June 24, 2018

ಮುತ್ತೈದೆ ಭಾಗ್ಯ !
"ಗೌರೂ..... "

ಗಂಡ ಅಡುಗೆಮನೆಗೆ ಬಂದು , ಬೆನ್ನ ಹಿಂದೆ ನಿಂತು ಹೀಗೆ ರಾಗ ಎಳೆದರೂ ಅಂದ್ರೆ , ಏನೋ ವಿಶೇಷ ಬೇಡಿಕೆ ಇದೆ ಅನ್ನೋದು ಗೌರಕ್ಕಂಗೆ ಗೊತ್ತಿರೋದೆ !
ಕುಕರ್ ಇಟ್ಟು ಒಲೆಗೆ ಬೆಂಕಿ ಹಚ್ಚುತ್ತಲೇ ಕೇಳಿದ್ರು .. "ಹಂ.. ಏನು ಬೇಡಿಕೆ ರಾಯರದ್ದು ? "

"ಅದೂ ... ಈಗ ತರಂಗ ಓದ್ತಾ ಇದ್ದೆ. ತರಾವರಿ ಬೋಂಡಾ - ಭಜಿ ಎಲ್ಲ ಕೊಟ್ಟಿದ್ರು , ಅದನ್ನ ನೋಡಿ , ನೀನು ಮುಂಚೆ ಮಾಡ್ತಿದ್ಯಲ್ಲಾ , ಗೋಳಿಬಜೆ ಅದು ನೆನಪಾಯ್ತು ...ತಿನ್ನೋಣ ಅನಿಸ್ತಿದೆ ಕಣೆ "

ಗಂಡನ ಕಡೆ ಥಟ್ಟೆಂದು ತಿರುಗಿದ ಗೌರಕ್ಕ ಹುಬ್ಬು ಗಂಟು ಹಾಕಿಕೊಂಡು ಗದರಿದರು " ಮೊನ್ನೆ ಮೊನ್ನೆ ಅಷ್ಟೇ ಜ್ವರ ಬಿಟ್ಟಿದೆ , ಕೆಮ್ಮು ಇನ್ನೂ ಪೂರ್ತಿ ಕಮ್ಮಿ ಆಗಿಲ್ಲ , ನಿಮಗೆ ಗೋಳಿಬಜೆ ಬೇಕ ? ವಯಸ್ಸಾಗಿದೆ ಇಂಥದ್ದೆಲ್ಲ ಕಂಟ್ರೋಲ್ ಮಾಡ್ಬೇಕು ಅಂತ ಮೊನ್ನೆ ಡಾಕ್ಟರ್ ಹೇಳಲಿಲ್ವೆ ? ಆರೋಗ್ಯ ಮುಖ್ಯ ಕಣ್ರೀ . "

"ನಿಜಾ ಕಣೆ ನೀನು ಹೇಳೋದು. .. ಆದ್ರೂ ..."

"ಹ್ಮಂ , ಮೊಮ್ಮಕ್ಕಳು ಸಂಜೆ ಪಕೋಡಾ ಕರಿದು ಕೊಡು ಅಂದಿದಾರೆ , ಈಗ ಮಧ್ಯಾಹ್ನ ನೆ ನಾಲ್ಕು ಮಾಡಿ ನಿಮಗೆ ಕೊಡ್ತೀನಿ. ಆದ್ರೆ ನಾಲ್ಕು ಅಂದ್ರೆ ನಾಲ್ಕೇ . ಮತ್ತೆ ಕೇಳೋ ಹಾಗಿಲ್ಲ . ಗೊತಾಯ್ತ? " ಒಲೆಯತ್ತ ತಿರುಗಿ ಹೇಳಿದರು ಗೌರಕ್ಕ.
" ಸರಿ ಮಹಾತಾಯಿ , ನೀನು ನನ್ ಪ್ಲೇಟ್ ಗೆಹಾಕಿದಷ್ಟನ್ನೇ ತಿಂತೀನಿ . ಮತ್ತೆ ಕೇಳಲ್ಲ. ಈಗ ಪಕೋಡಾ ಮಾಡ್ತೀಯಾ ತಾನೆ ? " ನಗುತ್ತಾ ಕೇಳಿದರು .
ಗೊತ್ತು ಅವರಿಗೆ, ಈಗ ಎಷ್ಟೇ ಹಾರಾಡಿದರೂ ಬಡಿಸುವಾಗ ಮಾತ್ರ ಹೆಂಡತಿ ಎಂದರೆ ಸಾಕ್ಷಾತ್ ಅನ್ನಪೂರ್ಣೆ ಎಂದು.

ಅಂತೂ ಪಕೋಡ ಮಾಡಿಸಿ ಕೊಂಡು ಮಧ್ಯಾಹ್ನ ಜೊತೆಯಲ್ಲಿ ಊಟ ಮಾಡಿ ಎಂದಿನಂತೆ ಸ್ವಲ್ಪ ಹೊತ್ತಿಗೆ ರೂಮಿನಲ್ಲಿ ಮಲಗಿದ ಸದಾಶಿವರು ೪.೩೦ ಆದರೂ ಏಳದಾಗ ಕಾಫೀ ಮಾಡಿ ಕಾಯುತ್ತಿದ್ದ ಗೌರಕ್ಕ ಅವರನ್ನು ಏಳಿಸಲು ಹೋದರು . ಮೆಲ್ಲಗೆ ಮೈ ಮುಟ್ಟಿದವರೇ ಹೌಹಾರಿ ಅಲ್ಲೇ ಕುಸಿದರು . ಹೇಗೋ ಎದ್ದು ನಡುಗುವ ಕೈಗಳಿಂದ ಮಗನಿಗೆ ಫೋನ್ ಮಾಡಿದರು . ಹತ್ತು ನಿಮಿಷಗಳಲ್ಲಿ , ಅಶ್ವಿನಿ ಧಾವಿಸಿ ಬಂದಳು ಮತ್ತರ್ಧ ಗಂಟೆಯಲ್ಲಿ ಮಗನೂ ಬಂದ. ಮನೆ ಶೋಕದ ಬೀಡಾಗಿತ್ತು.

ಹತ್ತು ದಿನಗಳೇ ಕಳೆದು ಹೋದವು ರೂಮಲ್ಲಿ ಭಗವದ್ಗೀತೆ ಓದುತ್ತಾ ಕುಳಿತಿದ್ದ ಗೌರಕ್ಕಂಗೆ ಪಕ್ಕದಲ್ಲೇ ಅಳುವ ಧ್ವನಿ ಕೇಳಿ ಮುಖ ಮೇಲೆತ್ತುವಷ್ಟರಲ್ಲಿ " ಇದೆನಾಯ್ತೆ ಹೀಗೆ " ಎಂದು ಅವರನ್ನಪ್ಪಿ ಕೊಂಡು ಲಕ್ಷ್ಮಿ ಅಳುತ್ತಿದ್ದರು .
ಲಕ್ಷ್ಮಿ , ಗೌರಕ್ಕನ ನಾದಿನಿ . ಎರಡು ವರ್ಷ ಚಿಕ್ಕವಳಾದ್ರೂ ಅವರಿಗೆ ಜೀವದ ಗೆಳತಿಯಾಗಿದ್ದರು .

ಯಾತ್ರೆಗೆ ಹೋಗಿದ್ನಲ್ಲೇ, ಅಲ್ಲಿ ನೆಟ್ವರ್ಕ್ ಇರ್ಲಿಲ್ಲ ಆಮೇಲೆ ಮೊಬೈಲ್ ಕಳೆದುಹೋಗಿ , ಸುದ್ದಿನೇ ಗೊತಾಗಲಿಲ್ಲ ನೋಡು . ಯಾವಾಗ ಮನೆಗೆ ಫೋನ್ ಮಾಡಿದ್ನೋ ಅವಾಗ ಗೊತಾಯ್ತು , ತಕ್ಷಣ ಓಡಿ ಬಂದೆ , ಆದರೂ ಅಣ್ಣನ ಮುಖ ಕೊನೆ ಬಾರಿ ನೋಡೋ ಭಾಗ್ಯ ಇರಲಿಲ್ಲ ಕಣೆ ... ಎನ್ನುತ್ತ ಕಣ್ಣೀರಿಟ್ಟ ನಾದಿನಿಯನ್ನು ಸಮಾಧಾನಿಸಿದರು .

"ಏನೇನು ಯಾವಾಗ ಆಗಬೇಕು ಅಂತ ಇದ್ಯೋ ಅದನ್ನ ತಪ್ಪಿಸೋಕೆ ಆಗಲ್ಲೆ ಲಕ್ಷ್ಮಿ . ಸಮಾಧಾನ ಮಾಡ್ಕೋ. ಎಲ್ಲಾರು ಹೋಗೋದೇ ಅಲ್ವ ಒಂದಿನ ? ಆದ್ರೆ ಒಂದು ಕಣೆ , ದೇವರು ನಮ್ಮಿಬ್ರ ಕೋರಿಕೆನೂ ಪೂರೈಸಿಬಿಟ್ಟ !
ಅದು ನಂಗೆ ಸಮಾಧಾನ . "
ಅರ್ಥವಾಗದೆ ಲಕ್ಷ್ಮಿ ಅತ್ತಿಗೆಯ ಮುಖ ನೋಡಿದಳು .

"ಹ್ಞೂ , ಕಣೆ. ಯಾರಿಗೂ ಹೊರೆ ಆಗದೆ , ಕಷ್ಟ ಕೊಡದೇ ಹೋಗೋ ಅಂತ ಸಾವು ಬರಬೇಕು ಕಣೆ ಅಂತ ನಿಮ್ಮ ಅಣ್ಣ ಯಾವಾಗಲೂ ಹೇಳ್ತಾ ಇದ್ರು. ಹಾಗೆ ಆಯ್ತು. ನಾನು ಕೂಡ , ದೇವರೇ , ಅವರ ಕೊನೆ ಉಸಿರು ಇರೋವರೆಗೂ ನಾನು ಅವರ ಜೊತೆ ಇರೋ ಹಾಗೆ ಮಾಡಪ್ಪ ಅಂತ ಕೇಳ್ಕೋತಾ ಇದ್ದೆ .ಒಟ್ನಲ್ಲಿ ದೇವರು ಇಬ್ರದ್ದೂ ಕೇಳಿಸ್ಕೊಂಡ ." ಮೆಲ್ಲಗೆ ಕಣ್ಣು ಒರೆಸಿಕೊಂಡರು .

ಅಲ್ಲೇ ಕುಳಿತಿದ್ದ ಬೀಗಿತ್ತಿ ಸುನಂದಾ " ಅಯ್ಯೋ , ಹಾಗಂದ್ರೆನೆ ಗೌರತ್ತಿಗೆ ? ಎಲ್ಲರು ಮುತ್ತೈದೆ ಸಾವಿಗೋಸ್ಕರ ಬೇಡ್ಕೊತಾರೆ . ನೀನು ನೋಡಿದ್ರೆ ...... "

" ನಿಜ , ಈಗ ಎರಡು ವರ್ಷಗಳ ಹಿಂದಿನ ವರೆಗೂ ನಾನು ಮುತ್ತೈದೆ ಸಾವು ಬಯಸ್ತಿದ್ದೆ . ಆದರೆ , ಅವರ ಸ್ನೇಹಿತ ಶಂಕರಣ್ಣ ನ ಹೆಂಡತಿ ಸತ್ತೋದ ಮೇಲೆ ಅವರ ಪರಿಸ್ಥಿತಿ ನೋಡಿ ಇವರಿಗೆ ಒಂಥರಾ ಭಯ ಶುರುವಾಯ್ತು . ಶಂಕರಣ್ಣಗೆ ಮರೆವು ಬೇರೆ ಶುರುವಾಗಿತ್ತಲ್ಲ ? ಮಕ್ಕಳು ಅವರನ್ನ ನೋಡ್ಕೋಳೋಕೆ ಕಿರಿ ಕಿರಿ ಮಾಡ್ತಾ ಇದಿದ್ದನ್ನ ನೋಡ್ತಿದ್ರಲ್ಲ ಇವರು , ತುಂಬಾ ಬೇಜಾರು ಮಾಡ್ಕೋತಿದ್ರು . ಇವರಿಗೂ ನಡುವೆ ಸಲ್ಪ ಮರೆವು ಶುರುವಾಯ್ತು ನೋಡು , ಆಗಿಂದ ನನ್ನತ್ರ ಯಾವಾಗಲೂ ಹೇಳೋರು ನೀನು ನನ್ನ ಜೊತೆಗೆ ಇರ್ಬೇಕು ಕಣೆ," ನಂಗೂ ಹೀಗೆಲ್ಲ ಆಗೋದ್ರೆ , ನೀನೇ ನೋಡ್ಕೋಬೇಕು ಅಂತ . ಅಯ್ಯೋ ಯಾಕೆ ಹಾಗೆಲ್ಲ ಅಂತೀರಾ? ನಮ್ ಮಕ್ಕಳು ನಮ್ಮನ್ನ ಚೆನ್ನಾಗೆ ನೋಡ್ಕೋತಾರೆ ಅಂತ ಹೇಳ್ತಿದ್ರು ಅವರಿಗೆ ಸಮಾಧಾನ ಇರಲಿಲ್ಲ . ಏನೇ ಆದ್ರೂ , ನಿನ್ನತ್ರ ಹೇಳ್ಕೊಳೋ ಅಷ್ಟು ಸುಲಭವಾಗಿ ಮಕ್ಕಳತ್ರ ಮಾತಾಡೋಕಾಗತ್ತ ? ಅಂತ . ಒಂಥರಾ ಒಳಗೊಳಗೇ ಭಯ , ಗಾಬರಿ ಅವರಿಗೆ . ಅದನ್ನೆಲ್ಲ ನೋಡಿದ್ಮೇಲೆ ನಂಗೂ ಅನ್ನಿಸ್ತು ಅವರ ಕೊನೆ ಉಸಿರಿನವರೆಗೆ ನಾನು ಅವರ ಜೊತೆಲೇ ಇರ್ಬೇಕು ಅಂತ . ಅವತ್ತಿಂದ ದೇವರತ್ರ ಅದನ್ನೇ ಕೇಳ್ತಾ ಇದ್ದೆ ."

"ಏನೇ ಹೇಳು ಗೌರತ್ತಿಗೆ , ಇದೊಂತರ ಗಂಡನಿಗೆ ನನಗಿಂತ ಮೊದಲೇ ಸಾವು ಕೊಡು ಅಂತ ಕೇಳಿದ ಹಾಗೆ ಅಗ್ಲಿಲ್ವೇನೆ ? ಮೊದಲಿಂದ ನಾವು ಹೆಂಗಸರು ಮುತ್ತೈದೆ ಸಾವು ಕೊಡಪ್ಪಾ ದೇವ್ರೇ ಅಂತ ಕೇಳ್ಕೊಂಡು ಬಂದಿದ್ದು "

"ಅಲ್ಲ ಸುನಂದಾ , ಮೊದಲಿನ ಕಾಲ ಬೇರೆ ಇತ್ತು . ಗಂಡ ಸತ್ತ ಮೇಲೆ ಆ ಹೆಂಗಸಿಗೆ ಗೌರವ ಕೊಡೋರು ಕಮ್ಮಿ ಜನ ಇದ್ರೂ . ನೂರೆಂಟು ಕಷ್ಟ ಅನುಭವಿಸಬೇಕಿತ್ತು . ಅದಕ್ಕೋಸ್ಕರ ಹಾಗೆ ಕೇಳ್ಕೊತಾ ಇದ್ರೇನೋ .
ಈಗ ಹಾಗಿಲ್ವಲ್ಲ ? ಅಷ್ಟಕ್ಕೂ ಇದು ಗಂಡನಿಗೆ ಬೇಗ ಸಾವು ಬರಲಿ ಅಂತಲ್ಲ , ಆದರೆ ಅವನ ಕೊನೆ ಉಸಿರಿನವರೆಗೂ ನಾವು ಜತೆಯಲ್ಲಿರೋಕೆ ಬಯಸಿದಂತೆ ಆಗಲಿಲ್ವ? ಮದುವೇಲಿ ಸಪ್ತಪದಿ ತುಳೀವಾಗ ಜೀವನದ ಪ್ರತಿ ಹೆಜ್ಜೆಲೂ ಜೊತೆಗೆ ಇರ್ತೀನಿ ಅಂತ ವಚನ ಕೊಡ್ತೀವಲ್ವ? ಆಮೇಲೆ ಮುತ್ತೈದೆ ಸಾವು ಬೇಕು ಅಂತ ಕೇಳೋದು ತಪ್ಪಲ್ವ? ಅದು ಸ್ವಾರ್ಥ ಆಗಲ್ವ? ನಾವು ಹೆಂಗಸರು, ಏನೇ ಪರಿಸ್ಥಿತಿ ಬಂದರೂ ಹೇಗೋ ಹೊಂದ್ಕೊಂಡು ಹೋಗ್ತೀವಿ. ಆದರೆ , ಗಂಡಸರಿಗೆ ಅದು ಕಷ್ಟ . ಹೆಂಡತಿ ಹತ್ರ ಸುಖ ದುಃಖ ಹೇಳಿಕೊಂಡ ಹಾಗೆ, ಅದು ಬೇಕು ಇದು ಬೇಕು ಅಂತ ಕೇಳಿದ ಹಾಗೆ , ಹಾಗಾಗ ಬೇಕು ಹೀಗೆ ಬೇಕು ಅಂತೆಲ್ಲ ಜಬರ್ದಸ್ತ್ ಮಾಡಿದ ಹಾಗೆ ಸೊಸೆ ಅಥವಾ ಮಗಳ ಎದುರು ಮಾಡೋಕಾಗಲ್ಲ . ಒಂದು ರೀತಿಯಿಂದ ನೋಡಿದ್ರೆ , ಭಾವನಾತ್ಮಕವಾಗಿ ನಮ್ಮ ಮೇಲೆ ಡಿಪೆಂಡ್ ಆಗಿರ್ತಾರೆನೋ ಅನ್ಸತ್ತೆ .
ಯಾರ ಕಾಲ ಯಾವಾಗ ಮುಗಿಯತ್ತೋ ಅದು ನಮ್ಮ ಕೈಲಿ ಇಲ್ದೆ ಹೋಗಿದ್ದು . ಕೊನೆ ಪಕ್ಷ ಅವರನ್ನ ಒಂಟಿಯಾಗಿಸಿ ನಾನೇ ಮೊದಲು ಪ್ರಪಂಚ ಬಿಟ್ಟು ಹೋಗ್ತೀನಿ ಅಂತ ಬಯಸೋದು ಬೇಡ ಅನಿಸ್ತು ನಂಗೆ . ಇನ್ನು ಚಿಂತೆ ಇಲ್ಲ . ಯಾವಾಗ ಸಾವು ಬಂದರೂ ನಾನು ರೆಡಿ ಆಗಿದೀನಿ ."
ನಿರಾಳ ದನಿಯಲ್ಲಿ ಹೇಳಿದ ಗೌರಕ್ಕನ ಕಣ್ಣಲ್ಲಿ ಶಾಂತ ಭಾವ ನೆಲೆಸಿತ್ತು .

June 16, 2018

ಬರೆಯಲಾಗದ ಹಾಡು !

ಬರೆಯಬೇಕೆನಿಸಿದರೂ ಬರೆಯಲಾಗದ ಹಾಡು 
ನೂರೆಂಟು ಉಳಿದಿಹುದು  ಮನಸಿನೊಳಗೆ 
ಬರೆಯುವುದೋ ಬೇಡವೋ ಎಂಬ ತೊಳಲಾಟದಲಿ
ಬೇಯುತಿಹೆ ನೋಯುತಿಹೆ  ಒಳಗಿಂದೊಳಗೆ 

ನನ್ನೊಡಲ ಭಾವಗಳ ನಿನ್ನೆದುರು ತೆರೆದಿಡಲೇ
ಓದಬಲ್ಲೆಯಾ ಗೆಳೆಯಾ ಪ್ರೀತಿಯಿಂದ?
ನಗುಮೊಗದ ಹಿಂದಿರುವ ನೂರೆಂಟು ನೋವುಗಳ 
ನೋಡಬಲ್ಲೆಯಾ ಗೆಳೆಯಾ ಸಹನೆಯಿಂದ?

ಬೇಸರಾಗಿದೆ ಮಾತು  ಮನವ ತುಂಬಿದೆ ಮೌನ 
ಎದೆಯಲ್ಲಿ ಸುಡುತಿರುವ  ಬೆಂಕಿಯಿಹುದು 
ಬಯಸಿದರೂ  ಸಿಗದಿರುವ  ಬಗೆ ಬಗೆಯ ಕನಸುಗಳು 
ಅಣಕವಾಡುತ  ನನ್ನ  ಕಾಡುತಿಹುದು 

April 2, 2018

ಲಂಕಾದಹನ


ಲಂಕಾ ಪಟ್ಟಣ ತುಂಬಾ ಸುಂದರ ವಾಗಿತ್ತು . ಮನೆಗಳಿಗೆ  ಚಿನ್ನದ ತರ ಕಾಣೋ ಹಾಗೆ  ಬಣ್ಣ ಹಚ್ಚಿದ್ರು .
ಅರಮನೆಗಳಂತೂ  ತುಂಬಾ ಚೆಂದ ಚೆಂದ ಇದ್ವು . 
ಹನುಮಂತ ಒಂದು ಕೋತಿ ರೂಪದಲ್ಲಿ  ಆ ಅರಮನೆಗಳನ್ನೆಲ್ಲ ಮುಂಚೆ ಹುಡುಕದ . ಅಲ್ಲೆಲ್ಲೂ ಸೀತೆ ಕಾಣಿಸಲಿಲ್ಲ . 

ಹಾಗೆ  ಹುಡುಕ್ತಾ ಹುಡುಕ್ತಾ  ಅಶೋಕ ವನದ ಹತ್ರ ಬಂದ .

"ಅದೆನಜ್ಜಿ  ಅಶೋಕ ವನ?  "

"ಅದು ಕಬ್ಬನ್ ಪಾರ್ಕ್, ಲಾಲ್ ಬಾಗ್ ತರ ನೇ ದೊಡ್ಡ ಗಾರ್ಡನ್ ಕಣೆ.   ಅಲ್ಲಿ ಒಂದು ದೊಡ್ಡ ಮರದ ಕೆಳಗೆ ಒಬ್ಬ ಚೆಂದದ ಹೆಂಗಸು ಕಾಣಿಸಿದಳು  ಹನುಮಂತಂಗೆ . ಅಳ್ತಾ ಕೂತಿರೋ  ಅವಳ ಸುತ್ತ   ಸುಮಾರು ಜನ ಹೆಂಗಸರಿದ್ರು . ಆದರೆ ಆ ಹೆಂಗಸು  ಬೇರೆ ಯಾರತ್ರನೂ ಮಾತಾಡದೆ ಇರೋದನ್ನ ನೋಡಿ  ಅವಳೇ ಸೀತೆ ಇರಬೇಕು ಅಂದ್ಕೊಂಡ . ಅವಳು ಕೂತಿರೋ ಮರದ ಕೊಂಬೆ ಮೇಲೆ  ಅಡಗಿ ಕೂತ್ಗೊಂಡು ನೋಡ್ತಾ ಇದ್ದ . 

" ಅವಳೇ ಸೀತೆ  ಗ್ಯಾರಂಟಿ ಆಲ್ವಾ ಅಜ್ಜಿ? ಅವಳಿಗೆ ಭಾಷೆ ಬರ್ತಾ ಇರಲಿಲ್ಲವಲ್ಲಾ ಅದಕೆ ಯಾರತ್ರು ಮಾತಡ್ತಿರಲಿಲ್ಲ ಅವಳು . ಆಲ್ವಾ ಅಜ್ಜಿ ? "   ಅಪೂರ್ವಾ ಮುಖ ಅರಳಿತ್ತು .

"ಈಗ ಮೊಬೈಲ್ ನಲ್ಲಿ ಟ್ರಾನ್ಸ್ ಲೇಟರ್ ಹಾಕೊಂಡ್ರೆ ಯಾವ್ ಭಾಷೆ ಬೇಕಾದ್ರೂ ಅರ್ಥ ಮಾಡ್ಕೊಬಹುದು !  ಅದ್ಕೆ  ಟೆಕ್ನಾಲಜಿ  ಬೇಕು ಅನ್ನೋದು .. " ವರುಣ್  ಇನ್ನೂ ಏನೋ ಹೇಳ್ತಾ ಇದ್ದ . ಆದರೆ ಅಜ್ಜಿ ಗಮನ ಕೊಡದೆ ಮುಂದುವರೆಸಿದರು .

"ಹ್ಞೂ ಕಣೆ .  ಅಷ್ಟೊತ್ತಿಗೆ ಅಲ್ಲಿಗೆ   ರಾವಣ  ಬಂದ .  ಸೀತೆ  ಎದುರು ನಿಂತು " ನೋಡು ನೀನೆಷ್ಟೇ ಅತ್ತು ಕರೆದು  ಮಾಡಿದ್ರೂ, ಉಪವಾಸ ಇದ್ರೂ  ಏನೂ ಆಗಲ್ಲ ! ನಿನ್ನ ರಾಮ ಇಲ್ಲಿ ಬರೋದು ಸಾಧ್ಯ ನೇ ಇಲ್ಲ .  ಅವನು ಬಂದರೂ ಕೂಡ ನನ್ನ ಸೈನ್ಯದ ಎದುರು ಅವನಿಗೆ  ಗೆಲ್ಲೋಕೆ ಆಗಲ್ಲ . ಹೀಗಾಗಿ ಸುಮ್ನೆ  ನಾ ಹೇಳಿದ್ದು ಕೇಳು . ಈ ಹಠ ಎಲ್ಲ ಬಿಟ್ಟು ನನ್ನ ಮದ್ವೆ ಆಗಿ ರಾಣಿ ತರಾ ಸುಖವಾಗಿರು " ಅಂದ .

"ಆದ್ರೆ , ಸೀತೆ ಗೆ ಆಲ್ ರೆಡಿ  ಮದ್ವೆ ಆಗಿದ್ಯಲ್ಲ ಅಜ್ಜಿ ?  ಮತ್ತೆ ? "
" ಹೌದಮ್ಮ , ಆದ್ರೆ ರಾವಣ ಅದೆಲ್ಲ ವಿಚಾರ ಮಾಡ್ತ ಇರ್ಲಿಲ್ಲ . ಅವನು ಹೀಗೆ ಹೇಳ್ತಾ ಇದ್ರೆ ಸೀತೆ  ಅವನ ಕಡೆ ನೋಡಲೂ ಇಲ್ಲ . ನೆಲದ ಮೇಲೆ ಬಿದ್ದಿದ್ದ ಒಂದು ಹುಲ್ಲು ಕಡ್ಡಿ  ಕಡೆ ನೋಡ್ತಾ "  ನೋಡು ನೀನು  ಎಷ್ಟೇ ಪ್ರಯತ್ನ ಮಾಡಿದ್ರೂ  ನಾನು ನಿನ್ನ ಮಾತನ್ನು ಒಪ್ಪೋದು ಸಾಧ್ಯ ಇಲ್ಲ . ನನ್ನ ಕದ್ಕೊಂಡು ಬಂದು ತುಂಬಾ ದೊಡ್ಡ ತಪ್ಪು ಮಾಡಿದೀಯಾ. ನನ್ನ ರಾಮ ಬಂದೆ ಬರ್ತಾನೆ . ನಿನ್ನ ಕೊಂದು , ನನ್ನ ಇಲ್ಲಿಂದ ಕರ್ಕೊಂಡು ಹೋಗ್ತಾನೆ . ಆ ಭರವಸೆ ನನಗಿದೆ  "  ಅಂತ ಹೇಳಿದಳು . ಅದನ್ನ ಕೇಳಿ ರಾವಣ ಸಿಟ್ಟು ಮಾಡ್ಕೊಂಡು  ಹೊರಟು ಹೋದ .

ರಾತ್ರಿ  ಸೀತೆ ನಾ  ಕಾಯ್ತಾ ಇರೋ ಹೆಂಗಸರೆಲ್ಲ  ಮಲಗೊವರೆಗೂ  ಹನುಮಂತ  ಕಾದಿದ್ದು ,  ಆಮೇಲೆ  ಸೀತೆಯ ಎದುರು ಹೋಗಿ ನಿಂತ .
ಹೆದರಿದ ಅವಳು ,  ಇವನು ಯಾರೋ ರಾಕ್ಷಸನೇ  ಕೋತಿ ತರ ಬಂದಿದಾನೆ ಅಂದ್ಕೊಂಡಳು. 
ಅವಳ ಮುಂದೆ ನಿಂತ  ಹನುಮಂತ ತನ್ನ ಕೈಲಿರೋ  ರಾಮನ ಉಂಗುರ ನಾ  ಅವಳೆದುರು ಹಾಕಿ  ಕೈಮುಗಿದ . ಅದನ್ನು ನೋಡ್ತಿದ್ದ ಹಾಗೆ  ಸೀತೆ  ಕಣ್ಣಲ್ಲಿ ನೀರು ಬಂತು. 
ಉಂಗುರನಾ  ಎತ್ಕೊಂಡು  ಯಾರು ನೀನು ?  ಇದು ನಿನ್ ಹತ್ರ ಹೇಗ್ ಬಂತು ?  ಅಂತ ಕೇಳಿದಳು . 
"ತಾಯಿ , ನಾನು ಹನುಮಂತ .  ನಿನ್ನನ್ನ ಹುಡುಕಿಕೊಂಡು ಬರ್ತೀನಿ  ಅಂತ ಶ್ರೀರಾಮನಿಗೆ  ಮಾತು ಕೊಟ್ಟು ಬಂದಿದೀನಿ. ಅವನು ಈಗ ಕಿಷ್ಕಿಂಧೆಲಿ ಇದ್ದಾನೆ. ನಿನ್ನನ್ನು ನೋಡಿ ನಂಗೆ ತುಂಬಾ ಸಮಾಧಾನ ಆಯ್ತು. ನೀನು  ನನ್ನ ಭುಜದ ಮೇಲೆ ಕೂತ್ಕೋ ನಾನು ಸೀದಾ ರಾಮನ ಹತ್ತಿರ ನಿನ್ನನ್ನು ಕರ್ಕೊಂಡು ಹೋಗ್ತೀನಿ "  ಅಂತ ಹೇಳಿದ .

ಅದಕ್ಕೆ ಸೀತೆ ,  " ಹನುಮಂತಾ, ನಂಗೆ ಇದನ್ನ ಕೇಳಿ ತುಂಬಾ ಖುಷಿ ಆಯ್ತು. ಆದ್ರೆ ಶ್ರೀ ರಾಮನೇ  ಬಂದು  ಈ ರಾವಣನ ಕೊಂದು ನನ್ನ ಇಲ್ಲಿಂದ ಕರ್ಕೊಂಡು ಹೋಗ್ಬೇಕು . ಅದೇ ಸರಿ ! " ಅಂತ ಹೇಳಿದಳು .
ಈಗ ನೀನು ನನ್ನನ್ನು ಭೇಟಿಯಾದೆ  ಅಂತ  ಈ ಆಭರಣ ಣ ರಾಮನಿಗೆ ಕೊಡು "  ಅಂತ  ತನ್ನ ತಲೇಲಿ ಇದ್ದ ಒಂದು ಚಿನ್ನದ ಹೂವನ್ನ  ಹನುಮಂತನಿಗೆ  ಕೊಟ್ಟಳು . 

"ಅಜ್ಜಿ , ಅಜ್ಜಿ ಅವಳತ್ರ ಚಿನ್ನದ ಹೂ ಹೇಗ್  ಬಂತು ? ಮನೆಯಿಂದ ಹಾಕ್ಕೊಂಡೆ ಬಂದಿದ್ಲಾ?  ಅದನ್ನ ಯಾರೂ ಕಿತಗೊಂಡೇ ಇಲ್ವಾ?"  ಅಪೂರ್ವಾ ಪ್ರಶ್ನೆ !

"ಅವಳ  ಜಡೆ ಲೆ ಇತ್ತು ಕಣೆ . ಅದನ್ನೆಲ್ಲ ಹಾಗೆ ಯಾರೂ ಕಿತ್ಗೋತಿರಲಿಲ್ಲ. " ಜಾಸ್ತಿ ವಿವರಣೆ ಕೊಡೋಕೆ ಹೋಗದೆ ಅಜ್ಜಿ ಮುಂದುವರಿಸಿದರು .
ಸರಿ ಅದನ್ನ ತೊಗೊಂಡು  ಹನುಮಂತ  ಅವಳಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟ .  ಸುಮ್ನೆ ಯಾಕೆ ಹೋಗೋದು ಸ್ವಲ್ಪ ಕೀಟಲೆ ಮಾಡೋಣ ಅನಿಸ್ತು ಅವನಿಗೆ.  ಅಶೋಕವನ ಅಂದ್ರೆ ರಾವಣನಿಗೆ ತುಂಬಾ ಪ್ರೀತಿ ಅಂತ  ಗೊತಾಗಿತ್ತು ಅವನಿಗೆ.  ಹೀಗಾಗಿ , ಅದನ್ನ ಹಾಳು ಮಾಡೋಕ್ ಶುರು ಮಾಡಿದ.  ಹೂವೆಲ್ಲ  ಕಿತ್ತು, ಮರ-ಗಿಡಗಳನ್ನೆಲ್ಲ  ಮುರಿದು  ಹಾಳು ಮಾಡಿದ. 

"ಅಜ್ಜಿ, ಅದನ್ನೆಲ್ಲ ಯಾಕೆ ಹಾಳು ಮಾಡೋದಜ್ಜಿ ? ಪಾಪ ಅವೇನು ಮಾಡಿದ್ವು ? ಹಾಗೆಲ್ಲ ಗಿಡ ಹಾಳು ಮಾಡಬಾರದು ಅಂತ  ಅಮ್ಮ ಬೈತ ಇರ್ತಾಳೆ. "

ಹೂ ಕಣೆ. ಅವನು ಮಾಡಿದ್ದು ತಪ್ಪೇ. ಆದರೆ ಅವನಿಗೆ ರಾವಣನ ಹತ್ರ ಹೋಗೋಕೆ ಕಾರಣ ಬೇಕಿತ್ತು.  ಇದೆಲ್ಲ ನೋಡಿ ಸೈನಿಕರು  ಅವನ್ನ ಹಿಡಿದು ರಾವಣನ ಎದುರು ನಿಲ್ಸಿದ್ರು. 

ತನ್ನ ಪ್ರೀತಿಯ ಅಶೋಕವನವನ್ನು  ಹಾಳುಮಾಡಿದ ಅಂತ  ರಾವಣಂಗೆ ತುಂಬಾ ಕೋಪ ಬಂದಿತ್ತು . ಹನುಮಂತನನ್ನು ನೀ ಯಾರು? ಎಲ್ಲಿಂದ ಬಂದೆ? ಅಶೋಕವನನಾ ಯಾಕೆ ಹಾಳುಮಾಡಿದೆ ಅಂತೆಲ್ಲ  ಕೇಳಿದ . 
ಹನುಮಂತ , ತಾನು ರಾಮನ ಕಡೆಯವನು , ಸೀತೇನ ಹುಡುಕ್ಕೊಂಡು ಬಂದಿದೀನಿ , ಅವಳಿಗೆ ಏನೂ ತೊಂದ್ರೆ ಕೊಡದೆ ವಾಪಸ್ ಕಳಿಸಿಕೊಡು , ಇಲ್ಲಾಂದ್ರೆ ,ರಾಮ  ಯುದ್ಧ ಮಾಡಿ ನಿನ್ನ ಸಾಯಿಸ್ತಾನೆ  ಅಂತ ಹೇಳಿದ . 
ಅದಕ್ಕೆ ರಾವಣ ಜೋರಾಗಿ ನಕ್ಕು , ನಿನಗೆ ನನ್ನತ್ರ ಹೀಗೆ ಮಾತಾಡೋ ಅಷ್ಟು ಧೈರ್ಯನಾ  ಅಂತ  ಬೈದು , ತನ್ನ ಸೇವಕರಿಗೆ  ಹನುಮಂತನ ಬಾಲಕ್ಕೆ ಬೆಂಚಿ ಹಚ್ಚಿ  ಕಳಿಸೋಕೆ ಹೇಳಿದ . 

ರಾವಣನ ಸೇವಕರು  ಬಾಲಕ್ಕೆ ಬೆಂಚಿ ಹಚ್ಚಬೇಕು  ಅಂತ ಬಂದಾಗ , ಹನುಮಂತನ ಬಾಲ ಉದ್ದ ಬೆಳಿತಾ ಹೋಯ್ತು ! 

"ಅಜ್ಜಿ,  ಅದು ಹ್ಯಾಗೆ ಅಜ್ಜಿ ?  ಅದೇನು  ಗಿಡ -ಬಳ್ಳಿ ತರ ನ? ಬೆಳಿಯೋಕೆ ?  " ಆದಿತ್ಯ ಕೇಳಿದ 

" ಏಯ್ , ಒಂಥರಾ ಎಲಾಸ್ಟಿಕ್ ಆಗಿರಬೇಕು ಕಣೋ " ಜೋರಾಗಿ ನಕ್ಕು ಹೇಳಿದ ವರುಣ್  ತಕ್ಷಣ ಅಜ್ಜಿ ಕೋಪದ ನೆನಪಾಗಿ  "ಸಾರಿ ಅಜ್ಜಿ ಅಂತ ಸುಮ್ಮನಾದ. 

" ಅಜ್ಜಿ, ನಾನು ಇದನ್ನ ನೋಡಿದೀನಿ ಟಿವಿ ಲಿ "  ಎಕ್ಸೈಟ್ ಆಗಿ ಅಪೂರ್ವ ಹೇಳಿದಳು ."  ಬಾಲಕ್ಕೆ ಬೆಂಕಿ ಹಚ್ಚಿಕೊಂಡು  ಹನುಮಂತ .... " ಮುಂದುವರೀತಾ ಇತ್ತು 

" ಸುಮ್ನಿರೆ ,ಅಜ್ಜಿನೆ ಹೇಳ್ಲಿ . ನೀನು ಟಿ ವಿ ಲಿ ನೋಡಿದ್ದು ಈಗ ಹೇಳಬೇಡ "   ತಂಗಿಗೆ  ಗದರಿದ ಆದಿತ್ಯ 
" ಹ್ಮಂ...  ಹನುಮಂತನ ಬಾಲ  ಬೆಳಿತಾ ಹೋಯ್ತು !  ಲಂಕೆಲಿ ಇರೋ ಬಟ್ಟೆನೆಲ್ಲ ಸುತ್ತಿದರು ಮುಗೀಲಿಲ್ಲ .ಅವರು ಎಷ್ಟು ಸುತ್ತೊಕಾಯ್ತೋ ಸುತ್ತಿ ಹಾಗೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು .  ಹನುಮಂತ ಅಲ್ಲಿಂದ ಹೊರಗೆ ಹಾರಿದ . ಲಂಕೆಯಲ್ಲಿರೋ  ದೊಡ್ಡ ದೊಡ್ಡ ಮನೆಗಳ ಮೇಲೆಲ್ಲಾ ಹಾರಿ ಎಲ್ಲಾ ಕಡೇ ಬೆಂಕಿ ಹಚ್ಚಿ ಬಿಟ್ಟ . ಇಡೀ ಲಂಕಾ ಪಟ್ಟಣ ನೆ  ಉರಿಯೋಕೆ ಶುರುವಾಯ್ತು !  " 

"ಅಜ್ಜಿ ,  ಯಾಕಜ್ಜಿ ಅವನು ಹಾಗೆ ಮಾಡ್ಬೇಕು ?  ರಾವಣ ತಪ್ಪು ಮಾಡಿದ್ದು ತಾನೇ ? ಅವನ ಅರಮನೆ ಮಾತ್ರ ಸುಡ ಬೇಕಿತ್ತು . ಪಾಪ ಬೇರೆವ್ರೆಲ್ಲ ಅವರ ಮನೆ ಸುಟ್ಟು ಹೋದ್ರೆ   ಏನ್ ಮಾಡ್ತಾರೆ ?  ಇದು ಸರಿ ಅಲ್ಲ ಅಜ್ಜಿ  "   ಅಪೂರ್ವಾ  ಅಳು ಧ್ವನಿಲಿ ಹೇಳಿದಳು . 

" ಹಾಗೆ ಮಾಡಿದ್ರೆ , ರಾವಣ ತನ್ನ ತಪ್ಪನ್ನ ತಿದ್ಕೊಬಹುದು ಅಂತ ಆಗಿತ್ತಮ್ಮ ಅದು . ಬಿಡು ನಾವೇನು ಮಾಡೋಕಾಗಲ್ವಲ್ಲ ಈಗ . ನೀ ಮುಂದೆ ಕಥೆ ಕೇಳು . ಅಜ್ಜಿ ಮೊಮ್ಮಗಳನ್ನು ಸಮಾಧಾನ ಮಾಡಿದರು . 
" ಲಂಕಾ ಪಟ್ಟಣ ಕ್ಕೆ ಬೆಂಕಿ ಹಚ್ಚಿದ  ಹನುಮಂತ  ತನ್ನ ಬಾಲನ ಸಮುದ್ರದಲ್ಲಿ ಅದ್ದಿ ಬೆಂಕಿ ಆರಿಸ್ಕೊಂಡ . 
ಆಮೇಲೆ , ಅಲ್ಲಿಂದ ಪುನಃ ಜಿಗಿದು ಕಿಷ್ಕಿಂಧೆಗೆ ವಾಪಸ್ ಹೋದ.  "

" ಅಜ್ಜೀ , ಅವನ ಬಾಲ ಸುಟ್ಟು ಹೋಗಲಿಲ್ವಾ ? ಉರಿಲೂ ಇಲ್ವಾ ಅವನಿಗೆ?  ನಂಗೆ ಬೆಳಿಗ್ಗೆ ಅಮ್ಮ ಹಾಲಿನ ಲೋಟ ಕೊಟ್ಳಲ್ಲ , ಅದರಲ್ಲಿ ಕೆನೆ ಸರಿಸೋಕೆ  ಹೋದೆ , ಬೆರಳು  ಸುಟ್ಟೋಗಿ ಇನ್ನೂ ಉರಿತಾ ಇದೇ ... " 

" ಸುಮ್ನಿರೇ ,ಉಗುರು ಬೆಚ್ಚಗೆ ಕೂಡ ಇರ್ಲಿಲ್ಲ ಹಾಲು , ಬೆರಳು ಸುಡ್ತಂತೆ " ಸ್ಮಿತಾ ಸಿಡುಕಿದಳು 
" ನಿಂಗೊತ್ತಿಲ್ಲ ಸುಮ್ನಿರು  ಎಂದು ಅಮ್ಮನಿಗೆಮೂತಿ ತಿರುವಿದ ಅಪೂರ್ವಾ " ಅಜ್ಜೀ , ಮುಂದೆ ಹೇಳು "  ರಾಗ ಎಳೆದಳು.
" ವಾಪಸ್ ಬಂದ ಹನುಮಂತ  ಸೀದಾ ರಾಮನ ಹತ್ತಿರ ಹೋದ . ಅವನಿಗೆ ನಮಸ್ಕಾರ ಮಾಡಿ  ಸೀತೆಯ ವಿಷಯವನ್ನೆಲ್ಲ ಹೇಳಿದ . ಹಾಗೆ ಅವಳು ಕೊಟ್ಟಿದ್ದ ಚೂಡಾಮಣಿ ನು ರಾಮನಿಗೆ ಕೊಟ್ಟ .ಅದನ್ನು ನೋಡಿ , ಸೀತೆ ಅಳ್ತಾ ಇರೋ ಸುದ್ದಿನೆಲ್ಲ ಕೇಳಿ ರಾಮನಿಗೂ ಅಳು ಬಂದು ಬಿಡ್ತು .  " 

" ಪಾಪ ಆಲ್ವಾ ಅಜ್ಜಿ? ನಂಗೂ ಅಳು ಬರ್ತಿದೆ . ಹನುಮಂತ ಲಂಕೆನೆಲ್ಲ ಸುಟ್ಟಾಕಿದ ಅಂತ ಕೋಪಕ್ಕೆ ರಾವಣ ಸೀತೆ ನ ಸಾಯಿಸಿ ಬಿಟ್ರೆ ? " 

" ಹೇಯ್ ಅಳುಬುರ್ಕಿ , ಆ ತರ ಏನೂ ಆಗಲ್ಲ. ಸುಮ್ನೆ ಕಥೆ ಕೇಳೆ"  ವರುಣ್ ಬೈದ . 
" ರಾಮ -ಲಕ್ಷ್ಮಣ ಇಬ್ರೂ ಸುಗ್ರೀವನ ಹತ್ರ ಮಾತಾಡಿ ,  ಲಂಕೆಗೆ ಯುದ್ಧಕ್ಕೆ ಹೋಗೋದು ಅಂತ  ತೀರ್ಮಾನ ಮಾಡಿದ್ರು . ಒಂದೇ  ದೊಡ್ಡ ತೊಂದ್ರೆ ಅಂದ್ರೆ ಸಮುದ್ರ ದಾಟೋದು !  ಆ ಬಗ್ಗೆನೇ ಯೋಚನೆ ಮಾಡ್ತ  ಸಮುದ್ರ ತೀರದ ವರೆಗೂ ಹೋದ್ರು .


 ಹಿಂದಿನ ಕಂತುಗಳು 
March 11, 2018

ಪ್ರಯಾಣ

ಇಲ್ಲಿಯ ಲೋಕಲ್ ಟ್ರೈನ್  ನಲ್ಲಿ 
ಬಾಗಿಲೆದುರೆ ಇಟ್ಟ ಎರಡು ಬುಟ್ಟಿ
ಒಂದರಲ್ಲಿದೆ ಮೀನು  ಇನ್ನೊಂದರಲ್ಲಿ  ಹೂವು !
ಅದರತ್ತಿತ್ತ ಚೆಲ್ಲಿದ ಶೇಂಗಾ ಸಿಪ್ಪೆ 
ಕಾಲಿಟ್ಟರೆ ಅಡಿಗೆ ಸಿಕ್ಕಿದ ಪ್ಲಾಸ್ಟಿಕ್ ನ ಚರಪರ
ತೊಂದರೆ ಇಲ್ಲ ಬಿಡಿ , ಕಾಲಿಡಲಾದರೂ  ಜಾಗವೆಲ್ಲಿ ?

ತುಸುವೇ ಜಾಗ ಸಿಕ್ಕರೂ  ಅಲ್ಲೇ ಕುಳಿತು
ಕಾರ್ಡು  ಹಚ್ಚುವವರಿಗೂ ಕೊರತೆಯಿಲ್ಲ 
ನಿಂತೇ ಬೇಕಾದರೂ ಆಟಿನ್ ರಾಣಿ,  ಇಸ್ಫೀಟು ಎಕ್ಕಾ 
ಎನ್ನುತ್ತಾ ಸಂಭ್ರಮಿಸುತ್ತಾರೆ .

ಅಲ್ಲಿಯೇ ಎಲ್ಲೋ ಒತ್ತಿಕೊಂಡು 
ಒಳ ತೂರಿದ ಪುಟ್ಟ ಹುಡುಗ 
ಕೂದಲಿಲ್ಲದವರೆದುರಿಗೂ  ಬಾಚಣಿಕೆ ಹಿಡಿಯುತ್ತಾನೆ 
ಸುರಿಯುವ ಮೂಗನ್ನು
ಜೋಲುವ ಅಂಗಿಯ ತೋಳಿಗೆ 
 ಉಜ್ಜಿಕೊಳ್ಳುತ್ತಾನೆ

ಇನ್ನು ಲೇಡೀಸ್ ಬೋಗಿಯನ್ನೇನು ಕೇಳೋಣ 
ಮನೆಯಿಂದ ಹೊರಡುವಾಗ 
ಪೂಸಿಕೊಂಡ ಸೆಂಟು 
ಬೋಗಿ ಹತ್ತುವ ವರೆಗೂ ಜೊತೆಯಲ್ಲೇ ಇತ್ತು 
ಒಳಗೆ  ಹತ್ತೆಂಟು  ವಾಸನೆಗಳ ನಡುವೆ 
ಎಲ್ಲೋ ಸೇರಿ ಹೋಯ್ತು  
ಸೀಟು ಸಿಕ್ಕಿದರೆ  ಕುಳಿತು ಬಿಡಿಸ ಬಹುದು  ಬಟಾಣಿ 
ಮಾತಾಡುತ್ತಲೇ ತರಕಾರಿ ಹೆಚ್ಚಿದರೆ 
ಅಡುಗೆ ಸಲೀಸು 
ಪಕ್ಕದವಳ ಸೀರೆಯ ಬಗ್ಗೆ ವಿಚಾರಿಸುವಾಗಲೇ 
ಬರುತ್ತಾಳೆ ಕೆದರು ಮಂಡೆಯ ಪೋರಿ , 
ಸೀರೆ ಪಿನ್ನು ತೊಗೋ ಅಕ್ಕಾ ಎಂದು 
ಅವಳ ಹರಿದ ಲಂಗಕ್ಕೊಂದೆರಡು ಪಿನ್ನು ಬೇಕು 

ಮನೆಯಿಂದ  ಕೆಲಸಕ್ಕೆ , ಶಾಲೆ- ಕಾಲೇಜಿಗೆ 
ನಿತ್ಯ ಹೋಗಿ ಬರುವಾಗ  ಈ ಪ್ರಯಾಣದಲ್ಲೇ
ಹುಟ್ಟುತ್ತವೆ , ಬೆಳೆಯುತ್ತವೆ ,ಬಾಂಧವ್ಯಗಳು 
ಜಾತಿ, ಮತ , ವಯಸ್ಸಿನ ಭೇದವಿಲ್ಲದೆ 
ಮೇಲು ಕೀಳೆನ್ನದೆ ಎಲ್ಲರನ್ನೂ ಎಲ್ಲವನ್ನೂ 
ಹೊಟ್ಟೆಯಲ್ಲೇ ಹೊತ್ತು  ಮುಂದೋಡುವ 
ಲೋಕಲ್  ಟ್ರೈನಿನೆದುರು  
ಭಗವಂತನೂ ಬೆರಗಾಗಿದ್ದಾನೆ 


February 14, 2018

ನೀ ನಕ್ಕಾಗ !

ಅಂದು ನೀ ನಕ್ಕಾಗ ಸಂಜೆಯಲಿ ಕೆಂಪಿತ್ತು  
ತಿಂಗಳನ ಅಂಗಳದಿ ಬೆಳದಿಂಗಳರಳಿತ್ತು
ಮಲ್ಲಿಗೆಯ ಮಂಟಪದಿ  ಪರಿಮಳವು ಹರಡಿತ್ತು 
ಚೆಂಗುಲಾಬಿಯು ಮುಳ್ಳ ನಡುವೆಯೂ ಬಿರಿದಿತ್ತು 
ನಿನ್ನ ಕಣ್ಣೋಟದಲಿ ಮಾದಕತೆ ತುಳುಕಿತ್ತು
ಬಳಿಗೆ ಬಾ ಎನ್ನುತಲಿ ನನ್ನನ್ನು ಕರೆದಿತ್ತು 
ಕಾಲಗೆಜ್ಜೆಯ ನಾದ ಎದೆಯ ಝಲ್ಲೆನಿಸಿತ್ತು 
ನನ್ನುಸಿರೇ ನೀನಾಗಿ ಎದೆಯ ತುಂಬಿರುವಾಗ
ಭೂಮಿ-ಬಾನೆಲ್ಲವೂ ಒಂದಾಗಿ  ನಲಿದಿತ್ತು

February 7, 2018

ಸೀತಾಪಹರಣ - ೪
ಬೆಳಿಗ್ಗೆ ಸ್ಕೂಲಿಗೆ  ಹೊರಡೋವಾಗ  ಅಪೂರ್ವಾ ' ಅಜ್ಜಿ , ಇವತ್ತು ಸಂಜೆ ಕಥೆ ಮುಂದುವರಿಸಬೇಕು . ನೆನಪಿದೆ ತಾನೇ ? " 
" ನೆನಪಿದೆ ಕಣೆ . ನೀನೀಗ ಶಾಂತಿಯಿಂದ ಹೋಗು  " 

"ಅಜ್ಜಿ ನಾವು ಬರೋವರೆಗೂ  ಶುರು ಮಾಡಬೇಡ  ಮತ್ತೆ" . ಗಂಡು ಮಕ್ಕಳಿಬ್ಬರೂ  ಹೇಳಿದರು . 

ಮಕ್ಕಳು ಹೋದಮೇಲೆ  ಆಫೀಸಿಗೆ ರೆಡಿ ಆಗುತ್ತಿದ್ದ  ಸ್ಮಿತಾ  ಹೇಳಿದಳು. " ಅತ್ತೆ , ನೀವು ಇವತ್ತು ಬೇಕಾದ್ರೆ  ಉಷಾ ಮನೆಗೆ ಹೋಗಿ ಸಂಜೆ. " ಇಲ್ಲ ಅಂದ್ರೆ ಈ ಮಕ್ಕಳು ನಿಮ್ಮ ಜೀವ ಹಿಂಡ್ತಾರೆ . ಕಥೆ ಕಥೆ ಅಂತ .  ಹೇಳಿದ್ದು ಸುಮ್ಮನೆ ಕೇಳೋದಿಲ್ಲ ಬೇರೆ ತರಲೆಗಳು  ! " 

ಅಜ್ಜಿ ನಕ್ಕು ಬಿಟ್ಟರು . " ಇರಲಿ ಬಿಡೆ . ಏನೋ ಆಸಕ್ತಿಯಿಂದ ಕೇಳ್ತಾರಲ್ಲ ! ಇಲ್ಲ ಅಂದ್ರೆ , ನಮ್ಮ ಪುರಾಣಗಳು  ಇವರಿಗೆ ಗೊತ್ತಗೊದಾದ್ರು ಹೇಗೆ ?  ನಮ್ಮ ಕಾಲದ ಹಾಗೆ ಅಲ್ಲ ಈಗ. ಅವರಿಗೆ  ನೂರಾ ಎಂಟು  ಪ್ರಶ್ನೆ  ಬರತ್ತೆ ತಲೇಲಿ . ಕೇಳ್ತಾರೆ . ಅವರಿಗೆ ಅರ್ಥ ಮಾಡ್ಸೋದು ನಮ್ಮ ಕರ್ತವ್ಯ.  ಅಲ್ಲದೆ , ಕೆಲವು ಸಲ ನಾವೇ  ಯೋಚನೆ ಮಾಡೋ ತರ ಪ್ರಶ್ನೆ ಕೇಳ್ತಾರೆ . ಒಳ್ಳೇದು ಬಿಡು !  "
 ಹಾಗೆ ಹೇಳಿದರೂ ಅಜ್ಜಿ ಒಳಗೆ ಯೋಚನೆ ಮಾಡ್ತ ಇದ್ರೂ. 
ಕಥೇಲಿ ಏನೇನು ಸಣ್ಣ ಪುಟ್ಟ ಬದಲಾವಣೆಗಳು ಬೇಕಾಗ ಬಹುದು , ಯಾವ   ಭಾಗಗಳನ್ನ  ಹೇಳದೆ ಇದ್ದರೆ ಒಳ್ಳೇದು  ಎಂದು ಅವರ ತಲೇಲಿ  ವಿಚಾರ ನಡೀತಾ ಇತ್ತು . 

ಸಂಜೆ , ಶಾಲೆಯಿಂದ ಬಂದ ಮಕ್ಕಳು  ಬಾಗಿಲಿಂದಲೇ  " ಅಜ್ಜೀ , ಕಥೆ .... "  ಕೂಗಿಕೊಂಡರು 
"ಅಯ್ಯೋ , ಕೈ ಕಾಲು ತೊಳೆದು , ಬಟ್ಟೆ ಬದಲಾಯ್ಸಿ ಮೊದ್ಲು .  ಹೊಟ್ಟೆಗೆ ಏನಾದ್ರೂ ಹಾಕ್ಕೊಂಡ್ ಬನ್ನಿ  " 
ಅಜ್ಜೀ... ನೀನು ಕುರ್ಚಿ ಹಾಕ್ಕೊಂಡು ಕೂತ್ಗೊಳೋ ಹೊತ್ತಿಗೆ ನಾವು ಬಂದುಬಿಡ್ತೀವಿ . ಓಡಿದಳು ಅಪೂರ್ವಾ . 

ನಿಧಾನನೆ ಬನ್ನಿ ಪರವಾಗಿಲ್ಲ . ನಾನೆಲ್ಲೂ ಓಡೋಗಲ್ಲ ! 
ಕೆಲ ಸಮಯದ ನಂತರ ಕಥೆ ಮುಂದುವರಿಯಿತು . 

ಕಿಷ್ಕಿಂಧೆಗೆ  ತಲುಪಿದಾಗ ಅಲ್ಲಿಯ ರಾಜ ಸುಗ್ರೀವ  ರಾಮ -ಲಕ್ಷ್ಮಣರನ್ನು ಪರಿಚಯಿಸಿಕೊಂಡು  ಸ್ವಾಗತ ಮಾಡಿದ. ತನ್ನಿಂದ ಆಗೋ  ಎಲ್ಲ ಸಹಾಯ ಮಾಡ್ತೀನಿ    ಅಂದ .  ಸೀತೆನಾ ಹುಡುಕೋದಕ್ಕೆ  ತನ್ನ ಸೈನಿಕರನ್ನ ಕಳಿಸ್ತೀನಿ , ಅಲ್ಲಿವರೆಗೆ ದಯವಿಟ್ಟು ಕಿಷ್ಕಿಂಧೆಲೇ  ಉಳ್ಕೊಳಿ ಅಂದ .ಅವರಿಗೆ ಇರೋ ವ್ಯವಸ್ಥೆ  ಮಾಡಿ ಕೊಟ್ಟ .

ಆಮೇಲೆ , ರಾಮ  ಸುಗ್ರೀವನಿಗೆ ಹೇಳ್ದ " ನೋಡು ನಂಗೆ ಜಟಾಯು ಅನ್ನೋ ಹಕ್ಕಿ ಹೇಳ್ತು , ಸೀತೆ ನ ರಾವಣ ಎತ್ಕೊಂಡು ಹೋಗಿದಾನೆ ಅಂತ . ಅವನು ಇರೋ ಲಂಕೆ  ಎಲ್ಲಿದೆ ಅಂತ ಗೊತ್ತ ? "

ಅದಕ್ಕೆ ಸುಗ್ರೀವ , ಹಾಂ ಗೊತ್ತು . ಆದರೆ  ಲಂಕೆ  ಇರೋದು ಸಮುದ್ರದಲ್ಲಿ . ಸೀತೆನ  ಅಲ್ಲೇ ಇಟ್ಟಿದಾನಾ ಅಂತ ನೋಡಬೇಕಲ್ಲ . ಅದಕ್ಕೆ ಲಂಕೆಗೆ  ಮೊದಲು ಹೋಗೋದ್ ಹೇಗೆ  ಅಂತ ಕೇಳಿದ .

ಇಬ್ರೂ ಆ ಬಗ್ಗೆ ಚರ್ಚೆ ಮಾಡ್ತಿರೋವಾಗ , ಸುಗ್ರೀವನ  ಜೊತೆ ಇರೋ ಹನುಮಂತ  ತಾನು ಬೇಕಾದ್ರೆ ಹೋಗಿ ನೋಡ್ಕೊಂಡು ಬರ್ತೀನಿ ಅಂದ .ಸರಿ ಹಾಗೆ ಮಾಡೋದು ಅಂತಾಯ್ತು  . ಅವನು ವಾಪಸ್ ಬಾರೋ ವರೆಗೂ  ರಾಮ -ಲಕ್ಷ್ಮಣ  ಕಿಷ್ಕಿಂಧೆಲೆ ಇರೋದು ಅಂತ ಆಯ್ತು . 

ಹನುಮಂತ  ಲಂಕೆಗೆ ಹೋಗ್ತೀನಿ ಅಂತ ಏನೋ ಹೇಳಿದ . ಆದರೆ ಹೇಗೆ ಅಂತ  ಅವನಿಗೆ ಪ್ರಶ್ನೆ ಆಗ್ತಾ ಇತ್ತು .   ಸಮುದ್ರ ತೀರದಲ್ಲಿದ್ದ ಬೆಟ್ಟದ ಮೇಲೆ ಹತ್ತಿ ಹನುಮಂತ  ಲಂಕೆ ಕಾಣಿಸತ್ತಾ ಅಂತ ನೋಡಿದ . ಉಹೂಂ .. ಅಷ್ಟು ದೂರಕ್ಕೂ  ನೀರು ಬಿಟ್ರೆ ಏನು ಕಾಣಿಸ್ತಾ ಇರಲಿಲ್ಲ . ಈಗ ಎಲ್ಲಾರಿಗೂ ಯೋಚನೆ ಶುರುವಾಯ್ತು .  ಎಷ್ಟು ನೋಡಿದರೂ ಬರೀ  ಸಮುದ್ರಾ ನೇ ಕಾಣಿಸ್ತಿದೆ  ಲಂಕೆ ಯಾವ ದಿಕ್ಕಿಗೆ ಇದೆ ಅಂತ ಕೂಡ ಗೊತ್ತಿಲ್ಲ . ಅಲ್ಲಿಗೆ ಹೋಗೋದು ಹೇಗೆ ಅಂತ ಎಲ್ಲಾರಿಗೂ ಪ್ರಶ್ನೆ ! 

 ಬೆಟ್ಟ ಹತ್ತಿದ   ಹನುಮಂತ ಸಮುದ್ರನ ನೋಡ್ತಾ ಯೋಚನೆ ಮಾಡ್ತಾ  ಇದ್ದ . ಕೊನೆಗೆ  ಒಂದು ನಿರ್ಧಾರಕ್ಕೆ ಬಂದು  ಕಿಷ್ಕಿಂಧೆ ಗೆ ವಾಪಸ್ ಬಂದ . 
ಸುಗ್ರೀವನೆದುರು  ರಾಮನಿಗೆ ಹೇಳಿದ "  ನಾನು ಲಂಕೆಗೆ  ಹೋಗಿ ಬರ್ತೀನಿ "  ಅಂದ .

 ಅವನ ವಿಶ್ವಾಸ ನೋಡಿ ರಾಮ ನಿಗೆ ತುಂಬಾ ಸಂತೋಷ ಆಯ್ತು .  ಸರಿ  ಹೋಗಬಾ , ಸೀತೆ ಹೇಗಿದಾಳೆ , ಅವಳಿಗೇನೂ ತೊಂದರೆ  ಮಾಡ್ತಿದಾನ ಆ ರಾವಣ ಅಂತ ನೋಡ್ಕೊಂಡು ಬಂದು ಹೇಳು. ನಾವು ಕಾಯ್ತಿರ್ತೀವಿ ಅಂದ ರಾಮ .

"ನಾನು ನಾಳೆ ನೇ ಅಲ್ಲಿಗೆ ಹೋಗ್ತೀನಿ ಅಂದ ಹನುಮಂತ  ಮತ್ತೊಂದು ಪ್ರಶ್ನೆ ಕೇಳಿದ . " ಆದರೆ ಅಲ್ಲಿ  ಸೀತಾ ದೇವಿನ ನಾನು ಹೇಗೋ  ಗುರುತಿಸ್ತೀನಿ . ಆದರೆ  ಅವಳಿಗೆ  ನಾನು ಯಾರು ಅಂತ ಗೊತ್ತೇ ಇಲ್ವಲ್ಲ "  ಅಂದ . 

" ಹೌದಲ್ವಾ? , ಅವಳತ್ರ ಒಂದು ಮೊಬೈಲ್ ಆದ್ರೂ ಇದಿದ್ರೆ , ರಾಮ  ಹನುಮಂತಂದು ಫೋಟೋ ಕಳ್ಸಿ  ಮೆಸೇಜ್ ಮಾಡಬಹುದಿತು !  ಈಗ ಕಷ್ಟಾ ನೇ . ಅಂದಂಗೆ ರಾಮನತ್ರ  ಅವಳ ಫೋಟೋ ಇರ್ಲಿಲ್ವಾ ಅಜ್ಜಿ ? ಹನುಮಂತಂಗೆ  ತೋರ್ಸೊಕೆ?  " 

ಆದಿತ್ಯ ಮತ್ತೆ ವರುಣ್ ಇಬ್ಬರೂ ಜೋರಾಗಿ ನಗೊಕ್ ಶುರು ಮಾಡಿದ್ರು . 
" ಹೇಯ್, ಇವಳ ಕಥೆ ಕೇಳೋ ...  ನಗುತ್ತಲೇ  ತಂಗಿಯ ಕಡೆ ತಿರುಗಿದ ಆದಿತ್ಯ 
" ಗೂಬೆ,  ಮೊಬೈಲ್  ಇದಿದ್ರೆ , ರಾಮಂಗೆ ಕಷ್ಟ ಯಾಕಾಗ್ತಿತ್ತು ಹುಡ್ಕೋಕೆ?  ಲೋಕೇಶನ್ ಟ್ರ್ಯಾಕ್ ಮಾಡ್ತಿರ್ಲಿಲ್ವೇನೆ? ಅಷ್ಟಲ್ದೆ , ದಿನಾ ವಾಟ್ಸ್ ಅಪ್ ಮಾಡ್ಕೋತಾ ಇದ್ರೂ ಇಬ್ರುನು  ಬೇಕಾದ್ರೆ . ನೀನೊಳ್ಳೆ !!  "  

" ಮುಖ ಚಿಕ್ಕದಾಗಿಸಿಕೊಂಡ ಅಪೂರ್ವ  " ನೋಡಜ್ಜಿ ಅಣ್ಣನ್ನ ... "  ನೀನೇ ಗೂಬೆ ಕಣೋ ,  ಅಲ್ಲಾ , ಸೀತೆ ಮೊಬೈಲ್ ದಾರೀಲಿ ಎಲ್ಲಾದ್ರೂ ಬಿದ್ದು ಹೋಗಿರಬಹುದು . ಸಮುದ್ರ ದಾಟೋವಾಗ ಬಿದ್ದಿರಬಹುದು , ಅಥ್ವಾ ಸಿಗ್ನಲ್ ಸಿಗ್ತಾ ಇರ್ಲಿಲ್ವೇನೋ . ಅಷ್ಟಕ್ಕೂ ಲಂಕೆ ಅಂದ್ರೆ  ಬೇರೆ ದೇಶ ಆಗಿತ್ತಲ್ವ?  ಮೊಬೈಲ್ ರೋಮಿಂಗ್ ಇರ್ಲಿಲ್ಲ  ಅನ್ಸತ್ತೆ ಅವಳದ್ದು .  ಬ್ಯಾಟರಿ ಮುಗ್ದಿರಬಹುದು . ಸಲ್ಪ ಚಾರ್ಜ್ ಮಾಡ್ಕೋಬೇಕು ಅಂತ ಕೇಳೋಕಾಗತ್ತ ?  ವೈ ಫೈ ಪಾಸ್ ವರ್ಡ್ ಕೇಳಿಲ್ಲ ಅವ್ಳು ರಾವಣ ನ ಹತ್ರ ..  ಎಷ್ಟೆಲ್ಲಾ ರೀಸನ್ ಇದೆ ಅಲ್ವೇನೋ ?  " ಪಟ ಪಟನೆ  ಅಪೂರ್ವ ಹೇಳುತ್ತಿದ್ದರೆ ಅಣ್ಣಂದಿರಿಬ್ಬರೂ  ಮುಖ ನೋಡಿಕೊಳ್ಳುತ್ತಾ  ಪೆಚ್ಚಾದರು .  ಅಜ್ಜಿ  ಕಣ್ಣರಳಿಸಿ  ನೋಡುತ್ತಿದ್ದರು . ಇಷ್ಟು ಚಿಕ್ಕ ವಯಸ್ಸಿಗೆ ಏನೆಲ್ಲಾ ಗೊತ್ತಪ್ಪ  ಇವಳಿಗೆ ಅಂತ !

ಇದನ್ನೆಲ್ಲಾ ಕೇಳುತ್ತಿದ್ದ  ಸ್ಮಿತಾ  ಉಕ್ಕುತ್ತಿದ್ದ ನಗುವನ್ನು ತಡೆದುಕೊಂಡು  " ಮೊಬೈಲ್  ಇತ್ತೋ ಇಲ್ವೋ ಅಂತ ಚರ್ಚೆ ಮಾಡ್ತಾ ಇರ್ತೀರೋ ಅಥವ ಅಜ್ಜಿ ಕಥೆ  ಕೇಳ್ತೀರೋ " ಎಂದು  ಗದರಿದಳು. 

"ಸಾರಿ ಅಜ್ಜೀ,  ಹೇಳು ಹೇಳು "  ಮೂವರೂ ಒಟ್ಟಿಗೆ ಒದರಿದರು. 

ಸರಿ ,  ಬೆಳಿಗ್ಗೆ ಹನುಮಂತ  ಲಂಕೆಗೆ ಹೊರಡೋಕೆ ರೆಡಿ ಆದ.  ಸುಗ್ರೀವ , ರಾಮ-ಲಕ್ಷ್ಮಣರಿಗೆ ನಮಸ್ಕಾರ ಮಾಡಿದ.
 ರಾಮ ಅವನನ್ನು  ಅಪ್ಪಿಕೊಂಡು " ಹನುಮಂತ , ಸುರಕ್ಷಿತವಾಗಿ ಹೋಗಿ ಬಾ. ಸೀತೆಯ  ವಿಷಯ ಕೇಳೋಕೆ ನಾವು ಕಾಯ್ತಾ ಇರ್ತೀವಿ " ಅಂದ .
ಹಾಗೇ   ಹನುಮಂತನ ಕೈಗೆ  ತನ್ನ ಉಂಗುರ ಕೊಟ್ಟು , ಇದನ್ನು  ಸೀತೆ ಗೆ ತೋರಿಸು . ಅವಳಿಗೆ ನೀನು ನನ್ನ ಕಡೆಯವನು ಅಂತ ಗೊತ್ತಾಗತ್ತೆ " ಎಂದ . 

ಆ ಉಂಗುರನ  ಭದ್ರವಾಗಿ ಇಟ್ಟುಕೊಂಡು ಹನುಮಂತ ಹೊರಟ .  ಅವನ್ನ ಕಳಿಸೋಕೆ ಅಂತ ಎಲ್ಲರೂ  ಸಮುದ್ರದ ವರೆಗೂ ಹೋದ್ರು . ಹನುಮಂತ ಸಮುದ್ರದ  ಪಕ್ಕದ ಚಿಕ್ಕ ಬೆಟ್ಟ ಹತ್ತಿ  ನಿಂತ . ಸಮುದ್ರವನ್ನು ಸಲ್ಪ ಹೊತ್ತು ನೋಡಿ,  ರಾಮನಿಗೆ ಮತ್ತೊಮ್ಮೆ ನಮಸ್ಕಾರ ಮಾಡಿದ .  ಅವನು  ಲಂಕೆಗೆ ಹೊರಟಿದ್ದನ್ನು ನೋಡಲೆಂದು  ಕಿಷ್ಕಿಂಧೆಯ   ಕಪಿಗಳೆಲ್ಲಾ  ಅಲ್ಲ್ಲಿ ಬಂದು ಸೇರಿದ್ದರು . ಅವರೆಲ್ಲಾ ಉತ್ಸಾಹದಿಂದ ಜೈಕಾರ ಹಾಕುತ್ತಿದ್ದಂತೆ  ಹನುಮಂತ ಬೆಟ್ಟದಿಂದ ಜಿಗಿದೆ ಬಿಟ್ಟ . 

"ಅಜ್ಜಿ , ಅವನು ಕೆಳಗೆ ಬಿದ್ದು ಕೈ ಕಾಲು ಮುರ್ಕೊಂಡಿಲ್ಲ ತಾನೇ? "
"ಅಜ್ಜೀ, ಅದು ಹ್ಯಾಗೆ  ಲಂಕೆ ತಲುಪ್ತಾನೆ?  ಸಮುದ್ರ  ಅಂದ್ರೆ ತುಂಬಾ ದೊಡ್ದದಲ್ವ?  ಆ ತರ ಜಂಪ್  ಮಾಡಿ ದಾಟಕಾಗತ್ತ ? " ಮಕ್ಕಳ ಪ್ರಶ್ನೆಗಳು .

"ಅವನಿಗೆ ಅಂಥಾ ಶಕ್ತಿ ಇತ್ತು ಕಣ್ರೋ  ಎಷ್ಟಿ ದೂರ ಬೇಕಾದ್ರೂ  ಹಾರೋಕಾಗ್ತಿತ್ತು  !"

"ನಿಜಾ ಅಜ್ಜಿ . ನಾನು ಟಿ ವಿ ಲಿ  " ಜೈ ಹನುಮಾನ್ " ಲ್ಲಿ ನೋಡಿದೀನಿ" . ಅಪೂರ್ವ ಹೇಳಿದಳು 
"ಅಜ್ಜೀ, ಈಗ  ಹನುಮಂತ ಇದಿದ್ದರೆ , ಒಲಿಂಪಿಕ್ಸ್ ಗೆ  ಲಾಂಗ್ ಜಂಪ್ , ಹೈ ಜಂಪ್ ಎರಡಕ್ಕೂ ಅವನ್ನೇ  ಕಳಿಸಬಹುದಿತ್ತು "  ಕಿಸಕ್ಕನೆ ನಕ್ಕರು ಗಂಡು ಹುಡುಗರಿಬ್ಬರೂ .

ಅತ್ತ ಲಕ್ಷ್ಯ ಕೊಡದೆ ಅಜ್ಜಿ ಮುಂದುವರೆಸಿದರು .

"ಸುಮಾರು ದೂರ , ಅದೆಷ್ಟೋ ಹೊತ್ತು ಹಾರಿದ ಮೇಲೆ   ಅವನಿಗೆ ಲಂಕೆ ಕಾಣಿಸಿತು . ಸ್ವಲ್ಪ ಹೊತ್ತಿನಲ್ಲಿ ಲಂಕೆಯ  ಬಾಗಿಲಿನ ಎದುರು ಹನುಮಂತ ನಿಂತಿದ್ದ . 
ಲಂಕೆಯ ಸುತ್ತಲೂ ಭದ್ರವಾದ ಕೋಟೆ ಇತ್ತು. ಅದರ  ಬಾಗಿಲಲ್ಲಿ  " ಲಂಕಿಣಿ "   ಕಾವಲಿಗೆ ನಿಂತಿದ್ದಳು . ಎದುರು ಬಂದು ನಿಂತ ಹನುಮಂತನನ್ನು ಒಳಗೆ ಹೋಗದಂತೆ  ತಡೆದಳು . ಆಮೇಲೆ ಅವರಿಬ್ಬರ ನಡುವೆ  ಒಂದು ಚಿಕ್ಕ ಯುದ್ಧ ನೇ ಆಗೋಯ್ತು .  ಅವಳನ್ನು ಸೋಲಿಸಿದ ಹನುಮಂತ  ಕೋಟೆಯ ಒಳ ಹೊಕ್ಕ ."

ಹೆಚ್ಚು ಬ್ರೇಕ್ ಕೊಡದೆ ಅಜ್ಜಿ  ಕಥೆ ಹೇಳುತ್ತಿದ್ದರು . 
"ಅಜ್ಜೀ, ಬಾಗಿಲು ಕಾಯೋಕೆ ಲಂಕಿಣಿನ  ಯಾಕೆ ಇಟ್ಟಿದ್ರು ? ಅವಳ ಜೊತೆ ಬೇರೆ ಯಾರೂ ಇರಲಿಲ್ವ? ಹನುಮಂತ ಹಾಗೆ  ಹೆಂಗಸಿನ ಜೊತೆ ಯುದ್ಧ ಮಾಡಬಹುದಿತ್ತಾ? "

"ಲಂಕಿಣಿ ಸಾಮಾನ್ಯದವಳಾಗಿರ್ಲಿಲ್ಲ  ಕಣ್ರೋ , ತುಂಬಾ ಶಕ್ತಿ ಇತ್ತು ಅವಳಿಗೆ . ಅವಳನ್ನ ಸೋಲಿಸೋಕೆ  ಹನುಮಂತಂಗೆ  ಸುಮಾರು ಕಷ್ಟ ಆಯ್ತು . ಹೇಗೋ ಮಾಡಿ ಅವನು ಒಳಗೆ ಹೋದ . "


ಹಿಂದಿನ ಕಂತುಗಳು 


November 18, 2017

ಹೇಳು ....ಇರುಳ ನೆರಳಲಿ  ಎನ್ನ 
ಮರುಳು ಮಾಡುವುದೇಕೆ 
ಮುಂಗುರುಳ ಸರಿಸುತಲಿ
ಮುದ್ದುಗರೆಯುವೆಯೇಕೆ 

ನನ್ನೊಲವೆ ನೀನೆಂದು 
ಮೋಹಗೊಳಿಸುವುದೇಕೆ 
ಅಧರಗಳ ಮಧುವನ್ನು 
ಸವಿದು ನಗುತಿಹೆಯೇಕೆ 

ಹೃದಯದಲಿ ನೂರಾರು 
ಬಯಕೆ ತುಂಬುವುದೇಕೆ 
ಮತ್ತೀಗ ಮೌನದಲಿ  
ಮನವ ಕಲಕುವುದೇಕೆ

ಹಾಗೇಕೆ ಹೀಗೇಕೆ
ಹೇಳು ಇನಿಯಾ 
ಬರುವುದೋ ಬಿಡುವುದೋ 
ನಿನ್ನ ಸನಿಯ 

October 9, 2017

ಬಯಕೆ

ರವಿಯ ಹೊಂಗಿರಣವು  ಕಣ್ಣ ಸೋಕುವ ತನಕ 
ಮುದ್ದು ಮುಖದಲಿ  ಕೆಂಪು ಎದ್ದು ಕಾಣುವ ತನಕ 
ಎದೆ ಬಡಿತ  ಹೆಚ್ಚಾಗಿ  ಕಿವಿಗೆ ಕೇಳುವ ತನಕ 
ಬಂಧಿಸುವ  ಬಯಕೆಯಿದೆ  ನನ್ನ ಚೆಲುವೆ 

ಹಚ್ಚಿದಾ ತುಟಿ ಬಣ್ಣ ಒರೆಸಿ ಹೋಗುವ ತನಕ 
ಕಣ್ಣಿನಾ ಕಾಡಿಗೆಯು ತೀಡಿ ಹೋಗುವ ತನಕ 
ಕಟ್ಟಿದಾ ಹೆರಳದು  ಬಿಚ್ಚಿ ಹರಡುವ ತನಕ 
ಮುದ್ದಿಸುವ ಬಯಕೆಯಿದೆ ನನ್ನ  ಚೆಲುವೆ 

ನಾಚಿಕೆಯ ತೆಳು ಪರದೆ  ಕಳಚಿ ಬೀಳುವ ತನಕ 
ಬಯಕೆಗಳ  ಪೂರದಲಿ  ಕೊಚ್ಚಿ ಹೋಗುವ ತನಕ 
ಮೈಮನಗಳೊಂದಾಗಿ  ಕರಗಿ ಹೋಗುವ ತನಕ 
ಪ್ರೀತಿಸುವ ಬಯಕೆಯಿದೆ ನನ್ನ ಚೆಲುವೆ 

July 22, 2017

ಕಾಯುತಿಹೆ .....ನಿನ್ನ ಕನಸುಗಳಲ್ಲಿ ನಾನಿಹೆನೋ ಇಲ್ಲವೋ 
ನನ್ನ ಕನವರಿಕೆಯಲಿ ನೀನಿರುವೆ ಗೆಳೆಯ 
ಬೆಳಗಿನಲಿ  ಸಂಜೆಯಲಿ , ಏಕಾಂತದಿರುಳಿನಲಿ 
ನನ್ನ ಮನ ಬಯಸಿಹುದು  ನಿನ್ನ ಸನಿಯ 

ತನುವ ಕಚಗುಳಿಯಿಡುತ ಕೇಳುತಿದೆ ತಂಗಾಳಿ 
ಎಂದು ಬರುವನು  ಹೇಳು ನಿನ್ನ  ಇನಿಯ ?
ಬಳಸುವನೆ ತೋಳಿನಲಿ  ಕೆಣಕುವನೆ ಮಾತಿನಲಿ ?
ಪಿಸುಮಾತು  ತುಂಬುವುದೇ  ನಿನ್ನ  ಕಿವಿಯ ?

ಮುಡಿದ ಮಲ್ಲಿಗೆ ಮಾಲೆ  ಜಡೆಯಲ್ಲೇ ಬಾಡುವುದೇ?
ಪರಿಮಳವು  ಪಸರುವುದೇ ಕೋಣೆಯಲ್ಲಿ?
ಬಳೆಯ ಕಿಂಕಿಣಿ  ನಾದ ಕೇಳುವುದೇ ನೀ  ಹೇಳು 
ಕುಂಕುಮವು  ಕರಗುವುದೇ  ಬೆವರಿನಲ್ಲಿ ? 

ಸಂಜೆ ಇಳಿದಿದೆ ನಲ್ಲ ,  ಒಳಗೆ ಬೆಳಗಿದೆ ದೀಪ  
ಸಜ್ಜೆಮನೆಯೊಳಗಿಹುದು  ಧೂಪದಾರತಿಯು   
ಕಾತರದಿ ಕಾಯುತಿಹೆ ಮನೆಯ ಮುಂಬಾಗಿಲಲಿ  
ಬಂದು ಬೇಗನೆ  ಮನಕೆ ಮುದವ ನೀಡು

June 28, 2017

ಮಲೆನಾಡ ಮಳೆಗಾಲಧೋ ಎಂದು ಸುರಿವ ಮಳೆ
ರಸ್ತೆ ತುಂಬಿದ ನೀರು 
ತೇಲಿ ಬಿಟ್ಟಿಹ ದೋಣಿ 
ಕುಣಿದು ಸಾಗುವುದು 

ಬಚ್ಚಲಿನ ಒಲೆಯಲ್ಲಿ 
ಗೇರು ಬೀಜದ  ಘಮಲು 
ಅಡುಗೆ ಮನೆಯೊಳಗೆ
ಬಿಸಿ ಹಪ್ಪಳದ ಪರಿಮಳ 

ಅಂಗಳಕೆ ಕಾಲಿಡಲು 
ಇಂಬಳದ ಭಯವಿಹುದು  
ಕಂಬಳಿಯ ತೆಕ್ಕೆಯಲಿ 
ಮಲಗುವುದೇ ಬಲು  ಸುಖ 

ಕಿಟಕಿ ಬದಿಯಲಿ ಖುರ್ಚಿ 
ಕೈಯಲ್ಲಿ ಬಿಸಿ ಕಾಫಿ 
ಹೊರಗೆ ಸುರಿಯುವ ಮಳೆಯ 
ಜೋಗುಳದ ಹಾಡು 

ಮಲೆನಾಡ ಮಳೆಗಾಲ 
ಮನಸಲ್ಲಿ ಹಸುರಾಗಿ 
ಎಂದೆಂದೂ ಮರೆಯದಿಹ 
ಮಧುರ ನೆನಪು