬ್ಬೆ ಒಳಗೆ ಹೋದಳು.
ಪ್ರಸಂಗ ೨;
ರಜೆಯಲ್ಲಿ ಅಜ್ಜನ ಮನೆಗೆ ಹೋದಾಗೊಮ್ಮೆ, ಸುದ್ದಿ ಹೇಳುತ್ತಿದ್ದಾಗ ಅಬ್ಬೆ " ಮಗಾ, ಈ ಸಲವಾ ಮಾಣಿ ಎರಡು ಮೂರು ಗನಾ ಸೀರೆ ತಗಬಂದು ಕೊಟ್ಟಿದ್ದಾ. ಹೋಪಲ್ಲಿ ಸೀರೆ. ಅದರ ಸಂತಿಗೇಯಾ ರಯಕೆ ಹೊಲಿಸಲೆ ಹೇಳಿ ಅದೆಂತದೋ ’ ಪೆಟಿಕೋಟ್ ’ ವಾರು ( ಬಟ್ಟೆ) ತಂದು ಕೊಟ್ಟಿದ್ದಾ. ರಾಶಿ ದುಬಾರಿ ಆಗಿಕ್ಕು .ಚೊಲೋ ಇದ್ದು ’ ಎಂದಳು.
ನಾನೊಮ್ಮೆ ಕಕ್ಕಾಬಿಕ್ಕಿ. ಇದ್ಯಾವ ಪೆಟಿಕೋಟ್ ಬಟ್ಟೆನಪ್ಪಾ, ? ಅದೂ ಮಾವ ಅಬ್ಬೆಯ ರವಿಕೆಗೆಂದು ಪೆಟಿಕೋಟ್ ಬಟ್ಟೆ ಯಾಕೆ ತರ್ತಾನೆ ಎಂದು ನನ್ನ ತಲೆ ಬಿಸಿ.
ಅಷ್ಟರಲ್ಲಿ ಅಬ್ಬೆ ಒಳಗೆ ಹೋಗಿ ಹೊಸ ಸೀರೆಗಳನ್ನೂ , ಅದರ ಜೊತೆಗೇ ’ ಇದೇಯಾ ನೋಡು ಆನು ಹೇಳಿದ್ದು ಹೊಸಾ ಪೆಟಿಕೋಟ್ ವಾರು , ಎಷ್ಟು ಚೊಲೋ ಇದ್ದು " ಎಂದು ಅವಳ ಕೈಯಲ್ಲಿದ್ದ ಹೊಸ " ಟೆರಿಕಾಟ್ ’ ಬ್ಲೌಸ್ ಪೀಸ್ ತೋರಿಸಿದಾಗ ನನಗೆ ನಗುವೇ ನಗು .
-------------------------------------------------------------------------------
ಪ್ರಸಂಗ ೩ :
" ತಂಗೀ , ಮ್ಯಾಲಿನ ಕೇರಿ ಶಾರದೆ ಮನೆಲಿ ಈ ಸಲ ಅಕ್ಟೋಬರ್ ನ ಹತ್ರೆ ಒಂದು ಜರ್ಸಿ ದನ ತಗಂಜ್ವಡ . ರಾಶಿ ಚೊಲೋ ಇದ್ದಡ. ಹೊತ್ತಿಗೆ ೫ ಲೀಟರ್ ಹಾಲು ಕೊಡ್ತಡ ನೋಡು. ನಮ್ಮಲ್ಲೂ ತಗಳ್ಳಾಗಿತ್ತೇನ ! ಒಂದು ದಿವ್ಸ ಹೋಗಿ ನೋಡ್ಕ್ಯ ಬರವು ಹ್ಯಾಂಗಿದ್ದು ಹೇಳಿ"
" ಅಬ್ಬೆ, ನೀನು ಕಳೆದ ತಿಂಗಳು ಅವರ ಮನಿಗೆ ಹೋದಾಗ ನೋಡ್ಕ್ಯಂಡು ಬಂಜಿಲ್ಯ? " ನನ್ನ ಪ್ರಶ್ನೆ
" ಇಲ್ಲ್ಯೆ ಶಣಾ , ಮೊನ್ನೆ ಮೊನ್ನೆ ತಗಂಜ್ವಡ "
" ಅರೆ ಅಬ್ಬೆ , ಅಕ್ಟೋಬರದಲ್ಲಿ ತಗಂಡಿದ್ದು ಹೇಳ್ತೆ , ಅಕ್ಟೋಬರ್ ಇನ್ನೂ ಬಂಜಿಲ್ಲೆ . ಈಗಿನ್ನೂ ಮೇ ತಿಂಗಳಲೆ? "
ಅಷ್ಟರಲ್ಲಿ ಅಲ್ಲಿಗೆ ಬಂದ ಮಾವ " ಅಕ್ಟೊಬರ್ ಅಲ್ದೆ ಮಾರಾಯ್ತಿ , ಆ ಹುಲೇಕಲ್ ಸಾಬ " ಅಕ್ಬರ್" ನ ಹತ್ರೆ ಆ ದನ ತಗಂಡಿದ್ದು ! ಆಯಿ ಬಾಯಲ್ಲಿ ಅಕ್ಬರ ಅಕ್ಟೋಬರ ಆಗಿಗಿದ " ಎಂದು ನಗುತ್ತಾ ಹೇಳಿದ ।
"ಎಂತ ಆತ ತಮಾ , ಅಕ್ಟೊಬರ -ಅಕ್ಬರ ಎಲ್ಲ ಒಂದೇಯಾ ಯಂಗಕ್ಕೆ" ಎಂದು ಅಬ್ಬೆ ಅಲ್ಲಿಂದ ಎದ್ದರೆ ನಾನು ನಕ್ಕಿದ್ದೇ ನಕ್ಕಿದ್ದು ।
-----------------------------------------------------------------------------ಇನ್ನೂ ಮಜಾ ಅಂದರೆ, ಅಬ್ಬೆಯ ಗೆಳತಿ ಆಚೆ ಮನೆ ಪಾರ್ವತಕ್ಕ ಅಬ್ಬೆಯ ಇಂಗ್ಲಿಷನ್ನೇ ಕಲಿತು , ಮನೆಯಲ್ಲಿ ಬಳಸುತ್ತಿದ್ದುದಷ್ಟೇ ಅಲ್ಲ , ಮಕ್ಕಳ್ಯಾರಾದರೂ " ಆಯೀ, ಈ ನಮನಿ ತಪ್ಪು ತಪ್ಪು ಇಂಗ್ಲಿಷ್ ಎಲ್ಲಿಂದ ಕಲ್ತ್ಗಬಂದ್ಯೆ ? "ಎಂದರೆ ಮುಗೀತು , " ಹೌದಾ, ನಿಂಗಕ್ಕೆಲ್ಲ ಆನು ತಪ್ಪು ತಪ್ಪು ಮಾತಾಡ್ತಿ ಹೇಳೇ ಕಾಣ್ತು ಯಾವಾಗ್ಲೂವ। ಆನು ನಾಗವೇಣತ್ಗೆ ಹತ್ರೆ ಕಲ್ತಿದ್ದಿ। ಅದರ ಮಕ್ಕ ಎಲ್ಲ ಅಷ್ಟೆಲ್ಲ ಕಲ್ತಿದ್ದ , ನಾಗವೇಣತ್ಗೆ ತಪ್ಪು ಮಾತಾಡ್ತ ಹಂಗಾರೆ? " ಎಂದು ಪ್ರಶ್ನೆ ಎಸೆದು ಒಳಗೆ ಹೋಗುತ್ತಿದ್ದುದು .
ಇವರಿಬ್ಬರ ಇಂಗ್ಲಿಷ್ ಕೇಳಿ ಮನೆಯವರಿಗೆ ಮನರಂಜನೆ ಸಿಕ್ಕುತ್ತಿದ್ದುದಂತೂ ಸುಳ್ಳಲ್ಲ !
9 comments:
ಚಿತ್ರಾ...
ಚೆನಾಗಿದ್ದು. ನಕ್ಕೂ ನಕ್ಕೂ ಸಾಕಾತು. :-)
ನಿರೂಪಣೆಯೂ ಚಂದ.
ಥ್ಯಾಂಕ್ಸ್ , ಇಷ್ಟೆಲ್ಲ ನಗ್ಸಿದ್ದಕ್ಕೆ :-)
ರಾಶಿ ಚೊಲೊ ಇದ್ದು, ನೆಗಿ ತಡಕಂಬ್ಲೆ ಆಜಿಲ್ಲೆ...!!
ಹಹಹಾ! ಒಳ್ಳೇ ಮಜಾ ಇದ್ದು. :D
ಸಿಕ್ಕಾಪಟ್ಟೆ ನಗು ಬಂತು ! :D
ಶಾಂತಲಾ,
ಸುಮಾರು ದಿನಗಳ ಮೇಲೆ ನಿನ್ನ ಕಾಮೆಂಟ್ ನೋಡಿ ಖುಷಿಯಾತು. ಬರ್ತಾ ಇರು.
ಪ್ರಕಾಶ್,ಸುಶ್ರುತ, ಲಕ್ಷ್ಮಿ,
ತುಂಬಾ ಥ್ಯಾಂಕ್ಸ್. ಹೀಗೆ ಬರ್ತಾ ಇರಿ.
ಹ್ಹಿ ಹ್ಹಿ ಹ್ಹಿ....
ತು೦ಬಾ ಚೆನ್ನಾಗಿತ್ತು.
ಹೋಯ್ ಚಿತ್ರಕ್ಕಾ, ಕಾಮಿಡಿ ಬ್ಲಾಗ್ ಶುರು ಮಾಡ್ತ್ಯ ಎಂತು? ಬಿದ್ದು ಬಿದ್ದು ನಗುವ್ಹಂಗಾಜು :-)
ಅಕ್ಬರ್-ಅಕ್ಟೋಬರ್ ಅಂತೂ ಸೂಪರ್
ಸುಧೇಶ್,
ಪ್ರತಿಕ್ರಿಯೆಗೆ ಧನ್ಯವಾದಗಳು.
ಹರೀಶ,
ಹಂ... ನಿನ್ನ ಐಡಿಯಾ ಏನೋ ಚೆನಾಗಿದ್ದು. ನೋಡನ , ಎಷ್ಟು ಕಾಮೆದಿ ಬರಿಲಕ್ಕು ಹೇಳಿ !
ಚಿತ್ರಾ ಮೇಡಮ್,
ಭಾರಿ ಮಜಾ ಕೊಡುತ್ರೀ....ನಿಮ್ಮ ಅಬ್ಬೇ ಇಂಗ್ಲೀಷು...
ಪರ್ನಾಸಾಟಿ.....ಟೇರಿಕಾಟ್ ಬ್ಲೋಸ್ ಪೀಸ್....ಅಕ್ಟೋಬರ್ -ಅಕ್ಬರ ಆಗಿದ್ದು....
very good keep it.
Post a Comment