January 29, 2020

ಶಾಪಿಂಗ್ !!



ಗಂಡ ಏನಾದ್ರೂ ಗಿಫ್ಟ್ ತಂದು ಕೊಡಬೇಕು ( ಸರ್ ಪ್ರೈಸ್ ಆಗಿ) ಅಂತ ಎಲ್ಲ ಹೆಂಡತೀರೂ ಆಸೆ ಪಡ್ತಾರೆ .ಹಾಗಂತ ತಂದು ಕೊಟ್ರೆ ಖುಷಿ ಆಗ್ತಾರೆ ಅಂತಲ್ಲ ! ನಿಜ ಹೇಳ್ಬೇಕು ಅಂದ್ರೆ 95% ಜನರಿಗೆ ತಂದುಕೊಟ್ಟಿದ್ದು ಇಷ್ಟ ಆಗಿರಲ್ಲ ! ಒಡವೆ ತಂದು ಕೊಟ್ರೆ ಹಳೆ ಡಿಸೈನ್ಆಯ್ತು ಇದಕ್ಕಿಂತ ಬೇರೆ ಏನಾದ್ರೂ ತರಬೇಕಿತ್ತು . ಸೀರೆ / ಡ್ರೆಸ್ ಆಗಿದ್ರೆ ಅದರ ಡಿಸೈನ್ ಚೆನಾಗಿಲ್ಲ, ಕಲರ್ ಸರೀ ಇಲ್ಲ, ಮಟೀರಿಯಲ್ ಇಷ್ಟ ಆಗಲ್ಲ, ಪ್ಯಾಟರ್ನ್ ಬೇರೆ ಇರ್ಬೇಕಿತ್ತು . ಈ ತರದ್ದು ಆಗಲೇ ಕಪಾಟಲ್ಲಿದೆ . ಕೊಟ್ಟಿರೋ ದುಡ್ಡು ಜಾಸ್ತಿ ಅಂತ . ನಿಂಗೆ ಆರಿಸೋಕೆ ಬರಲ್ಲ ಸುಮ್ಮ್ನೆ ತಮ್ಮನ್ನೇ ಕರ್ಕೊಂಡು ಹೋಗ್ಬೇಕಿತ್ತು ... ಇತ್ಯಾದಿ.  ಅಲ್ಲ, ಅವರನ್ನೇ ಕರ್ಕೊಂಡು ಹೋದ್ರೆ ಸರ್ಪ್ರೈಸ್ ಹೇಗಾಗತ್ತೆ ಅನ್ನೋದು ನಂಗೆ ಇನ್ನೂ ಅರ್ಥ ಆಗಿಲ್ಲ.
ಇಂಥಾ ರಗಳೆ ನೇ ಬೇಡ, ಸರ್ ಪ್ರೈಸ್ ಆಗದೆ ಇದ್ರೂ ಅಡ್ಡಿಲ್ಲ ಅಂತ ಅಂತ ಹೆಂಡ್ತಿನೇ ಕರ್ಕೊಂಡು ಶಾಪಿಂಗ್ ಹೋಗ್ಬಿಡ್ತೀನಿ. ಅದೂ ಏನು ಸುಲಭ ಅಂತಲ್ಲ . ಗಾಡಿ ಪಾರ್ಕ್ ಮಾಡೋಕೆ ಜಾಗ ಹುಡ್ಕೋದು ಮೊದಲನೇ ತಲೆ ಬಿಸಿ . ಅದು ಬೇಡಾ ಅಂದ್ರೆ ಯಾವ್ದಾದ್ರೂ ಮಾಲ್ ಗೆ ಹೋಗೋದು ವಾಸಿ. ಪಾರ್ಕಿಂಗ್ ಗೆ ಜಾಗ ಹುಡುಕೋದಕ್ಕಿಂತ ,ಶಾಪಿಂಗ್ ಬ್ಯಾಗ್ ಹಿಡ್ಕೊಳೋದು ಸುಲಭ .
ಮಾಲ್ ನಲ್ಲಿರೋ ಎಲ್ಲಾ ಅಂಗಡಿಗಳಿಗೂ ಭೇಟಿ ಕೊಡ್ಲೆ ಬೇಕು ಅನ್ನೋದು ಒಂಥರಾ ಅಲಿಖಿತ ನಿಯಮ . ನೀನು ನೋಡ್ಕೊಂಡ್ ಬಾ ನಾನು ಇಲ್ಲೇ ಒಂದ್ಕಡೆ ಕೂತಿರ್ತೀನಿ ಅನ್ನೋಕೆ ಆಗಲ್ಲ . ಮೊದಲನೇದಾಗಿ ಅವಳು 25 ಅಂಗಡಿ ತಿರ್ಗಿ 250 ವಸ್ತುಗಳನ್ನ ಗಳನ್ನ ಟ್ರೈ ಮಾಡೋವಾಗ ಯಾವ್ದು ಚೆನಾಗಿದೆ ಅಂತ ಯಾರನ್ನ ಕೇಳ್ಬೇಕು? ಹಾಗೆ ಕೇಳ್ದಾಗ ನಾನು ಕೊಡೊ ರಿಪ್ಲೈ ನ ಸೀರಿಯಸ್ ಆಗಿ ತೊಗೋತಾಳೆ ಅಂತೇನು ಇಲ್ಲ . ಖರೀದಿ ಮಾಡೋದು ಅವಳ ಮನಸಿಗೆ ಬಂದಿದ್ದನ್ನ ಮಾತ್ರ . ಕೇಳೋದು ಯಾವುದನ್ನ ರಿಜೆಕ್ಟ್ ಮಾಡ್ಲಿ ಅಂತ ಡಿಸೈಡ್ ಮಾಡೋಕೆ ಅಷ್ಟೇ ( ನಾನು ಚೆನಾಗಿದೆ ಅಂದಿದ್ದೆ ರಿಜೆಕ್ಟ್ ಆಗತ್ತೆ ಅಂತ ಹೊಸದಾಗಿ ಹೇಳಬೇಕಾಗಿಲ್ಲ)
ಮೇಲಿನ ವಿಷಯನ ಗಮನದಲ್ಲಿಟ್ಟು ಮಾಲ್ ನವರು ಗಂಡಸರಿಗೆ ಕುಳಿತು ಕೊಳ್ಳೋಕೆ ಅಷ್ಟು ವ್ಯವಸ್ಥೆ ಇಟ್ಟಿರೋದಿಲ್ಲ ಅನ್ನೋದು ಎರಡನೇ ಕಾರಣ .ಈ ಮಾಲ್ ನವರಿಗೆ ಹೆಂಗಸರ ಬಗ್ಗೆ ಪಕ್ಷಪಾತ ಅನ್ನೋದು ನನ್ನ ಬಲವಾದ ನಂಬಿಕೆಎಷ್ಟೇ ಅಂದ್ರೂ ಅವರ ಮುಖ್ಯ ಗಿರಾಕಿಗಳು ಹೆಂಗಸರೇ ತಾನೇ ?
ಇವಳು ಹೇಗೂ ಶಾಪಲ್ಲಿ ನೇತು ಹಾಕಿದ ನೂರಾರು ಡ್ರೆಸ್ ಗಳಲ್ಲಿ 50 ನ್ನು ಟ್ರೈ ಮಾಡೋಕೆ ಅಂತ ಕೈಯಲ್ಲಿರೋ ಬ್ಯಾಗ್ ಗೆ ಹಾಕ್ಕೋತಾ ಇದಾಳೆ ಅಂತ ನಾನು ಕ್ವಿಕ್ ಆಗಿ ಮೊಬೈಲ್ ಲ್ಲಿ ಇಣುಕೊ ಹೊತ್ತಿಗೆ ಅದು ಹೇಗೋ ಇವಳಿಗೆ ತಿಳಿದು (ಹೇಗೆ ಕರೆಕ್ಟಾಗಿ ಆ ಹೊತ್ತಿಗೆ ಗೊತ್ತಾಗತ್ತೆ ಅಂತ ನಂಗೆ ಇಲ್ಲಿವರೆಗೂ ತಿಳಿತಾ ಇಲ್ಲ) ಇವಳ ಕಣ್ಣು ನನ್ ಮೇಲೆ ಬೀಳತ್ತೆ. ಮುಗೀತು ಅಲ್ಲಿಗೆ. ಕೆನ್ನೆ ಉಬ್ಬಿ ಕಣ್ಣು ಸೀರಿಯಸ್ ಆಗಿ , ನಿಂಗೆ ಅಷ್ಟು ಕ್ರಿಕೆಟ್ ನೋಡಲೇ ಬೇಕು ಅಂತಿದ್ರೆ ( ನಾನು ಕ್ರಿಕೆಟ್ ಸ್ಕೊರ್ ನ್ನೇ ನೋಡ್ತಿದ್ದೆ ಅಂತಾನೂ ಗೊತ್ತಾಗಿ ಬಿಡತ್ತೆ ಅವಳಿಗೆ ) ನಂಗೆ ಹೇಳ್ಬೇಕಿತ್ತು . ಒಬ್ಬಳೇ ಬರ್ತಿದ್ದೆ . .. ಹೆಂಡ್ತಿಗಿಂತ ಕ್ರಿಕೆಟ್ ಹೆಚ್ಚು ನಿಂಗೆ ... " ಅಂತ ರಾಗ ಶುರು ಆಯಿತು ಅಂತ ಲೆಕ್ಕ . ಆಮೇಲೆ ಅವಳ ಮೂಡ್ ನ ಸರಿಪಡಿಸೋದು ಒಂದು ಮಹಾ ಯುದ್ಧ ಗೆದ್ದಂಗೆ . ಆಮೇಲೆ ಅಂತೂ ಹತ್ತು ಅಂಗಡಿ ಹೊಕ್ಕು 150 ಡ್ರೆಸ್ ಟ್ರೈ ಮಾಡಿ ಖರೀದಿ ಮಾಡೋ 5 ಡ್ರೆಸ್ ನಲ್ಲಿ 3 ಮನೆಗೆ ಬಂದ ಮೇಲೆ ಕಪಾಟಲ್ಲಿ ಹಾಗೆ ಬಿದ್ದಿರ್ತಾವೆ . ಯಾವಾಗ್ಲಾದ್ರೂ ಆ ಬಗ್ಗೆ ಕೇಳಿದ್ರೆ ಅಯ್ಯೋ ಮನೆಗ್ ಬಂದ್ ಮೇಲೆ ಹಾಕಿ ನೋಡಿದೆ .. ಯಾಕೋ ಇಷ್ಟ ಆಗಿಲ್ಲ. ಕಲರ್ ಸೂಟ್ ಆಗ್ತಿಲ್ಲ / ನಾನು ಅದ್ರಲ್ಲಿ ದಪ್ಪ ಕಾಣ್ತೀನಿ ಇತ್ಯಾದಿ ಉತ್ತರ ರೆಡಿ ಇರತ್ತೆ. ಹಾಗಿದ್ರೆ ಅಂಗಡಿಲಿ ಹಾಕಿ ನೋಡಿ ಚೆನಾಗಿದೆ ಅಂತ ತೊಗೊಂಡಿದ್ಯಾಕೆ ಅಂತ ಕೇಳೋ ಧೈರ್ಯ ಯಾರಿಗಿದೆ ?
ಇನ್ನು ಈ ಆನ್ ಲೈನ್ ಶಾಪಿಂಗ್ ಇದ್ಯಲ್ಲ .. ಅದು ಯಾವ ಪುಣ್ಯಾತ್ಮನ ತಲೇಲಿ ಬಂತೋ ಆ ಮನುಷ್ಯಂಗೆ ಒಂದು ದೊಡ್ಡ ನಮಸ್ಕಾರ ! 10-15 ಐಟಂ ಕಂಪೇರ್ ಮಾಡಿ ,ಕಾರ್ಟ್ ಲ್ಲಿ ಹಾಕಿ , ಎರಡು ದಿನ ಹಾಗೆ ಇಟ್ಟು, ಮತ್ತೆ ನೋಡಿ, ಅದನ್ನ ತೆಗೆದು ಬೇರೆ ಹಾಕಿ.. .. ಏನೆಲ್ಲಾ ಸರ್ಕಸ್ ಮಾಡಿ ಅಂತೂ ಎರಡು ಮೂರು ಐಟಂ ಗಳು ಮನೆಗೆ ಬಂದ್ವು ಅಂದ್ಕೊಳಿ .. ಅವುಗಳಲ್ಲಿ ವಾಪಸ್ ಮಾಡುವವೇ ಹೆಚ್ಚಿರುತ್ತವೆ ! ಕಾರಣ? "ಅಯ್ಯೋ ನಾನೇನು ಸೀರಿಯಸ್ ಆಗಿ ತೊಗೊಳ್ಳಿಲ್ಲ. ಹೆಂಗೆ ಕಾಣ್ಸತ್ತೆ ನೋಡೋಣ ಅಂತ ಅಷ್ಟೇ" ಅಂತಲೋ , " ಸ್ಕ್ರೀನ್ ಮೇಲೆ ಎಷ್ಟ್ ಚೆನ್ನಾಗಿ ಕಾಣಿಸ್ತು ನಿಜವಾಗಿ ನೊಡೋಕೆ ಚೆನ್ನಾಗಿಲ್ಲ " ಅಂತ ನೋ , "ಇದು ಅಷ್ಟ್ ದುಡ್ಡಿಗೆ ವರ್ತ್ ಇಲ್ಲ" ಅಂತಲೋ , ಕಾರಣಗಳ ಉದ್ದ ಲಿಸ್ಟ್ ಇರುತ್ತೆ .ಹಾಂ , ಇನ್ನೊಂದು ಹೊಸಾ ಕಾರಣ - "ಹೇಗೂ ಕ್ರೆಡಿಟ್ ಕಾರ್ಡ್ ಪೇಮೆಂಟ್ ತಾನೇ ..ಪಾಯಿಂಟ್ಸ್ ಸಿಕ್ಕತ್ತೆ ಬೇರೆ ಎಲ್ಲಾದ್ರೂ ಯೂಸ್ ಆಗತ್ತೆ " !!! ಅಲ್ಲಾ , 150 ಪಾಯಿಂಟ್ಸ್ ಗೋಸ್ಕರ 5-6 ಸಾವಿರ ಖರ್ಚು ಮಾಡ್ಬೇಕಾ ಅಂತ ನನ್ ಪ್ರಶ್ನೆ ಆದರೆ ಹಾಗೆ ಕೇಳಿ ಜೀವ ಕಳ್ಕೊಳೋ ಅಗತ್ಯ ನಂಗಿಲ್ಲ ಬಿಡಿ .
ಏನೇ ಹೇಳಿ, ಏನಾದ್ರೂ ಆಯ್ಕೆ ಗೆ ಅವಕಾಶ ಕೊಟ್ರೆ ನಾನಂತೂ ಆನ್ ಲೈನ್ ಶಾಪಿಂಗ್ ಗೆ ಜೈ ಅನ್ನೋದು ! ನಂಗೆ ಅನುಕೂಲ ತಾನೇ? ಡ್ರೈವಿಂಗ್ , ಪಾರ್ಕಿಂಗ್ ರಗಳೆ ಇಲ್ಲ, ಶಾಪಿಂಗ್ ಬ್ಯಾಗ್ ಹಿಡ್ಕೊಂಡು ಅಲೆಯೋ ಕೆಲಸ ಇಲ್ಲ. ಮನೇಲಿ ಆರಾಮಾಗಿ ಕೂತಿರಬಹುದು. ಅವಳು ಲ್ಯಾಪಟಾಪ್ ಮುಂದೆ ಕುಳಿತು ಶಾಪಿಂಗ್ ಲ್ಲಿ ಮುಳುಗಿರೋದ್ರಿಂದ , ನಾನು ಟಿವಿ ಮುಂದೆ ಕೂತಿರೋದು ಅಷ್ಟಾಗಿ ಗಮನಕ್ಕೆ ಬರೋದಿಲ್ಲ . ಅವಳು 108 ಬಟ್ಟೆ ಬದಲಾಯಿಸ್ತಾ , ನಾನು ಟ್ರಯಲ್ ರೂಮ್ ಎದುರು ಬಾಸ್ಕೆಟ್ ಹಿಡಿದು ನಿಂತು ಆಗಾಗ ಒಂದೋ-ಎರಡೂ ಡ್ರೆಸ್ ಅವಳ ಕೈಗೆ ಕೊಟ್ಟು , ಅವಳು ಒಪಿನಿಯನ್ ಕೇಳಿದಾಗೆಲ್ಲ - ಚೆನ್ನಾಗಿದೆ ,ಓಕೆ - ಸುಮಾರಿಗಿದೆ .. ಅಂತ ಹೇಳ್ತಾ ಇರೋ ಕೆಲಸ ಇಲ್ಲ
.
ಆದರೆ ನನ್ನ ಅಭಿಪ್ರಾಯ ಕೇಳೋರ್ಯಾರು ? ಅವಳ ಪ್ರಕಾರ ಆನ್ ಲೈನ್ ಲ್ಲಿ ಬೆಲೆ ನೋಡ್ಕೊಂಡು ಆಫ್ ಲೈನ್ ಲ್ಲಿ ಕಂಪೇರ್ ಮಾಡ ಬಹುದು . ಮತ್ತೆ ,ಮಾಲ್ ನಲ್ಲಿ ಹತ್ತು ಅಂಗಡಿ ಓಡಾಡಿ ಶಾಪಿಂಗ್ ಮಾಡಿದಾಗ ಸಿಗೋ ತೃಪ್ತಿ ಆನ್ ಲೈನ್ ಶಾಪಿಂಗ್ ನಲ್ಲಿಲ್ಲ .(ಹಾಗಂತ ಆನ್ ಲೈನ್ ಶಾಪಿಂಗ್ ಕಮ್ಮಿ ಆಗಿಲ್ಲ) .
ಫ್ರೆಂಡ್ಸ್ ಕೇಳಿದಾಗ "ಶಾಪರ್ಸ್ ಸ್ಟಾಪಲ್ಲಿ ತೊಗೊಂಡೆ , ಮಾರ್ಕ್ ಅಂಡ್ ಸ್ಪೆನ್ಸರ್ / H &M ಲ್ಲಿ ಸೇಲ್ ಇತ್ತಲ್ಲಾ ಒಳ್ಳೇ ಬಾರ್ಗೇನ್ ಸಿಕ್ತು " ಅಂತೆಲ್ಲ ಹೇಳೋಕೆ ಆಫ್ ಲೈನ್ ಶಾಪಿಂಗೆ ಬೇಕು ಅಂತ ಅವಳ ವಾದ!
ನಿಮ್ಮದೆಲ್ಲ ಏನ್ ಕಥೇನೋ ಗೊತ್ತಿಲ್ಲ. ನನ್ ಕಥೆ ಅಂತೂ ಹೀಗಿದೆ ನೋಡಿ !

2 comments:

sunaath said...

ಅಯ್ಯೋ ಮೇಡಮ್, ಏನ್ ಕೇಳ್ತೀರಾ! ನಿಮ್ಮ ಕಥೆಯನ್ನೋದಿದಾಗ, ಇದು ನನ್ನದೇ ಕಥೆಯೇನೋ ಅಂತ ಅನ್ನಿಸಿ ಬಿಡ್ತು! ಒಟ್ನಲ್ಲಿ ಗಂಡಸರ ಹಣೇಬರಹವೇ ಇಷ್ಟು. ಗಂಡಸರ ಪರವಾಗಿ ವಾಸ್ತವವನ್ನು ದಾಖಲಿಸಿದ್ದಕ್ಕಾಗಿ, ನಿಮಗೆ ಧನ್ಯವಾದಗಳು!

ಚಿತ್ರಾ said...

ಹಹಾಹಾ ! ಇದು ಒಂಥರಾ ನನ್ನ ಪತಿಯ ಕತೆಯೂ ಹೌದು (ಅವರು ಹೀಗೆ ಎದುರಿಗೆ ಹೇಳಿಲ್ಲ ಯಾವಾಗ್ಲೂ ಅಷ್ಟೇ ! )