December 17, 2019

ಕಾಣೆಯಾಗಿರುವಳೇ ಅವಳು ?


ಬೊಗಸೆಗಣ್ಣಿಗೆ ಅಮ್ಮ ಹಚ್ಚಿರುವ ಕಾಡಿಗೆ
ಬೆಣ್ಣೆಗಲ್ಲದ ಮೇಲೆ ಕರಿಯ ಬೊಟ್ಟು
ಕೆಂಪು ತುಟಿಗಳ ತುಂಬಾ ನಗೆಯ ಬೆಳದಿಂಗಳು
ಪ್ರೀತಿ ಉಕ್ಕಿಸುವ ಆ ಪುಟ್ಟ ಹುಡುಗಿ

ಕೈಬಳೆಯ ಕಿಂಕಿಣಿಸಿ , ಕಾಲ್ಗೆಜ್ಜೆ ಝಲ್ಲೆನಿಸಿ
ಕಿಲಕಿಲನೆ ನಗು ನಗುತ
ಮನೆತುಂಬ ಓಡುತ್ತಾ
ಹರುಷ ತುಂಬುವ ನಮ್ಮಮುದ್ದು ಹುಡುಗಿ

ಉದ್ದ ಲಂಗದ ನೆರಿಗೆ ಮೇಲೆಕೆತ್ತಿ
ಮುದ್ದು ಮೊಗದಲಿ ದೊಡ್ಡ ನಗುವ ಹರಡಿ
ಚೋಟುದ್ದ ಜಡೆಗೆ ಮಾರುದ್ದ ಹೂ ಮುಡಿದು
ಬಿಂಕದಲಿ ಕೊರಳ ಕೊಂಕಿಸುವ ಬೆಡಗಿ

ಕಳೆದು ಹೋಗಿಲ್ಲವಳು ಬೆಳೆದು ನಿಂತಿದ್ದಾಳೆ
ಜಾಣೆಯಾಗಿದ್ದಾಳೆ ಮುಗ್ಧ ಹುಡುಗಿ

1 comment:

sunaath said...

ಹೌದು ಚಿತ್ರಾ, ಹುಡುಗರು ಬೆಳೆದ ಮೇಲೆ, ಅವರ ಮುಗ್ಧ ಚಟುವಟಿಕೆಗಳು ಕರಗಿ ಹೋಗಿ, ಅವರು ತಮ್ಮ ಗುಂಪಿನಲ್ಲಿ ಒಂದಾಗಿ ಹೋದಾಗ, ಅವರು ಕಳೆದು ಹೋದರೆಂದು ಅನಿಸುವದು ಸತ್ಯ. ಈ ವಿಷಯವನ್ನು ಕವನದಲ್ಲಿ ನೀವು ಸುಂದರವಾಗಿ ಮೂಡಿಸಿರುವಿರಿ.ಅಭಿನಂದನೆಗಳು.