July 25, 2019

ಬಣ್ಣಗಳು

ಬಣ್ಣಗಳ ವಿಷಯದಲ್ಲಿ ಹೆಂಗಸರಿಗೆ ಇರೋ ತಿಳುವಳಿಕೆ ಗಂಡಸರಿಗೆ ಇಲ್ಲವೇ ಇಲ್ಲ ಅನ್ನೋದು ಸತ್ಯ !
ಒಂದ್ಸಲ ಏನಾಯ್ತು ಅಂದ್ರೆ ,ಹೆಂಡ್ತಿ ಜೊತೆ ಶಾಪಿಂಗ್ ಹೋಗಿದ್ದೆ . ಇಬ್ರೂ ಅಂಗಡಿ ಲಿ ಸೀರೆ ಆರಿಸ್ತಾ , ಇರೋವಾಗ ಸೇಲ್ಸ್ ಗರ್ಲ್ ಗೆ " ಆಲ್ಲಿದ್ಯಲ್ಲ ಪಿಂಕ್ ಕಲರ್ ಆ ಸೀರೆ ತೋರ್ಸಿ , ಅದೇ, ಆ ಕಡೆ ಹಸಿರು ಸೀರೆಯ ಬಲಕ್ಕೆ ಮೂರನೇದು " ಅಂದೆ . ಅವಳು ಕಿರುನಗೆ ಬೀರುತ್ತಾ "ಈ ಮೆಜೇಂತಾ ಕಲರ್ ದಾ ಸರ್ ? "

ಅವಳು ಸೂಕ್ಷ್ಮವಾಗಿ ನನ್ನ ಕಲರ್ ಸೆನ್ಸ್ ನ ತಮಾಷೆ ಮಾಡ್ತಿದಾಳೆ ಅನ್ನೋದು ನನ್ ತಲೆಗ್ ಹೊಳೆದ್ರೆ ತಾನೇ ? " ಹಾಂ ಅದೇ ಡಾರ್ಕ್ ಪಿಂಕ್ ಇದ್ಯಲ್ಲ ಅದು " ಎಂದೇ . ಪಕ್ಕದಲ್ಲಿರೋ ಅಮ್ಮನವರ ಮುಖ ಅದೇ ಕಲರ್ ಆಗ್ಬಿಡ್ತು. " ಸಾರಿ, ನಂಗೇನು ಅಷ್ಟು ಇಷ್ಟ ಆಗಿಲ್ಲ" ಅಂತ ಅಲ್ಲಿಂದ ಹೊರಗೆ ಹೋಗ್ಬಿಟ್ರು.
"ಯಾಕೇ ? ಚೆನಾಗೆ ಇತ್ತು ಅದು . ನಿಂಗೆ ಸೂಟ್ ಆಗ್ತಿತ್ತು ಕಲರ್ " ಅಂತ ನಾನು ಹೇಳಿದ್ದೇ "ಅಲ್ಲಾ, ಬಣ್ಣ ಗೊತಿಲ್ದೆ ಇರೋವ್ರು ಯಾಕೆ ಮಾತಾಡೋಕೆ ಹೋಗ್ಬೇಕು? ಪಿಂಕ್ ಯಾವ್ದು ಮೆಜೆನ್ತಾ ಯಾವ್ದು ಗೊತ್ತಿಲ್ವ? ಆ ಹುಡುಗಿ ಎಷ್ಟು ಕೊಂಕಾಗಿ ಹೇಳಿದ್ಲು. ನಿಂಗೆ ಅರ್ಥ ಆಗಬೇಕಲ್ವಾ ? " ಅಂತ ಹಾರಾಡಿದ್ಲು .
"ಸಾರಿ ಕಣೆ, ನಾನು ಅದು ಡಾರ್ಕ್ ಪಿಂಕ್ ಅಂದ್ಕೊಂಡೆ . ಬಿಡು ಇನ್ನು ನೆನಪಿಟ್ಕೋತೀನಿ " ಅಂದೇ.
ಆದ್ರೂ ಡಾರ್ಕ್ ಪಿಂಕ್ ಗೂ ಮೆಜೇಂತಾ ಕ್ಕೂ ಎಷ್ಟು ವ್ಯತ್ಯಾಸ ಇದೆ ಅನ್ನೋದು ಇನ್ನೂ ಅರ್ಥ ಆಗಿಲ್ಲ
ದಾರೀಲೆ ಬರೋವಾಗ ಸುಮಾರು ಹೊತ್ತಿನ ಮೌನದ ನಂತರ ಅವಳಷ್ಟಕ್ಕೆ ಹೇಳ್ಕೊಂಡಳು .
"ಆ ಬ್ಲ್ಯಾಕ್ ಸ್ಕರ್ಟ್ ಲ್ಲಿ ಮಾವ್ ಕಲರ್ ಇಲ್ದೇ ಇದಿದ್ರೆ ಚೆನಾಗಿರೋದು ".
"ಮಾವಿನ ಕಲರ್ ? ಅದರಲ್ಲಿ ಹಸಿರೂ ಇರಲಿಲ್ಲ ಹಳದಿನೂ ಇರಲಿಲ್ವಲ್ಲೇ ? "
ಅವಳು ಥಟ್ ಅಂತ ನನ್ನತ್ತ ಸೀರಿಯಸ್ ಆಗಿ ಒಂದ್ ಲುಕ್ ಕೊಟ್ಟು ಏನೂ ಹೇಳದೆ ಮುಖ ತಿರುಗ್ಸಿ ಕಿಡಕಿ ಇಂದ ಆಚೆ ನೋಡ್ತಾ ಕೂತಗೊಂಡ್ಲು.
ನಾನು ಮನಸಲ್ಲೇ " ಇದೆ ಮಗನೆ ನಿಂಗೆ ಇವತ್ತು ಗ್ರಹಚಾರ" ಅಂತ ಬೆವರೋಕೆ ಶುರು ಮಾಡದೆ .
ಮನೆಗೆ ಹೋಗಿ ಸ್ವಲ್ಪ ಹೊತ್ತಿಗೆ ಹಿಂದಿನ ದಿನ ಎಣ್ಣೆಗಾಯಿಗೆ ಅಂತ ತೊಗೊಂಡು ಹೋಗಿದ್ದ ಬದನೇಕಾಯಿನ ಫ್ರಿಜ್ ನಿಂದ ತೊಗೊಂಡು ಬಂದ್ಲು. ನನ್ನೆದುರು ಹಿಡಿದು " ನೋಡು, ಇದ್ರಲ್ಲಿ ಲೈಟ್ ಪರ್ಪಲ್ ಕಲರ್ ದು ಗೆರೆ ಇದ್ಯಲ್ಲ .. " ನಾನು ಸೂಕ್ಷ್ಮವಾಗಿ ಗಮನಿಸಿ ಅಂತೂ ಅದನ್ನ ಕಂಡು ಹಿಡಿದೆ . "ಇದಾ ?"
"ಹೂ ಅದೇ , ಅದಕ್ಕೆ ತೀರಾ ಸಲ್ಪ ಬ್ರೌನ್ ಮತ್ತೆ ಪಿಂಕ್ ಮಿಕ್ಸ್ ಮಾಡಿದ್ರೆ ಏನ್ ಕಲರ್ ಬರತ್ತಲ್ಲ ಅದೇ " ಮಾವ್" Mauve" ಅಂದ್ಲು . ಸ್ಪೆಲಿಂಗ್ ಸಮೇತ !! ನಾನು ಆ ಕಲರ್ ನ ಇಮೇಜಿನ್ ಮಾಡೋಕೆ ಟ್ರೈ ಮಾಡಿ ವಿಫಲನಾದೆ. ಒಹ್ ಹೌದಾ? ಎಂದು ಉದ್ಗರಿಸಿದ್ರೂ ಮನಸಲ್ಲಿ ತಲೆಕೆರೀತಾ ಇದ್ದೆ.
ಊಟ ಆಚೆನೇ ಆಗಿದ್ರಿಂದ ಸಲ್ಪ ಫ್ರೆಶ್ ಆಗಿ ಟಿವಿ ಮುಂದೆ ರಂಗಣ್ಣ ಕೊನೆಗೂ ಮುಂದಕ್ಕೊಗ್ತಾನೋ ಇಲ್ವೋ ನೋಡೋಣ ಅಂತ ಕೂತಿದ್ದೆ.
ಸಲ್ಪ ಹೊತ್ತಲ್ಲಿ ಬಂದವಳು ಕೈಯಿಂದ ರಿಮೋಟ್ ಕಸಿದು ಟಿವಿ ನ ಮ್ಯೂಟ್ ಮಾಡಿ ನನ್ ಕೈಗೆ ಒಂದು ಪೆನ್ ಮತ್ತು ಪೇಪರ್ ಕೊಟ್ಲು .

ನಿಂಗಿವತ್ತು ಕಲರ್ ಕ್ಲಾಸ್ ಅಂದ್ಲು .
ನಾನು ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ.
"ನಿಂಗೆ ಯಾವ ಯಾವ ಬಣ್ಣ ಗೊತ್ತೋ ಅದನ್ನೆಲ್ಲ ಇಲ್ಲಿ ಲಿಸ್ಟ್ ಮಾಡು ನೋಡೋಣ ." ಅಂದ್ಲು
ಇಲ್ಲ ಅನ್ನೋಕಾಗತ್ತಾ?
ಸರಿ ಎರಡೇ ನಿಮಿಷದಲ್ಲಿ ನನ್ ಲಿಸ್ಟ್ ತಯಾರಾಯ್ತು .
ತಿಳಿ ನೀಲಿ , ಕಡು ನೀಲಿ ಮತ್ತೆ ನೇವಿ ಬ್ಲೂ ತಿಳಿ ಹಸಿರು , ಕಡು ಹಸಿರು ತಿಳಿ ಗೆಂಪು, ಕಡುಗೆಂಪು ತಿಳಿ ಗುಲಾಬಿ, ಕಡು ಗುಲಾಬಿ ಹಳದಿ, ಕೇಸರಿ , ಕಪ್ಪು ನೇರಳೆ, ಬ್ರೌನ್ , ಸಿಲ್ವರ್ ಮತ್ತೆ ಗೋಲ್ಡ್
ಬಿಳಿ ಮತ್ತೆ ಲೈಟ್ ಬಿಳಿ
ಮತ್ತೊಮ್ಮೆ ಚೆಕ್ ಮಾಡಿ ತೃಪ್ತನಾದೆ . ಹೆಮ್ಮೆಯಿಂದಲೇ ಅವಳ ಕೈಗೆ ಕೊಟ್ಟೆ .
ಲಿಸ್ಟ್ ಓದುತ್ತಲೇ ಹುಬ್ಬೇರಿಸಿದಳು !!
ಇಷ್ಟೇನಾ?

ಇನ್ನೆಷ್ಟೇ ಇರತ್ತೆ ಮತ್ತೆ ?
ಹ್ಮ್ .. ಮತ್ತೆ ಈ ಲೈಟ್ ಬಿಳಿ ಅಂದ್ರೇನೋ ?
ಅದೇ ಕಣೆ ಸಲ್ಪಡಿಮ್ ಇರತ್ತಲ್ಲ ಜಾಸ್ತಿ ಬಿಳಿ ಇರಲ್ಲ ನೋಡು, ನಾಕ್ ಸಲ ತೊಳೆದ ಮೇಲೆ ಬನಿಯನ್ ಹೇಗಾಗತ್ತೆ ನೋಡು ? ಅದೇ ಕಲರ್ .
ಹಣೆ ಚಚ್ಚಿ ಕೊಂಡಳು . "ಅದಕ್ಕೆ ಆಫ್ ವೈಟ್ ಅಂತಾರೆ ಕಣೋ "
ದೊಡ್ಡ ಉಸಿರು ಬಿಟ್ಟು , ಮತ್ತೊಂದು ಪೇಪರ್ ತೊಗೊಂಡು ೫ ನಿಮಿಷ ಬರೀತಾನೆ ಇದ್ಲು.
ಆಮೇಲೆ ಅದನ್ನ ನನ್ನ ಕೈಗೆ ಕೊಟ್ಟು " ಸಲ್ಪ ಓದ್ಕೋ. ನಿಂಗೆ ಸುಲಭ ಆಗ್ಲಿ ಅಂತ ಕಲರ್ ಪ್ಯಾಲೆಟ್ ಪ್ರಕಾರ ಬರ್ದಿದೀನಿ . ಇನ್ನೂ ಕೆಲವು ನೆನಪಾಗ್ತಾ ಇಲ್ಲ . ಆದ್ರೂ ನಿಂಗಿಂತ ಜಾಸ್ತಿ ಇದೆ. " ಅಂತ ಹೇಳಿ ಕೊಂಕು ನಗೆ ಬೀರಿದ್ಲು .
ನಾನು ಆ ಲಿಸ್ಟ್ ಓದ್ತಾ ಓದ್ತಾ ಬೆವರಿ ಬಿಟ್ಟೆ .
ಬಣ್ಣಗಳು :
ಕೆಂಪು - ತಿಳಿಗೆಂಪು, ಬ್ಲಡ್ ರೆಡ್ , ಕ್ರಿಮ್ಸನ್ , ವೈನ್ ರೆಡ್ ,ಟೊಮ್ಯಾಟೋ ರೆಡ್, ಚೆರ್ರಿ ರೆಡ್ ,ಡಾರ್ಕ್ ರೆಡ್ , ಮರೂನ್ ..
ನೀಲಿ - ತಿಳಿನೀಲಿ, ಡಾರ್ಕ್ ಬ್ಲೂ , ಐಸ್ ಬ್ಲೂ , ಪೌಡರ್ ಬ್ಲೂ , ನೇವಿ ಬ್ಲೂ , ಆಕಾಶ ನೀಲಿ , ಸೀ ಬ್ಲೂ , ಪೀಕಾಕ್ ಬ್ಲೂ ..
ಹಳದಿ - ತಿಳಿ ಹಳದಿ, ನಿಂಬೆ ಹಳದಿ , ಕಡು ಹಳದಿ, ಗೋಲ್ಡನ್ ಹಳದಿ
ಹಸಿರು - ತಿಳಿ ಹಸಿರು, ಗಿಳಿ ಹಸಿರು, ಪಾಚಿ ಹಸಿರು, ಕಡು ಹಸಿರು , ಕಪ್ಪು ಹಸಿರು, ನವಿಲು ಹಸಿರು, ಸೀ ಗ್ರೀನ್ , ರಾಮ ಗ್ರೀನ್ , ಲೈಮ್ ಗ್ರೀನ್ ಇತ್ಯಾದಿ
ಪಿಂಕ್ - ಲೈಟ್ ಪಿಂಕ್ , ಡಾರ್ಕ್ ಪಿಂಕ್ ,ಬೇಬಿ ಪಿಂಕ್ , ಪೌಡರ್ ಪಿಂಕ್, ಮೆಜೇಂತಾ , ರಾಣಿ ಪಿಂಕ್
ಬ್ರೌನ್ - ಲೈಟ್ ಬ್ರೌನ್, ಡಾರ್ಕ್ ಬ್ರೌನ್ ,ಸ್ಯಾಂಡ್ ಬ್ರೌನ್ , ಕ್ಯಾಮೆಲ್ ಬ್ರೌನ್ ..
ಗ್ರೇ - ಲೈಟ್ ಗ್ರೇ, ಡಾರ್ಕ್ ಗ್ರೇ , ಸಿಲ್ವರ್ ಗ್ರೇ, ಆಶ್ ಗ್ರೇ, ಸ್ಟೀಲ್ ಗ್ರೇ ...
ಕೇಸರಿ - ತಿಳಿ ಕೇಸರಿ, ಕಡು ಕೇಸರಿ, ಪೀಚ್ ( ಅಬ್ಬಲಿಗೆ ಬಣ್ಣ) , ಕಾವಿ ,ಟೆರಾಕೋಟಾ,
ನೇರಳೆ - ತಿಳಿ ನೇರಳೆ , ಡಾರ್ಕ್ ಪರ್ಪಲ್ , ವಯಲೆಟ್ , ಲೈಲಾಕ್ ,ಮಾವ್, ಲ್ಯಾವೆಂಡರ್
ಕಪ್ಪು - ಕಡುಗಪ್ಪು , ಕಾರ್ಬನ್
ಬಿಳಿ - ಪ್ಯೂರ್ ವೈಟ್ , ಆಫ್ ವೈಟ್, ಕ್ರೀಮ್
ಸಿಲ್ವರ್, ಗೋಲ್ಡ್ ..........
ಇಷ್ಟೆಲ್ಲಾ ಬಣ್ಣಗಳಿವೆ ಅಂತ ಮೊದಲನೇ ಬಾರಿಗೆ ನನ್ನ ಜೀವನದಲ್ಲಿ ಗೊತ್ತಾಗಿದ್ದು !
ಧೈರ್ಯ ಮಾಡಿ ಕೇಳೇ ಬಿಟ್ಟೆ " ಅಲ್ಲಾ , ನೀನು ಮುಂಚೆ ಏನಾದ್ರೂ ಪೈಂಟ್ ಕಂಪೆನೀಲಿ ಕೆಲಸ ಮಾಡ್ತಿದ್ಯಾ ? ಇಷ್ಟೆಲ್ಲಾ ಬಣ್ಣಗಳಿವೆ ಅಂತಾನೆ ನಂಗೊತ್ತಿಲ್ಲ ಕಣೆ "
ನೀವು ಗಂಡಸರ ಹಣೆಬರಹ ಇಷ್ಟೇ ಎನ್ನುವಂಥಾ ನೋಟವನ್ನ ನನ್ನ ಕಡೆ ಎಸೆದು ಎದ್ದು ಹೋದ್ಲು .
ನಾನಿನ್ನೂ ಬಣ್ಣಗಳ ಲಿಸ್ಟ್ ನೋಡ್ತಾ ಕೂತಿದೀನಿ . ಕಣ್ಣೆದುರು " ಕಲರ್ ವೀಲ್ ' ಗರ ಗರ ತಿರುಗ್ತಾನೆ ಇದೆ .

2 comments:

sunaath said...

ಬಹಳ ಚೆನ್ನಾಗಿ ಹೇಳಿದಿರಿ ಚಿತ್ರಾ. ನನಗೂ ಸಹ ಇಂಥದೇ ಸಮಸ್ಯೆಗಳು ಎದುರಾಗ್ತಾ ಇವೆ. ನನ್ನ ಶ್ರೀಮತಿ ‘ರಾಣಿ’ ಕಲರ ಎಂದಾಗ, ನನಗೆ ಸಿಕ್ಕಾಪಟ್ಟೆ confuse ಆಗತ್ತೆ. ಮಾಧ್ಯಮಿಕ ಶಾಲೆಯಲ್ಲಿ ನಾನು ಕಲಿತಿದ್ದು ಏಳೇ ಬಣ್ಣಗಳು. ಈ ‘ರಾಣಿ’ ಎಲ್ಲಿಂದ ಬಂತು? ‘ಮಹಾರಾಣಿ’ ಎನ್ನುವ ಬಣ್ಣವೂ ಇರಬಹುದೆ? ಏನೇ ಇರಲಿ, ನೀವು ಬಣ್ಣಗಳ ಲಿಸ್ಟ್ ಕೊಟ್ಟು ಉಪಕಾರ ಮಾಡಿದ್ದೀರಿ. ನಾನು ಇವುಗಳನ್ನು ಉರು ಹಾಕಿ, ನನ್ನ ಶ್ರೀಮತಿಗೆ surprise ಮಾಡಬಹುದು. ಆದರೆ ಒಂದೇ ತೊಂದರೆ. ನಾನು ಮೆಜೆಂತಾ ಬಣ್ಣ ಅಂತ ಹೇಳಿದ್ದು ಮತ್ಯಾವದೋ ಬಣ್ಣ ಆಗಿರಬಾರದಷ್ಟೇ. ಈ ಲೇಖನದ ನಾಯಕ ಹಾಗು ನಾನು ಸಮಾನ ಸ್ಥಿತಿಯಲ್ಲಿದ್ದೇವೆ. ಅವರಿಗೆ ನನ್ನ consolationಗಳು. ಅದ್ಬುತ ನಗೆಲೇಖನ ಬರೆದ ನಿಮಗೆ ಅಭಿನಂದನೆಗಳು. ಬಣ್ಣಗಳ ಲಿಸ್ಟ್ ಕೊಟ್ಟದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

ವಿ.ರಾ.ಹೆ. said...

ಹ್ಹ ಹ್ಹ. ನಂಗೂ ಕಲರ್ ವ್ಹೀಲ್ ತಿರುಗ್ತಿದೆ ಈಗ !!